varthabharthi


ತುಂಬಿ ತಂದ ಗಂಧ

ದೇವ್ ಆನಂದ್-ಸುರಯ್ಯ: ಅಮರ ಪ್ರೇಮಕಥೆ

ವಾರ್ತಾ ಭಾರತಿ : 31 Jul, 2022
ಕೆ.ಪುಟ್ಟಸ್ವಾಮಿ

ಸುರಯ್ಯ ಅವರ ಪ್ರೀತಿ ಎಷ್ಟು ಉತ್ಕಟವಾಗಿತ್ತೆಂದರೆ ದೇವ್ ಆನಂದ್ ಜೊತೆ ಹೆಚ್ಚು ಸಮಯ ಕಳೆಯಲು ತನ್ನ ಪಾತ್ರಗಳಿಗೆ ಹಾಡುವುದನ್ನು ಬಿಟ್ಟು ಲತಾ ಮಂಗೇಶ್ಕರ್ ಅವರಿಗೆ ಅವಕಾಶ ಮಾಡಿಕೊಟ್ಟರು. ಅವರು ತೀವ್ರವಾಗಿ ಪ್ರೀತಿಸುತ್ತಿದ್ದ ಸಮಯದಲ್ಲಿ ಹಿಂದಿ ನಟ ಶ್ಯಾಂ ಅವರ ಮದುವೆಗೆ ಸುರಯ್ಯಾ-ದೇವ್ ಆನಂದ್ ಕೈಕೈ ಹಿಡಿದು ಬಂದಾಗ ಮುಂಬೈ ಚಿತ್ರರಂಗ ಅಚ್ಚರಿ ಮಾತ್ರವಲ್ಲ, ದಿಗ್ಭ್ರಮೆಗೊಂಡಿತ್ತು.


ಹಾಲಿವುಡ್‌ನಲ್ಲಿ ಅಮರ ಪ್ರೇಮಕಥೆಗಳಿರುವಂತೆಯೇ ಭಾರತೀಯ ಚಿತ್ರರಂಗದಲ್ಲಿ ಹಲವಾರು ಪ್ರೇಮಕಥೆಗಳಿವೆ. ಆದರೆ ಭಾರತೀಯ ಮನಸ್ಸು ಧರ್ಮ, ಸಂಸ್ಕೃತಿಯ ಹೆಸರಿನಲ್ಲಿ ಆಚರಿಸಲಾಗುವ ಮಡಿವಂತಿಕೆ, ಶೀಲ, ಮರ್ಯಾದೆ ಇತ್ಯಾದಿಗಳನ್ನು ಮತ್ತು ನಿಜಭಾವನೆಗಳನ್ನು ಹತ್ತಿಕ್ಕಿ ವರ್ತಿಸುವ ನಡವಳಿಕೆಯನ್ನು ಆರಾಧಿಸುವ ಜನರಿಂದಾಗಿ ಅಂತಹ ಪ್ರಕರಣಗಳು ಹೆಚ್ಚು ಸಫಲವಾಗವು. ಆದರೂ ಕೆಲವು ಪ್ರಕರಣಗಳು ಅವುಗಳ ಘನತೆಯಿಂದಾಗಿ ಜನರ ಮನಸ್ಸಿನಲ್ಲಿ ಮಾಸದೆ ಉಳಿಯುತ್ತವೆ. ಅಂತಹ ಅಪರೂಪದ, ಆದರೆ ಕೈಗೂಡದ ಪ್ರೇಮ ಪ್ರಕರಣಗಳಲ್ಲಿ ನಿತ್ಯನೂತನ ನಾಯಕ ದೇವ್‌ಆನಂದ್ ಮತ್ತು ಗಾಯಕಿ-ನಟಿ ಸುರಯ್ಯಿ ಅವರ ನಡುವಿನ ಪ್ರೇಮ ಪ್ರಕರಣವೂ ಒಂದು.

ದೇವ್ ಆನಂದ್ ಜನಿಸಿದ್ದು(26.9.1923) ಪಂಜಾಬಿನ ಗುರುದಾಸ್‌ಪುರದಲ್ಲಿ ವಕೀಲರಾಗಿದ್ದ ಪಿಶೋರಿಲಾಲ್ ಆನಂದ್ ಅವರ ಮಗನಾಗಿ. ಸಿನೆಮಾದ ಗಂಧಗಾಳಿಯಿಲ್ಲದ ಕುಟುಂಬದಲ್ಲಿ ಜನಿಸಿದರೂ ದೇವ್ ಆನಂದ್ ಅವರ ಇಬ್ಬರು ಸಹೋದರರು(ಚೇತನ್ ಆನಂದ್, ವಿಜಯ್ ಆನಂದ್) ಭಾರತೀಯ ಸಿನೆಮಾ ಜೊತೆ ದೊಡ್ಡ ನಂಟು ಸಾಧಿಸಿದ್ದು ವಿಚಿತ್ರ. ಈಗಿನ ಪಾಕಿಸ್ತಾನದಲ್ಲಿರುವ ಲಾಹೋರ್‌ನ ಸರಕಾರಿ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. ಪದವಿ ಪಡೆದ ದೇವ್ ಆನಂದ್ ಮುಂಬೈನ ಮಿಲಿಟರಿ ಸೆನ್ಸಾರ್ ಕಚೇರಿ ನಂತರ ಖಾಸಗಿ ಕಂಪೆನಿಯೊಂದರಲ್ಲಿ ಕ್ಲರ್ಕ್ ಆಗಿ ದುಡಿಯುತ್ತಿರುವಾಗಲೇ ಅಣ್ಣ ಚೇತನ್ ಆನಂದ್ ಸದಸ್ಯನಾಗಿದ್ದ ರಂಗಸಂಸ್ಥೆ ಇಪ್ಟಾ(ಐಅ
