ರಾಷ್ಟ್ರಧ್ವಜ ಮಾರಾಟದ ಸರಕಲ್ಲ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವವನ್ನು ಸರಕಾರ ಅದ್ದೂರಿಯಾಗಿ ಆಚರಿಸಲು ಹೊರಟಿದೆ. ಈ ಹಿಂದೆ ಸ್ವಾತಂತ್ರ್ಯ ದಿನವನ್ನು ಜನಸಾಮಾನ್ಯರೇ ಸ್ವಯಂ ಇಚ್ಛೆಯಿಂದ ಸಂಭ್ರಮಿಸುತ್ತಿದ್ದರೆ, ಈ ಬಾರಿ ಸರಕಾರ ವಿವಿಧ ‘ಆದೇಶ’ಗಳ ಮೂಲಕ ಸ್ವಾತಂತ್ರ್ಯದ ಸಂಭ್ರಮವನ್ನು ಜನರ ಮೇಲೆ ಹೇರಲು ಮುಂದಾಗಿದೆ. ಬೀದಿಗಳಲ್ಲಿ ಬಾವುಟಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಜನರ ಕೊಳ್ಳುವ ಶಕ್ತಿ ಕಡಿಮೆಯಾಗಿದ್ದರೂ, ಬಾವುಟವನ್ನು ಕಡ್ಡಾಯವಾಗಿ ಹಣಕೊಟ್ಟುಕೊಂಡು ಅದನ್ನು ಮನೆಯ ಬಾಗಿಲಿಗೆ ನೇತು ಹಾಕಲೇ ಬೇಕಾದ ಅಸಹಾಯಕ ಸ್ಥಿತಿಗೆ ಅವರನ್ನು ಸರಕಾರ ತಳ್ಳಿದೆ. ಈ ಹಿಂದೆಲ್ಲ ಸ್ವಾತಂತ್ರ್ಯದ ಬಗೆಗಿನ ನಮ್ಮ ಖುಷಿ, ಸಂತೋಷವನ್ನು ಬಾವುಟಗಳನ್ನು ಕೊಂಡುಕೊಳ್ಳುವ ಮೂಲಕ ಸಾಬೀತು ಪಡಿಸುವ ಅಗತ್ಯವಿರಲಿಲ್ಲ. ಆದರೆ ಅಮೃತಮಹೋತ್ಸವದ ಈ ಸಂದರ್ಭದಲ್ಲಿ ದೇಶದ ಸ್ಥಿತಿ ಬದಲಾಗಿದೆ. ಇಲ್ಲಿ, ಬೀದಿಯ ಪುಂಡರು, ರೌಡಿಗಳು ನಿಮ್ಮ ದೇಶಪ್ರೇಮವನ್ನು ಅಳೆಯಬಹುದು. ರಾಷ್ಟ್ರಧ್ವಜ ಖರೀದಿ ಮಾಡದೇ ಇದ್ದರೆ ಅವರು ನಿಮ್ಮ ಮೇಲೆ ಹಲ್ಲೆಗಳನ್ನೂ ಮಾಡಬಹುದು. ಅಥವಾ ರೇಷನ್ ಕಾರ್ಡ್‌ನ್ನು ಸಿಬ್ಬಂದಿ ಅಮಾನತು ಮಾಡಬಹುದು. ಈವರೆಗೆ ಕೋವ್ಯಾಕ್ಸಿನ್ ಲಸಿಕೆಯ ಹೆಸರಿನಲ್ಲಿ ಬ್ಲಾಕ್‌ಮೇಲ್ ನಡೆಯುತ್ತಿದ್ದರೆ ಈಗ ಆ ಜಾಗವನ್ನು ರಾಷ್ಟ್ರಧ್ವಜದ ಮೂಲಕ ಸರಕಾರ ತುಂಬಲು ಹೊರಟಂತಿದೆ. ಆದುದರಿಂದ, ಈ ಬಾರಿಯ ಸ್ವಾತಂತ್ರ್ಯೋತ್ಸವ ಸಂಭ್ರಮದ ಜೊತೆ ಜೊತೆಗೇ ಹಲವರಲ್ಲಿ ಆತಂಕಗಳನ್ನೂ ಸೃಷ್ಟಿಸಿದೆ.
