varthabharthi


ತಿಳಿ ವಿಜ್ಞಾನ

ನಿದ್ದೆಗೊಂದು ಆಪ್ತ ಸಾಂಗತ್ಯ

ವಾರ್ತಾ ಭಾರತಿ : 7 Aug, 2022
ಆರ್.ಬಿ.ಗುರುಬಸವರಾಜ

ನಿದ್ದೆ ಪ್ರತಿ ಜೀವಿಗಳಲ್ಲೂ ಅಗತ್ಯವಾದ ಜೀವನಕ್ರಿಯೆ. ದಿನದ 24 ಗಂಟೆಗಳ ಅವಧಿಯಲ್ಲಿ ಎಚ್ಚರ ಎಷ್ಟು ಪ್ರಮುಖವೋ ನಿದ್ದೆಯೂ ಅಷ್ಟೇ ಪ್ರಾಮುಖ್ಯ ಪಡೆದಿದೆ. ನಿದ್ದೆ ಇಲ್ಲದೆ ಇದ್ದರೆ ಬಹುತೇಕ ನಮ್ಮ ಜೀವನ ಅಸ್ತವ್ಯಸ್ತಗೊಳ್ಳುತ್ತದೆ. ನಿದ್ದೆ ಅಥವಾ ಎಚ್ಚರಕ್ಕೆ ಕಾರಣವಾದದ್ದು ನಮ್ಮ ಮೆದುಳಿನ ನರಪ್ರೇಕ್ಷಕಗಳು. ನರಪ್ರೇಕ್ಷಕಗಳೆಂದು ಕರೆಯಲ್ಪಡುವ ನರಸಂಕೇತ ರಾಸಾಯನಿಕಗಳು ಮೆದುಳಿನಲ್ಲಿರುವ ವಿವಿಧ ಗುಂಪುಗಳ ನರ ಕೋಶಗಳು ಅಥವಾ ನ್ಯೂರಾನ್‌ಗಳ ಮೇಲೆ ಕಾರ್ಯನಿರ್ವಹಿಸುವ ಮೂಲಕ ನಾವು ನಿದ್ರಿಸುತ್ತಿದ್ದೇವೆಯೇ ಅಥವಾ ಎಚ್ಚರವಾಗಿರುತ್ತೇವೆಯೇ ಎಂಬುದನ್ನು ನಿಯಂತ್ರಿಸುತ್ತದೆ. ಮೆದುಳನ್ನು ಬೆನ್ನುಹುರಿಯೊಂದಿಗೆ ಸಂಪರ್ಕಿಸುವ ಮೆದುಳಿನ ಕಾಂಡದಲ್ಲಿರುವ ನ್ಯೂರಾನ್‌ಗಳು ಸಿರೊಟೋನಿನ್ ಮತ್ತು ನೊರ್‌ಪೈನ್ಫ್ರಿನ್‌ನಂತಹ ನರಪ್ರೇಕ್ಷಕಗಳನ್ನು ಉತ್ಪಾದಿಸುತ್ತವೆ. ನ್ಯೂರಾನ್‌ಗಳು ನಾವು ಎಚ್ಚರವಾಗಿರುವಾಗ ಮೆದುಳಿನ ಕೆಲವು ಭಾಗಗಳನ್ನು ಸಕ್ರಿಯವಾಗಿರಿಸುತ್ತವೆ. ನಾವು ನಿದ್ರಿಸಿದಾಗ ಮೆದುಳಿನ ತಳದಲ್ಲಿರುವ ಇತರ ನ್ಯೂರಾನ್‌ಗಳು ಸಿಗ್ನಲ್ ಮಾಡಲು ಪ್ರಾರಂಭಿಸುತ್ತವೆ. ಈ ನರಕೋಶಗಳು ನಮ್ಮನ್ನು ಎಚ್ಚರವಾಗಿರಿಸುವ ಸಂಕೇತಗಳನ್ನು ಸ್ವಿಚ್‌ಆಫ್ ಮಾಡುವಂತೆ ತೋರುತ್ತವೆ. ನಾವು ಎಚ್ಚರವಾಗಿರುವಾಗ ಅಡೆನೊಸಿನ್ ಎಂಬ ರಾಸಾಯನಿಕವು ನಮ್ಮ ರಕ್ತದಲ್ಲಿ ಸಂಗ್ರಹಗೊಳ್ಳುತ್ತದೆ ಮತ್ತು ನಿದ್ರೆಗೆ ಕಾರಣವಾಗುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ.