)ತಂಡಕ್ಕೆ ಸೇರಿದರು. ಅಶೋಕ್ ಕುಮಾರ್ ಅವರ ಚಿತ್ರ ನಟನೆಯಿಂದ ಸ್ಫೂರ್ತಿಗೊಂಡು ಸಿನೆಮಾ ಸೇರುವ ಹಂಬಲ ಹೊತ್ತ ದೇವ್‌ಆನಂದ್ ಸ್ಟುಡಿಯೋಗಳಿಗೆ ಎಡತಾಕಿದರು. ಪ್ರಭಾತ್ ಸ್ಟುಡಿಯೋಸ್‌ನ ಬಾಬುರಾವ್ ಪೈ ಈ ಸುಂದರ ಯುವಕನ ಪ್ರತಿಭೆಯನ್ನು ಗುರುತಿಸಿ ಚಿತ್ರವೊಂದರಲ್ಲಿ ನಟಿಸಲು ಆಹ್ವಾನವಿತ್ತರು. 1946ರಲ್ಲಿ ಮೊದಲಬಾರಿಗೆ ಚಿತ್ರದಲ್ಲಿ ನಟಿಸಿದ ಅವರಿಗೆ ಮರುವರ್ಷ ಸುರಯ್ಯಾ ಅವರ ಜೊತೆ ನಾಯಕನಾಗಿ ‘ವಿದ್ಯಾ’ ಚಿತ್ರದಲ್ಲಿ ನಟಿಸುವ ಮೂಲಕ ಅದೃಷ್ಟ ಖುಲಾಯಿಸಿತು. 1940 ಮತ್ತು 50ರ ದಶಕದಲ್ಲಿ ಸುರಯ್ಯಾ(ಸುರಯ್ಯಾ ಜಮಾಲ್ ಶೇಖ್ ಜ. 15.6.1929) ತನ್ನ ಸೌಂದರ್ಯ, ಗಾಯನ ಮತ್ತು ಅಭಿನಯದಿಂದ ಭಾರತದ ಮೊದಲ ಸೆನ್ಸೇಷನಲ್ ನಾಯಕಿಯಾಗಿ ಖ್ಯಾತಿಯ ಶಿಖರ ತಲುಪಿದ್ದರು. ನಾಯಕಿ ಪ್ರಧಾನ ಚಿತ್ರಗಳಲ್ಲೇ ಹೆಚ್ಚು ನಟಿಸುತ್ತಿದ್ದರು. ತನ್ನ ಹಾಡುಗಳನ್ನು ತಾನೇ ಹಾಡುವ ನಟಿಗೆ ಬಹು ಬೇಡಿಕೆಯಿದ್ದ ಕಾಲದಲ್ಲಿ ಸುರಯ್ಯಿ ಚಿತ್ರ ಸಾಮ್ರಾಜ್ಞಿಯಾಗಿ ಮೆರೆದಿದ್ದರು. ಸುರಯ್ಯಾರ ಈ ಕೀರ್ತಿಯ ಜಗತ್ತಿಗೆ ಸದಾ ಆಲೋಚನಾ ಮಗ್ನನಾದ, ಸಣ್ಣ ಹಾಗೂ ಎತ್ತರ ಕಾಯದ ಮತ್ತು ಸುಂದರ ಮುಖದ ಹೊಸ ನಟನ ಪ್ರವೇಶವಾಯಿತು. ಆತ ಸುರಯ್ಯಿ ನಾಯಕಿಯಾಗಿದ್ದ ‘ವಿದ್ಯಾ’ ಚಿತ್ರಕ್ಕೆ ಆಯ್ಕೆಯಾಗಿದ್ದ ದೇವ್ ಆನಂದ್ ಹೆಸರಿನ ಸ್ಫುರದ್ರೂಪಿ ಯುವಕ.
ಒಬ್ಬ ಖ್ಯಾತಿವೆತ್ತ ನಟಿಯ ಜೊತೆ ನವನಟನ ನಡುವೆ ಪ್ರೇಮ ಮೂಡಿದ ಬಗೆಯನ್ನು ಸಂದರ್ಶನವೊಂದರಲ್ಲಿ ಸುರಯ್ಯಾ ಹೇಳಿಕೊಂಡಿದ್ದಾರೆ. ‘‘ನಾನು ನಾಯಕಿಯಾಗಿದ್ದ ಚಿತ್ರಗಳಲ್ಲಿ ನಟಿಸಿದ ನಾಯಕರಲ್ಲಿ ದೇವ್ ಆನಂದ್ ವಯಸ್ಸಿನಲ್ಲಿ ಅತ್ಯಂತ ಕಿರಿಯ ಮತ್ತು ರೂಪವಂತ ನಟ. ಚೆಲುವಾದ ಯುವಕ. ಆದರೆ ನಾನು ಭೇಟಿಯಾದ ಮೊದಲ ದಿನವೇ ನನ್ನಲ್ಲಿ ಆತನ ಬಗ್ಗೆ ಮೋಹ ಹುಟ್ಟಲಿಲ್ಲ. ಪ್ರೇಮಾಂಕುರವಾದ ಕ್ಷಣವನ್ನೂ ಹೇಳುವುದು ಕಷ್ಟ. ನಾನು ಆತನನ್ನು ‘ವಿದ್ಯಾ’ ಚಿತ್ರದ ಸೆಟ್‌ನಲ್ಲಿ ಮೊದಲಬಾರಿಗೆ ಭೇಟಿಯಾದ ಸಮಯದಲ್ಲಿ ನಾನಾಗಲೇ ಚಿತ್ರರಂಗದಲ್ಲಿ ಭದ್ರವಾಗಿ ತಳವೂರಿದ್ದೆ. ಆತ ಹೊಸಬ. ಆತ ನನ್ನೆದುರು ಸಂಕೋಚದ ಮುದ್ದೆಯಾಗಿದ್ದ. ವಿಶೇಷವಾಗಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಮುದುಡಿ ಮುದ್ದೆಯಾಗುತ್ತಿದ್ದ. ಕೆಲ ದಿನಗಳ ನಂತರ ನಾವು ದೋಣಿಯೊಂದರಲ್ಲಿ ಕುಳಿತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆವು. ಆಕಸ್ಮಿಕವಾಗಿ ದೋಣಿ ತಲೆಕೆಳಗಾಗಿ ನಾನು ನೀರಿನೊಳಗೆ ಬಿದ್ದೆ. ದೇವ್ ನನ್ನನ್ನು ಸಾವಿನಿಂದ ರಕ್ಷಿಸಿದ. ನಾನು ಆತನಿಗೆ ನೀನು ನನ್ನನ್ನು ರಕ್ಷಿಸದಿದ್ದರೆ ಸತ್ತೇ ಹೋಗುತ್ತಿದ್ದೆ ಎಂದೆ. ಅವನು ಅದಕ್ಕೆ ಶಾಂತವಾಗಿ ‘ನಿನ್ನ ಬದುಕು ಕೊನೆಯಾಗಿದ್ದರೆ ನನ್ನದೂ ಕೊನೆಯಾಗುತ್ತಿತ್ತು’ ಎಂದು ಉತ್ತರಿಸಿದ. ಆ ಕ್ಷಣದಲ್ಲಿ ನಾವು ಪರಸ್ಪರ ಪ್ರೇಮಪಾಶದಲ್ಲಿ ಬಂಧಿಯಾದೆವು ಎನಿಸುತ್ತದೆ.’’
ಸುರಯ್ಯ-ದೇವ್ ಆನಂದ್ ಅವರದು ನವಿರಾದ, ಭಾವಪೂರ್ಣ ಸಂಬಂಧ. ಮುಂದೆ ದೇವ್ ಆನಂದ್ ನಟಿಸಿದ ‘ಸಿಐಡಿ’ ಚಿತ್ರದ ‘‘ಆಂಖೋನ್ ಹಿ ಆಂಖೋನ್ ಇಶಾರಾ ಹೋಗಯ, ಬೈಟೆ ಬೈಟೆ ಜೀನೆ ಕಾ ಸಹಾರ ಹೋಗಯಾ...’’ ಹಾಡಿನ ಸಾಲುಗಳು ಅವರ ರೊಮ್ಯಾಂಟಿಕ್ ಬದುಕನ್ನು ಸರಿಯಾಗಿ ಪ್ರತಿನಿಧಿಸುತ್ತವೆನಿಸುತ್ತದೆ. ಮಾತು ಬೆಳ್ಳಿ, ಮೌನ ಬಂಗಾರವಾಗುವುದು ಇಂಥ ಗಳಿಗೆಗಳಲ್ಲಿ. ಆಗೆಲ್ಲ ಸೆಟ್‌ನಲ್ಲಿ ಬಿಡುವಿನ ವೇಳೆಯಲ್ಲಿ ಜೊತೆಯಲ್ಲಿ ಕುಳಿತು ಮಾತನಾಡಲು ಹೆದರಿಕೆ. ಖಾಸಗಿ ಭೇಟಿಯಂತೂ ಕಷ್ಟ ಸಾಧ್ಯ. ನೋಟದಲ್ಲಿಯೇ ಎಲ್ಲ ವಿನಿಮಯವಾಗಬೇಕಿತ್ತು. ಆಕೆಗೆ ಓದಲು ಕೊಡುತ್ತಿದ್ದ ಪುಸ್ತಕದಲ್ಲಿ ಪ್ರೇಮಪತ್ರವಿಟ್ಟು ಕಳುಹಿಸುತ್ತಿದ್ದರು. ಒಮ್ಮಿಮ್ಮೆ ಅವರ ಪ್ರೇಮವನ್ನರಿತ ಸಹ ಕಲಾವಿದೆ ಕಾಮಿನಿ ಕೌಶಲ್ ಅಂಚೆ ಆಳಾಗಿ ಸುರಯ್ಯೆ ಬರೆದ ಪತ್ರವನ್ನು ದೇವ್‌ಗೆ ತಲುಪಿಸುತ್ತಿದ್ದರು. ಆಕೆಯನ್ನು ಏಕಾಂತದ ಸಮಯದಲ್ಲಿ ದೇವ್ ‘ನೂಸೀ’ ಎಂದು ಮುದ್ದಿನಿಂದ ಕರೆದರೆ, ಸೆಟ್‌ನಲ್ಲಿರುವಾಗ ಅವರಿಗೆ ಮಾತ್ರ ತಿಳಿಯುವಂತೆ ಇಟಾಲಿಯನ್ ಭಾಷೆಯ ಉಚ್ಚಾರಣೆಯಲ್ಲಿ ‘ಸೂರಾಯಿನಾ’ ಎನ್ನುತ್ತಿದ್ದರು. ಆಕೆಯ ಪಾಲಿಗೆ ಆತ ‘ಸ್ಟೀವ್’ (ದೇವ್ ಆನಂದ್ ಕೊಟ್ಟ ಪುಸ್ತಕವೊಂದರ ನಾಯಕನ ಹೆಸರು) ಆಗಿದ್ದರು. ಹಲವೊಮ್ಮೆ ‘ದೇವೀನಾ’ ಎಂದು ಕರೆದು ಅಚ್ಚರಿಗೊಳಿಸುತ್ತಿದ್ದರು. ಸುರಯ್ಯಿ ಅವರ ಪ್ರೀತಿ ಎಷ್ಟು ಉತ್ಕಟವಾಗಿತ್ತೆಂದರೆ ದೇವ್ ಆನಂದ್ ಜೊತೆ ಹೆಚ್ಚು ಸಮಯ ಕಳೆಯಲು ತನ್ನ ಪಾತ್ರಗಳಿಗೆ ಹಾಡುವುದನ್ನು ಬಿಟ್ಟು ಲತಾ ಮಂಗೇಶ್ಕರ್ ಅವರಿಗೆ ಅವಕಾಶ ಮಾಡಿಕೊಟ್ಟರು. ಅವರು ತೀವ್ರವಾಗಿ ಪ್ರೀತಿಸುತ್ತಿದ್ದ ಸಮಯದಲ್ಲಿ ಹಿಂದಿ ನಟ ಶ್ಯಾಂ ಅವರ ಮದುವೆಗೆ ಸುರಯ್ಯಾ-ದೇವ್ ಆನಂದ್ ಕೈಕೈ ಹಿಡಿದು ಬಂದಾಗ ಮುಂಬೈ ಚಿತ್ರರಂಗ ಅಚ್ಚರಿ ಮಾತ್ರವಲ್ಲ, ದಿಗ್ಭ್ರಮೆಗೊಂಡಿತ್ತು.
