ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ದಕ್ಕಿದ್ದೆಷ್ಟು?
ಆಟ-ಕೂಟ
ಭಾರತ ಈ ಬಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 61 ಪದಕಗಳನ್ನು ಪಡೆದುಕೊಂಡು ನಾಲ್ಕನೇ ಸ್ಥಾನದೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಹಿಂದಿನ ಆವೃತ್ತಿಗಳಲ್ಲಿ ಸಿಕ್ಕಿದಷ್ಟು ಪದಕಗಳು ಭಾರತಕ್ಕೆ ಸಿಗಲಿಲ್ಲ ನಿಜ. ಆದರೆ ಒಟ್ಟಾರೆ ಪ್ರದರ್ಶನವನ್ನು ಗಮನಿಸಿದರೆ ಭಾರತ ಒಂದಿಷ್ಟು ಸುಧಾರಿಸಿರುವುದು ಸ್ಪಷ್ಟವಾಗುತ್ತದೆ. ಈ ವರೆಗೂ ಪದಕ ದೊರೆಯದ ಕೆಲವು ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕ ದೊರೆತಿರುವ ಹಿನ್ನೆಲೆಯಲ್ಲಿ ಈ ಬಾರಿ ಉತ್ತಮ ಪ್ರದರ್ಶನ ನೀಡಿದೆ ಎಂದೇ ಹೇಳಬಹುದು. ಯಾಕೆಂದರೆ ಭಾರತಕ್ಕೆ ಪ್ರತೀ ಬಾರಿಯೂ ಗರಿಷ್ಠ ಪದಕಗಳನ್ನು ದೊರಕಿಸಿಕೊಡುವ ಶೂಟಿಂಗ್, ಆರ್ಚರಿ, ಗ್ರೀಕೋ- ರೋಮನ್ ಕುಸ್ತಿ, ಟೆನಿಸ್ ಈ ಬಾರಿಯ ಕೂಟದಲ್ಲಿ ಇರಲಿಲ್ಲ. ಹೀಗಾಗಿ ಬರ್ಮಿಂಗ್ ಹ್ಯಾಮ್‌ನಲ್ಲಿ ಭಾರತಕ್ಕೆ ಈ ಬಾರಿ 50 ಪದಕಗಳು ಸಿಕ್ಕಿದರೆ ಅದೇ ದೊಡ್ಡದು ಎನ್ನುವಂತಾಗಿತ್ತು.
ಆದರೆ ಲಾನ್ ಬಾಲ್‌ನಲ್ಲಿ ಚಿನ್ನ ಮತ್ತು ಬೆಳ್ಳಿ, ಕ್ರಿಕೆಟ್ ಮತ್ತು ಜ್ಯೂಡೋದಲ್ಲಿ ಬೆಳ್ಳಿ ಪದಕ ಸಿಕ್ಕಿರುವುದು ಭಾರತದ ಪಾಲಿಗೆ ಅಚ್ಚರಿಯ ಬೆಳವಣಿಗೆ. ಕೂಟದಲ್ಲಿ ಒಟ್ಟು 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚನ್ನು ಕ್ರೀಡಾಪಟುಗಳು ಭಾರತದ ಖಾತೆಗೆ ಜಮೆ ಮಾಡಿದ್ದಾರೆ. 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 101 (38 ಚಿನ್ನ) ಪದಕಗಳನ್ನು ಪಡೆದಿರುವುದು ಭಾರತದ ದೊಡ್ಡ ಸಾಧನೆ ಆಗಿದ್ದರೂ, ಇದು ತವರಿನಲ್ಲಿ ನಡೆದ ಕೂಟವಾಗಿರುವುದರಿಂದ ಭಾರತಕ್ಕೆ ಅನುಕೂಲವೆನ್ನಲಾಗಿತ್ತು. ಕ್ರೀಡಾಪಟುಗಳಿಗೆ ಸ್ವಂತ ದೇಶದಲ್ಲಿ ವಾತಾವರಣ ಪೂರಕವಾಗಿರುವುದರಿಂದ ಚೆನ್ನಾಗಿ ಪ್ರದರ್ಶನ ನೀಡುತ್ತಾರೆ, ಆದರೆ ನಿಜವಾದ ಸವಾಲು ಇರುವುದು ಇನ್ನೊಂದು ದೇಶದಲ್ಲಿ ನಡೆಯುವ ಸ್ಪರ್ಧೆಯಲ್ಲಿ.
