varthabharthi


ವಿಶೇಷ-ವರದಿಗಳು

ಪಶ್ಚಿಮ ಘಟ್ಟಕ್ಕೆ ಹಾನಿಯಾದರೆ...

ವಾರ್ತಾ ಭಾರತಿ : 17 Aug, 2022
ಪ್ರೊ.ಶಿವರಾಮಯ್ಯ, ಬೆಂಗಳೂರು

ದಕ್ಷಿಣ ಭಾರತದ ಪಶ್ಚಿಮ ಕರಾವಳಿ ಸಮೀಪದಲ್ಲಿ ಉತ್ತರದ ತಪತಿ ನದಿಯ ಬಳಿ ಯಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಸು. 1,300 ಕಿ.ಮೀ. ಹಬ್ಬಿರುವ ಪರ್ವತಾರಣ್ಯ ಶ್ರೇಣಿಯನ್ನು ಪಶ್ಚಿಮ ಘಟ್ಟಗಳು ಎಂದು ಕರೆಯಲಾಗುತ್ತದೆ. ತೆರೆತೆರೆಯಾಗಿ ಹಬ್ಬಿರುವ ಈ ಬೆಟ್ಟಗಳು ಸುಮಾರು ಸರಾಸರಿ 1,500 ಮೀಟರ್ ಎತ್ತರದಿಂದ 2,500 ಮೀಟರ್ ಎತ್ತರವಾಗಿವೆ. ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಹಾಗೂ ಕೇರಳ ಭಾಗಗಳಲ್ಲಿ ಈ ಬೆಟ್ಟಸಾಲುಗಳು ದಟ್ಟ ಹಸುರಾಗಿ ಹಬ್ಬಿ ಹರಡಿವೆ. ಅರಬಿ ಸಮುದ್ರದತ್ತಣಿಂದ ಬೀಸಿ ಬರುವ ಮುಂಗಾರು ಮಾರುತಗಳನ್ನು ಗೋಡೆಯಂತಿರುವ ಈ ಬೆಟ್ಟಸಾಲುಗಳು ತಡೆಯುವ ಕಾರಣ ಈ ಪ್ರದೇಶದಲ್ಲಿ ಮಳೆ ಅಧಿಕವಾಗಿ ಸುರಿಯುತ್ತದೆ. ಹೀಗೆ ಬಿದ್ದ ಮಳೆನೀರನ್ನು ಶೋಲಾಕಾಡುಗಳು ಹಾಗೂ ಶೋಲಾ ಹುಲ್ಲು ಗುಡ್ಡಗಳು ಹೀರಿ ಅಲ್ಲಿ ಹುಟ್ಟುವ ನದಿಗಳು ಸದಾ ಜೀವಂತ ಹರಿಯುವಂತಾಗಿದೆ.

ಪಶ್ಚಿಮ ಘಟ್ಟದಲ್ಲಿ ಬಗೆಬಗೆಯ ಅದಿರು ನಿಕ್ಷೇಪಗಳಿವೆ. ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಬಗೆಬಗೆಯ ಸಸ್ಯ ಜಾತಿಗಳಿವೆ. ಎಲ್ಲಿ ಅರಣ್ಯವುಂಟೋ ಅಲ್ಲಿ ಜೀವರಾಶಿ. ಇಲ್ಲಿಯ ಸಸ್ಯ ಹಾಗೂ ಜೀವ ವೈವಿಧ್ಯದ ಕಾರಣದಿಂದ ಪಶ್ಚಿಮ ಘಟ್ಟವನ್ನು ವಿಶ್ವದ 18 ಸೂಕ್ಷ್ಮ ಪ್ರದೇಶಗಳಲ್ಲಿ ಒಂದೆಂದು ಗುರುತಿಸಲಾಗಿದೆ ಮತ್ತು ಈ ಪರಿಸರದ ಅವಿಭಾಜ್ಯ ಅಂಗವಾಗಿ ಆದಿಮ ಜನವಸತಿಗಳಲ್ಲಿ ಅನೇಕ ಬುಡಕಟ್ಟು ಜನರು ಬದುಕು ಕಟ್ಟಿಕೊಂಡಿದ್ದಾರೆ. ಯಾಕೆಂದರೆ ನಾಗರಿಕ ಜಗತ್ತು ಒಳನಾಡಿಗೆ ಸೇರಿದ್ದ ಇವರನ್ನು ದೂರವಿಟ್ಟು ಕಾಡಂಚಿಗೆ ತಳ್ಳಿದ್ದು, ಈ ದೇಶದ ಸಾಮಾಜಿಕ ಬದುಕಿನ ಸಂಕೀರ್ಣ ಸಮಸ್ಯೆ. ಇದು ವಿವೇಕವುಳ್ಳವರಿಗೆಲ್ಲಾ ಗೊತ್ತು. ಸದ್ಯ ಆ ವಿಚಾರ ಇರಲಿ.

