ಗೋವುಗಳ ಮಾರಣ ಹೋಮ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಬಿಜೆಪಿ ಮತ್ತು ಸಂಘಪರಿವಾರ ದೇಶಾದ್ಯಂತ ಹಮ್ಮಿಕೊಂಡಿರುವ ನಕಲಿ ಗೋರಕ್ಷಣೆಯನ್ನು ಅಣಕ ಮಾಡುವಂತೆ ಗುಜರಾತ್, ರಾಜಸ್ಥಾನ, ಹರ್ಯಾಣಗಳಲ್ಲಿ ಗೋವುಗಳ ಮಾರಣ ಹೋಮ ನಡೆಯುತ್ತಿದೆ. ಬೀದಿ ಬದಿಯಲ್ಲಿ, ರೈತರ ಹಟ್ಟಿಗಳಲ್ಲಿ, ಗೋಶಾಲೆಗಳಲ್ಲಿ ಗೋವುಗಳು ಪ್ರಾಣ ತೆರುತ್ತಿವೆ. ಸ್ಥಳೀಯ ಸಂಸ್ಥೆಗಳು ಕೈ ಚೆಲ್ಲಿವೆ ಮಾತ್ರವಲ್ಲ, ಸತ್ತ ಗೋವುಗಳನ್ನು ವಿಲೇವರಿ ಮಾಡುವಲ್ಲೂ ಅವುಗಳು ವಿಫಲವಾಗಿವೆ. ಪರಿಣಾಮವಾಗಿ ಗೋವುಗಳ ಮೃತದೇಹಗಳನ್ನು ನಾಯಿಗಳು ಎಳೆದಾಡಿ ತಿನ್ನುತ್ತಿವೆ. ಈ ಗೋವುಗಳ ಮಾರಣ ಹೋಮಕ್ಕೆ 'ಲಿಂಪಿ ಸ್ಕಿನ್ ಡಿಸೀಸ್' ಕಾರಣವೆಂದು ಸರಕಾರ ಹೇಳುತ್ತಿದೆ. ಆದರೆ ರೋಗ ಇಲ್ಲಿ ನೆಪ. ಗೋವುಗಳನ್ನು ಇಂತಹದೊಂದು ಭೀಕರ ಸ್ಥಿತಿಗೆ ತಳ್ಳುವಲ್ಲಿ, ಸರಕಾರ ಗೋವುಗಳ ಹೆಸರಿನಲ್ಲಿ ನಡೆಸಿದ ರಾಜಕಾರಣವೂ ಮುಖ್ಯ ಕಾರಣವಾಗಿದೆ.
ಭಾರತದಲ್ಲಿ ಗೋಸಾಕಣೆ ಅರ್ಥವ್ಯವಸ್ಥೆಯ ಒಂದು ಭಾಗವಾಗಿತ್ತು. ಇದು ಕೇವಲ ಹೈನುಗಾರಿಕೆಯ ಕಾರಣಕ್ಕಾಗಿ ಮಾತ್ರ ಉಳಿದುಕೊಂಡು ಬಂದಿರುವುದಲ್ಲ. ಬೇರೆ ಬೇರೆ ಉದ್ಯಮಗಳೊಂದಿಗೆ ಗೋಸಾಕಣೆ ತಳಕು ಹಾಕಿಕೊಂಡಿರುವುದರಿಂದಲೇ, ಗೋಸಾಕಣೆಯನ್ನು ರೈತರು ಲಾಭದಾಯಕವಾಗಿ ನಡೆಸಿಕೊಂಡು ಬಂದಿದ್ದಾರೆ. ಹಾಲು ನೀಡದ ಗೋವುಗಳನ್ನು ಬೇರೆ ಇತರ ಉದ್ಯಮಗಳು ಅವಲಂಬಿಸುತ್ತಿದ್ದುದರಿಂದ, ಈ ಗೋವುಗಳು ರೈತರಿಗೆ ನಷ್ಟವನ್ನುಂಟು ಮಾಡುತ್ತಿರಲಿಲ್ಲ. ಅವರ ಇನ್ನಿತರ ವೆಚ್ಚಗಳನ್ನು ಸರಿದೂಗಿಸಲು ಹಾಲು ನೀಡದ ಗೋವುಗಳನ್ನು ಅತ್ಯುತ್ತಮ ಬೆಲೆಗೆ ಮಾರುತ್ತಿದ್ದರು. ಗೋವಿನ ಚರ್ಮ, ಮೂಳೆಗಳು, ಮಾಂಸಗಳು ಇವೆಲ್ಲವುಗಳಿಗೆ ಬೇರೆ ಬೇರೆ ರೂಪಗಳಲ್ಲಿ ಬೇಡಿಕೆಗಳಿದ್ದವು. ಗೋಮಾಂಸಾಹಾರಿಗಳು ಹೈನೋದ್ಯಮದ ಪ್ರಮುಖ ಭಾಗವಾಗಿದ್ದರು. ಇವರೆಲ್ಲರೂ ಒಂದು ಸರಪಣಿಯಂತೆ ಗೋಸಾಕಣೆಯನ್ನು ಸುತ್ತಿಕೊಂಡು ಕಾಪಾಡಿಕೊಂಡು ಬರುತ್ತಿದ್ದರು.
ಭಾರತದಲ್ಲಿ ಗೋವು ಅರ್ಥಶಾಸ್ತ್ರದ ಪ್ರಮುಖ ಭಾಗವಾಗಿತ್ತೇ ಹೊರತು, ಧರ್ಮ ಶಾಸ್ತ್ರದ ಭಾಗವಾಗಿರಲಿಲ್ಲ. ಗೋಸಾಕಣೆ ಮತ್ತು ಉದ್ಯಮದ ಜೊತೆಗೆ ಯಾವ ಸಂಬಂಧವೂ ಇಲ್ಲದ ಜನರು ಧರ್ಮದ ಹೆಸರಿನಲ್ಲಿ ಯಾವಾಗ ಗೋಸಾಕಣೆಯಲ್ಲಿ ಹಸ್ತಕ್ಷೇಪ ನಡೆಸುವುದಕ್ಕೆ ಆರಂಭಿಸಿದರೋ ಅಲ್ಲಿಂದ ಭಾರತದ ಹೈನೋದ್ಯಮದ ಮೇಲೆ ಭಾರೀ ದುಷ್ಪರಿಣಾಮಗಳು ಆರಂಭವಾದವು. ಗೋವುಗಳ ರಕ್ಷಣೆಯ ಹೆಸರಿನಲ್ಲಿ ಮೊತ್ತ ಮೊದಲು ಗ್ರಾಮೀಣ ಪ್ರದೇಶದ ರೈತರ ಕೈಯಲ್ಲಿದ್ದ ಗೋವುಗಳ ಮೇಲಿರುವ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ತಮ್ಮ ಗೋವುಗಳನ್ನು ಯಾರಿಗೆ ಮಾರಾಟ ಮಾಡಬೇಕು, ಮಾಡಬಾರದು ಎನ್ನುವುದನ್ನು ಗೋರಕ್ಷಣೆಯೊಂದಿಗೆ ಯಾವ ಸಂಬಂಧವೂ ಇಲ್ಲದ ಜನರು ನಿರ್ಧರಿಸತೊಡಗಿದರು. ಪರಿಣಾಮವಾಗಿ ಗ್ರಾಮೀಣ ಪ್ರದೇಶದಲ್ಲಿ ಗೋಸಾಕಣೆ ಮಾಡಿ ಬದುಕು ಕಟ್ಟಿಕೊಂಡ ಲಕ್ಷಾಂತರ ಜನರ ಬದುಕು ಬೀದಿ ಪಾಲಾಯಿತು. ಇಂದು ಗ್ರಾಮೀಣ ಪ್ರದೇಶದ ರೈತರು ತಾವು ಸಾಕಿದ ಹಾಲು ನೀಡದ ಗೋವುಗಳನ್ನು ಸಂತೆಗಳಲ್ಲಿ ಮಾರಾಟ ಮಾಡಲು ಸಾಧ್ಯವಾಗದೆ ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಅವುಗಳನ್ನು ಅನಿವಾರ್ಯವಾಗಿ ಬೀದಿಗಳಲ್ಲಿ ಬಿಡುತ್ತಿದ್ದಾರೆ.
ಆರಂಭದಲ್ಲಿ ಸರಕಾರದ ಜಾನುವಾರು ಮಾರಾಟ ನೀತಿ ರೈತರ ಮೇಲೆ ಪರಿಣಾಮ ಬೀರಿದ್ದರೆ ಈಗ ಅದರ ದುಷ್ಪರಿಣಾಮವನ್ನು ನೇರವಾಗಿ ಗೋವುಗಳೇ ಅನುಭವಿಸುತ್ತಿವೆ. ಇಂದು ದೇಶಾದ್ಯಂತ 'ಗೋಶಾಲೆಗಳು' ಎನ್ನುವುದು ಅಕ್ರಮಗಳ ಬೀಡಾಗಿವೆ. ಗೋವುಗಳ ಹೆಸರಿನಲ್ಲಿ ಯಾರ್ಯಾರೋ ಲಕ್ಷಾಂತರ ಹಣವನ್ನು ಬಾಚಿಕೊಳ್ಳುತ್ತಿದ್ದಾರೆ. ಲಾಭದಾಯಕವಲ್ಲದ ಅನುಪಯುಕ್ತ ಗೋವುಗಳನ್ನು ಸಾಕುವ ಹೊಣೆ ಸರಕಾರದ ಮೇಲೆ ಬಿದ್ದಿದೆ. ಜನರ ತೆರಿಗೆಯ ಹಣವನ್ನು ಈ ಗೋಶಾಲೆಗಳಿಗೆ ಸುರಿಯಲಾಗುತ್ತಿದೆ. ಆದರೆ ಇತ್ತ ಗೋಶಾಲೆಗಳಲ್ಲಿ ಸಾಲು ಸಾಲಾಗಿ ಗೋವುಗಳು ಸಾಯುತ್ತಿವೆ. ಅಥವಾ ಕಾಣೆಯಾಗುತ್ತಿವೆ. ಅವುಗಳೆಲ್ಲ ಎಲ್ಲಿಗೆ ಹೋಗುತ್ತಿವೆ ಎನ್ನುವುದನ್ನು ಜನರು ಪ್ರಶ್ನಿಸುವುದಕ್ಕೂ ಅವಕಾಶವಿಲ್ಲದಂತಾಗಿದೆ. ಇಂದು ಪ್ರತೀದಿನ ನೂರಾರು ಗೋವುಗಳು ಸರಿಯಾದ ವ್ಯವಸ್ಥೆಯಿಲ್ಲದೆ, ಹಸಿವಿನಿಂದ ಗೋಶಾಲೆಗಳಲ್ಲಿ ಚಿತ್ರಹಿಂಸೆ ಅನುಭವಿಸುತ್ತಿವೆ. ಅಷ್ಟೇ ಅಲ್ಲ, ತಮ್ಮ ಅನುಪಯುಕ್ತ ಹಸುಗಳನ್ನು ಮಾರಲೂ ಆಗದೆ, ಸಾಕಲೂ ಆಗದೆ ರೈತರು ಅವುಗಳನ್ನು ಬೀದಿಗಳಲ್ಲಿ ಬಿಡುತ್ತಿದ್ದಾರೆ. ರಸ್ತೆಗಳಲ್ಲಿ ಹಸುಗಳ ಕಾರಣದಿಂದಲೇ ಸಾಲು ಸಾಲಾಗಿ ಅಪಘಾತಗಳು ಸಂಭವಿಸುತ್ತಿವೆ.
ಹರ್ಯಾಣದಲ್ಲಿ ಕಳೆದ ಐದು ವರ್ಷಗಳಲ್ಲಿ ಜಾನುವಾರುಗಳಿಂದ 3000 ಕ್ಕೂ ಅಧಿಕ ಅವಘಡಗಳು ಸಂಭವಿಸಿವೆ ಎನ್ನುವುದನ್ನು ಸರಕಾರಿ ಅಂಕಿಅಂಶಗಳು ಹೇಳುತ್ತಿವೆ. ಒಟ್ಟು ಅವಘಡಗಳಲ್ಲಿ 900ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಗೋವುಗಳ ಕುರಿತಂತೆ ಸರಕಾರದ ಅವೈಜ್ಞಾನಿಕ ನಿರ್ಧಾರಗಳಿಗಾಗಿ ಮನುಷ್ಯ ತನ್ನ ಪ್ರಾಣವನ್ನು ಬಲಿಕೊಡಬೇಕಾಗಿದೆ. ಅಷ್ಟೇ ಅಲ್ಲ, ಇತ್ತ ಗೋವುಗಳೂ ಹಿಂದೆಂದಿಗಿಂತಲೂ ಅಧಿಕ ಪ್ರಮಾಣ ಬೀದಿಗಳಲ್ಲಿ ಸಾಯುತ್ತಿವೆ ಎನ್ನುವುದು ಬೆಳಕಿಗೆ ಬರುತ್ತಿವೆ. ಅವಘಡಗಳಲ್ಲಿ ಸಾಯುತ್ತಿರುವ ಗೋವುಗಳ ಬಗ್ಗೆ ಸರಕಾರದ ಬಳಿ ಯಾವುದೇ ಅಂಕಿಅಂಶಗಳು ಇಲ್ಲ. ಸೂಕ್ತವಾದ ಆರೋಗ್ಯ ಪಾಲನೆಗಳಿಲ್ಲದ ಕಾರಣದಿಂದಾಗಿ ಗುಜರಾತ್, ಹರ್ಯಾಣ, ರಾಜಸ್ಥಾನಗಳಲ್ಲಿ ರೋಗಪೀಡಿತ ಹಸುಗಳು ರಸ್ತೆಯಲ್ಲೇ ಸಾಯಲಾರಂಭಿಸಿವೆ. ಕಳೆದ ಒಂದು ತಿಂಗಳಲ್ಲಿ ಈ ಮೂರೂ ರಾಜ್ಯಗಳಲ್ಲಿ 5,000ಕ್ಕೂ ಅಧಿಕ ಗೋವುಗಳು ರೋಗ ಪೀಡಿತಗೊಂಡು ಸತ್ತಿವೆ. ಮತ್ತು ಈ ಸತ್ತ ಗೋವುಗಳೇ ಸಾರ್ವಜನಿಕರಿಗೆ ಸಮಸ್ಯೆಯಾಗಿ ಕಾಡುತ್ತಿವೆ. ಇವು ಇನ್ನಿತರ ರೋಗಗಳನ್ನು ಹರಡುವುದಕ್ಕೆ ಪರೋಕ್ಷ ಕಾರಣವಾಗುತ್ತಿವೆ ಎಂದು ಸಾರ್ವಜನಿಕರು ಅಲವತ್ತುಕೊಳ್ಳುತ್ತಿದ್ದಾರೆ.
