ಮಧುರ ಗೀತೆಗಳ ಮಹಾರಾಜ ಕಿಶೋರ್ ಕುಮಾರ್
ಇಂದು ಕಿಶೋರ್ ಕುಮಾರ್ ಜನ್ಮದಿನ
‘ಕಿಶೋರ್ ಕುಮಾರ್, ಮಧುಬಾಲಾ ಅವರನ್ನು ಮದುವೆಯಾಗಲು ಇಸ್ಲಾಮ್ ಧರ್ಮಕ್ಕೆ ಮತಾಂತರ ಆಗಿದ್ದರು. ಆಕೆಗಾಗಿ ತಮ್ಮ ಹೆಸರನ್ನು ಅಬ್ದುಲ್ ಕರೀಮ್ ಎಂದು ಬದಲಿಸಿಕೊಂಡಿದ್ದರು’ ಎನ್ನುವ ಸುದ್ದಿಯೊಂದು, ಕಿಶೋರ್ ಕುಮಾರ್ ನಿಧನ(1987)ರಾದಾಗಿನಿಂದ ಹಿಡಿದು ಇಲ್ಲಿಯವರೆಗೆ ಹರಿದಾಡುತ್ತಲೇ ಇತ್ತು. ಅದರಲ್ಲೂ ಇತ್ತೀಚೆಗೆ ದೇಶ ಧರ್ಮಾಂಧತೆಯ ವಿಚಿತ್ರ ವ್ಯಾಕುಲಕ್ಕೆ ಒಳಗಾದ ಸಂದರ್ಭದಲ್ಲಿ ಇದು ಇನ್ನಷ್ಟು ಗೊಂದಲ-ಗೋಜಲುಗಳನ್ನು ಸೃಷ್ಟಿಸುತ್ತಿತ್ತು. ವಾಟ್ಸ್ ಆ್ಯಪ್ ಗಟಾರಕ್ಕೆ ಬಿದ್ದು ಗಲೀಜಾಗುತ್ತಿತ್ತು. ಹಾಗೆಯೇ ಇವತ್ತಿನ ಜನರ ಮನಸ್ಥಿತಿಯನ್ನು ಹೊರಗೆಡುವುತ್ತಲಿತ್ತು.
ಇಂತಹ ಗುಸುಗುಸುಲಿಗೆ ಬ್ರೇಕ್ ಹಾಕುವಂತೆ, ಇತ್ತೀಚೆಗೆ ಮಧುಬಾಲರ ಸಹೋದರಿ ಮಧುರ್ ಭೂಷಣ್, `ಅದೆಲ್ಲ ಸುಳ್ಳು, ನನ್ನ ಅಕ್ಕನನ್ನು ಮದುವೆಯಾಗಲು, ಕಿಶೋರ್ ಕುಮಾರ್ ಅಲ್ಲ ಯಾರೂ ಮತಾಂತರ ಆಗಿರಲಿಲ್ಲ’ ಎಂದು ಷರಾ ಬರೆದರು.
ಕಿಶೋರ್ ಕುಮಾರ್ ಮತ್ತು ಮಧುಬಾಲರ ಬಗ್ಗೆ ಜನ ಮಾತನಾಡಿಕೊಳ್ಳುವುದು ಸಹಜವೇ. ಮಧುಬಾಲ ಜಗದೇಕ ಸುಂದರಿ. ಆ ಮುಗ್ಧ ನಗುವೇ ಆಕೆಯ ಟ್ರೇಡ್ ಮಾರ್ಕ್. ಭಾರತೀಯ ಚಿತ್ರರಂಗದಲ್ಲಿ, ಅದರಲ್ಲೂ 1940ರಿಂದ 60ರ ಎರಡು ದಶಕಗಳವರೆಗೆ ತನ್ನ ಪ್ರತಿಭೆ ಮತ್ತು ಸೌಂದರ್ಯದಿಂದ ಹಿಂದಿ ಚಿತ್ರರಂಗವನ್ನಾಳಿದ ಸಾಮ್ರಾಜ್ಞಿ. ಹಾಗೆಯೇ ಕಿಶೋರ್ ಕುಮಾರ್ ಕೂಡ, ಸುಮಧುರ ಹಾಡುಗಳ ಮೂಲಕ ಭಾರತೀಯರ ಬದುಕಿನೊಂದಿಗೇ ಸ್ವರ ಬೆರೆಸಿಕೊಂಡಿರುವ ಸಾಮ್ರಾಟ. ಇವತ್ತಿಗೂ ಮೆಲೋಡಿ ಎಂದಾಕ್ಷಣ ಕಿಶೋರ್ ಎನ್ನುವಷ್ಟು ಅಜರಾಮರ.
