ಭಾರತಕ್ಕೆ 75: ಸ್ವತಂತ್ರ ದೇಶದಲ್ಲಿ ಸ್ವಾತಂತ್ರ್ಯವಿಲ್ಲದ ಜನರು...
ಜಗತ್ತು ಭಾರತದತ್ತ ಮೆಚ್ಚುಗೆ ಮತ್ತು ಅಚ್ಚರಿಯಿಂದ ನೋಡುತ್ತಿಲ್ಲ. ಅದೇ ವೇಳೆ, ಸ್ವತಂತ್ರವಾಗಿ ಯೋಚಿಸಬಲ್ಲ ಮತ್ತು ನೋಡಬಲ್ಲ ಭಾರತೀಯರತ್ತಲೂ ಅದು ನೋಡುತ್ತಿಲ್ಲ. ಭಾರತವು ಔಪಚಾರಿಕವಾಗಿ ಸ್ವತಂತ್ರ ದೇಶವಾದರೂ, ಭಾರತೀಯರು ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಂಸ್ಥಿಕವಾಗಿ ಕಡಿಮೆ ಸ್ವಾತಂತ್ರವನ್ನು ಹೊಂದಿದ್ದಾರೆ. ಹಾಗಾಗಿ, ನಾವು ಮುಂದೆ ಮಾಡಬೇಕಾದ ಕೆಲಸ ತುಂಬಾ ಇದೆ.
‘‘ಜಗತ್ತು ಭಾರತದತ್ತ ನೋಡುತ್ತಿದೆ’’ ಎಂಬುದಾಗಿ ಇತ್ತೀಚಿನ ತಿಂಗಳುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನಮಗೆ ಪದೇ ಪದೇ ಹೇಳುತ್ತಿದ್ದಾರೆ. ಈ ಮಾತುಗಳು ಅಥವಾ ಅವುಗಳ ಹಿಂದಿ ಅವತರಣಿಕೆಯು ಮಾರ್ಚ್‌ನಲ್ಲಿ ಪ್ರಧಾನಿ ಮಾಡಿದ ಭಾಷಣಗಳಲ್ಲಿ ಕೇಳಿಸಿದವು (ಬಹುಷಃ ಅವರು ಅಂದು ಈ ಮಾತುಗಳನ್ನು ಭಾರತ ‘ಉತ್ಪಾದನಾ ದೈತ್ಯ’ವಾಗಿದೆ ಎಂಬರ್ಥದಲ್ಲಿ ಹೇಳಿರಬಹುದು). ‘‘ಜಗತ್ತು ಭಾರತದ ಸ್ಟಾರ್ಟ್-ಅಪ್ (ನವ ಉದ್ಯಮಗಳು)ಗಳನ್ನು ಮುಂದಿನ ಭವಿಷ್ಯವಾಗಿ ನೋಡುತ್ತಿದೆ’’ ಎಂಬುದಾಗಿ ಅವರು ಮೇ ತಿಂಗಳಲ್ಲಿ ಹೇಳಿದರು. ಬಳಿಕ ಜೂನ್‌ನಲ್ಲಿ, ‘‘ಜಗತ್ತು ಇಂದು ಭಾರತದ ಸಾಮರ್ಥ್ಯವನ್ನು ನೋಡುತ್ತಿದೆ ಮತ್ತು ಅದರ ಸಾಧನೆಯನ್ನು ಪ್ರಶಂಸಿಸುತ್ತಿದೆ’’ ಎಂದು ಹೇಳಿದರು. ಹಾಗೂ, ಜುಲೈಯಲ್ಲಿ ಉತ್ತರಪ್ರದೇಶದಲ್ಲಿ ಎಕ್ಸ್‌ಪ್ರೆಸ್‌ವೇಯೊಂದನ್ನು ಉದ್ಘಾಟಿಸಿದ ಸಂದರ್ಭದಲ್ಲೂ ಅವರು ಈ ಮಾತುಗಳನ್ನು ಪುನರಾವರ್ತಿಸಿದರು.
ಜಗತ್ತು ಭಾರತದತ್ತ ನೋಡುತ್ತಿದೆ ಎನ್ನುವುದೇನೋ ಸರಿ. ಆದರೆ, ಅದು ಮೆಚ್ಚುಗೆಯಿಂದಲೇ ನೋಡುತ್ತಿದೆ ಎಂಬುದಾಗಿ ಭಾವಿಸಬೇಕಾಗಿಲ್ಲ. ಆಕಾರ್ ಪಟೇಲ್‌ರ ಪುಸ್ತಕ ‘ಪ್ರೈಸ್ ಆಫ್ ದ ಮೋದಿ ಈಯರ್ಸ್’ನ್ನು ಓದಿದಾಗ ಇದು ಮನದಟ್ಟಾಗುತ್ತದೆ. ಈ ಪುಸ್ತಕದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಜಾಗತಿಕ ಸೂಚ್ಯಂಕಗಳ ಪಟ್ಟಿಯಿದೆ ಹಾಗೂ ಈ ಸೂಚ್ಯಂಕಗಳಲ್ಲಿ ನಮ್ಮ ದೇಶದ ನಿರ್ವಹಣೆ ಹೇಗಿದೆ ಎನ್ನುವ ವಿವರಗಳಿವೆ. ಬಹುತೇಕ ಈ ಎಲ್ಲಾ ಸೂಚ್ಯಂಕಗಳಲ್ಲಿ ಭಾರತದ ಸ್ಥಾನ ಕೆಳಗಿದೆ ಅಥವಾ ಕರುಣಾಜನಕವೆನ್ನುವಷ್ಟು ತಳದಲ್ಲಿದೆ. ಹಾಗಾಗಿ, ವಾಸ್ತವವಾಗಿ ಜಗತ್ತು ನಮ್ಮ ಬಗ್ಗೆ ಏನನ್ನು ತಿಳಿಯಲು ಬಯಸುತ್ತದೆ ಎನ್ನುವುದು, ಪ್ರಧಾನಿ ಏನು ಹೇಳಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಬಹುಶಃ ವಿರುದ್ಧವಾಗಿರಬಹುದು ಅನಿಸುತ್ತದೆ.