ಇದಾದ ನಂತರ ಸುರಯ್ಯ-ದೇವ್ ಆನಂದ್ ಅವರ ಪ್ರೇಮ ಪ್ರಕರಣವು ಮುಂಬೈ ಚಲನಚಿತ್ರರಂಗದಲ್ಲಿ ದೊಡ್ಡ ಸುದ್ದಿಯಾಯಿತು. ಪತ್ರಿಕೆಯ ಕಾಲಂಗಳಲ್ಲೂ ಕಾಣಿಸಿಕೊಂಡಿತು. ಆದರೆ ಅವರ ಪ್ರೇಮವು ಸುರಯ್ಯಿರ ತಾಯಿಯ ತಾಯಿ-ಅಜ್ಜಿಗೆ ಸರಿಬೀಳಲಿಲ್ಲ. ಇಡೀ ಕುಟುಂಬವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದ ಅಜ್ಜಿ ಬಾದ್‌ಶಾ ಬೇಗಂ ಕಠೋರ ನಿಲುವಿನ ಧರ್ಮಾಂಧ ಮಹಿಳೆ. ಇವರಿಬ್ಬರ ನಡುವಿನ ಪ್ರೇಮವನ್ನು ತೀವ್ರವಾಗಿ ವಿರೋಧಿಸಿದರು. ಆಕೆಯ ನಿಲುವಿಗೆ ಸುರಯ್ಯಿಳ ಸೋದರಮಾವ ಜೂಹರ್, ಸಂಗೀತ ನಿರ್ದೇಶಕ ನೌಶಾದ್, ಚಿತ್ರ ಸಾಹಿತಿ ನಖ್ಶಾಬ್, ನಿರ್ದೇಶಕ ಎ.ಆರ್. ಕಾರ್ದಾರ್, ಎಂ. ಸಿದ್ಧೀಕ್ ಮುಂತಾದ ಚಿತ್ರರಂಗದ ಗಣ್ಯರು ಬೆಂಬಲ ನೀಡಿದರು. ದೇವ್ ಆನಂದ್ ಹಿಂದೂ ಎಂಬುದೊಂದೇ ಆಕೆಯ ವಿರೋಧಕ್ಕೆ ಕಾರಣವಲ್ಲ. ಇನ್ನೂ ಖ್ಯಾತಿಯ ಉತ್ತುಂಗದಲ್ಲಿರುವ ಮನೆಯ ಏಕೈಕ ದುಡಿಮೆಗಾರ್ತಿಯನ್ನು ಮದುವೆಯ ಹೆಸರಲ್ಲಿ ಕಳೆದುಕೊಳ್ಳಲು ಆಕೆಗೆ ಇಷ್ಟವಿರಲಿಲ್ಲ. ನಖ್ಶಾಬ್ ಅವರು ದೇವ್‌ಅನ್ನು ಇನ್ನು ಮುಂದೆ ಪ್ರೀತಿಸುವುದಿಲ್ಲವೆಂದು ಪ್ರಮಾಣ ಮಾಡಲು ಕುರ್‌ಆನ್ ಪ್ರತಿಯನ್ನು ಮುಂದೆ ಹಿಡಿದಿದ್ದರು. ಸುರಯ್ಯಾರ ಜನ್ಮದಾತರು ಆಕೆಯ ಪರವಿದ್ದರೂ ಬಾಯಿ ಬಿಡದ ಪರಿಸ್ಥಿತಿ. ಅವರ ಭೇಟಿಯನ್ನು ನಿಲ್ಲಿಸಲು ಈಗ ಸುರಯ್ಯಿಳ ಅಜ್ಜಿ ಸೆಟ್‌ಗೆ ಬಂದು ನಿಗಾ ವಹಿಸತೊಡಗಿದರು. ದೇವ್ ಆನಂದ್-ಸುರಯ್ಯಿ ನಡುವಿನ ಪ್ರೇಮ ದೃಶ್ಯಗಳನ್ನು ಹೇಗೆ ತೆಗೆಯಬೇಕೆಂದು ಆದೇಶ ನೀಡತೊಡಗಿದರು. ಅನೇಕಬಾರಿ ಆಕೆ ಪ್ರೇಮ ದೃಶ್ಯಗಳನ್ನು ತೆಗೆಯುವಾಗ ಕ್ಯಾತೆ ತೆಗೆದು ಚಿತ್ರೀಕರಣಕ್ಕೆ ಅಡ್ಡಿಪಡಿಸಿದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಅಜ್ಜಿಯ ವರ್ತನೆ ಬಗ್ಗೆ ಸುರಯ್ಯೆ ಹೇಳಿದ್ದು- ‘‘ಆರಂಭದಲ್ಲಿ ನನ್ನ ಅಜ್ಜಿಗೆ ದೇವ್ ಬಗ್ಗೆ ವಿರೋಧವಿರಲಿಲ್ಲ. ಒಮ್ಮೆ ಭೋಜನಕ್ಕೆ ದೇವ್‌ನನ್ನು ಮನೆಗೆ ಆಹ್ವಾನಿಸಿದ್ದರು. ಅವನಿಗೆ ಇಷ್ಟವಾದ ಮಾಂಸಾಹಾರ ಕೂಡ ಮಾಡಿದ್ದರು. ಆದರೆ ನನ್ನ ಅಜ್ಜಿ ತುಂಬಾ ಸಂಪ್ರದಾಯವಾದಿ. ದೇವ್ ಹಿಂದೂ ಎಂಬುದು ಆಕೆಗಿದ್ದ ವಿರೋಧಕ್ಕೆ ಕಾರಣ. ನಾವು ಭೇಟಿಯಾಗುವುದನ್ನು ಆಕೆ ನಿಷೇಧಿಸಿದರು. ಆಗ ದೇವ್ ಆನಂದ್ ಸ್ನೇಹಿತ ದ್ವಾರಕಾ ದ್ವಿವೇಚ ಮನೆಗೆ ಬಂದು ಅಜ್ಜಿಯ ಸಂಗಡ ಮಾತನಾಡುತ್ತಾ ಕುಳಿತರೆ ನಾನು ಟೆರೇಸಿಗೆ ಹೋಗಿ ಹಿಂಬಾಗಿಲ ಮೆಟ್ಟಿಲಿನಿಂದ ಬಂದ ದೇವ್ ಜೊತೆ ಅಲ್ಲಿಯ ನೀರಿನ ಟ್ಯಾಂಕ್ ಹತ್ತಿರ ಮರೆಯಾಗಿ ಕುಳಿತು ಮಾತನಾಡುತ್ತಿದ್ದೆ. ಆದರೆ ಈ ಸಮಯದಲ್ಲಿ ಏನಾಗುತ್ತದೋ ಎಂದು ಉದ್ವಿಗ್ನದಲ್ಲಿಯೇ ಇರುತ್ತಿದ್ದೆ.’’
ವಿರೋಧದ ನಡುವೆಯೂ ಸುರಯ್ಯಳ ಜೊತೆ ಮಾತನಾಡಲು ಮನೆಗೆ ದೂರವಾಣಿ ಕರೆ ಮಾಡಿ ದೇವ್ ಆನಂದ್ ಯತ್ನಿಸುತ್ತಿದ್ದ. ಆ ಸಮಯದಲ್ಲಿ ಕರೆ ಸ್ವೀಕರಿಸಿದ ಅಜ್ಜಿ ಬಯ್ದು ಸುರಯ್ಯಿರಿಂದ ದೂರ ಇರುವಂತೆ ಬೆದರಿಸುತ್ತಿದ್ದರು. ಧೈರ್ಯ ಮಾಡಿ ಮನೆಗೆ ಬಂದರೆ ಅವರ ಮನೆಯ ಗಂಡಸರೇ ಎದುರಾಗುತ್ತಿದ್ದರು. ಪೊಲೀಸಿಗೆ ದೂರು ಕೊಡುವ, ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದರು. ಒಮ್ಮೆ ಸುರಯ್ಯೆರಿಗೆ ದೇವ್ ಆನಂದ್ ಕೊಟ್ಟಿದ್ದ ಬಹು ಬೆಲೆಬಾಳುವ ವಜ್ರದ ಉಂಗುರವನ್ನು ಕಿತ್ತು ಅಜ್ಜಿ ಸಮುದ್ರಕ್ಕೆ ಎಸೆದಿದ್ದರು. ಸಂದರ್ಶನವೊಂದರಲ್ಲಿ ದೇವ್ ಹೇಳಿದ್ದು- ‘‘ಸುರಯ್ಯೆ ಜೊತೆ ಮಾತನಾಡಲು ಅವರ ಮನೆಯವರು ಮಾಡುತ್ತಿದ್ದ ಅಡ್ಡಿಯಿಂದ ನಾನು ಬಹು ನೊಂದೆ. ನಿಜವಾದ ಧರ್ಮ ಪ್ರೀತಿಯೊಂದೇ ಎಂದು ಸದಾ ಸುರಯ್ಯಿಗೆ ಹೇಳುತ್ತಿದ್ದೆ. ಸಾಮಾಜಿಕ ಕಟ್ಟಳೆಗಳು ಮತ್ತು ಧರ್ಮ ನಮ್ಮ ಪ್ರೀತಿಗೆ ಅಡ್ಡವಾಗಲು ಬಿಡಬೇಡ ಎಂದಿದ್ದೆ. ಆದರೆ ಕೊನೆಗೂ ಅದೇ ಆಯಿತು.’’

