varthabharthi


ವಿಶೇಷ-ವರದಿಗಳು

ಸುಪ್ರೀಂಕೋರ್ಟ್‌ ನಲ್ಲಿ ಕೇರಳ ಸರಕಾರದ ಮೇಲ್ಮನವಿಯು ಯುಎಪಿಎ ಕೈದಿಗಳ ಬಿಡುಗಡೆಗೆ ಹೇಗೆ ತೊಂದರೆಯಾಗಬಹುದು?

ವಾರ್ತಾ ಭಾರತಿ : 16 Aug, 2022
ತುಷಾರ್ ನಿರ್ಮಲ್ ಸಾರಥಿ (ಕೇರಳ ಹೈಕೋರ್ಟ್ ವಕೀಲರು)

ನಿಷೇಧಿತ ಸಿಪಿಐ (ಮಾವೋವಾದಿ)(Maoist) ಸದಸ್ಯನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ)ಯಡಿ ಆರೋಪಗಳನ್ನು ಮರುಸ್ಥಾಪಿಸುವಂತೆ ಕೇರಳ ಸರಕಾರವು(Kerala Government) ಕೆಲವು ವಾರಗಳ ಹಿಂದೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಮೇಲ್ಮನವಿಯು ಈ ಕರಾಳ ಕಾನೂನಿನಡಿ ವಿಚಾರಣೆಯಿಲ್ಲದೆ ಬಂಧನದಲ್ಲಿರುವ ಸಾವಿರಾರು ಭಾರತೀಯರ ಬಿಡುಗಡೆಗೆ ಈಗ ಲಭ್ಯವಿರುವ ಕಿರು ಅವಕಾಶಕ್ಕೆ ತಡೆಯನ್ನೊಡ್ಡಬಹುದು.

ತನ್ನ ವಿರುದ್ಧ ಕಾನೂನು ಕ್ರಮಕ್ಕೆ ಮಂಜೂರಾತಿಯು ಯುಎಪಿಎ (ಶಿಫಾರಸುಗಳು ಮತ್ತು ಪ್ರಾಸಿಕ್ಯೂಷನ್ಗೆ ಅನುಮತಿ) ನಿಯಮಗಳು,2008ರ ಅಡಿ ನಿಗದಿತ ಸಮಯ ಮಿತಿಯನ್ನು ಉಲ್ಲಂಘಿಸಿರುವುದರಿಂದ ಅದು ಸಿಂಧುವಲ್ಲ ಎಂದು ವಾದಿಸಿ ಟಿ.ಆರ್.ರೂಪೇಶ ಸಲ್ಲಿಸಿದ್ದ ಪರಿಷ್ಕರಣೆ ಅರ್ಜಿಯನ್ನು ಕಳೆದ ಮಾರ್ಚ್ನಲ್ಲಿ ಪುರಸ್ಕರಿಸಿದ್ದ ಕೇರಳ ಉಚ್ಚ ನ್ಯಾಯಾಲಯವು(Kerala Highcourt) ಮೂರು ಪ್ರಕರಣಗಳಲ್ಲಿ ಆತನ ವಿರುದ್ಧದ ಎಲ್ಲ ಆರೋಪಗಳನ್ನು ರದ್ದುಗೊಳಿಸಿತ್ತು.

