varthabharthi


ನಿಮ್ಮ ಅಂಕಣ

ದೇಶ ಯಾರಿಗೆ ಸುಭಿಕ್ಷವಾಗಿದೆ?

ವಾರ್ತಾ ಭಾರತಿ : 17 Aug, 2022
ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ಆಗಸ್ಟ್ 14ರಂದು ಬಾಗೇಪಲ್ಲಿಯಲ್ಲಿ ನಡೆದ 'ಹರ್ ಘರ್ ತಿರಂಗಾ' ಜಾಥಾದಲ್ಲಿ ಸಚಿವರಾದ ಡಾ. ಸುಧಾಕರ್‌ರವರು, ''ದೇಶ ಇಂದು ಸುಭಿಕ್ಷವಾಗಿದ್ದು ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿಯುತ್ತಲಿದೆ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಇಡೀ ವಿಶ್ವ ಭಾರತದತ್ತ ತಿರುಗಿ ನೋಡುತ್ತಿದೆ'' ಎಂದಿದ್ದಾರೆ. ಆದರೆ ಪ್ರತಿನಿತ್ಯವೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಅಂಕಿ ಅಂಶಗಳು ತೀರ ಭಿನ್ನವಾಗಿದ್ದು ಭಾರತದ ಪ್ರಗತಿ ಹಲವಾರು ರೀತಿಯಲ್ಲಿ ಕುಸಿಯುತ್ತಿರುವುದು ಕಂಡುಬರುತ್ತಿದೆ.

 ಜನವರಿ 5, 2022 ರಂದು ಪತ್ರಿಕೆಗಳಲ್ಲಿ ಪ್ರಕಟವಾದ ಕೇಂದ್ರ ಸರಕಾರದ , 'ಬಹು ಆಯಾಮದ ಬಡತನ ಸೂಚ್ಯಂಕ ವರದಿ'ಯ ಪ್ರಕಾರ ರಾಜ್ಯಗಳಲ್ಲಿನ ಬಡತನದ ಪ್ರಮಾಣ ಹೀಗಿದೆ : ಬಿಹಾರ ಶೇ. 51.91, ಜಾರ್ಖಂಡ್ ಶೇ. 42.16, ಉತ್ತರ ಪ್ರದೇಶ ಶೇ. 37.79, ಮಧ್ಯಪ್ರದೇಶ ಶೇ. 36.65, ಮೇಘಾಲಯ ಮತ್ತು ಅಸ್ಸಾಂ ಶೇ. 32.67, ಛತ್ತೀಸಗಡ ಶೇ. 29.91, ರಾಜಸ್ಥಾನ ಶೇ. 29.46, ಒಡಿಶಾ ಶೇ. 29.35, ನಾಗಾಲ್ಯಾಂಡ್ ಶೇ. 25.23, ಪಶ್ಚಿಮ ಬಂಗಾಲ ಶೇ. 21.43, ಗುಜರಾತ್ ಶೇ. 18.60, ಕರ್ನಾಟಕ ಶೇ. 14.85 ಹೀಗೆ ಅತ್ಯಂತ ಕಡಿಮೆ ಎಂದರೆ ಕೇರಳ ಶೇ. 0.71 ಎಂದು ದಾಖಲಿಸುತ್ತದೆ.

ಫೋರ್ಬ್ಸ್ ಪತ್ರಿಕೆಯು ದೇಶದ ಅತ್ಯಂತ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿ, ರೂ. 6.89 ಲಕ್ಷಕೋಟಿ ಸಂಪತ್ತಿನ ಒಡೆಯ ಮುಕೇಶ್ ಅಂಬಾನಿ ಟಾಪ್ 10ರಲ್ಲಿ ಮೊದಲನೆಯವರೆಂದು ಮತ್ತು ಆನಂತರ ರೂ. 6.83 ಲಕ್ಷ ಕೋಟಿಯ ಒಡೆಯ ಗೌತಮ್ ಅದಾನಿ ಎಂದೂ ಈ ಪಟ್ಟಿಯಲ್ಲಿ ಹತ್ತನೆಯವರಾದ ಉದಯ್ ಕೋಟಕ್ ರೂ. 1.08 ಲಕ್ಷ ಕೋಟಿಯ ಒಡೆಯರೆಂದು ತಿಳಿಸುತ್ತದೆ.