ನಾವು ನಿದ್ದೆ ಮಾಡುವಾಗ ಈ ರಾಸಾಯನಿಕವು ಕ್ರಮೇಣ ಒಡೆಯುತ್ತದೆ. ನಮ್ಮ ನಿದ್ದೆಯು ಸಾಮಾನ್ಯವಾಗಿ ಐದು ಹಂತಗಳಲ್ಲಿ ಸಾಗುತ್ತದೆ. ಅವುಗಳೆಂದರೆ ಹಂತ 1, 2, 3, 4, ಮತ್ತುREM (ಕ್ಷಿಪ್ರ ಕಣ್ಣಿನ ಚಲನೆ) ಹಂತ. ಹಂತ 1ರಿಂದREM ಹಂತದವರೆಗಿನ ಚಕ್ರದಲ್ಲಿ ನಿದ್ರೆಯ ಪ್ರಗತಿಯು ಸಾಗುತ್ತದೆ. ಪುನಃ ಈ ಚಕ್ರ ಪುನರಾವರ್ತನೆಯಾಗುತ್ತದೆ. ಮಕ್ಕಳು ಮತ್ತು ವಯಸ್ಕರು ತಮ್ಮ ಒಟ್ಟು ನಿದ್ದೆಯ ಸುಮಾರು ಶೇ.50ರಷ್ಟನ್ನು ಹಂತ-2ರ ನಿದ್ದೆಯಲ್ಲಿ ಕಳೆಯುತ್ತಾರೆ. ಸುಮಾರು ಶೇ.20ರಷ್ಟುREM ನಿದ್ರೆಯಲ್ಲಿ ಮತ್ತು ಉಳಿದ ಶೇ.30ರಷ್ಟು ಇತರ ಹಂತಗಳಲ್ಲಿ ಕಳೆಯುತ್ತಾರೆ. ಶಿಶುಗಳು ಇದಕ್ಕೆ ವಿರುದ್ಧವಾಗಿ ತಮ್ಮ ನಿದ್ರೆಯ ಅರ್ಧದಷ್ಟು ಸಮಯವನ್ನು REM ಹಂತದಲ್ಲಿ ಕಳೆಯುತ್ತಾರೆ.

ನಿದ್ದೆಯ ಮೊದಲ ನಾಲ್ಕು ಹಂತಗಳನ್ನು ದಾಟಿ ನಾವು REM ಹಂತಕ್ಕೆ ನಿದ್ದೆಯನ್ನು ಬದಲಾಯಿಸಿದಾಗ, ನಮ್ಮ ಉಸಿರಾಟದ ವೇಗ ಹೆಚ್ಚುತ್ತದೆ. ಆಗ ನಾವು ಅನಿಯಮಿತವಾದ ವೇಗದಲ್ಲಿ ಉಸಿರಾಡುತ್ತೇವೆ. ಕಣ್ಣು ಮುಚ್ಚಿದ್ದರೂ ಕಣ್ಣುಗಳು ವಿವಿಧ ದಿಕ್ಕುಗಳಲ್ಲಿ ವೇಗವಾಗಿ ಗಿರಕಿ ಹೊಡೆಯುತ್ತಿರುತ್ತವೆ. ಈ ಹಂತದಲ್ಲಿ ನಮ್ಮ ಅಂಗಗಳ ಸ್ನಾಯುಗಳು ತಾತ್ಕಾಲಿಕವಾಗಿ ಪಾರ್ಶ್ವವಾಯುವಿಗೆ ಒಳಗಾದಂತೆ ಆಗಿರುತ್ತವೆ. ನಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ. ಜೊತೆಗೆ ರಕ್ತದೊತ್ತಡವೂ ಕೂಡಾ ಹೆಚ್ಚಾಗುತ್ತದೆ. ಈ ಹಂತದಲ್ಲಿಯೇ ಬಹುತೇಕರಿಗೆ ವಿಲಕ್ಷಣ ಮತ್ತು ತರ್ಕಬದ್ಧವಲ್ಲದ ಕನಸು ಬೀಳುತ್ತವೆ.

