varthabharthi


ಕರ್ನಾಟಕ

‘ಕಲ್ಯಾಣ ಕರ್ನಾಟಕ ಮಂಡಳಿ'ಗೆ ಸಮರ್ಥರನ್ನು ನೇಮಕ ಮಾಡಲು ಸಿದ್ದರಾಮಯ್ಯ ಆಗ್ರಹ

ವಾರ್ತಾ ಭಾರತಿ : 11 Aug, 2022

ಬೆಂಗಳೂರು, ಆ. 11: ‘ಕಲ್ಯಾಣ ಕರ್ನಾಟಕ' ಎಂದು ಹೆಸರು ಬದಲಾಯಿಸಿದ್ದನ್ನೆ ಸಾಧನೆ ಎಂದು ಬಿಜೆಪಿಯವರು ಓಡಾಡುತ್ತಿದ್ದಾರೆ. ಆದರೆ, 371(ಜೆ) ಅಡಿ ಈ ಜಿಲ್ಲೆಗಳನ್ನು ಏಕೆ ತರಲಾಗಿದೆ, ಅತ್ಯಂತ ಹಿಂದುಳಿದ ಈ ಜಿಲ್ಲೆಗಳಿಗೆ ವಿಶೇಷ ಪ್ರಾತಿನಿಧ್ಯ ನೀಡಲು ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ಮುಂತಾದ ಹಿರಿಯ ನಾಯಕರುಗಳು ಮತ್ತು ಈ ಭಾಗದ ಜನರು ಎಂತಹ ಹೋರಾಟ ನಡೆಸಿದ್ದರು ಎಂಬುದರ ತಿಳುವಳಿಕೆಯೇ ಇಲ್ಲದಂತೆ ಸರಕಾರ ವರ್ತಿಸುತ್ತಿದೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದ್ದಾರೆ.

ಗುರುವಾರ ಈ ಸಂಬಂಧ ಪ್ರಕಟನೆ ನೀಡಿರುವ ಅವರು, ‘ಕಲ್ಯಾಣ ಕರ್ನಾಟಕದ ಜನರಿಗೆ ಮಾಡುತ್ತಿರುವ ಅನ್ಯಾಯವನ್ನು ಸರಕಾರ ಕೂಡಲೇ ನಿಲ್ಲಿಸಬೇಕು. ನಮ್ಮ ಸರಕಾರದ ಅವಧಿಯಲ್ಲಿ 36 ಸಾವಿರಕ್ಕೂ ಹೆಚ್ಚಿನ ತರುಣ-ತರುಣಿಯರಿಗೆ ಉದ್ಯೋಗ ನೀಡಿದ್ದೆವು. ವಿಶೇಷ ಪ್ರಾತಿನಿಧ್ಯ ನೀಡಿ ಮೂಲಭೂತ ಸೌಲಭ್ಯ ಒದಗಿಸಿದ್ದೆವು. ಆದರೆ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು 3 ವರ್ಷವಾಯಿತು. ಆದರೆ, ಇದುವರೆಗೆ ಒಂದೇ ಒಂದು ಉದ್ಯೋಗವನ್ನೂ ಯುವಜನರಿಗೆ ನೀಡಿಲ್ಲ' ಎಂದು ಆರೋಪಿಸಿದ್ದಾರೆ.

