ನ್ಯಾಯ ವ್ಯವಸ್ಥೆಯ ಅಣಕ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಶಾಸಕಾಂಗ, ಕಾರ್ಯಾಂಗ ಕೆಟ್ಟು ಗಬ್ಬೆದ್ದು ಹೋಗಿರುವ ಈ ದಿನಗಳಲ್ಲಿ ದೇಶದ ಮುಂದಿರುವ ಒಂದೇ ಭರವಸೆ ನ್ಯಾಯಾಂಗ. ಶಾಸಕಾಂಗ ಮತ್ತು ಕಾರ್ಯಾಂಗದ ಕೈಯಲ್ಲಿ ಸಂವಿಧಾನ ದುರ್ವ್ಯಾಖ್ಯಾನಗೊಳ್ಳುತ್ತಿರುವ ಸಂದರ್ಭದಲ್ಲಿ, ನ್ಯಾಯಾಂಗ ಕಟ್ಟೆಚ್ಚರದಿಂದಿರಬೇಕಾಗುತ್ತದೆ. ಸಂವಿಧಾನದ ಮೇಲೆ ದಾಳಿ ಪರೋಕ್ಷವಾಗಿ ನ್ಯಾಯ ವ್ಯವಸ್ಥೆಯ ಮೇಲೆ ನಡೆಯುವ ದಾಳಿಯೂ ಆಗಿರುತ್ತದೆ. ಸಂವಿಧಾನವನ್ನು ಉಳಿಸುವುದು ಎಂದರೆ ನ್ಯಾಯಾಂಗ ವ್ಯವಸ್ಥೆ ಸ್ವತಃ ತನ್ನನ್ನು ತಾನು ಕಾಪಾಡಿಕೊಳ್ಳುವುದು. ಆದರೆ ಇಂದಿನ ದಿನಗಳಲ್ಲಿ ಅಷ್ಟು ಸುಲಭದ ಕೆಲಸವೇನೂ ಅಲ್ಲ. ಇಂದು ನ್ಯಾಯ ವ್ಯವಸ್ಥೆಯಂತಹ ಉನ್ನತ ಸ್ಥಾನದಲ್ಲಿ ಯಾರಿರಬೇಕು ಎನ್ನುವುದು ಶಾಸಕಾಂಗದ ಮೂಲಕವೇ ತೀರ್ಮಾನವಾಗುವ ಪರಿಸ್ಥಿತಿ ಇದೆ. ಎಲ್ಲಿಯವರೆಗೆ ಶಾಸಕಾಂಗಕ್ಕೆ ನ್ಯಾಯಾಂಗದ ಒಳ ಸಂರಚನೆಗಳ ಮೇಲೆ ತನ್ನ ಪ್ರಭಾವವನ್ನು ಬೀರುವುದಕ್ಕೆ ಸಾಧ್ಯವಾಗುತ್ತದೆಯೋ ಅಲ್ಲಿಯವರೆಗೆ ನ್ಯಾಯಾಂಗ ಪೂರ್ಣ ಪ್ರಮಾಣದಲ್ಲಿ ಸಂವಿಧಾಕ್ಕೆ ಬದ್ಧವಾಗಿರುವುದು ಅಸಾಧ್ಯ.
ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿ ಸಂವಿಧಾನಕ್ಕೆ ಬದ್ಧವಾಗಿ ಕೆಲಸ ಮಾಡಬೇಕಾದರೆ ಆತ ಸಂಪೂರ್ಣವಾಗಿ ಸಂವಿಧಾನಕ್ಕೆ ಋಣಿಯಾಗಿರಬೇಕಾಗುತ್ತದೆ. ರಾಜಕೀಯ ನೇತಾರರಿಗೆ ಋಣಿಯಾಗಿದ್ದುಕೊಂಡು, ಸಂವಿಧಾನಕ್ಕೆ ನ್ಯಾಯಕೊಡಲು ಒಬ್ಬ ನ್ಯಾಯಾಧೀಶನಿಗೆ ಸಾಧ್ಯವಿಲ್ಲ. ಇಂತಹ ವ್ಯಕ್ತಿಗಳನ್ನು ರಾಜಕಾರಣಿಗಳು ನ್ಯಾಯಾಂಗ ವ್ಯವಸ್ಥೆಯ ವಿರುದ್ಧವೇ ಬಳಸುವ ಸಾಧ್ಯತೆಗಳಿವೆ. ನ್ಯಾಯಾಂಗ ವಿಸ್ಮತಿಗೆ ಒಳಗಾದಾಗ ಅಥವಾ ನಿದ್ರೆಗೊಳಗಾದಾಗ ಅದನ್ನು ಎಚ್ಚರಿಸುವ ಕೆಲಸವನ್ನು ನ್ಯಾಯ ವ್ಯವಸ್ಥೆಯೊಳಗಿದ್ದುಕೊಂಡೇ ಹಲವು ಹೋರಾಟಗಾರರು ಮಾಡಿಕೊಂಡು ಬಂದಿದ್ದಾರೆ. ಅವರಲ್ಲಿ ಪ್ರಮುಖರಾಗಿ ಸುಪ್ರೀಂಕೋರ್ಟ್ ನ್ಯಾಯವಾದಿ ಪ್ರಶಾಂತ್ ಭೂಷಣ್ ಒಬ್ಬರು.
ದೇಶದ ಸಂವಿಧಾನ ಆಪತ್ತಿಗೆ ಸಿಕ್ಕಿದಾಗಲೆಲ್ಲ ಅವರು ನ್ಯಾಯಾಲಯದ ಗಂಟೆಯನ್ನು ಜೋರಾಗಿ ಬಾರಿಸುತ್ತಾ ಬಂದಿದ್ದಾರೆ. ಮರಣದಂಡನೆ ಶಿಕ್ಷೆ ರಾಜಕೀಯಗೊಂಡಾಗ, ಲಾಕ್‌ಡೌನ್‌ನಿಂದ ವಲಸೆಕಾರ್ಮಿಕರ ಮಾರಣ ಹೋಮ ನಡೆದಾಗ, ಗುಜರಾತ್ ಹತ್ಯಾಕಾಂಡದಲ್ಲಿ ಸಂತ್ರಸ್ತರೇ ಆರೋಪಿಗಳ ಸ್ಥಾನದಲ್ಲಿ ನಿಲ್ಲುವ ಸ್ಥಿತಿ ಬಂದಾಗ ಇವರು ನ್ಯಾಯವ್ಯವಸ್ಥೆಯನ್ನು ಪ್ರಶ್ನಿಸುವುದಕ್ಕೂ ಹಿಂದೆ ಮುಂದೆ ನೋಡಿಲ್ಲ. ವಿಪರ್ಯಾಸವೆಂದರೆ, ಇದೀಗ ಇಂಡಿಯಾದ ಬಾರ್ ಕೌನ್ಸಿಲ್ ''ಪ್ರಶಾಂತ್ ಭೂಷಣ್‌ರವರು ಸುಪ್ರೀಂಕೋರ್ಟ್‌ನ್ನು ವ್ಯಂಗ್ಯವಾಡಿದ್ದಾರೆ'' ಎಂದು ಆಕ್ರೋಶವ್ಯಕ್ತ ಪಡಿಸಿದೆ. ''ಭೂಷಣ್ ಅವರು ತಮ್ಮ ವಾಕ್ ಸ್ವಾತಂತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಭಾರತ ವಿರೋಧಿ ಧೋರಣೆಯಲ್ಲಿ ತೊಡಗಿಕೊಂಡಿದ್ದಾರೆ'' ಎಂದೂ ಬಾರ್ ಕೌನ್ಸಿಲ್ ಆರೋಪಿಸಿದೆ. ಇತ್ತೀಚೆಗೆ ಸುಪ್ರೀಂಕೋರ್ಟ್‌ನಿಂದ ಹೊರ ಬೀಳುತ್ತಿರುವ ತೀರ್ಪುಗಳ ಬಗ್ಗೆ ಪ್ರಶಾಂತ್ ಭೂಷಣ್ ಅವರ ಪ್ರತಿಕ್ರಿಯೆಗಳನ್ನು ಮುಂದಿಟ್ಟು ಬಾರ್ ಕೌನ್ಸಿಲ್ ಪ್ರಶಾಂತ್ ಭೂಷಣ್ ವಿರುದ್ಧ ಆರೋಪಗಳನ್ನು ಮಾಡಿದೆ.
