varthabharthi


ರಾಷ್ಟ್ರೀಯ

ಮಧ್ಯಪ್ರದೇಶದಲ್ಲಿ ವಿಶ್ವದ ಅತಿ ದೊಡ್ಡ ತೇಲುವ ಸೌರ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಸಿದ್ಧತೆ‌

ವಾರ್ತಾ ಭಾರತಿ : 5 Aug, 2022

PHOTO: business-standard

ಭೋಪಾಲ್, ಆ. 5: ವಿಶ್ವದ ಅತಿ ದೊಡ್ಡ ತೇಲುವ ಸೌರ ವಿದ್ಯುತ್ ಸ್ಥಾವರವನ್ನು ನರ್ಮದಾ ನದಿಯ ಮೇಲೆ ನಿರ್ಮಿಸಲು ನಿರ್ಧರಿಸಲಾಗಿದ್ದು, ಮಧ್ಯಪ್ರದೇಶ ಸರಕಾರ ಈ ಯೋಜನೆಯ ಮೊದಲ ಹಂತದ ಗುತ್ತಿಗೆಗೆ ಗುರುವಾರ ಸಹಿ ಹಾಕಿದೆ. 

ಈ ತೇಲುವ ಸೌರ ವಿದ್ಯುತ್ ಸ್ಥಾವರವನ್ನು ನರ್ಮದಾ ನದಿಗೆ ಕಟ್ಟಲಾದ ಓಂಕಾರೇಶ್ವರ ಅಣೆಕಟ್ಟಿನ ಹಿನ್ನೀರಿನಲ್ಲಿ ನಿರ್ಮಿಸಲು ನಿರ್ಧರಿಸಲಾಗಿದ್ದು, ಇದು ವಿಶ್ವದ 10 ತೇಲುವ ಸೌರ ವಿದ್ಯುತ್ ಸ್ಥಾವರಗಳಲ್ಲಿ  ಅತಿ ದೊಡ್ಡದಾಗಿದೆ.  
2027ರ ಒಳಗೆ ಮಧ್ಯಪ್ರದೇಶದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ 20,000 ಮೆಗಾ ವ್ಯಾಟ್‌ಗಳು ಆಗಲಿವೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ 

‘‘ಮಧ್ಯಪ್ರದೇಶ ಭಾರತದ ಹೃದಯವಾಗಿದ್ದು, ಶ್ವಾಸಕೋಶವನ್ನಾಗಿ ಮಾಡುವ ಪಥದಲ್ಲಿ ರಾಜ್ಯ ಸರಕಾರ ಇದೆ. ಭಾರತದ ಎಲ್ಲ ಬದ್ಧತೆಗಳನ್ನು ಪೂರೈಸಲು ಹಾಗೂ ಗ್ಲಾಸ್‌ಗೋದಲ್ಲಿ ನಡೆದ ಹವಾಮಾನ ಬದಲಾವಣೆ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಪಂಚಾಮೃತ ಮಂತ್ರಕ್ಕೆ ಸಾಧ್ಯವಿರುವ ಎಲ್ಲ ರೀತಿಯ ಕೊಡುಗೆಯನ್ನು ಮಧ್ಯಪ್ರದೇಶ ನೀಡಲಿದೆ ’’ ಎಂದು ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ. 
ಈ ಯೋಜನೆಗೆ ಯಾವುದೇ ರೀತಿಯ ಭೂಮಿಯ ಅಗತ್ಯತೆ ಇಲ್ಲ. ಜನರನ್ನು ಸ್ಥಳಾಂತರಗೊಳಿಸುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ. 
‘‘ನೀರಿನ ಮೇಲ್ಮೈಯಲ್ಲಿ ಸೌರ ಫಲಕಗಳನ್ನು ಸ್ಥಾಪಿಸುವುದರಿಂದ ನೀರು ಆವಿಯಾಗಲಾರದು. ಇದರಿಂದ ಶೇ. 60ರಿಂದ 70 ನೀರು ಉಳಿತಾಯವಾಗಲಿದೆ. ಇದು ಭೋಪಾಲದ ಜನತೆಯ 124 ದಿನದ ಕುಡಿಯುವ ನೀರಿಗೆ ಸಮವಾಗಲಿದೆ’’ ಎಂದು ಅವರು ಹೇಳಿದ್ದಾರೆ. 
ಈ ಸೌರ ಫಲಕ ಸ್ಥಾಪಿಸುವುದರಿಂದ ನೀರಿನಲ್ಲಿ ಪಾಚಿಗಳ ಬೆಳವಣಿಗೆ ಕಡಿಮೆಯಾಗಲಿದೆ. ಅಲ್ಲದೆ, ನೀರು ಕುಡಿಯಲು ಯೋಗ್ಯವಾಗಲಿದೆ ಎಂದು ಚೌಹಾಣ್ ತಿಳಿಸಿದ್ದಾರೆ. 

ಈ ಯೋಜನೆಯ ಮೂಲಕ 12 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಕಾರ್ಬನ್ ಡಯಾಕ್ಸೈಡ್ ಹೊರ ಸೂಸುವುದನ್ನು ತಡೆಯಬಹುದು. ಇದು 52 ಲಕ್ಷ ಮರಗಳನ್ನು ನೆಡುವುದಕ್ಕೆ ಸಮಾನವಾಗಿದೆ ಎಂದು ಅವರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)