ಸಾಕ್ಷಾಧಾರಗಳ ವರದಿಯನ್ನು ಸ್ವೀಕರಿಸಿದ ಬಳಿಕ ಆಪಾದಿತ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಬೇಕೇ ಎನ್ನುವುದನ್ನು ನಿರ್ಧರಿಸಲು ರಾಜ್ಯ ಸರಕಾರಕ್ಕೆ ಕೇವಲ ಏಳು ದಿನಗಳ ಅವಕಾಶವನ್ನು ಕಾನೂನು ನೀಡುತ್ತದೆ. ಆದರೆ ಕೇರಳ ಸರಕಾರವು ಆರು ತಿಂಗಳಿಗೂ ಅಧಿಕ ಸಮಯ ಈ ವಿಷಯದಲ್ಲಿ ನಿಷ್ಕ್ರಿಯವಾಗಿತ್ತು. ಈ ವಿಳಂಬವು ಕಾನೂನುಬಾಹಿರವಾಗಿದೆ ಎಂದು ಬೆಟ್ಟು ಮಾಡಿದ್ದ ಕೇರಳ ಉಚ್ಚ ನ್ಯಾಯಾಲಯವು ರೂಪೇಶ್ ವಿರುದ್ಧದ ಯುಎಪಿಎ ಆರೋಪಗಳನ್ನು ರದ್ದುಗೊಳಿಸಿತ್ತು.

ಆದಾಗ್ಯೂ ಸಿಪಿಎಂ ನೇತೃತ್ವದ ಕೇರಳದ ಎಲ್ಡಿಎಫ್ ಸರಕಾರವು(LDF Government) ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ್ದು, ಕಾಲಮಿತಿ ಕಡ್ಡಾಯವಲ್ಲ ಮತ್ತು ಅದನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದೆ.

ಸೆ.19ರಂದು ಈ ಅರ್ಜಿಯು ವಿಚಾರಣೆಗೆ ಬರಲಿದ್ದು, ಅದನ್ನು ಸರ್ವೋಚ್ಚ ನ್ಯಾಯಾಲಯವು ಅಂಗೀಕರಿಸಿದರೆ ಅದು ರೂಪೇಶ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲ, ಕರಾಳ ಕಾನೂನಿನಡಿ ಆರೋಪಿ ವ್ಯಕ್ತಿಗಳಿಗೆ ಉಪಯುಕ್ತವಾಗಿರುವ ಯುಎಪಿಎ ಕಾಯ್ದೆಯಲ್ಲಿನ ಅಪರೂಪದ ನಿಬಂಧನೆಗಳಲ್ಲೊಂದನ್ನೂ ಸರಕಾರದ ಪರವಾಗಿ ದುರ್ಬಲಗೊಳಿಸಲಿದೆ.
             
ದುರುಪಯೋಗ ತಡೆಯಲು ಕ್ರಮ
  
ಯುಎಪಿಎ ಕಾಯ್ದೆಯು ಆರೋಪಿಗಳಿಗೆ ಜಾಮೀನು ಮಾರ್ಗವೂ ಇಲ್ಲದೆ ಸುದೀರ್ಘ ಕಾಲ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತದೆ ಎನ್ನುವುದು ಅದರ ವಿರುದ್ಧದ ಪ್ರಮುಖ ಟೀಕೆಗಳಲ್ಲೊಂದಾಗಿದೆ. ಎನ್ಐಎ ವಿರುದ್ಧ ಝಹೂರ್ ಅಹ್ಮದ್ ವಟಾಳಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು,‘ನಿಯಮದಂತೆ ಜಾಮೀನು’ ಯುಎಪಿಎ ಪ್ರಕರಣಗಳಲ್ಲಿ ಅನ್ವಯವಾಗುವುದಿಲ್ಲ ಎಂದು ಘೋಷಿಸಿದೆ. ದೀರ್ಘಕಾಲ ಬಂಧನ ಮತ್ತು ವಿಚಾರಣೆಗಳ ನಿಧಾನ ಗತಿಯು ಈ ಪ್ರಕ್ರಿಯೆಯನ್ನೇ ಆರೋಪಿಯ ಪಾಲಿಗೆ ಶಿಕ್ಷೆಯನ್ನಾಗಿಸುತ್ತದೆ.

