ನಿರಾಶೆ ತಂದ ಭಾಷಣ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
75ನೇ ವರ್ಷದ ಸ್ವಾತಂತ್ರೋತ್ಸವವನ್ನು ಶ್ರೀಸಾಮಾನ್ಯರು ಪ್ರಧಾನಿ ಮೋದಿಯವರ 'ಆದೇಶ'ದಂತೆ, ಧ್ವಜಗಳನ್ನು ಖರೀದಿಸಿ ತಮ್ಮ ಮನೆಗಳಲ್ಲಿ ಹಾರಿಸಿ ಆಚರಿಸಿದರು. ಇದೇ ಸಂದರ್ಭದಲ್ಲಿ 'ಸ್ವಾತಂತ್ರ ಅಮೃತಮಹೋತ್ಸವ'ದ ಹಿನ್ನೆಲೆಯಲ್ಲಿ ಜನರೂ ಪ್ರಧಾನಿ ಮೋದಿಯವರಿಂದ ಬಹಳಷ್ಟನ್ನು ನಿರೀಕ್ಷಿಸಿದ್ದರು. ಪ್ರಧಾನಿಯವರು ಕೆಂಪುಕೋಟೆಯಲ್ಲಿ ನಿಂತು ಮಾಡುವ ಭಾಷಣದಲ್ಲಿ, ಮಹತ್ವದ್ದೇನಾದರೂ ಘೋಷಿಸಲಿದ್ದಾರೆಯೇ ಎಂದು ಕಾತರರಾಗಿ ಕಾಯುತ್ತಿದ್ದರು. ಆದರೆ ದೇಶದ ನಿರೀಕ್ಷೆಯನ್ನು ಅವರು ಮತ್ತೊಮ್ಮೆ ಹುಸಿ ಮಾಡಿದ್ದಾರೆ. ಮಾತುಗಳಲ್ಲೇ ಅವರು ಅರಮನೆ ಕಟ್ಟಿದ್ದಾರೆ. ''2047ರಲ್ಲಿ ಈ ದೇಶ ಭವ್ಯ ಭಾರತವಾಗಲಿದೆ. ಆದುದರಿಂದ ನನಗೆ ಈ ದೇಶವನ್ನು ಉದ್ಧರಿಸಲು ಇನ್ನೂ 25 ವರ್ಷ ಅವಕಾಶ ಕೊಡಿ'' ಎಂದು ಭಾಷಣದಲ್ಲಿ ಪರೋಕ್ಷವಾಗಿ ಯಾಚಿಸಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ತಾನು ಮಾಡಿದ ಸಾಧನೆಗಳ ಬಗ್ಗೆ ಹೇಳಿಕೊಳ್ಳುವಂತಹದ್ದು ಏನೂ ಇಲ್ಲದೆ ಇದ್ದುದರಿಂದ, ದೇಶದ ಜನರಿಗೆ ಒಂದಿಷ್ಟು ಉಪದೇಶಗಳನ್ನು ನೀಡಿ ಮಾತು ಮುಗಿಸಿದ್ದಾರೆ. ಕೆಂಪುಕೋಟೆಯಿಂದ ಪ್ರಧಾನಿಯೊಬ್ಬರು ಮಾಡಿದ ಅತ್ಯಂತ ಕಳಪೆ ಭಾಷಣವಾಗಿತ್ತು ಅದು. ಅವರ ಮಾತುಗಳಲ್ಲಿ ದೇಶದ ಭವಿಷ್ಯದ ಬಗ್ಗೆ ಯಾವ ದೂರದೃಷ್ಟಿಯೂ ಇದ್ದಿರಲಿಲ್ಲ.
