varthabharthi


ನಿಮ್ಮ ಅಂಕಣ

ವಿಷಪೂರಿತ ತಿನಿಸುಗಳನ್ನು ನಿಷೇಧಿಸಿ

ವಾರ್ತಾ ಭಾರತಿ : 16 Aug, 2022
-ವಿಜಯಕುಮಾರ್ ಎಚ್.ಕೆ. ರಾಯಚೂರು

ಮಾನ್ಯರೇ,

ನಮ್ಮ ದೇಶದಲ್ಲಿ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಫ್ರೂಟ್ ಜಾಮ್, ಆಲೂಗಡ್ಡೆ ಚಿಪ್ಸ್ ಇತ್ಯಾದಿಗಳನ್ನು ಎಡೆಬಿಡದೆ ದಿನಂಪ್ರತಿ ಸೇವನೆ ಮಾಡುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆೆ. ಇದರಲ್ಲಿ ಪ್ರಮುಖವಾಗಿ ಆಲೂಗಡ್ಡೆ ಚಿಪ್ಸ್‌ನಲ್ಲಿ ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದನ್ನು ಸಂಶೋಧನೆಗಳು ಖಚಿತಪಡಿಸಿವೆ. ಇದರಲ್ಲಿ ಬಳಸುವ ಅಕ್ರಿಲಾಮೈಡ್ ಎಂಬ ರಾಸಾಯನಿಕ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಕ್ರಿಲಾಮೈಡ್ ಎಂಬ ರಾಸಾಯನಿಕವು ಸಾಮಾನ್ಯವಾಗಿ ಕಾಗದ, ಬಣ್ಣ ಮತ್ತು ಪ್ಲಾಸ್ಟಿಕ್‌ಗಳ ಉತ್ಪಾದನೆಯಂತಹ ಅನೇಕ ಕೈಗಾರಿಕಾ ಪ್ರಕ್ರಿಯೆಗಳಲ್ಲಿ ಬಳಸಲಾಗುತ್ತದೆ ಮತ್ತು ಒಳಚರಂಡಿ ಸೇರಿದಂತೆ, ತ್ಯಾಜ್ಯ ನೀರಿನ ಸಂಸ್ಕರಣೆಯಲ್ಲಿ ಬಳಸಲಾಗುತ್ತದೆ. ಆಹಾರ ಪ್ಯಾಕೇಜಿಂಗ್ ಮತ್ತು ಕೆಲವು ಗಮ್‌ಗಳ ಉತ್ಪನ್ನಗಳಲ್ಲಿಯೂ ಕೂಡ ಈ ವಿಷಕಾರಿ ಅಕ್ರಿಲಾಮೈಡ್ ಕಂಡುಬರುತ್ತದೆ.
 ಈ ವಿಷಕಾರಿ ಅಕ್ರಿಲಾಮೈಡ್ ಒಳಗೊಂಡ ತಿನಿಸುಗಳನ್ನು ಬಹಳಷ್ಟು ಮುಂದುವರಿದ ದೇಶಗಳು ನಿಷೇಧ ಮಾಡಿವೆ. ಆದರೆ ನಮ್ಮ ದೇಶದಲ್ಲಿ ಮಾತ್ರ ಈ ವಿಷಕಾರಿ ರಾಸಾಯನಿಕವು ದಿನೇ ದಿನೇ ತಿಂಡಿಗಳ ಮೂಲಕ ನಮ್ಮ ದೇಹಕ್ಕೆ ನಮಗೆ ತಿಳಿಯದೆ ಸೇರುತ್ತಿರುವುದಂತೂ ಸತ್ಯ. ವಿಶ್ವ ಆರೋಗ್ಯ ಸಂಸ್ಥೆಯು ಈ ರಾಸಾಯನಿಕದಿಂದ ಹೃದಯಾಘಾತ, ಬ್ರೈನ್ ಸ್ಟ್ರೋಕ್, ಕ್ಯಾನ್ಸರ್ ಮತ್ತು ನರಗಳಿಗೆ ಸಂಬಂಧಿಸಿದ ರೋಗಗಳು ಬರುವುದು ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದೆ. ಹೀಗಾಗಿ ನಮ್ಮ ಸರಕಾರ ಮಾರುಕಟ್ಟೆಯಲ್ಲಿ ಬಿಕರಿಯಾಗುವ ಇಂತಹ ರಾಸಾಯನಿಕ ಒಳಗೊಂಡ ತಿನಿಸುಗಳನ್ನು ಪತ್ತೆ ಮಾಡಿ ಬಹುಬೇಗ ನಿಷೇಧಿಸಬೇಕಾಗಿದೆ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)