'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೀಫಾರ್ಮ್ಸ್' (ಎಡಿಆರ್) ವರದಿಯು ಇತ್ತೀಚೆಗೆ ನಡೆದ ಐದು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ 690 ಶಾಸಕರ ಪೈಕಿ 598 ಶಾಸಕರು (ಶೇ.87) ಕೋಟ್ಯಧೀಶರು ಎಂದು ಹೇಳುತ್ತದೆ. ಇದೇ ಸಂಸ್ಥೆ ರೂ. 4,847 ಕೋಟಿಯ ಸಂಪತ್ತನ್ನು ಪಡೆದಿರುವ ಬಿಜೆಪಿ ದೇಶದಲ್ಲೇ ಅತ್ಯಂತ ಶ್ರೀಮಂತ ರಾಜಕೀಯ ಪಕ್ಷ ಹಾಗೂ ರೂ. 588.16 ಕೋಟಿ ಸಂಪತ್ತಿನ ಕಾಂಗ್ರೆಸ್ ಎರಡನೆಯ ಶ್ರೀಮಂತ ಪಕ್ಷ ಎಂಬ ವಿವರಣೆ ನೀಡುತ್ತದೆ. ಹೀಗಾಗಿ ಕೆಲವು ಉದ್ಯಮಿಗಳು, ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನೇತಾರರು ಮಾತ್ರ ಸುಭಿಕ್ಷವನ್ನು ಪಡೆದಿದ್ದಾರೆಯೇ ಹೊರತು ದೇಶ ಸುಭಿಕ್ಷವಾಗಿದೆ ಎಂಬುದನ್ನು ಒಪ್ಪಲಾಗದು.

'ವರ್ಲ್ಡ್ ಇನೀಕ್ವ್ಯಾಲಿಟಿ ರಿಪೋರ್ಟ್ - 2022' ವರದಿಯು ಸಂಪತ್ತಿನ ಅಸಮಾನ ಹಂಚಿಕೆಯನ್ನು ಸೂಚಿಸುತ್ತದೆ: ದೇಶದ ಶೇ. 10 ಜನರು ದೇಶದ ಒಟ್ಟು ಸಂಪತ್ತಿನ ಶೇ. 64.6ರಷ್ಟನ್ನು ಹೊಂದಿದ್ದಾರೆ. ದೇಶದ ಶೇ. 50ರಷ್ಟಿರುವ ಬಡವರು, ದೇಶದ ಒಟ್ಟು ಸಂಪತ್ತಿನ ಶೇ. 5.9ರಷ್ಟನ್ನು ಮಾತ್ರ ಹೊಂದಿದ್ದಾರೆ.

ಇನ್ನು ಪ್ಯಾಕ್ ಆಗಿರುವ ಬೇಳೆಕಾಳು, ಧಾನ್ಯಗಳು, ಹಾಲು, ಮೊಸರುಗಳ ಮೇಲೆ ಶೇ. 5 ಜಿಎಸ್‌ಟಿಯನ್ನು, ಕೃಷಿ, ಅಕ್ಕಿಗಿರಣಿ, ಹೈನುಗಾರಿಕೆ ಉಪಕರಣಗಳ ಮೇಲೆ ಶೇ. 18 ಜಿಎಸ್‌ಟಿಯನ್ನು ಹೇರಲಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳ ಬೆಲೆ ಗಗನಗಾಮಿಯಾಗಿವೆ. ಎಲ್ಲ ವಸ್ತುಗಳ ಬೆಲೆಯೂ ಏರಿಕೆಯಾಗಿವೆ. ಹೀಗಾಗಿ ಹೊಟೇಲ್ ಬಿಲ್ಲು ತುಂಬ ತುಟ್ಟಿಯಾಗಿ ಸಾಮಾನ್ಯನ ಬದುಕಿನ ಬವಣೆ ಹೇಳತೀರದಾಗಿದೆ. ಕೋವಿಡ್- 19ನಿಂದಾಗಿ ಅನೇಕರಿಗೆ ಉದ್ಯೋಗ ನಷ್ಟವಾಗಿದೆ. ಹೊಸ ನೇಮಕಾತಿಗಳಿಲ್ಲ. ನಿರುದ್ಯೋಗ 45 ವರ್ಷಗಳ ದಾಖಲೆಯನ್ನು ಮೀರಿದೆ. ಇದಕ್ಕೆ ವಿರುದ್ಧವಾಗಿ ಕಾರ್ಪೊರೇಟ್ ತೆರಿಗೆಯನ್ನು ಇಳಿಸಲಾಗಿದೆ. ವಜ್ರದ ಮೇಲಿನ ಜಿಎಸ್‌ಟಿ ಕೇವಲ ಶೇ. 5. ಆದ್ದರಿಂದ ಮೇಲ್ವರ್ಗದ ಹಾಗೂ ಕೆಳವರ್ಗದ ನಡುವಿನ ಆರ್ಥಿಕ ಅಂತರ ಹೆಚ್ಚುತ್ತಲೇ ಇದೆ. 'ಮಾತೃ ವಂದನಾ' , 'ಪೋಷಣ್ ಅಭಿಯಾನ' ಇತ್ಯಾದಿ ಯೋಜನೆಗಳೂ ವಿಫಲತೆಯನ್ನು ತೋರಿಸಿವೆ.

