varthabharthi


ನಿಮ್ಮ ಅಂಕಣ

ಕಾಟಾಚಾರದ ರಾಜಕೀಯ ಮೀಸಲಾತಿ ಪಟ್ಟಿ..!?

ವಾರ್ತಾ ಭಾರತಿ : 6 Aug, 2022
ಡಾ.ಸಿ.ಎಸ್.ದ್ವಾರಕಾನಾಥ್ ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ ಚುನಾವಣೆಗೆ ಸರಕಾರ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ಪಟ್ಟಿಯನ್ನು 3.8.22ರಂದು ಪ್ರಕಟಿಸಿದೆ. ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ 2010ರಲ್ಲಿ, ಕೃಷ್ಣಮೂರ್ತಿ  ಭಾರತ ಒಕ್ಕೂಟ ಸರಕಾರ ಪ್ರಕರಣದಲ್ಲಿ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವಲ್ಲಿ ಪ್ರಾಯೋಗಿಕ ದತ್ತಾಂಶಗಳನ್ನು ಸಂಗ್ರಹಿಸಿ, ಕಟ್ಟುನಿಟ್ಟಿನ (್ಟಜಿಜಟ್ಟಟ್ಠ) ವಿಶ್ಲೇಷಣೆಗೆ ಒಳಪಡಿಸಿ, ರಾಜಕೀಯವಾಗಿ ಹಿಂದುಳಿದವರನ್ನು ಗುರುತಿಸಬೇಕು ಎಂದು ತೀರ್ಪು ನೀಡಿದ ಹನ್ನೆರಡು ವರ್ಷಗಳ ನಂತರ ಕರ್ನಾಟಕ ಸರಕಾರ ಸ್ಥಳೀಯ ನಗರ ಮತ್ತು ಪಂಚಾಯತ್ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಅವಕಾಶವಾಗುವಂತೆ ರಾಜಕೀಯವಾಗಿ ಹಿಂದುಳಿದವರನ್ನು ಗುರುತಿಸಲು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ಅವರ ಅಧ್ಯಕ್ಷತೆಯ ಆಯೋಗವೊಂದನ್ನು ರಚಿಸಿ ಮೂರು ತಿಂಗಳ ಅತ್ಯಲ್ಪಅವಧಿಯಲ್ಲಿ ಸರಕಾರಕ್ಕೆ ವರದಿ ನೀಡಬೇಕೆಂದು ತಾಕೀತು ಮಾಡಿತು. ಸರಕಾರ ನೀಡಿರುವ ಈ ಕಾಲಾವಧಿಯೇ ಹಿಂದುಳಿದ ವರ್ಗಗಳ ಬಗ್ಗೆ ಅದಕ್ಕಿರುವ ‘ಬದ್ಧ್ದತೆ’ ಏನೆಂದು ಅರ್ಥವಾಗುತ್ತದೆ.

ನ್ಯಾ. ಭಕ್ತವತ್ಸಲರವರು ಸಂತೆ ಸಮಯಕ್ಕೆ ಮೂರು ಮೊಳ ನೇಯ್ದಂತೆ ವರದಿಯನ್ನೂ ಕೊಟ್ಟರು. ಆದರೆ, ಸರಕಾರ ಸದರಿ ವರದಿಯನ್ನು ಪ್ರಕಟಿಸಲಿಲ್ಲ, ಅನುಷ್ಠಾನಕ್ಕೆ ತರಲೂ ಇಲ್ಲ, ವರದಿಯಲ್ಲಿ ಏನಿದೆಯೆಂಬ ವಿವರ ಯಾರಿಗೂ ಗೊತ್ತಿಲ್ಲ! ಇದರ ಕುರಿತು ಸರಕಾರದ ಪ್ರಕಟಣೆಯೂ ಹೊರಬೀಳಲಿಲ್ಲ! ಹೀಗಿರುವಾಗ ಈಗ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಚುನಾವಣೆಗೆ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿ ಮಾತ್ರ ಆಶ್ಚರ್ಯವೆಂಬಂತೆ ಪ್ರಕಟವಾಗಿದೆ!?
ಈ ಪಟ್ಟಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ಆದೇಶಕ್ಕೆ ಬದ್ಧವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಅಥವಾ ನ್ಯಾ.ಭಕ್ತವತ್ಸಲ ಆಯೋಗ ನೀಡಿರುವ ವರದಿಯ ಆಧಾರದ ಮೇಲಿದೆಯೋ ಅದೂ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಯಾವ ಮಾನದಂಡಗಳನ್ನು ಇಟ್ಟುಕೊಂಡು ಈ ಪಟ್ಟಿಯನ್ನು ಸಿದ್ಧಪಡಿಸಿದೆಯೋ ಎಂಬುದು ಪ್ರಶ್ನಾರ್ಹ. ಇದನ್ನು ಇಟ್ಟುಕೊಂಡು ಯಾರೇ ನ್ಯಾಯಾಲಯದ ಬಾಗಿಲು ತಟ್ಟಿದರೆ, ಇಡೀ ಚುನಾವಣೆ ನಿಲ್ಲುತ್ತೆ. ಸರಕಾರಕ್ಕೆ ಬೇಕಿರುವುದೂ ಇದೇ.
ಸರಕಾರಕ್ಕೆ ನಿಜಕ್ಕೂ ಹಿಂದುಳಿದ ವರ್ಗಗಳ ಬಗ್ಗೆ ಕನಿಷ್ಠ ಕಾಳಜಿ, ಬದ್ಧತೆ ಇದ್ದಿದ್ದರೆ ಇಂತಹ ಕಾಟಾಚಾರದ ಪ್ರಕ್ರಿಯೆ(?)ಗೆ ಮುಂದಾಗುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಸರಕಾರ ಉತ್ತರಿಸಬೇಕಿದೆ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)