ದಿಲ್ಲಿಯ 2010ರ ಸಿಡಬ್ಲ್ಯುಜೆ ಕೂಟದಲ್ಲಿ ಕ್ರಿಕೆಟ್ ಮತ್ತು ಜ್ಯೂಡೋ ಇರಲಿಲ್ಲ. ಲಾನ್‌ಬಾಲ್ ಇದ್ದರೂ, ಭಾರತ ತಂಡದ ಸಾಧನೆ ತೃಪ್ತಿಕರವಾಗಿ ಕಂಡು ಬರಲಿಲ್ಲ. ಆದರೆ ಬರ್ಮಿಂಗ್ ಹ್ಯಾಮ್‌ನಲ್ಲಿ ಲಾನ್‌ಬಾಲ್‌ನಲ್ಲಿ ಭಾರತ 2 ಪದಕ ಜಯಿಸಿದೆ. ಕ್ರಿಕೆಟ್ ಹಾಗೂ ಜ್ಯೂಡೋದಲ್ಲಿ ಭಾರತದ ಖಾತೆಗೆ ಹೆಚ್ಚುವರಿಯಾಗಿ ಪದಕಗಳು ಬಂತು.
ಮ್ಯಾಂಚೆಸ್ಟರ್‌ನಲ್ಲಿ 2002ರಲ್ಲಿ 69 ಪದಕ(ಚಿನ್ನ 30), 2018ರಲ್ಲಿ ಗೋಲ್ಡ್ ಕೋಸ್ಟ್ 66 ಪದಕ(26 ಚಿನ್ನ), 2014ರಲ್ಲಿ ಗ್ಲಾಸ್ಗೋದಲ್ಲಿ 64 ಪದಕ(15ಚಿನ್ನ) ಮತ್ತು 2006ರಲ್ಲಿ ಮೆಲ್ಬೋರ್ನ್ ನಲ್ಲಿ 50 ಪದಕ(ಚಿನ್ನ 22) ಭಾರತ ಗಳಿಸಿತ್ತು.
ಕಳೆದ ಐದು ಕೂಟಗಳಲ್ಲಿ ಭಾರತದ ಕ್ರೀಡಾಪಟುಗಳ ಪ್ರದರ್ಶನ ನೋಡಿದಾಗ ಭಾರತದ ಕ್ರೀಡಾ ಬೆಳವಣಿಗೆ ಚೆನ್ನಾಗಿ ಸಾಗಿದೆ. ವರ್ಷದಿಂದ ವರ್ಷಕ್ಕೆ ಬೇರೆ ಬೇರೆ ಕ್ರೀಡೆಗಳಲ್ಲಿ ಭಾರತ ಬಲಿಷ್ಠವಾಗಿ ರೂಪುಗೊಳ್ಳುತ್ತಿರುವುದನ್ನು ಗುರುತಿಸಬಹುದು.
ಕ್ರೀಡಾಕೂಟದಲ್ಲಿ 106 ಪುರುಷರು ಹಾಗೂ 104 ಮಹಿಳೆಯರು ಸೇರಿದಂತೆ 210 ಕ್ರೀಡಾಪಟುಗಳು ಪದಕ ಬೇಟೆಗೆ ತೆರಳಿದ್ದರು. ಭಾರತದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಕುಸ್ತಿ, ವೇಟ್ ಲಿಫ್ಟಿಂಗ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್‌ನಲ್ಲಿ ಪದಕ ಪಟ್ಟಿಯಲ್ಲಿ ಭಾರತಕ್ಕೆ ನಂಬರ್ ಒನ್ ಸ್ಥಾನ ಗಳಿಸಿ ಕೊಟ್ಟಿದ್ದಾರೆ.
