ಫೆಲೆಸ್ತೀನ್ ಪ್ರಾಧಿಕಾರದಿಂದ ಎರಡು ತಿಂಗಳುಗಳಲ್ಲಿ 94 ಫೆಲೆಸ್ತೀನಿಯರ ಬಂಧನ
ರಮಲ್ಲಾ (ಆಕ್ರಮಿತ ಪಶ್ಚಿಮದಂಡೆ),ಜು.29: ಫೆಲೆಸ್ತೀನ್ ಪ್ರಾಧಿಕಾರವು ಇಸ್ರೇಲ್ ಆಕ್ರಮಿತ ಪಶ್ಚಿಮದಂಡೆಯಲ್ಲಿ ಫೆಲೆಸ್ತೀನಿ ನಾಗರಿಕರ ವಿರುದ್ಧ ಬೃಹತ್ ಬಂಧನ ಕಾರ್ಯಾಚರಣೆಯನ್ನೇ ಆರಂಭಿಸಿದೆ. ಕಳೆದ ಎರಡು ತಿಂಗಳುಗಳಲ್ಲಿ 94 ಮಂದಿಯನ್ನು ಬಂಧಿಸಲಾಗಿದೆಯೆಂದು ಅಲ್ಜಝೀರಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಬಂಧಿತರಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಗೂ ಪತ್ರಕರ್ತರಾಗಿದ್ದು, ಅವರಲ್ಲಿ 20 ಮಂದಿ ಈಗಲೂ ಕಾರಾಗೃಹದಲ್ಲಿದ್ದಾರೆಂದು ರಮಲ್ಲಾ ಮೂಲದ ನ್ಯಾಯಕ್ಕಾಗಿನ ನ್ಯಾಯವಾದಿಗಳ ಸಮಿತಿ ತಿಳಿಸಿದೆ. ಆದರೆ ಬಂಧನಕ್ಕೊಳಗಾದ ಬಹುತೇಕ ಮಂದಿಯ ವಿರುದ್ಧ ಯಾವುದೇ ಅಪರಾಧದ ಆರೋಪಗಳನ್ನು ಹೊರಿಸಲಾಗಿಲ್ಲ ಹಾಗೂ ಹೆಚ್ಚಿನವರನ್ನು 10 ದಿನಗಳ ಬಳಿಕ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ ಎಂದರು.
ಇದು, 2012ನೇ ಇಸವಿಯಿಂದೀಚೆಗೆ ಇಸ್ರೇಲ್ ಆಕ್ರಮಿತ ಪಶ್ಚಿಮದಂಡೆಯಲ್ಲಿ ನಡೆದ ಅತ್ಯಂತ ಬೃಹತ್ ಮಟ್ಟದ ಬಂಧನಸತ್ರಗಳಲ್ಲೊಂದಾಗಿದೆ ಎಂದು ನ್ಯಾಯಕ್ಕಾಗಿನ ವಕೀಲರ ಸಂಘದ ಅಧ್ಯಕ್ಷ ಮುಹನ್ನದ್ ಕಾರಾಜೆಹಾ ತಿಳಿಸಿದ್ದಾರೆ. ಬಂಧಿತರಲ್ಲಿ ಹೆಚ್ಚಿನವರೊಂದಿಗೆ ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಹಾಗೂ ಅವರಿಗೆ ಚಿತ್ರಹಿಂಸೆ ನೀಡಲಾಗಿದೆಯೆಂದು ಅವರು ಆರೋಪಿಸಿದದಾರೆ.
ಬಂಧಿತರಲ್ಲಿ ಬಹುತೇಕ ಮಂದಿ ಹಮಸ್ ಅಥವಾ ಫೆಲೆಸ್ತೀನಿಯನ್ ಇಸ್ಲಾಮಿಕ್ ಜಿಹಾದ್ (ಪಿಐಜೆ) ಕಾರ್ಯಕರ್ತರೆಂದು ಕಾರ್ಜೆಹಾ ತಿಳಿಸಿದ್ದಾರೆ. ಫೆಲೆಸ್ತೀನ್ ಪ್ರಾಧಿಕಾರ ಆಡಳಿತ ಪಕ್ಷವಾದ ಫತಾಹ ಹಾಗೂ ಎಡಪಂಥೀಯ ಪಿಎಫ್ಎಲ್ಪಿ ಸಂಘಟನೆಯ ಕೆಲವು ಕಾರ್ಯಕರ್ತರನ್ನು ಕೂಡಾ ಬಂಧಿತರಲ್ಲಿ ಸೇರಿದ್ದಾರೆಂದು ಅವರು ಹೇಳಿದ್ದಾರೆ.
ಬಂಧಿತರಾದವರಲ್ಲಿ ಹೆಚ್ಚಿನವರನ್ನು ಈ ಮೊದಲು ಇಸ್ರೇಲಿ ಜೈಲುಗಳಲ್ಲಿ ಇರಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಫೆಲೆಸ್ತೀನ್ ಪ್ರಾಧಿಕಾರ ನಡೆಸುತ್ತಿರುವ ಬಂಧನ ಕಾರ್ಯಾಚರಣೆಯು ವಿವಾದಕ್ಕೊಳಗಾಗಿದೆ.
ಬಂಧಿತರಲ್ಲಿ ಹೆಚ್ಚಿನವರನ್ನು ಅವರ ರಾಜಕೀಯ ಚಟುವಟಿಕೆಗಳು, ಹೋರಾಟಗಳ ಕುರಿತು ಪ್ರಶ್ನಿಸಲಾಗುತ್ತಿದೆ ಎಂದವರು ಹೇಳಿದ್ದಾರೆ.