varthabharthi


ಸಿನಿಮಾ

ಪಾ ರಂಜಿತ್‌ ಎಂಬ ನೀಲ ಬೆಳಕು: ತಮಿಳು ಚಿತ್ರೋದ್ಯಮದಲ್ಲಿ ಅಂಬೇಡ್ಕರ್‌ ದನಿಗೆ ದಶಕದ ಸಂಭ್ರಮ

ವಾರ್ತಾ ಭಾರತಿ : 15 Aug, 2022

ಚೆನ್ನೈ: ನಿರ್ದೇಶಕ ಪಾ ರಂಜಿತ್ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಂದಿಗೆ 10 ವರ್ಷಗಳು ತುಂಬಿವೆ. ಅವರ ‌ʼಅಟ್ಟಕ್ಕತ್ತಿʼ ಚಿತ್ರವು ಸರಿಯಾಗಿ ಹತ್ತು ವರ್ಷಗಳ ಹಿಂದೆ ಆಗಸ್ಟ್ 15, 2012 ರಂದು ಬಿಡುಗಡೆಯಾಗಿತ್ತು.

ದಿನೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರಕ್ಕೆ ತಮಿಳುನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ತಮಿಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ಚೆನ್ನೈ ಸುತ್ತಮುತ್ತಲಿನ ದಲಿತರ ಜೀವನದ ಬಗ್ಗೆ ನೈಜ್ಯವಾಗಿ ʼಅಟ್ಟಕತ್ತಿʼ ಚಿತ್ರವು ಮಾತನಾಡಿತ್ತು. ಈ ಕಾರಣಕ್ಕಾಗಿಯೇ ಅಟ್ಟಕತ್ತಿ ಚಿತ್ರವು ಸಾಕಷ್ಟು ಗಮನ ಸೆಳೆದಿತ್ತು, ಅದುವರೆಗೂ ಬಡತನದ, ಕರುಣಾಜನಕ ಕಥೆಗಳನ್ನೇ ದಲಿತ ಕೇರಿಗಳಲ್ಲಿ ಕಾಣಬಹುದಾಗಿದ್ದ ಚಿತ್ರಗಳಿಗಿಂತ ಭಿನ್ನವಾಗಿ, ಲವಲವಿಕೆಯ ದಲಿತರ ಜೀವನೋತ್ಸಾಹದ ಕತೆಯನ್ನು ಅಟ್ಟಕತ್ತಿ ಮೂಲಕ ನಿರ್ದೇಶಕ  ಪಾ ರಂಜಿತ್‌ ತೆರೆಯ ಮೇಲೆ ತಂದಿಟ್ಟಿದ್ದರು.

ಅದರ ಬಳಿಕ ಕಾರ್ತಿ ಮುಖ್ಯ ಭೂಮಿಕೆಯಲ್ಲಿರುವ ʼಮದ್ರಾಸ್ʼ ಚಿತ್ರವು 2014 ರಲ್ಲಿ ಬಿಡುಗಡೆಯಾಯಿತು. ದೊಡ್ಡ ರಾಜಕೀಯ ಪಕ್ಷಗಳ, ನೇತಾರರ ಚೇಳಾಗಳಾದ, ಕೈಯಾಳುಗಳಾದ ಹಿಂದುಳಿದ ವರ್ಗದ ಯುವಕರು ಹೇಗೆ ಬಲಿಯಾಗುತ್ತಾರೆ ಎಂಬುದರ ಕುರಿತು ಚಲನಚಿತ್ರವು ಶಕ್ತವಾಗಿ ಮಾತನಾಡಿತ್ತು. ತಮಿಳು ಚಿತ್ರರಂಗದಲ್ಲಿ ರೌಡಿಗಳು, ಪಿಕ್‌ ಪಾಕೆಟರ್‌ಗಳು, ಅಡಿಯಾಳುಗಳು ಮೊದಲಾದ ಪಾತ್ರಕ್ಕಷ್ಟೇ ಸೀಮಿತವಾಗಿದ್ದ ಹೌಸಿಂಗ್‌ ಕಾಲನಿ ಜನತೆಯ ಬದುಕಿನ ಮಜಲನ್ನು ಪಾ ರಂಜಿತ್‌ ಮನೋಜ್ಞವಾಗಿ ತೆರೆಯ ಮೇಲೆ ಬಿಡಿಸಿಕೊಟ್ಟಿದ್ದರು.  ಮೊದಲ ಚಿತ್ರದಂತೆಯೇ ಮದ್ರಾಸ್‌ ಚಿತ್ರದಲ್ಲೂ ಸಮಾಜದ ಅಂಚಿನಲ್ಲಿರುವ ಜನರ ಲವಲವಿಕೆಯ ಬದುಕನ್ನು ಪಾ ರಂಜಿತ್‌ ಸಿನೆಮಾದಲ್ಲಿ ತೋರಿಸಿದ್ದರು. ಈ ಚಿತ್ರವು ರಂಜಿತ್‌ಗೆ ತಮಿಳು ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನವನ್ನು ತಂದುಕೊಟ್ಟಿತು.