ಒಂದು ಕಾಲವಿತ್ತು. ನ್ಯಾಯಾಲಯ ನೀಡಿದ ಯಾವುದೇ ತೀರ್ಪನ್ನು ಏಕಮುಖವಾಗಿ ಆಕ್ಷೇಪಿಸುವುದಕ್ಕೆ ಆಗ ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿಯಿತ್ತು. ಅದಕ್ಕೆ ಮುಖ್ಯ ಕಾರಣ, ಅಂದಿನ ನ್ಯಾಯಮೂರ್ತಿಗಳು, ನ್ಯಾಯಾಧೀಶರು ನ್ಯಾಯಾಂಗದ ಘನತೆಗೆ ಯಾವುದೇ ರೀತಿಯ ಕುತ್ತು ಬರದಂತೆ ತಮ್ಮ ವರ್ಚಸ್ಸನ್ನು ಕಾಪಾಡಿಕೊಂಡು ಬಂದಿರುವುದು. 'ನ್ಯಾಯಾಂಗ ನಿಂದನೆ'ಯನ್ನು ಆಗ ಗಂಭೀರವಾಗಿ ತೆಗೆದುಕೊಳ್ಳಲಾಗುತ್ತಿತ್ತು. ರಾಜಕಾರಣಿಗಳು, ಸರಕಾರ ಪ್ರಜಾಸತ್ತೆಗೆ ಧಕ್ಕೆ ತಂದಾಗ, ನ್ಯಾಯಾಲಯವಿದೆ ಎನ್ನುವ ಆತ್ಮವಿಶ್ವಾಸ ಜನರಲ್ಲಿತ್ತು. ಆದರೆ ಇಂದು ನ್ಯಾಯಮೂರ್ತಿಗಳ ಕೆಲವು ನಡವಳಿಕೆಗಳು ನ್ಯಾಯಾಂಗ ವ್ಯವಸ್ಥೆಯನ್ನು ಅನುಮಾನ ಪಡುವಂತೆ ಮಾಡಿದೆ. ತಾವು ಓದಿದ ಸಂವಿಧಾನಕ್ಕೆ ಅಗೌರವ ತರುವಂತಹ ಕೆಲವರ ವರ್ತನೆಗಳು ನ್ಯಾಯಾಲಯಗಳ ತೀರ್ಪಿನ ಮೇಲೂ ಪರಿಣಾಮ ಬೀರುತ್ತಿವೆ. ಕೆಲವು ನ್ಯಾಯಾಧೀಶರು ಸಂವಿಧಾನ ವಿರೋಧಿಯಾಗಿರುವ ಮನುಸ್ಮತಿಯ ಕಡೆಗೆ ಒಲವು ಬೀರುವಂತಹ ಹೇಳಿಕೆಗಳನ್ನು ನೀಡಿದರೆ, ಇನ್ನು ಕೆಲವು ನ್ಯಾಯಮೂರ್ತಿಗಳು ಬಹಿರಂಗವಾಗಿಯೇ ರಾಜಕಾರಣಿಗಳ ಜೊತೆಗೆ ಗುರುತಿಸಿಕೊಳ್ಳುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಲೇ, ಲೈಂಗಿಕ ದೌರ್ಜನ್ಯ ಆರೋಪಗಳಲ್ಲಿ ಗುರುತಿಸಿಕೊಳ್ಳುತ್ತಾರೆ. ತಮ್ಮನ್ನು ತಾವೇ ಸಮರ್ಥಿಸಿ ತೀರ್ಪುಗಳನ್ನು ನೀಡುತ್ತಾರೆ. ನಿವೃತ್ತರಾದ ಬಳಿಕ ಸರಕಾರ ನೀಡುವ ಅಧಿಕಾರವನ್ನು ಯಾವ ಲಜ್ಜೆಯಿಲ್ಲದೆಯೇ ಅಲಂಕರಿಸುತ್ತಾರೆ. ಇಂತಹ ನ್ಯಾಯಾಧೀಶರು, ನ್ಯಾಯಮೂರ್ತಿಗಳು ನೀಡಿದ ತೀರ್ಪುಗಳ ಬಗ್ಗೆ ಜನಸಾಮಾನ್ಯರು ಅನುಮಾನ ವ್ಯಕ್ತಪಡಿಸಿದರೆ, ಆತಂಕ ವ್ಯಕ್ತಪಡಿಸಿದರೆ ಅದರಲ್ಲಿ ಅವರ ತಪ್ಪಾದರೂ ಏನಿದೆ?
