varthabharthi


ನಿಮ್ಮ ಅಂಕಣ

ಇಂದಿನ ಕನ್ನಡ ಲೇಖಕರ ಮೌನ ಮತ್ತು ಫ್ಯಾಶಿಸಂ

ವಾರ್ತಾ ಭಾರತಿ : 16 Aug, 2022
ವಸಂತ ಬನ್ನಾಡಿ

ನೋಡಿದರೆ, ಇವರೆಲ್ಲ ಒಳ್ಳೆಯವರೇ. ಹಿಟ್ಲರ್ ನಡೆಸಿದ ನರಮೇಧದ ನೇತೃತ್ವ ವಹಿಸಿದ್ದ ಅಡೋಲ್ಫ್‌ಐಕ್ಮನ್ ಕೂಡ ಒಳ್ಳೆಯ ಮನುಷ್ಯನಾಗಿದ್ದ. ಒಳ್ಳೆಯ ತಂದೆಯಾಗಿದ್ದ. ಒಳ್ಳೆಯ ಗಂಡನಾಗಿದ್ದ. ಇದನ್ನು ‘ಹಿಂಸೆಯ ಬೆನಾಲಿಟಿ’ಯ ಹೆಸರಿನಲ್ಲಿ ಸಮರ್ಥಿಸುವವರೂ ಇದ್ದಾರೆ. ನನ್ನ ಪ್ರಶ್ನೆ ಎಂದರೆ ಆತನ ‘ಒಳ್ಳೆಯತನ’ವನ್ನು ಕಟ್ಟಿಕೊಂಡು ಯಾರಿಗೆ ಏನಾಗಬೇಕಾಗಿದೆ? ನಾಝಿ ಸಿದ್ಧಾಂತಕ್ಕೆ ಕಟ್ಟು ಬಿದ್ದು ಆತ ಹಾಗೆ ವರ್ತಿಸಿದ ಎಂದು ಎಷ್ಟೇ ಸಮರ್ಥಿಸಿಕೊಂಡರೂ ಅದು ಆತನ ದುಷ್ಟತನವನ್ನು ಮರೆಮಾಚಲಾರದು. ಈಗ ಗುಜರಾತ್ ಮಾದರಿಯ ಜನೋಸೈಡ್‌ಗೆ ಕರೆಕೊಡುವ ಲೇಖಕರು ನಮ್ಮಲ್ಲೂ ಕಾಣಿಸಿಕೊಂಡಿದ್ದಾರಲ್ಲ; ಅಂಥವರ ಒಳ್ಳೆಯತನವೂ ಅದೇ ಸ್ವರೂಪದ್ದು. ಅಷ್ಟೇ ದುಷ್ಟತನದ್ದು. ಅದು ನಾನಾದರೂ ಅಷ್ಟೇ, ದುಷ್ಟನೇ.

ವಸಂತ ಬನ್ನಾಡಿ ಇದೊಂದು ವಿಲಕ್ಷಣ ಸನ್ನಿವೇಶ.

ನಾವೆಲ್ಲರೂ ಅವಶ್ಯವಾಗಿ ಕೇಳಿಕೊಳ್ಳಬೇಕಾದ ಕೆಲವು ಪ್ರಶ್ನೆಗಳು ಇಂದು ನಮ್ಮ ಮುಂದಿವೆ. ಫ್ಯಾಶಿಸಂ ಸರ್ವತ್ರ ಆವರಿಸಿಕೊಳ್ಳುತ್ತಿರುವ ಈ ಕೇಡುಗಾಲದಲ್ಲೂ ನಮ್ಮ ಅನೇಕ ಲೇಖಕರು ಏಕೆ ಮೌನ ವಹಿಸಿದ್ದಾರೆ? ಅದಕ್ಕಿಂತ ಮಿಗಿಲಾಗಿ, ಏನೂ ಆಗಿಲ್ಲ ಎಂಬಂತೆ ಕೋಮುವಾದಿ ವೇದಿಕೆಗಳಲ್ಲಿ ಏಕೆ ಯಾವ ಮುಜುಗರವೂ ಇಲ್ಲದೆ ಕಾಣಿಸಿಕೊಳ್ಳುತ್ತಿದ್ದಾರೆ?

ಇಂದಿನದು, ಒಂದೆರಡು ಕಥೆ, ಕವಿತೆ, ಕಾದಂಬರಿ ಬರೆದು ತನ್ನಷ್ಟಕ್ಕೆ ಕುಳಿತುಕೊಳ್ಳುವ ಸಂದರ್ಭವೇ? ಇದು ಒಬ್ಬ ಲೇಖಕನಾಗಿ ನನ್ನನ್ನೇ ನಾನು ಕೇಳಿಕೊಳ್ಳುತ್ತಿರುವ ಪ್ರಶ್ನೆಗಳು ಕೂಡಾ ಹೌದು. ಇಲ್ಲಿ ಇನ್ನೂ ಒಂದು ಪ್ರಶ್ನೆ ಇದೆ. ಇಂದಿನ ಕರಾಳ ವಾಸ್ತವಕ್ಕೆ ಬೆನ್ನು ತಿರುಗಿಸಿ ಕುಳಿತುಕೊಂಡಿರುವ ಒಬ್ಬ ಲೇಖಕ ಹಾಗಾದರೆ ಯಾರಿಗಾಗಿ ಬರೆಯುತ್ತಿದ್ದಾನೆ? ಅವನು ಯಾವತ್ತೂ ನೆಚ್ಚಿಕೊಂಡಿರುವ ಅದೇ ಮಧ್ಯಮ ಮತ್ತು ಮೇಲು ಮಧ್ಯಮ ವರ್ಗದ ಓದುಗರಿಗಾಗಿಯೇ? ಆ ಓದುಗ ವರ್ಗ ಇದೀಗ ಹಿಂದೆಂದಿಗಿಂತಲೂ ಹೆಚ್ಚಾಗಿ ಫ್ಯಾಶಿಸ್ಟ್ ವಿಚಾರಗಳಿಂದ ಪ್ರಭಾವಿತರಾಗುತ್ತಿದ್ದಾರಲ್ಲಾ, ಆ ಅರಿವು ಅವನಿಗೆ ಇದೆಯೇ? ಈ ಬದಲಾವಣೆ ಅವನನ್ನು ಬೆಚ್ಚಿ ಬೀಳಿಸುತ್ತಿಲ್ಲ ಏಕೆ?