ಉದಾಹರಣೆಗೆ; ಭಾರತ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ 85ನೇ ಸ್ಥಾನದಲ್ಲಿ, ಅಂತರ್‌ರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಜಾಗತಿಕ ಹಸಿವು ಸೂಚ್ಯಂಕದಲ್ಲಿ 94ನೇ ಸ್ಥಾನದಲ್ಲಿ, ವಿಶ್ವ ಆರ್ಥಿಕ ವೇದಿಕೆಯ ಮಾನವ ಬಂಡವಾಳ ಸೂಚ್ಯಂಕದಲ್ಲಿ 103ನೇ ಸ್ಥಾನದಲ್ಲಿ ಮತ್ತು ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 131ನೇ ಸ್ಥಾನದಲ್ಲಿದೆ ಎಂಬುದಾಗಿ ತನ್ನ ಪುಸ್ತಕದಲ್ಲಿ ಪಟೇಲ್ ಹೇಳುತ್ತಾರೆ. ಈ ಪೈಕಿ ಹೆಚ್ಚಿನ ಸೂಚ್ಯಂಕಗಳಲ್ಲಿ, 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಭಾರತದ ಸ್ಥಾನ ಮತ್ತಷ್ಟು ಕುಸಿದಿದೆ.
ಜಗತ್ತು ನಮ್ಮ ಬಗ್ಗೆ ಏನು ಭಾವಿಸುತ್ತದೆ ಎನ್ನುವುದೇನೋ ಮುಖ್ಯ. ಆದರೆ ನಮ್ಮ ಬಗ್ಗೆಯೇ ನಾವು ಏನು ಭಾವಿಸಿದ್ದೇವೆ ಎನ್ನುವುದು ಬಹುಶಃ ಅದಕ್ಕಿಂತಲೂ ಹೆಚ್ಚು ಮುಖ್ಯ. ಹಾಗಾಗಿ, ಬ್ರಿಟಿಷ್ ವಸಾಹತು ಆಳ್ವಿಕೆಯಿಂದ ನಾವು ಪಡೆದ ಸ್ವಾತಂತ್ರದ 75ನೇ ವಾರ್ಷಿಕ ದಿನದ ಸಂದರ್ಭದಲ್ಲಿ ನಾವು ನಮ್ಮನ್ನೇ ಕೇಳಿಕೊಳ್ಳಬೇಕಾಗಿದೆ: ಭಾರತ ಹೇಗಿದೆ? ಭಾರತೀಯರು ಹೇಗಿದ್ದಾರೆ? ದೇಶವಾಗಿ ಮತ್ತು ಜನತೆಯಾಗಿ, ಎಷ್ಟರಮಟ್ಟಿಗೆ ನಾವು ಸಂವಿಧಾನದಲ್ಲಿ ಅಡಕವಾಗಿರುವ ಆದರ್ಶಗಳನ್ನು ಈಡೇರಿಸಿದ್ದೇವೆ? ಮತ್ತು ನಮ್ಮ ಸ್ವಾತಂತ್ರಕ್ಕಾಗಿ ಹೋರಾಡಿದವರ ನಿರೀಕ್ಷೆಗಳನ್ನು ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ತಂದಿದ್ದೇವೆ?
2015ರಲ್ಲಿ ನಾನು ಭಾರತವನ್ನು ‘ಚುನಾವಣೆ ಮಾತ್ರ ಇರುವ ಪ್ರಜಾಪ್ರಭುತ್ವ’ ಎಂಬುದಾಗಿ ಬಣ್ಣಿಸಿದ್ದೆ. ಚುನಾವಣೆಗಳೇನೋ ನಿಯಮಿತವಾಗಿ ನಡೆಯುತ್ತದೆ, ಆದರೆ ಅವುಗಳ (ಚುನಾವಣೆಗಳ) ನಡುವಿನ ಅವಧಿಯಲ್ಲಿ, ನಮ್ಮಿಂದ ಆಯ್ಕೆಯಾದವರಿಂದ ಯಾವುದೇ ನೈಜ ಉತ್ತರದಾಯಿತ್ವ ಇರುವುದಿಲ್ಲ ಎನ್ನುವುದನ್ನು ನಾನು ಈಮೂಲಕ ಹೇಳಿದ್ದೆ. ಸಂಸತ್ತು, ಮಾಧ್ಯಮಗಳು, ನಾಗರಿಕ ಸೇವೆ ಎಷ್ಟೊಂದು ಪರಿಣಾಮಹೀನವಾಗಿವೆ ಅಥವಾ ರಾಜಿಗೊಳಗಾಗಿವೆ ಎಂದರೆ ಅವುಗಳು ಅಧಿಕಾರದಲ್ಲಿರುವ ಪಕ್ಷದ ಅತಿರೇಕಗಳಿಗೆ ಯಾವುದೇ ತಡೆಯನ್ನು ಹೇರುವುದಿಲ್ಲ. ಹಾಗಾಗಿ, ಈಗ, ‘ಚುನಾವಣೆ ಮಾತ್ರ ಇರುವ ಪ್ರಜಾಪ್ರಭುತ್ವ’ದಲ್ಲಿ ‘ಚುನಾವಣೆ ಮಾತ್ರ’ ಎಂಬ ಸಕಾರಾತ್ಮಕ ಅಂಶವನ್ನೂ ಸಮರ್ಥಿಸಿಕೊಳ್ಳುವುದು ಕಷ್ಟವೆಂದು ಅನಿಸುತ್ತಿದೆ. ಚುನಾವಣಾ ಬಾಂಡ್ ಯೋಜನೆಯ ಅಪಾರದರ್ಶಕತೆ, ಚುನಾವಣಾ ಆಯೋಗದ ಪಕ್ಷಪಾತಪೂರಿತ ನಡವಳಿಕೆ ಮತ್ತು ಜನರಿಂದ ಆಯ್ಕೆಯಾಗಿರುವ ರಾಜ್ಯ ಸರಕಾರಗಳನ್ನು ಬಲಪ್ರಯೋಗ ಮತ್ತು ಹಣಬಲದಿಂದ ಉರುಳಿಸುತ್ತಿರುವುದನ್ನು ನೋಡಿದಾಗ, ಚುನಾವಣೆಗಳೂ ಸಂಪೂರ್ಣವಾಗಿ ಮುಕ್ತ ಮತ್ತು ನ್ಯಾಯೋಚಿತವಾಗಿಲ್ಲ ಅನಿಸುತ್ತದೆ. ಅಂತೆಯೇ, ಅವುಗಳ ಫಲಿತಾಂಶವನ್ನು ಯಾವತ್ತೂ ಗೌರವಿಸಲಾಗುತ್ತದೆ ಎನ್ನುವ ನಂಬಿಕೆಯನ್ನೂ ಇಟ್ಟುಕೊಳ್ಳಬೇಕಾಗಿಲ್ಲ.
ಇತ್ತೀಚಿನ ವರ್ಷಗಳಲ್ಲಿ, ಭಾರತೀಯ ಪ್ರಭುತ್ವವು ಭಿನ್ನಮತವನ್ನು ಹೆಚ್ಚಿನ ನಿರ್ದಯದಿಂದ ದಮನಿಸುತ್ತಿದೆ. ಸರಕಾರವೇ ನೀಡಿರುವ ಅಂಕಿಅಂಶಗಳ ಪ್ರಕಾರ, 2016 ಮತ್ತು 2020ರ ನಡುವಿನ ಅವಧಿಯಲ್ಲಿ ಕಠೋರ ಕಾನೂನುಬಾಹಿರ (ಚಟುವಟಿಕೆಗಳ) ತಡೆ ಕಾಯ್ದೆಯಡಿ 24,000ಕ್ಕೂ ಅಧಿಕ ಭಾರತೀಯರನ್ನು ಬಂಧಿಸಲಾಗಿದೆ. ಈ ಪೈಕಿ ಒಂದು ಶೇಕಡಕ್ಕಿಂತಲೂ ಕಡಿಮೆ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿದೆ. ಉಳಿದ ಶೇ. 99 ಜನರ ಜೀವನವನ್ನು ನಿರ್ದಿಷ್ಟ ಸಿದ್ಧಾಂತವೊಂದರ ಆಧಾರದಲ್ಲಿ ಕಾರ್ಯಾಚರಿಸುತ್ತಿರುವ ಹಾಗೂ ಭ್ರಮೆಗೆ ಒಳಗಾಗಿರುವ ಸರಕಾರಿ ವ್ಯವಸ್ಥೆಯೊಂದು ನಾಶಗೊಳಿಸಿದೆ.
ಮಾಧ್ಯಮಗಳ ಮೇಲೆ ನಡೆಯುತ್ತಿರುವ ದಾಳಿಯೂ ತೀವ್ರಗೊಂಡಿದೆ. ಈಗ ಆಕಾರ್ ಪಟೇಲ್ ತನ್ನ ಪುಸ್ತಕವನ್ನು ಪರಿಷ್ಕರಿಸುವುದಾದರೆ, ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕದಲ್ಲಿ ಅವರು ಭಾರತಕ್ಕೆ 142ರ ಬದಲು 150ನೇ ಸ್ಥಾನವನ್ನು ನೀಡಬಹುದೇನೋ!
ಈ ದೌರ್ಜನ್ಯದ ವಾತಾವರಣದಲ್ಲಿ, ಉನ್ನತ ನ್ಯಾಯಾಂಗವು ಹೆಚ್ಚಿನ ಸಂದರ್ಭಗಳಲ್ಲಿ ನಾಗರಿಕರಿಗೆ ವಿರುದ್ಧವಾಗಿ ಹಾಗೂ ಪ್ರಭುತ್ವದ ಪರವಾಗಿ ನಿಂತಿರುವುದು ಅತ್ಯಂತ ನಿರಾಶಾದಾಯಕ ಸಂಗತಿಯಾಗಿದೆ. ಹಾಗಾಗಿ, ಪ್ರತಾಪ್ ಭಾನು ಮೆಹ್ತಾ ಇತ್ತೀಚೆಗೆ ಬರೆದಿರುವಂತೆ, ‘‘ಸುಪ್ರೀಂ ಕೋರ್ಟ್ ಈಗ ಹಕ್ಕುಗಳ ಸಂರಕ್ಷಕನಾಗುವ ಬದಲು ನಾಗರಿಕರ ಹಕ್ಕುಗಳಿಗೆ ಎದುರಾಗಿರುವ ದೊಡ್ಡ ಬೆದರಿಕೆಯಾಗಿದೆ’’. (https://indianexpress.com/article/opinion/columns/pratap-bhanu-mehta-by-upholding-pmla-sc-puts-its-stamp-on-kafkas-law-8057249/).
‘‘ಪ್ರಧಾನಿ ನರೇಂದ್ರ ಮೋದಿಯವರ ಬಹುಸಂಖ್ಯಾತ ಆಳ್ವಿಕೆಗೆ ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ಶರಣಾಗಿದೆ’’ ಎಂದು ಸಂವಿಧಾನ ತಜ್ಞ ಅನೂಜ್ ಭುವಾನಿಯ ಹೇಳುತ್ತಾರೆ. ‘‘ಮೋದಿ ಆಡಳಿತದ ಅವಧಿಯಲ್ಲಿ, ಸರಕಾರದ ಅತಿರೇಕಗಳಿಗೆ ತಡೆ ಹೇರುವ ತನ್ನ ಸಾಂವಿಧಾನಿಕ ಪಾತ್ರವನ್ನು ನಿಭಾಯಿಸುವಲ್ಲಿ ಸುಪ್ರೀಂ ಕೋರ್ಟ್ ವಿಫಲವಾಗಿದ್ದಷ್ಟೇ ಅಲ್ಲ, ಅದು ಮೋದಿ ಸರಕಾರದ ಕಾರ್ಯಸೂಚಿಯ ‘ಚಿಯರ್‌ಲೀಡರ್ (ಹುರಿದುಂಬಿಸುವವರು)’ ಆಗಿಯೂ ಕೆಲಸ ಮಾಡಿದೆ’’ ಎಂದು ಅವರು ಅಭಿಪ್ರಾಯಪಡುತ್ತಾರೆ. ಪ್ರಭುತ್ವದ ಕಾನೂನುಬಾಹಿರ ಕೃತ್ಯಗಳ ವಿರುದ್ಧ ನಾಗರಿಕರಿಗೆ ರಕ್ಷಣೆ ಕೊಡುವ ತನ್ನ ಕೆಲಸವನ್ನು ಅದು ನಿಲ್ಲಿಸಿದೆ ಮಾತ್ರವಲ್ಲ, ಪ್ರಭುತ್ವದ ಸೂಚನೆಯಂತೆ ನಾಗರಿಕರ ಮೇಲೆ ಬೀಸಬಹುದಾದ ಶಕ್ತಿಶಾಲಿ ಖಡ್ಗವಾಗಿಯೂ ಅದು ವಾಸ್ತವವಾಗಿ ಕೆಲಸ ಮಾಡಿದೆ (ನೋಡಿ: https://scroll.in/article/979818/the-crisis-of-legitimacy-plaguing-the-supreme-court-in-modi-era-is-now-hidden-in-plain-sight).
ಭಾರತೀಯರು ಮುಕ್ತವಾಗಿ ರಾಜಕೀಯದ ಬಗ್ಗೆ ಮಾತನಾಡು ವುದು ಕಡಿಮೆ; ಮುಕ್ತವಾಗಿ ಸಾಮಾಜಿಕವಾಗಿ ಮಾತನಾಡುವುದಂತೂ ಇನ್ನೂ ಕಡಿಮೆ. ಬ್ರಿಟಿಷರು ನಮ್ಮ ನೆಲವನ್ನು ಬಿಟ್ಟು ಹೋದ 75 ವರ್ಷಗಳ ಬಳಿಕವೂ ನಮ್ಮ ಸಮಾಜವು ಆಳವಾಗಿ ಶ್ರೇಣೀಕೃತವಾಗಿದೆ. 1950ರಲ್ಲಿ ಭಾರತೀಯ ಸಂವಿಧಾನವು ಜಾತಿ ಮತ್ತು ಲಿಂಗ ತಾರತಮ್ಯವನ್ನು ಕಾನೂನುಬಾಹಿರಗೊಳಿಸಿತು. ಆದರೆ ಅದು ಈಗಲೂ ಅದೇ ಉತ್ಕಟತೆಯಿಂದ ಮುಂದುವರಿಯುತ್ತಿದೆ. ಮೀಸಲಾತಿ ವ್ಯವಸ್ಥೆಯು ಉತ್ಸಾಹಿ ದಲಿತ ವೃತ್ತಿಪರರ ವರ್ಗವೊಂದನ್ನು ಸೃಷ್ಟಿಸಲು ಸಹಾಯ ಮಾಡಿತಾದರೂ, ಸಾಮಾಜಿಕ ಬದುಕಿನ ಹೆಚ್ಚಿನ ಕ್ಷೇತ್ರಗಳಲ್ಲಿ ಜಾತಿ ಪೂರ್ವಾಗ್ರಹ ಮುಂದುವರಿಯುತ್ತಿದೆ.