ಮೊದಲ REM ನಿದ್ರೆಯ ಅವಧಿಯು ಸಾಮಾನ್ಯವಾಗಿ ನಾವು ನಿದ್ರಿಸಿದ ಅಂದರೆ ಹಂತ-1ರ ನಂತರ ಸುಮಾರು 70ರಿಂದ 90 ನಿಮಿಷಗಳವರೆಗೆ ಸಂಭವಿಸುತ್ತದೆ. ಸಂಪೂರ್ಣ ನಿದ್ರೆಯ ಚಕ್ರವು ಸರಾಸರಿ 90ರಿಂದ 110 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಪ್ರತೀ ರಾತ್ರಿಯ ಮೊದಲ ನಿದ್ರೆಯ ಚಕ್ರಗಳು ತುಲನಾತ್ಮಕವಾಗಿ ಕಡಿಮೆ ್ಕಉ ಅವಧಿಯಲ್ಲಿರುತ್ತದೆ ಮತ್ತು ದೀರ್ಘಾವಧಿಯ ಆಳವಾದ ನಿದ್ರೆಯನ್ನು ಹೊಂದಿರುತ್ತವೆ. ರಾತ್ರಿಯು ಮುಂದುವರಿದಂತೆ REM ನಿದ್ರೆಯ ಅವಧಿಯು ಹೆಚ್ಚಾಗುತ್ತದೆ ಮತ್ತು ಆಳವಾದ ನಿದ್ರೆ ಕಡಿಮೆಯಾಗುತ್ತದೆ. ಬೆಳಗಿನ ಹೊತ್ತಿಗೆ ಜನರು ತಮ್ಮ ನಿದ್ರೆಯ ಸಮಯವನ್ನು 1, 2 ಮತ್ತು REM ಹಂತಗಳಲ್ಲಿ ಕಳೆಯುತ್ತಾರೆ.

REM ಸಮಯದಲ್ಲಿ ನಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ನಾವು ಕಳೆದುಕೊಳ್ಳುತ್ತೇವೆ. ಆದ್ದರಿಂದ ಪರಿಸರದಲ್ಲಿ ಅಸಹಜವಾಗಿ ಬಿಸಿ ಅಥವಾ ತಣ್ಣನೆಯ ಉಷ್ಣತೆಯು ಈ ಹಂತದ ನಿದ್ರೆಯನ್ನು ಅಡ್ಡಿಪಡಿಸುತ್ತದೆ. ಇದರಿಂದ ಎಚ್ಚರವಾದಾಗ ನಮ್ಮ ದೇಹದಲ್ಲಿ ಕೆಲವು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಈ ಬದಲಾವಣೆಗಳು ಮರುದಿನದ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ತಲೆ ಭಾರವಾದಂತಾಗಿ ಕೆಲಸದಲ್ಲಿ ನಿರುತ್ಸಾಹ ಉಂಟಾದಂತೆ ಭಾಸವಾಗುತ್ತದೆ. ಹಾಗಾಗಿ ನಿದ್ದೆಯು ನಮ್ಮ ದೈನಂದಿನ ಜೀವನದಲ್ಲಿ ಅತ್ಯುತ್ತಮವಾದ ನೈಸರ್ಗಿಕ ಔಷಧಿ ಇದ್ದಂತೆ. ಆದರೆ ಕೆಲವರು ನಿದ್ದೆ ಇಲ್ಲದೆ ನಿರುತ್ಸಾಹ ಜೀವನವನ್ನು ಕಳೆಯುತ್ತಾರೆ. ಅದಕ್ಕಾಗಿ ನಮ್ಮ ದೈನಂದಿನ ಚಟುವಟಕೆಗಳನ್ನು ಬದಲಿಸಿಕೊಳ್ಳುವ ಮೂಲಕ ಉತ್ತಮ ನಿದ್ದೆಯನ್ನು ಹೊಂದಲು ಪ್ರಯತ್ನಿಸಬಹುದು. ಆರಾಮದಾಯಕವಾದ ಮಲಗುವ ಕೋಣೆ ಮತ್ತು ಹಾಸಿಗೆಯನ್ನು ಹೊಂದುವುದು ಸಹ ಉತ್ತಮ ನಿದ್ರೆಯನ್ನು ಹೊಂದುವ ತಂತ್ರವಾಗಿದೆ. ಕೆಲವರಿಗೆ ಉತ್ತಮ ಹಾಸಿಗೆ ಇದ್ದರೂ, ಕೋಣೆ ಪ್ರಶಾಂತವಾಗಿದ್ದರೂ ನಿದ್ದೆ ಇಲ್ಲದೆ ಹೊರಳಾಡುತ್ತಲೇ ನರಳುತ್ತಾರೆ. ಅಂತಹವರಿಗಾಗಿ ಆಪ್ತ ಸಂಗಾತಿಯಂತಹ ಹಾಸಿಗೆ ಯನ್ನು ಸಂಶೋಧಕರು ಅಭಿವೃದ್ಧ್ದಿಪಡಿಸಿದ್ದಾರೆ. ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಜೈವಿಕ ಇಂಜಿನಿಯರ್‌ಗಳು ವಿಶಿಷ್ಟವಾದ ಹಾಸಿಗೆ ಮತ್ತು ದಿಂಬಿನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಅದು ದೇಹಕ್ಕೆ ನಿದ್ರೆಗೆ ಹೋಗುವ ಸಮಯ ಎಂದು ಹೇಳಲು ತಾಪನ ಮತ್ತು ತಂಪಾಗಿಸುವಿಕೆಯನ್ನು ಬಳಸುತ್ತದೆ. ಈ ಹೊಸ ಹಾಸಿಗೆಯು ನಿದ್ರೆಯ ಭಾವನೆಯನ್ನು ಪ್ರಚೋದಿಸಲು ದೇಹವನ್ನು ಉತ್ತೇಜಿಸುತ್ತದೆ. ಜನರು ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

''ದೇಹದ ಥರ್ಮೋಸ್ಟಾಟ್ ಅನ್ನು ಸಂಕ್ಷಿಪ್ತವಾಗಿ ಹೊಂದಿಸಲು, ಆಂತರಿಕ ದೇಹದ ಉಷ್ಣತೆಯನ್ನು ಸೂಕ್ಷ್ಮ ಸಂವೇದಕಗಳ ಕುಶಲತೆಯಿಂದ ಈ ಹಾಸಿಗೆಯು ನಿದ್ರೆಯ ಸಿದ್ಧತೆಯನ್ನು ಸುಗಮಗೊಳಿಸುತ್ತದೆ. ನಿದ್ದೆಗೆ ಅಗತ್ಯವಿರುವ ತಾಪನವನ್ನು ಈ ಹಾಸಿಗೆ ಹೊಂದಿಸುತ್ತದೆ'' ಎಂದು ಹಾರ್ವರ್ಡ್ ವೈದ್ಯಕೀಯ ಕಾಲೇಜು ವಿಭಾಗದ ಸಂಶೋಧನಾ ಸಹೋದ್ಯೋಗಿ ಶಹಾಬ್ ಹೇಳುತ್ತಾರೆ. ಸಾಮಾನ್ಯವಾಗಿ ನಿದ್ರೆಯು ಸುಗಮವಾಗಲು ಕತ್ತಿನ ಭಾಗದಲ್ಲಿ ದಿಂಬನ್ನು