ಅದಾದ ನಂತರ ರಂಜಿತ್‌ ರಜನೀಕಾಂತ್‌ ಅವರನ್ನು ಇಟ್ಟು ಕಬಾಲಿ ಮತ್ತು ಕಾಲಾ ಚಿತ್ರಗಳನ್ನು ಮಾಡಿದಾಗ, ಭಾರತೀಯ ಸಿನೆಮಾ ಲೋಕವೇ ರಂಜಿತ್‌ ರನ್ನು ತಿರುಗಿ ನೋಡುವಂತೆ ಮಾಡಿತ್ತು. ಅದುವರೆಗೂ ರಜಿನಿಕಾಂತ್‌ರಿಗಿದ್ದ ಇಮೇಜಿಗೆ ಭಿನ್ನವಾಗಿ, ಅದೇ ವೇಳೆ ರಜಿನಿ ಅವರ ಇಮೇಜ್‌ ಕುಗ್ಗದಂತೆ ಎರಡು ಚಿತ್ರಗಳನ್ನು ಪಾ ರಂಜಿತ್‌ ಸಿನಿ ಪ್ರೇಕ್ಷಕರ ಮುಂದಿಟ್ಟಿದ್ದರು. ಈ ಎರಡು ಚಿತ್ರಗಳಲ್ಲಿ ರಾಜಕೀಯವನ್ನು ರಂಜಿತ್‌ ಶಕ್ತವಾಗಿ ಮುಂದಿಟ್ಟಿದ್ದರು.

ಅಂಬೇಡ್ಕರ್‌ ವಿಚಾರಗಳನ್ನು ಪ್ರತಿಪಾದಿಸಲು ಸಿನೆಮಾವನ್ನು ಬಳಸಿಕೊಂಡ ಪಾ ರಂಜಿತ್‌, ನಿಜ ಜೀವನದಲ್ಲಿ ಹಲವು ವೇದಿಕೆಗಳಲ್ಲಿ ನೀಲಿ, ಜೈಭೀಮ್‌ ಘೋಷಣೆಯೊಂದಿಗೆ ಜಾತಿ ಸಮಸ್ಯೆಗಳನ್ನು ಶಕ್ತವಾಗಿ ಚರ್ಚೆಗೆ ಎಳೆದು ತಂದರು. ಅಂಬೇಡ್ಕರ್‌ ಅವರನ್ನು ತೆರೆಯ ಮೇಲೆ ತರಲು ಹಿಂಜರಿಯುತ್ತಿದ್ದ ಕಾಲದಿಂದ ಜಾತಿ ಸಮಸ್ಯೆಯನ್ನು, ಅಂಬೇಡ್ಕರ್‌ ವಾದವನ್ನು ಮಾತನಾಡುವಂತಹ ಮುಖ್ಯವಾಹಿನಿ ಚಿತ್ರಗಳು ತಮಿಳು ಚಿತ್ರರಂಗದಲ್ಲಿ ಸಾಮಾನ್ಯವಾಗುವಂತೆ ಪಾ ರಂಜಿತ್‌ ಪ್ರಭಾವ ಇತರೆ ನಿರ್ದೇಶಕರಲ್ಲೂ ಮೂಡಿತು. ದಲಿತ ಕಥನ, ಅಂಬೇಡ್ಕರ್‌ವಾದ ಹಾಗೂ ತಮಿಳು ಚಿತ್ರರಂಗ ಎಂಬ ವಿಷಯದ ಮೇಲೆ ಏನೇ ಕೆಲಸ ಮಾಡಬೇಕಿದ್ದರೂ ತಮಿಳು ಚಿತ್ರರಂಗವನ್ನು ಪಾ ರಂಜಿತ್‌ ಬರುವ ಮೊದಲು ಹಾಗೂ ಪಾ ರಂಜಿತ್‌ ಬಂದ ನಂತರ ಎಂದು ವಿಭಾಗಿಸಿ ನೋಡುವಷ್ಟರ ಮಟ್ಟಿಗೆ ತಮಿಳು ಚಿತ್ರರಂಗದ ಮೇಲೆ ರಂಜಿತ್‌ ಪ್ರಭಾವ ತೀವ್ರವಾಗಿದೆ. ಪಾ ರಂಜಿತ್‌ ಬರುವವರೆಗೂ ವ್ಯಾಪಾರ ಆಧಾರಿತ ತಮಿಳು ಚಿತ್ರರಂಗದ ಯಾವ ನಿರ್ದೇಶಕನೂ ತನ್ನ ರಾಜಕೀಯ ಅಭಿಪ್ರಾಯಗಳನ್ನು ಇಷ್ಟು ದಿಟ್ಟತನದಿಂದ ಸಾರ್ವಜನಿಕವಾಗಿ ವ್ಯಕ್ತಪಡಿಸಿರಲಿಲ್ಲ.