ಇಂತಹ ಅಪ್ರತಿಮ ಕಲಾಜೋಡಿ ಮದುವೆ ಎಂಬ ಬಂಧನದ ಮೂಲಕ ಒಂದಾದ ಸಂದರ್ಭ, ಇಬ್ಬರಿಗೂ ಸಂಕಷ್ಟದ ಸಂಕ್ರಮಣದ ಕಾಲವಾಗಿತ್ತು. ಬಾಲನಟಿಯಾಗಿ ನಟಿಸಲು ಪ್ರಾರಂಭಿಸಿದ ಮಧುಬಾಲ, ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಾ ಹೋಗಿ, 1960ರಲ್ಲಿ ಬಂದ `ಮುಘಲ್ ಎ ಆಜಾಂ’ ಚಿತ್ರದ ಅನಾರ್ಕಲಿ ಆಗಿ, ಭಾರತೀಯರ ಎದೆಯಲ್ಲಿ ಶಾಶ್ವತವಾಗಿ ಬೇರೂರಿದ್ದರು. ಆ ಚಿತ್ರದಲ್ಲಿ ಉತ್ಕಟ ಪ್ರೇಮಿಗಳಾಗಿ ನಟಿಸಿದ್ದ, ಜನಮನ ಗೆದ್ದ ದಿಲೀಪ್ಕುಮಾರ್-ಮಧುಬಾಲ, ನಿಜಜೀವನದಲ್ಲಿಯೂ ಪ್ರೇಮಿಗಳಾಗಿದ್ದರು. ಆದರೆ ಸಿನೆಮಾದಲ್ಲಿ `ಪ್ಯಾರ್ ಕಿಯಾತೋ ಢರ್ ನಾ ಕ್ಯಾ’ಎಂದು ಹಾಡಿದ ಅನಾರ್ಕಲಿ, ನಿಜಜೀವನದಲ್ಲಿ ಆ ಧೈರ್ಯ ತೋರದೆ ತೆರೆಯ ಮರೆಗೆ ಸರಿದಿದ್ದರು. ಒಂಭತ್ತು ವರ್ಷಗಳ ಪ್ರೇಮವನ್ನು ದಕ್ಕಿಸಿಕೊಳ್ಳಲಾಗದೆ ದುಃಖಿತರಾಗಿದ್ದರು. ದಿಲೀಪ್ ಕುಮಾರ್ ರಿಂದ ನಿರಾಕರಿಸಲ್ಪಟ್ಟು ಜೀವನದ ಬಗ್ಗೆ ನಿರಾಸಕ್ತಿ ಹೊಂದಿದ್ದರು. ಆಕೆಯ ಮುಖದ ಮೇಲಿನ ಮಂದಹಾಸ ಮರೆಯಾಗಿತ್ತು. ಅದನ್ನು ಮರಳಿ ಪಡೆಯಲು ಕಿಶೋರ್ ಕುಮಾರ್ ಮದುವೆಯಾಗಲು ಒಪ್ಪಿದ್ದರು. ಅದೇ ಸಮಯಕ್ಕೆ ಕಿಶೋರ್ ಕುಮಾರ್ ಕೂಡ, ನಟನೆಯಿಂದ ನುಣುಚಿಕೊಳ್ಳಲು, ಗಾಯಕನಾಗಿ ನೆಲೆಯೂರಲು ನೋಡುತ್ತಿದ್ದರು. ಮೊದಲ ಪತ್ನಿ ರೂಮಾರಿಗೆ ವಿಚ್ಛೇದನ ನೀಡಿ ಒಬ್ಬಂಟಿಯಾಗಿದ್ದರು.