ಆ ಕುರಿತು ಒಂದು ಒಳ ಎಚ್ಚರ ಮತ್ತು ಆತಂಕ ಅಂತಹ ಲೇಖಕರಿಗೆ ಇಲ್ಲ ಎಂದೇ ಇದರ ಅರ್ಥವಲ್ಲವೇ? ಒಬ್ಬ ಲೇಖಕನ ಶೈಲಿಯನ್ನು ಆದ್ಯಂತ ಬದಲಾಯಿಸುವುದು ಆತನ ಈ ಒಳ ಎಚ್ಚರವೇ. ತನ್ನ ಎಂದಿನ ಓದುಗ ವರ್ಗವನ್ನು ಆತ ಕಳೆದುಕೊಂಡರೂ ಸರಿ. ಇಲ್ಲವಾದರೆ ಲೇಖಕನಾಗಿ ಆತ ತೀರಿಕೊಂಡಿದ್ದಾನೆ ಎಂದೇ ಅರ್ಥ.ಅಂತಿಮವಾಗಿ ಇದು ಲೇಖಕನೊಬ್ಬನ ಅಸ್ತಿತ್ವದ ಪ್ರಶ್ನೆಯೇ ಆಗಿದೆ.

ಈ ಪ್ರಶ್ನೆಯನ್ನು ಇನ್ನೊಂದು ರೀತಿಯಲ್ಲಿಯೂ ನೋಡಬಹುದು. ತನ್ನ ಯುಗದ ವಿನಾಶಕಾರಿ ಪ್ರಕ್ರಿಯೆಯ ಬಗ್ಗೆ ಪ್ರಶ್ನಿಸದ, ಆ ಪ್ರಶ್ನೆಗಳೆಂಬ ಉರಿಕೆಂಡ ಹೊತ್ತು ಸೆಣಸಾಡದ ಲೇಖಕನೊಬ್ಬ ಲೇಖಕನೇ ಅಲ್ಲ.

ಅದೇ ಹಾಳು ಬಿದ್ದ ಶೈಲಿ, ಅದೇ ಸವಕಲು ರೂಪಕ, ಅದೇ ಸತ್ವಹೀನ ಭಾಷೆ, ಅದೇ ಮಧ್ಯಮ ವರ್ಗದ ಸೀಮಿತ ಮೌಲ್ಯಗಳು, ಸಾಮಾಜಿಕ ಚಾರಿತ್ರಿಕ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸುವ ಮುಖೇಡಿತನ ಇವುಗಳಲ್ಲಿ ಆತ ಕಳೆದು ಹೋಗಿರುತ್ತಾನೆ. ಬದಲಾಗಬೇಕಾಗಿರುವುದು ಆತನ ಬರವಣಿಗೆಯ ಜೀವಾಳವೇ ಆಗಿರುವ ನೋಡುವ ದೃಷ್ಟಿಕೋನ.

ದುರಂತವೆಂದರೆ, ನಮ್ಮ ಹೆಚ್ಚಿನ ಲೇಖಕರಿಗೆ ನಾವೀಗ ಫ್ಯಾಶಿಸಂ ಬಲವಾಗಿ ಕಾಲೂರುತ್ತಿರುವ ಕಾಲಘಟ್ಟದಲ್ಲಿ ಇದ್ದೇವೆ ಎಂಬುದರ ಅರಿವೂ ಇರುವ ಹಾಗಿಲ್ಲ. ಅಷ್ಟೇ ಅಲ್ಲದೆ, ಫ್ಯಾಶಿಸಂ ಅಂದರೆ ಏನು ಎಂಬುದರ ಬಗ್ಗೆ ಕುತೂಹಲ ಕೂಡ ಇರುವಂತಿಲ್ಲ. ಅವರ ಆಲೋಚನೆಗಳೆಲ್ಲ ಎಂಭತ್ತರ ದಶಕದ ಆಚೀಚೆ ಸ್ಥಗಿತಗೊಂಡುಬಿಟ್ಟಿದೆ. ಹೆಚ್ಚೆಂದರೆ ಅವರು ಮತಾಂಧತೆಯ ಬಗ್ಗೆ ಯೋಚಿಸಿಯಾರು. ಕೋಮುವಾದದ ಬಗ್ಗೆಯೂ ಅಷ್ಟಿಷ್ಟು ಮಾತನಾಡಿಯಾರು. ಆದರೆ ಹಿಂದೂ ಮತಾಂಧತೆ ಮತ್ತು ಮುಸ್ಲಿಮ್ ಮತಾಂಧತೆ ಎರಡೂ ಸಮಾನವಾಗಿ ಕೆಟ್ಟದ್ದು ಎಂಬ ನಿಲುವಿನಿಂದ ಆಚೀಚೆ ಸರಿಯಲಾರರು. ಈಚೆಗೆ ಹಿಜಾಬ್ ಕುರಿತು ನಡೆದ ಚರ್ಚೆಗಳ ಹಿನ್ನೆಲೆಯಲ್ಲಿ ಇದನ್ನು ಗಮನಿಸಬಹುದು. ಆ ಸಂದರ್ಭದಲ್ಲಿ ನಮ್ಮ ಲೇಖಕರು ತಳೆದ ನಿಲುವಾದರೂ ಏನು? ಅನೇಕರಿಗೆ ಮಾತೇ ಇರಲಿಲ್ಲ. ಮಾತನಾಡಿದ ಕೆಲವರು, ಮುಸ್ಲಿಮ್ ಲೇಖಕರೂ ಸೇರಿದಂತೆ, ‘ಹಿಜಾಬ್ ಧರಿಸುವುದು ಮತಾಂಧತೆಯ ಭಾಗವೇ ಸರಿ’ ಎನ್ನುವ ನಿಲುವು ತಳೆದರು.

