ವಿಚಾರಣಾಧೀನ ಕೈದಿಗಳ ಬಿಡುಗಡೆ ಯಾವಾಗ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶ ಮಾಡಿ ಎಂಬತ್ತೆರಡು ವಯಸ್ಸಿನ ಕವಿ ವರವರರಾವ್ ಅವರಿಗೆ ಜಾಮೀನು ನೀಡಿದೆ. ವಿವಾದಾತ್ಮಕವಾದ ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ ಯನ್ವಯ ಕಳೆದ ಮೂರು ವರ್ಷಗಳಿಂದ ಬಂಧನದಲ್ಲಿರುವ ವರವರರಾವ್‌ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಆಕ್ಷೇಪ ವ್ಯಕ್ತಪಡಿಸಿತ್ತು. ಈ ಆಕ್ಷೇಪಣೆಯನ್ನು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್ ಅನಾರೋಗ್ಯ ಮತ್ತು ವೃದ್ಧಾಪ್ಯದ ಕಾರಣವನ್ನು ಗಮನಿಸಿ ಜಾಮೀನು ನೀಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಅದೇ ರೀತಿ ಇನ್ನೂ ಸಾವಿರಾರು ಅಮಾಯಕ ಜನರು ವಿಚಾರಣಾಧೀನ ಕೈದಿಗಳಾಗಿ ಯಾತನೆಯನ್ನು ಅನುಭವಿಸುತ್ತಿದ್ದಾರೆ. ಇಂಥವರನ್ನು ಬಿಡುಗಡೆ ಮಾಡಲು ಯೋಜನೆಯೊಂದನ್ನು ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ಸರಕಾರಕ್ಕೆ ಸೂಚಿಸಿರುವುದೂ ಸೂಕ್ತವಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಲವು ಉಪಯುಕ್ತ ಯೋಜನೆಗಳನ್ನು ಒಕ್ಕೂಟ ಸರಕಾರ ರೂಪಿಸಿದೆ. ಇದೇ ಸಂದರ್ಭದಲ್ಲಿ ಕಳೆದ ಹತ್ತು ವರ್ಷಗಳಿಂದ ಜೈಲಿನಲ್ಲಿ ಇರುವವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಮತ್ತು ಹದಿನಾಲ್ಕು ವರ್ಷಗಳಿಂದ ಸೆರೆಮನೆಯಲ್ಲಿ ಇರುವವರನ್ನು ಬಂಧಮುಕ್ತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ.ಎಂ. ಸುಂದರೇಶ್ ಅವರು ಇರುವ ನ್ಯಾಯಪೀಠ ಸೂಚಿಸಿದೆ.ಅದರಲ್ಲೂ ವಿಶೇಷವಾಗಿ ಆರ್ಥಿಕವಾಗಿ ದುರ್ಬಲರಾಗಿರುವ ಕೈದಿಗಳನ್ನು ಬಿಡುಗಡೆ ಮಾಡಲು ನ್ಯಾಯಾಲಯ ಸಲಹೆ ನೀಡಿದೆ.
ಸೆರೆಮನೆಗಳಲ್ಲಿ ವಿಚಾರಣಾಧೀನ ಕೈದಿಗಳು ಅನುಭವಿಸುತ್ತಿರುವ ಯಾತನೆ ಯಾರಿಗೂ ಬೇಡ. ಇವರಲ್ಲಿ ಬಹುತೇಕ ಮಂದಿ ತಮ್ಮ ಬದುಕಿನ ಬಹು ಮುಖ್ಯ ಕಾಲಾವಧಿಯನ್ನು ವಿನಾಕಾರಣ ಜೈಲುಗಳಲ್ಲಿ ಕಳೆಯುತ್ತಾರೆ.ಅನೇಕರ ಯೌವನ ಸೆರೆಮನೆಯ ಕತ್ತಲು ಕೋಣೆಗಳಲ್ಲಿ ಬಾಡಿ ಹೋಗುತ್ತದೆ.ವಿಚಾರಣಾಧೀನ ಕೈದಿಗಳಲ್ಲಿ ಅನೇಕರಿಗೆ ತಮ್ಮ ಪರವಾಗಿ ವಾದಿಸಲು ಪರಿಣಿತ ವಕೀಲರನ್ನು ನೇಮಕ ಮಾಡಿಕೊಳ್ಳುವ ಆರ್ಥಿಕ ಸಾಮರ್ಥ್ಯ ಇರುವುದಿಲ್ಲ. ಇನ್ನು ಹಲವರಿಗೆ ಕಾನೂನು ಕಾಯ್ದೆಗಳ ಬಗ್ಗೆ ಜ್ಞಾನ ಇರುವುದಿಲ್ಲ. ಹೀಗಾಗಿ ಸಣ್ಣಪುಟ್ಟ ಅಪರಾಧ ಎಸಗಿದ ಹಾಗೂ ಯಾವುದೇ ಅಪರಾಧ ಮಾಡದ ಅನೇಕರು ಬಂದಿಖಾನೆಗಳಲ್ಲಿ ಹಲವಾರು ವರ್ಷಗಳಿಂದ ಕೊಳೆಯುತ್ತಿದ್ದಾರೆ.ಇಂಥವರಿಗೆ ನ್ಯಾಯ ಸಿಗಬೇಕಾಗಿದೆ.