ಜಾತಿ ವಿನಾಶಕ್ಕಾಗಿ ಬಿ.ಆರ್. ಅಂಬೇಡ್ಕರ್ ಕರೆ ನೀಡಿ ದಶಕಗಳೇ ಸಂದರೂ, ತುಂಬಾ ಕಡಿಮೆ ಸಂಖ್ಯೆಯಲ್ಲಿ ಅಂತರ್‌ಜಾತಿ ಮದುವೆಗಳು ನಡೆಯುತ್ತಿವೆ. ಭಾರತೀಯ ಸಮಾಜವು ಇನ್ನೂ ಎಷ್ಟು ಸಂಪ್ರದಾಯಸ್ಥವಾಗಿಯೇ ಉಳಿದಿದೆ ಎನ್ನುವುದನ್ನು ಇದು ತೋರಿಸುತ್ತದೆ. ಲಿಂಗ ಸಮಾನತೆಯ ವಿಚಾರದಲ್ಲಿ, ಅಪೇಕ್ಷಿತ ಮಟ್ಟಕ್ಕಿಂತ ಎಷ್ಟು ಕೆಳಗೆ ನಾವಿದ್ದೇವೆ ಎನ್ನುವುದನ್ನು ಎರಡು ಅಂಕಿಸಂಖ್ಯೆಗಳು ಹೇಳುತ್ತವೆ. ಮೊದಲನೆಯದು, ವ್ಯವಸ್ಥೆಯಲ್ಲಿ ಮಹಿಳಾ ಕೆಲಸಗಾರರ ಪ್ರಮಾಣ. ಇದು ಸುಮಾರು ಶೇ. 20 ಆಗಿದೆ. ಇದು, ವಿಯೆಟ್ನಾಮ್ ಮತ್ತು ಚೀನಾವನ್ನು ಬಿಡಿ, ಬಾಂಗ್ಲಾದೇಶಕ್ಕಿಂತಲೂ ತುಂಬಾ ಕಡಿಮೆಯಾಗಿದೆ. ಎರಡನೆಯದು, ಜಾಗತಿಕ ಲಿಂಗ ತಾರತಮ್ಯ ಸೂಚ್ಯಂಕದಲ್ಲಿ ಭಾರತದ ಸ್ಥಾನ. ಇದರಲ್ಲಿ ಭಾರತ (2022 ಜುಲೈಗೆ ಅನ್ವಯಿಸುವಂತೆ) 146 ದೇಶಗಳ ಪೈಕಿ 135ನೇ ಸ್ಥಾನದಲ್ಲಿದೆ. ಆರೋಗ್ಯ ಮತ್ತು ಬದುಕುಳಿಯುವಿಕೆ ಸೂಚ್ಯಂಕದಲ್ಲಿ ಭಾರತ ತೀರಾ ಕೆಳಸ್ಥಾನ (146)ದಲ್ಲಿದೆ.
ಸಮಾಜದಿಂದ ನಾನೀಗ ಸಂಸ್ಕೃತಿ ಮತ್ತು ಧರ್ಮದ ಕಡೆಗೆ ಹೋಗುತ್ತೇನೆ. ಇಲ್ಲಿನ ಪರಿಸ್ಥಿತಿಯೂ ಆಶಾದಾಯಕವಾಗಿಯೇನೂ ಇಲ್ಲ. ಈ ಕ್ಷೇತ್ರದಲ್ಲಿ ಸರಕಾರ ಮತ್ತು ಹೊಡೆದು ಓಡುವ ಗುಂಪುಗಳು ವಿಧಿಸುತ್ತಿರುವ ನಿಯಮಗಳು ದಿನೇ ದಿನೇ ಹೆಚ್ಚುತ್ತಿವೆ. ಭಾರತೀಯರು ಏನನ್ನು ತಿನ್ನಬಹುದು, ಏನನ್ನು ಧರಿಸಬಹುದು, ಎಲ್ಲಿ ವಾಸಿಸಬಹುದು, ಏನು ಬರೆಯಬಹುದು ಮತ್ತು ಅವರು ಯಾರನ್ನು ಮದುವೆಯಾಗಬಹುದು ಎಂಬ ಬಗ್ಗೆ ಈ ಗುಂಪುಗಳು ನಿಯಮಗಳನ್ನು ಜಾರಿಗೊಳಿಸುತ್ತಿವೆ. ಬಹುಶಃ ಈ ಪೈಕಿ ಅತ್ಯಂತ ಕಳವಳಕಾರಿಯಾಗಿರುವ ಸಂಗತಿಯೆಂದರೆ, ಭಾರತೀಯ ಮುಸ್ಲಿಮರನ್ನು ಮಾತಿನಲ್ಲಿಯೂ, ಆಚಾರದಲ್ಲಿಯೂ ಕೆಟ್ಟದಾಗಿ ಬಿಂಬಿಸುವುದು. ಇಂದಿನ ಭಾರತದಲ್ಲಿ ರಾಜಕೀಯ ಮತ್ತು ವೃತ್ತಿಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಅತ್ಯಂತ ಕಡಿಮೆಯಾಗಿದೆ. ಕೆಲಸದ ಸ್ಥಳಗಳು ಮತ್ತು ಮಾರುಕಟ್ಟೆ ಸ್ಥಳಗಳಲ್ಲಿ ಅವರನ್ನು ತಾರತಮ್ಯದಿಂದ ನಡೆಸಿಕೊಳ್ಳಲಾಗುತ್ತಿದೆ ಹಾಗೂ ಟೆಲಿವಿಶನ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅವರನ್ನು ತಮಾಷೆ ಮಾಡಲಾಗುತ್ತಿದೆ. ಅವರು ಅನುಭವಿಸುವ ಸಂಕಷ್ಟ ಮತ್ತು ಅವಮಾನಕ್ಕೆ ನಾವು ಸಾಮೂಹಿಕವಾಗಿ ನಾಚಿಕೆಪಟ್ಟುಕೊಳ್ಳಬೇಕಾಗಿದೆ.
