varthabharthi


ಸಂಪಾದಕೀಯ

ಮನೆಯಂಗಳದಲ್ಲಷ್ಟೇ ಅಲ್ಲ ಮನದಂಗಳದೊಳಗೂ ರಾಷ್ಟ್ರಧ್ವಜವಿರಲಿ!

ವಾರ್ತಾ ಭಾರತಿ : 6 Aug, 2022

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಇದೇ ಆಗಸ್ಟ್ 15ಕ್ಕೆ ಭಾರತ ಸ್ವಾತಂತ್ರ್ಯವನ್ನು ಪಡೆದು 75 ವರ್ಷಗಳಾಗುತ್ತವೆ. ಸಹಜವಾಗಿಯೇ ಇದು ಎಲ್ಲಾ ಭಾರತೀಯರಿಗೂ ಅತ್ಯಂತ ಸಂತೋಷ ಹಾಗೂ ಸಂಭ್ರಮದ ಸಂದರ್ಭ. ಅದಕ್ಕೆ ಕಾರಣ ಜಗತ್ತಿನಲ್ಲೇ ಅತ್ಯಂತ ವೈವಿಧ್ಯಮಯ ಸಂಸ್ಕೃತಿ, ಧರ್ಮ, ಭಾಷೆ ಹಾಗೂ ರಾಷ್ಟ್ರೀಯತೆಗಳನ್ನು ಹೊಂದಿರುವ ಈ ದೇಶ ನಿಜಕ್ಕೂ ಒಂದು ಸ್ವತಂತ್ರ ದೇಶವಾಗಿ ಉಳಿಯುತ್ತದೆಯೇ ಎಂಬ ಬಗ್ಗೆ ಇಡೀ ಜಗತ್ತಿಗೇ ಅನುಮಾನವಿತ್ತು. ಆದರೆ ಈ ವೈವಿಧ್ಯತೆಯನ್ನೇ ಈ ಹೊಸ ರಾಷ್ಟ್ರದ ಅಸ್ಮಿತೆಯನ್ನಾಗಿ ಮಾಡಿಕೊಂಡು ಈ ದೇಶ ಸ್ವಾತಂತ್ರ್ಯದ 75ನೇ ವರ್ಷವನ್ನು ಪ್ರವೇಶಿಸುತ್ತಿದೆ. ಅದು ಸಾಧ್ಯವಾಗಿದ್ದು ವೈವಿಧ್ಯತೆಗಳನ್ನು ಸಮಾನವಾಗಿ ಗೌರವಿಸಬೇಕೆಂಬ, ಎಲ್ಲಾ ಜಾತಿ, ಧರ್ಮ, ಭಾಷೆ ಮತ್ತು ಸಂಸ್ಕೃತಿಗಳಿಗೆ ಸಮಾನವಾದ ಅವಕಾಶವನ್ನು ಕೊಡಬೇಕೆಂಬ ನಿರ್ದೇಶನವನ್ನು ನೀಡುವ ನಮ್ಮ ಸಂವಿಧಾನ. ಡಾ. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸ್ವಾತಂತ್ರ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯಗಳೆಂಬ ಮೌಲ್ಯಗಳ ಆಧಾರದಲ್ಲಿ ಈ ದೇಶವನ್ನು ಸ್ವತಂತ್ರ, ಸಾರ್ವಭೌಮಿ, ಪ್ರಜಾತಾಂತ್ರಿಕ, ಸಮಾಜವಾದಿ, ಧರ್ಮನಿರಪೇಕ್ಷ ಗಣರಾಜ್ಯವನ್ನಾಗಿ ಕಟ್ಟಿಕೊಳ್ಳುವ ಪ್ರಯತ್ನಗಳನ್ನು ಮಾಡಿದ್ದಕ್ಕಾಗಿಯೇ ಈ ದೇಶ ಇಂದು 75ನೇ ವರ್ಷದ ಸ್ವಾತಂತ್ರ್ಯವನ್ನು ಘನತೆಯಿಂದ ಆಚರಿಸಿಕೊಳ್ಳುವ ಘಟ್ಟವನ್ನು ತಲುಪಿದೆ.