ನಿರ್ದೇಶನಕ್ಕೆ ಮಾತ್ರ ಸೀಮಿತವಾಗದೆ, ನೀಲಂ ಪ್ರೊಡಕ್ಷನ್ಸ್ ಮೂಲಕ ನಿರ್ಮಾಪಕರೂ ಆದರು ಪಾ ರಂಜಿತ್.‌ ನೀಲಂ ಪ್ರೊಡಕ್ಷನ್‌ ಮೂಲಕ  ಬಂದ ಪರಿಯೇರುಂ ಪೆರುಮಾಳ್‌ ಚಿತ್ರ ಪಾ ರಂಜಿತ್‌ ಕೆಲಸವನ್ನು ಮುಂದಿನ ಹಂತಕ್ಕೆ ವಿಸ್ತರಿಸಿತು. ಮಾರಿ ಸೆಲ್ವರಾಜ್‌ ನಿರ್ದೇಶನದ ಈ ಚಿತ್ರವು ದೇಶದಾದ್ಯಂತ ಬೌದ್ಧಿಕ ವಲಯದಲ್ಲಿ ಚರ್ಚೆಗಳನ್ನು ಹುಟ್ಟು ಹಾಕಿತು. ಮಾರಿ ಸೆಲ್ವರಾಜ್‌ ನೇರವಾಗಿ ಜಾತಿ ಸಮಸ್ಯೆಯನ್ನು ಉಲ್ಲೇಖಿಸಿಯೇ ಚಿತ್ರವನ್ನು ಕಟ್ಟಿಕೊಟ್ಟಿದ್ದರು ಜಾತಿ ಸಮಸ್ಯೆ ಕುರಿತ ವಿವಿಧ ಚರ್ಚೆಗಳನ್ನು ಪರಿಯೇರುಂ ಪೆರುಮಾಳ್‌ ಹುಟ್ಟುಹಾಕಿತು. ಅದಕ್ಕೆ ಬೇಕಾದ ಎಲ್ಲಾ ಬೆಂಬಲವನ್ನು ಪಾ ರಂಜಿತ್‌ ಮಾಡಿ ಕೊಟ್ಟಿದ್ದರು.  ಸದ್ಯ, ನೀಲಂ ಪ್ರೊಡಕ್ಷನ್ ಮೂಲಕ ಹಲವು ಹೊಸ ನಿರ್ದೇಶಕರು ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಅದೇ ರೀತಿ ಕ್ಯಾಸಲ್ ಲೆಸ್ ಕಲೆಕ್ಟಿವ್ ಎಂಬ ಹೆಸರಿನಲ್ಲಿ ಅವರು ಆರಂಭಿಸಿದ ಬ್ಯಾಂಡ್  ಸಂಗೀತ ಕ್ಷೇತ್ರದಲ್ಲೂ ಹೊಸ ಅಲೆಯನ್ನೆಬ್ಬಿಸಿದೆ. ಅರುಳ್‌, ಗಾನ ಮೊದಲಾದವರು ಈ ಬ್ಯಾಂಡ್‌ ಮೂಲಕ ಜನಪ್ರಿಯರಾದರು. ರ್ಯಾಪ್‌ ಸಂಗೀತದ ಮೂಲಕ ರಾಜಕೀಯ ಬಿಕ್ಕಟ್ಟುಗಳನ್ನು, ಸಮಸ್ಯೆಗಳನ್ನು ದಿಟ್ಟವಾಗಿ ಪ್ರಸ್ತುತಿ ಮಾಡುವ ಈ ತಂಡವು ಪಾ ರಂಜಿತ್‌ ಅವರ ಸಾಧನೆಯ ಒಂದು ಭಾಗವೂ ಹೌದು.