 ಹಿಜಾಬ್‌ಗಾಗಿ ಪಟ್ಟುಹಿಡಿದುದರಿಂದಲೇ ‘ಕೇಸರಿಶಾಲಿನ ರಾಜಕೀಯ’ ನಡೆಯಿತು ಎಂಬ ಸರಳ ತೀರ್ಮಾನಕ್ಕೆ ಬಂದರು. ಇದೊಂದು ಫ್ಯಾಶಿಸ್ಟ್ ಕ್ರಮ; ಆ ನೆವದಲ್ಲಿ ಒಂದು ಊರನ್ನೇ ಪ್ರಯೋಗ ಶಾಲೆಯನ್ನಾಗಿಸಿ ಎಲ್ಲವನ್ನೂ ತನ್ನ ಅನುಕೂಲಕ್ಕೆ ತಕ್ಕ ಹಾಗೆ ತಿರುಗಿಸಿಕೊಳ್ಳುವ ಬೆಳವಣಿಗೆ ಎಂಬುದನ್ನು ಗುರುತಿಸದೆ ಹೋದರು. ಆ ಬಳಿಕ ತಿಂಗಳಿಗೊಂದರಂತೆ ಸರಕಾರದ ಪೂರ್ಣ ಒಪ್ಪಿಗೆ ಇದ್ದು ನಡೆದ ಅಝಾನ್, ಹಲಾಲ್, ವ್ಯಾಪಾರಕ್ಕೆ ಬಹಿಷ್ಕಾರ ಮುಂತಾಗಿ ಮುಸ್ಲಿಮರ ನಡೆ ನುಡಿ ಮತ್ತು ದೈನಂದಿನ ಬದುಕಿನ ವಿವರಗಳ ಮೇಲೆ ನಡೆಸಿದ ದಾಳಿಗೂ ಹಿಜಾಬ್ ವಿಷಯದಲ್ಲಿ ಕೋಮುವಾದಿಗಳು ಎಬ್ಬಿಸಿದ ದಾಂಧಲೆಗೂ ಸಂಬಂಧ ಇದೆ ಎಂಬುದನ್ನು ಗುರುತಿಸಲಾಗದೆ ಹೋದರು. ಮಾತ್ರವಲ್ಲ, ನಮ್ಮ ಅನೇಕ ಲೇಖಕರಿಗೆ ಇದ್ಯಾವುದರ ಬಗ್ಗೆ ಏನೂ ಅನಿಸಲೇ ಇಲ್ಲ.

ಇದರ ನೆಲೆ ಹಿಡಿದು, ಫ್ಯಾಶಿಸ್ಟ್ ಮನಸ್ಸುಗಳು ಪಠ್ಯ ಪುಸ್ತಕಗಳ ಪರಿಷ್ಕರಣೆಗೂ ಕೈಹಾಕಿದರಲ್ಲ; ಆ ಕುರಿತು ಸಾಕಷ್ಟು ಪ್ರತಿರೋಧ ಕಾಣಿಸಿದರೂ ಹೆಡಗೆವಾರ್ ಅಂಥವರ ಲೇಖನಗಳನ್ನು ಪಠ್ಯಗಳಲ್ಲಿ ನೆಲೆಗೊಳ್ಳುವಂತೆ ಫ್ಯಾಶಿಸ್ಟ್ ಶಕ್ತಿಗಳು ಮಾಡಿದ್ದು ಸಣ್ಣ ವಿಷಯವೇನಲ್ಲ. ಗದ್ದಲದ ನಡುವೆ ಯಾಮಾರಿಸಿ ಮಾಡಿದ ಕೆಲಸ ಅದು. ಅಂತಹ ತಂತ್ರ ಅವರಿಗೆ ಕರಗತವಾಗಿಬಿಟ್ಟಿದೆ. ಪ್ರತಿರೋಧವನ್ನು ಗಮನಿಸಿದಂತೆ ಮಾಡುವುದು; ಇಂಚು ಇಂಚಾಗಿ ಮುಂದೊತ್ತುವುದು; ‘ಅವರ’ ವಿರುದ್ಧ ‘ನಾವು’ ಎನ್ನುತ್ತಾ ಘರ್ಷಣೆಗೆ ಅಣಿಗೊಳಿಸುವುದು. ಫ್ಯಾಶಿಸಂ ಎಂದರೆ ಇದೇ. ಈ ಹಿಂದೆಯೂ ಇದು ಇತ್ತಾದರೂ ಕಳೆದ ಹತ್ತು ವರ್ಷಗಳಿಂದ ಉಗ್ರ ಚಹರೆಗಳೊಂದಿಗೆ ಕಾಣಿಸಿಕೊಂಡಿದೆ. ನಮ್ಮ ಲೇಖಕರ ಮೌನ ಮುಂದುವರಿದೇ ಇದೆ.

