varthabharthi


ವಿಶೇಷ-ವರದಿಗಳು

ತಳ ಸಮುದಾಯದಿಂದಲೇ ಸಂಘಟಿತ ಆಂದೋಲನ ರೂಪುಗೊಳ್ಳಬೇಕು: ದೇವನೂರ ಮಹಾದೇವ

ವಾರ್ತಾ ಭಾರತಿ : 5 Aug, 2022
ಸಂದರ್ಶನ: ಪ್ರೊ. ರಾಜೇಂದ್ರ ಚೆನ್ನಿ

Photo: deccanherald.com

ಪ್ರಭುತ್ವ, ಸರಕಾರಗಳ ಕಾಯ್ದೆ ಕಾನೂನುಗಳ ಜನ ವಿರೋಧಿ ನೀತಿಗಳನ್ನು ಜನ ಮಾತಾಡಿಕೊಳ್ಳುವಂತಾಗಲು ನಮ್ಮಂಥವರು ವೇಗವರ್ಧಕದಂತೆ ಕೆಲಸ ಮಾಡಬೇಕು. ಭಾರತ ಸಂವಿಧಾನವನ್ನು ದುರ್ಬಲಗೊಳಿಸುವ ಶಕ್ತಿಗಳ ವಿರುದ್ಧ ಸದಾ ಒಂದು ಕಣ್ಣಿಟ್ಟಿರಬೇಕು. ತಳಸಮುದಾಯಗಳಿಗೆ ಖಾಸಗಿಯಲ್ಲೂ ಮೀಸಲಾತಿ, ಸರ್ವಜನಾಂಗದ ಸಹಭಾಗಿ ಪ್ರಜಾಪ್ರಭುತ್ವಕ್ಕಾಗಿ ಜಾಗೃತಿ ಮೂಡಿಸಿ ಬೃಹತ್ ಹೋರಾಟವನ್ನೇ ರೂಪಿಸಬೇಕಾಗಿ ಬರಬಹುದು.

ಪ್ರ: ಬಲಪಂಥೀಯ ಚಿಂತನೆಯ ವಿರೋಧ ನಿಮ್ಮ ಬರಹ ಮತ್ತು ಕ್ರಿಯೆಗಳಲ್ಲಿ ಹೊಸದಲ್ಲ. ಎದೆಗೆ ಬಿದ್ದ ಅಕ್ಷರದಲ್ಲಿ ಅನೇಕ ಲೇಖನಗಳು ಆ ಚಿಂತನೆಯ ಬಗ್ಗೆ ಕಟುವಾದ ವಿಮರ್ಶೆಯನ್ನು ಮಾಡುತ್ತವೆ. ಆದರೆ ಈ ಕೃತಿಯಲ್ಲಿ ನೀವು ಆರೆಸ್ಸೆಸ್‌ನ ಪ್ರಾಣಪಕ್ಷಿಯನ್ನೇ ಹಿಡಿಯಲು ಪ್ರಯತ್ನಿಸಿದ್ದೀರಿ. ಇದಕ್ಕೆ ಕಾರಣ ಮತ್ತು ಪ್ರೇರಣೆಗಳೇನು?

► ನಾನು ಸಾಮಾನ್ಯವಾಗಿ ಬಲಪಂಥೀಯ ಮತ್ತು ಎಡಪಂಥೀಯ ಪದ ಬಳಸುವುದಿಲ್ಲ. ಯಾವುದೋ ಒಂದು ಸಭೆಯಲ್ಲಿ ‘‘ನೀವು ಎಡಪಂಥೀಯರು’’ ಎಂದು ಸಭಿಕರೊಬ್ಬರು ಆಕ್ಷೇಪಣೆ ಎತ್ತಿದರು. ಆಗ ನಾನು, ಫ್ರಾನ್ಸ್ ಚಕ್ರವರ್ತಿಯ ಎಡಕ್ಕೆ ಬದಲಾವಣೆ ಬೇಕು ಅನ್ನುವವರು, ಹಾಗೂ ಬದಲಾವಣೆ ಬೇಡ ಅನ್ನುವವರು ಬಲಕ್ಕೆ ಆಸೀನರಾಗುತ್ತಿದ್ದರು ಎಂದು ಅವರಿಗೆ ನೆನಪಿಸಿ ನೀವು ಬಲಪಂಥೀಯರೋ ಅಥವಾ ಎಡಪಂಥೀಯರೋ ಎಂದು ಕೇಳಿದೆ. ಅದಕ್ಕೆ ಅವರು ‘ಎಡಪಂಥೀಯ’ ಎಂದರು! ಸಭೆಯಲ್ಲಿ ನಗು ಎದ್ದಿತು. ಆ ಎಡಬಲ ಪದಗಳು ಇಂದು ಜೀವಂತವಾಗಿಲ್ಲ. ಇದಾದ ಮೇಲೆ ನಾನು ಹಿನ್ನಡೆ ಮತ್ತು ಮುನ್ನಡೆ ಸರಳವಾಗಿ ನೇರವಾಗಿ ಬಳಸುತ್ತಿರುವೆ.