ಛತ್ತೀಸ್ಗಡದಲ್ಲಿಯ ವಿಚಾರಣಾ ನ್ಯಾಯಾಲಯವೊಂದು 121 ಆದಿವಾಸಿಗಳನ್ನು ಬಿಡುಗಡೆಗೊಳಿಸುವ ಮುನ್ನ ಅವರು ಐದು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದರು ಎಂದು ಕಳೆದ ಜುಲೈನಲ್ಲಿ ಮಾಧ್ಯಮಗಳು ವರದಿ ಮಾಡಿದ್ದವು. 10 ಅಥವಾ ಅದಕ್ಕೂ ಹೆಚ್ಚು ವರ್ಷಗಳ ಕಾಲ ಯುಎಪಿಎ ಆರೋಪಗಳಡಿ ಬಂಧಿತರಾಗಿದ್ದು, ಬಳಿಕ ನ್ಯಾಯಾಲಯಗಳಿಂದ ನಿರಪರಾಧಿಗಳು ಎಂದು ಘೋಷಿತಗೊಂಡ ಆರೋಪಿಗಳ ನಿದರ್ಶನಗಳು ಅಪರೂಪವೇನಲ್ಲ. ರೂಪೇಶ್ ಸಹ ರದ್ದುಗೊಂಡಿರುವ ತನ್ನ ವಿರುದ್ಧದ ಪ್ರಕರಣಗಳಲ್ಲಿ ಆರು ವರ್ಷಗಳಿಗೂ ಅಧಿಕ ಸಮಯದಿಂದ ಜೈಲುವಾಸ ಅನುಭವಿಸುತ್ತಿದ್ದಾನೆ.
 
ಯುಎಪಿಎ ಕಾಯ್ದೆಯ ಕಲಂ 45ರಲ್ಲಿ ಹೇಳಿರುವಂತೆ ಅದರ 4 ಮತ್ತು 6ನೇ ಅಧ್ಯಾಯಗಳಲ್ಲಿ ಉಲ್ಲೇಖಿಸಲಾಗಿರುವ ಅಪರಾಧಗಳ ವಿಚಾರಣೆಯನ್ನು ಸರಕಾರವು ತನ್ನ ಅನುಮತಿ ನೀಡುವವರೆಗೆ ನಡೆಸುವಂತಿಲ್ಲ. ಈ ಅಧ್ಯಾಯಗಳು ಭಯೋತ್ಪಾದನೆ ಸಂಘಟನೆಗಳಿಗೆ ಬೆಂಬಲ ಮತ್ತು ಭಯೋತ್ಪಾದಕ ಕೃತ್ಯಗಳಿಗಾಗಿ ನಿಧಿ ಸಂಗ್ರಹದಂತಹ ಹಲವಾರು ಚಟುವಟಿಕೆಗಳಿಗೆ ಸಂಬಂಧಿಸಿವೆ. ವಿಚಾರಣೆಗೆ ಅನುಮತಿ ನೀಡಬೇಕೇ ಎನ್ನುವುದನ್ನು ಪರೀಶಿಲಿಸುವಾಗ ಅನುಸರಿಸಬೇಕಾದ ಕಾರ್ಯವಿಧಾನ ಮತ್ತು ಕಾಲಮಿತಿಯನ್ನು ಕಲಂ 45 ನಿರ್ದಿಷ್ಟಪಡಿಸುತ್ತದೆ.

2008ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಪ್ರಸ್ತಾವಿಸಿದ್ದ ತಿದ್ದುಪಡಿಯ ಮೂಲಕ ಈ ಕಾಲಮಿತಿಯ ಕಾರ್ಯವಿಧಾನವನ್ನು ಕಾಯ್ದೆಯಲ್ಲಿ ಸೇರ್ಪಡೆಗೊಳಿಸಲಾಗಿತ್ತು. ಯುಎಪಿಎಗಿಂತ ಮೊದಲಿನ ಟಾಡಾ ಮತ್ತು ಭಯೋತ್ಪಾದನೆ ನಿಗ್ರಹ ಕಾಯ್ದೆಗಳಲ್ಲಿ ಸಹ ವಿಚಾರಣೆ ಆರಂಭಕ್ಕೆ ಮುನ್ನ ಪೂರ್ವಾನುಮತಿಯ ಅಗತ್ಯವನ್ನು ನಿಗದಿಪಡಿಸಲಾಗಿತ್ತು.

