ಸಾಹಿತಿ, ವಿಮರ್ಶಕ ಪ್ರೊ. ಎಂ.ಎಚ್. ಕೃಷ್ಣಯ್ಯ ನಿಧನ
ಪ್ರೊ. ಎಂ.ಎಚ್. ಕೃಷ್ಣಯ್ಯ
ಬೆಂಗಳೂರು, ಆ.12: ಪ್ರಸಿದ್ಧ ಸಾಹಿತಿ, ವಿಮರ್ಶಕ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರೊ. ಎಂ.ಎಚ್. ಕೃಷ್ಣಯ್ಯ(85) ಅವರು ಇಂದು ನಿಧನರಾದರು.
ಕಳೆದ ಒಂದೂವರೆ ತಿಂಗಳಿನಿಂದ ವಯೋಸಹಜ ಅನಾರೋಗ್ಯಕ್ಕೀಡಾಗಿದ್ದ ಕೃಷ್ಣಯ್ಯನವರು, ರಾಜಾಜಿನಗರದ ಸ್ವಗೃಹದಲ್ಲಿಯೇ ಇಂದು ಮಧ್ಯಾಹ್ನ 1 ಗಂಟೆಯಲ್ಲಿ ನಿಧನರಾದರೆಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಮೃಧು ಸ್ವಭಾವದ, ನೇರ ನಡೆನುಡಿಯ, ನಿಷ್ಠುರ ವಿಮರ್ಶೆಯ ಮೂಲಕ ಹೆಸರು ಮಾಡಿದ್ದ ಕೃಷ್ಣಯ್ಯನವರು ಜನಿಸಿದ್ದು ಜುಲೈ 21, 1937ರಂದು ಮೈಸೂರಿನಲ್ಲಿ. ಮೈಸೂರು ವಿವಿಯಿಂದ ಎಂ.ಎ. ಪದವಿ ಪಡೆದು, ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಮುಂತಾದೆಡೆ ಸರಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
1979-83ರಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ನಿರ್ದೇಶನಾಲಯದ ಯುವ ಕರ್ನಾಟಕ ಹಾಗೂ ಸ್ಪೋಟ್ರ್ಸ್ ಅರೆನಾ ಪತ್ರಿಕೆಗಳ ಸಂಪಾದಕರಾಗಿದ್ದ ಕೃಷ್ಣಯ್ಯನವರು, ಲಲಿತ ಕಲಾ ಅಕಾಡೆಮಿಯ `ಕರ್ನಾಟಕ ಕಲಾವಾರ್ತೆ'ಯ ಗೌರವ ಸಂಪಾದಕರು ಮತ್ತು ಕಲಾ ಪಂಥ ಮಾಲೆಯ ‘ಎಕ್ಸ್ಪ್ರೆಷನಿಸಂ’ ಹಾಗೂ ‘ಇಂಪ್ರೆಷನಿಸಂ’ ಪುಸ್ತಕಗಳಿಗೆ ಪ್ರಧಾನ ಸಂಪಾದಕರಾಗಿದ್ದರು. ಕನ್ನಡ ವಿಶ್ವವಿದ್ಯಾಲಯ ಕಾರ್ಯಕಾರಿ ಸಮಿತಿ (ಸಿಂಡಿಕೇಟ್), ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ತಂಜಾವೂರಿನ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದ ಸದಸ್ಯರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಕೃಷ್ಣಯ್ಯನವರ ಕೃತಿಗಳು: ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ಆರ್.ಎಂ. ಹಡಪದ್ (ಕಲಾವಿಮರ್ಶೆ), ರೂಪಶಿಲ್ಪಿ ಬಸವಯ್ಯ (ಶಿಲ್ಪಕಲೆ), ನಾಟಕ ಮತ್ತು ಸೌಂದರ್ಯ ಪ್ರಜ್ಞೆ, ಅವಲೋಕನ (ಸಾಹಿತ್ಯ ವಿಮರ್ಶೆ), ಎನ್.ಎಚ್. ಕುಲಕರ್ಣಿ (ನವ್ಯ ಶಿಲ್ಪಕಲೆ), ಶೃಂಗಾರ ಲಹರಿ, ಕಲಾ ದರ್ಶನ, ರಂಗಭೂಮಿ, ಕುವೆಂಪು ಸಾಹಿತ್ಯ: ಚಿತ್ರ ಸಂಪುಟ (ಸಂಪಾದನೆ ಕೃತಿಗಳು) ಆರ್.ಎಸ್.