ಆರೆಸ್ಸೆಸ್ ಪ್ರಾಣಪಕ್ಷಿ ಹಿಡಿಯುವ ನನ್ನ ಪ್ರಯತ್ನಕ್ಕೆ ಕಾರಣ- ಆರೆಸ್ಸೆಸ್ ಚಿತಾವಣೆ, ಬಿಜೆಪಿ ಸರಕಾರದ ಅವಾಂತರಗಳು ಹಾಗೂ ಆರೆಸ್ಸೆಸ್ ಛೂಗುಂಪುಗಳ ದಾಂಧಲೆ. ಉದಾಹರಣೆಗೆ EWS ಕೆಲವು ಸಂಗತಿಗಳು ಸುಮಾರು ದಿನಗಳ ಹಿಂದಿನಿಂದಲೂ ನನ್ನನ್ನು ಕಾಡುತ್ತಿತ್ತು. ಉದಾಹರಣೆಗೆ- ಮೀಸಲಾತಿ, ಸಣ್ಣಟಿಪ್ಪಣಿ ಮಾಡಿದ್ದೆ ಹಾಗೂ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2021’ ಹೆಸರಿಟ್ಟು ಏನು ಮತಾಂತರ ನಿಷೇಧಕಾಯ್ದೆ ಮಾಡಿದ್ದಾರೋ ಅದರ ಬಗ್ಗೆಯೂ ಟಿಪ್ಪಣಿ ಮಾಡಿದ್ದೆ. ಈ ರೀತಿಯೆಲ್ಲ ನಾನು ತಳಮಳದಲ್ಲಿ ಇದ್ದಾಗ ಪಠ್ಯಪುಸ್ತಕದ ವಿವಾದ ಬಂತು. ಸರಕಾರ ತುಂಬಾ ಅಂದರೆ ತುಂಬಾನೆ ಅವಾಂತರ ಮಾಡಿಬಿಟ್ಟಿತು. ನಾನು ಹೆಡಗೆವಾರ್ ಪಠ್ಯ ಸೇರ್ಪಡೆ ಮಾಡಿದ್ದಕ್ಕೆ ಆಕ್ಷೇಪಣೆ ಎತ್ತಿದರೆ ಶಿಕ್ಷಣ ಸಚಿವ ಮಾನ್ಯ ಬಿ.ಸಿ. ನಾಗೇಶ್ ಅವರು ಅದನ್ನು ಉಪೇಕ್ಷೆ ಮಾಡಿದರು. ನನ್ನ ಉದ್ದೇಶ ಇಷ್ಟೇ ಇತ್ತು- ಹೆಡಗೆವಾರ್ ಬಗ್ಗೆ ಮಕ್ಕಳಿಗೆ ಏನೆಂದು ಪರಿಚಯ ಮಾಡಿಕೊಡುತ್ತೀರಿ? ಚಾತುರ್ವರ್ಣ ಹಿಂದೂ ಪ್ರಭೇದದ ಆರೆಸ್ಸೆಸ್ ಹುಟ್ಟು ಹಾಕಿದವರು ಎಂದು ಪರಿಚಯ ಮಾಡಿಕೊಡಬೇಕಾಗಿ ಬರುತ್ತದಲ್ಲ, ಇದು ಮಕ್ಕಳ ಶಿಕ್ಷಣಕ್ಕೆ ಒಳಿತೇ ಎನ್ನುವುದನ್ನು ಚರ್ಚಿಸಬೇಕೆಂದಿದ್ದೆ. ಹಾಗೆಯೇ ಈ ಪಠ್ಯಪುಸ್ತಕ ತಿರುಚುವಿಕೆ ಎನ್‌ಡಿಎ ಸರಕಾರದ ಮಾನವ ಸಂಪನ್ಮೂಲ ಸಚಿವ ಮುರಳಿ ಮನೋಹರ ಜೋಷಿ ಅವರ ಕಾಲದಿಂದಲೂ ಇತ್ತು ಎಂದು ನಾನು ಹೇಳಿದರೆ, ಅದಕ್ಕೆ ಶಿಕ್ಷಣ ಸಚಿವರಾದ ಮಾನ್ಯ ಬಿ.ಸಿ.ನಾಗೇಶ್ ಅವರು ‘‘ದೇವನೂರ ಮಹಾದೇವ ಸರಿಯಾಗಿ ಹೇಳಿದ್ದಾರೆ, ವಾಜಪೇಯಿಯವರ ಕಾಲದಲ್ಲಿ ಬಹಳ ಒಳ್ಳೆಯ ಕೆಲಸಗಳಾಗಿವೆ, ರಸ್ತೆ ಅಭಿವೃದ್ಧಿಯಾಗಿದೆ’’ ಅಂದರೆ ಮುಂದಕ್ಕೆ ನಾನು ಏನು ತಾನೇ ಮಾತಾಡಲಿ? ಈ ಸಂದರ್ಭದಲ್ಲಿ ಬಿಜೆಪಿ ನಾಯಕರು, ಆರೆಸ್ಸೆಸ್ ಪರಿವಾರದ ಚಿಂತಕರು ಮೈಗೆಲ್ಲಾ ಹರಳೆಣ್ಣೆ ಹಾಕಿಕೊಂಡು ಅಖಾಡಕ್ಕೆ ಇಳಿದಿದ್ದರು. ಇನ್ನೂ ಕೆಲವರು ಅಂಡಾಭಂಡಾ ಆಡುತ್ತಿದ್ದರು. ಸಾಣೆಹಳ್ಳಿ ಶ್ರೀ ಅವರು ಬಸವಣ್ಣನ ಪಠ್ಯ ತಿರುಚುವಿಕೆ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದರೆ, ಅದಕ್ಕೆ ಅವರು ‘‘ಹೌದು, ಅಲ್ಲಲ್ಲಿ ಸಣ್ಣಪುಟ್ಟ ತಪ್ಪುಗಳಾಗಿವೆ. ಅದನ್ನು ಸರಿಪಡಿಸುತ್ತೇವೆ’’ ಅಂದರು. ಅರೆ ಏನಿದು? ಬಸವಣ್ಣನ ಜೀವ ತೆಗೆದಿದ್ದಾರೆ. ದೇಹ ಇದೆ ಹೌದು. ಇಂತಹದನ್ನೇ ಸಣ್ಣಪುಟ್ಟ ತಪ್ಪು ಅಂತಾರಲ್ಲ ಏನಾಗಿದೆ ಅಂತ ತುಮುಲಕ್ಕೆ ಬಿದ್ದೆ. ಆ ತುಮುಲದಿಂದ ಹೊರಬರಲು, ಅದರ ನಾಡಿ ಹಿಡಿಯಲು ನೋಡಿದೆ. ಬರೆದದ್ದನ್ನು ಸ್ಪಷ್ಟ ಹಾಗೂ ಸರಳ ಮಾಡಲು ಹೆಚ್ಚು ದಿನ ತೆಗೆದುಕೊಂಡೆ.

ಪ್ರ: ನೀವು ಆರೆಸ್ಸೆಸ್ ಚಿಂತನೆಯಲ್ಲಿ ಭೂತದ ಚೇಷ್ಟೆ, ಹಳಸಲು ವಾಸನೆ, ಭೂತವನ್ನು ಸಮಕಾಲೀನ ಮಾಡುವ ಪ್ರಯತ್ನ ಇವನ್ನು ಕಂಡಿದ್ದೀರಿ. ಆರೆಸ್ಸೆಸ್ ಚರಿತ್ರೆಯನ್ನು ಹಿಂದಕ್ಕೆ ಕರೆದೊಯ್ಯುವ ಅಸಂಗತ ಪ್ರಯತ್ನ ಮಾಡುತ್ತಿದೆಯೆ?

► ಅವನ್ನು ಅರ್ಥಮಾಡಿಕೊಳ್ಳುವುದಕ್ಕಾಗಿಯೇ, ಅದರ ಹೆಜ್ಜೆ ಗುರುತುಗಳ ಮೂಲಕ ಜಾಡನ್ನು ಸ್ವಲ್ಪವಾದರೂ ಹಿಡಿಯಬೇಕೆಂದು ಪ್ರಯತ್ನಿಸಿದ್ದೇನೆ. ಕಂಡಷ್ಟು ಅಭಿವ್ಯಕ್ತಿಸಿದ್ದೇನೆ.

ಪ್ರ: ಹಿಟ್ಲರ್‌ನ ನಾಝಿ ಅನುಯಾಯಿಗಳು ಯಹೂದಿಗಳ ಸಂಪೂರ್ಣ ನಿರ್ನಾಮ ಮಾಡಿ ತಮ್ಮ ಆರ್ಯನ್ ಶುದ್ಧತೆಯನ್ನು ಉಳಿಸಿಕೊಳ್ಳಲು ಮಾಡಿದ ಪ್ರಯತ್ನವನ್ನು ಗೋಲ್ವಾಳ್ಕರ್ ಪ್ರಶಂಸಿಸಿ ನಾವು ಭಾರತದಲ್ಲಿ ಅದನ್ನು ಅಲ್ಪಸಂಖ್ಯಾತರಿಗೆ ಮಾಡಬೇಕು ಎಂದು ಹೇಳಿದ್ದನ್ನು ನೀವು Quote ಮಾಡಿದ್ದೀರಿ. ಇದು ಇಂದಿಗೂ ಭೀತಿ ಹುಟ್ಟಿಸುವ ಚಿಂತನೆಯಾಗಿದೆ. ಈಗ ವಿಶ್ವದ ಅನೇಕ ಚಿಂತಕರು ಭಾರತವು ಜನಾಂಗೀಯ ಕಗ್ಗೊಲೆಗೆ (genocide) ಸಿದ್ಧವಾಗಿ ನಿಂತಿದೆ ಎನ್ನುತ್ತಿದ್ದಾರೆ. ನಿಮಗೂ ಹಾಗೆ ಅನ್ನಿಸುತ್ತದೆಯೆ?

► ಜೀವನ ಇದೆಯಲ್ಲಾ ತರ್ಕದ ಆಚೆಗೆ ನಡೆಯುತ್ತದೆ. ಕೆಲವು ಸಲ ಉಲ್ಟಾ ಆಗುವುದನ್ನೂ ಕಂಡಿದ್ದೇವೆ. ಒಂದು ಹಂತವಾದ ಮೇಲೆ ಮನುಷ್ಯನಿಗೆ ನಿಲುಕದ್ದು ತುಂಬಾ ಇದೆ ಅನ್ನಿಸುತ್ತದೆ. ಯಾವುದೇ ಅತಿ ತನ್ನ ಗುಂಡಿಯನ್ನು ತಾನೇ ತೋಡಿಕೊಂಡು ತಾನೇ ಸಾಯುವುದನ್ನೂ ಚರಿತ್ರೆಯೂ ಹೇಳುತ್ತಿದೆ. ಅಷ್ಟೇಕೆ ಪುರಾಣಗಳಲ್ಲೂ ಕೂಡ ಬಲಿಷ್ಠರ, ಅವತಾರ ಪುರುಷರ ಅಹಂ ಮಿತಿ ಮೀರಿದಾಗ ಅದರ ಗರ್ವಭಂಗವೂ ಜರುಗಿರುವುದು ನಮ್ಮಗಳ ಸುಪ್ತ ಮನಸ್ಸಲ್ಲೇ ಇದೆಯಲ್ಲಾ.

ಪ್ರ: ಗೋಲ್ವಾಳ್ಕರ್ ಮತ್ತು ಸಾವರ್ಕರ್ ಅವರು ಮನುಸ್ಮತಿಯನ್ನು ರಾಷ್ಟ್ರದ ನಿಜವಾದ ಸಂವಿಧಾನವಾಗಬೇಕೆಂದು ಹೇಳಿದ್ದರು. ಮನುಸ್ಮತಿಯನ್ನು ಬಾಬಾ ಸಾಹೇಬರು ಸಾರ್ವಜನಿಕವಾಗಿ ಸುಟ್ಟಿದ್ದರು. ಅಂದರೆ ಆರೆಸ್ಸೆಸ್ ಸಂವಿಧಾನದ ಶತ್ರುವಾಗಿದೆಯಲ್ಲವೆ?

