ಎಸಿಬಿಯಲ್ಲಿ ದಾಖಲಾಗಿರುವ ಹಲವು ದೂರುಗಳು ಇನ್ನೂ ತನಿಖೆ ಹಂತದಲ್ಲಿವೆ
ಬೆಂಗಳೂರು: ಲಂಚ ಪ್ರಕರಣವೊಂದರಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಐಎಎಸ್ ಮಂಜುನಾಥ್ ಅವರೊಬ್ಬರನ್ನು ಬಂಧಿಸಿದ್ದ ಭ್ರಷ್ಟಾಚಾರ ನಿಗ್ರಹ ದಳವು ಕಳೆದ ಮೂರು ವರ್ಷಗಳಲ್ಲಿ ಐಎಎಸ್, ಐಪಿಎಸ್, ಐಎಫ್ಎಸ್ ಶ್ರೇಣಿಗೆ ಸೇರಿದ ಒಬ್ಬರೇ ಒಬ್ಬರು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿಲ್ಲ. ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ದೂರುಗಳನ್ನಾಧರಿಸಿ ಕ್ರಮವನ್ನೂ ಕೈಗೊಂಡಿಲ್ಲ.
ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿ ಆದೇಶ ಹೊರಡಿಸಿರುವ ಹೈಕೋರ್ಟ್, ಇಲ್ಲಿನ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಬೇಕು ಎಂದು ಸೂಚಿಸಿರುವ ಬೆನ್ನಲ್ಲೇ ಎಸಿಬಿ ಇದುವರೆಗೂ ನಡೆಸಿರುವ ದಾಳಿ, ದಾಖಲಾಗಿರುವ ದೂರುಗಳು, ತನಿಖೆ ಹಂತಗಳ ವಿವರಗಳು ಮುನ್ನೆಲೆಗೆ ಬಂದಿವೆ.
ಕಳೆದ 5 ವರ್ಷಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳವು ಒಟ್ಟು 310 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಒಟ್ಟು 76 ದಾಳಿ ಪ್ರಕರಣಗಳಲ್ಲಿ 371 ಮಂದಿ ಸರಕಾರಿ ನೌಕರರ, ಅಧಿಕಾರಿಗಳ ಕಚೇರಿ, ಮನೆ ಮೇಲೆ ದಾಳಿ ನಡೆಸಲಾಗಿದೆ. ಈ ಪೈಕಿ ಕೇವಲ 63 ಪ್ರಕರಣಗಳಲ್ಲಷ್ಟೇ ತನಿಖೆ ಮುಕ್ತಾಯಗೊಂಡಿದೆ. ಈ ಪ್ರಕರಣಗಳಲ್ಲಿ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಭ್ರಷ್ಟಾಚಾರ ನಿಗ್ರಹ ದಳವು ಒಟ್ಟು 223 ಪ್ರಕರಣಗಳಲ್ಲಿ ಶಿಫಾರಸು ಮಾಡಿದೆ.
ಕಳೆದ 3 ವರ್ಷಗಳಲ್ಲಿ ಒಟ್ಟು 1,075 ದೂರುಗಳು ದಾಖಲಾಗಿವೆ. ಈ ಪೈಕಿ ಕಳೆದ 3 ವರ್ಷಗಳ ಅವಧಿಯಲ್ಲಿ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಸಂಬಂಧ 76 ದಾಳಿ ಪ್ರಕರಣಗಳಿವೆ. 2019ರಲ್ಲಿ 379, 2020ರಲ್ಲಿ 296, 2021ರಲ್ಲಿ 360 ಮತ್ತು 2022ರ ಜನವರಿ ಅಂತ್ಯಕ್ಕೆ 40 ಸೇರಿ ಒಟ್ಟು 1,075 ದೂರು/ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 2019ರಲ್ಲಿ 48, 2020ರಲ್ಲಿ 50, 2021ರಲ್ಲಿ 67, 2022ರ ಜನವರಿ ಅಂತ್ಯಕ್ಕೆ 3 ಸೇರಿದಂತೆ 168 ಪ್ರಕರಣಗಳು ದಾಖಲಾಗಿವೆ.