ಹೈಕೋರ್ಟ್‌ನ ನ್ಯಾಯಾಧೀಶರೊಬ್ಬರು ನಿವೃತ್ತರಾಗುವ ದಿನ, ಗೋಮಾತೆಯ ಪಾವಿತ್ರವನ್ನು ಸಮರ್ಥಿಸುತ್ತಾ 'ಹೆಣ್ಣು ನವಿಲು ಗಂಡು ನವಿಲಿನ ಕಣ್ಣೀರು ಕುಡಿದು ಗರ್ಭ ಧರಿಸುತ್ತದೆ. ಅದಕ್ಕೆ ಪುರಾಣದಲ್ಲಿ ನವಿಲು ಪವಿತ್ರ' ಎಂಬ ಹೇಳಿಕೆಯನ್ನು ನೀಡುತ್ತಾರೆ. ಇಲ್ಲಿ ಎರಡು ಅಂಶಗಳನ್ನು ನಾವು ಗಮನಿಸಬೇಕು. ಈ ನಿವೃತ್ತ ನ್ಯಾಯಾಧೀಶರು ಗೋವಿನ ಪಾವಿತ್ರವನ್ನು ಸಮರ್ಥಿಸಲು ಸಂವಿಧಾನ ಅಥವಾ ಇನ್ನಿತರ ಸಾಕ್ಷಗಳನ್ನು ಬಳಸದೆ ಪುರಾಣವನ್ನು ಅವಲಂಬಿಸುತ್ತಾರೆ. ಜೊತೆಗೆ ನವಿಲು ಹೇಗೆ ಗರ್ಭ ಧರಿಸುತ್ತದೆ ಎನ್ನುವ ಸಾಮಾನ್ಯ ಜ್ಞಾನವೂ ಇವರಲ್ಲಿಲ್ಲ. ಇಂತಹ ನ್ಯಾಯಾಧೀಶರು ತಮ್ಮ ಅಧಿಕಾರಾವಧಿಯಲ್ಲಿ ಅದೆಂತಹ ತೀರ್ಪನ್ನು ನೀಡಿರಬಹುದು? ಎನ್ನುವ ಪ್ರಶ್ನೆ ಜನರಲ್ಲಿ ಉದ್ಭವಿಸಿದರೆ ಅದು ನ್ಯಾಯಾಂಗ ನಿಂದನೆ ಹೇಗಾಗುತ್ತದೆ? ಇನ್ನೊಂದೆಡೆ ದಿಲ್ಲಿಯಲ್ಲಿ ಹೈಕೋರ್ಟ್‌ನ್ಯಾಯಾಧೀಶೆಯೊಬ್ಬರು ಅಸಮಾನತೆಯನ್ನು ಬಹಿರಂಗವಾಗಿ ಪ್ರತಿಪಾದಿಸುವ, ವೇದವನ್ನು ಕೇಳಿದ ಶೂದ್ರರು, ದಲಿತರ ಕಿವಿಗೆ ಕಾದ ಸೀಸವನ್ನು ಹೊಯ್ಯಬೇಕು ಎನ್ನುವ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಮನುಸ್ಮತಿ ಕೃತಿಯನ್ನು ಬಹಿರಂಗವಾಗಿ ಸಮರ್ಥಿಸುತ್ತಾರೆ.