ಸರಕಾರದ ‘ಆದೇಶ’ಗಳಿಲ್ಲದೆ ಈ ಹಿಂದೆಯೂ ಜನರು ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸುತ್ತಾ ಬಂದಿದ್ದಾರೆ. ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಬೀದಿ ಬೀದಿಯಲ್ಲಿ ಮೆರವಣಿಗೆ ಹೊರಟು, ಘೋಷಣೆಗಳನ್ನು ಕೂಗಿದ್ದಾರೆ. ಈ ಬಾರಿ ದೇಶ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದು ಯಾವುದೇ ಸರಕಾರದ ಕೃಪೆಯಿಂದ ಅಲ್ಲ. ಯಾವ ಸರಕಾರ ಬಂದರೂ, ದೇಶದ ಸ್ವಾತಂತ್ರ್ಯ 75 ವರ್ಷವನ್ನು ಪೂರೈಸಿ ಬಿಡುತ್ತಿತ್ತು. ಈ ಅಮೃತಮಹೋತ್ಸವವವನ್ನು ವಿಶೇಷವಾಗಿ ಸಂಭ್ರಮಿಸುವುದಕ್ಕೆ ನಮ್ಮ ಸರಕಾರ ಈ ದೇಶಕ್ಕೆ ವಿಶೇಷವಾದುದನ್ನೇನಾದರೂ ನೀಡಿದೆಯೇ? ಎಂದರೆ ಅದೂ ಇಲ್ಲ. ಅಮೃತಮಹೋತ್ಸವದ ಒಳಗೆ ಈಡೇರಿಸುವುದಾಗಿ ನಮ್ಮ ಸರಕಾರ ಹತ್ತು ಹಲವು ಭರವಸೆಗಳನ್ನು ಜನರಿಗೆ ನೀಡಿತ್ತು. ಅದರಲ್ಲಿ ಮುಖ್ಯವಾದುದು, ದೇಶದ ಸರ್ವರಿಗೂ ಮನೆಗಳನ್ನು ನೀಡುವ ಭರವಸೆ. ತನ್ನ ಆ ಭರವಸೆಯನ್ನು ಎಷ್ಟರ ಮಟ್ಟಿಗೆ ಈಡೇರಿಸಿದೆ, ಎಷ್ಟು ಜನರಿಗೆ ಸರಕಾರ ಮನೆಗಳನ್ನು ನೀಡಿದೆ ಎನ್ನುವುದರ ಬಗ್ಗೆ ಯಾವುದೇ ಅಧಿಕೃತ ಅಂಕಿ ಸಂಕಿಗಳನ್ನು ಸರಕಾರ ಜನರ ಮುಂದಿಟ್ಟಿಲ್ಲ. ಆದರೆ ನೋಟು ನಿಷೇಧ, ಲಾಕ್‌ಡೌನ್, ಜಿಎಸ್‌ಟಿ ಮೊದಲಾದ ಸರಕಾರದ ನಿರ್ಧಾರಗಳು ಈ ದೇಶದ ಸಾವಿರಾರು ಜನರ ಮನೆಗಳನ್ನು ಕಿತ್ತುಕೊಂಡಿವೆ ಎನ್ನುವುದರ ಬಗ್ಗೆ ಯಾರಿಗೂ ಅನುಮಾನವಿಲ್ಲ. ಮನೆಗಳನ್ನು ನೀಡಲು ವಿಫಲವಾಗಿರುವ ಸರಕಾರ, ಎಲ್ಲರ ಮನೆಗಳ ಮುಂದೆ, ಆ ಜನರ ಹಣದಲ್ಲೇ ಬಾವುಟ ಹಾರಿಸಿ ಅದನ್ನು ತನ್ನ ಸಾಧನೆಯಾಗಿ ಬಿಂಬಿಸಲು ಮುಂದಾಗಿದೆ.