ಸಂಸ್ಕೃತಿಯಿಂದ ನಾನು ಆರ್ಥಿಕತೆಯತ್ತ ಹೊರಳುತ್ತೇನೆ. ಆರ್ಥಿಕತೆಯನ್ನು ಮತ್ತಷ್ಟು ಉದಾರೀಕರಣಗೊಳಿಸುವ ಭರವಸೆಯನ್ನು ನೀಡಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರು. ಆದರೆ ವಾಸ್ತವಿಕವಾಗಿ, 1991ರ ಆರ್ಥಿಕ ಸುಧಾರಣೆಗಳು ಯಾವ ರಕ್ಷಣಾತ್ಮಕತೆ (protectionism)ಯನ್ನು ಕೊನೆಗೊಳಿಸಲು ಬಯಸಿದ್ದವೋ, ಒಂದು ರೀತಿಯ ಅದೇ ರಕ್ಷಣಾತ್ಮಕತೆಗೆ ಅವರು ವಾಪಸಾಗಿದ್ದಾರೆ. ಈ ಒಳಮುಖ ತಿರುವು ದೇಶಿ ಉದ್ಯಮಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವ ವ್ಯವಸ್ಥೆಯನ್ನೂ ಸೃಷ್ಟಿಸಲಿಲ್ಲ. ಇದಕ್ಕೆ ಬದಲಾಗಿ, ಸರಕಾರದ ಕೆಲವೇ ಕೆಲವು ಆಪ್ತ ಕೈಗಾರಿಕೋದ್ಯಮಿಗಳು ಸರಕಾರದ ಕಳಂಕಿತ ಬಂಡವಾಳಶಾಹಿ ನೀತಿಯ 2ಎ ಮಾದರಿಯ ಪ್ರಯೋಜನ ಪಡೆದರು. ಹೀಗೆಂದು ಭಾರತ ಸರಕಾರದ ಮಾಜಿ ಆರ್ಥಿಕ ಸಲಹೆಗಾರರೊಬ್ಬರು ಬಣ್ಣಿಸಿದ್ದಾರೆ.
ಪ್ರಭುತ್ವವನ್ನು ಈಗ ಮತ್ತೆ ಅಧಿಕಾರಶಾಹಿಯ ಹಿಡಿತಕ್ಕೆ ಒಪ್ಪಿಸಲಾಗಿದೆ. ತೆರಿಗೆ ಮತ್ತು ಸುಂಕ ಇಲಾಖೆಗಳ (ಮತ್ತು ಇತರ ಇಲಾಖೆಗಳ) ಅಧಿಕಾರಿಗಳಿಗೆ ಹಿಂದೆ ಕೈತಪ್ಪಿ ಹೋಗಿದ್ದ ಅಧಿಕಾರಗಳನ್ನು ಮರಳಿ ನೀಡಲಾಗಿದೆ. ಈ ನವೀಕೃತ ಲೈಸನ್ಸ್ -ಪರ್ಮಿಟ್ ರಾಜ್‌ನ ದುಷ್ಪರಿಣಾಮಗಳನ್ನು ಮುಖ್ಯವಾಗಿ ಸಣ್ಣ ಉದ್ಯಮಿಗಳು ಅನುಭವಿಸುತ್ತಿದ್ದಾರೆ. ಈ ನಡುವೆ, ನಿರುದ್ಯೋಗ ದರವು ಏರಿದೆ. ಆದರೆ ಭಾರತೀಯ ಕೆಲಸಗಾರರ ಕೌಶಲ ಮಟ್ಟ ಕುಸಿದಿದೆ.
ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಅರ್ಥಶಾಸ್ತ್ರಜ್ಞರ ಗುಂಪೊಂದು ತಯಾರಿಸಿದ ವಿಶ್ವ ಅಸಮಾನತೆ ವರದಿ 2022ರ ಪ್ರಕಾರ, ಭಾರತದಲ್ಲಿ ಜನಸಂಖ್ಯೆಯ ಅತಿ ಶ್ರೀಮಂತ ಒಂದು ಶೇಕಡಾ ಮಂದಿ ರಾಷ್ಟ್ರೀಯ ಆದಾಯದ ಶೇ. 22ನ್ನು ತಮ್ಮಲ್ಲಿ ಇಟ್ಟುಕೊಂಡಿದ್ದಾರೆ. ಆದರೆ, ಅತಿ ಬಡವ ಶೇ. 50 ಮಂದಿಯ ಪಾಲು ಕೇವಲ ಶೇ. 13 ಮಾತ್ರ. 2021 ಜುಲೈಯಲ್ಲಿ ಮುಕೇಶ್ ಅಂಬಾನಿಯ ಸಂಪತ್ತು 80 ಬಿಲಿಯ ಡಾಲರ್ (ಸುಮಾರು 6.36 ಲಕ್ಷ ಕೋಟಿ ರೂಪಾಯಿ) ಆಗಿತ್ತು. ಅವರ ಸಂಪತ್ತು ಹಿಂದಿನ ವರ್ಷಕ್ಕಿಂತ 15 ಬಿಲಿಯ ಡಾಲರ್ (ಸುಮಾರು 1.19 ಲಕ್ಷ ಕೋಟಿ ರೂಪಾಯಿ)ನಷ್ಟು ಹೆಚ್ಚಾಗಿತ್ತು. ಆ ವರ್ಷ ಗೌತಮ್ ಅದಾನಿಯ ಸಂಪತ್ತಿನಲ್ಲಿ ಅಗಾಧ ಹೆಚ್ಚಳವಾಗಿತ್ತು. ಅವರ ಸಂಪತ್ತು ಹಿಂದಿನ ವರ್ಷ ಇದ್ದ 13 ಬಿಲಿಯ ಡಾಲರ್ (ಸುಮಾರು 1.03 ಲಕ್ಷ ಕೋಟಿ ರೂಪಾಯಿ)ನಿಂದ 55 ಬಿಲಿಯ ಡಾಲರ್ (ಸುಮಾರು 4.37 ಲಕ್ಷ ಕೋಟಿ ರೂಪಾಯಿ)ಗೆ ಏರಿಕೆಯಾಯಿತು. ಅದಾನಿಯ ವೈಯಕ್ತಿಕ ಸಂಪತ್ತು ಈಗ 110 ಬಿಲಿಯ ಡಾಲರ್ (ಸುಮಾರು 8.75 ಲಕ್ಷ ಕೋಟಿ ರೂಪಾಯಿ). ಹಿಂದಿನಿಂದಲೂ ಭಾರತದ ಆದಾಯ ಮತ್ತು ಸಂಪತ್ತು ವಿತರಣೆಯಲ್ಲಿ ತೀವ್ರ ಅಸಮಾನತೆಯಿತ್ತು. ಈಗ ದೇಶವು ದಿನೇ ದಿನೇ ಹೆಚ್ಚೆಚ್ಚು ಅಸಮಾನ ಸಮಾಜವಾಗಿ ಮಾರ್ಪಡುತ್ತಿದೆ.