ಫ್ಯಾಶಿಸಂ ಎಂದರೆ ಏನು ಎಂಬ ಸ್ಪಷ್ಟ ಕಲ್ಪನೆ ಇಂದು ನಮಗೆ ಬೇಕಾಗಿದೆ. ಫ್ಯಾಶಿಸಂ ಎಂದರೆ ಬರಿಯ ಮತಾಂಧತೆ ಅಲ್ಲ. ಬರಿಯ ಫ್ಯೂಡಲ್ ಮನೋಭಾವವೂ ಅಲ್ಲ. ಕೆಲವರು ತಿಳಿದಿರುವಂತೆ ಜಾತಿವಾದ ಅಥವಾ ಕೋಮುವಾದವೂ ಅಲ್ಲ.
ವೈಯಕ್ತಿಕ ನೆಲೆಯಲ್ಲಿ ತನ್ನದೇ ಸರಿಯಾದ ವಾದ ಎಂದು ಪಟ್ಟು ಹಿಡಿಯುವ ಹಠಮಾರಿತನವೂ ಅಲ್ಲ.ಸ್ಥೂಲವಾಗಿ ಹೇಳಬೇಕೆಂದರೆ ಅದು ಒಂದು ಜನಾಂಗದ ಬಗ್ಗೆ ತೋರುವ ತೀವ್ರ ಅಸಹನೆ ಮತ್ತು ದ್ವೇಷ. ದಬ್ಬಾಳಿಕೆ ಮತ್ತು ನರಹತ್ಯೆಯ ಉದ್ದೇಶದಿಂದಲೇ ಅಧಿಕಾರವನ್ನು ಹಿಡಿದು ಇಡೀ ದೇಶದ ಉದ್ದಗಲಕ್ಕೂ ನರಕ ಸದೃಶ ಕೂಪವನ್ನು ಸೃಷ್ಟಿಸುವುದು.

 ಫ್ಯಾಶಿಸಂ ಮೊದಲಿಗೆ ಪ್ರಕಟವಾಗುವುದು ಕೋಮುವಾದದ ರೂಪದಲ್ಲಿ. ಕ್ರಮೇಣ ಈ ಕೋಮುವಾದ ಪ್ರಭುತ್ವವನ್ನು ವಶಪಡಿಸಿಕೊಳ್ಳುವ ಉದ್ದೇಶ ಹೊಂದಿರುವ ರಾಜಕೀಯ ಕಾರ್ಯಕ್ರಮವಾಗಿ ಕಾಣಿಸಿಕೊಳ್ಳುವುದು. ಆದುದರಿಂದ, ಕೋಮುವಾದವನ್ನು ಅದರ ಆರ್ಥಿಕ ಮತ್ತು ಸಾಮಾಜಿಕ ಮುಖವನ್ನು ಆರಂಭದಲ್ಲಿಯೇ ತಿರಸ್ಕರಿಸಬೇಕಾದುದು ಬಹಳ ಮುಖ್ಯ. ಈ ಸೂಕ್ಷ್ಮವನ್ನು ಅರಿಯಲಾರದ ಲೇಖಕ, ಸುಲಭವಾಗಿ ಫ್ಯಾಶಿಸಂನ ವಶವರ್ತಿಯಾಗುವ ಸಾಧ್ಯತೆಯೇ ಹೆಚ್ಚು. ಆತ ಮೌನ ವಹಿಸುತ್ತಾ ಹೋದಷ್ಟೂ ಫ್ಯಾಶಿಸ್ಟರ ಜೊತೆ ಪರೋಕ್ಷವಾಗಿ ಕೈಜೋಡಿಸುತ್ತಿದ್ದಾನೆ ಎಂದೇ ಅರ್ಥ. ಈಗ ಆಗುತ್ತಿರುವುದೂ ಅದೇ.

ಈ ಸಂದರ್ಭದಲ್ಲಿ, ಫ್ಯಾಶಿಸಂನ ಹುಟ್ಟಿಗೆ ಕಾರಣವಾಗುವ ಕೆಲವು ವಿಚಾರಗಳನ್ನು ಪ್ರಸ್ತಾಪಿಸುವುದು ಅಪ್ರಸ್ತುತವಲ್ಲ ಎಂದುಕೊಂಡಿದ್ದೇನೆ. ಪ್ರಭುತ್ವದ ಸ್ವರೂಪವನ್ನು ಯಾವತ್ತೂ ನಿರ್ಧರಿಸುವ ಅಂಶವೆಂದರೆ, ಉಳ್ಳವರ ಯಜಮಾನಿಕೆ.ಇಂದು ಚಾಲ್ತಿಯಲ್ಲಿರುವ ಆರ್ಥಿಕ ತಳಹದಿಯ ಸ್ವರೂಪವನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಅಲ್ಲೊಂದು ಒಗ್ಗಟ್ಟಿದೆ. ಬೃಹತ್ ಬಂಡವಾಳಶಾಹಿ, ನಗರ ಮತ್ತು ಗ್ರಾಮೀಣ ಪ್ರದೇಶದ ಶ್ರೀಮಂತರು ಮತ್ತು ಹೊಸದಾಗಿ ಮೇಲೆದ್ದು ಬರುತ್ತಿರುವ ಮಧ್ಯಮ ವರ್ಗ ಈ ಕೂಟದಲ್ಲಿ ಕೈ ಜೋಡಿಸಿರುವ ಪಾಲುದಾರರು. ಇದೇ ಕೋಮುವಾದದ ಮುಖ್ಯ ನೆಲೆ ಕೂಡ. ಇದೀಗ ಮಧ್ಯಮ ವರ್ಗದ ಜೊತೆಗೆ, ಕೆಳ ಮಧ್ಯಮ ವರ್ಗ, ದುಡಿಯುವ ಜನರು ಮತ್ತು ಕೆಳ ಜಾತಿಗೆ ಸೇರಿದವರು ಮುಂತಾಗಿ ಎಲ್ಲರೂ ಪ್ರಭುತ್ವ ಪ್ರಣೀತ ಕೋಮುವಾದದ ತೆಕ್ಕೆಯೊಳಗೆ ಸೇರಿಕೊಳ್ಳುತ್ತಿರುವ ಬೆಳವಣಿಗೆಯೂ ನಡೆಯುತ್ತಿದೆ. ಆತಂಕ ಹುಟ್ಟಿಸುವ ಬೆಳವಣಿಗೆ ಇದು. ಏಕೆಂದರೆ, ಇದರಿಂದಾಗಿ ಪ್ರಭುತ್ವ ಬಿತ್ತುತ್ತಿರುವ ಸುಳ್ಳುಗಳನ್ನು ಇವರೆಲ್ಲ ಸಲೀಸಾಗಿ ನಂಬುವಂತೆ ಮಾಡುವುದು ಸುಲಭವಾಗುತ್ತದೆ. ಸಂವಿಧಾನವನ್ನು ಪೂರ್ತಿಯಾಗಿ ಬದಲಿಸುವ ಆಲೋಚನೆಯನ್ನು ಹರಿಯಬಿಟ್ಟರೂ ಯಾರಿಗೂ ಏನೂ ಅನಿಸದೇ ಹೋಗುತ್ತದೆ. ಪ್ರಜಾಪ್ರಭುತ್ವವನ್ನು ಕ್ರಮೇಣ ಬೇರುಸಹಿತ ನಾಶ ಮಾಡುವ ಕೆಲಸವೂ ಮೌನ ಸಮ್ಮತಿಯನ್ನು ಪಡೆದುಕೊಂಡು ಬಿಡುತ್ತದೆ.

ಕೋಮುವಾದ ಫ್ಯಾಶಿಸಂನ ರೂಪ ಪಡೆದುಕೊಳ್ಳುತ್ತಾ ಹೋಗುವುದೆಂದರೆ ಇದೇ. ಹೀಗೆ ಟಿಸಿಲೊಡೆಯುವ ಫ್ಯಾಶಿಸಂನ ಮುಖ್ಯ ಗುರಿಯೇ ಸರ್ವಾಧಿಕಾರಿ ಪ್ರಭುತ್ವವನ್ನು ಹೇರುವುದು. ಒಮ್ಮೆ ಅದನ್ನು ಸಾಧಿಸಿದ ಮೇಲೆ ತನಗೆ ಪೂರಕವಾಗಿ ಕೆಲಸಮಾಡುವ ಬಂಡವಾಳಶಾಹಿ ಮಾತ್ರ ಅದಕ್ಕೆ ಮುಖ್ಯವಾಗುತ್ತದೆ. ಜನರೂ ಅಮುಖ್ಯರಾಗಿ ಬಿಡುತ್ತಾರೆ.
ಅಂತಹ ಎಲ್ಲ ಸನ್ನಿವೇಶಗಳನ್ನೂ ದೇಶ ಈಗ ಎದುರಿಸುತ್ತಿದೆ. ಈ ಸ್ಥಿತಿಯನ್ನು ಹಿಟ್ಲರ್ ಕಾಲದ ಜರ್ಮನಿಗೆ ಯಥಾವತ್ತಾಗಿ ಹೋಲಿಸುವಂತಿಲ್ಲವಾದರೂ, ಬೆಚ್ಚಿಬೀಳಿಸುವ ಕೆಲವು ಸಮಾನ ಅಂಶಗಳನ್ನು ಅರಿತುಕೊಳ್ಳಬೇಕಾದ ಸಂದರ್ಭವಿದು. ನಮ್ಮ ನಡುವೆ ಕೂಡ ಪ್ರತಿಪಕ್ಷಗಳನ್ನು ನಾಶ ಮಾಡುವ ಮಾತು ಹೆಚ್ಚು ಹೆಚ್ಚಾಗಿ ಕೇಳಿ ಬರುತ್ತಿರುವುದು ಅಂತಹ ಒಂದು ಅಂಶ.

ಪ್ರತಿಪಕ್ಷಗಳನ್ನು ಪೂರ್ತಿ ನಿರ್ನಾಮ ಮಾಡಿಯೇ ಹಿಟ್ಲರ್ ಸರ್ವಾಧಿಕಾರವನ್ನು ಸ್ಥಾಪಿಸಿದ್ದು. ಅವನು ನಡೆಸಿದ ಯೆಹೂದಿಗಳ ನರಮೇಧಕ್ಕೆ ಅಲ್ಲಿಯ ಸಾಮಾನ್ಯ ಪ್ರಜೆಗಳ ಸಮ್ಮತಿ ಇತ್ತು ಎಂಬುದು ಒಂದು ಭಯಾನಕ ವಾಸ್ತವ. ನಮ್ಮಲ್ಲೂ ಫ್ಯಾಶಿಸಂನ ಚಹರೆ ಹೊತ್ತ ರಾಮ ಜನ್ಮಭೂಮಿ ಚಳವಳಿಗೆ ಜನರ ಸಮ್ಮತಿ ದೊರೆಯುತ್ತಾ ಹೋಯಿತಲ್ಲವೇ? ರಾಮನ ಹೆಸರಿನಲ್ಲಿ ನಡೆದ ಹಿಂಸೆ ಮತ್ತು ಆ ಬಳಿಕ ಗುಜರಾತಿನಲ್ಲಿ ನಡೆದ ಜನೋಸೈಡ್‌ಗಳನ್ನೂ ಜನರು ತಾವಾಗಿಯೇ ಒಪ್ಪಿಕೊಳ್ಳುವ ವಾತಾವರಣ ನಿರ್ಮಾಣವಾಯಿತಲ್ಲವೇ? ಇನ್ನೂ ಒಂದು ಹೋಲಿಕೆ ಇದೆ. ಅದು ಇಟಲಿಯ ಸರ್ವಾಧಿಕಾರಿಯಾದ ಮುಸ್ಸೋಲಿನಿಯದು. ಆತನ ನೇತೃತ್ವದ ‘ಬ್ಲಾಕ್ ಶರ್ಟ್ಸ್’ನಲ್ಲಿ ಇದ್ದವರು ನಿರುದ್ಯೋಗಿ ಬಡ ಯುವಕರೇ. ನಮ್ಮಲ್ಲೂ ಕೋಮು ಹಿಂಸೆಯಲ್ಲಿ ಭಾಗವಹಿಸುತ್ತಿರುವವರು ಕೆಳವರ್ಗ ಮತ್ತು ಜಾತಿಗೆ ಸೇರಿದ ನಿರುದ್ಯೋಗಿ ‘ಪಡೆ’ಯೇ!