► ಇದಕ್ಕೇನು ಶಾಸ್ತ್ರ ಕೇಳಬೇಕಾಗಿದೆಯಾ ಚೆನ್ನಿ?

ಪ್ರ: ‘‘ಮೋದಿಯವರು EWSಗೆ ಮೀಸಲಾತಿ ಜಾರಿ ಮಾಡಿ ಸಂವಿಧಾನಕ್ಕೆ ಒಳ ಏಟು ನೀಡಿದರು’’ ಎಂದಿದ್ದೀರಿ. ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಗಳ ಮೂಲಕಲ್ಪನೆಯನ್ನೇ ಆರೆಸ್ಸೆಸ್ ನಾಶ ಮಾಡುತ್ತಿರುವ ಕಾಲದಲ್ಲಿ ಮೀಸಲಾತಿ ಪರವಾದ ನಮ್ಮ ಹೋರಾಟಗಳ ಸ್ವರೂಪ ಏನಾಗಿರಬೇಕು?

► ಒಂದು ಕಡೆ ತಳಸಮುದಾಯಗಳು ಹಾಗೂ ಹಳ್ಳಿಗಾಡು ಕೂಡ ಸಣ್ಣಪುಟ್ಟ ಸಹಕಾರ ಸಂಘ. ಸೋಪಜ್ಞ ಉದ್ಯೋಗ ಸೃಷ್ಟಿ, ಅಲ್ಲಿನ ಪ್ರತಿಭೆಗಳಿಗೆ ಒತ್ತಾಸೆ, ಸಾಧ್ಯವಾದವರು ಶಿಕ್ಷಣ ಸಂಸ್ಥೆ ಸ್ಥಾಪನೆ ಮುಂತಾದ ಕಡೆಗೆ ಹೆಜ್ಜೆ ಇಡಬೇಕು. ‘ಊರೊಟ್ಟಿನ ಕೆಲಸ ಮನೆಗೊಂದು ಆಳು’ ಚಾಲೂ ಮಾಡಬೇಕು ಇತ್ಯಾದಿ. ಇನ್ನೊಂದು ಕಡೆಗೆ ಪ್ರಭುತ್ವ, ಸರಕಾರಗಳ ಕಾಯ್ದೆ ಕಾನೂನುಗಳ ಜನ ವಿರೋಧಿ ನೀತಿಗಳನ್ನು ಜನ ಮಾತಾಡಿಕೊಳ್ಳುವಂತಾಗಲು ನಮ್ಮಂಥವರು ವೇಗವರ್ಧಕದಂತೆ ಕೆಲಸ ಮಾಡಬೇಕು. ಭಾರತ ಸಂವಿಧಾನವನ್ನು ದುರ್ಬಲಗೊಳಿಸುವ ಶಕ್ತಿಗಳ ವಿರುದ್ಧ ಸದಾ ಒಂದು ಕಣ್ಣಿಟ್ಟಿರಬೇಕು. ತಳಸಮುದಾಯಗಳಿಗೆ ಖಾಸಗಿಯಲ್ಲೂ ಮೀಸಲಾತಿ, ಸರ್ವಜನಾಂಗದ ಸಹಭಾಗಿ ಪ್ರಜಾಪ್ರಭುತ್ವಕ್ಕಾಗಿ ಜಾಗೃತಿ ಮೂಡಿಸಿ ಬೃಹತ್ ಹೋರಾಟವನ್ನೇ ರೂಪಿಸಬೇಕಾಗಿ ಬರಬಹುದು.

ಪ್ರ: ಆರೆಸ್ಸೆಸ್ ವಿರುದ್ಧದ ಹೋರಾಟದಲ್ಲಿ ಎಲ್ಲಾ ಸಂಘಟನೆಗಳು ಒಗ್ಗೂಡಬೇಕೆಂದು ನೀವು ಬಲವಾಗಿ ವಾದಿಸಿದ್ದೀರಿ. ಇದು ಯಾಕೆ ಸಾಧ್ಯವಾಗುತ್ತಿಲ್ಲ? ಕರ್ನಾಟಕದಲ್ಲಿಯೇ ದಲಿತ ಸಂಘಟನೆಗಳು ಯಾವ ಪಾತ್ರ ವಹಿಸುತ್ತಿವೆ?