ಸಂಪ್ರದಾಯಸ್ಥ ಬೆಂಗಾಲಿ ಬ್ರಾಹ್ಮಿನ್ ಕುಟುಂಬಕ್ಕೆ ಸೇರಿದ ಕಿಶೋರ್ ಕುಮಾರ್, ಪೆಶಾವರ ಮೂಲದ ಪಠಾಣರ ಮುಮ್ತಾಝ್ ಬೇಗಂರನ್ನು ಮದುವೆಯಾದಾಗ, ಮತಾಂತರದ ಮಾತು ಬಂದದ್ದು ನಿಜ. ಆದರೆ, ಮಧುಬಾಲರ ಸಹೋದರಿ ಮಧುರ್, `ಆ ರೀತಿ ಏನೂ ಆಗಲಿಲ್ಲ, ಅಷ್ಟಕ್ಕೂ ಆಕೆ ಮದುವೆಯಾಗಿದ್ದು ಹಠದಿಂದ, ಮತ್ತೆ ನಗಬೇಕೆಂಬ ನಿರ್ಧಾರದಿಂದ. ಆದರೆ ವಿಧಿಯಾಟವೆ ಬೇರೆ ಇತ್ತು. ಆರೋಗ್ಯ ಕೈಕೊಟ್ಟು ಹಾಸಿಗೆ ಹಿಡಿದಳು. ಕಿಶೋರ್ ಕೂಡ ನೋಡಲಿಲ್ಲ. ಆಕೆಯ ಆರೈಕೆಗಾಗಿ ಒಬ್ಬ ನರ್ಸ್ ಮತ್ತು ಡ್ರೈವರ್ ನೇಮಿಸಿ, ನಾಲ್ಕು ತಿಂಗಳಿಗೊಂದು ಸಲ ಬಂದುಹೋಗುತ್ತಿದ್ದರು’ಎಂಬ ಸತ್ಯವನ್ನು ಇತ್ತೀಚಿನ ವರ್ಷಗಳಲ್ಲಿ ಹೊರಹಾಕಿದರು.
ಆದರೆ ಕಿಶೋರ್ ಕುಮಾರ್, ಹಿಂದೊಮ್ಮೆ ಪ್ರೀತಿಶ್ ನಂದಿಗೆ ಕೊಟ್ಟ ಸಂದರ್ಶನದಲ್ಲಿ, `ಆಕೆಯನ್ನು ಮದುವೆಯಾದ ದಿನದಿಂದಲೇ ಅವಳ ಆರೋಗ್ಯ ಸರಿಯಿರಲಿಲ್ಲ. ಜೊತೆಗೆ ವೈಯಕ್ತಿಕ ಬದುಕಲ್ಲಿ, ಕೌಟುಂಬಿಕ ಕಟ್ಟುಪಾಡುಗಳಿಂದ ಬಹಳ ನೊಂದಿದ್ದಳು. ಅದು ಗೊತ್ತಿದ್ದರಿಂದಲೇ ನಾನು ಆಕೆಯನ್ನು ಮಗುವಿನಂತೆ ನೋಡಿಕೊಂಡಿದ್ದೇನೆ. ಆಕೆಯನ್ನು ಖುಷಿಯಾಗಿಡಲು ಶಕ್ತಿಮೀರಿ ಶ್ರಮಿಸಿದ್ದೇನೆ. ಆದರೆ ವಿಧಿಯಾಟ, ಆಕೆ ನನ್ನ ಕಣ್ಣಮುಂದೆಯೇ ಕಣ್ಮುಚ್ಚಿದಳು’ ಎಂದಿದ್ದರು.