ಸ್ವತಂತ್ರ ಭಾರತವು ಅಳವಡಿಸಿಕೊಂಡ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಮುದ್ರೆ..ಇತ್ಯಾದಿ ಎಲ್ಲಾ ಲಾಂಛನಗಳು ಇದೇ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಉದಾಹರಣೆಗೆ ಸ್ವತಂತ್ರ ಭಾರತದ ಆಶಯಕ್ಕೊಂದು ಬಾವುಟವನ್ನು ರೂಪಿಸುವ ಪ್ರಯತ್ನಗಳು ಮೇಡಂ ಕಮೂ ಅವರ ಮೂಲಕ ಪ್ರಾರಂಭವಾಯಿತು. ಈ ಪ್ರಯತ್ನಗಳನ್ನು ಕಾಂಗ್ರೆಸ್ ಅಧಿವೇಶನಗಳಲ್ಲಿ ವೆಂಕಯ್ಯನವರು ಮುಂದುವರಿಸಿದರು. ಅದಾದ ನಂತರದಲ್ಲಿ ಇಂದಿನ ಭಾರತದ ಬಾವುಟಕ್ಕೆ ಅಂತಿಮ ರೂಪವನ್ನು ಕೊಟ್ಟು ರೂಪಿಸಿದ್ದು ಸುರಯ್ಯೆ ತ್ಯಾಬ್ಜಿ ಎಂಬ ಸುಶಿಕ್ಷಿತ ಮುಸ್ಲಿಮ್ ಮಹಿಳಾ ಹೋರಾಟಗಾರ್ತಿ. ಭಾರತದ ಸ್ವಾತಂತ್ರ್ಯ ಹೋರಾಟದ ಪ್ರತಿಬಿಂಬವಾಗಿ ರೂಪಿತವಾದ ಆ ಬಾವುಟದಲ್ಲಿ ಕೇಸರಿ, ಹಸಿರು ಬಣ್ಣಗಳು ಶಕ್ತಿ, ತ್ಯಾಗ ಮತ್ತು ಸಂಪತ್ತನ್ನು ಮಾತ್ರವಲ್ಲ, ಈ ದೇಶದ ಎರಡು ಪ್ರಮುಖ ಧರ್ಮವಾದ ಹಿಂದೂ ಮತ್ತು ಮುಸ್ಲಿಮರನ್ನು ಕೂಡ ಪ್ರತಿನಿಧಿಸುತ್ತಿದ್ದವು. ಹಾಗೂ ಬಿಳಿಯ ಬಣ್ಣವು ಇತರ ಎಲ್ಲಾ ಧರ್ಮೀಯರನ್ನು ಪ್ರತಿನಿಧಿಸುತ್ತಿತ್ತು. ಅಂತಿಮ ವಿನ್ಯಾಸದಲ್ಲಿ ನಡುವಿನ ಬಿಳಿಯ ಬಣ್ಣದ ಮೇಲೆ ಅಶೋಕ ಚಕ್ರವನ್ನು ಅಳವಡಿಸಿಕೊಳ್ಳಲಾಯಿತು. ಇದಕ್ಕೆ ಪ್ರಧಾನ ಕಾರಣ ಭಾರತವು ತನ್ನ ಇತಿಹಾಸದಲ್ಲಿ ಅತಿಯಾಗಿ ಹೆಮ್ಮೆ ಪಡಬಹುದಾದದ್ದು ಹಾಗೂ ಭವಿಷ್ಯಕ್ಕೂ ರೂಢಿಸಿಕೊಳ್ಳಬೇಕಾದದ್ದು