varthabharthi


ಕರ್ನಾಟಕ

ಕಲಬುರಗಿ: ‘ಸ್ವಾತಂತ್ರ್ಯದ ಅಮೃತ ಮಹೋತ್ಸ'ವ ನಡಿಗೆಯಲ್ಲಿ 2 ಸಾವಿರ ಶಾಲಾ ಮಕ್ಕಳು ಭಾಗಿ

ವಾರ್ತಾ ಭಾರತಿ : 11 Aug, 2022

ಕಲಬುರಗಿ, ಆ.11: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಗುರುವಾರ ಕಲಬುರಗಿ ನಗರದ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಗತ್ ವೃತ್ತದವರೆಗೆ ನಡೆದ ‘ಸ್ವಾತಂತ್ರ್ಯದ ನಡಿಗೆ, ಅಮೃತ ಮಹೋತ್ಸವದೆಡೆಗೆ’ ನಡಿಗೆಯಲ್ಲಿ ಸುಮಾರು 2 ಸಾವಿರ ಶಾಲಾ ಮಕ್ಕಳು ಸಂಭ್ರಮದಿಂದ ಭಾಗವಹಿಸಿದ್ದರು.

ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್ ಅವರು ತ್ರಿವರ್ಣ ಧ್ವಜ ಬಣ್ಣದ ಬಲೂನ್‍ಗಳನ್ನು ಆಕಾಶದಲ್ಲಿ ತೇಲಿ ಬಿಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ನಮ್ಮ ಅನೇಕ ಪೂರ್ವಜರ ತ್ಯಾಗ ಬಲಿದಾನದ ಫಲವಾಗಿ ದೊರೆತ ಸ್ವಾತಂತ್ರ್ಯಕ್ಕೆ ಇದೀಗ ಅಮೃತ ಮಹೋತ್ಸವದ ಸಂಭ್ರಮ. ಸ್ವಾತಂತ್ರ್ಯಕ್ಕೆ ಪ್ರಾಣವನ್ನೇ ಲೆಕ್ಕಿಸದೇ ಹೋರಾಡಿದ ಮಹನೀಯರನ್ನು ಸ್ಮರಿಸುವ ಮತ್ತು ರಾಷ್ಟ್ರ ಪ್ರೀತಿ ಹೆಚ್ಚಿಸಲು ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ.ಬದೋಲೆ ಮಾತನಾಡಿ, ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಆ.13 ರಿಂದ 15ರವರೆಗೆ ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಬೇಕೆಂದು ಕರೆ ನೀಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಆಯುಕ್ತೆ ಗರಿಮಾ ಪನ್ವಾರ್ ಮಾತನಾಡಿ, ಸಶಕ್ತ ಭಾರತ ನಿರ್ಮಾಣಕ್ಕೆ ಎಲ್ಲರು ಶ್ರಮಿಸಬೇಕು. ಸ್ವಾತಂತ್ರ್ಯದ ನಡಿಗೆಯಲ್ಲಿ ಭಾಗವಹಿಸಲು ಮಕ್ಕಳು ರಾಷ್ಟ್ರನಾಯಕರ ವೇಷಭೂಷಣ ಧರಿಸಿ ಬಂದಿರುವುದು ಸಂತಸ ತಂದಿದೆ ಎಂದರು.

ನಡಿಗೆ ಜಾಥಾ ಉದ್ದಕ್ಕೂ ರಾಷ್ಟ್ರನಾಯಕರ ವೇಷಭೂಷಣ ಧರಿಸಿದ ಮಕ್ಕಳು, ಕೈಯಲ್ಲಿ ಧ್ವಜ, ಧ್ವಜ ಬಣ್ಣದ ಬಲೂನ್‍ಗಳನ್ನು ಹಿಡಿದು ರಾಷ್ಟ್ರಭಕ್ತಿ, ರಾಷ್ಟ್ರೀಯತೆ ಮೆರೆದರು. ಲಂಬಾಣಿ ಮಕ್ಕಳ ನೃತ್ಯ, ಡೊಳ್ಳು ಕುಣಿತ ನೃತ್ಯ ಗಮನ ಸೆಳೆಯಿತು. 

ಜಾಥಾದಲ್ಲಿ ಅಪರ ಶಿಕ್ಷಣ ಆಯುಕ್ತಾಲಯದ ಸಹ ನಿರ್ದೇಶಕ ವಿಜಯಕುಮಾರ್, ಡಿ.ಡಿ.ಪಿ.ಐ ಸಕ್ರೆಪ್ಪಗೌಡ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕ್ರಮ್ಮ ಡವಳಗಿ, ವೀರಣ್ಣಾ ಬೊಮ್ಮನಳ್ಳಿ, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಸೇರಿದಂತೆ ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)