ಮಗುವಿನ ಬೆಳವಣಿಗೆಯಲ್ಲಿ ಸ್ತನ್ಯಪಾನದ ಪಾತ್ರ
ವಿಶ್ವದಾದ್ಯಂತ ಸ್ತನ್ಯಪಾನದ ಮಹತ್ವ, ಉಪಯೋಗವನ್ನು ಜನರಿಗೆ ತಿಳಿಸಿ, ಸ್ತನ್ಯ ಪಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತೀ ವರ್ಷ ಆಗಸ್ಟ್ 1 ರಿಂದ 7ರವರೆಗೆ ಅಂತರ್‌ರಾಷ್ಟ್ರೀಯ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತದೆ. ನವಜಾತ ಶಿಶುಗಳಿಗೆ ತಾಯಿಯ ಎದೆ ಹಾಲೇ ಆಹಾರ ಮತ್ತು ಅಮೃತ. ಮಗುವಿನ ದೈಹಿಕ ಮತ್ತು ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಪೌಷ್ಟಿಕಾಂಶಗಳು, ಪೋಷಕಾಂಶಗಳು, ರೋಗದಿಂದ ರಕ್ಷಣೆ ನೀಡುವ ಆ್ಯಂಟಿಬಾಡಿಗಳು ಈ ಹಾಲಿನಲ್ಲಿ ಇರುವ ಕಾರಣದಿಂದ ಸ್ತನ್ಯಪಾನ ಮಗುವಿಗೆ ಅತ್ಯಮೂಲ್ಯ. ಅದರಲ್ಲಿ ಮೊದಲ ದಿನ ತಾಯಿಯಲ್ಲಿ ಉತ್ಪತ್ತಿಯಾಗುವ ಹಳದಿ ಗಟ್ಟಿ ಹಾಲಿಗೆ ಕೊಲೆಸ್ಟ್ರಮ್ ಎನ್ನಲಾಗುತ್ತದೆ. ಇದು ಅತ್ಯಂತ ಶ್ರೇಷ್ಠವಾದ, ಅಮೃತ ಸದೃಶ ಆಹಾರವಾಗಿರುತ್ತದೆ. ಇದರಲ್ಲಿ ಪ್ರೊಟೀನ್, ಖನಿಜಾಂಶಗಳು, ಜೀವ ಸತ್ವಗಳು ಹಾಗೂ ಇತರ ಪೋಷಕಾಂಶಗಳು ಹೇರಳವಾಗಿವೆ. ಇದು ನವಜಾತ ಶಿಶುಗಳನ್ನು ಸೋಂಕಿನಿಂದ ರಕ್ಷಿಸಿ, ದೈಹಿಕ ಬೆಳವಣಿಗೆಗೆ ಮುನ್ನುಡಿ ಬರೆಯುತ್ತದೆ.
ಸ್ತನ್ಯಪಾನದ ಲಾಭಗಳು?
* ಎದೆ ಹಾಲು ಬಹಳ ಸುಲಭವಾಗಿ ಮಗುವಿನ ಜಠರದಲ್ಲಿ ಜೀರ್ಣವಾಗುತ್ತದೆ ಮತ್ತು ಮಗುವಿನ ಜೀರ್ಣಾಂಗ ವ್ಯವಸ್ಥೆಯನ್ನು ಬೇಗನೆ ಬೆಳೆಯುವಂತೆ ಪ್ರಚೋದಿಸುತ್ತದೆ.
* ಎದೆ ಹಾಲಿನಲ್ಲಿರುವ ಕೊಬ್ಬಿನ ಅಂಶ, ಮಗುವಿನ ನರಮಂಡಲವ್ಯೆಹ ವ್ಯವಸ್ಥೆ ಅಭಿವೃದ್ಧಿಯಾಗಲು ಹೆಚ್ಚು ಸಹಕಾರಿ.
* ತಾಯಿಯ ಎದೆಹಾಲಿನಲ್ಲಿರುವ ಶಕ್ತಿ, ಪ್ರೊಟೀನ್, ಕೊಬ್ಬು, ಸೋಡಿಯಂ, ಲವಣ ಮತ್ತು ಜಿಂಕ್ ಮಗುವಿನ ರಕ್ಷಣಾ ವ್ಯವಸ್ಥೆಯನ್ನು ಸದೃಢಗೊಳಿಸುತ್ತದೆ.