ಆದರೆ ಈ ಯಾವ ಪ್ರಕರಣಗಳಲ್ಲಿಯೂ ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳ ಹೆಸರಿಲ್ಲ. ಬದಲಿಗೆ ಬೆರಳಣಿಕೆಯಷ್ಟು ಕೆಎಎಸ್ ಅಧಿಕಾರಿಗಳಿದ್ದಾರೆ. ಸಕಾಲ ಆಡಳಿತಾಧಿಕಾರಿ, ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು, ಹೆಚ್ಚುವರಿ ಆಯುಕ್ತರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಿಶೇಷ ಭೂ ಸ್ವಾಧೀನಾಧಿಕಾರಿ, ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕ, ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ, ಆರ್ಎಫ್ಒ, ಅಸಿಸ್ಟೆಂಟ್ ಎಕ್ಸಿ ಕ್ಯೂಟಿವ್ ಇಂಜಿನಿಯರ್, ಪೊಲೀಸ್ ಇನ್ಸ್ಪೆಕ್ಟರ್, ಜ್ಯೂನಿಯರ್ ಇಂಜಿನಿಯರ್, ಯೋಜನಾಧಿಕಾರಿ, ಫಿಸಿಯೋತೆರಪಿಸ್ಟ್, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಉಪ ನೋಂದಣಾಧಿಕಾರಿ, ಇಲೆಕ್ಟ್ರಿಕ್ ಇನ್ಸ್ಪೆಕ್ಟರ್, ಅಭಿವೃದ್ಧಿ ಅಧಿಕಾರಿ, ರಾಜಸ್ವ ನಿರೀಕ್ಷಕರು, ಯೋಜನಾ ನಿರ್ದೇಶಕರು, ಮೋಟಾರು ವಾಹನ ನಿರೀಕ್ಷಕರು, ಆರೋಗ್ಯಾಧಿಕಾರಿ, ಉಪನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರು, ಜಿಲ್ಲಾ ವ್ಯವಸ್ಥಾಪಕರು, ಸಹಾಯಕ ಕೃಷಿ ಅಧಿಕಾರಿ, ಸಹಾಯಕ ನಿಯಂತ್ರಕರಂತಹ ಮಧ್ಯಮ ಶ್ರೇಣಿಯ ಅಧಿಕಾರಿ, ನೌಕರರ ಮೇಲಷ್ಟೇ ದಾಳಿ ನಡೆಸಿದೆ.
ಹಾಗೆಯೇ 2016ರಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಎಸಿಬಿಯು 6 ವರ್ಷಗಳಿಂದಲೂ ಹಲವು ಪ್ರಕರಣಗಳು ತನಿಖೆ ಹಂತದಲ್ಲಿಯೇ ಇವೆ. ಇನ್ನು ಕೆಲವು ನ್ಯಾಯಾಲಯದ ವಿಚಾರಣೆ ಹಂತದಲ್ಲಿವೆ.
ಕೆಎಂಎಫ್ನ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಬಿ.ಸಿ, ವಿಧಾನಸಭೆ ಸಚಿವಾಲಯದ ಹಿಂದಿನ ಕಾರ್ಯದರ್ಶಿ ಎಸ್.ಮೂರ್ತಿ, ಆರ್ಎಫ್ಒ ಎನ್.ರಾಮಕೃಷ್ಣ, ಸಹಕಾರ ಸಂಘಗಳ ಜಂಟಿ ನಿಬಂಧಕ ಪಾಂಡುರಂಗ ಡಿ.ಗರಗ, ಕಿರಿಯ ಇಂಜಿನಿಯರ್ ಕೆ.ಸುಬ್ರಹ್ಮಣ್ಯಂ, ಬಿಬಿಎಂಪಿ ಪ್ರಥಮದರ್ಜೆ ಸಹಾಯಕ ಮಾಯಣ್ಣ , ಉಪ ನೋಂದಣಾಧಿಕಾರಿ ಪ್ರಭಾಕರ್ ಮಠದ್, ಬಮೂಲ್ ಉಪ ವ್ಯವಸ್ಥಾಪಕ ಡಾ.ಎನ್.ಶಿವಶಂಕರ್, ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಎಂ.ಬಿ.ನಾರಾಯಣಸ್ವಾಮಿ ಸೇರಿದಂತೆ ಹಲವರ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಏನನ್ನೂ ವಶಪಡಿಸಿಕೊಂಡಿಲ್ಲ ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ.