ಅಶೋಕನ ಬುದ್ಧಸತ್ವದ ಆಳ್ವಿಕೆಯನ್ನು ಎಂಬ ಗ್ರಹಿಕೆಯಾಗಿತ್ತು. ಅದರ ಜೊತೆಗೆ ಸಾರಾನಾಥದ ಬುದ್ಧ ಸ್ತೂಪದಲ್ಲಿರುವ ನಾಲ್ಕು ಸಿಂಹದ ತಲೆಗಳೂ ಕೂಡ ಮುಂದೆ ಸ್ವತಂತ್ರ ಭಾರತದ ಮುದ್ರೆಯಾಯಿತು. ಅಂದರೆ ಸಾರದಲ್ಲಿ ತ್ರಿವರ್ಣ ಧ್ವಜವನ್ನು ಸಕಲ ಧರ್ಮೀಯರ ಅಸ್ಮಿತೆಗಳನ್ನು ಮತ್ತು ಸಮಾನತೆಯ ಆಶಯಗಳನ್ನು ಒಳಗೊಳ್ಳುವ ಧ್ವಜವನ್ನಾಗಿ ರೂಪಿಸಲಾಯಿತು. ಇದು ತಿರಂಗದ ಇತಿಹಾಸ. ಅದರ ಆಶಯಗಳಿಗೆ ತಕ್ಕ ಹಾಗೆ ಸ್ವಾತಂತ್ರ್ಯೋತ್ತರ ಭಾರತ ರೂಪುಗೊಂಡಿತೇ ಎನ್ನುವುದು ಬೇರೆ ವಿಷಯ. ಆದರೆ ತಿರಂಗದ ಹಿಂದಿದ್ದ ಆಶಯವಂತೂ ಸರ್ವಧರ್ಮೀಯರ ಶಾಂತಿಯ ತೋಟವಾಗಬೇಕೆಂಬುದಾಗಿತ್ತು. ಹೀಗಾಗಿ ಸ್ವಾತಂತ್ರ್ಯದ ಮಹತ್ತರ ಆಶಯಗಳನ್ನು ಪ್ರತಿನಿಧಿಸುವ ರಾಷ್ಟ್ರಧ್ವಜ ಭಾರತೀಯರ ಹೆಮ್ಮೆ.

ಸ್ವಾತಂತ್ರ್ಯದ 75ನೇ ವರ್ಷದಂದು ಈ ದೇಶದ ಜನರು ಸ್ವಸಂತೋಷದಿಂದಲೇ ಇದನ್ನು ಹಾರಿಸುತ್ತಾರೆ. ಆದರೆ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಆಗಸ್ಟ್ 13-15ರ ವರೆಗೆ ದೇಶದ ಪ್ರತಿಯೊಂದು ಮನೆಯ ಮೇಲೂ ತಿರಂಗ ಧ್ವಜವನ್ನು ಹಾರಿಸಬೇಕು ಎಂದು ಕೊಟ್ಟಿರುವ ಕರೆ ಅದೇ ಸದುದ್ದೇಶವನ್ನು ಹೊಂದಿರುವಂತೆ ಕಾಣುವುದಿಲ್ಲ. ಏಕೆಂದರೆ ನರೇಂದ್ರ ಮೋದಿಯವರ ಬಿಜೆಪಿಯ ಮಾತೃ ಸಂಘಟನೆಯಾದ ಆರೆಸ್ಸೆಸ್ ಗೆ ತ್ರಿವರ್ಣ ಧ್ವಜ ಅಥವಾ ಅದು ಪ್ರತಿನಿಧಿಸುವ ಮೌಲ್ಯಗಳ ಬಗ್ಗೆ ಸದಾ ತಿರಸ್ಕಾರವಿತ್ತು. ಸ್ವಾತಂತ್ರ್ಯ ಪೂರ್ವದಲ್ಲೂ ಹಾಗೂ ಸ್ವಾತಂತ್ರ್ಯಾನಂತರವೂ, 2002ರವರೆಗೂ ಆರೆಸ್ಸೆಸ್ ನ ಕೇಂದ್ರ ಕಚೇರಿಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿರಲಿಲ್ಲ. ಸಮಾನತೆ ಮತ್ತು ಭ್ರಾತೃತ್ವದ ಆಧಾರದ ಸಂವಿಧಾನಕ್ಕಿಂತ ದಲಿತ-ಶೂದ್ರ-ಮಹಿಳೆಯರ ಗುಲಾಮಗಿರಿಯನ್ನು ಬೋಧಿಸುವ ಮನುಸ್ಮತಿಯೇ ಭಾರತದ ಸಂವಿಧಾನವಾಗಬೇಕಿತ್ತು ಎಂಬುದು ಆರೆಸ್ಸೆಸ್‌ನ ಎರಡನೇ ಸರಸಂಘ ಚಾಲಕರಾಗಿದ್ದ ಗೋಳ್ವಾಲ್ಕರ್ ಅವರ ಸ್ಪಷ್ಟವಾದ ಅಭಿಪ್ರಾಯವಾಗಿತ್ತು. ಹಾಗೆಯೇ ತ್ರಿವರ್ಣ ಧ್ವಜವನ್ನು ಹಿಂದೂಗಳು ಎಂದೂ ಒಪ್ಪಿಕೊಳ್ಳುವುದಿಲ್ಲವೆಂಬುದು ಅವರ ಘೋಷಣೆಯಾಗಿತ್ತು. ಅದಕ್ಕೆ ಕಾರಣ ತ್ರಿವರ್ಣ ಎಂಬುದು ಅಶುಭ ಸೂಚಕ ಎಂಬುದಾಗಿತ್ತು. ಅದರ ಬದಲಿಗೆ ಆರೆಸ್ಸೆಸ್ ಅಂಗೀಕರಿಸಿದ ಭಗವಾಧ್ವಜವೇ ಭಾರತದ ಧ್ವಜವೂ ಆಗಬೇಕೆಂಬುದು ಅವರ ಆಗ್ರಹವಾಗಿತ್ತು. ಏಕೆಂದರೆ ಭಗವಾಧ್ವಜವು ಬ್ರಾಹ್ಮಣ ಧರ್ಮಕ್ಕೆ ಆತಂಕ ಒಡ್ಡಿದ್ದ ಬೌದ್ಧರನ್ನು ನಾಶಗೊಳಿಸಿದ ಶಂಕರಾಚಾರ್ಯರ ಸಂಕೇತ, ಮೊಗಲರನ್ನು ಸೋಲಿಸಿದ ಶಿವಾಜಿಯ ಸಂಕೇತ ಎಂಬುದು ಆರೆಸ್ಸೆಸ್‌ನ ನಿಲುವಾಗಿದೆ. ಆದ್ದರಿಂದಲೇ ಸ್ವಾತಂತ್ರ್ಯ ಹೋರಾಟದಲ್ಲಿ ಈ ಸಂಘಟನೆ ಭಾಗವಹಿಸಿರಲಿಲ್ಲ. ಮಾತ್ರವಲ್ಲ, ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬ್ರಿಟಿಷರ ಜೊತೆ ಕೈಜೋಡಿಸಿದ್ದರು.