 
ಅಜ್ಜಿ ಆಕೆಯ ಪ್ರೇಮಕ್ಕೆ ವಿರುದ್ಧವಾಗಿದ್ದರೆ, ಆಕೆಯ ತಾಯಿ ಸುರಯ್ಯೆರ ಪರವಿದ್ದರು. ಆದರೂ ತಾಯಿ ತನ್ನ ತಾಯಿಯ ಜೋರಿನ ಮುಂದೆ ಮೌನಿ. ಸುರಯ್ಯೆ ಮತ್ತು ದೇವ್ ಆನಂದ್ ನಡುವಿನ ಕೊನೆಯ ಉತ್ಕಟ ಭೇಟಿಯೊಂದನ್ನು ವ್ಯವಸ್ಥೆಗೊಳಿಸಿದ್ದು ಸುರಯ್ಯೆರ ತಾಯಿ. ಒಂದು ರಾತ್ರಿ ಅಜ್ಜಿ ನಿದ್ರೆಯಲ್ಲಿದ್ದಾಗ ದೇವ್ ಆನಂದ್ ಕರೆಯನ್ನು ಸ್ವೀಕರಿಸಿದ ತಾಯಿ 11:30ಕ್ಕೆ ಮನೆಗೆ ಬಂದರೆ ಸುರಯ್ಯೆರನ್ನು ಭೇಟಿಯಾಗಿಸುವುದಾಗಿ ಹೇಳಿದರು. ಇದೊಂದು ಮನೆಯವರು ಬೋನಿಗೆ ಬೀಳಿಸುವ ತಂತ್ರವಿರಬಹುದೆಂದು ದೇವ್ ಶಂಕಿಸಿದರೂ ಪ್ರೇಮಿಯನ್ನು ಭೇಟಿಯಾಗುವ ಸಾಹಸದ ಕೈ ಮೇಲಾಯಿತು. ಆರು ಮಹಡಿಗಳ ಸಮುಚ್ಚಯದ ಟೆರೇಸಿನಲ್ಲಿ ಭೇಟಿ ಏರ್ಪಾಡಾಗಿತ್ತು. ಸುರಯ್ಯೆ ನೀರಿನ ಟ್ಯಾಂಕಿನ ಪಕ್ಕ ನಿಂತಿದ್ದರು. ಕೊನೆಯ ಭೇಟಿಯೇನೋ ಎಂಬಂತೆ ಪ್ರೇಮಿಗಳಿಬ್ಬರೂ ಆಲಂಗಿಸಿ ಅತ್ತರು. ಅರ್ಧ ಗಂಟೆಯ ನಂತರ ಪ್ರೇಮಿಗಳು ಅಗಲಿದರು. ಭಾವತೀವ್ರತೆಯ ಕೊನೆಯ ಭೇಟಿ ಅದಾಗಬಹುದೆಂದು ಇಬ್ಬರಿಗೂ ತಿಳಿದಿರಲಿಲ್ಲ. ಈ ಅಡ್ಡಿ ಆತಂಕಗಳ ನಡುವೆಯೂ ‘ಜೀತ್’(1949) ಸಿನೆಮಾ ಚಿತ್ರೀಕರಣದ ಸಮಯದಲ್ಲಿ ನಟಿ ದುರ್ಗಾ ಕೋಟೆ, ಕ್ಯಾಮರಾಮನ್ ದ್ವಾರಕಾ ದ್ವಿವೇಚ ಮತ್ತು ಚಿತ್ರೀಕರಣ ತಂಡದ ಇತರರ ಸಹಾಯದೊಂದಿಗೆ ದೇವಸ್ಥಾನವೊಂದಕ್ಕೆ ಓಡಿಹೋಗಿ ಮದುವೆಯಾಗುವ ಯೋಜನೆಗೆ ದೇವ್ ಆನಂದ್ ಮತ್ತು ಸುರಯ್ಯೆ ಸಮ್ಮತಿಸಿದ್ದರು. ಎಲ್ಲ ಸಿದ್ಧತೆಗಳು ಮುಗಿದಿದ್ದವು. ತಂಡದಲ್ಲಿದ್ದ ಸಹಾಯಕ ನಿರ್ದೇಶಕನೊಬ್ಬ ಸುರಯ್ಯೆಳನ್ನು ಪ್ರೀತಿಸುತ್ತಿದ್ದ ರಹಸ್ಯ ಯಾರಿಗೂ ತಿಳಿದಿರಲಿಲ್ಲ. ಅವನದು ಒಮ್ಮುಖ ಪ್ರೇಮ. ಆತ ಅಸೂಯೆಯಿಂದ ಅಜ್ಜಿಗೆ ಮುಂಚಿತವಾಗಿ ವಿಷಯ ತಿಳಿಸಿ ಅವರ ಯೋಜನೆಗೆ ಕಲ್ಲು ಹಾಕಿದ. ವಿಷಯ ತಿಳಿದ ಕೂಡಲೆ ಅಜ್ಜಿ ಸೆಟ್‌ಗೆ ದಾಳಿಯಿಟ್ಟರು. ದೇವ್ ಮೇಲೆ ಮುಗಿಬಿದ್ದರು. ದಿಗ್ಭ್ರಮೆಗೊಂಡು ಸೆಟ್‌ನಲ್ಲಿದ್ದವರು ಅವರ ಕೋಪ ಶಮನಮಾಡಲು ವಿಫಲ ಪ್ರಯತ್ನ ಮಾಡಿದರು. ಯಾರಿಗೂ ಮಣಿಯದ ಆಕೆ ‘ಜೀತ್’ ಸೆಟ್‌ನಿಂದ ಸುರಯ್ಯಿಳನ್ನು ದರದರ ಎಳೆದುಕೊಂಡೇ ಹೋದರು. ಮದುವೆಯ ವಿರುದ್ಧ ಅಜ್ಜಿಯ ವಾದ ಹೀಗಿತ್ತು- ‘‘ಸುರಯ್ಯಿ ಈಗ ಭಾರತದ ಬಹು ದೊಡ್ಡ ತಾರೆ. ಕೋಟ್ಯಾಂತರ ಅಭಿಮಾನಿಗಳ ದೇವತೆ. ಇಂಥ ಸಂದರ್ಭದಲ್ಲಿ ಹಿಂದೂ ಯುವಕನನ್ನು ಮದುವೆಯಾದರೆ ದೇಶದಲ್ಲಿ ಗಲಭೆ ಏಳುತ್ತದೆ. ದೇವ್ ಆನಂದ್ ಪ್ರಾಣಕ್ಕೂ ಅಪಾಯ.’’ ಧರ್ಮದ ಅಪಾಯಕಾರಿ ಆಯಾಮಗಳನ್ನು ತಿಳಿಯದ ಸುರಯ್ಯಾ ಈ ದಿಕ್ಕಿನಲ್ಲಿ ಯೋಚಿಸಿರಲಿಲ್ಲ.
