varthabharthi


ಅಂತಾರಾಷ್ಟ್ರೀಯ

ಕೆನಡಾ: ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ವ್ಯಾಟಿಕನ್ ನ ಕಾರ್ಡಿನಲ್ ವಿರುದ್ಧ ದಾವೆ

ವಾರ್ತಾ ಭಾರತಿ : 17 Aug, 2022

ಒಟ್ಟಾವ, ಆ.17: ಕೆನಡಾದ ವಸತಿ ಶಾಲೆಗಳಲ್ಲಿ 1940ರಲ್ಲಿ ನಡೆದಿದ್ದ ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಮೊಕದ್ದಮೆಯಲ್ಲಿ ವ್ಯಾಟಿಕನ್ನ ಕಾರ್ಡಿನಲ್(ಪ್ರಮುಖ ಕ್ರೈಸ್ತ ಧರ್ಮಗುರು) ಹೆಸರನ್ನೂ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಮೊಕದ್ದಮೆಯ ದಾಖಲೆಯನ್ನು ಮಂಗಳವಾರ ಬಹಿರಂಗಪಡಿಸಲಾಗಿದೆ ಎಂದು ದೂರುದಾರರ ಪರ ವಕೀಲರು ಹೇಳಿದ್ದಾರೆ.

 ಮೊಕದ್ದಮೆಯನ್ನು ದಾಖಲಿಸಿದವರಲ್ಲಿ ಅಪ್ರಾಪ್ತ ವಯಸ್ಕರ ಸಹಿತ 100ಕ್ಕೂ ಅಧಿಕ ಜನರಿದ್ದಾರೆ. ಇವರು 1940ರಿಂದ ಕ್ವಿಬೆಕ್ ಕ್ರೈಸ್ತ ಧರ್ಮಪ್ರಾಂತ್ಯದ ಅಧೀನದ ವಸತಿ ಶಾಲೆಗಳಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯದ ಸಂತ್ರಸ್ತರಾಗಿದ್ದಾರೆ ಎಂದು ವಕೀಲರು ಹೇಳಿದ್ದಾರೆ. ಕ್ವಿಬೆಕ್ ಸುಪೀರಿಯರ್ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಮೊಕದ್ದಮೆಯಲ್ಲಿ ತಮ್ಮ ವಿರುದ್ಧ ನಡೆದಿರುವ ದೌರ್ಜನ್ಯದ ವಿವರವನ್ನು ಸಂತ್ರಸ್ತರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

 2008ರಿಂದ 2010ರ ಅವಧಿಯಲ್ಲಿ ಕ್ವಿಲೆಟ್ ಅವರು ಕ್ವಿಬೆಕ್ ಧರ್ಮಪ್ರಾಂತದ ಆರ್ಚ್ಬಿಷಪ್ ಆಗಿದ್ದ ಸಂದರ್ಭ ಆಕೆ ತನ್ನನ್ನು ಅನುಚಿತವಾಗಿ ಸ್ಪರ್ಷಿಸಿದ್ದರು ಎಂದು ಓರ್ವ ಸಂತ್ರಸ್ತೆ ಉಲ್ಲೇಖಿಸಿದ್ದಾರೆ. ಕ್ವಿಲೆಟ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ. ಕ್ವಿಲೆಟ್ ಈಗ ಪೋಪ್ ಅವರಿಗೆ ಬಿಷಪರ ನೇಮಕಾತಿ ವಿಷಯದಲ್ಲಿ ಸಲಹೆ ನೀಡುವ ಪ್ರಭಾವೀ ಸಮಿತಿಯೊಂದರ ಮುಖ್ಯಸ್ಥೆಯಾಗಿದ್ದಾರೆ.

2021ರಲ್ಲಿ ಕ್ವಿಲೆಟ್ ವಿರುದ್ಧದ ದೂರನ್ನು ನೇರವಾಗಿ ವ್ಯಾಟಿಕನ್ಗೆ ದಾಖಲಿಸಲಾಗಿತ್ತು ಮತ್ತು ಈ ವಿಷಯದ ಬಗ್ಗೆ ವಿಚಾರಣೆ ನಡೆಸಲು ಧರ್ಮಗುರು ಜಾಕ್ವೆಸ್ ಸೆರ್ವಾಯಸ್ರನ್ನು ಪೋಪ್ ನೇಮಿಸಿದ್ದರು. ಆದರೆ ಇದುವರೆಗೆ ಅವರಿಂದ ಯಾವುದೇ ಮಾಹಿತಿಯಿಲ್ಲ ಎಂದು ದೂರುದಾರರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)