ಇದು ನಾವು ಇಂದು ಎದುರಿಸುತ್ತಿರುವ ಅಸಾಮಾನ್ಯ ಬಿಕ್ಕಟ್ಟು. ಆದರೆ ಈ ಬಿಕ್ಕಟಿನ ಸ್ವರೂಪ ಮನಸ್ಸಿಗೆ ಇಳಿಯುವುದು ಎಷ್ಟು ಕಷ್ಟ ಎಂಬುದನ್ನೂ ನಾವೀಗ ನೋಡುತ್ತಿದ್ದೇವೆ. ನಮ್ಮ ಲೇಖಕರ ನಡವಳಿಕೆಯೇ ಇದಕ್ಕೆ ಸಾಕ್ಷಿ. ಈ ಬಿಕ್ಕಟ್ಟಿನ ಕಾಲಘಟ್ಟದಲ್ಲಿಯೂ ನಮ್ಮ ನಡುವಿನ ನೂರಾರು ಲೇಖಕರು ಮತ್ತು ರಂಗಕರ್ಮಿಗಳು ಕೋಮುವಾದಿ ಪ್ರಭುತ್ವದ ನೇರ ಸಮರ್ಥನೆಗೆ ತೊಡಗಿದ್ದಾರೆ. ಅವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಂಥವರಲ್ಲಿ ಬ್ರಾಹ್ಮಣ ಲೇಖಕರೇ ಜಾಸ್ತಿ ಎನಿಸಿದರೂ ‘ಬ್ರಾಹ್ಮಣ್ಯ’ಕ್ಕೆ ಒಳಗಾದ ಶೂದ್ರ ಲೇಖಕರ ಸಂಖ್ಯೆಯೇನೂ ಕಡಿಮೆ ಇಲ್ಲ. ಈಚಿನ ವರ್ಷಗಳಲ್ಲಿಯಂತೂ ಇದು ಢಾಳಾಗಿ ಕಣ್ಣಿಗೆ ಹೊಡೆಯುವಂತಿದೆ. ಎಸ್.ಎಲ್. ಭೈರಪ್ಪಕೋಮುವಾದಿಯಾಗಿ ಕಾಣಿಸಿಕೊಂಡಾಗ ಒಂದು ಬಗೆಯ ಪ್ರತಿರೋಧವಾದರೂ ಇತ್ತು. ಇಂದು ಅದೂ ಇಲ್ಲವಾಗಿದೆ. ಒಂದು ಕಡೆ ಥಟ್ಟನೆ ಪೊರೆ ಕಳಚಿ ‘ಆಚೆ ಬದಿ’ಗೆ ಜಾರಿಕೊಳ್ಳುವವರಿದ್ದರೆ, ಇನ್ನೊಂದು ಕಡೆ ‘ಎಲ್ಲಿ ಈಗಿರುವ ಸ್ನೇಹ ಸಂಬಂಧ ಕಳೆದುಕೊಳ್ಳಬೇಕಾಗುತ್ತದೆಯೋ’ ಎಂದು ಮೌನವಾಗಿ ನೋಡುತ್ತಿರುವವರು ಇದ್ದಾರೆ.ಕೋಮುವಾದದ ಸಮರ್ಥನೆಗೆ ನೇರಾನೇರ ಇಳಿದ ಮೈಸೂರು ರಂಗಾಯಣಕ್ಕೆ, ಪ್ರತಿರೋಧದ ನಡುವೆಯೂ ನಾಟಕವಾಡಲು ಒಪ್ಪಿಕೊಂಡ ನನ್ನ ಹಳೆಗಾಲದ ಸ್ನೇಹಿತನೊಬ್ಬನ ನಡೆಯಿಂದ ನಾನು ನಿಜಕ್ಕೂ ಆಘಾತಗೊಂಡದ್ದಿದೆ.ಇಂತಹ ಅರಿವುಗೇಡಿ ವರ್ತನೆಗಳ ನಡುವೆ ನಮ್ಮ ಜವಾಬ್ದಾರಿ ಏನು?

 ಇದು ಫ್ಯಾಶಿಸಂ ಸೂಕ್ಷ್ಮವಾಗಿ ಪ್ರತಿಯೊಬ್ಬರನ್ನೂ ಆವರಿಸಿಕೊಳ್ಳುತ್ತಿರುವು ದರ ನೇರ ಸೂಚನೆ. ನೋಡಿದರೆ, ಇವರೆಲ್ಲ ಒಳ್ಳೆಯವರೇ. ಹಿಟ್ಲರ್ ನಡೆಸಿದ ನರಮೇಧದ ನೇತೃತ್ವ ವಹಿಸಿದ್ದ ಅಡೋಲ್ಫ್‌ಐಕ್ಮನ್ ಕೂಡ ಒಳ್ಳೆಯ ಮನುಷ್ಯನಾಗಿದ್ದ. ಒಳ್ಳೆಯ ತಂದೆಯಾಗಿದ್ದ. ಒಳ್ಳೆಯ ಗಂಡನಾಗಿದ್ದ. ಇದನ್ನು ‘ಹಿಂಸೆಯ ಬೆನಾಲಿಟಿ’ಯ ಹೆಸರಿನಲ್ಲಿ ಸಮರ್ಥಿಸುವವರೂ ಇದ್ದಾರೆ. ನನ್ನ ಪ್ರಶ್ನೆ ಎಂದರೆ ಆತನ ‘ಒಳ್ಳೆಯತನ’ವನ್ನು ಕಟ್ಟಿಕೊಂಡು ಯಾರಿಗೆ ಏನಾಗಬೇಕಾಗಿದೆ? ನಾಝಿ ಸಿದ್ಧಾಂತಕ್ಕೆ ಕಟ್ಟು ಬಿದ್ದು ಆತ ಹಾಗೆ ವರ್ತಿಸಿದ ಎಂದು ಎಷ್ಟೇ ಸಮರ್ಥಿಸಿಕೊಂಡರೂ ಅದು ಆತನ ದುಷ್ಟತನವನ್ನು ಮರೆಮಾಚಲಾರದು. ಈಗ ಗುಜರಾತ್ ಮಾದರಿಯ ಜನೋಸೈಡ್‌ಗೆ ಕರೆಕೊಡುವ ಲೇಖಕರು ನಮ್ಮಲ್ಲೂ ಕಾಣಿಸಿಕೊಂಡಿದ್ದಾರಲ್ಲ; ಅಂಥವರ ಒಳ್ಳೆಯತನವೂ ಅದೇ ಸ್ವರೂಪದ್ದು.