ಆದರೆ ಸುರಯ್ಯರನ್ನು ಪ್ರಾಣದಷ್ಟೇ ಪ್ರೀತಿಸುತ್ತಿದ್ದ ದೇವ್ ಆನಂದ್ ಈ ಘಟನೆಯಿಂದ ಬೇಸರಗೊಂಡರೂ ಕೆಲವೇ ದಿನಗಳ ನಂತರ ಚಡಪಡಿಕೆ ತಡೆಯದೆ ಸುರಯ್ಯಿ ಮನೆಯ ಬಾಗಿಲು ತಟ್ಟಿದರು. ಎದುರಾದ ಸುರಯ್ಯಿರ ಸೋದರಮಾವ ಅವನ ಕಾಲರ್ ಹಿಡಿದು ಮನೆಯಿಂದ ಹೊರ ನೂಕಿದರು. ಆಗಲೂ ಸುರಯ್ಯಿರನ್ನು ಪಡೆದೇ ತೀರುವ ವಿಶ್ವಾಸ ದೇವ್‌ನಲ್ಲಿ ಉಳಿದಿತ್ತು.
ಚಿತ್ರವೊಂದರ ಶೂಟಿಂಗ್ ಸಮಯದಲ್ಲಿ ಸುರಯ್ಯ ಒಬ್ಬಳೇ ಇದ್ದ ಸಮಯದಲ್ಲಿ ಸಂಧಿಸಿದ ದೇವ್ ಆನಂದ್ ತಾವಿಬ್ಬರೂ ಮದುವೆಯಾಗುವುದೇ ಉಚಿತವೆಂದು ಅದಕ್ಕಾಗಿ ಇಬ್ಬರೂ ಎಂಥ ತ್ಯಾಗಕ್ಕಾದರೂ ಸಿದ್ಧವಾಗಬೇಕೆಂದು ಪರಿಪರಿಯಾಗಿ ತಿಳಿಹೇಳಿದರು. ಮೌನವಾಗಿ ಕುಳಿತ ಆಕೆಯನ್ನು ಮದುವೆಯ ಬಗ್ಗೆ ಕೊನೆಯ ನಿರ್ಧಾರ ತಿಳಿಸಲು ಕೇಳಿದ. ದೇವ್ ಆನಂದ್ ಅನ್ನು ಅತಿಯಾಗಿ ಪ್ರೀತಿಸುತ್ತಿದ್ದ ಸುರಯ್ಯಿ ಜೀವನವನ್ನು ಆತನ ಜೊತೆಯಲ್ಲಿ ಕಳೆಯುವ ಹಂಬಲ ಹೊತ್ತಿದ್ದಳು. ಆದರೆ ಅವನ ಜೊತೆ ಓಡಿ ಹೋಗಲು ಧೈರ್ಯವಿರಲಿಲ್ಲ. ತನ್ನ ಅಜ್ಜಿ ಮತ್ತು ಸಂಬಂಧಿಕರು ದೇವ್ ಆನಂದ್‌ರನ್ನು ಕೊಲೆ ಮಾಡಬಹುದೆಂಬ ಆತಂಕ ಆಕೆಯನ್ನು ಕಂಗೆಡಿಸಿತ್ತು. ತನ್ನ ಭಾವನೆಗಳನ್ನು, ಕನಸುಗಳನ್ನು ಅದುಮಿಟ್ಟು ತಾನು ಮದುವೆಯಾಗಲಾರೆ ಎಂದು ತನ್ನ ಕೊನೆಯ ನಿರ್ಧಾರ ತಿಳಿಸಿದರು.
ಅವರ ಮತುಗಳನ್ನು ಕೇಳಿ ಕೋಪದಿಂದ ಕಂಪಿಸಿದ ದೇವ್ ಆನಂದ್ ವಿವೇಕ ಕಳೆದುಕೊಂಡು ಆಕೆಯ ಕೆನ್ನೆಗೆ ಬಾರಿಸಿದರು. ‘‘ನೀನು ಹೇಡಿ’’ ಎಂದು ಜರೆದರು. ಆನಂತರ ತನ್ನ ಕೃತ್ಯಕ್ಕಾಗಿ ನಾಚಿಕೆ ಪಟ್ಟುಕೊಂಡ ದೇವ್ ಆನಂದ್ ಕ್ಷಮೆಯಾಚಿಸಿ ಹೊರಬಂದರು. ಅಲ್ಲಿಗೆ ಸುರಯ್ಯಾ-ದೇವ್ ಆನಂದ್ ನಡುವಿನ ಪ್ರೇಮ ಪ್ರಕರಣ ಮುಕ್ತಾಯವಾಯಿತು.