ಅಷ್ಟು ಮಾತ್ರವಲ್ಲದೆ, ರಂಜಿತ್ ಅವರು ನೀಲಂ ಪಬ್ಲಿಕೇಷನ್ಸ್ ಎಂಬ ಪ್ರಕಾಶನ ಸಂಸ್ಥೆಯನ್ನು ಸಹ ಪ್ರಾರಂಭಿಸಿದ್ದಾರೆ, ಅದರ ಮೂಲಕ ಅನೇಕ ಕವಿಗಳು ಮತ್ತು ಬರಹಗಾರರು ತಮ್ಮ ಕೃತಿಗಳನ್ನು ಪ್ರಕಟಿಸಿದ್ದಾರೆ. ನೀಲಂ ಎಂಬ ಮಾಸಪತ್ರಿಕೆಯನ್ನೂ ಆರಂಭಿಸಿ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಒಟ್ಟಾರೆ, ಪ್ರತಿಭಾವಂತರನ್ನು ಕಲೆ ಹಾಕಿ ರಂಜಿತ್‌ ಅವರಿಗೆ ಬೇಕಾದ ಅವಕಾಶಗಳನ್ನು ನಿರ್ಮಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ವರ್ಷ ರಂಜಿತ್ ಅವರ ನಿರ್ದೇಶನದ ಸಾರ್ಪಟ್ಟೈ ಪರಂಬರೈ ಚಿತ್ರವು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಗೊಂಡಿತು. ತಮಿಳು ಚಿತ್ರರಂಗದಲ್ಲಿ ಬಿಡುಗಡೆಯಾದ ಎಲ್ಲಾ ಕ್ರೀಡಾ ಕೇಂದ್ರಿತ ಚಿತ್ರಗಳಿಗಿಂತ ಭಿನ್ನವಾಗಿ ಈ ಚಿತ್ರವು ಕ್ರೀಡೆಯೊಂದಿಗೆ ಜಾತಿ ಹೇಗೆ ತಳುಕು ಹಾಕಿಕೊಂಡಿದೆ ಎಂಬುದನ್ನು ಚರ್ಚಿಸಿತು. ಕ್ರೀಡಾ ಕೇಂದ್ರಿತ ಚಿತ್ರಗಳಲ್ಲಿ ಮುಖ್ಯಪಾತ್ರದಂತೆ ಪೋಷಕ ಪಾತ್ರಕ್ಕೂ ಮಹತ್ವ ಕೊಡುವುದು ವಿರಳ. ಅದಾಗ್ಯೂ, ಎಲ್ಲಾ ಸಿದ್ಧ ಮಾದರಿಗಳನ್ನು ಒಡೆದು ಹಾಕಿ ಬಂದ ಸಾರ್ಪಟ್ಟೈ ಪರಂಬರೈ ಮುಖ್ಯಪಾತ್ರಗಳಂತೆ ಪೋಷಕ ಪಾತ್ರಗಳನ್ನು ದೊಡ್ಡ ರೀತಿಯಲ್ಲಿ ತೋರಿಸಿತ್ತು.