ಇಂತಹ ಕಠಿಣ ಕಾನೂನುಗಳ ದುರುಪಯೋಗವನ್ನು ತಡೆಯುವ ಕ್ರಮವಾಗಿ ವಿಚಾರಣೆಗೆ ಅನುಮತಿಯನ್ನು ಅಗತ್ಯವಾಗಿಸಲಾಗಿದೆ. ಈ ಕಾನೂನುಗಳು ಇತರ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಲಭ್ಯವಿಲ್ಲದ ಅಧಿಕಾರಗಳನ್ನು ಪೊಲೀಸರಿಗೆ ನೀಡುತ್ತವೆ. ಇದನ್ನು ಮೇಲ್ವಿಚಾರಣೆಗೆ ಒಳಪಡಿಸದಿದ್ದರೆ ಗಂಭೀರ ಮಾನವ ಹಕ್ಕು ಉಲ್ಲಂಘನೆಗಳಿಗೆ ಕಾರಣವಾಗುವ ದುರುಪಯೋಗಗಳ ಸಾಧ್ಯತೆಗಳು ಸಾಕಷ್ಟು ಹೆಚ್ಚಿರುತ್ತವೆ. ಇದೇ ಕಾರಣದಿಂದ ವಿಚಾರಣೆಗೆ ಪೂರ್ವಾನುಮತಿಯನ್ನು ಅಗತ್ಯವಾಗಿಸಲಾಗಿದೆ.
 
ಕಾನೂನಿನ ದುರುಪಯೋಗವನ್ನು ತಡೆಯಲು ನ್ಯಾಯಾಲಯಗಳು ಹೆಚ್ಚಾಗಿ ವಿಚಾರಣೆ ಮುನ್ನ ಪೂರ್ವಾನುಮತಿಯನ್ನು ಪಡೆಯುವುದನ್ನು ಅಗತ್ಯವಾಗಿಸಿರುವ ನಿಬಂಧನೆಯನ್ನು ಮುಖ್ಯವಾಗಿ ಪರಿಗಣಿಸುತ್ತವೆ. ಪ್ರತಿಯೊಂದು ಹೊಸ ಕಾಯ್ದೆ ಬಂದಾಗಲೆಲ್ಲ ಪೂರ್ವಾನುಮತಿ ಕಾರ್ಯವಿಧಾನವು ಹೆಚ್ಚೆಚ್ಚು ಸ್ವತಂತ್ರ ಮತ್ತು ಕಠಿಣಗೊಂಡಿದೆ.
ಪೂರ್ವಾನುಮತಿಯ ನಿಬಂಧನೆಯು ರಿಮಾಂಡ್ ಅಪೇಕ್ಷಣೀಯವೇ ಮತ್ತು ಆರೋಪಗಳು ನಿಜವೇ ಎನ್ನುವುದನ್ನು ಪರಿಶೀಲಿಸಲು ಇರುವ ಅವಕಾಶವಾಗಿದೆ. ಅಲ್ಲದೆ ಈ ಪ್ರಕರಣಗಳಲ್ಲಿ ಅನಗತ್ಯ ವಿಳಂಬವನ್ನು ತಪ್ಪಿಸಬೇಕು ಎಂದೂ ಕಾನೂನು ಹೇಳುತ್ತದೆ. ಆದಾಗ್ಯೂ ವಿಚಾರಣೆ ಪ್ರಕ್ರಿಯೆಗಳಲ್ಲಿ ಅತಿಯಾದ ವಿಳಂಬಗಳ ಮೂಲಕ ಇದನ್ನು ಉಲ್ಲಂಘಿಸಲಾಗುತ್ತಿದೆ. ಈ ವಿಳಂಬವು ಸರಕಾರದಿಂದ ಬಂಧಿತ ಕೈದಿಗಳ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ.

