varthabharthi


ಅಂತಾರಾಷ್ಟ್ರೀಯ

ಪಾಕಿಸ್ತಾನದಲ್ಲಿ ಸೇನಾ ನೆಲೆ ಸ್ಥಾಪಿಸಲು ಚೀನಾ ಪ್ರಯತ್ನ: ವರದಿ‌

ವಾರ್ತಾ ಭಾರತಿ : 17 Aug, 2022

ಇಸ್ಲಮಾಬಾದ್, ಆ.17: ಮಹಾತ್ವಾಕಾಂಕ್ಷೆಯ ಬೆಲ್ಟ್ ಆ್ಯಂಡ್ ರೋಡ್ ಉಪಕ್ರಮದ ಮೂಲಕ ಸಂಷರ್ಘ ಪೀಡಿತ ಪಾಕಿಸ್ತಾನ-ಅಫ್ಘಾನಿಸ್ತಾ ವಲಯದಲ್ಲಿ ವ್ಯಾಪಕ ಹೂಡಿಕೆ ಮಾಡಿರುವ ಚೀನಾ, ಈಗ ವಿಶೇಷವಾಗಿ ಸ್ಥಾಪಿಸುವ ಸೇನಾನೆಲೆಯ ಮೂಲಕ ಎರಡೂ ದೇಶದಲ್ಲಿನ ತನ್ನ ಹಿತಾಸಕ್ತಿಯ ರಕ್ಷಣೆಗೆ ಯೋಜನೆ ರೂಪಿಸಿದೆ ಎಂದು ಉನ್ನತ ರಾಜತಾಂತ್ರಿಕ ಮೂಲಗಳು ವರದಿ ಮಾಡಿವೆ.

ಪಾಕಿಸ್ತಾನ-ಅಫ್ಗಾನಿಸ್ತಾನ ರಸ್ತೆ ಮಾರ್ಗದ ಮೂಲಕ ಮಧ್ಯ ಏಶ್ಯಾದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸುವ ಉದ್ದೇಶದಿಂದ ಚೀನಾ ಎರಡೂ ದೇಶಗಳಲ್ಲಿ ವ್ಯಾಪಕ ಹೂಡಿಕೆ ಮಾಡುತ್ತಿದೆ. ಜತೆಗೆ ಉಪಗ್ರಹ ಹಾಗೂ ಖಂಡಾಂತರ ಕ್ಷಿಪಣಿಗಳನ್ನು ಪತ್ತೆಹಚ್ಚುವ ಸಾಮರ್ಥ್ಯದ ನೌಕೆಯನ್ನು ಶ್ರೀಲಂಕಾದ ಹಂಬಂತೋಟ ಬಂದರಿನಲ್ಲಿ ನೆಲೆಗೊಳಿಸಿದೆ. ಇದು ಭಾರತದ ಆತಂಕವನ್ನು ಹೆಚ್ಚಿಸಿದೆ. ಪಾಕಿಸ್ತಾನದಲ್ಲಿ ಸುಮಾರು 60 ಶತಕೋಟಿ ಡಾಲರ್ಗೂ ಅಧಿಕ ಹಣವನ್ನು ಚೀನಾ ಹೂಡಿಕೆ ಮಾಡಿದ್ದು , ಪಾಕಿಸ್ತಾನ ಈಗ ಆರ್ಥಿಕವಾಗಿ ಮಾತ್ರವಲ್ಲ, ಸೇನೆ ಮತ್ತು ರಾಜತಾಂತ್ರಿಕ ಕ್ಷೇತ್ರದಲ್ಲೂ ಚೀನಾದ ನೆರವನ್ನು ಅವಲಂಬಿಸಿದೆ.

ಈ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವ ಚೀನಾ, ಪಾಕಿಸ್ತಾನದಲ್ಲಿ ತನ್ನ ಸೇನಾ ನೆಲೆ ಸ್ಥಾಪನೆಗೆ ಅವಕಾಶ ನೀಡುವಂತೆ ಒತ್ತಡ ಹೇರುತ್ತಿದೆ. ಬೆಲ್ಟ್ ಆಂಡ್ ರೋಡ್ ಉಪಕ್ರಮಕ್ಕೆ ನೆರವಾಗಲಿದೆ ಎಂಬ ನೆಪ ಹೇಳಿ ಪಾಕಿಸ್ತಾನ ಮತ್ತು ಅಫ್ಘಾನ್ನಲ್ಲಿ ತನ್ನ ಸೇನಾ ಉಪಸ್ಥಿತಿ ಹೆಚ್ಚಿಸುವುದು ಚೀನಾದ ಉದ್ದೇಶವಾಗಿದೆ ಎಂದು ಉನ್ನತ ರಾಜತಾಂತ್ರಿಕ ಮೂಲಗಳು ವರದಿ ಮಾಡಿವೆ. ಚೀನಾದ ರಾಯಭಾರಿ ನಾಂಗ್ ರಾಂಗ್ ಈಗಾಗಲೇ ಪಾಕ್ ಪ್ರಧಾನಿ ಶಹಬಾಝ್ ಶರೀಫ್, ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ, ಸೇನಾಪಡೆಯ ಮುಖ್ಯಸ್ಥ ಜನರಲ್ ಜಾವೇದ್ ಬಾಜ್ವಾರನ್ನು ಭೇಟಿಯಾಗಿ ಈ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)