‘ಸಿಎಂ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡಿದ್ದೇವೆಂದು ಹೇಳುತ್ತಿದ್ದಾರೆಯೆ ಹೊರತು, ಕಾಮಗಾರಿಗಳು ಅನುಷ್ಠಾನವಾಗಿ ಜನರ ಬಳಕೆಗೆ ದೊರೆತಿದ್ದು ನಾನು ಕಾಣೆ. ಸರಕಾರದ ಅರಾಜಕ ಆಡಳಿತ ಹಾಗೂ ತೀವ್ರಗೊಂಡ ಭ್ರಷ್ಟಾಚಾರದ ಕಾರಣದಿಂದ ಕಾಮಗಾರಿಗಳು ಅನುಷ್ಠಾನವಾಗದೆ ಹಾಗೆ ಉಳಿದಿವೆ. ಬಹಳಷ್ಟು ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನೇ ನೀಡಿಲ್ಲವೆಂಬ ದಾಖಲೆ ನನ್ನ ಬಳಿ ಇದೆ. 2019ರ 11 ಕಾಮಗಾರಿಗಳಿಗೆ, 2020ರ 102 ಕಾಮಗಾರಿಗಳಿಗೆ, 2021ರ 164 ಕಾಮಗಾರಿಗಳಿಗೆ ಒಟ್ಟು 277 ಕಾಮಗಾರಿಗಳಿಗೆ ಇದುವರೆಗೆ ಅಧಿಕಾರಿಗಳು ಆಡಳಿತಾತ್ಮಕ ಅನುಮೋದನೆ ನೀಡಿಲ್ಲ. ಇವುಗಳಲ್ಲಿ ಬಳ್ಳಾರಿ ಜಿಲ್ಲೆಯ 136, ಕಲ್ಬುರ್ಗಿ ಜಿಲ್ಲೆಯಲ್ಲಿ 70 ಕಾಮಗಾರಿಗಳಿಗೆ ಅನುಮೋದನೆ ಸಿಗದೆ 2-3 ವರ್ಷದಿಂದ ಹಾಗೆ ಇವೆ. ಪರಿಸ್ಥಿತಿ ಹೀಗಿರುವಾಗ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನೆ ನೀಡದಿದ್ದರೆ ಅವುಗಳು ಅನುಷ್ಠಾನವಾಗಿ ಸಾರ್ವಜನಿಕರು ಅವುಗಳನ್ನು ಬಳಕೆ ಮಾಡುವುದು ಯಾವಾಗ?' ಎಂದು ಅವರು ಪ್ರಶ್ನಿಸಿದ್ದಾರೆ.

‘ಬಿಜೆಪಿ ಸರಕಾರ ಉದ್ಯೋಗವನ್ನೂ ನೀಡುತ್ತಿಲ್ಲ. ಮೂಲಭೂತ ಸೌಲಭ್ಯವನ್ನೂ ಒದಗಿಸುತ್ತಿಲ್ಲ. ಕಮಿಷನ್ ದಂಧೆ ಮಾತ್ರ ನಿರಾತಂಕವಾಗಿದೆ. ರಾಜ್ಯದಲ್ಲಿಯೆ ಅತ್ಯಂತ ಹಿಂದುಳಿದ ಈ ಜಿಲ್ಲೆಗಳ ಮಕ್ಕಳು, ಜನರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಲಸೆ ಸಮಸ್ಯೆ ಇನ್ನೂ ನಿಂತಿಲ್ಲ. ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ವಹಿಸಿಲ್ಲ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಯಾವ ಉದ್ದೇಶದಿಂದ ಸಂವಿಧಾನದ 371 ಜೆ ಅನುಷ್ಠಾನ ಮಾಡಿತ್ತೊ ಅದರ ಮೂಲ ಆಶಯವನ್ನು ಬಿಜೆಪಿ ಸರಕಾರ ಸಂಪೂರ್ಣವಾಗಿ ಹಾಳುಗೆಡವಲು ಹೊರಟಿದೆ' ಎಂದು ಅವರು ಟೀಕಿಸಿದ್ದಾರೆ.

