ಆನೆಗಳ ಮಾತು ಆಲಿಸಬೇಕಿದೆ
ಇಂದು ವಿಶ್ವ ಆನೆಗಳ ದಿನ
ಸರಿಸುಮಾರು 20 ಅಡಿ ಉದ್ದ, 6 ಸಾವಿರ ಕೆಜಿಯವರೆಗೂ ಬೆಳೆಯಬಲ್ಲ ಅತಿದೊಡ್ಡ ಪ್ರಾಣಿಯಾದ ಆನೆ ಅಪಾಯದಲ್ಲಿದೆ ಎಂದರೆ ಆಶ್ಚರ್ಯವಾಗುತ್ತದೆ. ದಂತಗಳಿಗಾಗಿ, ಮಾನವನ ಜೊತೆಗಿನ ಸಂಘರ್ಷದಿಂದಾಗಿ ಪ್ರತೀ ದಿನ ಪ್ರಾಣ ಕಳೆದುಕೊಳ್ಳುತ್ತಿದೆ. ಇಂದು ವಿಶ್ವ ಆನೆಗಳ ದಿನ.(World Elephant Day) ಅವುಗಳ ಬದುಕು ಅವುಗಳಿಗೆ ಮಾತ್ರವಲ್ಲ, ಮನುಕುಲಕ್ಕೂ ಅಗತ್ಯ ಎಂಬುದನ್ನು ಮರೆಯದಿರೋಣ.
ಭೂಮೇಲ್ಮೈನಲ್ಲಿ ವಾಸಿಸುವ ಅತಿದೊಡ್ಡ ಪ್ರಾಣಿಯಾದ ಆನೆಯು ಪ್ರತಿದಿನವೂ ಸಾಯುತ್ತಿದೆ, ಒಂದೆರಡಲ್ಲ ಬರೋಬ್ಬರಿ ಅಂದಾಜು 54 ಆನೆಗಳು ದಿನಂಪ್ರತಿ ಸಾಯುತ್ತಿವೆ. ಕಾರಣ, ನಾವು ಮತ್ತೊಂದು ಜೀವಿಗಳ ಮಾತನ್ನು ಆಲಿಸಲಾರದಷ್ಟು ಕಿವುಡರಾಗಿದ್ದೇವೆ. ಆನೆಯಂತಹ ಅಗಾಧ ಗಾತ್ರದ ಜೀವಿಯ ಮಾತುಗಳೇ ನಮ್ಮ ಕಿವಿಗೆ ಕೇಳಿಸುತ್ತಿಲ್ಲ. ಸಹಜೀವಿಗಳನ್ನು ಕೊಂದು ಬದುಕುವುದೇ ಧ್ಯಾನವಾಗಿಸಿಕೊಳ್ಳುತ್ತಿರುವ ಮಾನವನಿಗೆ ಯಾವುದೂ ಕೇಳಿಸುತ್ತಿಲ್ಲ. ಅಂದಹಾಗೆ ಈ ದಿನ, ಆ.12 ‘ವಿಶ್ವ ಆನೆಗಳ ದಿನ’.
ಆಲ್ಬರ್ಟ್ ಐನ್ಸ್ಟೈನ್ ಒಮ್ಮೆ ಈ ರೀತಿ ಹೇಳಿದ್ದನಂತೆ, ಒಂದೊಮ್ಮೆ ಜಗತ್ತಿನಲ್ಲಿನ ಜೇನುನೋಣಗಳು ನಶಿಸಿಹೋದರೆ, ಅಂತಹ ಜಗತ್ತಿನಲ್ಲಿ ಮಾನವನು ಕೇವಲ ನಾಲ್ಕು ವರ್ಷಗಳವರೆಗೆ ಮಾತ್ರ ಜೀವಿಸಬಲ್ಲ ಎಂದು. ಒಂದು ಸಣ್ಣಜೀವಿಯಾದ ಜೇನುನೊಣಗಳ ನಾಶವು ಮನುಷ್ಯನ ಅವನತಿಯನ್ನು ಕೇವಲ ನಾಲ್ಕುವರ್ಷಗಳಲ್ಲಿ ಸಂಭವಿಸುವಂತೆ ಮಾಡುತ್ತದೆ ಎಂದಾದರೆ, ಆನೆಗಳ ಅವನತಿಯು ನಮ್ಮ ಅಸ್ತಿತ್ವವನ್ನು ಅಲ್ಲಾಡಿಸದಿರಲು ಸಾಧ್ಯವೇ?
ಇಂದು ಇಡೀ ಭೂಮಿಯಲ್ಲಿ ಅಂದಾಜು 5 ಲಕ್ಷ ಆನೆಗಳಿರಬಹುದು, ಅವುಗಳಲ್ಲಿ ಅತಿ ಹೆಚ್ಚು ಆನೆಗಳು ಆಫ್ರಿಕಾ ಖಂಡದಲ್ಲಿದ್ದರೆ ಉಳಿದವು ಏಶ್ಯ ಖಂಡದಲ್ಲಿದೆ, ಇವೆರಡು ಖಂಡಗಳಲ್ಲಿ ಮಾತ್ರ ಆನೆಗಳು ತಮ್ಮ ಸ್ವಾಭಾವಿಕ ನೆಲೆಯನ್ನು ಹೊಂದಿವೆ. ಆಫ್ರಿಕಾ ಖಂಡದ ಬೋಟ್ಸ್ವಾನ ದೇಶವು ಆಫ್ರಿಕಾ ಆನೆಗಳ ಶೇ.70ರಷ್ಟನ್ನು ಹೊಂದಿದ್ದರೆ, ಏಶ್ಯದ ಆನೆಗಳಲ್ಲಿ ಅತಿಹೆಚ್ಚು, ಅಂದರೆ ಶೇ.50ರಷ್ಟನ್ನು ಹೊಂದಿರುವುದು ಭಾರತ.
ಭಾರತ ಅಥವಾ ಏಶ್ಯದ ಇತರ ದೇಶಗಳ ಆನೆಗಳಿಗೆ ಹೆಚ್ಚು ಸಮಸ್ಯೆಯಾಗಿರುವುದು ಅವುಗಳ ಆವಾಸಸ್ಥಾನದ ವ್ಯಾಪ್ತಿ ವಿಪರೀತ ಕುಗ್ಗುತ್ತಿರುವುದರಿಂದ. ಈಗಾಗಲೇ ಅಂದಾಜು ಶೇ.70ರಷ್ಟು ಆನೆ ಓಡಾಟದ ಜಾಗಗಳು ಮಾಯವಾಗಿದ್ದು, ನಿತ್ಯ ಮಾನವನೊಂದಿಗೆ ಸಂಘರ್ಷ ಮಾಡುವ ಪರಿಸ್ಥಿತಿಯು ಏಶ್ಯದ ಆನೆಗಳಿಗೆ ಬಂದೊದಗಿದೆ. ನಮ್ಮ ರಾಜ್ಯದ ಮಡಿಕೇರಿ ಜಿಲ್ಲೆಯಲ್ಲಂತೂ ದಿನನಿತ್ಯ ಆನೆಗಳ ಕುರಿತು ಮಾತನಾಡದೆ ದಿನ ಸಾಗುವುದೇ ಇಲ್ಲ ಎಂಬಂತಾಗಿದೆ. ಆಫ್ರಿಕಾದ ಆನೆಗಳಿಗೆ ಜಾಗದ ಸಮಸ್ಯೆ ಇಲ್ಲವೆಂದೇನಲ್ಲ, ಆದರೆ ಅದಕ್ಕಿಂತ ಹೆಚ್ಚಿನದಾದ ಅಪಾಯ ಎದುರಾಗಿರುವುದು ದಂತಗಳಿಗಾಗಿ ಬೇಟೆಯಾಡುವ ಕಳ್ಳ ಸಾಗಣೆದಾರರಿಂದ, ಅಂತರ್ರಾಷ್ಟ್ರೀಯ ಕಳ್ಳಮಾರುಕಟ್ಟೆಯಲ್ಲಿ ಆನೆದಂತಗಳಿಗೆ ಇರುವ ಅಗಾಧ ಬೆಲೆಯಿಂದ. 1989ರಲ್ಲಿ ನಡೆದ ಅಳಿವಿನಂಚಿನಲ್ಲಿರುವ ಪ್ರಭೇದಗಳ ಅಂತರ್ರಾಷ್ಟ್ರೀಯ ವ್ಯಾಪಾರ ಕುರಿತ ಸಮಾವೇಶ(CITES)ನಲ್ಲಿ ಆನೆದಂತ ಮಾರಾಟದ ಕುರಿತು ಹಲವು ನಿಬಂಧನೆಗಳನ್ನು ಜಾರಿಗೆ ತಂದರೂ ಇಂದಿಗೂ ಪ್ರತೀವರ್ಷ 20 ಸಾವಿರಕ್ಕೂ ಅಧಿಕ ಆನೆಗಳು ಮಾನವನ ಧನದಾಹಕ್ಕೆ ಬಲಿಯಾಗುತ್ತಿವೆ.
