varthabharthi


ದಕ್ಷಿಣ ಕನ್ನಡ

ಹರೇಕಳ: ಸ್ವಾತಂತ್ರ್ಯ ಸಾಕ್ಷಚಿತ್ರಗಳ ಪ್ರದರ್ಶ‌ನ

ವಾರ್ತಾ ಭಾರತಿ : 17 Aug, 2022

ಕೊಣಾಜೆ: ಹರೇಕಳ ನ್ಯೂಪಡ್ಪುವಿನ  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ  ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ - ಕರ್ನಾಟಕ ಸರ್ಕಾರದ ಶಿಕ್ಷಣ ಸುಧಾರಣೆಗಳ ಕಾರ್ಯಕ್ರಮದ  ಅಡಿಯಲ್ಲಿ ಭಾರತ ಸ್ವತಂತ್ರ್ಯ ಸುವರ್ಣ ಮಹೋತ್ಸವದ ಅಂಗವಾಗಿ ಡಾ. ಪ್ರಶಾಂತ ನಾಯ್ಕ ಅವರ ಸಂಗ್ರಹದ  ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಘಟನೆಗಳ ಸಾಕ್ಷ್ಯಚಿತ್ರಗಳ  ಪ್ರದರ್ಶನವು ನಡೆಯಿತು.

13 ಏಪ್ರಿಲ್ 1919 ರ ಜಲಿಯನ್ ವಾಲಾ ಬಾಗ್  ಹತ್ಯಾಕಾಂಡ;  ಗೋಪಾಲಕೃಷ್ಣ ಗೋಖಲೆ ಅವರು ದಕ್ಷಿಣ ಆಫ್ರಿಕಾ, ಡರ್ಬನ್, 1912ರಭೇಟಿಯ ಸಮಯದಲ್ಲಿ ಗಾಂಧೀಜಿಯವರೊಂದಿಗಿನ ಸಂವಾದ;  1886 ರಲ್ಲಿ ಮೊದಲ ಭಾರತೀಯ ಕ್ರಿಕೆಟ್ ತಂಡದ ಪ್ರವಾಸ; 1893 ರಲ್ಲಿ ಚಿಕಾಗೋದಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದರ ಉಪನ್ಯಾಸ; 1913 ರಲ್ಲಿ ರವೀಂದ್ರನಾಥ ಠಾಗೋರ್ ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪಾರಿತೋಷಕ  ಪಡೆದ ಕ್ಷಣ; 1915-1916 ರ ಅವಧಿಯ ಅಖಿಲ ಭಾರತ ಹೋಮ್ ರೂಲ್ ಲೀಗ್ ಚಳುವಳಿ ದೃಶ್ಯ; ಮಹಾತ್ಮ ಗಾಂಧೀಜಿ ಅವರು 1920 ರ ಆಗಸ್ಟ್ 19 ರಂದು ಮೌಲಾನಾ ಶೌಕತ್ ಅಲಿ ಅವರೊಂದಿಗೆ ಮಂಗಳೂರಿಗೆ ಭೇಟಿ ನೀಡಿದ ಕ್ಷಣ ಮತ್ತು   ಕರ್ನಾಡ್ ಸದಾಶಿವರಾವ್   ಸಂವಾದ;  1930 ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ; 9 ಜನವರಿ 1931 ರಂದು ನಡೆದ  ದ್ವಿತೀಯ ದುಂಡು ಮೇಜಿನ ಸಮ್ಮೇಳನ;  1940 ರ ಸಂದರ್ಭದಲ್ಲಿ ನೇತಾಜಿ ಸುಭಾಸ್ ಚಂದ್ರ ಬೋಸ್ ಆಜಾದ್ ಹಿಂದ್ ಫೌಜ್ ಸೈನ್ಯವನ್ನು ಪರಿಶೀಲಿಸುತ್ತಿರುವುದು; 8 ಆಗಸ್ಟ್1942ರಲ್ಲಿ ನಡೆದ  ಕ್ವಿಟ್ ಇಂಡಿಯಾ ಚಳುವಳಿ;   9 ಡಿಸೆಂಬರ್ 1946: ಭಾರತದ ಸಂವಿಧಾನ ಸಭೆಯ ಮೊದಲ ಅಧಿವೇಶನ; ಆಗಸ್ಟ್ 15, 1947 ರಂದು ಮೊದಲ ಸ್ವಾತಂತ್ರ್ಯ ದಿನದಂದು ಜವಾಹರಲಾಲ್ ನೆಹರು ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಿರುವ ಕ್ಷಣ; ಫೆಬ್ರವರಿ 1, 1948: ಮಹಾತ್ಮ ಗಾಂಧಿ ಕೊನೆಯ ಪ್ರಯಾಣ; 17 ಡಿಸೆಂಬರ್ 1946 ರಂದು ಡಾ. ಬಿ. ಆರ್. ಅಂಬೇಡ್ಕರ್ ಅವರು   ಸಂವಿಧಾನ ಸಭೆಯಲ್ಲಿ ಮಂಡಿಸಿದ ಭಾಷಣ; ಜನವರಿ 26,1950 ರಂದು ನವದೆಹಲಿಯ ರಾಜ್‌ಪಾತ್‌ನಲ್ಲಿ ನಡೆದ ಮೊದಲ ಗಣರಾಜ್ಯೋತ್ಸವದ ಮೆರವಣಿಗೆ;  ಮಹಾತ್ಮ ಗಾಂಧಿಯವರ ಸಂದರ್ಶನ   ಇಂತಹ ಹಲವಾರು ಅವಿಸ್ಮರಣೀಯ ಘಟನೆಗಳ ಸುಮಾರು ನೂರು ಛಾಯಾಚಿತ್ರಗಳು, ಸ್ವಾತಂತ್ರ್ಯ ಹೋರಾಟಗಾರರ ಮತ್ತು ಭಾರತದ ಮಹಾನ್ ದಾರ್ಶನಿಕರ  ಸಹಿಗಳೊಂದಿಗೆ ಅವರ ನುಡಿಮುತ್ತುಗಳು ಮುಂತಾದ  ವಿಡಿಯೋ ದೃಶ್ಯಾವಳಿಗಳನ್ನು ಪ್ರಸ್ತುತಪಡಿಸಲಾಯಿತು.

ಶಾಲೆಯ ಮುಖ್ಯ ಶಿಕ್ಷಕ   ಲಕ್ಷ್ಮಣ ಕೆ. ವಿ.,  ಹರೇಕಳ ಗ್ರಾಮ ಪಂಚಾಯತಿ ಅಧ್ಯಕ್ಷ ಬದ್ರುದ್ದೀನ್, ದತ್ತು ಸ್ವೀಕರಿಸದ ಶಾಲೆಯ ನೋಡಲ್ ಅಧಿಕಾರಿ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ . ಗೋವಿಂದರಾಜು ಬಿ. ಎಂ., ಶಾಲೆಯ  ಎಸ್. ಡಿ. ಎಂ. ಸಿ. ಪದಾಧಿಕಾರಿಗಳು, ಸದಸ್ಯರು, ಹಾಗೂ ಗ್ರಾಮದ ಇತರ ನಾಗರೀಕರು,  ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)