varthabharthi


ರಾಷ್ಟ್ರೀಯ

Thewire.in ವರದಿ

ಆಕ್ಷೇಪಾರ್ಹ ಫೇಸ್‌ಬುಕ್‌ ಪೋಸ್ಟ್‌ ಆರೋಪ: ಬಂಧಿತ ವ್ಯಕ್ತಿಯ ಕುಟುಂಬಸ್ಥರ ಮನೆಯನ್ನು ಲೂಟಿಗೈದ ಹಿಂದುತ್ವವಾದಿಗಳು

ವಾರ್ತಾ ಭಾರತಿ : 17 Aug, 2022

ಭೋಫಾಲ್:‌ ಹಿಂದೂ ದೇವತೆಯ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಆಪಾದನೆ ಹೊತ್ತಿರುವ ವ್ಯಕ್ತಿಯ ಸಂಬಂಧಿಕರ ಮೂರು ಮನೆಗಳ ಮೇಲೆ ಹಿಂದುತ್ವ ಗುಂಪಿನಲ್ಲಿ ಗುರುತಿಸಿಕೊಂಡಿರುವ ಸುಮಾರು ನೂರು ಮಂದಿ ದಾಳಿ ಮಾಡಿ ಲೂಟಿ ಮಾಡಿರುವ ಘಟನೆ ಮಧ್ಯಪ್ರದೇಶದ ಶಹದೋಲ್‌ ಜಿಲ್ಲೆಯ ಧನಪುರಿ ಪಟ್ಟಣದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಅದೇ ದಿನವೇ, ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಹಾಕಿದ್ದಾನೆ ಎನ್ನಲಾದ ಬೈದುಲ್ ಖಾದಿರ್‌  ಎಂಬಾತನ್ನು ಬಂಧಿಸಲಾಗಿದೆ. ಈ ಘಟನೆಯು ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಿಸಿದೆ ಎಂದು thewire ವರದಿ ಮಾಡಿದೆ.

ಖಾದಿರ್‌  ಬಂಧನದ ನಂತರ ಆತನ ಮನೆಯನ್ನು ಕೆಡವಲು ಜಿಲ್ಲಾಡಳಿತ ನಿರಾಕರಿಸಿದ ನಂತರ ಹಿಂದುತ್ವ ಗುಂಪು ಮೂರು ಮನೆಗಳ ಮೇಲೆ ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ಖಾದಿರ್‌  ಅವರ ಮನೆಯನ್ನು ಧ್ವಂಸಗೊಳಿಸುವಂತೆ ಒತ್ತಾಯಿಸಿ ಪಟ್ಟಣದ ಪ್ರಮುಖ ಚೌಕಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು.

ಧನಪುರಿಯ ಪುರಾಣಿ ಬಸ್ತಿ ನಿವಾಸಿ ಬೈದುಲ್ ಖಾದಿರ್‌  ಮಂಗಳವಾರ ಬೆಳಗ್ಗೆ ಹಿಂದೂ ದೇವತೆಯ ವಿರುದ್ಧ ಫೇಸ್‌ಬುಕ್‌ನಲ್ಲಿ 'ಆಕ್ಷೇಪಾರ್ಹ ಪೋಸ್ಟ್' ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಹಿಂದುತ್ವ ಸಂಘಟನೆಗಳ ಸದಸ್ಯರು ಧನ್‌ಪುರಿ ಪೊಲೀಸ್ ಠಾಣೆಯಲ್ಲಿ ಜಮಾಯಿಸಿ, ಲಿಖಿತ ದೂರನ್ನು ಸಲ್ಲಿಸಿದ್ದು, 'ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ' ಖಾದಿರ್‌  ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದದರು.

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದ ಅನಿಲ್ ಸಿಂಗ್ ಸೆಂಗಾರ್ (38) ಎಂಬಾತನ ದೂರಿನ ಮೇರೆಗೆ ಪೊಲೀಸರು ಖಾದಿರ್‌  ವಿರುದ್ಧ ಸೆಕ್ಷನ್ 153-ಎ (ಧರ್ಮ, ಜನಾಂಗ, ಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.   295-ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66-ಎ ಅನ್ನು ಸಹ ಎಫ್‌ಐಆರ್‌ ಅಲ್ಲಿ ಸೇರಿಸಲಾಗಿದೆ.  