ನ್ಯಾಯದಾನ ವಿಳಂಬ ಎಂಬುದು ನ್ಯಾಯ ನಿರಾಕರಣೆ ಎಂಬ ಅಭಿಪ್ರಾಯ ವನ್ನು ಅನೇಕ ಹಿರಿಯ ನ್ಯಾಯವಾದಿಗಳು ಮತ್ತು ನ್ಯಾಯಮೂರ್ತಿಗಳು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.
ನ್ಯಾಯಾಲಯಗಳಲ್ಲಿ ವಿಚಾರಣೆಯಾಗದೆ ಉಳಿದ ಸಾವಿರಾರು ಪ್ರಕರಣಗಳಿವೆ. ಇದಕ್ಕೆ ಸಿಬ್ಬಂದಿಯ ಕೊರತೆಯೂ ಒಂದು ಕಾರಣವಾಗಿದೆ.ವಿಚಾರಣೆ ಇಲ್ಲದೆ ಜೈಲುಗಳಲ್ಲಿ ಕೊಳೆ ಹಾಕುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವುದಿಲ್ಲ. ನ್ಯಾಯದಾನದಲ್ಲಿ ವಿಳಂಬವಾದರೆ ಅದು ಕೈದಿಗಳ ತಪ್ಪಲ್ಲ. ಮಾಡದ ತಪ್ಪಿಗೆ ಅವರೇಕೆ ಬೆಲೆ ತೆರಬೇಕು.
ಯಾವುದೇ ವ್ಯಕ್ತಿ ಅಪರಾಧ ಮಾಡಿದ್ದಾನೋ ಇಲ್ಲವೋ ಎಂಬುದು ವಿಚಾರಣೆಯಿಂದ ಮಾತ್ರ ಗೊತ್ತಾಗುತ್ತದೆ. ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳನ್ನು ತುಂಬಿ ಯಾತನೆಗೆ ಗುರಿಪಡಿಸುವುದು ಸರಿಯಲ್ಲ. ನಮ್ಮ ನ್ಯಾಯಾಂಗ ವ್ಯವಸ್ಥೆ ವಸಾಹತುಶಾಹಿಯ ಪೊರೆ ಕಳಚಿ ಹೊರಗೆ ಬಂದಿಲ್ಲ.ಸ್ವತಂತ್ರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾದ ನ್ಯಾಯಾಂಗ ವ್ಯವಸ್ಥೆಯನ್ನು ನಾವು ರೂಪಿಸಬೇಕಾಗಿದೆ. ಈ ಮಾತನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಆಗಾಗ ಹೇಳುತ್ತಲೇ ಇದ್ದಾರೆ. ಹಲವು ವರ್ಷಗಳಿಂದ ಜೈಲಲ್ಲಿರುವ ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಈ ಹಿಂದೆಯೂ ಅನೇಕ ಬಾರಿ ಹೇಳಿದೆ.
ವಿಚಾರಣಾಧೀನ ಕೈದಿಗಳ ಬಿಡುಗಡೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಪ್ರಸ್ತಾಪಿಸಿದ್ದರು.ಆದರೆ ಮಾತು ಕೃತಿಯಲ್ಲಿ ಬರಬೇಕಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ಸಲಹೆಯನ್ನು ಸರಕಾರ ಸಕಾರಾತ್ಮಕವಾಗಿ ತೆಗೆದುಕೊಂಡು ಸಣ್ಣಪುಟ್ಟ ಅಪರಾಧ ಮಾಡಿ ವರ್ಷಗಟ್ಟಲೆ ಸೆರೆವಾಸ ಅನುಭವಿಸುತ್ತಿರುವವರನ್ನು ಮತ್ತು ಅಂತಹ ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು.
ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಆನಂದ ತೇಲ್ತುಂಬ್ಡೆ ಅವರಂಥ ಅಂತರ್‌ರಾಷ್ಟ್ರೀಯ ಮಟ್ಟದ ಚಿಂತಕರನ್ನು ಯಾವುದೇ ವಿಚಾರಣೆಯಿಲ್ಲದೆ ಆರೋಪ ಪಟ್ಟಿ ಸಲ್ಲಿಸದೆ ಮೂರು ವರ್ಷಗಳಿಂದ ಜೈಲಿನಲ್ಲಿ ಕೊಳೆ ಹಾಕಲಾಗಿದೆ. ರಾಜಕೀಯ ಭಿನ್ನಾಭಿಪ್ರಾಯ ಹೊಂದಿರುವವರನ್ನು ಈ ರೀತಿ ಸೆರೆಮನೆಯಲ್ಲಿ ಕೊಳೆ ಹಾಕುವುದೂ ಸರಿಯಲ್ಲ. ಹಾಗಾಗಿ ಭೀಮಾ -ಕೋರೆಗಾಂವ್ ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸಿ ಅಮಾಯಕರನ್ನು ಬಿಡುಗಡೆ ಮಾಡಬೇಕು.
ಅಮಾಯಕ ವ್ಯಕ್ತಿಗಳನ್ನು ವಿಚಾರಣಾಧೀನ ಕೈದಿಗಳನ್ನಾಗಿ ಹತ್ತಾರು ವರ್ಷಗಳ ಕಾಲ ಸೆರೆಮನೆಯಲ್ಲಿ ಇಟ್ಟು ಕೊನೆಗೆ ತುಂಬಾ ತಡಮಾಡಿ ವಿಚಾರಣೆ ನಡೆಸಿ ಆತ ನಿರಪರಾಧಿ ಎಂದು ತೀರ್ಪು ನೀಡಿದರೂ ಸದರಿ ವ್ಯಕ್ತಿಯ ಕಳೆದು ಹೋದ ಆಯುಷ್ಯ ಮತ್ತೆ ಸಿಗುವುದಿಲ್ಲ. ಆದ್ದರಿಂದ ನ್ಯಾಯಾಂಗ ವ್ಯವಸ್ಥೆಯ ಮಾರ್ಪಾಟು ಇಂದಿನ ಅಗತ್ಯವಾಗಿದೆ.
ಸೋಮವಾರ ನಡೆದ ಸ್ವಾತಂತ್ರ್ಯ ದಿನದಂದು ಕೆಲವು ಕೈದಿಗಳನ್ನು ಕ್ಷಮಾದಾನ ನೀಡಿ ಬಿಡುಗಡೆ ಮಾಡಲಾಗಿದೆ. ಆದರೆ ಖಚಿತ ವಿವರಗಳು ಬೆಳಕಿಗೆ ಬರಬೇಕಾಗಿದೆ. ಅದೇನೇ ಇರಲಿ ಹಲವು ವರ್ಷಗಳಿಂದ ಸೆರೆಮನೆಯಲ್ಲಿ ಸಂಕಷ್ಟಪಡುತ್ತಿರುವ ವಿಚಾರಣಾಧೀನ ಕೈದಿಗಳನ್ನು ಮಾನವೀಯ ದೃಷ್ಟಿಯಿಂದ ಬಿಡುಗಡೆ ಮಾಡುವುದು ಅಗತ್ಯವಾಗಿದೆ.
ಇದರ ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರದ ಬ್ರಿಟಿಷ್ ಸಾಮ್ರಾಜ್ಯಶಾಹಿ ಕಾಲದ ಕರಾಳ ಕಾನೂನುಗಳನ್ನು ರದ್ದು ಗೊಳಿಸಬೇಕಾಗಿದೆ.ಅದರಲ್ಲೂ ರಾಜದ್ರೋಹದ ಕುರಿತ ಬ್ರಿಟಿಷ್ ಕಾಲದ ಕರಾಳ ಕಾನೂನು ಇನ್ನೂ ಉಳಿದುಕೊಂಡಿದೆ ಅದನ್ನು ಸರಕಾರ ತುರ್ತಾಗಿ ರದ್ದುಗೊಳಿಸಬೇಕಾಗಿದೆ.