ಆಫ್ರಿಕಾ ಖಂಡದಲ್ಲಿ ಸುಮಾರು 100 ವರ್ಷಗಳ ಹಿಂದೆ ಅಂದಾಜು 1 ಕೋಟಿ 20ಲಕ್ಷದಷ್ಟಿದ್ದ ಆನೆಗಳ ಸಂಖ್ಯೆ ಇಂದು 4.5 ಲಕ್ಷದ ಆಸುಪಾಸಿಗೆ ಕುಸಿದಿದೆ ಎಂದಾಗ, ಏಶ್ಯದಲ್ಲಿ ಹೆಚ್ಚೆಂದರೆ 50 ಸಾವಿರ ಆನೆಗಳಷ್ಟೇ ಬದುಕಿರುವುದು ಎಂದು ತಿಳಿದಾಗ ನಿಮಗೆ ಆಘಾತವಾಗಬಹುದು ಅಲ್ಲವೇ. ಆದರೆ ಇದು ವಾಸ್ತವ ಸತ್ಯವಾಗಿದ್ದು, ಆನೆಗಳ ಬದುಕು ಸಂಘರ್ಷದ ಕಥೆಯಾಗಿ ಸಾಗುತ್ತಿದೆ. ಬಲಿಷ್ಠವಾಗಿದ್ದರೂ ಬದುಕಲು ಮಾನವನೆದುರು ಅಂಗಲಾಚುವಂತಾಗಿದೆ.
ಆನೆಗಳ ಇಂದಿನ ಸಂಕಷ್ಟದ ಬದುಕು ನಮ್ಮ ಭವಿಷ್ಯವನ್ನು ನರಕವಾಗಿಸುವುದಂತು ಖಂಡಿತ. ಐನ್ಸ್ಟೈನ್ ಜೇನುಹುಳುವಿನ ಕುರಿತು ಆಡಿದನೆಂಬ ಮಾತುಗಳು ಆನೆಗಳ ವಿಷಯಕ್ಕೂ ಅನ್ವಯಿಸಬಲ್ಲದು. ಎಮೆಲಿ ಕ್ಲಾರ್ಕ್ ಎಂಬ ವನ್ಯಜೀವಿ ಅಧ್ಯಯನಕಾರ ತನ್ನ ಲೇಖನದಲ್ಲಿ ಆನೆಗಳ ಮರೆಯಾಗುವಿಕೆ ಹೇಗೆ ಭೂಮಿಯನ್ನು ಮನುಷ್ಯನಿಗೆ ಅಸಹನೀಯವಾಗಿಸುತ್ತದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ಹೋಗುತ್ತಾನೆ. ಅವನ ಅಧ್ಯಯನ ಏನೆಲ್ಲಾ ಹೇಳುತ್ತದೆ ಗೊತ್ತೇನು? ಕೇಳಿ.