* ಎದೆ ಹಾಲು ಕುಡಿಸುವುದರಿಂದ ತಾಯಿ ಮಗುವಿನ ನಡುವೆ ಬಾಂಧವ್ಯ ವೃದ್ಧಿಸುತ್ತದೆ. ತಾಯಿಯ ಅನಗತ್ಯ ಗರ್ಭಧಾರಣೆಯನ್ನು ತಡೆಯುತ್ತದೆ. ಸ್ತನ ಕ್ಯಾನ್ಸರ್‌ನಿಂದಲೂ ತಾಯಿಗೆ ರಕ್ಷಣೆ ನೀಡುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ತಾಯಿಗೆ ಹೆಚ್ಚಾಗಿ ದೇಹ ತೂಕ ನಿಯಂತ್ರಿಸುವಲ್ಲಿ ಸ್ತನ್ಯಪಾನ ಸಹಾಯಮಾಡುತ್ತದೆ.
*ಎದೆ ಹಾಲಿನಲ್ಲಿರುವ ಕ್ಯಾಲ್ಸಿಯಂ, ಮಗುವಿನ ಎಲುಬು ಬೆಳವಣಿಗೆಗೆ ಅತೀ ಅಗತ್ಯ
* ಎದೆ ಹಾಲು ನೀಡುವುದರಿಂದ ತಾಯಿಗೆ ಅಸ್ಥಿರಂಧ್ರತೆ ಬಾರದಂತೆ ತಡೆಯುವುದಲ್ಲದೆ ಅಂಡಾಶಯದ ಕ್ಯಾನ್ಸರ್ ಬರದಂತೆಯೂ ತಡೆಯುತ್ತದೆ.
* ತಾಯಿಯ ಎದೆ ಹಾಲು ಕುಡಿದ ಮಕ್ಕಳಿಗೆ ಮಲಬದ್ಧತೆ, ಅತಿಸಾರ, ಭೇದಿ ಮತ್ತು ಇತರ ಜಠರ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ವಿರಳವಾಗಿರುತ್ತದೆ.
* ಎದೆಹಾಲಿನಲ್ಲಿ ತಾಯಿಯಿಂದ ಹೇರಳವಾಗಿ ಆ್ಯಂಟಿ ಆಕ್ಸಿಡೆಂಟ್‌ಗಳು, ಕಿಣ್ವಗಳು, ಆ್ಯಂಟಿಬಾಡಿಗಳು ಮಗುವಿಗೆ ದೊರಕಿ ರಕ್ಷಣಾ ವ್ಯವಸ್ಥೆ ಸದೃಢವಾಗುತ್ತದೆ.
* ತಾಯಿಯಿಂದ ಎದೆಹಾಲು ಕುಡಿದ ಮಕ್ಕಳಲ್ಲಿ ಅಲರ್ಜಿ, ತುರಿಕೆ, ಅಸ್ತಮಾ, ಶ್ವಾಸ ಸಂಬಂಧಿ ರೋಗಗಳು ಬಹಳ ವಿರಳ ಎಂದೂ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಕೊಲೆಸ್ಟ್ರಮ್ ಎಂಬ ಸಂಜೀವಿನಿ
ಮಗು ತಾಯಿಯ ಗರ್ಭದಿಂದ ಹೊರಬಂದ ಕೂಡಲೇ ತಾಯಿಯ ಸ್ತನಗಳಿಂದ ಒಂದೆರಡು ಗಂಟೆಗಳ ಕಾಲ ಹಳದಿ ಬಣ್ಣದ ಜೀವದ್ರವ್ಯ ಒಸರಲು ಆರಂಭವಾಗುತ್ತದೆ. ಎದೆ ಹಾಲು ಬರುವ ಮೊದಲೇ ಈ ಜೀವದ್ರವ್ಯ ಸಾಮಾನ್ಯವಾಗಿ ಎಲ್ಲಾ ಸಸ್ತನಿಗಳ ಸ್ತನಗಳಿಂದ ಒಸರುತ್ತದೆ. ಆಂಗ್ಲಭಾಷೆಯಲ್ಲಿ ಈ ದ್ರವವನ್ನು ಕೊಲೆಸ್ಟ್ರಮ್ ಎಂದು ಕರೆಯುತ್ತಾರೆ. ಇದೊಂದು ಅತ್ಯಂತ ಅಮೂಲ್ಯವಾದ ಸಂಜೀವಿನಿ ಅಥವಾ ಜೀವದ್ರವ್ಯ ಎಂದರೂ ಅತಿಶಯೋಕ್ತಿಯಾಗಲಾರದು. ತಾಯಂದಿರು ಈ ಕೊಲೆಸ್ಟ್ರಮ್‌ಅನ್ನು ಸಂಪೂರ್ಣವಾಗಿ ಮಗುವಿಗೆ ನೀಡಬೇಕು. ಒಂದು ಹನಿಯೂ ವ್ಯರ್ಥವಾಗದಂತೆ ಈ ಜೀವ ದ್ರವವನ್ನು ಮಗುವಿಗೆ ಸಿಗುವಂತೆ ಮಾಡುವ ಹೊಣೆಗಾರಿಕೆ ತಾಯಂದಿರು ಮತ್ತು ದಾದಿಯರಿಗೆ ಇರುತ್ತದೆ. ಈ ಕಾರಣದಿಂದಲೇ ತಾಯಂದಿರು ಮಗು ಹುಟ್ಟಿದ ಕೂಡಲೇ ಒಂದೆರಡು ಗಂಟೆಗಳ ಒಳಗೆ ಮಗುವಿಗೆ ಸ್ತನಪಾನ ಮಾಡಿಸಲೇಬೇಕು. ಈ ಕೊಲೆಸ್ಟ್ರಮ್‌ನಲ್ಲಿ ತಾಯಿಯಿಂದ ಮಗುವಿಗೆ ಪೋಷಕಾಂಶಗಳು, ರೋಗಗಳಿಂದ ರಕ್ಷಣೆ ನೀಡುವ ಅತ್ಯಮೂಲ್ಯ ಆ್ಯಂಟಿಬಾಡಿಗಳು ಇರುತ್ತವೆ. ಈ ಆ್ಯಂಟಿಬಾಡಿಗಳು ಮಗುವನ್ನು ಹಲವಾರು ರೋಗಗಳಿಂದ ರಕ್ಷಿಸುತ್ತದೆ. ಮಗುವಿನ ಜೀವ ರಕ್ಷಕ ವ್ಯವಸ್ಥೆ ಮತ್ತು ರಕ್ಷಣಾ ವ್ಯವಸ್ಥೆ ಸರಿಯಾಗಿ ಬೆಳವಣಿಗೆ ಆಗಿ, ತನ್ನಿಂತಾನೇ ತನ್ನದೇ ದೇಹದಲ್ಲಿ ಆ್ಯಂಟಿಬಾಡಿಗಳು ಉತ್ಪಾದನೆಯಾಗುವವರೆಗೆ ತಾಯಿಯಿಂದ ಕೊಲೆಸ್ಟ್ರಮ್‌ನ ಜೊತೆಗೆ ಬಳುವಳಿಯಾಗಿ ಬಂದ ಆ್ಯಂಟಿಬಾಡಿಗಳು ಮಗುವನ್ನು ಮಾರಣಾಂತಿಕ ರೋಗಗಳಿಂದ ರಕ್ಷಿಸುತ್ತದೆ. ಮಗುವಿನ ರಕ್ಷಣಾ ವ್ಯವಸ್ಥೆಗೆ ಪೂರಕವಾಗಿ ಕೆಲಸ ಮಾಡಿ ಯಾವುದೇ ಸೋಂಕು ಶಿಶುವಿಗೆ ಬಾರದಂತೆ ತಡೆಯುತ್ತದೆ. ಈ ಜೀವದ್ರವ್ಯ ಕೊಲೆಸ್ಟ್ರಮ್‌ನಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್‌ಇರುತ್ತದೆ. ಈ ಪ್ರೊಟೀನ್ ಮಗುವಿನ ಆರಂಭಿಕ ಬೆಳವಣಿಗೆಗೆ ಮತ್ತು ರಕ್ಷಣಾ ವ್ಯವಸ್ಥೆಯನ್ನು ಸುದೃಢಗೊಳಿಸಲು ಅತೀ ಅವಶ್ಯಕ. ಶಿಶುಗಳಲ್ಲಿ ಜೀರ್ಣಾಂಗ ವ್ಯವಸ್ಥೆ ಅತ್ಯಂತ ಚಿಕ್ಕದಾಗಿದ್ದು ಪ್ರಾಥಮಿಕ ಹಂತದಲ್ಲಿ ಇರುತ್ತದೆ. ಇಂತಹ ಸಂದರ್ಭದಲ್ಲಿ ಅತೀ ಹೆಚ್ಚು ಸಾಮರ್ಥ್ಯದ ಪೋಷಕಾಂಶಯುಕ್ತ ಪ್ರೊಟೀನ್ ಮತ್ತು ಖನಿಜಾಂಶಗಳು, ಜೀವಧಾತುಗಳನ್ನು ಅತೀ ಕಡಿಮೆ ಗಾತ್ರದಲ್ಲಿ ನೀಡುತ್ತದೆ. ಈ ಕೊಲೆಸ್ಟ್ರಮ್ ಮಗುವಿಗೆ ಮೊದಲ ಮಲವಿಸರ್ಜನೆ ಮಾಡಲು ಪೂರಕವಾದ ವಾತಾವರಣ ನಿರ್ಮಿಸಿ ಕೊಡುತ್ತದೆ. ಶಿಶುಗಳ ಮೊದಲ ಮಲವನ್ನು ಮೆಕೋನಿಯಮ್ ಎನ್ನುತ್ತಾರೆ. ಇದರ ಮುಖಾಂತರ ದೇಹದಲ್ಲಿನ ಹೆಚ್ಚಿನ ಪ್ರಮಾಣದ ಬಿಲುರುಬಿನ್ ಎಂಬ ವಸ್ತು ದೇಹದಿಂದ ಹೊರಹಾಕಲ್ಪಡುತ್ತದೆ. ಮಗು ತಾಯಿಯ ಗರ್ಭದಿಂದ ಹೊರ ಬಂದಾಗ ರಕ್ತದ ಪ್ರಮಾಣ ತೀವ್ರವಾಗಿ ಕಡಿಮೆಯಾಗಿ, ಕೆಂಪು ರಕ್ತಕಣಗಳು ಸತ್ತು ಹೋಗಿ ಅತೀ ಹೆಚ್ಚು ಪ್ರಮಾಣದಲ್ಲಿ ಬಿಲುರುಬಿನ್ ದೇಹದಲ್ಲಿ ಶೇಖರಣೆಯಾದಲ್ಲಿ ಮಗುವಿಗೆ ಕಾಮಾಲೆ ರೋಗ ಅಥವಾ ಜಾಂಡೀಸ್ ಬರುತ್ತದೆ. ಒಟ್ಟಿನಲ್ಲಿ ಈ ಬಿಲುರುಬಿನ್ ವರ್ಣದ್ರವ್ಯ ಸರಾಗವಾಗಿ ದೇಹದಿಂದ ಹೊರ ಹೋಗಲು ಕೊಲೆಸ್ಟ್ರಮ್ ಸಹಾಯ ಮಾಡುತ್ತದೆ.
ಕೊಲೆಸ್ಟ್ರಮ್‌ನಲ್ಲಿ ದೇಹದ ರಕ್ಷಣಾ ವ್ಯವಸ್ಥೆಯ ಸೈನಿಕರಾದ ಲಿಂಪೋಸೈಟ್ ಎಂಬ ಬಿಳಿರಕ್ತಗಳು ಅತೀ ಪ್ರಮುಖವಾದ ಆ್ಯಂಟಿಬಾಡಿಗಳಾದ IgA, IgG ಮತ್ತು JgM ಇರುತ್ತದೆ. ಇದಲ್ಲದೆ ಲೈಜೋಜೈಮ್, ಲಾಕ್ಟೋಪೆರಾಕ್ಸಿಡೇಸ್, ಕಾಂಪ್ಲಿಮೆಂಟ್, ಪಾಲಿಪೆಪ್ಟೈಡ್, ಇಂಟರ್‌ಲ್ಯುಕಿನ್, ಸೈಟೋಕೈನ್ ಮುಂತಾದ ಅತೀ ಅವಶ್ಯಕ ಜೀವರಕ್ಷಕ ಧಾತುಗಳು ಇರುತ್ತದೆ.