ಬಳಸುತ್ತೇವೆ. ಕತ್ತಿನ ಚರ್ಮವು ಮಾನವರಿಗೆ ಪ್ರಮುಖ ದೈಹಿಕ ಥರ್ಮೋಸ್ಟಾಟ್ ಆಗಿದೆ. ಇದು ದಿಂಬಿನೊಂದಿಗೆ ಬೆಚ್ಚಗಿನ ಅಥವಾ ತಣ್ಣಗಿನ ಪ್ರಾಥಮಿಕ ಸಂವೇದಕವಾಗಿದೆ. ಈ ಹಿನ್ನೆಲೆಯನ್ನು ಬಳಸಿಕೊಂಡ ಸಂಶೋಧಕರು ನಿದ್ರೆ ಬರಿಸಲು ಪೂರಕ ಉಷ್ಣವನ್ನು ಸೃಷ್ಟಿಸುವ ದಿಂಬು ಮತ್ತು ಹಾಸಿಗೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಹಾಸಿಗೆಯು ಕುತ್ತಿಗೆ, ಕೈಗಳು ಮತ್ತು ಪಾದಗಳನ್ನು ಆಗಾಗಹಗುರವಾಗಿ ಬಿಸಿ ಹಾಗೂ ತಂಪು ಮಾಡುವ ಮೂಲಕ ನಿದ್ರೆಯ ನರಪ್ರೇಕ್ಷಕಗಳನ್ನು ಉತ್ತೇಜಿಸುತ್ತದೆ. ಇದರಿಂದ ಬಹುಬೇಗ ನಿದ್ದೆ ಆವರಿಸಿಕೊಳ್ಳುತ್ತದೆ ಮತ್ತು ಆ ನಿದ್ದೆಯ ಬಹುಕಾಲದವರೆಗೆ ಸುಖ ನಿದ್ದೆಯ ಅನುಭವ ನೀಡುತ್ತದೆ. ದೇಹವನ್ನು ಏಕಕಾಲದಲ್ಲಿ ಬಿಸಿ ಅಥವಾ ತಂಪು ಮಾಡುವಂತೆ ಈ ಹಾಸಿಗೆಯನ್ನು ವಿನ್ಯಾಸ ಮಾಡಲಾಗಿದೆ. ಜನರ ನಿದ್ದೆಯನ್ನು ಉತ್ತಮಪಡಿಸುವ ಭಾಗವಾಗಿ ಕಾಕ್ರೆಲ್ ಸ್ಕೂಲ್ ಆಫ್ ಇಂಜಿನಿಯರಿಂಗ್‌ನ ಪ್ರಾಧ್ಯಾಪಕ ಮತ್ತು ಪರಿಣಿತ ಚಿಕಿತ್ಸಕರಾದ ಕೆನ್ನೆತ್ ಡಿಲ್ಲರ್ ಅವರ ಪ್ರಯೋಗಾಲಯದಲ್ಲಿ ಯೋಜನೆ ಹುಟ್ಟಿಕೊಂಡಿದೆ. ತಮ್ಮ ಬಳಿ ಬರುತ್ತಿದ್ದ ನಿದ್ರಾಹೀನತೆಯ ರೋಗಿಗಳಿಗೆ ಕೆಲವು ಚಿಕಿತ್ಸಕ ತಂತ್ರಗಳನ್ನು ಬಳಸುತ್ತಿದ್ದರು. ಮಲಗುವ ಒಂದು ಗಂಟೆ ಅಥವಾ ಎರಡು ಗಂಟೆಗಳ ಮೊದಲು ಬಿಸಿನೀರಿನ ಸ್ನಾನ ಮಾಡುವುದರಿಂದ ಜನರು ತ್ವರಿತವಾಗಿ ಮತ್ತು ಉತ್ತಮವಾಗಿ ನಿದ್ದೆ ಮಾಡುವುದನ್ನು ಕಂಡುಕೊಂಡಿದ್ದರು. ಇದೇ ತಂತ್ರವನ್ನು ಬಳಸಿ ನಿದ್ದೆ ಮಾಡಲು ದೇಹಕ್ಕೆ ಸಹಾಯ ಮಾಡುವ ಉಷ್ಣ ಪ್ರಚೋದಕವನ್ನು ಹಾಸಿಗೆಯ ಮೂಲಕ ಬಳಸಿ ಯಶಸ್ವಿಯಾಗಿದ್ದಾರೆ.