ಕಾಡನ್ನು ಕಟ್ಟುವುದರಲ್ಲಿ ಆನೆ ಮಾಡುತ್ತಿರುವ ಕೆಲಸವನ್ನು ಕೇವಲ ಆನೆ ಮಾತ್ರ ಮಾಡಬಲ್ಲದು. ‘ಆನೆ ನಡೆದದ್ದೇ ಹಾದಿ’ ಎಂಬ ಗಾದೆ ಹೆಚ್ಚಿನವರು ಕೇಳಿರಬಹುದು. ನಿಜ, ಕಾಡಿನಲ್ಲಿ ಆನೆ ನಡೆದಾಡುವಾಗ ಉಂಟಾಗುವ ಹಾದಿ ಕುರುಚಲು ಗಿಡಗಳನ್ನು ನಾಶಗೊಳಿಸಿ, ಸದೃಢವಾದ ನೇರ ಗಿಡಗಳು ಮೇಲೆರಲು ಸಹಾಕಾರಿಯಾಗುತ್ತದೆ, ಉದಾಹರಣೆಗೆ ನಾವೊಂದು ತೋಟ ಮಾಡುತ್ತೇವೆಂದರೆ ಅಲ್ಲಿ ಗಿಡಗಳನ್ನೆಲ್ಲಾ ಅಳತೆಗೆ ಸರಿಯಾಗಿ ಅಂತರವಿಟ್ಟು ನೆಡುತ್ತೇವೆ, ಮಧ್ಯದಲ್ಲಿ ಹುಟ್ಟುವ ಕಳೆಯನ್ನು ಕೂಡ ಕಾಲಕಾಲಕ್ಕೆ ಕಿತ್ತು ಹಾಕುತ್ತೇವೆ ಅಲ್ಲವೇ? ಕಾರಣ ಗಿಡಗಳು ಉತ್ತಮವಾಗಿ ಬೆಳೆಯಲಿ ಎಂದು. ಕಾಡಿನಲ್ಲಿ ಈ ಕೆಲಸವನ್ನು ಆನೆಯಷ್ಟು ಸಮರ್ಥವಾಗಿ ಇನ್ನಾವ ಪ್ರಾಣಿಯೂ ಮಾಡಲಾರದು. ಆನೆಯಿರುವ ಕಾಡಿನಲ್ಲಿ ಎತ್ತರದ ಮರಗಳು ಬೆಳೆಯಬಲ್ಲದು, ಅಂತಹ ಸದೃಢವಾದ ಮರಗಳನ್ನು ಹೊಂದಿರುವ ಕಾಡು ಹೆಚ್ಚು ಕಾರ್ಬನ್ ಡೈ ಆಕ್ಸೈಡ್ ಹೀರಬಲ್ಲದು, ಆಮ್ಲಜನಕ ಉತ್ಪಾದಿಸಬಲ್ಲದು. ಜಗತ್ತನ್ನು ಏರುತ್ತಿರುವ ಬಿಸಿಯಿಂದ ಕಾಪಾಡಬಲ್ಲದು. ಹೆಚ್ಚು ಆನೆಗಳಿರುವ ಆಫ್ರಿಕಾದ ಕಾಡು ಜಗತ್ತಿನ ಶ್ವಾಸಕೋಶ ಅನ್ನಿಸಿಕೊಂಡಿರುವುದು ಕಾಕತಾಳೀಯವಲ್ಲ.
ಆಫ್ರಿಕಾದಲ್ಲಿನ ನೇವಲ್ ಎಂಬ ಹೆಸರಿನ ಹಣ್ಣಿನ ಮರದಲ್ಲಿ, ಹಣ್ಣುಗಳು ಗಟ್ಟಿ ಚಿಪ್ಪನ್ನು ಹೊಂದಿದ್ದು, ಅಂಜೂರದ ರೀತಿ ಮರದ ತೊಗಟೆಯಲ್ಲಿಯೇ ಬೆಳೆಯತ್ತದೆ. ಆದರೆ ಗಟ್ಟಿಯಾಗಿ ಮರಕ್ಕೆ ಅಂಟಿಕೊಂಡಿರುತ್ತದೆ. ಎಷ್ಟು ಗಟ್ಟಿಯಾಗಿ ಎಂದರೆ ಆನೆಗಳು ತಮ್ಮ ಸೊಂಡಿಲ ಬಲದಿಂದ ಮಾತ್ರ ಅದನ್ನು ಕಿತ್ತುತಿನ್ನುತ್ತವೆಯೇ ಹೊರತು, ಬೇರೆ ಪ್ರಾಣಿ ಅಷ್ಟಾಗಿ ಆ ಮರದ ಬಳಿ ಸುಳಿಯುವುದಿಲ್ಲ. ಅಂತಹ ಹಣ್ಣಿನ ಬೀಜವನ್ನು ತನ್ನ ಅಂದಾಜು ಅರವತ್ತು ಅಡಿಗೂ ಉದ್ದವಾದ ಕರುಳಿನ ಮೂಲಕ ದಿನಪೂರ್ತಿ ಉಳಿಸಿಕೊಂಡು ಹೊರಹಾಕಿದಾಗ ಆ ಬೀಜಕ್ಕೂ ಮೊಳಕೆ ಒಡೆಯುವ ಬಗ್ಗೆ ಆಲೋಚನೆ ಬರುತ್ತದೆ. ನಾಳೆ ಆನೆಯಿರದಿದ್ದರೆ ಆ ಮರ ಉಳಿಯುವುದೇ, ಗೊತ್ತಿಲ್ಲ. ಮಧ್ಯಆಫ್ರಿಕಾದಲ್ಲಿ ಇಂತಹ 43ಕ್ಕೂ ಅಧಿಕ ಮರಗಳ ಬೀಜಗಳ ಸಾಗಾಟದಲ್ಲಿ ಆನೆಗಳ ಪಾತ್ರ ಬಹಳ ಮುಖ್ಯವಾದ್ದು ಮತ್ತು ನಿರ್ಣಾಯಕ. ಅವುಗಳ ಲದ್ದಿಯೂ ಗೊಬ್ಬರದ ರೀತಿ ಬೀಜ ಮೊಳಕೆ ಒಡೆಯಲು ಉತ್ತಮ ವಾತಾವರಣ ಕಲ್ಪಿಸುವುದರಲ್ಲಿ ಪ್ರಮುಖವಾದ ಅಂಶ.
ಇವೆಲ್ಲಾ ಸಣ್ಣ ನಿರೂಪಣೆಯಷ್ಟೇ, ಆನೆಗಳ ಹೆಜ್ಜೆಯ ಹೊಂಡದೊಳಗೆ ಒಂದು ಪುಟ್ಟ ಜೀವ ಜಗತ್ತೇ ಹುಟ್ಟಬಲ್ಲದು, ಅದರಲ್ಲಿ ನಿಂತ ನೀರು ಹಲವು ಸೂಕ್ಷ್ಮಾಣು ಜೀವಿಗಳಿಗೆ ಆಸರೆಯಾಗಬಲ್ಲದು ಮತ್ತು ಇದು ಕಾಡಿನ ವೈವಿಧ್ಯತೆಗೆ ನೀಡುವ ಕೊಡುಗೆ ಸಣ್ಣದೇನಲ್ಲ. ಕಾರಣ, ಆನೆಯ ಹಾದಿಯಲ್ಲಿ ಯಾವುದು ಸಣ್ಣದಲ್ಲವೇ ಅಲ್ಲ.
ಮರಿಹಾಕುವುದಕ್ಕೆ 22 ತಿಂಗಳು ಅಂದರೆ ಸರಿಸುಮಾರು ಎರಡು ವರ್ಷಗಳೇ ತೆಗೆದುಕೊಳ್ಳುವ ಆನೆಯ ಪ್ರಸವದ ಅವಧಿ ಸಸ್ತನಿಗಳಲ್ಲಿಯೇ ದೀರ್ಘಕಾಲದ್ದು. ದಿನದ 24 ಗಂಟೆಯಲ್ಲಿ 18 ತಾಸುಗಳನ್ನು ಆಹಾರ ತಿನ್ನುವುದಕ್ಕೆಂದೇ ಮೀಸಲಿಡುವ ಆನೆಯನ್ನು ಕೊಂದಷ್ಟು ಸುಲಭದಲ್ಲಿ ಸಾಕಲಾಗದು. ಕಾಡನ್ನು, ಆ ಮೂಲಕ ನಾಡನ್ನು ಕಟ್ಟಲು ಪ್ರಯತ್ನಿಸುತ್ತಿರುವ ಆನೆಯು ಒಂದೊಮ್ಮೆ ಆಹಾರ ಅರಸಿ ಊರಿನ ಬದಿ ಬಂದರೆ ಅಥವಾ ದಂತಕ್ಕಾಗಿ ಕಾದಿರುವವರ ಬಂದೂಕಿನ ಗುರಿಯಲ್ಲಿ ನಿಂತಿದ್ದರೆ, ಅಂತಹವರು ಒಂದು ಕ್ಷಣ ಕಿವಿಗೊಟ್ಟು ಆಲಿಸಿ... ಆನೆ ಏನನ್ನೋ ಹೇಳುತ್ತಿದೆ. ದಯವಿಟ್ಟು ಆಲಿಸಿ.