2047ರಲ್ಲಿ ಈ ದೇಶವನ್ನು ಭವ್ಯವಾಗಿಸುವ ಸಂಕಲ್ಪವನ್ನು ತೊಡಬೇಕೆಂದು ಜನರಿಗೆ ಕರೆ ನೀಡಿರುವ ಮೋದಿಯವರು, 2014 ಮತ್ತು ಆನಂತರದ ಸ್ವಾತಂತ್ರೋತ್ಸವದಲ್ಲಿ ಕೆಂಪು ಕೋಟೆಯ ಮೇಲೆ ನಿಂತು ನೀಡಿದ ಭರವಸೆಗಳ ಗತಿ ಏನಾಗಿದೆ ಎನ್ನುವುದನ್ನು 'ಅನುಸಂಧಾನ' ಮಾಡಿಕೊಳ್ಳುವ ಅಗತ್ಯವಿದೆ. ಆಗ ಮಾತ್ರ ಪ್ರಧಾನಿಯವರ 'ಜೈ ಅನುಸಂಧಾನ್' ಘೋಷಣೆಗೆ ಅರ್ಥ ಬರುತ್ತದೆ. ಸ್ವಾತಂತ್ರದ ಅಮೃತ ಮಹೋತ್ಸವವನ್ನು ಆಚರಿಸುವ ಹೊತ್ತಿಗೆ ದೇಶದಲ್ಲಿ ಎಲ್ಲರೂ ಮನೆಗಳನ್ನು ಹೊಂದಿರುತ್ತಾರೆ ಎಂಬ ಭರವಸೆಯನ್ನು ಅವರು ನೀಡಿದ್ದರು. ಆ ಭರವಸೆ ಈಡೇರಿಸಿದ್ದಿದ್ದರೆ ಇಂದು ಕೋಟ್ಯಂತರ ಜನರಿಗೆ ತಮ್ಮದೇ ಸ್ವಂತ ಮನೆಗಳಲ್ಲಿ ಧ್ಜಜ ಹಾರಿಸುವ ಸೌಭಾಗ್ಯ ಸಿಗುತ್ತಿತ್ತು. ತಮ್ಮ ಭಾಷಣದಲ್ಲಿ ಭ್ರಷ್ಟಾಚಾರ ಹೊಡೆದೋಡಿಸುವ ಬಗ್ಗೆ ಮಾತನಾಡಿದರು. 'ನ್ಯಾಶನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ' ಪ್ರಕರಣವನ್ನು ಮುಂದಿಟ್ಟುಕೊಂಡು ಅವರು ಭ್ರಷ್ಟಾಚಾರವನ್ನು ವ್ಯಾಖ್ಯಾನಿಸಿದ್ದಾರೆ. ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಬಹುಮುಖ್ಯ ಭರವಸೆ ವಿದೇಶದ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣವನ್ನು ತರುವುದು. ಆದರೆ ಈವರೆಗೆ ಆ ಭರವಸೆಯನ್ನು ಈಡೇರಿಸುವುದು ಸಾಧ್ಯವಾಗಿಲ್ಲ. ಅಧಿಕಾರಕ್ಕೇರುವ ಮುನ್ನ ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣಕ್ಕಾಗಿ ಕಾಂಗ್ರೆಸ್ ಪಕ್ಷದ ಕಡೆಗೆ ಬೆರಳು ಮಾಡುತ್ತಿದ್ದ ಪ್ರಧಾನಿ ಮೋದಿಯವರು, ಈಗ ಆ ಹಣದ ಬಗ್ಗೆ ವೌನವಹಿಸಿರುವುದು ವಿಶೇಷವಾಗಿದೆ. ಕೆಂಪು ಕೋಟೆಯ ಮೇಲೆ ನಿಂತು 'ಇನ್ನು 25 ವರ್ಷಗಳ ಒಳಗೆ ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರುತ್ತೇನೆ' ಎಂದು ಘೋಷಿಸಿದ್ದರೆ, ಅಮೃತ ಮಹೋತ್ಸವ ಆಚರಣೆ ಸಾರ್ಥಕವಾಗಿ ಬಿಡುತ್ತಿತ್ತೇನೋ.