ಕಿಶೋರ್ ಕುಮಾರ್ ಬದುಕಲ್ಲಿ ಇದೊಂದು ಅಧ್ಯಾಯವಷ್ಟೆ. ರೂಮಾ, ಮಧುಬಾಲ ಹೊರತಾಗಿಯೂ ಕಿಶೋರ್ ಕುಮಾರ್ ಇನ್ನಿಬ್ಬರು- ಯೋಗಿತಾ ಬಾಲಿ ಮತ್ತು ಲೀನಾ ಚಂದಾವರ್ಕರ್ರನ್ನು ಮದುವೆಯಾದ ವರ್ಣರಂಜಿತ ವ್ಯಕ್ತಿ. ಹಾಗೆಯೇ ತಮ್ಮ ಅಸಲಿ ಪ್ರತಿಭೆಯ ಮೂಲಕ ಭಾರತೀಯ ಚಿತ್ರರಂಗದಲ್ಲಿ ನಿರ್ವಹಿಸಿದ, ನಿಭಾಯಿಸಿದ ಪಾತ್ರಗಳು- ನಟನಾಗಿ, ಗಾಯಕನಾಗಿ, ಸಂಗೀತ ಸಂಯೋಜಕನಾಗಿ, ಗೀತ ರಚನೆಕಾರನಾಗಿ, ಸಂಕಲನಕಾರನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ... ಅದ್ವಿತೀಯ. ಅಮೋಘ.
1929ರ ಆ. 4ರಂದು ಮಧ್ಯಪ್ರದೇಶದ ಖಾಂಡ್ವಾದಲ್ಲಿ ಜನಿಸಿದ ಕಿಶೋರ್ ಕುಮಾರ್, ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದವರು. ಅಣ್ಣ ಅಶೋಕ್ ಕುಮಾರ್ ಹಿಂದಿ ಚಿತ್ರರಂಗದಲ್ಲಿ ನೆಲೆಯೂರಿದ್ದ ದಿನಗಳಲ್ಲಿ ಕಿಶೋರ್, ಉಡಾಫೆಗಳ ಹುಡುಗನಾಗಿದ್ದ. ಅಣ್ಣನ ಮೂಲಕವೇ ಮೊದಲಿಗೆ 1946ರಲ್ಲಿ `ಶಿಕಾರಿ’ಚಿತ್ರದ ಮೂಲಕ ನಟನಾ ಬದುಕಿಗೆ ಕಾಲಿರಿಸಿದರು. ಅವರ ಪ್ರೋತ್ಸಾಹದ ಫಲವಾಗಿ ಕಿಶೋರ್ ಕುಮಾರ್ ನಟನಾದರೂ, ಮೊದಲ ಹತ್ತು ವರ್ಷಗಳ ಕಾಲಾವಧಿಯಲ್ಲಿ ಬಂದ 22 ಚಿತ್ರಗಳಲ್ಲಿ 16 ಚಿತ್ರಗಳು ನೆಲಕಚ್ಚಿ, ನಿರ್ಮಾಪಕರ ಪಟ್ಟಿಯಲ್ಲಿ ಕಿಶೋರ್ ಕಾಣೆಯಾಗಿದ್ದರು. ಆ ನಂತರ ಬಿಮಲ್ ರಾಯ್ರ `ನೌಕರಿ’, ಹೃಷಿಕೇಷ್ ಮುಖರ್ಜಿಯವರ `ಮುಸಾಫಿರ್’ಚಿತ್ರಗಳು ಗೆಲುವಿನತ್ತ ಮುಖಮಾಡಲು ಮಾರ್ಗ ತೋರಿದವು. 