3 ಲಕ್ಷ ಮಕ್ಕಳು ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ನರಳುತ್ತಿದ್ದರೆ, ಮಹಿಳೆಯರ ರಕ್ತಹೀನತೆ ಈಗ ಶೇ. 47.8ಕ್ಕೆ ಏರಿದೆ. ಮಾಧ್ಯಮ ಸ್ವಾತಂತ್ರ್ಯವು 180 ದೇಶಗಳ ರ್ಯಾಂಕಿಂಗ್ ಪಟ್ಟಿಯಲ್ಲಿ 150 ನೇ ಸ್ಥಾನಕ್ಕೆ ಕುಸಿದಿದೆ. ಪ್ರಜಾಪ್ರಭುತ್ವದ ಶ್ರೇಣಿಯಲ್ಲೂ ಭಾರತವು ತುಂಬ ಕುಸಿದಿದೆ ಎಂದೇ ಅಂಕಿ ಅಂಶಗಳು ಹೇಳುತ್ತಿವೆ. ಕೋಮುದ್ವೇಷ ಹಾಗೂ ಆ ಕಾರಣದಿಂದ ಸಂಭವಿಸುತ್ತಿರುವ ನರಹತ್ಯೆ ಹೆಚ್ಚಾಗುತ್ತಿವೆ. ಜಗತ್ತಿನ ನರಮೇಧಗಳ ಬಗೆಗೆ ವಿಶೇಷವಾಗಿ ಅಧ್ಯಯನ ಮಾಡಿರುವ ಗ್ರಿಗೊರಿ ಸ್ಟ್ಯಾಂಟನ್ ಎಂಬವರು ನರಮೇಧದ ಸಂಭವನೀಯತೆಯ ದೇಶಗಳ ಪಟ್ಟಿಯಲ್ಲಿ 'ಜಿನೊಸೈಡ್ ವಾಚ್' ಎಂಬ ಮೂರನೆಯ ಹಂತದಲ್ಲಿ ಇರುವ ದೇಶಗಳಲ್ಲಿ ಭಾರತವನ್ನೂ ಸೇರಿಸಿದ್ದಾರೆ ಎಂಬುದು ವಿಷಾದದ ಸಂಗತಿ. ಹೀಗೆ ಹಲವಾರು ವಿಷಯಗಳಲ್ಲಿ ಭಾರತವು ಜಾಗತಿಕ ದೃಷ್ಟಿಯಲ್ಲಿ ತನ್ನ ಸ್ಥಾನವನ್ನು ಋಣಾತ್ಮಕವಾಗಿ ಗುರುತಿಸಿಕೊಳ್ಳುತ್ತಿರುವಾಗ ಇಡೀ ವಿಶ್ವ ನಮ್ಮತ್ತ ನೋಡುತ್ತಿದೆ ಎಂದರೆ ನಂಬುವುದಾದರೂ ಹೇಗೆ ?

ಕೊನೆಯದಾಗಿ ಮಾನ್ಯ ಸಚಿವರು, ಭಾರತದಲ್ಲಿ ದೇಶಪ್ರೇಮಕ್ಕೆ ಕೊರತೆಯಿಲ್ಲ ಎಂದದ್ದು ಕೂಡ ಅರ್ಧಸತ್ಯದ ಮಾತಾಗಿದೆ ಎಂಬುದಷ್ಟೆ ಅಲ್ಲ ಧರ್ಮಾಂಧತೆಗೆ, ಮತಾಂಧತೆಗೆ ಮತ್ತು ಜಾತ್ಯಂಧತೆಗೆ ಕೊರತೆಯಿಲ್ಲ ಎಂದು ಸ್ವಲ್ಪ ಬದಲಾಯಿಸಿ ಹೇಳಬಹುದೆನಿಸುತ್ತದೆ.
ಒಟ್ಟಿನಲ್ಲಿ ಭ್ರಮೆಗಳಲ್ಲಿ ಯಾವ ಒಂದು ದೇಶವಾಗಲಿ ಅಥವಾ ಯಾವ ಒಬ್ಬ ವ್ಯಕ್ತಿಯಾಗಲಿ ಬಹಳ ದಿನ ಬದುಕು ಕಟ್ಟಿಕೊಳ್ಳಲಾಗದು ಎಂಬುದನ್ನು ಇನ್ನಾದರೂ ನಾವೆಲ್ಲ ಅರಿಯಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)