► ಇತ್ತೀಚಿನ ಬೆಳವಣಿಗೆ ನೋಡಿರಿ. ಕರ್ನಾಟಕದಲ್ಲೂ ಎಲ್ಲಾ ಮುನ್ನಡೆ ಸಂಘಟನೆಗಳು ಈ ಹಿಂದೆ ಪ್ರತ್ಯೇಕವಾಗಿದ್ದವು. ಈಗ ಅವೂ ಒಕ್ಕೂಟವಾಗತೊಡಗುತ್ತಿವೆ. ಒಕ್ಕೂಟವಾಗಿ ಅನೇಕ ಹೋರಾಟಗಳನ್ನೂ ಬಲವಾಗಿ ಮಾಡಿದ್ದಾರಲ್ಲ! ಸಿಎಎ ಇರಬಹುದು, ರೈತ ವಿರೋಧಿ ಕಾನೂನು ಇರಬಹುದು- ಈಗ ಹೊಸತಾಗಿ ಏನೇ ಮಾಡಿದರೂ ಅವುಗಳನ್ನು ಒಕ್ಕೂಟದ ಹೆಸರಲ್ಲೇ ಮಾಡುತ್ತಿವೆ. ಇದಲ್ಲದೆ, ಜನಾಂದೋಲನಗಳ ಮಹಾಮೈತ್ರಿ ಅಂತ ಒಂದು ಒಕ್ಕೂಟ ಮುನ್ನಡೆಯವರ ವೇದಿಕೆಯಾಗಿ ಅಸ್ತಿತ್ವಕ್ಕೆ ಬಂದಿದೆ. ನಾನು ಹತ್ತಿರದಿಂದ ಕಂಡಂತೆ ರೈತ ಹಾಗೂ ದಲಿತ ಒಕ್ಕೂಟಗಳು ಹೆಚ್ಚು ಕಮ್ಮಿ ಒಂದೇ ಕುಟುಂಬದ ಸಂಘಟನೆಗಳು ಅಂತಾಗಿಬಿಟ್ಟಿವೆ. ನನ್ನ ಮಟ್ಟಿಗೆ ಇದು ಅಸಾಧಾರಣ ಬೆಳವಣಿಗೆ.

ಪ್ರ: ನಿಮ್ಮ ಕೃತಿ ಅಗಾಧ ಸಂಖ್ಯೆಯಲ್ಲಿ ಪ್ರಕಟವಾಗುತ್ತಲಿದೆ. ನಿರಂತರ ಬೇಡಿಕೆಯಲ್ಲಿದೆ. ಇಂತಹ ಸಂಚಲನವನ್ನು ಅದು ಉಂಟುಮಾಡಬಹುದೆಂದು ನಿರೀಕ್ಷೆ ಇತ್ತೇ? ಈ ಸಂಚಲನವು ಒಂದು ರಾಜಕೀಯ ಪ್ರತಿರೋಧದ ಶಕ್ತಿಯಾಗಿ ಬೆಳೆಯಬಲ್ಲದೆ?