1955ರಿಂದ 65ರವರೆಗಿನ ಅವರ ಚಿತ್ರಗಳು ಅವರನ್ನು ಸ್ಟಾರ್ ನಟನನ್ನಾಗಿ ನೆಲೆಯೂರಿಸಿದವು. `ಚಲ್ತಿ ಕಾ ನಾಮ್ ಗಾಡಿ`, `ಹಾಫ್ ಟಿಕೆಟ್`, `ಝುಮ್ರೂ` -ಈ ಮೂರೂ ಚಿತ್ರಗಳಲ್ಲಿ ಕಿಶೋರ್ ಕುಮಾರ್ಗೆ ಮಧುಬಾಲ ನಾಯಕಿಯಾಗಿದ್ದರು. ಆಕೆಯ ಸೌಂದರ್ಯ ಮತ್ತು ಮೋಹಕ ನಗುವಿನ ಮುಂದೆ ಎಂಥ ನಾಯಕರೂ ಮಂಕಾಗುವುದು ಗ್ಯಾರಂಟಿ. ಆದರೆ ಕಿಶೋರ್ ಕುಮಾರ್ ವಿಚಾರದಲ್ಲಿ ಅದು ಬೇರೆಯಾಗಿತ್ತು. ಪಾದರಸವೇ ನಾಚುವಂತಹ ನಟನೆ, ನಟನೆಯೊಂದಿಗೆ ನೃತ್ಯ, ನೃತ್ಯಕ್ಕೆ ತಕ್ಕ ಗಾಯನ, ವಿಚಿತ್ರ ವೇಷಭೂಷಣ, ಆಂಗಿಕಾಭಿನಯ.. ಪ್ರೇಕ್ಷಕರನ್ನು ನಗೆಯ ಹೊಳೆಯಲ್ಲಿ ಮುಳುಗೇಳಿಸಿದ್ದರು. ಅದಕ್ಕೊಂದು ಉದಾಹರಣೆಯಾಗಿ, 1962ರಲ್ಲಿ ತೆರೆಕಂಡ `ಹಾಫ್ ಟಿಕೆಟ್’ಚಿತ್ರದ `ಆಕೇ ಸೀದೀ ಲಗೀ ದಿಲ್ ಸೆ...’ ಹಾಡು ಮತ್ತು ನಟನೆಯನ್ನು ನೋಡಬಹುದು. ಆ ಹಾಡಿನಲ್ಲಿ ಅವರು ಮಾಡದೆ ಬಿಟ್ಟಿರುವುದು ಏನೂ ಇಲ್ಲ. ಗಾಯಕ-ಗಾಯಕಿ ಎರಡೂ ಅವರೇ ಆಗಿದ್ದರು. ಚಿತ್ರದ ಪಾತ್ರದಲ್ಲಂತೂ ಪರಾಕಾಷ್ಠೆ ತಲುಪಿದ್ದರು. ಫೀಮೇಲ್ ಟ್ರ್ಯಾಕ್ ಹಾಡಬೇಕಾದ ಲತಾ ಮಂಗೇಶ್ಕರ್ ಅಕಸ್ಮಾತ್ ಬರದಿದ್ದಾಗ, ಅದನ್ನೇ ಅವಕಾಶವನ್ನಾಗಿ ಬಳಸಿಕೊಂಡ ಕಿಶೋರ್ ಕುಮಾರ್, ಎರಡೂ ಟ್ರ್ಯಾಕ್ ಗಳನ್ನು ಒಬ್ಬರೇ ಹಾಡಿ, ನಿಜಪ್ರತಿಭೆಯನ್ನು ಹೊರಹಾಕಿದ್ದರು.
`ಝಿದ್ದಿ’ಚಿತ್ರದಲ್ಲಿ ಸಮೂಹ ಗಾಯಕರಲ್ಲೊಬ್ಬನಾಗಿದ್ದ ಕಿಶೋರ್, ಮೊದಲಿಗೆ ಕೆ.ಎಲ್. ಸೈಗಲ್ ಅವರನ್ನು ಅನುಕರಣೆ ಮಾಡತೊಡಗಿದ್ದರಂತೆ. ಕಿಶೋರ್ ಕಂಠದಲ್ಲೊಂದು ವಿಶೇಷತೆಯನ್ನು ಹುಡುಕಿದ್ದ ಎಸ್.ಡಿ.ಬರ್ಮನ್, ನಿನ್ನದೇ ಆದ ಹೊಸ ಹಾದಿ ಹುಡುಕಿಕೋ ಎಂದರಂತೆ. ಅಷ್ಟೇ ಅಲ್ಲ, ತಮ್ಮ ಸಂಗೀತ ನಿರ್ದೇಶನದ 20 ಚಿತ್ರಗಳಲ್ಲಿ ಹಾಡಲು ಅವಕಾಶ ಮಾಡಿಕೊಟ್ಟರು. ಆ ಕಾಲದ ಹೀರೋ ದೇವಾನಂದ್ರ ಸುಮಾರು 113 ಚಿತ್ರಗಳಲ್ಲಿ ಕಿಶೋರ್ ಕುಮಾರ್ ಹಾಡಿದ್ದರು. ಅವರೂ-ಇವರೂ ಒಟ್ಟೊಟ್ಟಿಗೇ ಬೆಳೆದಿದ್ದರು.
ತಂದೆ ಎಸ್.ಡಿ. ಬರ್ಮನ್ ನೇಪಥ್ಯಕ್ಕೆ ಸರಿದು ಮಗ ಆರ್.ಡಿ.ಬರ್ಮನ್ ಮುನ್ನಲೆಗೆ ಬರುವ ಕಾಲಕ್ಕೆ, ಕಿಶೋರ್ ಕುಮಾರ್ ಕೂಡ ಸುಮಾರು ೮೮ ಚಿತ್ರಗಳಲ್ಲಿ ನಟಿಸಿ, ನಟನೆಯಿಂದ ಗಾಯನ ಕ್ಷೇತ್ರದಲ್ಲಿ ನೆಲೆಯಾಗಿದ್ದರು. ಅದೇ ಸಮಯಕ್ಕೆ ಸರಿಯಾಗಿ, 1968ರಲ್ಲಿ `ಪಡೋಸನ್’ಚಿತ್ರ ಬಂತು. ಆ ಚಿತ್ರದಲ್ಲಿ ಸುನೀಲ್ ದತ್, ಸಾಯಿರಾ ಬಾನು, ಮೊಹಮ್ಮೂದ್ ರಂತಹ ಘಟಾನುಘಟಿಗಳಿದ್ದರೂ, ಗುರುವಿನ ಪಾತ್ರ ನಿರ್ವಹಿಸಿದ್ದ ಕಿಶೋರ್ ಕುಮಾರ್ ಚಿತ್ರದ ಕೇಂದ್ರ ಬಿಂದುವಾಗಿದ್ದರು. ನಟನೆ-ಗಾಯನದಿಂದ ಮತ್ತೊಂದು ಮಜಲನ್ನು ಹೊರಹಾಕಿದ್ದರು, ಮಿಂಚಿದ್ದರು. ಹಿರಿಯನ ಸ್ಥಾನಕ್ಕೆ ಬಡ್ತಿ ಪಡೆದಿದ್ದರು. ಆ ಚಿತ್ರದ ಹಾಡುಗಳು, ಪಾತ್ರಗಳು ಮತ್ತು ಕತೆ.. ಯಶಸ್ಸಿನ ಹೊಸ ಹಾದಿಯನ್ನು ತೆರೆದು ತೋರಿಸಿತ್ತು.
ಅಲ್ಲಿಂದ ಸಂಗೀತ ನಿರ್ದೇಶಕ ಆರ್.ಡಿ.ಬರ್ಮನ್ರ ಆಪ್ತ ಬಳಗ ಸೇರಿದ ಕಿಶೋರ್ ಕುಮಾರ್, 1969 ರಲ್ಲಿ ತೆರೆಕಂಡ `ಆರಾಧನಾ’(ಸಂಗೀತ-ಎಸ್.ಡಿ.ಬರ್ಮನ್) ಚಿತ್ರದ ಮೂಲಕ ರಾಜೇಶ್ ಖನ್ನಾರನ್ನೂ ಸೆಳೆದುಕೊಂಡರು. ಮೂವರು ಪ್ರತಿಭಾವಂತರು ಒಂದಾಗಿ, ಹಿಂದಿ ಚಿತ್ರರಂಗ ಎಂದಿಗೂ ಮರೆಯಲಾರದಂತಹ, ಎಂದೆಂದಿಗೂ ಮೆಲುಕು ಹಾಕುವಂತಹ ಹಾಡುಗಳನ್ನು ಕೊಟ್ಟರು. ಅದರಲ್ಲೂ ಕಿಶೋರ್ ಕುಮಾರ್ ಮತ್ತು ರಾಜೇಶ್ ಖನ್ನಾ ಜೋಡಿ, ಸುಮಾರು 92 ಚಿತ್ರಗಳಲ್ಲಿ ಜೊತೆಯಾಯಿತು. ರಾಜೇಶ್ ಖನ್ನಾಗಾಗಿಯೇ ಕಿಶೋರ್ ದಾ 245 ಹಾಡುಗಳನ್ನು ಹಾಡಿದರು. ಈ ದಾಖಲೆ ಇವತ್ತಿನವರೆಗೂ ದಾಖಲೆಯಾಗಿಯೇ ಇದೆ. ಹಾಗೆಯೇ ಮತ್ತೊಂದು ದಾಖಲೆ ಎಂದರೆ, ಗಾಯಕಿ ಆಶಾ ಬೋಂಸ್ಲೆಯೊಂದಿಗೆ ಸುಮಾರು 687 ಹಾಡುಗಳಿಗೆ ಸ್ವರ ಸೇರಿಸಿದ ಕೀರ್ತಿಯೂ ಕಿಶೋರ್ ಕುಮಾರ್ಗೇ ಸಲ್ಲುತ್ತದೆ. ಇವುಗಳ ನಡುವೆಯೇ ಜಿತೇಂದ್ರರಿಗಾಗಿ 202 ಹಾಡುಗಳು, ಅಮಿತಾಭ್ ಬಚ್ಚನ್ಗಾಗಿ 131 ಹಾಡುಗಳನ್ನೂ ಹಾಡಿದರು. ಇದು ಒಬ್ಬ ಗಾಯಕನಾಗಿ ಅತಿ ಹೆಚ್ಚು ಹಾಡುಗಳನ್ನು ಹಲವು ನಾಯಕರಿಗಾಗಿ- ದೇವಾನಂದ್ರಿಂದ ಹಿಡಿದು ಅನಿಲ್ ಕಪೂರ್ವರೆಗೆ ಹಾಡಿದ ದಾಖಲೆಯಾದರೆ, ತಮ್ಮ ಸುಶ್ರಾವ್ಯ ಕಂಠಕ್ಕಾಗಿ ಎಂಟು ಬಾರಿ, ಫಿಲಂಪೇರ್ ಅತ್ಯುತ್ತಮ ಗಾಯಕ ಪ್ರಶಸ್ತಿ ಪಡೆದ ದಾಖಲೆಯೂ ಇವರದ್ದೇ ಆಗಿದೆ. ಹಿಂದಿಯಷ್ಟೇ ಅಲ್ಲ, ಬಂಗಾಳಿ, ಗುಜರಾತಿ, ಮರಾಠಿ, ಅಸ್ಸಾಮಿ, ಭೋಜಪುರಿ, ಮಲಯಾಳಂ, ಒರಿಯಾ, ಉರ್ದು ಮತ್ತು ಕನ್ನಡದಲ್ಲೂ ಹಾಡಿದರು. ಕನ್ನಡದ `ಕುಳ್ಳ ಏಜೆಂಟ್ 000’ಚಿತ್ರದ `ಆಡು ಆಟ ಆಡು, ನೀ ಆಡು ಆಡು ಆಡಿ ನೋಡು..’ ಹಾಡಿದ್ದೂ ಕೂಡ ದಾಖಲೆಯೇ.
ಆ ಕಾಲದ, 70 ಮತ್ತು 80ರ ದಶಕಗಳ ಆ ಮೆಲೋಡಿ ಹಾಡುಗಳನ್ನು ಇವತ್ತಿಗೂ ಆಸೆಪಟ್ಟು ಆಲಿಸುವ- ಕರೀಮ್ ಆದರೂ, ಕಿಶೋರ್ ಆದರೂ- ಆಲಿಸುತ್ತಲೇ ಆ ಕಾಲಕ್ಕೆ ಹೋಗಿ ತಮ್ಮ ನೆನಪುಗಳನ್ನು ಮೆಲುಕು ಹಾಕುವ ಜನರಿದ್ದಾರೆ. ಕಿಶೋರ್ ಕುಮಾರ್ ವಿಶೇಷತೆ ಎಂದರೆ, ಅವರು ಹಾಡುಗಳನ್ನು ಸಂಗೀತ ನಿರ್ದೇಶಕನ ರಾಗ ತಾಳಕ್ಕೆ, ಚಿತ್ರದ ಸನ್ನಿವೇಶಕ್ಕೆ, ನಟನ ಅಭಿನಯಕ್ಕೆ ತಕ್ಕಂತೆ ಹಾಡುವುದು. ಆ ತಲ್ಲೀನತೆ, ಆ ವಿಭಿನ್ನತೆ, ಆ ಮಧುರ ಗೀತೆಗಳು... ಅವರೊಬ್ಬರಿಗೇ. ಆ ಕಾರಣಕ್ಕೋ ಏನೋ, ಕಿಶೋರ್ ಕುಮಾರ್ ಇನ್ನೂ ಬದುಕಿದ್ದಾರೆ.