ಈ ಬಾರಿ ಭಾರತದಿಂದ 15 ಮಂದಿ ವೇಟ್ ಲಿಫ್ಟರ್‌ಗಳು ತೆರಳಿದ್ದರು. ನಿರೀಕ್ಷೆಯಂತೆ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ಬಾರಿಗಿಂತ ಭಾರತದ ವೇಟ್ ಲಿಫ್ಟರ್‌ಗಳು ಕಡಿಮೆ ಚಿನ್ನ ಪಡೆದಿದ್ದರೂ, ಮೂರು ಚಿನ್ನ ಸೇರಿದಂತೆ 10 ಪದಕಗಳನ್ನು ಸಂಗ್ರಹಿಸಿ ಅದು ತನ್ನ ನಂ. 1 ಸ್ಥಾನವನ್ನು ಉಳಿಸಿಕೊಂಡಿದೆ. ಇದರಲ್ಲಿ ಮೂರು ಪದಕಗಳು ಮಹಿಳೆಯರಿಂದ ಬಂದಿದೆ. ಮಹಿಳಾ ಲಿಫ್ಟರ್‌ಗಳಲ್ಲಿ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು (49 ಕೆಜಿ) ಚಿನ್ನ ಉಳಿಸಿಕೊಂಡರೆ, ಬಿಂದ್ಯಾರಾಣಿ ದೇವಿ (55 ಕೆಜಿ) ಬೆಳ್ಳಿ ಮತ್ತು ಹರ್ಜಿಂದರ್ ಕೌರ್ (71 ಕೆಜಿ) ಕಂಚಿನ ಪದಕವನ್ನು ಪಡೆದರು.
ಜೆರೆಮಿ ಲಾಲ್ರಿನ್ನುಂಗಾ ಮತ್ತು ಅಚಿಂತಾ ಶೆಯುಲಿ 67 ಕೆಜಿ ಮತ್ತು 73 ಕೆಜಿ ವಿಭಾಗದಲ್ಲಿ ಚಿನ್ನದ ಗಳಿಸಿರುವುದು ಪುರುಷರ ವಿಭಾಗದಲ್ಲಿ ಉತ್ತಮ ಪ್ರದರ್ಶನ.
ಭಾರತದ ಖಾತೆಗೆ ಪ್ರತಿಯೊಂದು ಕಾಮನ್‌ವೆಲ್ತ್ ಗೇಮ್ಸ್ ಕೂಟಗಳಲ್ಲೂ ಭಾರತದ ವೇಟ್ ಲಿಫ್ಟರ್‌ಗಳು ಪದಕಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಶ್ರಮಿಸಿ ಯಶಸ್ವಿಯಾಗುತ್ತಾರೆ. ಆದರೆ ಇಂತಹ ವೇಟ್ ಲಿಫ್ಟರ್‌ಗಳು ಪದಕ ಪಡೆಯುವ ಮೊದಲು ಸವೆಸಿದ ಹಾದಿಯನ್ನು ನೋಡಿದರೆ ನಿಜಕ್ಕೂ ನಮಗೆ ಅಚ್ಚರಿಯಾಗುತ್ತದೆ. ಯಾಕೆಂದರೆ ಯಾರೂ ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಬಹುತೇಕ ಮಂದಿ ವೇಟ್ ಲಿಫ್ಟರ್‌ಗಳು ಕಠಿಣ ಪರಿಶ್ರಮದ ಮೂಲಕ ಸಾಧನೆಯ ಹಾದಿಯಲ್ಲಿ ಮುನ್ನಡೆದಿದ್ದಾರೆ.