ಗಾತ್ರ ಅಥವಾ ಗುಣಮಟ್ಟ- ಯಾವುದೇ ಆಧಾರದಲ್ಲಿ ನಿರ್ಧರಿಸಿದರೂ, ‘ಭಾರತ 75’ರ ಅಭಿವೃದ್ಧಿ ವರದಿ ಖಂಡಿತವಾ ಗಿಯೂ ಮಿಶ್ರವಾಗಿರುತ್ತದೆ. ಖಂಡಿತವಾಗಿಯೂ, ಈ ವೈಫಲ್ಯಗಳಿಗೆ ಪ್ರಸಕ್ತ ಸರಕಾರವೊಂದನ್ನೇ ಸಂಪೂರ್ಣ ಹೊಣೆಯಾಗಿಸಲು ಸಾಧ್ಯವಿಲ್ಲ. ಜವಾಹರಲಾಲ್ ನೆಹರೂ ನೇತೃತ್ವದ ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಪೋಷಿಸಿರಬಹುದು ಹಾಗೂ ಧಾರ್ಮಿಕ ಮತ್ತು ಭಾಷಾ ವೈವಿಧ್ಯತೆಗೆ ಉತ್ತೇಜನ ನೀಡಿರಬಹುದು. ಅನಕ್ಷರತೆಯನ್ನು ಹೋಗಲಾಡಿಸಲು ಮತ್ತು ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸಲು ಅದು ಅಗಾಧ ಕೆಲಸ ಮಾಡಿತು. ಅದು ಇದೇ ತೀವ್ರತೆಯಲ್ಲಿ ಭಾರತೀಯ ಉದ್ಯಮಿಗಳ ಮೇಲೂ ಹೆಚ್ಚಿನ ನಂಬಿಕೆಯನ್ನು ಇರಿಸಬೇಕಾಗಿತ್ತು.
ತಾನು ಯುದ್ಧ ಕಾಲದಲ್ಲಿ ಸಮರ್ಥ ನಾಯಕಿ ಎನ್ನುವುದನ್ನು ಇಂದಿರಾ ಗಾಂಧಿ ಸಾಧಿಸಿ ತೋರಿಸಿದರು. ಆದರೆ ಅವರ ಸರಕಾರವು ಸ್ವಾಯತ್ತ ಸಂಸ್ಥೆಗಳನ್ನು ತನ್ನ ಅಧೀನಕ್ಕೆ ಒಳಪಡಿಸಿತು ಮತ್ತು ಆರ್ಥಿಕತೆಯ ಮೇಲೆ ಸರಕಾರಿ ನಿಯಂತ್ರಣವನ್ನು ಬಲಗೊಳಿಸಿತು. ಅಷ್ಟೇ ಅಲ್ಲ, ಅವರು ರಾಜಕೀಯ ಪಕ್ಷವೊಂದನ್ನು ಕುಟುಂಬದ ಕಂಪೆನಿಯಾಗಿ ಪರಿವರ್ತಿಸಿದರು ಮತ್ತು ತನ್ನ ಸುತ್ತ ಅತಿರಂಜಿತ ವ್ಯಕ್ತಿತ್ವವೊಂದನ್ನು ಕಟ್ಟಿ ಬೆಳೆಸಿದರು. ಇವುಗಳೆಲ್ಲವೂ ನಮ್ಮ ರಾಜಕೀಯ ಬದುಕು ಮತ್ತು ನಮ್ಮ ಆರ್ಥಿಕ ಭವಿಷ್ಯಕ್ಕೆ ಗಂಭೀರ ಹಾನಿ ಮಾಡಿತು. ನರೇಂದ್ರ ಮೋದಿ ಸಂಪೂರ್ಣ ಸ್ವಯಂನಿರ್ಮಿತ ಹಾಗೂ ಅತ್ಯಂತ ಕಠಿಣ ಪರಿಶ್ರಮಿ ರಾಜಕಾರಣಿಯಾಗಿರಬಹುದು. ಆದರೆ, ಅವರು ಇಂದಿರಾ ಗಾಂಧಿಯ, ಎಲ್ಲವನ್ನೂ ತನ್ನ ನಿಯಂತ್ರಣಕ್ಕೆ ಒಳಪಡಿಸುವ ಧೋರಣೆ ಮತ್ತು ಸರ್ವಾಧಿಕಾರಿ ಪ್ರವೃತ್ತಿಗಳನ್ನು ಅನುಸರಿಸುತ್ತಿದ್ದಾರೆ. ಜೊತೆಗೆ ತನ್ನದೇ ಆದ ಆರೆಸ್ಸೆಸ್-ಪ್ರೇರಿತ ಬಹುಸಂಖ್ಯಾತ-ಪ್ರಧಾನ ವಿಶ್ವನೋಟವನ್ನು ಹೊಂದಿದ್ದಾರೆ. ಹಾಗಾಗಿ, ಮೋದಿಯವರ ಪರಂಪರೆಯನ್ನು ಅವರ ಭಕ್ತಗಡಣ ಈಗ ಹೇಗೆ ವಿಮರ್ಶಿಸುತ್ತಿದೆಯೋ, ಇತಿಹಾಸಕಾರರು ಅದಕ್ಕಿಂತ ತುಂಬಾ ಹೆಚ್ಚು ಕಠಿಣವಾಗಿ ವಿಮರ್ಶಿಸುತ್ತಾರೆ.