“ತಮಿಳು ಚಿತ್ರರಂಗದಲ್ಲಿ, ದೀನದಲಿತರು ಮತ್ತು ತುಳಿತಕ್ಕೊಳಗಾದವರನ್ನು ಮುಖ್ಯಪಾತ್ರಗಳು ಮತ್ತು ಕಥೆಗಾರರಾಗಿ ಒಳಗೊಂಡ ಚಲನಚಿತ್ರಗಳು ಬಹಳ ಕಡಿಮೆ ಇದ್ದವು. ರಂಜಿತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಅದನ್ನು ಬದಲಾಯಿಸಿತು. ರಂಜಿತ್ ಅವರ ಚಿತ್ರಗಳು ರಾಜಕೀಯ ಅಜೆಂಡಾದೊಂದಿಗೆ ತಮ್ಮ ಚಿತ್ರಕಥೆಗಳನ್ನು ಸಿದ್ಧಪಡಿಸುವಂತೆ ನಿರ್ದೇಶಕರನ್ನು ಒತ್ತಾಯಿಸಿವೆ” ಎಂದು ನಿರ್ದೇಶಕ ರಾಮ್ ಹೇಳಿರುವುದು ಉಲ್ಲೇಖಾರ್ಹ.

ಅದೇ ರೀತಿ ಅಸುರನ್‌, ವಡ ಚೆನ್ನೈ ಮೊದಲಾದ ಕ್ಲಾಸಿಕ್‌ ಚಿತ್ರಗಳನ್ನು ನಿರ್ದೇಶಿಸಿರುವ ವೆಟ್ರಿಮಾರನ್‌, “ಪಾ ರಂಜಿತ್‌ ಒಬ್ಬ ಸಿನೆಮಾ ತಯಾರಿಸುವ ರಾಜಕಾರಣಿ” ಎಂದಿರುವುದೂ ಪಾ ರಂಜಿತ್‌ ಗೆ ನೀಡಿರುವ ವಿಶೇಷಣ.   

ಪಾ ರಂಜಿತ್‌ ಚಿತ್ರಗಳಲ್ಲಿ ಲಿಂಗ ಸಮಾನತೆ

ರಂಜಿತ್‌ ತನ್ನ ಸಿನೆಮಾಗಳಲ್ಲಿ ಸಮಾಜದ ಅಂಚಿನ ಜನರ ಕತೆಯನ್ನು ಎಷ್ಟು ಜತನದಿಂದ ರಚಿಸುತ್ತಾರೋ ಅಂತೆಯೇ ಮಹಿಳೆಯರ ಪಾತ್ರಕ್ಕೂ ಅವರು ನೀಡುವ ಪ್ರಾಮುಖ್ಯತೆ ಅವರನ್ನು ವಿಶೇಷವಾಗಿ ನಿಲ್ಲಿಸಿದೆ. ಗ್ಲಾಮರ್‌ ಸರಕುಗಳಾಗಿ ನಟಿಯರನ್ನು ತೋರಿಸಿರುವುದು ರಂಜಿತ್‌ ಸಿನೆಮಾಗಳಲ್ಲಿ ನೋಡಲು ಸಾಧ್ಯವೇ ಇಲ್ಲ. ಬದಲಾಗಿ, ಹೋರಾಟದ, ಕೆಚ್ಚಿನ, ಶಕ್ತಿಯುತ ಮಹಿಳೆಯರ ಪಾತ್ರವನ್ನು ರಂಜಿತ್‌ ನಿರ್ಮಿಸಿಕೊಟ್ಟಿದ್ದಾರೆ.

ಸರಪಟ್ಟ ಪರಂಬರೈ ನಲ್ಲಿ, ಮುಖ್ಯ ಪಾತ್ರ ನಿರ್ವಹಿಸುವ ನಾಯಕ ಕೂಡ ಗುಂಪಿನ ಮುಂದೆ ಅಳಬಹುದು, ತನ್ನ ಹೆಂಡತಿ ಅಥವಾ ತಾಯಿಯಲ್ಲಿ ಕ್ಷಮೆ ಕೇಳಬಹುದು, ಪತ್ನಿಯ ಪಾದಗಳಿಗೆ ಬಿದ್ದು ಸೋಲನ್ನು ಒಪ್ಪಿಕೊಳ್ಳಬಹುದು ಎಂಬುದನ್ನು ತೋರಿಸುತ್ತಾರೆ. ತಥಾಗಥಿತ ಪುರುಷ ಕೇಂದ್ರಿತ ಕಥೆಗಳಲ್ಲಿ ಕಂಡುಬರುವ ಸ್ಟಿರಿಯೋಟೈಪ್‌ಗಳನ್ನು ರಂಜಿತ್‌ ಈ ಚಿತ್ರದಲ್ಲಿ ಆ ಮೂಲಕ ಒಡೆದು ಹಾಕುತ್ತಾರೆ.