ಕನಿಷ್ಠ 'ನೋಟು ನಿಷೇಧ'ದಿಂದ ಭಾರತದೊಳಗಿರುವ ಕಪ್ಪು ಹಣವಾದರೂ ಹೊರ ಬಂತೆ? ಎಂದರೆ ಅದರಲ್ಲೂ ಸರಕಾರ ಸಂಪೂರ್ಣ ಹಿನ್ನಡೆ ಅನುಭವಿಸಿತು. ನೋಟು ನಿಷೇಧದಿಂದ ಆದ ಅತಿ ದೊಡ್ಡ ಅನಾಹುತವೆಂದರೆ, ದೇಶದೊಳಗಿರುವ ಕಪ್ಪು ಹಣಗಳೆಲ್ಲ ಅಕ್ರಮ ದಾರಿಗಳ ಮೂಲಕ ಬಿಳಿಯಾದದ್ದು. ನೋಟು ನಿಷೇಧದಿಂದ ಭಾರತದ ಆರ್ಥಿಕತೆ ಭಾರೀ ಹಿನ್ನಡೆಯನ್ನು ಅನುಭವಿಸಿತು. ನೋಟು ನಿಷೇಧವನ್ನು ಭಾರತ ಕಂಡ ಅತಿ ದೊಡ್ಡ ಹಗರಣ ಎಂದು ಆರ್ಥಿಕ ತಜ್ಞರು ಬಣ್ಣಿಸುತ್ತಿದ್ದಾರೆ. ನೋಟು ನಿಷೇಧದಿಂದ ಹೊರ ಬಂದ ಕಪ್ಪು ಹಣವೆಷ್ಟು ಎನ್ನುವುದನ್ನು ಮುಂದಿಡಲು ಈವರೆಗೆ ಸರಕಾರಕ್ಕೆ ಸಾಧ್ಯವಾಗಿಲ್ಲ. ಭ್ರಷ್ಟಾಚಾರದಲ್ಲಿ ಬಿಜೆಪಿಯು ಕಾಂಗ್ರೆಸ್ ಪಕ್ಷವನ್ನು ಎಂದೋ ಮೀರಿಸಿ ಬಿಟ್ಟಿದೆ. ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಪಕ್ಷವಾಗಿ ಬಿಜೆಪಿ ಇಂದು ಗುರುತಿಸಲ್ಪಡುತ್ತಿದೆ. ಈ ದೇಶವನ್ನು ಕಾಂಗ್ರೆಸ್ 70 ವರ್ಷ ಆಳಿದ್ದರೆ ಮೋದಿ ನೇತೃತ್ವದ ಬಿಜೆಪಿ ಕೇವಲ ಎಂಟು ವರ್ಷ ಆಳಿತು. ಈ ಎಂಟು ವರ್ಷದಲ್ಲಿ ಬಿಜೆಪಿಯು ಕಾಂಗ್ರೆಸ್ ಪಕ್ಷಕ್ಕಿಂತ ಶ್ರೀಮಂತ ಪಕ್ಷವಾಗಿ ಹೊರ ಹೊಮ್ಮಿದೆಯೆಂದಾದರೆ, ಕಳೆದ ಎಂಟು ವರ್ಷಗಳಲ್ಲಿ ಭ್ರಷ್ಟಾಚಾರ ಯಾವ ಪ್ರಮಾಣದಲ್ಲಿ ಏರಿಕೆಯಾಗಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತ 180 ದೇಶಗಳಲ್ಲಿ 85ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ದೇಶದಲ್ಲಿ ಬಡತನ, ಹಸಿವು ಹೆಚ್ಚುತ್ತಿದೆ ಎಂದು ವರದಿಗಳು ಹೇಳುತ್ತವೆ. ಆರ್ಥಿಕವಾಗಿ ದೇಶ ಹಿನ್ನಡೆಯನ್ನು ಅನುಭವಿಸುತ್ತಿರುವ ದಿನಗಳಲ್ಲೇ, ಬಿಜೆಪಿ ಶ್ರೀಮಂತ ಪಕ್ಷವಾಗಿ ಹೊರಹೊಮ್ಮುವುದು ಏನನ್ನು ಹೇಳುತ್ತದೆ? ಭ್ರಷ್ಟಾಚಾರವನ್ನು