varthabharthi


ಕರ್ನಾಟಕ

ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ 142 ಕೋಟಿ ರೂ.ವಿಶೇಷ ಅನುದಾನ: ಸಚಿವೆ ಶಶಿಕಲಾ ಜೊಲ್ಲೆ

ವಾರ್ತಾ ಭಾರತಿ : 17 Aug, 2022

ಬೆಂಗಳೂರು, ಆ.17: ರಾಜ್ಯದ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಬಿಜೆಪಿ ಸರಕಾರ ಪಣ ತೊಟ್ಟಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಹೆಚ್ಚುವರಿಯಾಗಿ 142.59 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಿ ಆದೇಶ ಹೊರಡಿಸಲಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. 

ಈ ಬಗ್ಗೆ ಮಾಧ್ಯಮ ಪ್ರಕಟನೆಯನ್ನು ನೀಡಿರುವ ಅವರು, ಈ ಬಗ್ಗೆ ಅಧಿಕೃತ ಆದೇಶವನ್ನು ಹೊರಡಿಸಲಾಗಿದ್ದು, ರಾಜ್ಯದಲ್ಲಿರುವ ವಿವಿಧ ಸಮುದಾಯಗಳ 178 ಮಠಗಳಿಗೆ 108.24 ಕೋಟಿ ರೂಪಾಯಿಗಳು, 59 ದೇವಸ್ಥಾನಗಳಿಗೆ 21.35 ಕೋಟಿ ರೂಪಾಯಿಗಳು ಮತ್ತು 26 ವಿವಿಧ ಸಂಘ-ಸಂಸ್ಥೆಗಳು ಹಾಗೂ ಟ್ರಸ್ಟ್ ಗಳಿಗೆ 13 ಕೋಟಿ ಒಟ್ಟು 142.59 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ ಎಂದಿದ್ದಾರೆ.

ನಮ್ಮ ಸರಕಾರ ರಾಜ್ಯದಲ್ಲಿನ ವಿವಿಧ ದೇವಸ್ಥಾನಗಳು, ಮಠಗಳು ಹಾಗೂ ಹೊರ ರಾಜ್ಯಗಳಲ್ಲಿರುವ ಕರ್ನಾಟಕ ಛತ್ರಗಳ ಅಭಿವೃದ್ದಿಗಾಗಿ ಕಳೆದ 10 ವರ್ಷಗಳಲ್ಲೇ ಅತಿ ಹೆಚ್ಚು ಅನುದಾನವನ್ನು ನೀಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಹೊರ ರಾಜ್ಯದ ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳಗಳಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕರ್ನಾಟಕ ಛತ್ರಗಳ ನಿರ್ಮಾಣ ಹಾಗೂ ಅಭಿವೃದ್ದಿಗೂ ವಿಶೇಷ ಆದ್ಯತೆಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಒಂದು ವರ್ಷದ ಅವಧಿಯಲ್ಲಿ ರಾಜ್ಯವನ್ನು ದೇಶದಲ್ಲೇ ಪ್ರಮುಖ ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿಸುವತ್ತ ಸ್ಪಷ್ಟವಾದ ಹೆಜ್ಜೆಯನ್ನು ಇಡಲಾಗಿದೆ. ರಾಜ್ಯದ ಮುಜರಾಯಿ ಇಲಾಖೆಯ ಇತಿಹಾಸದಲ್ಲೇ ಬೃಹತ್ ಅಭಿವೃದ್ಧಿ ಪರ್ವದ ಮೈಲಿಗಲ್ಲನ್ನು ನೆಡಲಾಗಿದೆ. ಕಾಶಿಯಾತ್ರೆ, ತಸ್ತೀಕ್ ಹಣ ಹೆಚ್ಚಳ ಸೇರಿದಂತೆ ಎಲ್ಲ ರೀತಿಯ ನೂತನ ಯೋಜನೆಗಳಿಗೂ ಮುಖ್ಯಮಂತ್ರಿ ಉತ್ತಮ ಸಹಕಾರ ನೀಡಿದ್ದಾರೆ ಎಂದು ಶಶಿಕಲಾ ಜೊಲ್ಲೆ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)