ಸರಕಾರದ ಜಾನುವಾರು ಮಾರಾಟ ನೀತಿಯಿಂದಾಗಿ ಈಗಾಗಲೇ ನಷ್ಟ ಅನುಭವಿಸಿರುವ ರೈತರ ಸ್ಥಿತಿ ತೀರಾ ದಯನೀಯವಾಗಿದೆ. ಒಂದೆಡೆ ತಾವು ಸಾಕಿದ ಅನುಪಯುಕ್ತ ಹಸುಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಬೀದಿಯಲ್ಲಿ ಅನಿವಾರ್ಯವಾಗಿ ಬಿಡಬೇಕಾದ ಸ್ಥಿತಿ. ಇನ್ನೊಂದೆಡೆ ಬೀದಿ ಬೀದಿಗಳಲ್ಲಿ ಹರಡಿರುವ ರೋಗ ಹಟ್ಟಿಗಳನ್ನೂ ಪ್ರವೇಶಿಸಿ, ಉಪಯುಕ್ತ ಹಸುಗಳನ್ನು ಕೂಡ ಬಲಿ ತೆಗೆದುಕೊಳ್ಳುತಿದೆ. ಇದು ರೈತರ ಗಾಯಗಳ ಮೇಲೆ ಬರೆ ಎಳೆದಂತಾಗಿದೆ. ಹೀಗೆ ರೋಗಗಳು ಭೀಕರವಾಗಿ ಹಬ್ಬಿದರೆ ಅಳಿದುಳಿದ ಗ್ರಾಮೀಣ ಪ್ರದೇಶದ ಹೈನೋದ್ಯಮ ಸಂಪೂರ್ಣ ನಾಶವಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸರಕಾರಕ್ಕೂ ಗ್ರಾಮೀಣ ಹೈನೋದ್ಯಮ ಉಳಿಯುವುದು ಬೇಕಾಗಿಲ್ಲ. ಅದರ ಗೋರಿಯ ಮೇಲೆ ಬೃಹತ್ ಕಾರ್ಪೊರೇಟ್ ಹೈನೋದ್ಯಮವನ್ನು ಸ್ಥಾಪಿಸುವುದು ಸರಕಾರದ ಉದ್ದೇಶ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇದರಿಂದಾಗಿ ಇಡೀ ಹೈನೋದ್ಯಮವನ್ನು ಕೈವಶ ಮಾಡಿಕೊಂಡು, ವಿದೇಶಗಳಿಗೆ ಬೃಹತ್ ಗೋಮಾಂಸವನ್ನು ಮಾರುವ ಹಕ್ಕುಗಳನ್ನು ಈ ಕಾರ್ಪೊರೇಟ್ ಸಂಸ್ಥೆಗಳು ತಮ್ಮದಾಗಿಸಿಕೊಳ್ಳುತ್ತವೆ. ಜಾನುವಾರು ಹತ್ಯೆ ನಿಷೇಧ ಕಾಯ್ದೆಯ ಉದ್ದೇಶವೇ ಗ್ರಾಮೀಣ ಹೈನೋದ್ಯಮವನ್ನು ನಷ್ಟಕ್ಕೀಡು ಮಾಡಿ, ನಿಧಾನಕ್ಕೆ ಕಾರ್ಪೊರೇಟ್ ಹೈನೋದ್ಯಮಗಳಿಗೆ ಜಾಗ ಮಾಡಿಕೊಡುವುದಾಗಿದೆ. ಇದೀಗ ಹೊಸದಾಗಿ ಬಂದ ಕಾಯಿಲೆಯಿಂದ ಗೋವುಗಳ ಮಾರಣ ಹೋಮ, ಅದರ ಕೆಲಸವನ್ನು ಇನ್ನಷ್ಟು ಸುಲಭ ಮಾಡಿಕೊಡುತ್ತಿದೆ. ಒಟ್ಟಿನಲ್ಲಿ, ಗೋರಕ್ಷಣೆಯ ಮರೆಯಲ್ಲೇ ಗೋವುಗಳ ಮಾರಣ ನಡೆಯುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.