ಮೋದಿಯವರು ಪ್ರಧಾನಿಯಾದ ಬೆನ್ನಿಗೇ ಸ್ವಚ್ಛತಾ ಆಂದೋಲನವನ್ನು ಆರಂಭಿಸಿದರು. ಈ ಆಂದೋಲನಕ್ಕಾಗಿ ಪ್ರಜೆಗಳಿಂದ ವಿಶೇಷ ತೆರಿಗೆಯನ್ನೂ ಸರಕಾರ ವಸೂಲಿ ಮಾಡಿತು. 75ರ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ಕನಿಷ್ಠ ನಮ್ಮ ಗಂಗೆ, ಯಮುನೆ ಸಹಿತ ಪ್ರಮುಖ ನದಿಗಳು ಮಾಲಿನ್ಯ ರಹಿತವಾಗಿ ಕುಡಿಯುವುದಕ್ಕೆ ಯೋಗ್ಯವಾಗಿದ್ದರೂ ಅಮೃತ ಸಂಭ್ರಮಕ್ಕೆ ಶೋಭೆ ಬರುತ್ತಿತ್ತು. ಆದರೆ ಅಂತಹದ್ಯಾವುದೂ ಸಂಭವಿಸಿಲ್ಲ.ಮಲಹೊರುವ ಪದ್ಧತಿ ಈ ದೇಶದ ಕಳಂಕವಾಗಿದೆ. ಇದನ್ನು ಇಲ್ಲವಾಗಿಸಲು ಸರಕಾರ ಅಧಿಕೃತವಾಗಿ ಒಂದು ಕಾನೂನನ್ನೇ ಜಾರಿಗೆ ತಂದಿದೆ. ಮೋದಿಯವರ ಸ್ವಚ್ಛತಾ ಆಂದೋಲನದ ಪರಿಣಾಮವಾಗಿ ದೇಶಾದ್ಯಂತ ಈ ಅನಿಷ್ಠ ಪದ್ಧತಿ ತೊಲಗಿದ್ದರೂ ಅಮೃತಮಹೋತ್ಸವವನ್ನು ಸಂಭ್ರಮಿಸಲು ನಮಗೊಂದು ಕಾರಣ ದೊರಕಿ ಬಿಡುತ್ತಿತ್ತು.
ಆದರೆ ದೇಶದಲ್ಲಿ ಮಲ ಹೊರುವ ಪದ್ಧತಿ ಇನ್ನೂ ಜೀವಂತವಿದೆ ಎನ್ನುವುದನ್ನು ಸರಕಾರವೇ ಪರೋಕ್ಷವಾಗಿ ಒಪ್ಪಿಕೊಂಡಿದೆ. ‘‘ಭಾರತದಲ್ಲಿ ಮಲ ಹೊರುವ ಪದ್ಧತಿ ಅಸ್ತಿತ್ವದಲ್ಲಿಲ್ಲ. ಆದರೆ 2017ರಿಂದ 2021ರವರೆಗೆ ದೇಶದಲ್ಲಿ ಶೌಚಗುಂಡಿ ಶುಚಿಗೊಳಿಸುವ ಸಂದರ್ಭದಲ್ಲಿ 330 ಮಂದಿ ಮೃತಪಟ್ಟಿದ್ದಾರೆ’’ ಎಂದು ಕಳೆದ ಮಂಗಳವಾರ ಲೋಕಸಭೆಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ಸಹಾಯಕ ಸಚಿವ ರಾಮದಾಸ್ ಅಠವಳೆ ಅವರು ಮಾಹಿತಿ ನೀಡಿದ್ದರು. ಭಾರತದಲ್ಲಿ ಯಾರೂ ಶೌಚಾಲಯ ಗುಂಡಿಗಳನ್ನು ಕೈಯಿಂದ ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿಕೊಂಡಿಲ್ಲ ಎನ್ನುವ ಇದೇ ಸರಕಾರ, ಕಳೆದ ನಾಲ್ಕು ವರ್ಷಗಳಲ್ಲಿ 330 ಮಂದಿ ಮೃತ ಪಟ್ಟಿದ್ದಾರೆ ಎನ್ನುವ ಆಘಾತಕಾರಿ ಸಂಗತಿಯನ್ನು ದೇಶದ ಮುಂದಿಡುತ್ತದೆ. ಹಾಗಾದರೆ ಯಾವುದು ನಿಜ?