"ಇದು ಆಕ್ಷೇಪಾರ್ಹ ಪೋಸ್ಟ್ ಆಗಿರುವುದರಿಂದ, ಪೊಲೀಸರು ತಕ್ಷಣವೇ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಆರೋಪಿಯನ್ನು ಬಂಧಿಸಿದ್ದಾರೆ" ಎಂದು ಶಾಹದೋಲ್‌ನ ಸಹಾಯಕ ಪೊಲೀಸ್ ಅಧೀಕ್ಷಕ ಮುಖೇಶ್ ವೈಶ್ಯ ದೂರವಾಣಿ ಮೂಲಕ ದಿ ವೈರ್‌ಗೆ ತಿಳಿಸಿದ್ದಾರೆ.

ಶಹದೋಲ್‌ನ ವಿವಿಧ ಪೊಲೀಸ್ ಠಾಣೆಗಳಲ್ಲಿ ಖಾದಿರ್‌  ವಿರುದ್ಧ ಅರ್ಧ ಡಜನ್‌ಗಿಂತಲೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದರಿಂದ ಕಟ್ಟುನಿಟ್ಟಾದ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅನ್ನು ಅನ್ವಯಿಸುವಂತೆ ಪೊಲೀಸರು ಶಿಫಾರಸು ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹಿಂದೂ ದೇವತೆಯ ವಿರುದ್ಧ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡಿದ ಫೇಸ್‌ಬುಕ್ ಪ್ರೊಫೈಲ್ 2020 ರಿಂದ ನಿಷ್ಕ್ರಿಯವಾಗಿದೆ ಎಂದು ಕದಿರ್‌ ಅವರ ಸಂಬಂಧಿಯೊಬ್ಬರು ತಿಳಿಸಿರುವುದಾಗಿ ದಿ ವೈರ್‌ ವರದಿ ಹೇಳಿದೆ.

“ಆ ಪ್ರೊಫೈಲ್‌ನಿಂದ ಅವರು (ಖಾದಿರ್‌ ) ಮಾಡಿದ ಕೊನೆಯ ಪೋಸ್ಟ್ 2020 ರಲ್ಲಿ. ಪೊಲೀಸರು ಅದನ್ನು ಪೋಸ್ಟ್ ಮಾಡಿದ ಐಪಿ ವಿಳಾಸವನ್ನು ಖಾದಿರ್‌  ಅವರ ಕುಟುಂಬಕ್ಕೆ ತಿಳಿಸಿದರು. ಇದು ಅವರ ಮೊಬೈಲ್ ಫೋನ್‌ನ IP ವಿಳಾಸದೊಂದಿಗೆ ಹೊಂದಿಕೆಯಾಗುತ್ತಿಲ್ಲ. ಇದು ಪಿತೂರಿಯಂತೆ ಕಾಣುತ್ತದೆ. ಪೊಲೀಸ್ ತನಿಖೆಯಲ್ಲಿ ನಮಗೆ ನಂಬಿಕೆಯಿದೆ ಮತ್ತು ಶೀಘ್ರದಲ್ಲೇ ಸತ್ಯವು ಮೇಲುಗೈ ಸಾಧಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಕೆಲವೇ ಗಂಟೆಗಳಲ್ಲಿ 100 ಕ್ಕೂ ಹೆಚ್ಚು ಜನರ ಗುಂಪೊಂದು ಪಟ್ಟಣದ ಪ್ರಮುಖ ಚೌಕಿನಲ್ಲಿ ಸೇರಿ ಖಾದಿರ್‌  ಮನೆಯನ್ನು ಕೆಡವಲು ಒತ್ತಾಯಿಸಿದೆ. ಅಧಿಕಾರಿಗಳು ಜನಸಮೂಹವನ್ನು ಮನವೊಲಿಸಲು ಪ್ರಯತ್ನಿಸುತ್ತಿದ್ದಂತೆ, ದೊಣ್ಣೆ ಮತ್ತು ರಾಡ್‌ಗಳಿಂದ ಶಸ್ತ್ರಸಜ್ಜಿತವಾದ ಗುಂಪು ಖಾದಿರ್‌  ಅವರ ಮನೆಯ ಮೇಲೆ ದಾಳಿ ಮಾಡಿದ್ದು ಮಾತ್ರವಲ್ಲದೆ ಅವನ ಪಕ್ಕದಲ್ಲಿ ವಾಸಿಸುವ ಅವರ ಸಂಬಂಧಿಕರ ಎರಡು ಮನೆಗಳನ್ನು ಧ್ವಂಸ ಮಾಡಿದೆ.