ಹೀಗಿರುತ್ತ, ಬ್ರಿಟಿಷರ ಆಗಮನದ ನಂತರ ಅವರು ಸಾಗರದ ಬಂದರುಗಳಿಗೆ ಇಲ್ಲಿಂದ ಸರಕು ಸಾಗಣೆಗಾಗಿ ರೈಲ್ವೆ ಹಳಿಗಳನ್ನು ಹಾಕುವಾಗ ಸ್ಲೀಪರ್‌ಗಳಿಗೆ ಕಬ್ಬಿಣದಂತಹ ಬಲಿಗೆ ಮರಗಳನ್ನು ಕಡಿದರು. ಇದು ಆ ದುರ್ಗಮಾರಣ್ಯಕ್ಕೆ ಮಾಡಿದ ಪ್ರಥಮ ಹಾನಿ. ಆದರೂ ಬ್ರಿಟಿಷರು ಉಳಿದಂತೆ ಪಶ್ಚಿಮ ಘಟ್ಟದ ಕಾಡನ್ನು ಜತನದಿಂದಲೇ ಕಾಪಾಡಿದ್ದರು ಎಂಬುದು ಸುಳ್ಳಲ್ಲ. ಆದರೆ ಸ್ವಾತಂತ್ರ್ಯಾನಂತರ ನಾವು ಮಾಡಿದ ಪ್ರಥಮ ಅಪರಾಧ ಎಂದರೆ ಕಾಡಿಗೆ ಕೊಡಲಿ ಬೀಸಿದ್ದು. ಅಭಿವೃದ್ಧಿಗಾಗಿ ಸಂಪನ್ಮೂಲಗಳ ಬಳಕೆ ಎಂಬ ಘೋಷಣೆಯೊಂದಿಗೆ ನಮ್ಮ ನೆಲ ಜಲ ಕಾಡಿನ ಬಳಕೆ ಮಿತಿ ಮೀರಿತು. ಇದರಲ್ಲಿ ಕೇರಳ, ತಮಿಳುನಾಡು, ಕರ್ನಾಟಕ, ಗೋವಾ, ಮಹಾರಾಷ್ಟ್ರ ಯಾವ ರಾಜ್ಯವೂ ಹಿಂದೆಬಿದ್ದಿಲ್ಲ. ಇದಕ್ಕೆ ಆ ಪಕ್ಷ ಈ ಪಕ್ಷ ಎಂಬಂತಿಲ್ಲ. ಎಲ್ಲ ರಾಜಕಾರಣಿಗಳೂ ಜಿಗಣೆಗಳೇ ಅರಣ್ಯ ನಾಶಕ್ಕೆ. ಸದರಿ ಪಂಚರಾಜ್ಯಗಳ ಯಾವ ಶಾಸಕನಾಗಲೀ, ಯಾವ ಸಂಸದನಾಗಲೀ ಕಳೆದ 70 ವರ್ಷಗಳಲ್ಲಿ ಪಶ್ಚಿಮ ಘಟ್ಟದ ಅಳಿವಿನ ದಾರುಣ ಸಮಸ್ಯೆಯ ಬಗ್ಗೆ ಚಕಾರ ಎತ್ತಿದ್ದನ್ನು ನಾವು ಕಂಡಿಲ್ಲ; ಸಲಹೆ, ಸೂಚನೆ ಕೊಟ್ಟವರಿಲ್ಲ. ‘‘ನನಗಾಗಿ ಅತ್ತವರಾರನೂ ನಾಕಾಣೆ’’ ಎಂಬಂತಿದೆ ಇವರ ವರ್ತನೆ. ಘಟ್ಟದ ಹಾನಿಯ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಗಾಡ್ಗೀಲ್ ವರದಿಯಾಗಲಿ, ಕಸ್ತೂರಿ ರಂಗನ್ ವರದಿಯಾಗಲಿ ಏನೆಂಬುದನ್ನು ಓದಿ ತಿಳಿದಿಲ್ಲ. ಮುಂದಿನ ಚುನಾವಣೆಯ ಲೆಕ್ಕಾಚಾರದಲ್ಲೇ ದಿನ ನೂಕುವ ಈ ಮಂದಿಗೆ ಭವಿಷ್ಯದಲ್ಲಿ ಸಂಭವಿಸಬಹುದಾದ ಹಾನಿಯ ಪ್ರಮಾಣವೇನೆಂಬುದಾದರೂ ಕಲ್ಪನೆಯಿದೆಯೇ? ತಿಳಿಯದು.

