ಬಹರೈನ್ನ ವಸತಿ ಸಮುಚ್ಚಯದಲ್ಲಿ ಬೆಂಕಿ: ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದ ಅಯ್ಯೂಬ್ ಮಾಡೂರ್ಗೆ ವ್ಯಾಪಕ ಪ್ರಶಂಸೆ
ರಕ್ಷಣಾ ಕಾರ್ಯಾಚರಣೆಯಲ್ಲಿ ಅಯ್ಯೂಬ್ ಮಾಡೂರ್ (ಬಲ)
ಮನಾಮ: ಬಹ್ರೈನ್ ನ ಗುದೈಬಿಯಾ ಎಂಬಲ್ಲಿರುವ ವಸತಿ ಸಮುಚ್ಛಯವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳಕ್ಕೆ ತೆರಳಿದ ಬಹರೈನ್ ಸಿವಿಲ್ ಡಿಫೆನ್ಸ್ ತಂಡವು ಎಲ್ಲರನ್ನೂ ರಕ್ಷಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ. ಈ ವೇಳೆ ಬಹರೈನ್ ಸಿವಿಲ್ ಡಿಫೆನ್ಸ್ ತಂಡದಲ್ಲಿದ್ದ ದಕ್ಷಿಣ ಕನ್ನಡದ ಮಾಡೂರು ನಿವಾಸಿ ಕೆ,ಪಿ ಅಯ್ಯೂಬ್ ಮಾಡೂರುರವರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ಅಯ್ಯೂಬ್ ಬಹರೈನ್ ಸಿವಿಲ್ ಡಿಫೆನ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ʼವಾರ್ತಾಭಾರತಿʼಯೊಂದಿಗೆ ಮಾತನಾಡಿದ ಅಯ್ಯೂಬ್, "ಇದೊಂದು ಮರೆಯಲಾಗದ ಕ್ಷಣ" ಎಂದು ಬಣ್ಣಿಸಿದರು. "ಶನಿವಾರ ಬೆಳಗ್ಗಿನ ವೇಳೆ ನಮಗೆ ಭಾರತ, ಪಾಕಿಸ್ತಾನ ಸಹಿತ ವಿದೇಶದ ಜನರು ವಾಸಿಸುತ್ತಿರುವ ವಸತಿ ಸಮುಚ್ಚಯದಲ್ಲಿ ಅಗ್ನಿ ಅನಾಹುತ ಆದ ಕುರಿತು ಮಾಹಿತಿ ಬಂತು. ಕೇವಲ ಐದು ನಿಮಿಷದಲ್ಲೇ ನಾವು ಸ್ಥಳಕ್ಕೆ ತಲುಪಿದೆವು. ಒಟ್ಟು 20 ಮಂದಿ ಅಪಾಯದ ಅಂಚಿನಲ್ಲಿದ್ದರು. ಅವರೆಲ್ಲರನ್ನೂ ರಕ್ಷಿಸುವಲ್ಲಿ ನಾವು ಯಶಸ್ವಿಯಾದೆವು" ಎಂದು ಹೇಳಿದರು.
"ಭಾರವಿರುವ ಸಿಲಿಂಡರ್ ಅನ್ನು ಹೆಗಲಿಗೇರಿಸಿಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸಬೇಕಿತ್ತು. ಅದೂ ಅಲ್ಲದೇ ಅತೀ ತಾಪದ ಅನುಭವವೂ ಆಗುತ್ತಿತ್ತು. ಈ ನಡುವೆಯೇ ನನ್ನ ಕೈಯಾರೆ ಮೂರು ಮಂದಿಯ ರಕ್ಷಿಸಿದ ತೃಪ್ತಿ ನನ್ನದು" ಎನ್ನುತ್ತಾರೆ ಅಯ್ಯೂಬ್. "ಬೆಳಗ್ಗೆ ಆರು ಗಂಟೆಗೆ ನಾವು ಸ್ಥಳಕ್ಕೆ ತಲುಪಿದ್ದೆವು. ಏಳೂವರೆಯ ವೇಳೆಗೆ ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲು ನಮಗೆ ಸಾಧ್ಯವಾಯಿತು. 20 ಮಂದಿಯಲ್ಲಿ ಏಳು ಮಂದಿ ಮಾತ್ರ ಗಾಯಗೊಂಡಿದ್ದು, ಅವರನ್ನು ಸಮೀಪದ ಸಲ್ಮಾನಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಅವರು ಹೇಳಿದರು.
"ಇದೊಂದು ಅನಿರ್ವಚನೀಯ ಅನುಭವ. ಭೀತಿಯ, ಪ್ರಾಣಾಪಾಯದ ನಡುವೆಯೂ ಇಷ್ಟು ಮಂದಿಯನ್ನು ರಕ್ಷಿಸಲು ಸಾಧ್ಯವಾಗಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ. ಅತಿಯಾದ ತಾಪಮಾನದ ಕಾರಣದಿಂದ ವಿದ್ಯುತ್ ನ ಬಾಕ್ಸ್ ಗೆ ಬೆಂಕಿ ಹೊತ್ತಿಕೊಂಡಿತ್ತು. ನನ್ನ ತಂಡದಲ್ಲಿ ನಾನು ಸೇರಿದಂತೆ ಒಟ್ಟು 18 ಮಂದಿಯಿದ್ದರು. ಅವರೆಲ್ಲರೂ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಹಲವಾರು ಮಿತ್ರರು ಈ ಕುರಿತು ಕರೆಮಾಡಿ ಅಭಿನಂದನೆ ಸಲ್ಲಿಸಿದ್ದಾರೆ" ಎಂದು ಅಯ್ಯೂಬ್ ತಿಳಿಸಿದ್ದಾರೆ. ಮಾಡೂರು ಗಲ್ಫ್ ಪ್ರೆಂಡ್ಸ್ ವೆಲ್ಫೇರ್ ಅಸೋಸಿಯೇಷನ್ ಅವರಿಗೆ ಅಭಿನಂದನೆ ಸಲ್ಲಿಸಿದೆ.
ಅಯ್ಯೂಬ್ ರವರು ಉಳ್ಳಾಲದ ಟಿಪ್ಪು ಸುಲ್ತಾನ್ ಕಾಲೇಜ್ ಹಾಗೂ ಮಂಗಳೂರಿನ ಬದ್ರಿಯಾ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದು, ಮಾಡೂರಿನ ಅರಬಿ ಕುಂಞಿ ಹಾಗೂ ರುಕಿಯಾ ದಂಪತಿಗಳ ಪುತ್ರರಾಗಿದ್ದಾರೆ.