ಅಷ್ಟೇ ದುಷ್ಟತನದ್ದು. ಅದು ನಾನಾದರೂ ಅಷ್ಟೇ, ದುಷ್ಟನೇ. ‘ಹಿಟ್ಲರ್ ನಡೆಸಿದ ಹತ್ಯಾಕಾಂಡಕ್ಕೆ ತಾನೂ ಜವಾಬ್ದಾರ’ ಎಂದು ಜೀನ್ ಪೌಲ್ ಸಾರ್ತ್ರೆ ಹೇಳಿದ್ದನ್ನು ಈ ಹಿನ್ನೆಲೆಯಲ್ಲಿಯೇ ನೋಡಬೇಕು. ಇದು ಎಲ್ಲರಿಗೂ ಗೊತ್ತಿರುವ ಪ್ರಸಿದ್ಧ ಹೇಳಿಕೆ. ಜೊತೆಗೆ ಆಲ್ಬರ್ಟ್ ಕಮೂ ಒಂದಿಗೆ ‘ಲೇಖಕನ ಜವಾಬ್ದಾರಿ’ಗಳ ಬಗ್ಗೆ ಆತ ನಡೆಸಿದ ವಾಗ್ವಾದ ಕೂಡ ಮುಖ್ಯವಾದುದು. ಇವರಿಬ್ಬರೂ ನಾಝೀ ನರಹತ್ಯೆಯನ್ನು ಖಂಡಿಸಿದವರೇ. ಆದರೆ ‘ಕಮ್ಯುನಿಸಂ ಬಗೆಗಿನ ಒಲವು ಸಾರ್ತ್ರೆಯನ್ನು ಸ್ಟಾಲಿನ್ ನಡೆಸಿದ ಹಿಂಸೆಯ ಬಗ್ಗೆ ಕುರುಡಾಗುವಂತೆ ಮಾಡಿದೆ’ ಎಂದು ಕಮೂ ಆಕ್ಷೇಪಿಸಿದರೆ, ‘ಅಮೆರಿಕದ ಬಂಡವಾಳಶಾಹಿ ಕ್ರೌರ್ಯ ಮತ್ತು ಯುರೋಪಿನ ವಸಾಹತುಶಾಹಿ ಹಿಂಸೆ ಬಗ್ಗೆ ಕಮೂ ಏಕೆ ಮೌನವಾಗಿದ್ದಾನೆ’ ಎಂದು ಸಾರ್ತ್ರೆ ಛೇಡಿಸಿದ. ಇದು ಸ್ನೇಹ ಕಳೆದುಕೊಳ್ಳುವ ಹಂತಕ್ಕೆ ಹೋದಾಗ ಸಾರ್ತ್ರೆ ಹೇಳಿದ, ‘‘ಕಮೂ, ನೀನು ಒಬ್ಬ ಬೂರ್ಜ್ವಾ ಲೇಖಕ. ನಾನು ಕೂಡ ಅಷ್ಟೇ. ನಾವು ಇನ್ನು ಏನು ತಾನೆ ಆಗುವುದು ಸಾಧ್ಯ ಹೇಳು’’
ಸಾರ್ತ್ರೆಯ ಮಾತುಗಳು ನಮ್ಮದೂ ಹೌದು. ಕನಿಷ್ಠ ಪಕ್ಷ ಅಂತಹ ಆತ್ಮಜಿಜ್ಞಾಸೆಯಾದರೂ ನಮಗಿರಬೇಕು. ನಾವೆಲ್ಲರೂ ಪರೋಕ್ಷವಾಗಿಯಾದರೂ ಪ್ರಭುತ್ವದ ಎಲ್ಲಾ ಸವಲತ್ತುಗಳನ್ನು ಪಡೆಯುತ್ತಿರುವ ಐಷಾರಾಮಿ ಲೇಖಕರೇ. ಹಾಗಂತ ಇಂದಿನ ಸಂದರ್ಭದಲ್ಲಿ ಮೌನವಾಗಿರುವುದು ಒಂದು ಪಾಪ. ಆಮಿಷಕ್ಕೆ ಒಳಗಾಗಿ ಪ್ರಭುತ್ವದ ಜೊತೆಗೆ ಸೇರಿಕೊಳ್ಳುವುದು ಇನ್ನೂ ದೊಡ್ಡ ಪಾಪ.
ಸಂಶಯವೇ ಇಲ್ಲ, ಇಂದಿನದು ಅತ್ಯಂತ ನಿರಾಶಾದಾಯಕ ಸ್ಥಿತಿ. ಒಂದೆಡೆ, ಫ್ಯಾಶಿಸ್ಟ್ ಬೆಳವಣಿಗೆಗಳನ್ನು ಒಪ್ಪಿ ಆರಾಧಿಸಲಾಗುತ್ತಿದೆ. ಇನ್ನೊಂದೆಡೆ, ಪ್ರಶ್ನಿಸುವವರನ್ನು ವಿನಾಕಾರಣ ಶಿಕ್ಷಿಸಲಾಗುತ್ತಿದೆ.
ಇಟಲಿಯ ಚಿಂತಕ ಗ್ರಾಂಶಿ ಹೇಳುವ ‘ಅರಿವಿನ ನಿರಾಶೆ, ಸಂಕಲ್ಪದ ಆಶಾವಾದ’ ಎಂಬ ಮಾತು ಮಾತ್ರ ಇಂತಹ ಸ್ಥಿತಿಯಲ್ಲಿ ನಮಗೆ ದಾರಿ ತೋರಬಲ್ಲದು.

