ಮಲ್ಪೆಯಲ್ಲಿ ಪೊಲೀಸ್ ದೌರ್ಜನ್ಯ ಪ್ರಕರಣ: ಎಸ್ಸೈ, ವೃತ್ತ ನಿರೀಕ್ಷಕರ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ
ಉಡುಪಿ: ಪೊಲೀಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಠಾಣೆ ಎಸ್ಸೈ ಸಕ್ತಿವೇಲು ಮತ್ತು ವೃತ್ತ ನಿರೀಕ್ಷಕ ಶರಣಗೌಡ ಪಾಟೀಲ್ ವಿರುದ್ಧ ಪ್ರಕರಣ ದಾಖಲಿಸುವಂತೆ ಉಡುಪಿ ನ್ಯಾಯಾಲಯ ಆದೇಶಿಸಿದೆ.
ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಹೂಡೆಯ ನಿವಾಸಿ ಹಿದಾಯತುಲ್ಲ (27) ಎಂಬವರ ಮನೆಗೆ ಎಸ್ಸೈ ಸಕ್ತಿವೇಲು ಮತ್ತು ವೃತ್ತ ನಿರೀಕ್ಷಕ ಶರಣಗೌಡ ಪಾಟೀಲ್ ಸೇರಿದಂತೆ ಏಳು ಮಂದಿ ಪೊಲೀಸರು 2021ರ ನ.29ರ ತಡರಾತ್ರಿ ಸುಮಾರು 2.30ರ ವೇಳೆಗೆ ಅಕ್ರಮವಾಗಿ ನುಗ್ಗಿ ಹಿದಾಯತುಲ್ಲನನ್ನು ಥಳಿಸಿ ಕಾನೂನು ಬಾಹಿರವಾಗಿ ಬಂಧಿಸಿ ಠಾಣೆಗೆ ಕರೆದೊಯ್ದಿದ್ದರೆಂದು ದೂರಲಾಗಿತ್ತು.
ಅಲ್ಲಿ ಅವರಿಗೆ ಬೂಟಿನಿಂದ ಥಳಿಸಿ, ಲಾಠಿಯಿಂದ ಹೊಡೆದಿರುವುದಲ್ಲದೆ ಅವಾಚ್ಯ ಶಬ್ದಗಳಿಂದ ಬೈದು, ಎನ್ಕೌಂಟರ್ ಮಾಡಿ ಮುಗಿಸುವುದಾಗಿ ಬೆದರಿಕೆಯೊಡ್ಡಿ, ತಪ್ಪೊಪ್ಪಿಗೆ ಬರಹಕ್ಕೆ ಸಹಿ ಮಾಡಲು ನಿರಂತರವಾಗಿ ದೈಹಿಕ ಹಲ್ಲೆ ನಡೆಸಿದರು. ಮಾರಣಾಂತಿಕವಾಗಿ ಹಲ್ಲೆಗೀಡಾದ ಹಿದಾಯತುಲ್ಲ ಅವರನ್ನು 2021ರ ಡಿ.4ರಂದು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಅಲ್ಲದೆ ಹಲ್ಲೆ ಘಟನೆ ಬಗ್ಗೆ ವೈದ್ಯರಿಗಾಗಲಿ, ನ್ಯಾಯಾಧೀಶರಿಗೆ ತಿಳಿಸಿದ್ದಲ್ಲಿ ಜೀವನ ಪೂರ್ತಿ ಜೈಲಲ್ಲಿ ಕೊಳೆಯುವಂತೆ ಮಾಡುವುದಾಗಿ ಪೊಲೀಸರು ಬೆದರಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಘಟನೆಯ ಬಗ್ಗೆ ಪೊಲೀಸರ ವಿರುದ್ಧ ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸಿಕೊಡಬೇಕಾಗಿ ಹಿದಾಯತುಲ್ಲಾ ಉಡುಪಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ಬಗ್ಗೆ ತನ್ನ ಪತ್ನಿ ಸೇರಿ ಹಲವು ಸಾಕ್ಷೀದಾರರನ್ನು ನ್ಯಾಯಲಯದ ಮುಂದಿರಿಸಿ ಘಟನೆಯ ಬಗ್ಗೆ ನ್ಯಾಯಾಲಯದ ಮುಂದೆ ವಿವರಿಸಿದರು. ದೂರನ್ನು ಮಾನ್ಯ ಮಾಡಿದ ನ್ಯಾಯಾಲಯವು ಎಸ್ಸೈ ಸಕ್ತಿವೇಲು ಮತ್ತು ವೃತ್ತ ನಿರೀಕ್ಷಕ ಶರಣಗೌಡ ಪಾಟೀಲ್ ವಿರುದ್ಧ ಐಪಿಸಿ ಸೆಕ್ಷನ್ 448, 452, 348, 342, 324, 325, 504, 506 ಜೊತೆಗೆ 24ರಂತೆ ಪ್ರಕರಣ ದಾಖಲಿಸಲು ಆದೇಶ ನೀಡಿದೆ.