ನಿಗ್ರಹಿಸಬೇಕಾದ ತನಿಖಾ ಸಂಸ್ಥೆಗಳನ್ನು ಮೋದಿ ನೇತೃತ್ವದ ಸರಕಾರ ದುರುಪಯೋಗ ಪಡಿಸಿಕೊಂಡಷ್ಟು ಯಾವ ಸರಕಾರವೂ ದುರುಪಯೋಗ ಪಡಿಸಿಕೊಂಡಿಲ್ಲ. ತನಿಖಾ ಸಂಸ್ಥೆಗಳ ಸ್ವಾತಂತ್ರವನ್ನೇ ಕಿತ್ತುಕೊಂಡು, ಅವುಗಳನ್ನು ವಿರೋಧ ಪಕ್ಷಗಳನ್ನು ಸದೆಬಡಿಯುವುದಕ್ಕೆ ಬಳಸಲಾಗುತ್ತಿದೆ. ದೇಶದಲ್ಲಿ ಆಳುವ ಪಕ್ಷಗಳ ನಾಯಕರ ಭ್ರಷ್ಟಾಚಾರಕ್ಕೆ ಈ ತನಿಖಾ ಸಂಸ್ಥೆಗಳೇ ರಕ್ಷಣೆ ನೀಡುತ್ತಿದೆ. ಇಂತಹ ದ್ವಂದ್ವ ನೀತಿಯ ಮೂಲಕ ದೇಶದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಲು ಸಾಧ್ಯವೆ?
ತಮ್ಮ ಮಾತಿನಲ್ಲಿ ದೇಶದ ಮಹಿಳೆಯರ ಘನತೆಯನ್ನು ಪ್ರಸ್ತಾಪಿಸಿದ್ದಾರೆ. ಆದರೆ ಅದರ ಮರುದಿನವೇ ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಬಿಲ್ಕೀಸ್ ಬಾನುವನ್ನು ಬರ್ಬರವಾಗಿ ಅತ್ಯಾಚಾರವೆಸಗಿ ಜೀವಾವಧಿ ಶಿಕ್ಷೆಗೊಳಗಾಗಿದ್ದ 11 ಮಂದಿ ಆರೋಪಿಗಳನ್ನು ಗುಜರಾತ್ ಸರಕಾರ ಕ್ಷಮಿಸಿ ಬಿಡುಗಡೆ ಮಾಡಿದೆ. ಹತ್ಯಾಕಾಂಡ, ಅತ್ಯಾಚಾರಗಳ ಆರೋಪಿಗಳೆಲ್ಲ ಜೈಲಿನಿಂದ ಬಿಡುಗಡೆಯಾಗುತ್ತಿದ್ದರೆ, ಸಂತ್ರಸ್ತರ ನ್ಯಾಯಕ್ಕಾಗಿ ಹೋರಾಡಿದವರನ್ನು ಜೈಲಿಗೆ ಹಾಕಲಾಗುತ್ತದೆ. ದಲಿತ ಮಹಿಳೆಯನ್ನು ಬರ್ಬರವಾಗಿ ಅತ್ಯಾಚಾರವೆಸಗಿದ ಆರೋಪಿಗಳು ಸಾರ್ವಜನಿಕವಾಗಿ ಎದೆಯುಬ್ಬಿಸಿ ಓಡಾಡುತ್ತಿದ್ದಾರೆ. ಆ ಕೃತ್ಯವನ್ನು ವರದಿ ಮಾಡಲು ಹೋದ ಪತ್ರಕರ್ತ, ದೇಶದ್ರೋಹದ ಆರೋಪದಲ್ಲಿ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾನೆ. ಇವೆಲ್ಲ ಬೆಳವಣಿಗೆಗಳು 25 ವರ್ಷಗಳ ಆನಂತರದ ಭಾರತ ಹೇಗಿರುತ್ತದೆ ಎನ್ನುವುದನ್ನು ಹೇಳುತ್ತವೆ. ಭವಿಷ್ಯದ ಭಾರತವನ್ನು ಗುಜರಾತ್ ಹತ್ಯಾಕಾಂಡದ ಆರೋಪಿಗಳು ಕಟ್ಟಲಿದ್ದಾರೆ.