1950ರಲ್ಲಿ ಬಿಡುಗಡೆಯಾದ ‘ಅಫ್ಸಾರ್’ ದೇವ್ ಆನಂದ್-ಸುರಯ್ಯಾ ಜೋಡಿಯ ಕೊನೆಯ ಚಿತ್ರ. ಆ ಚಿತ್ರದ ಸೋಲಿನಿಂದ ಹಾಗೂ ಭಗ್ನಗೊಂಡ ಪ್ರೇಮಪ್ರಕರಣದಿಂದ ನೊಂದು ಸುರಯ್ಯಾ ಚಿತ್ರಗಳಿಂದ ದೂರವುಳಿದರು. ತನ್ನನ್ನು ಮದುವೆಯಾಗಲು ಬಂದ ಎಲ್ಲ ಅವಕಾಶಗಳನ್ನು ತಿರಸ್ಕರಿಸಿದರು. ದೇವ್ ಆನಂದ್ ನೆನಪಿನಲ್ಲಿಯೇ ಉಳಿಯಲು ತೀರ್ಮಾನಿಸಿದರು. 1963ರಲ್ಲಿ ಅಕೆ ಚಿತ್ರರಂಗದಿಂದ ಸಂಪೂರ್ಣ ದೂರವುಳಿದಳು. ಆಕೆಯ ಬದುಕಿನಲ್ಲಿ ಬಿರುಗಾಳಿಯೆಬ್ಬಿಸಿದ ಅಜ್ಜಿ ಬಾದ್‌ಶಾ ಬೇಗಂ ತನ್ನ ಸೋದರ ಮತ್ತು ಅವನ ಮಗನ ಜೊತೆ ಬದುಕಲು ಸುರಯ್ಯಿರನ್ನು ತೊರೆದು ಪಾಕಿಸ್ತಾನ ಸೇರಿದರು. ಈಗ ತಾಯಿ ಮುಮ್ತಾಜ್ ಶೇಖ್ ಮತ್ತು ಹಲವು ಗೆಳೆಯರ ಚಿಕ್ಕ ಸಮೂಹದ ನಡುವೆ ಅವರ ಬದುಕು ಹೊಸದಾಗಿ ಆರಂಭವಾಯಿತು. ಅವು ಆಕೆಯ ಪಾಲಿನ ಸುಖದ ದಿನಗಳು. 1987ರಲ್ಲಿ ತಾಯಿ ಸತ್ತಾಗ ಕಂಗೆಟ್ಟರೂ ಹಳೆಯ ಪರಿಚಯದ ಜೈರಾಜ್, ನಿಮ್ಮಿ, ತಬುಸ್ಸಂ ನಿರೂಪ ರಾಯ್ ಅಂಥ ಕಲಾವಿದರ ಜೊತೆ ಸಂಪರ್ಕವಿತ್ತು. ಕೊನೆ ಕೊನೆಗೆ ಆಕೆ ಜನರನ್ನು ಭೇಟಿಯಗುವುದನ್ನೇ ನಿಲ್ಲಿಸಿದರು. 2004 ಜನವರಿ 31ರಂದು ಈ ಅಮರ ಪ್ರೇಮಿ ನಿಧನಳಾದಳು.
ಅತ್ತ ದೇವ್ ಆನಂದ್ ಈ ಪ್ರೇಮ ವೈಫಲ್ಯದಿಂದ ಕಂಗೆಟ್ಟರೂ 1954ರಲ್ಲಿ ತನ್ನ ಚಿತ್ರ ‘ಟ್ಯಾಕ್ಸಿ ಡ್ರೈವರ್’ನ ನಾಯಕಿ ಕಲ್ಪನಾ ಕಾರ್ತಿಕ್ (ಮೂಲ ಹೆಸರು ಮೋನಾ ಸಿಂಘ್) ಅವರನ್ನು ಮದುವೆಯಾದರು. ಆದರೆ ಸುರಯ್ಯಿಳನ್ನು ಕುರಿತಂತೆ ನಂತರ ನಡೆದ ಎಲ್ಲ ಸಂದರ್ಶನಗಳಲ್ಲೂ ದೇವ್ ತನ್ನ ಮೊದಲ ಪ್ರೀತಿ ಸುರಯ್ಯಿಳ ನೆನಪಿನಲ್ಲಿಯೇ ಜೀವಿಸಿರುವುದಾಗಿ ಹೇಳಿಕೊಳ್ಳುತ್ತಿದ್ದರು.
ದೇವ್ ಆನಂದ್-ಸುರಯ್ಯ ನಡುವಿನ ನಾಲ್ಕು ವರ್ಷಗಳ ಪ್ರೀತಿ ಪ್ರಕರಣ ಯಾವುದೇ ಉತ್ಕಟ ಪ್ರೀತಿಯ ಯುವ ಪ್ರೇಮಿಗಳಿರುವ ಚಿತ್ರದ ಕತೆಯಂತಿದೆ. ಇಲ್ಲಿ ತೀವ್ರವಾಗಿ ಪ್ರೇಮಿಸುವ ನಾಯಕ ನಾಯಕಿಯ, ಖಳನಾಯಕಿ, ಪ್ರೇಮಿಗಳ ಬದುಕಿನಲ್ಲಿ ಅಟವಾಡುವ ಧರ್ಮ, ಪ್ರೇಮಿಗಳ ಸಾಹಸ, ದುರಂತ ಎಲ್ಲವೂ ಇವೆ. ಅವರು ಬೇರೆಯಾದರೂ ಕೊನೆಯವರೆಗೂ ದೂರದೆ ಪರಸ್ಪರ ಪ್ರೀತಿ ಗೌರವಗಳನ್ನಿರಿಸಿಕೊಂಡು ಪ್ರೀತಿಗೆ ಘನತೆ ತಂದರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)