ಎನ್. ವ್ಯಕ್ತಿ ಮತ್ತು ಕಲೆ, ಬೆಂಗಳೂರು ದರ್ಶನ (ಇತರರೊಡನೆ), ಕಲೆ ಮತ್ತು ರಸಸ್ವಾದನೆ, ಕಾವ್ಯಭಾಷೆ (ಸಾಹಿತ್ಯ ವಿಮರ್ಶೆ), ತ್ಯಾಗಯೋಗಿ (ಎಸ್. ಕರಿಯಪ್ಪನವರ ಜೀವನ ಚರಿತ್ರೆ), ಎಚ್.ಕೆ. ವೀರಣ್ಣಗೌಡರು, ನಿಟ್ಟೂರು: ನೂರರ ನೆನಪು, ಅಜಂತ ಮತ್ತು ಎಲ್ಲೋರ, ಐತಿಹಾಸಿಕ ಕಾದಂಬರಿ: ಒಂದು ಸಮೀಕ್ಷೆ (ಲೇಖನ ಮಾಲೆ), ರಂಗಭೂಮಿ ಮತ್ತು ಸೌಂದರ್ಯ ಪ್ರಜ್ಞೆ, ಕಲಾ ಸಂಸ್ಕೃತಿ, ಸಾಹಿತ್ಯ ಕಲೆ, ಸಾಲು ದೀಪಗಳು (ಇತರರೊಡನೆ ಸಂಪಾದನೆ), ಸ್ವಾತಂತ್ಯ್ರೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ (ಇತರರೊಡನೆ ಸಂಪಾದನೆ), ಸಾಹಿತ್ಯ ಮತ್ತು ಕಲೆಗಳಲ್ಲಿ ಪರಿವರ್ತನೆ ಮತ್ತು ಪ್ರಗತಿ, ಬೆಂಗಳೂರು ಕೆಂಪೇಗೌಡರ ವಂಶಸ್ಥರು, ಮೂರ್ತಾಮೂರ್ತ (ಎ.ಎನ್. ಮೂರ್ತಿ ಸಂಭಾವನಾ ಗ್ರಂಥ), ಕಾಲ ಶತಮಾನ ಕಂಡ ಕನ್ನಡ ಪತ್ರಿಕೆಗಳು, ಹಳೆಯ ಗದ್ಯ ಸಾಹಿತ್ಯ, ರನ್ನನ ಗದ್ಯ ಸಾಹಿತ್ಯ, ರನ್ನನ ಗದ್ಯ ಪುರಾಣ ಸಂಗ್ರಹ, ಶ್ರೀಗಿರಿ, ಸುವಿದ್ಯಾ, ಬಿರಿಮೊಗ್ಗು (ಪ್ರಬಂಧ), ಹೊಳಪು ಝಳಪು (ಕವನ), ಕರ್ನಾಟಕ ಕಲಾದರ್ಶನ (ಇತರರೊಡನೆ ಎರಡು ಸಂಪುಟ), ಪೂರ್ಣಚಂದ್ರ (ಮುಖ್ಯಮಂತ್ರಿ ಚಂದ್ರು ಸಂಭಾವನಾ ಗ್ರಂಥ).
ಪ್ರಶಸ್ತಿ-ಗೌರವಗಳು: ಇವರ ಶೃಂಗಾರ ಲಹರಿಗೆ ಲಲಿತ ಕಲಾ ಅಕಾಡೆಮಿ ಪುರಸ್ಕಾರ, ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಮಾಸ್ತಿ ಪ್ರಶಸ್ತಿ ಅವರಿಗೆ ಸಂದ ಮತ್ತೊಂದು ಹಿರಿಮೆ. ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಹಂಪಿ ಕನ್ನಡ ವಿ.ವಿ. ನಾಡೋಜ ಗೌರವ, ಗೌರವ ಡಾಕ್ಟರೇಟ್ ಲಭಿಸಿದೆ.
ಗಾಯಿತ್ರಿನಗರದ ಹರಿಶ್ಚಂದ್ರ ಘಾಟ್ನಲ್ಲಿ ಶನಿವಾರ ಬೆಳಗ್ಗೆ 11ಕ್ಕೆ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು, ವಿಮರ್ಶಕರು ಆದ ಪ್ರೊ|| ಎಂ.ಎಚ್ ಕೃಷ್ಣಯ್ಯ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು.
— Siddaramaiah (@siddaramaiah) August 12, 2022
ಹಲವು ದಶಕಗಳಿಂದ ನಾಡು ನುಡಿಯ ಏಳ್ಗೆಗಾಗಿ ದುಡಿದ ಹಿರಿಯ ಜೀವ ಕೃಷ್ಣಯ್ಯನವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಿಬಾರದ ನಷ್ಟ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. pic.twitter.com/ADKjB1oBHH