ಏಕ್ ಲಡ್ಕಿ ಭೀಗಿ ಭಾಗಿ ಸೀ:
1958ರಲ್ಲಿ ತೆರೆಗೆ ಬಂದ ‘ಚಲ್ತೀಕಾನಾಮ್ಗಾಡಿ’ ಚಿತ್ರದ ಕಪ್ಪು ಬಿಳುಪಿನ ಹಾಡು. ಕಿಶೋರ್ ಕುಮಾರ್ ನಾಯಕನಾಗಿ, ಮಧುಬಾಲ ನಾಯಕಿಯಾಗಿ ನಟಿಸಿದ ಹಾಸ್ಯ ಚಿತ್ರ. ಎಲ್ಲಾ ಕಾಲಕ್ಕೂ ನೋಡಬಹುದಾದ ಚಿತ್ರ.
ಮೇರೆ ಸಪ್ನೊಕಿ ರಾಣಿ ಕಬ್:
1969ರಲ್ಲಿ ಬಿಡುಗಡೆಯಾದ 'ಆರಾಧನಾ’ ಚಿತ್ರದ ಕಲರ್ ಫುಲ್ ಹಾಡು. ಈ ಚಿತ್ರದಲ್ಲಿ ರಾಜೇಶ್ ಖನ್ನಾ ಹಾಗೂ ಶರ್ಮಿಳಾ ಟಾಗೋರ್ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ . ರೈಲು-ರಸ್ತೆ ಈ ಹಾಡಿನ ವಿಶೇಷ.
ಚಿಂಗಾರಿ ಕೋಯಿ ಭಡ್ಕೆ:
1972ರ ‘ಅಮರ್ ಪ್ರೇಮ್’ ಚಿತ್ರದ ಈ ಗೀತೆ ಕೇಳುಗರನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ರಾಜೇಶ್ ಖನ್ನಾ, ಶರ್ಮಿಲಾ ಟಾಗೋರ್ ಅಭಿನಯಿಸಿರುವ ಈ ಗೀತೆಯನ್ನು ದೋಣಿಯ ಮೇಲೆ ರಾತ್ರಿಯಂದು ಚಿತ್ರೀಕರಿಸಲಾಗಿದೆ.
ತೇರೆ ಬಿನಾ ಜಿಂದಗೀ ಸೆ:
1975ರಲ್ಲಿ ಬಿಡುಗಡೆಯಾದ ‘ಆಂಧಿ’ ಚಿತ್ರದ ಈ ಹಾಡು ಜನಪ್ರಿಯ ಗೀತೆಗಳಲ್ಲೊಂದು. ಸಂಜೀವ ಕುಮಾರ್-ಸುಚಿತ್ರ ಸೇನ್ ನಟಿಸಿರುವ ಈ ಚಿತ್ರ, ಆ ಕಾಲಕ್ಕಲ್ಲ, ಈ ಕಾಲಕ್ಕೂ ಕೇಳುಗರ ಎದೆಯನ್ನು ತೇವಗೊಳಿಸಬಲ್ಲದು.
ಆಕೇ ಸೀಧೀ ಲಗೀ ದಿಲ್ ಸೇ:
1962ರಲ್ಲಿ ಬಿಡುಗಡೆಯಾದ ʻಹಾಫ್ ಟಿಕೇಟ್ʼ ಚಿತ್ರದ ಈ ಗೀತೆಯನ್ನು ಕಿಶೋರ್ ಕುಮಾರ್ ಗಾಯನ, ನೃತ್ಯ, ವೇಷಭೂಷಣಗಳ ವೈವಿಧ್ಯತೆಯನ್ನು ಒಂದೇ ಹಾಡಿನಲ್ಲಿ ಕಟ್ಟಿಕೊಡುತ್ತದೆ. ಮಧುಬಾಲ, ಪ್ರಾಣ್ ಕೂಡ ಇದ್ದಾರೆ.