2013ರಲ್ಲಿ ಮಲಹೊರುವ ಪದ್ಧತಿ ನಿಷೇಧ ಹಾಗೂ ಮಲ ಹೊರುವ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸುವ ಕಾಯ್ದೆಯನ್ನು ಜಾರಿಗೆ ತರಲಾಯಿತು. ಮಲಹೊರುವ ಪದ್ಧತಿಯನ್ನು ಜಾರಿಗೊಳಿಸಿದವರಿಗೆ ಕಠಿಣ ಶಿಕ್ಷೆಯನ್ನು ಈ ಕಾಯ್ದೆ ಘೋಷಿಸಿದೆ. ಇಷ್ಟಾದ ಬಳಿಕವೂ ಈ ದೇಶದಲ್ಲಿ ಮಲದ ಗುಂಡಿಯಲ್ಲಿ ಸಾಯುವವರ ಸಂಖ್ಯೆ ಸಂಪೂರ್ಣ ಇಲ್ಲವಾಗಿಲ್ಲ ಎನ್ನುವುದು ಈ ದೇಶದ ಪಾಲಿಗೆ ಬಹುದೊಡ್ಡ ಅವಮಾನವಾಗಿದೆ. 2011ರ ಜನಗಣತಿಯ ಪ್ರಕಾರ ಇಡೀ ದೇಶದಲ್ಲಿ 7,94,000 ಮಲಹೊರುವ ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ 13,000ಕ್ಕೂ ಅಧಿಕ ಮಲ ಹೊರುವ ಕಾರ್ಮಿಕರನ್ನು ಗುರುತಿಸಲಾಗಿದೆ. ಕಾನೂನು ಜಾರಿಗೊಂಡ ಬಳಿಕ ಅಂದರೆ 2013ರ ಆನಂತರ ಸಪಾಯಿ ಕರ್ಮಚಾರಿ ಆಯೋಗವು ಬೆಂಗಳೂರಿನಲ್ಲೇ 200ಕ್ಕೂ ಅಧಿಕ ಮಲಹೊರುವ ಕಾರ್ಮಿಕರನ್ನು ಗುರುತಿಸಿತ್ತು. ಗ್ರಾಮೀಣ ಪ್ರದೇಶದಲ್ಲಿ ಇವರ ಸಂಖ್ಯೆ ಇನ್ನೂ ಜಾಸ್ತಿಯಿದೆ. ಮಲಹೊರುವ ಪದ್ಧತಿಯ ವಿರುದ್ಧ ಕಾಯ್ದೆ ಜಾರಿಗೊಂಡ ಬಳಿಕ, ಇಂತಹದೊಂದು ಪದ್ಧತಿಯೇ ಇಲ್ಲ ಎನ್ನುವುದನ್ನು ಜಿಲ್ಲಾಡಳಿತಗಳೂ ಘೋಷಿಸುತ್ತಾ ಬಂದವು. ಆದರೆ ತೆರೆಮರೆಯಲ್ಲಿ ಇವು ಇನ್ನೂ ಜಾರಿಯಲ್ಲಿದೆ. ಉತ್ತರ ಭಾರತದಲ್ಲಂತೂ ನಿರ್ದಿಷ್ಟ ಕೆಲವು ಜಾತಿಗಳಿರುವುದೇ ಮೇಲ್ಜಾತಿಯ ಜನರ ಶೌಚಗುಂಡಿಯನ್ನು ಶುಚಿಗೊಳಿಸಲು ಎನ್ನುವ ಮನಸ್ಥಿತಿ ಬೇರು ಬಿಟ್ಟಿದೆ. ಇಂತಹ ಮನಸ್ಥಿತಿಯನ್ನು ಬೇರು ಸಮೇತ ಕಿತ್ತು ಹಾಕದೆ ಈ ದೇಶದಲ್ಲಿ ಮಲಹೊರುವ ಪದ್ಧತಿಯನ್ನು ಕೊನೆಗಾಣಿಸಲು ಸಾಧ್ಯವಿಲ್ಲ. ಕನಿಷ್ಠ ಶೌಚಗುಂಡಿಯಲ್ಲಿ ಮೃತಪಟ್ಟ 330 ಮಂದಿ ಕಾರ್ಮಿಕರಿಗೆ ಯಾವ ರೀತಿಯ ಪರಿಹಾರವನ್ನು ಸರಕಾರ ನೀಡಿದೆ? ಎನ್ನುವುದರ ಬಗ್ಗೆಯೂ ಸರಕಾರದ ಬಳಿ ಅಧಿಕೃತ ಮಾಹಿತಿಗಳಿಲ್ಲ. ಎಲ್ಲಿಯವರೆಗೆ ಈ ದೇಶದಲ್ಲಿ ಶೌಚಗುಂಡಿಯೊಳಗೆ ಮನುಷ್ಯನನ್ನು ಇಳಿಸಿ ಆತನಿಂದ ಶುಚಿಗೊಳಿಸುವ ಪದ್ಧತಿ ಜೀವಂತವಿರುತ್ತದೆಯೋ ಅಲ್ಲಿಯವರೆಗೆ ಅಮೃತ ಮಹೋತ್ಸವದ ಸಂಭ್ರಮಕ್ಕೆ ಯಾವ ಅರ್ಥವೂ ಇಲ್ಲ. ಆದುದರಿಂದ ಭಾರತದ ಸ್ವಾತಂತ್ರ್ಯದ ಘನತೆಯನ್ನು ಕನಿಷ್ಠ, ಮಲದ ಗುಂಡಿಯಿಂದ ಮೇಲೆತ್ತುವ ಹೊಣೆಗಾರಿಕೆ ಸರಕಾರದ್ದು.