ಕಾನೂನುಕ್ರಮಕ್ಕೆ ಅನುಮತಿ ನೀಡುವುದನ್ನು ಕಾಲಮಿತಿಗೆ ಒಳಪಡಿಸಿರುವುದೂ ವಿಚಾರಣೆಯಲ್ಲಿ ವಿಳಂಬವನ್ನು ತಪ್ಪಿಸಲು ನೆರವಾಗುವ ಉದ್ದೇಶವನ್ನು ಹೊಂದಿದೆ. ಆದಾಗ್ಯೂ ಕೇರಳದಲ್ಲಿ ಸಿಪಿಎಂ ಯುಎಪಿಎ ವಿರುದ್ಧದ ಪ್ರತಿಭಟನೆಗಳನ್ನು ಬುಡಮೇಲುಗೊಳಿಸುವ ಪ್ರಯತ್ನಗಳನ್ನು ಆಗಾಗ್ಗೆ ನಡೆಸಿದೆ. ತನ್ನ ಮೊದಲ ಅಧಿಕಾರಾವಧಿಯಲ್ಲಿ,2017ರಲ್ಲಿ ಯುಎಪಿಎ ಬಳಕೆಯ ವಿರುದ್ಧ ವ್ಯಾಪಕ ಪ್ರತಿಭಟನೆಗಳನ್ನು ಎದುರಿಸಿದ್ದ ಪಿಣರಾಯಿ ವಿಜಯನ್ ನೇತೃತ್ವದ ಸರಕಾರವು ಯುಎಪಿಎ ಪ್ರಕರಣಗಳ ಪುನರ್ಪರಿಶೀಲನೆಯನ್ನು ನಡೆಸಲಾಗುವುದು ಎಂದು ಘೋಷಿಸಿತ್ತು. ಕಾನೂನಿನಲ್ಲಿ ನಿಗದಿಪಡಿಸಿರುವಂತೆ ಶಿಫಾರಸುಗಳನ್ನು ಮಾಡುವ ಪ್ರಾಧಿಕಾರದಿಂದ ಸಾಕ್ಷಾಧಾರಗಳ ಪರಿಶೀಲನೆಯಷ್ಟೇ ಘೋಷಣೆಯ ಅರ್ಥವಾಗಿತ್ತು ಎನ್ನುವುದು ನಂತರ ಸ್ಪಷ್ಟವಾಗಿತ್ತು.

ಪಕ್ಷದ ಕ್ರಮಗಳು ಯುಎಪಿಎ ಅನ್ನು ವಿರೋಧಿಸುವ ಅದರ ಪ್ರತಿಪಾದಿತ ನಿಲುವಿಗೆ ವಿರುದ್ಧವಾಗಿವೆ. ಆರೋಪಿಯು ಈ ಕರಾಳ ಕಾನೂನಿನ ಹಿಡಿತದಿಂದ ಹೊರಬರಲು ಇರುವ ಸಣ್ಣ ಅವಕಾಶಕ್ಕೂ ತಡೆಯೊಡ್ಡಲು ಕೇರಳದಲ್ಲಿನ ತನ್ನ ಸರಕಾರವು ಪ್ರಯತ್ನಿಸುತ್ತಿರುವಾಗ ಸಿಪಿಎಂ ದೇಶಾದ್ಯಂತ ಅಭಿಯಾನಗಳನ್ನು ಆಯೋಜಿಸುವ ಮೂಲಕ ಯುಎಪಿಎ ರದ್ದತಿಗೆ ಆಗ್ರಹಿಸುತ್ತಿದೆ!

 ಕೃಪೆ: Scroll.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)