''ಹೊಸ ಹಾಸಿಗೆಯು ದೇಹದ ಉಷ್ಣತೆಯನ್ನು ಕಾಪಾಡುವ ಮೂಲಕ ಸುಖ ನಿದ್ದೆಯನ್ನು ನೀಡುತ್ತದೆ. ಜೊತೆಗೆ ರಾತ್ರಿಯಿಡೀ ರಕ್ತದೊತ್ತಡವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುತ್ತದೆ. ದೈನಂದಿನ ಚಟುವಟಿಕೆಗಳಲ್ಲಿ ರಕ್ತದ ಹರಿವನ್ನು ಕಾಪಾಡಿಕೊಳ್ಳುವ ಒತ್ತಡದಿಂದ ಹೃದಯರಕ್ತನಾಳದ ವ್ಯವಸ್ಥೆಯು ಚೇತರಿಸಿಕೊಳ್ಳಲು ಈ ಹಾಸಿಗೆ ಅನುವು ಮಾಡಿಕೊಡುತ್ತದೆ'' ಎಂದು ಕೆನ್ನೆತ್ ಡಿಲ್ಲರ್ ವಿವರಿಸುತ್ತಾರೆ. ಕೆನ್ನೆತ್ ಅಭಿವೃದ್ಧಿಪಡಿಸಿದ ತಂಡದಲ್ಲಿ ಆಸ್ಟಿನ್‌ನ ಸೆಪಿಡೆಹ್ ಖೋಶ್ನೆವಿಸ್ ಮತ್ತು ಮೈಕೆಲ್ ಸ್ಮೊಲೆನ್ಸ್ಕಿ, ಸ್ಪೇನ್‌ನ ವಿಗೊ ವಿಶ್ವವಿದ್ಯಾನಿಲಯದ ರಾಮೋನ್ ಹೆರ್ಮಿಡಾ, ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ರಿಚರ್ಡ್ ಕ್ಯಾಸ್ಟ್ರಿಯೊಟಾ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಇವಾ ಶೆರ್ನ್‌ಹ್ಯಾಮರ್ ಇದ್ದಾರೆ. ಇವರೆಲ್ಲರ ಸತತ ಮೂರು ವರ್ಷಗಳ ಪರಿಶ್ರಮದಿಂದ ಇಂತಹ ಹೊಸ ಮಾದರಿಯ ಹಾಸಿಗೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಹಲವಾರು ಪ್ರಯೋಗಗಳಲ್ಲಿ ಯಶಸ್ವಿಯಾಗಿದ್ದಾರೆ. ನಿದ್ರಾಹೀನತೆಯಿಂದ ಬಳಲುವ ಅನೇಕರು ಈ ಹಾಸಿಗೆ ಬಳಸಿ ಸುಖವಾದ ಮತ್ತು ಹಿತವಾದ ನಿದ್ದೆಯನ್ನು ಅನುಭವಿಸಿದ್ದಾರೆ. ಈಗಾಗಲೇ ಈ ತಂಡವು ಇದಕ್ಕಾಗಿ ಪೇಟೆಂಟನ್ನು ಪಡೆದುಕೊಂಡಿದೆ. ಅದನ್ನು ವಾಣಿಜ್ಯೀಕರಣಗೊಳಿಸಲು ಹಾಸಿಗೆ ಕಂಪೆನಿಗಳೊಂದಿಗೆ ಪಾಲುದಾರಿಕೆಯನ್ನು ಬಯಸುತ್ತಿದೆ. ಆದಷ್ಟು ಬೇಗ ಇಂತಹ ಹಾಸಿಗೆಗಳು ಮಾರುಕಟ್ಟೆಗೆ ಬಂದು ನಿದ್ದೆಯಿಲ್ಲದೆ ನರಳಾಡುವವರ ಪಾಲಿಗೆ ಸುಖ ಸಾಂಗತ್ಯ ನೀಡುವ ಹಾಸಿಗೆಯಾಗುವುದೇ? ಕಾದು ನೋಡಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)