ದಾಳಿಗೊಳಗಾದ ಮನೆಗಳಲ್ಲಿ ಒಂದನ್ನು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ದಾಳಿಕೋರರು ಮನೆಯನ್ನು ಧ್ವಂಸಗೊಳಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ದಾಳಿಯ ಪ್ರತ್ಯಕ್ಷದರ್ಶಿಯೊಬ್ಬರು ಹೇಳುವಂತೆ, ಗುಂಪು ಕದೀರನ ಮನೆಯತ್ತ ಸಾಗುತ್ತಿದ್ದಾಗ, ದಾಳಿಯನ್ನು ಗ್ರಹಿಸಿದ ಅವನ ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು ತಮ್ಮ ಮನೆಗಳಿಂದ ಓಡಿಹೋಗಿದ್ದಾರೆ. ಬಳಿಕ, ಹಿಂದುತ್ವವಾದಿಗಳ ಗುಂಪು ಅವರ ಮನೆಗಳಿಂದ ಆಭರಣ ಮತ್ತು ಹಣವನ್ನು ಕದಿಯಲು ಪ್ರಾರಂಭಿಸಿದ್ದಾರೆ. ಮನೆಯ ಸಾಮಾಗ್ರಿಗಳನ್ನೂ ಸಮೀಪದ ಬಾವಿಗೆ ಎಸೆದಿದ್ದಾರೆ. ಇದು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

ದಿ ವೈರ್‌ನೊಂದಿಗೆ ಮಾತನಾಡಿದ ಶಹದೋಲ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಿಸಿ ಸಾಗರ್, “ಪ್ರತಿಭಟನೆ ಮಾಡುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ ಆದರೆ ಯಾರೊಬ್ಬರ ಮನೆಯ ಮೇಲೆ ದಾಳಿ ಮಾಡುವುದು ಮತ್ತು ದರೋಡೆ ಮಾಡುವುದನ್ನು ಅನುಮತಿಸಲಾಗುವುದಿಲ್ಲ. ಕಾನೂನು ಮೇಲುಗೈ ಸಾಧಿಸುತ್ತದೆ. ಆದ್ದರಿಂದ, ಧನಪುರಿ ಪೊಲೀಸ್ ಠಾಣೆಯ ಟೌನ್ ಇನ್ಸ್‌ಪೆಕ್ಟರ್ ನರ್ಬತ್ ಸಿಂಗ್ ಧುರ್ವೆ ಅವರನ್ನು ವರ್ಗಾವಣೆ ಮಾಡಲಾಗಿದೆ ಮತ್ತು ದಾಳಿಕೋರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.” ಎಂದು ತಿಳಿಸಿದ್ದಾರೆ.

''ಕಾನೂನು ಮತ್ತು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಧ್ವಜ ಮೆರವಣಿಗೆ ನಡೆಸಲಾಗಿದೆ. ಅದಲ್ಲದೆ, ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ಜಿಲ್ಲಾಡಳಿತವು ಎರಡೂ ಸಮುದಾಯಗಳ ಸದಸ್ಯರೊಂದಿಗೆ ಸಂಪರ್ಕದಲ್ಲಿದೆ ಮತ್ತು ಭದ್ರತೆಯನ್ನು ಹೆಚ್ಚಿಸಲಾಗಿದೆ” ಎಂದು ಸಾಗರ್ ಹೇಳಿದರು.

ಮುಮ್ತಾಜ್ ಬೇಗಂ ಎಂಬುವವರ ದೂರಿನ ಮೇರೆಗೆ, ಪೊಲೀಸರು 147, 148, 427, 452 ಮತ್ತು ಐಪಿಸಿಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ಹಿಂದುತ್ವ ಗುಂಪುಗಳ 12 ಹೆಸರಿಸಲಾದ ಮತ್ತು 50 ಅಪರಿಚಿತ ಪುರುಷರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ, ಆದರೆ ಇದುವರೆಗೂ ಯಾವುದೇ ಬಂಧನವಾಗಿಲ್ಲ ಎಂದು ದಿ ವೈರ್‌ ವರದಿ ಹೇಳಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)