ಆದರೆ ಅತಿವೃಷ್ಟಿಯಿಂದ ಗುಡ್ಡಗಳು ಕುಸಿದು ರಸ್ತೆಗಿಳಿದಾಗ, ಜನ ಜಾನುವಾರುಗಳು ಸತ್ತಾಗ ಸೇಫರ್ ರೆನ್‌ನಲ್ಲಿ ವಾಸಿಸುವ ಇವರು ಬಂದು ಮೊಸಳೆ ಕಣ್ಣೀರು ಸುರಿಸಿದರೆ ಮುಗಿಯಿತು. ‘‘ಒಡವ್ಯಲ್ಲೊ ಮಗನೆ ಉಸಿರಿದ್ದೊಡಲಂತಾ’’ ಎಂದು ಪಶ್ಚಿಮಘಟ್ಟಾರಣ್ಯದ ನಿಸರ್ಗದೇವತೆ ಕಣ್ಣೀರಿಟ್ಟರೂ ಕೇಳಿಸಿಕೊಳ್ಳುವ ವ್ಯವಧಾನ ಇವರಿಗಿಲ್ಲ. ಪರಿಸರವಾದಿಗಳಿಗೆ ವನ್ಯಪ್ರಾಣಿಗಳ ಮೇಲಿರುವ ಕಾಳಜಿಯಲ್ಲಿ ಕಿಂಚಿತ್ತಾದರೂ ಅಲ್ಲಿ ವಾಸಿಸುವ ಬುಡಕಟ್ಟು ಜನರ ಮೇಲಿಲ್ಲ. ಘಟ್ಟಪ್ರದೇಶದಿಂದ ಆಯ್ಕೆಗೊಂಡ ರಾಜಕಾರಣಿಗಳು ಇನ್ನಾದರೂ ತಂತಮ್ಮ ಪಕ್ಷಭೇದ ತೊರೆದು ಶಾಸನಸಭೆಗಳಲ್ಲಿ ಸಂಸತ್ತಿನಲ್ಲಿ ಪಶ್ಚಿಮಘಟ್ಟದ ಉಳಿವಿನ ಪ್ರಶ್ನೆ ಕೈಗೆತ್ತಿಕೊಂಡು ಒಟ್ಟಾಗಿ ಹೋರಾಡಬೇಕು. ಇಲ್ಲವಾದರೆ ಇನ್ನು ಕೆಲವೇ ವರ್ಷಗಳಲ್ಲಿ ಅದು ಸಂಪೂರ್ಣ ಹಾನಿಗೊಳಗಾಗುವುದು. ಘಟ್ಟಕ್ಕೆ ಹಾನಿಯೆಂದರೆ ಕ್ರಮೇಣ ದಖ್ಖನ್ ಪ್ರಸ್ಥಭೂಮಿ ಮರಳುಗಾಡಾಗುವುದು ಗ್ಯಾರಂಟಿ. ಇದು ನಿಸರ್ಗ ನಿಯಮ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)