ಜನಸಾಮಾನ್ಯರ ದೈನಂದಿನ ಬದುಕನ್ನು ದುಬಾರಿಯಾಗಿಸಿದ ಸರಕಾರ, ಈಗ ಅಮೃತಮಹೋತ್ಸವದ ಹೆಸರಿನಲ್ಲಿ ಧ್ವಜಗಳನ್ನು ಬಲವಂತವಾಗಿ ಶ್ರೀಸಾಮಾನ್ಯರಿಗೆ ಮಾರ ಹೊರಟಿರುವುದು ಭಾರತಕ್ಕೆ ಸಿಕ್ಕಿದ ಸ್ವಾತಂತ್ರ್ಯದ ಅಣಕವಲ್ಲದೆ ಇನ್ನೇನೂ ಅಲ್ಲ. ಈ ಹಿಂದೆ ಪಿಎಂ ಕೇರ್ ನಿಧಿಗೆ ಇದೇ ರೀತಿಯಲ್ಲಿ ಜನಸಾಮಾನ್ಯರಿಂದ ಬಲವಂತವಾಗಿ ಹಣವನ್ನು ಸಂಗ್ರಹಿಸಲಾಗಿತ್ತು. ಸರಕಾರಿ ನೌಕರರು, ರೈಲ್ವೇ ಸಿಬ್ಬಂದಿಯಿಂದ ಅವರ ಅನುಮತಿಯಿಲ್ಲದೆಯೇ ವೇತನದಿಂದ ಹಣವನ್ನು ಕತ್ತರಿಸಲಾಗಿತ್ತು. ಇದೀಗ ರಾಷ್ಟ್ರಧ್ವಜದ ಹೆಸರಿನಲ್ಲಿ ಮತ್ತೊಮ್ಮೆ ಜನರಿಂದ ಹಣವನ್ನು ಕಿತ್ತುಕೊಳ್ಳಲು ಮುಂದಾಗಿದೆ. ನೋಟು ನಿಷೇಧ, ಲಾಕ್‌ಡೌನ್, ಪೆಟ್ರೋಲ್ ಬೆಲೆ, ಸಿಲಿಂಡರ್ ಬೆಲೆ ಹೀಗೆ ಹಲವು ಹೆಸರಿನಲ್ಲಿ ಈಗಾಗಲೇ ಜನರನ್ನು ದೋಚಿರುವ ಸರಕಾರ ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಕೂಡ ಜನರನ್ನು ದೋಚುವುದಕ್ಕೆ ಬಳಸುತ್ತಿರುವುದು ಈ ದೇಶದ ಸ್ವಾತಂತ್ರ್ಯಕ್ಕೆ ಮಾಡುವ ಅಪಮಾನವಾಗಿದೆ. ರಾಷ್ಟ್ರಧ್ವಜಗಳ ಮಾರಾಟ ದಂಧೆಯೇ ಒಂದು ಬೃಹತ್ ಅವ್ಯವಹಾರವಾಗಿ ಬದಲಾಗಿದೆ. ರಾಷ್ಟ್ರ ಧ್ವಜವೆನ್ನುವುದು ಜನರ ಸ್ವಾಭಿಮಾನ, ಆತ್ಮಾಭಿಮಾನದ ಸಂಕೇತ. ಅವುಗಳನ್ನೇ ಬಿಕರಿಗಿಟ್ಟು ಅಮೃತಮಹೋತ್ಸವವನ್ನು ಆಚರಿಸುವಷ್ಟು ದೇಶದ ಆರ್ಥಿಕತೆ ಪಾತಾಳ ತಲುಪಿದೆೆಯೇ? ಎಂದು ಜನಸಾಮಾನ್ಯರು ಕೇಳುತ್ತಿದ್ದಾರೆ. ಸರಕಾರ ಉತ್ತರಿಸಬೇಕಾಗಿದೆ.