ಸ್ವಾತಂತ್ರಾನಂತರವೂ ಭಾರತವನ್ನು ಅಸಮಾನತೆ ಹಾಗೂ ವರ್ಣಾಶ್ರಮಗಳನ್ನು ಆಧರಿಸಿದ ಹಿಂದೂ ರಾಷ್ಟ್ರ ಮಾಡಬೇಕೆಂಬುದೇ ಆರೆಸ್ಸೆಸ್ ಮತ್ತು ಆ ಪರಿವಾರದ ಎಲ್ಲಾ ಸಂಘಟನೆಗಳ ಆಶಯವಾಗಿದೆ. ಪ್ರಧಾನಿ ಮೋದಿ ಮತ್ತವರ ಪಕ್ಷ ಇದೇ ಮಾತೃ ಸಂಘಟನೆಯ ಭಾಗವಾಗಿದ್ದಾರೆ. ಹೀಗಾಗಿ ಮನದಲ್ಲಿ ಭಗವಾಧ್ವಜವನ್ನಿಟ್ಟುಕೊಂಡು ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸಬೇಕೆಂಬ ಪ್ರಧಾನಿಯವರ ಕರೆ ಪ್ರಶ್ನಾರ್ಹವಾಗಿದೆ. ಮಾತ್ರವಲ್ಲ ಆತಂಕಕ್ಕೂ ಕಾರಣವಾಗಿದೆ. ಏಕೆಂದರೆ ‘‘ಹರ್ ಘರ್ ಮೇ ತಿರಂಗಾ’’ ಎಂಬ ಘೋಷಣೆಯನ್ನು ಬಳಸಿಕೊಂಡು ಎಲ್ಲಾ ಮೊಹಲ್ಲಾ ಹಾಗೂ ಬಸ್ತಿಗಳ ಮೇಲೆ ದೇಶಪ್ರೇಮದ ನೆಪದಲ್ಲಿ ದಾಳಿ ಮಾಡುವ, ತಾವು ಕೊಡುವ ಆದೇಶವನ್ನು ಪಾಲಿಸದವರನ್ನು ದುರುಳೀಕರಿಸಿ ದೇಶಪ್ರೇಮಿ-ದೇಶದ್ರೋಹಿ ಎಂಬ ಹುಸಿ ಘರ್ಷಣೆಗಳನ್ನು ಹುಟ್ಟುಹಾಕಬಹುದಾದ ಸಾಧ್ಯತೆಗಳು ಉತ್ಪ್ರೇಕ್ಷೆಯೆಂದು ತಳ್ಳಿಹಾಕಲಾಗದ ಪರಿಸ್ಥಿತಿಯಲ್ಲಿ ಈ ದೇಶವಿದೆ. ದಿಲ್ಲಿಯಲ್ಲಿ ‘‘ಜೈ ಶ್ರೀರಾಂ’’ ಎಂದು ಬಲವಂತವಾಗಿ ಘೋಷಣೆ ಹಾಕಿಸಿ ಕೊಂದು ಹಾಕಿದ ಹೆಣಗಳು ಆಳುವ ಸರಕಾರದ ದೇಶಪ್ರೇಮದ ಅಸಲಿ ಕಥನವನ್ನು ಈಗಲೂ ಹೇಳುತ್ತಲೇ ಇವೆ. ಅಷ್ಟು ಮಾತ್ರವಲ್ಲ, ಸ್ವದೇಶಿ, ಆತ್ಮ ನಿರ್ಭರ ಎಂದೆಲ್ಲಾ ಬೂಟಾಟಿಕೆಯ ಘೋಷಣೆಯನ್ನು ಮಾತ್ರ ನೀಡುವ ಮೋದಿ ಸರಕಾರ ಅಮೃತಮಹೋತ್ಸವದ ಸಂದರ್ಭದಲ್ಲಿ 20 ಕೋಟಿ ಮನೆಗಳ ಮೇಲೆ ಹಾರಿಸಲು ಬೇಕಾದ ಬಾವುಟಗಳನ್ನೂ ಕೂಡ ಚೀನಾದಿಂದಲೇ ಆಮದು ಮಾಡಿಕೊಂಡಿದೆ. ಹೀಗಾಗಿ ನಾಳೆ ನಮ್ಮ ಮನೆಗಳ ಮೇಲೆ ನಾವು ಹಾರಿಸುವುದು ಚೀನಾ ಬಾವುಟವೋ? ಭಾರತದ ಬಾವುಟವೋ ಎಂಬ ಪ್ರಶ್ನೆಯೂ ಎದುರಾಗಿದೆ. ಆದ್ದರಿಂದ ಭಾರತದ ಸ್ವಾತಂತ್ರ್ಯದ 75ನೇ ವರ್ಷದ ಅಮೃತಮಹೋತ್ಸವದ ಸಂಭ್ರಮವು ಅಮೃತವನ್ನು ಮಾತ್ರ ಹಂಚುವಂತೆ ನೋಡಿಕೊಳ್ಳುವ ಜವಾಬ್ದಾರಿ ಮೋದಿ ಸರಕಾರದ ಮೇಲೆ ಇದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)