ಈ ಬಾರಿ ಹಲವು ಮಂದಿ ಕ್ರೀಡಾಪಟುಗಳು ತಮ್ಮ ಕೊರಳಲ್ಲಿ ಚಿನ್ನದೊಂದಿಗೆ ಮನೆಗೆ ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಪಿ.ವಿ. ಸಿಂಧು ಮತ್ತು ಲಕ್ಷ ಸೇನ್ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಚಿನ್ನದ ಹಾದಿಯಲ್ಲಿ ಅಜೇಯರಾಗಿ ಮುಂದುವರಿದಿದ್ದಾರೆ. ಶರತ್ ಕಮಾಲ್ 4 ಪದಕಗಳನ್ನು ಬಾಚಿಕೊಂಡಿದ್ದಾರೆ ಈ ಪೈಕಿ 3 ಚಿನ್ನ ಮತ್ತು 1 ಬೆಳ್ಳಿ. ಪದಕಗಳನ್ನು ಗೆಲ್ಲುವ ಮೂಲಕ ಕಮಾಲ್ ಸಾಧನೆಗೆ ವಯಸ್ಸು ಅಡ್ಡಿಯಾಗದು ಎನ್ನುವುದನ್ನು ತೋರಿಸಿಕೊಟ್ಟರು. ಕೆಲವು ಅತ್ಲೀಟ್‌ಗಳು ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದರು. ಪುರುಷರ 3,000 ಮೀಟರ್ ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಕೀನ್ಯಾದ ಪ್ರಾಬಲ್ಯವನ್ನು ಮುರಿಯಲು ಅವಿನಾಶ್ ಸೇಬಲ್ ಅವರು ತಮ್ಮ ವೈಯಕ್ತಿಕ ಅತ್ಯುತ್ತಮ ಸಾಧನೆಯನ್ನು ಮಾಡಿದರು ಮತ್ತು ಹೊಸ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿ ಬೆಳ್ಳಿ ಗೆದ್ದರು. ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಎಲ್ದೋಸ್ ಪಾಲ್ ಚಿನ್ನ ಹಾಗೂ ಅಬ್ದುಲ್ಲಾ ಅಬೂಬಕರ್ ಬೆಳ್ಳಿ ಪದಕ ಪಡೆದರು. ಲಾನ್ ಬಾಲ್‌ನಲ್ಲಿ ಭಾರತದ ಮಹಿಳಾ ತಂಡ ಮೊದಲ ಚಿನ್ನ ಗೆದ್ದುಕೊಂಡಿತು. ಭಾರತವು ಕಾಮನ್‌ವೆಲ್ತ್ ಗೇಮ್ಸ್ ಬ್ಯಾಡ್ಮಿಂಟನ್ ಈವೆಂಟ್‌ನಲ್ಲಿ ಪುರುಷರ ಡಬಲ್ಸ್ ಚಿನ್ನವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು ಎಲ್ದೋಸ್ ಪಾಲ್ ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದು ಕೊಟ್ಟರು.
ಮುರಳಿ ಶ್ರೀಶಂಕರ್ ಪುರುಷರ ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಜೋಪ್ರಾ ಗಾಯದ ಕಾರಣದಿಂದಾಗಿ ಕೂಟದಲ್ಲಿ ಭಾಗವಹಿಸಲಿಲ್ಲ. ಒಂದೊಮ್ಮೆ ಅವರು ಕೂಟದಲ್ಲಿದ್ದಿದ್ದರೆ ಮತ್ತೊಂದು ಚಿನ್ನ ಸಿಗುವ ಸಾಧ್ಯತೆಯಿತ್ತು. ಭಾರತೀಯ ಪುರುಷರ ಹಾಕಿ ತಂಡವು ಫೈನಲ್ ತಲುಪಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧ 7-0 ಅಂತರದಿಂದ ಸೋತು ಬೆಳ್ಳಿಗೆ ತೃಪ್ತಿಪಡಬೇಕಾಯಿತು.