ಬೆಂಗಳೂರು ನಗರ ಯೋಜನೆಯ ಜಂಟಿ ನಿರ್ದೇಶಕ ಎಂ.ಸಿ.ಶಶಿಕುಮಾರ್, ಕೆಎಐಡಿಬಿಯ ಅಧೀಕ್ಷಕ ರುದ್ರಪ್ರಸಾದ್, ಕರ್ನಾಟಕ ಉದ್ಯೋಗ ಮಿತ್ರದ ಜಂಟಿ ನಿರ್ದೇಶಕ ರೇವಣ್ಣಗೌಡ, ಕೆಎಂಎಫ್ನ ಹಾಲಿ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್, ಹಗರಿ ತನಿಖಾ ಠಾಣೆಯ ಅಧಿಕಾರಿ, ನೌಕರರು, ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಕೆ.ಟಿ.ಹಾಲಸ್ವಾಮಿ, ಲೋಕೋಪಯೋಗಿ ಇಲಾಖೆಯ ಎಇಇ ಜಿ.ಸಿ.ಜಗದೀಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಮಂಜುನಾಥ್, ಎಇಇ ಎನ್.ಅಪ್ಪೆರೆಡ್ಡಿ, ಚಿಕ್ಕಬಳ್ಳಾಪುರದ ತಾಪಂ ಇಒ ಕೆ.ಪಿ.ಸಂಜೀವಪ್ಪ, ಸಾರಿಗೆ ಇಲಾಖೆಯ ಎಚ್.ಎಸ್.ಹೇಮಂತ್ಕುಮಾರ್, ಐಎಂವಿ ಅಧಿಕಾರಿಗಳು, ತುಮಕೂರು ಜಿಲ್ಲೆಯ ಉಪ ವಿಭಾಗಾಧಿಕಾರಿ ಎನ್.ತಿಪ್ಪೇಸ್ವಾಮಿ, ಸೇಡಂ ಉಪ ನೋಂದಣಾಧಿಕಾರಿ, ಅಳಂದ ಸಾರಿಗೆ ಚೆಕ್ ಪೋಸ್ಟ್ ಅಧಿಕಾರಿಗಳು, ಮೋಟಾರು ವಾಹನ ನಿರೀಕ್ಷಕ ಎನ್.ಪ್ರಭಾಕರ, ಮುಖ್ಯ ಉಪ ಭದ್ರತಾ ಜಾಗೃತಾಧಿಕಾರಿ ಶ್ರೀಪತಿ ಮರಿಯಪ್ಪದೊಡ್ಡಲಿಂಗಣ್ಣನವರ, ಸಿಟಿಒ ಶ್ರೀಕಂಠಮೂರ್ತಿ, ನಿರಂಜನ್, ಎಸ್ ನಾಗರಾಜು, ಮತ್ತಿತರರು, ಉಪ ನೋಂದಣಾಧಿಕಾರಿ ಶಿವಾನಂದ ಎಸ್.ಪಾಟೀಲ್, ಅಬಕಾರಿ ಉಪ ಆಯುಕ್ತ ಮೇರುನಂದನ್ ವಿರುದ್ಧದ ಪ್ರಕರಣಗಳಲ್ಲಿ ತನಿಖೆ ನಡೆಸಿದ್ದ ಎಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಇನ್ನುಳಿದ ಪ್ರಕರಣಗಳು ನ್ಯಾಯಾಲಯದಲ್ಲಿವ ವಿಚಾರಣೆ , ತನಿಖಾ ಹಂತದಲ್ಲಿವೆ.