► ರಾಜಕೀಯ ಪ್ರತಿರೋಧ ಶಕ್ತಿಯಾಗಿ ಬೆಳೆಯಬಲ್ಲದೂ ಇಲ್ಲವೋ ಗೊತ್ತಿಲ್ಲ. ‘ಆರೆಸ್ಸೆಸ್ ಆಳ ಮತ್ತು ಅಗಲ’ ಪುಸ್ತಕ ಇಷ್ಟೊಂದು ಪ್ರಸರಣೆ ಆಗಬಹುದು ಅಂತ ಅದೂ ಗೊತ್ತಿರಲಿಲ್ಲ. ‘ಆರೆಸ್ಸೆಸ್ ಆಳ ಮತ್ತು ಅಗಲ’ ಪುಸ್ತಕ ಬಹುಶಃ ಜೂನ್ ಕೊನೆ ತಾರೀಖು ಮೊದಲ ಮುದ್ರಣ ಪ್ರಕಟವಾಯಿತು. ತಿಂಗಳೊಳಗೆ ಒಂದು ಲಕ್ಷ ಪ್ರತಿ ದಾಟಿತು. ಇನ್ನೂ ಅನೇಕಾನೇಕರು ಮುದ್ರಣ ಮಾಡಿಸಲು ಹಣ ಕಳಿಸುತ್ತಲೇ ಇದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಲು ನಾನು ಸೋತು ಹೋದೆ. ಬಹುಶಃ ಹೀಗೂ ಇರಬಹುದು- ಪುಸ್ತಕದ ಪ್ರಕಟಣೆಯಲ್ಲೇ ಒಂದು ವಿನೂತನ ಪ್ರಯೋಗ ಮಾಡಲಾಗಿತ್ತು, ಇದನ್ನೂ ಮುಂದಾಲೋಚಿಸಿಯೇ ಮಾಡಿತ್ತು. 6 ಜನ ಪ್ರಕಾಶಕರು ಜೊತೆಗೂಡಿ ಒಟ್ಟು 9 ಸಾವಿರ ಪ್ರತಿಗಳನ್ನು ಮುದ್ರಿಸಿ ಮಾರಾಟಕ್ಕೆ ಬಿಟ್ಟಾಗ ಅವು ಎರಡು ದಿನಕ್ಕೇ ಖಾಲಿಯಾಗಿ ಬಿಟ್ಟವು! ಅವರು ಹೆಚ್ಚೆಚ್ಚು ಪ್ರತಿಗಳನ್ನು ಮಾಡಿಸತೊಡಗಿದರು. ಆಮೇಲೆ ಮತ್ತೂ ಅನೇಕಾನೇಕ ಪ್ರಕಾಶಕರು ಮುದ್ರಣ ಮಾಡಿಸತೊಡಗಿದರು. ಇಲ್ಲಿ ಒಂದು ವಿಶೇಷ ಬೆಳವಣಿಗೆ ಎಂದರೆ ಕೆಲವು ತಾಲೂಕುಗಳು ತಮ್ಮದೇ ಪ್ರಕಾಶನ ಸಂಸ್ಥೆ ಮಾಡಿಕೊಂಡು ಅವರೂ ಪ್ರಕಟಿಸತೊಡಗಿದರು. ಕೆಲವು ಸಂಘ ಸಂಸ್ಥೆಗಳೂ ಪ್ರಕಟಿಸತೊಡಗಿದವು. ಅಷ್ಟೇ ಅಲ್ಲ, ಉದಾಹರಣೆಗೆ ಮೈಸೂರಿನ ಮಾನಸ ಗಂಗೋತ್ರಿಯ ಶ್ರಮಕುಮಾರ್ ಮತ್ತು ಆತನ ಗೆಳೆಯರು ತಾವೇ ಹಣ ಹಾಕಿ ಎರಡು ಸಾವಿರ ಪ್ರತಿಗಳನ್ನು ಪ್ರಕಟಿಸಿ ಕ್ಯಾಂಪಸ್‌ಗಳಲ್ಲೇ ಮಾರಾಟ ಮಾಡುತ್ತಿದ್ದಾರೆ. ಗುಲ್ಬರ್ಗಾದ ಕೆಲವು ಮಹಿಳೆಯರು ಜೊತೆಗೂಡಿಕೊಂಡು ಪ್ರಕಟಿಸಿ ಹಂಚುತ್ತಿದ್ದಾರೆ... ಹೀಗೆಲ್ಲಾ ಇವೆ. ಇದಲ್ಲದೆ ಕಾಂಗ್ರೆಸ್, ಜೆಡಿಎಸ್ ಎಲ್ಲಾ ಪಕ್ಷದವರೂ ಪುಸ್ತಕವನ್ನು ಸಹಸ್ರಾರು ಕೊಂಡುಕೊಂಡು ಹಂಚುತ್ತಿದ್ದಾರೆ. ಇದಕ್ಕೆ ಬಿಜೆಪಿಯೂ ಸೇರಿಲ್ಲ ಅಂದುಕೊಳ್ಳಬೇಡಿ! ಆರೆಸ್ಸೆಸ್ ಕೂಡ ಸೇರ್ಪಡೆಯಾದರೆ ಅಂದು ಭಾರತಕ್ಕೆ ಸುವರ್ಣಯುಗ!

ಪ್ರ: ಆರೆಸ್ಸೆಸ್‌ನ ಕಾಲಾಳುಗಳಾಗಿ ವಿಧ್ವಂಸಕ ಹಿಂಸೆಯಲ್ಲಿ ಪಾಲ್ಗೊಳ್ಳುತ್ತಿರುವ ಶೂದ್ರ ಹಾಗೂ ದಲಿತ ಯುವಕರಿಗೆ ಏನಾದರೂ ಹೇಳಬಯಸುತ್ತೀರಾ?