ಮೋದಿಯವರ ಪಂಚ ಸಂಕಲ್ಪಗಳಂತೂ ಹಾಸ್ಯಾಸ್ಪದವಾಗಿವೆ. ಸರಕಾರದ ನೇತೃತ್ವದಲ್ಲೇ ದೇಶ ಮತ್ತೆ ಮನುವಾದದ ಗುಲಾಮಗಿರಿಗೆ ತಲೆಬಾಗಿದೆ. ಹೀಗಿರುವಾಗ ಅವರ ಸಂಕಲ್ಪಗಳಲ್ಲೊಂದಾದ, 'ಗುಲಾಮಗಿರಿಯ ಎಲ್ಲ ಕುರುಹುಗಳನ್ನು ತೆಗೆದು ಹಾಕುವುದು' ವಾಸ್ತವದಲ್ಲಿ ಸಾಧ್ಯವೇ? ದೇಶದ ಜಾತ್ಯತೀತ ಹೆಮ್ಮೆಯ ಪರಂಪರೆಯನ್ನು ಅಳಿಸಿ ಹಾಕುವುದನ್ನೇ ಅಜೆಂಡಾ ಮಾಡಿಕೊಂಡಿರುವ ಸರಕಾರ, ವಿಭಜನೆಯನ್ನೇ ಆಚರಣೆಯಾಗಿಸಲು ಹೊರಟ ಸರಕಾರ ದೇಶದಲ್ಲಿ ಏಕತೆಯನ್ನು ಮೂಡಿಸುವುದು ಸಾಧ್ಯವೇ? ಸುಳ್ಳುಗಳ ತಳಹದಿಯ ಮೇಲೆ ದೇಶವನ್ನು ಭವ್ಯವಾಗಿ ಕಟ್ಟಲು ಸಾಧ್ಯವಿಲ್ಲ. 100ನೇ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ಈ ದೇಶ ಭವ್ಯವಾಗಿ ತಲೆಯೆತ್ತಿ ನಿಲ್ಲಬೇಕಾದರೆ, ಮೊದಲು ಸರಕಾರ ತನ್ನನ್ನು ತಾನು ತಿದ್ದಿಕೊಳ್ಳಬೇಕು. ತನ್ನ ಆರ್ಥಿಕ ನೀತಿಗಳನ್ನು ಬದಲಿಸಿಕೊಳ್ಳಬೇಕು. ಸರ್ವರನ್ನು ಒಳಗೊಂಡ ಅಭಿವೃದ್ಧಿಗೆ ಆದ್ಯತೆಯನ್ನು ಕೊಡಬೇಕು. ಸಂವಿಧಾನಕ್ಕೆ ಬದ್ಧವಾಗಿ ಆಡಳಿತ ನಡೆಸಬೇಕು. ಬ್ರಿಟಿಷರ ಗುಲಾಮತನಕ್ಕೆ ತಲೆಬಾಗಿದವರನ್ನು, ಗಾಂಧೀಜಿಯನ್ನು ಕೊಂದವರನ್ನು ಆದರ್ಶವಾಗಿಟ್ಟುಕೊಂಡು ಭವ್ಯ ಭಾರತವನ್ನು ಕಟ್ಟುವುದು ಎಂದಿಗೂ ಸಾಧ್ಯವಿಲ್ಲ. ಅಂತಹ ಭಾರತ ಬ್ರಿಟಿಷರ ಕಾಲದ ಭಾರತಕ್ಕಿಂತಲೂ ಭೀಕರವಾಗಿರುತ್ತದೆ