ಕಬಾಲಿ ಚಿತ್ರದಲ್ಲಿ ಖಳರಿಂದ ನಾಯಕನನ್ನು (ರಜಿನಿಕಾಂತ್‌) ಮಹಿಳಾ ಪಾತ್ರವು ರಕ್ಷಿಸುವಂತಹ ದೃಶ್ಯವನ್ನು ಇಟ್ಟ ನಿರ್ದೇಶಕ ರಂಜಿತ್‌, ಕಾಲಾ ಚಿತ್ರದಲ್ಲಿ ಮೂರು ಪ್ರಬಲ ಮಹಿಳಾ ಪಾತ್ರಗಳನ್ನು ಪ್ರೇಕ್ಷಕರ ಮುಂದಿಡುತ್ತಾರೆ. ಅದರಲ್ಲಿ ಮುಖ್ಯವಾದದ್ದು ʼಪುಯಲ್‌ʼ ಎಂಬ ಯುವತಿಯ ಪಾತ್ರ. ದೃಶ್ಯವೊಂದಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಪೋಲಿಸರು ಪುಯಲ್ ರನ್ನು ವಿವಸ್ತ್ರಗೊಳಿಸುತ್ತಾರೆ. ಈ ದೃಶ್ಯವು ರಂಜಿತ್‌ ಅವರ ಲಿಂಗ ರಾಜಕೀಯದಲ್ಲಿ ನಿರ್ಣಾಯಕ ದೃಶ್ಯವಾಗಿದೆ. ವಿವಸ್ತ್ರೆಯಾದ ಪುಯಲ್‌ ತನ್ನ ಸಲ್ವಾರ್ ಬಿದ್ದ ಕಡೆಗೆ ತೆವಳುತ್ತಾಳೆ. ಆದರೆ ಪುಯಲ್  ಬಟ್ಟೆಯನ್ನು ತೆಗೆದುಕೊಳ್ಳುವುದಿಲ್ಲ, ಬದಲಾಗಿ ಅದರ ಪಕ್ಕದಲ್ಲಿರುವ ದೊಣ್ಣೆಯನ್ನು ಎತ್ತಿಕೊಳ್ಳುತ್ತಾಳೆ. ಬಿದ್ದಲ್ಲಿಂದ ಎದ್ದು ನಿಂತು, ಭಾಗಶಃ ವಿವಸ್ತ್ರಗೊಂಡರೂ ತನ್ನ ಪ್ರತಿರೋಧದ ಭಾಗವಾಗಿ ಪೊಲೀಸರ ಮೇಲೆ ಎರಗುತ್ತಾಳೆ. ಈ ದೃಶ್ಯವು ಭಾರತೀಯ ಚಿತ್ರರಂಗದಲ್ಲಿ ತೀರಾ ಹೊಸದು. ನಗ್ನತೆ ಪ್ರದರ್ಶನವಾದರೆ, ಲೈಂಗಿಕ ದೌರ್ಜನ್ಯಕ್ಕೊಳಗಾದರೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪಾತ್ರಗಳನ್ನು ಸಾಧಾರಣವಾಗಿ ಕಾಣಬಹುದಾಗಿದ್ದ ಚಿತ್ರರಂಗದಲ್ಲಿ ಪಾ. ರಂಜಿತ್‌ ತಂದ ಇಂತಹ ಬದಲಾವಣೆಗಳು ಸಾಧಾರಣವಾದದ್ದೇನಲ್ಲ. ಆರ್ಟ್‌ ಚಿತ್ರಗಳಿಗೂ ಕೂಡಾ ಸಾಧ್ಯವಾಗದ ರೀತಿ ರಾಜಕೀಯವನ್ನು, ರಾಜಕಾರಣ ಅಜೆಂಡಾವನ್ನು ಮುಖ್ಯವಾಹಿನಿಯ ಕಮರ್ಷಿಯಲ್‌ ಚಿತ್ರಗಳ ಮೂಲಕ ಜನರನ್ನು ತಲುಪಿಸುತ್ತಿರುವುದು ಪಾ. ರಂಜಿತ್‌ ಎಂಬ ನೀಲಿ ದೈತ್ಯನ ವಿಶೇಷ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)