ಇಂದಿನ ಕಠೋರ ಸ್ಥಿತಿಯನ್ನು ಬದಲಾಯಿಸುವ ಮತ್ತು ಆ ನಿಟ್ಟಿನಲ್ಲಿ ಹೋರಾಟವನ್ನು ರೂಪಿಸುವ ಸಂಕಲ್ಪ, ನಿರಾಶೆಯ ಅರಿವಿನ ನಡುವೆಯೇ ಮೂಡಬೇಕಾದುದು. ಗ್ರಾಂಶಿ ಹೇಳಿದಂತೆ ಎಲ್ಲ ಬಗೆಯ ಯಜಮಾನಿಕೆಯ ಸಂರಚನೆಗಳನ್ನು ತಿರಸ್ಕರಿಸುವುದೇ ಅಂತಹ ಹೋರಾಟದ ಗುರಿಯಾಗಿರಬೇಕು. ಈ ಬಗೆಯ ಅರಿವು ಮಾತ್ರ ನಮ್ಮ ದೃಷ್ಟಿಕೋನವನ್ನೂ ಬರಹದ ವಸ್ತುವನ್ನೂ ಮಂಡನೆಯ ಶೈಲಿಯನ್ನೂ ಬದಲಿಸೀತು. ಸತ್ಯಕ್ಕೆ ಹತ್ತಿರವಾಗುವ ಇಂತಹ ಪ್ರಯತ್ನ, ಕ್ರಾಂತಿಕಾರಿ ನಡೆಯೂ ಹೌದು.

ಎಂಬತ್ತರ ದಶಕದ ಕನ್ನಡ ಚಿಂತನೆಯಲ್ಲಿನ ದೋಷದ ಬಗ್ಗೆ ಈಗಾಗಲೇ ನಾನು ಕಾಣಿಸಿರುವೆ. ಅಂದು ಲೋಹಿಯವಾದ, ಗಾಂಧಿವಾದ, ಮಾರ್ಕ್ಸ್‌ವಾದ ಹೀಗೆ ಭಿನ್ನ ಮಾದರಿಗಳನ್ನು ಅರೆಬರೆಯಾಗಿ ಕಲಬೆರೆಸಿ ಚಾಲ್ತಿಗೆ ತರಲಾಯಿತು. ಅಂತಿಮವಾಗಿ ಈ ಅಸ್ಪಷ್ಟತೆ ಹಿಂದುತ್ವವಾದಿಗಳ ಜೊತೆಗೆ ಶಾಮೀಲಾ ಗುವುದರಲ್ಲಿಯೂ ಪ್ರಭುತ್ವದ ಜೊತೆ ಸೇರಿಕೊಂಡು ಅವಕಾಶವಾದಿತನ ಮೆರೆಯುವುದರಲ್ಲಿಯೂ ಕೊನೆಗೊಂಡಿತು. ಇಂದೂ ನಮ್ಮ ಅನೇಕ ಲೇಖಕರಲ್ಲಿ ಉಳಿದು ಕೊಂಡಿರುವುದು ಆ ಮಾದರಿಯ ಪಳಿಯುಳಿಕೆಯೇ. ಇದೇ ನಾನು ಆರಂಭದಲ್ಲಿ ಹೇಳಿರುವ ‘ಜಡತ್ವ’ಕ್ಕೆ ಕಾರಣವಾಗಿರುವುದು; ಹೊಸ ಬಗೆಯ ಆಲೋಚನಾ ಕ್ರಮವನ್ನು ರೂಢಿಸಿಕೊಳ್ಳದೆ, ‘ಅಖಂಡ ಮೌನ’ಕ್ಕೆ ಶರಣಾಗಲು ಕಾರಣವಾಗಿರುವುದು.

ಈ ನಡುವೆ ಇಂದು ಹೊಸ ಬೆಳವಣಿಗೆಯೊಂದು ಕಾಣಿಸಿಕೊಂಡಿದೆ. ಬುದ್ಧ, ಮಾರ್ಕ್ಸ್, ಅಂಬೇಡ್ಕರ್ ಚಿಂತನೆಗಳು ಮುನ್ನೆಲೆಗೆ ಬರುತ್ತಿವೆ. ಇದೊಂದು ಆಶಾದಾಯಕ ಬೆಳವಣಿಗೆ. ‘ಸಂಕಲ್ಪದ ಆಶಾವಾದ’ಕ್ಕೆ ಉದಾಹರಣೆ. ಈ ಕಾಣ್ಕೆಯ ಮೂಲಕವಷ್ಟೇ ಬ್ರಾಹ್ಮಣ್ಯ ಮತ್ತು ಕೋಮುವಾದದ ನೆಲಗಟ್ಟಿನ ಮೇಲೆ ರೂಪುಗೊಳ್ಳುತ್ತಿರುವ ಫ್ಯಾಶಿಸಂಗೆ ಬಲವಾದ ಪ್ರತಿರೋಧ ಒಡ್ಡುವುದು ಸಾಧ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)