ಮಹಿಳೆಯರು ಸ್ವಾತಂತ್ರೋತ್ತರ ಭಾರತದಲ್ಲಿ ನ್ಯಾಯಾಧೀಶೆಯರಂತಹ ಉನ್ನತ ಸ್ಥಾನಕ್ಕೆ ಏರಲು ಕಾರಣವಾದ ಸಂವಿಧಾನವನ್ನು ಬದಿಗಿಟ್ಟು, ಮನುಸ್ಮತಿಯನ್ನು ಹಾಡಿ ಹೊಗಳುತ್ತಾರೆ. ಇಂತಹ ನ್ಯಾಯಾಧೀಶರ ತೀರ್ಪಿನ ಬಗ್ಗೆ ಜನರು ಪ್ರಶ್ನಿಸಿದರೆ, ವಿಷಾದ ವ್ಯಕ್ತಪಡಿಸಿದರೆ ಅದು ನ್ಯಾಯಾಂಗದ ಅಣಕ ಹೇಗಾಗುತ್ತದೆ? ಗುಜರಾತ್ ಹತ್ಯಾಕಾಂಡದಲ್ಲಿ ಆರೋಪಿಗಳಾಗಿದ್ದವರು ಒಬ್ಬೊಬ್ಬರಾಗಿ ಬಿಡುಗಡೆಗೊಳ್ಳುತ್ತಿದ್ದಾರೆ. ಸಂತ್ರಸ್ತರ ಪರವಾಗಿ ನ್ಯಾಯಕ್ಕಾಗಿ ಹೋರಾಡಿದವರು ಜೈಲು ಪಾಲಾಗಿದ್ದಾರೆ. ನ್ಯಾಯಾಲಯದ ತೀರ್ಪಿನ ಆಧಾರದಲ್ಲೇ ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಲಾಗಿದೆ. ಇಂತಹ ಸಂದರ್ಭದಲ್ಲಿ ಸಂವಿಧಾನದ ಮೇಲೆ, ನ್ಯಾಯ ವ್ಯವಸ್ಥೆಯ ಮೇಲೆ ಗೌರವವಿರುವವರು ವಿಷಾದದ ಹೇಳಿಕೆಗಳನ್ನು ವ್ಯಕ್ತಪಡಿಸಿದರೆ ಅದು ನ್ಯಾಯಾಲಯದ ಅಗೌರವವಾಗುತ್ತದೆಯೆ? ಇಂದು ನ್ಯಾಯಾಲಯವನ್ನು ಯಾವುದೇ ಹೊರಗಿನ ಶಕ್ತಿಗಳು ಅಣಕವಾಡುತ್ತಿಲ್ಲ. ಸ್ವತಃ ನ್ಯಾಯಾಧೀಶರೇ ತಾವು ನೀಡುವ ತೀರ್ಪಿನ ಮೂಲಕ ನ್ಯಾಯ ವ್ಯವಸ್ಥೆಯನ್ನು ಅಣಕಿಸುತ್ತಿದ್ದಾರೆ, ವ್ಯಂಗ್ಯವಾಡುತ್ತಿದ್ದಾರೆ. ನ್ಯಾಯಾಧೀಶರು ಸಂವಿಧಾನಕ್ಕೆ ಬದ್ಧವಾಗಿರದೇ, ಆಳುವವರಿಗೆ ಬದ್ಧರಾಗಿ ತೀರ್ಪು ನೀಡಿದಾಗಲಷ್ಟೇ ಇಂತಹ ಅನಾಹುತ ಸಂಭವಿಸಲು ಸಾಧ್ಯ.