ಅಮಾಯಕರ ಕೊಲೆ, ಸಿಎಂ ಪಕ್ಷಪಾತ ಧೋರಣೆ ಖಂಡನೀಯ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ
ಉಡುಪಿ, ಜು.30: ಕಳೆದ ಕೆಲವು ದಿನಗಳಲ್ಲಿ ದ.ಕ. ಜಿಲ್ಲೆಯಲ್ಲಿ ಅಮಾ ಯಕ ಯುವಕರಾದ ಮಸೂದ್, ಪ್ರವೀಣ್ ಹಾಗೂ ಫಾಝಿಲ್‌ರ ಕೊಲೆ ಕೃತ್ಯಗಳು ಖಂಡನೀಯ. ಇಂತಹ ರಾಕ್ಷಸೀ ಕೃತ್ಯ ಹಾಗೂ ಬಿಜೆಪಿ ಸರಕಾರದ ನಡೆ, ಮುಖ್ಯಮಂತ್ರಿಯ ಪಕ್ಷಪಾತೀಯ ಧೋರಣೆಯನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ಕೆಲವು ಸಮಯಗಳಿಂದ ರಾಜ್ಯದಲ್ಲಿ ಹಲವಾರು ಅಮಾಯಕ ಯುವಕರ ಕೊಲೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸರಕಾರ ಶವದ ಮೇಲೆ ಆಡಳಿತ ನಡೆಸುತ್ತಿದೆ. ಮೊದಲ ಹತ್ಯೆ ನಡೆದ ಕೂಡಲೇ ಸರಕಾರ ಸೂಕ್ತ ಕ್ರಮ ಕೈಗೊಂಡಿದ್ದರೆ ಇಂತಹ ದುಷ್ಕೃತ್ಯಗಳು ಮರುಕಳಿಸುತ್ತಿರಲಿಲ್ಲ. ಆದರೆ ಸರಕಾರದ ಪಕ್ಷಪಾತದ ಧೋರಣೆ, ಬಿಜೆಪಿಯ ನಾಯಕರ ಉದ್ರೇಕ ಹೇಳಿಕೆಗಳ ಪರಿಣಾಮವಾಗಿ ದಿನನಿತ್ಯ ಅಮಾಯಕ ಯುವಕರು ಕೊಲೆಯಾಗುತ್ತಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಇಬ್ರಾಹೀಂ ಸಾಹೇಬ್ ಕೋಟ ದೂರಿದ್ದಾರೆ.
ಬೆಳ್ಳಾರೆಯಲ್ಲಿ ಕೊಲೆಯಾದ ಪ್ರವೀಣ್‌ರ ಮನೆಗೆ ಮುಖ್ಯಮಂತ್ರಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಚೆಕ್ ವಿತರಿಸಿದರು. ಆದರೆ ಅದೇ ಊರಿನಲ್ಲಿ ಅದಕ್ಕಿಂತ ಮೊದಲು ಕೊಲೆಯಾದ ಮಸೂದ್ ಮನೆಗೆ ಭೇಟಿ ನೀಡದೆ ಬೆಂಗಳೂರಿಗೆ ವಾಪಾಸಾದರು. ಮುಖ್ಯಮಂತ್ರಿಯ ಈ ರೀತಿಯ ಪಕ್ಷಪಾತದ ನಡತೆಯನ್ನು ಯಾವ ನಾಗರಿಕ ಸಮಾಜವು ಒಪ್ಪದು. ಸರಕಾರದ ಇಂತಹ ಮನಸ್ಥಿತಿಯ ಪರಿಣಾಮವಾಗಿ ರಾಜ್ಯದಲ್ಲಿ ಇಂದು ಕೊಲೆ, ಹಿಂಸೆ ತಾಂಡವ ವಾಡುತ್ತಿದೆ. ಆದ್ದರಿಂದ ಸರಕಾರ ಈ ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕಾನೂನು ಕ್ರಮ ಕೈಗೊಂಡು ಸಮಾಜದಲ್ಲಿ ಶಾಂತಿ ಸಮಾಧಾನ ನೆಲೆಸುವಂತೆ ಪ್ರಯತ್ನಿಸಬೇಕು. ಹಾಗೆಯೇ ಸಾರ್ವಜನಿಕರು ಯಾವುದೇ ಪ್ರಚೋದನೆಗೆ ಒಳಗಾಗದೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದವರು ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.