‘ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜನರಿಗೆ ಒಂದು ಮನೆಯನ್ನೂ ನೀಡಿಲ್ಲ. ನಮ್ಮ ಸರಕಾರದ ಅವಧಿಯಲ್ಲಿ ನೀಡಿದ್ದ ಮನೆ ನಿರ್ಮಾಣದ ಆದೇಶಗಳನ್ನು ರದ್ದು ಮಾಡಿದರು. ಆದರೆ ಈಗ ಮನೆ ಮನೆಯ ಬಾವುಟ ಹಾರಿಸಿ ಎಂದು ಹೇಳತೊಡಗಿದ್ದಾರೆ. ಮನೆಗಳೇ ಇಲ್ಲದ ಜನರು ಎಲ್ಲಿಂದ ಧ್ವಜ ಹಾರಿಸಬೇಕು? ಜನರನ್ನು ನೆಮ್ಮದಿಯಾಗಿರುವಂತೆ ನೋಡಿಕೊಳ್ಳುವುದು ರಾಷ್ಟ್ರಪ್ರೇಮವಾಗುತ್ತದೆ, ಜನರನ್ನು ನರಕಕ್ಕೆ ತಳ್ಳುವುದು ರಾಷ್ಟ್ರ ದ್ರೋಹವಾಗುತ್ತದೆ ಎಂಬ ಕನಿಷ್ಠ ತಿಳುವಳಿಕೆ ಇಲ್ಲದಂತೆ ಬಿಜೆಪಿಯವರು ವರ್ತಿಸುತ್ತಿದ್ದಾರೆ' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಾಕಿಯಾಗಿರುವ ಎಲ್ಲ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಬೇಕು. ಬಜೆಟ್ ಗಾತ್ರಕ್ಕೆ ಅನುಗುಣವಾಗಿ ಈ ಭಾಗಕ್ಕೆ ಅನುದಾನ ಒದಗಿಸಬೇಕು. ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು. ವಿಶೇಷವಾಗಿ ಕೈಗಾರಿಕೆಗಳನ್ನು ಸ್ಥಾಪಿಸಿ ವಲಸೆ ತಪ್ಪಿಸಬೇಕು. ಅಪೌಷ್ಟಿಕತೆಯಿಂದ ಬಳಲುತ್ತಿರುವವರನ್ನು ಗುರುತಿಸಿ ಅವರಿಗೆ ಸಮರ್ಪಕ ಆಹಾರ, ಔಷಧ ಇತ್ಯಾದಿಗಳನ್ನು ಒದಗಿಸಬೇಕು, ಸಮರ್ಪಕವಾದ ಮೂಲಭೂತ ಸೌಲಭ್ಯಗಳನ್ನು ಯಾವುದೇ ಸಬೂಬು ಹೇಳದೆ ಒದಗಿಸಬೇಕು ಹಾಗೂ ಸಮರ್ಥವಾದವರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಬೇಕು' ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

‘ಧ್ವಜ ಖರೀದಿಸದಿದ್ದರೆ ಆಹಾರ ಧಾನ್ಯ ಕೊಡುವುದಿಲ್ಲವೆಂದು ಸರಕಾರ ಹೇಳುತ್ತಿವೆ. ಇದು ಅಮಾನವೀಯ ವರ್ತನೆ ಎಂದು ಬಿಜೆಪಿಯ ವರಣ್ ಗಾಂಧಿ ಹೇಳಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದ ಬಿಜೆಪಿಯ ವಂಶಸ್ಥರು ಈಗ ರಾಷ್ಟ್ರ ಧ್ವಜಕ್ಕೂ ಅಪಚಾರ ಮಾಡುತ್ತಿದ್ದಾರೆ. ಒಂದು ಕಡೆ ಲಂಚ ನಿರಾತಂಕವಾಗಿ ನಡೆಯುತ್ತಿದೆ. ಅಭಿವೃದ್ಧಿಯ ವಿಚಾರದಲ್ಲಿ ರಾಜ್ಯ ಹಿಂದು ಹಿಂದಕ್ಕೆ ಹೋಗುತ್ತಿದೆ. ಬಿಜೆಪಿ ಕೇವಲ ಘೋಷಣೆಗಳಲ್ಲಿ ಕಾಲ ತಳ್ಳುತ್ತಿದೆ. ತನ್ನ ಬಕಾಸುರ ಜೇಬುಗಳನ್ನು ಮಾತ್ರ ಕೊಬ್ಬಿಸಿಕೊಳ್ಳುತ್ತಿದೆ'

-ಸಿದ್ದರಾಮಯ್ಯ ವಿಪಕ್ಷ ನಾಯಕ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)