► ಕನಿಷ್ಠ ಪಕ್ಷ ಮಾಜಿ ಶೂದ್ರರು ಅಂತಲಾದರೂ ಕರೆಯೋಣ. ದಲಿತರು ತಳಸಮುದಾಯ ಆದಿವಾಸಿಗಳು ಮೂಲನಿವಾಸಿಗಳು ಅಲೆಮಾರಿಗಳು ಎಂದು ಜೊತೆಗೂಡಿಸಿ ಹೆಚ್ಚೆಚ್ಚು ಬಳಸೋಣ. ಇನ್ನು ಈ ಸಮುದಾಯಗಳಿಗೆ ಸೇರಿದ ಯುವಕರು ಆರೆಸ್ಸೆಸ್ ಕಾಲಾಳುಗಳು ಆಗಿದ್ದಾರೆಂದರೆ- ಉದ್ಯೋಗವೆಲ್ಲಿದೆ ಮಾಡಲು? ಮೋದಿ ಸಾಹೇಬರು ಭಾರತವನ್ನು ನಿರುದ್ಯೋಗದಲ್ಲಿ ಮುಳುಗಿಸಿಬಿಟ್ಟಿದ್ದಾರಲ್ಲಾ. ಆ ಯುವಜನತೆ ಸಿಕ್ಕಸಿಕ್ಕ ಕಡೆ ದಿಕ್ಕಿಲ್ಲದೆ, ದಿಕ್ಕಾಪಾಲು ಹೋಗುತ್ತಿದ್ದಾರೆ.

paid ಇನ್ನೊಂದು ಕಡೆಗೆ, ಆರೆಸ್ಸೆಸ್‌ಗೆ ಪ್ರತಿರೋಧ ತೋರಿಸುತ್ತಿರುವ ವ್ಯಕ್ತಿ/ಗುಂಪುಗಳು/ಸಂಘಟನೆಗಳೂ ಇವೆ. ಇವರು ಆರೆಸ್ಸೆಸ್ ಪರಿವಾರದ ಐಟಿ ಸೆಲ್ ಕಾಲಾಳುಗಳ ಸುಳ್ಳು ಪ್ರಚಾರಕ್ಕೆ ಉತ್ತರಿಸುತ್ತ, ಕತ್ತಿ ವರಸೆ ಆಡುತ್ತಾ ಗದೆ ಬೀಸುತ್ತ ದಣಿದು ವ್ಯಯವಾಗುತ್ತಿದ್ದಾರೆ. ತಲೆ ತುಂಬಾ ಅವರನ್ನೇ ತುಂಬಿಕೊಂಡಿದ್ದಾರೆ! ತಮ್ಮನ್ನು ನೋಡಿಕೊಳ್ಳುತ್ತಿಲ್ಲ ಇವರು. ನೋಡಿಕೊಂಡಿದ್ದರೆ, ತಾವು ದ್ವೀಪಗಳಾಗಿಬಿಟ್ಟಿರುವುದು ಕಾಣಿಸುತ್ತಿತ್ತು. ಅದನ್ನು ಕಂಡಿದ್ದರೆ, ಅವರು ಅಲ್ಲಿಂದ ಬಚಾವ್ ಆಗುತ್ತಿದ್ದರು. ಕೂಡಿ ಬಾಳುವುದು ಮೂಡುತ್ತಿತ್ತು. ತಾವು ಅಲ್ಲಲ್ಲೇ ಮಾಡಬಹುದಾದ ಕ್ರಿಯೆಗಳು ಕಾಣಿಸುತ್ತಿದ್ದವು. ನಾನು ಏನು ಹೇಳಲಿ? ಹೇಳಿದರೆ, ರೂಢಿಗೆ ಬಿದ್ದಿರುವ, ಪೊರೆ ಕಳಚಿದರೆ ಮಹಾನ್ ಶಕ್ತಿ ಕೇಂದ್ರವಾಗುವ ಸತ್ವದ ಈ ನನ್ನ ಮಿತ್ರ ಸಮೂಹ ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಅಸಹಾಯಕನಾಗಿದ್ದೇನೆ. ಪ್ರಾರ್ಥಿಸುತ್ತಿದ್ದೇನೆ, ಅಷ್ಟೆ.

ಕೃಪೆ: newsclick.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)