ಭರವಸೆ ಮತ್ತು ಸಾಮರ್ಥ್ಯಗಳ ನಡುವಿನ ಅಂತರವನ್ನು ವಿಶ್ಲೇಷಿಸುವಾಗ, ಈ ಅಂತರಗಳಿಗೆ ಶಕ್ತಿಶಾಲಿ ಮತ್ತು ಪ್ರಭಾವಿ ವ್ಯಕ್ತಿಗಳು ಹಾಗೂ ಅವರ ನೇತೃತ್ವದ ಸರಕಾರಗಳ ಕೃತ್ಯಗಳಲ್ಲಿ (ಮತ್ತು ಕುಕೃತ್ಯಗಳಲ್ಲಿ) ನಾವು ವಿವರಣೆಗಳನ್ನು ಹುಡುಕಬಹುದಾಗಿದೆ. ಅಥವಾ ಇದಕ್ಕೆ ನಾವು, ‘ಭಾರತದಲ್ಲಿ ಪ್ರಜಾಪ್ರಭುತ್ವ ಎನ್ನುವುದು ಮೂಲತಃ ಅಪ್ರಜಾಸತ್ತಾತ್ಮಕವಾಗಿರುವ ಭಾರತೀಯ ಮಣ್ಣಿಗೆ ಮೇಲು ಹೊದಿಕೆ ಹೊದಿಸಿದಂತೆ’ ಎಂಬ ಅಂಬೇಡ್ಕರ್‌ರ ಟಿಪ್ಪಣಿಯ ಆಧಾರದಲ್ಲಿ ಸಮಾಜಶಾಸ್ತ್ರೀಯ ವಿವರಣೆಯೊಂದನ್ನೂ ನೀಡಬಹುದಾಗಿದೆ. ಬಹುಶಃ ಭಾರತೀಯ ಸಂಸ್ಕೃತಿ ಮತ್ತು ಭಾರತೀಯ ಇತಿಹಾಸದಲ್ಲಿ ಹಾಸುಹೊಕ್ಕಾಗಿರುವ ವಿವಿಧ ರೂಪಗಳ ಸ್ವಾತಂತ್ರಹೀನತೆಯನ್ನು ಗಣನೀಯವಾಗಿ ತಗ್ಗಿಸಲು ಏಳೂವರೆ ದಶಕಗಳು ತೀರಾ ಅಲ್ಪ ಕಾಲಾವಧಿಯಾಗಿದೆ.
ಏನೇ ಆದರೂ, ನಮ್ಮ ನಾಯಕರು ನಮ್ಮ ಪರವಾಗಿ ನೀಡುವ, ಜಂಭಕೊಚ್ಚಿಕೊಳ್ಳುವ ರೂಪದಲ್ಲಿರುವ ಹೇಳಿಕೆಗಳಿಗೆ ನಾವು ಮಾರುಹೋಗದಿರೋಣ. ಇಂಥ ಹೇಳಿಕೆಗಳು ಮುಂದಿನ ದಿನಗಳಲ್ಲಿ ದೊಡ್ಡದಾಗಿ ಕೇಳಿಬರಲಿವೆ.
ಜಗತ್ತು ಭಾರತದತ್ತ ಮೆಚ್ಚುಗೆ ಮತ್ತು ಅಚ್ಚರಿಯಿಂದ ನೋಡುತ್ತಿಲ್ಲ. ಅದೇ ವೇಳೆ, ಸ್ವತಂತ್ರವಾಗಿ ಯೋಚಿಸಬಲ್ಲ ಮತ್ತು ನೋಡಬಲ್ಲ ಭಾರತೀಯರತ್ತಲೂ ಅದು ನೋಡುತ್ತಿಲ್ಲ. ಭಾರತವು ಔಪಚಾರಿಕವಾಗಿ ಸ್ವತಂತ್ರ ದೇಶವಾದರೂ, ಭಾರತೀಯರು ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಂಸ್ಥಿಕವಾಗಿ ಕಡಿಮೆ ಸ್ವಾತಂತ್ರವನ್ನು ಹೊಂದಿದ್ದಾರೆ. ಹಾಗಾಗಿ, ನಾವು ಮುಂದೆ ಮಾಡಬೇಕಾದ ಕೆಲಸ ತುಂಬಾ ಇದೆ.