ಗುಲಾಮಿ ಸಂಕೇತಗಳು ಅಳಿಯಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಅದು 2013, ಆಗಸ್ಟ್. ಬಿಹಾರದ ರೊಹ್ತಾಸ್ ಜಿಲ್ಲೆಯ ಬಡ್ತಿ ಗ್ರಾಮದಲ್ಲಿ 500ಕ್ಕೂ ಅಧಿಕ ಮೇಲ್ಜಾತಿಯ ಜನರ ಗುಂಪು ಸ್ಥಳೀಯ ದಲಿತರ ಮೇಲೆ ಬರ್ಬರ ದಾಳಿಯನ್ನು ನಡೆಸಿತು. ಈ ದಾಳಿಯಲ್ಲಿ ಓರ್ವ ಮೃತಪಟ್ಟು, ನಲ್ವತ್ತಕ್ಕೂ ಅಧಿಕ ಮಂದಿ ಗಾಯಗೊಂಡರು. ಈ ಭೀಕರ ದಾಳಿಗೆ ಕಾರಣವಿಷ್ಟೇ. ಸ್ಥಳೀಯ ದಲಿತರು ಒಂದಾಗಿ, ಇಲ್ಲಿನ ದೇವಸ್ಥಾನವೊಂದರ ಸಮೀಪ ರಾಷ್ಟ್ರಧ್ವಜವನ್ನು ಹಾರಿಸಿ ಸ್ವಾತಂತ್ರ್ಯ ದಿನವನ್ನು ಆಚರಿಸಲು ಮುಂದಾದರು. ಇದು ಮೇಲ್ಜಾತಿಯ ಜನರನ್ನು ಸಿಟ್ಟಿಗೆಬ್ಬಿಸಿತು. ಅವರೆಲ್ಲರೂ ಒಂದಾಗಿ ಈ ಧ್ವಜಾರೋಹಣವನ್ನು ತಡೆದು, ಅಲ್ಲಿ ನೆರೆದಿದ್ದ ದಲಿತರ ಮೇಲೆ ಮುಗಿ ಬಿದ್ದರು. ದಾಳಿಯಲ್ಲಿ ಓರ್ವ ಗರ್ಭಿಣಿಯ ಹೊಟ್ಟೆಗೆ ತುಳಿದಿದ್ದು, ಸ್ಥಳದಲ್ಲೇ ಆಕೆಗೆ ಗರ್ಭಪಾತವಾಯಿತು. ಮಕ್ಕಳ ಮೇಲೂ ರಾಡ್‌ಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿದರು. ದಲಿತರ ಗುಡಿಸಲಿಗೂ ಬೆಂಕಿ ಹಚ್ಚಲಾಯಿತು.
ಈ ಘಟನೆಗೆ ಒಂಭತ್ತು ವರ್ಷಗಳು ಸಂದಿವೆ. ಇದೀಗ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭ. ಮೋದಿಯವರ ಆದೇಶದಂತೆ ಮನೆ ಮನೆಗಳಲ್ಲಿ ರಾಷ್ಟ್ರಧ್ವಜಗಳು ಹಾರಾಡಿವೆ. ವಿಪರ್ಯಾಸವೆಂದರೆ, ಈ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯ ಸಿದ್ಧತೆಯ ಹೊತ್ತಿನಲ್ಲೇ ರಾಜಸ್ತಾನದಲ್ಲಿ ಅಮಾನವೀಯ ಘಟನೆಯೊಂದು ನಡೆಯಿತು. ಇಲ್ಲಿನ ಶಾಲೆಯೊಂದರಲ್ಲಿ ದಲಿತ ವಿದ್ಯಾರ್ಥಿಯೊಬ್ಬ ಕುಡಿಯುವ ನೀರಿನ ಹೂಜಿಯನ್ನು ಮುಟ್ಟಿದ ಒಂದೇ ಕಾರಣಕ್ಕಾಗಿ ಶಿಕ್ಷಕ ವಿದ್ಯಾರ್ಥಿಗೆ ಭೀಕರವಾಗಿ ಥಳಿಸಿ ಹತ್ಯೆಗೈದಿದ್ದ. ಆಗಸ್ಟ್ 15ರಂದು ಈ ಘಟನೆ ಮಾಧ್ಯಮಗಳ ಮೂಲಕ ಬೆಳಕಿಗೆ ಬಂತು. ಸ್ವಾತಂತ್ರ್ಯ ಪಡೆದು 75 ವರ್ಷಗಳು ಸಂದರೂ, ಈ ದೇಶದಲ್ಲಿ ಒಬ್ಬ ದಲಿತ ಹುಡುಗನಿಗೆ ಸಾರ್ವಜನಿಕ ಕುಡಿಯುವ ನೀರಿನ ಮಡಕೆಯನ್ನು ಮುಟ್ಟುವ ಸ್ವಾತಂತ್ರ್ಯ ದೊರಕಿಲ್ಲವೆಂದ ಮೇಲೆ, ಈ ಸ್ವಾತಂತ್ರ್ಯವನ್ನುವುದನ್ನು ಬ್ರಿಟಿಷರು ಯಾರ ಕೈಗೆ ಒಪ್ಪಿಸಿ ಹೋಗಿದ್ದಾರೆ ಎನ್ನುವ ಪ್ರಶ್ನೆ ದೇಶವನ್ನ್ನು ಕಾಡತೊಡಗಿದೆ.
ವಿದ್ಯಾರ್ಥಿಗಳಿಗೆ ಜಾತ್ಯತೀತತೆ, ಸಮಾನತೆಯನ್ನು ಬೋಧಿಸಿ ಸಮಾಜವೊಂದನ್ನು ಕಟ್ಟುವ ಹೊಣೆಗಾರಿಕೆ ಶಿಕ್ಷಕನದು. ದೇಶದ ಸ್ವಾತಂತ್ರ್ಯದ ಅಳಿವು ಉಳಿವು ಆತನ ಕೈಯಲ್ಲಿದೆ. ಅಂತಹ ಶಿಕ್ಷಕನೇ ಜಾತೀಯ ಮನಸ್ಥಿತಿಯನ್ನು ಹೊಂದಿ, ನೀರು ಮುಟ್ಟಿದ ನೆಪದಲ್ಲಿ ದಲಿತ ಬಾಲಕನನ್ನು ಥಳಿಸಿಕೊಂದಿದ್ದಾನೆ. ವಿದ್ಯೆ ಕಲಿಸುವ ಒಬ್ಬ ಶಿಕ್ಷಕನ ಮಾನಸಿಕ ಸ್ಥಿತಿಯೇ ಹೀಗಿರಬೇಕಾದರೆ, ಉಳಿದವರದು ಇನ್ನೆಷ್ಟು ಭೀಕರವಾಗಿರಬೇಡ? ಈ ದೇಶದ ಮಾಜಿ ಉಪಪ್ರಧಾನಿ ಜಗಜೀವನ್ ರಾಮ್ ಅವರ ಪುತ್ರಿ, ಮಾಜಿ ಸಚಿವೆ, ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರು ಸಂದರ್ಶನವೊಂದರಲ್ಲಿ ಹೀಗೆ ಹೇಳುತ್ತಾರೆ ‘‘ನನ್ನ ತಂದೆ ಈ ದೇಶದ ಉಪಪ್ರಧಾನಿಯಾಗಿದ್ದರೂ ಜಾತಿಯ ಅವಮಾನವನ್ನು ಅನುಭವಿಸಿದರು. ನನ್ನ ತಂದೆಯ ಜಾತಿಯ ಕಾರಣಕ್ಕಾಗಿ, ಅವರು ಉದ್ಘಾಟಿಸಿದ ಪ್ರತಿಮೆಯನ್ನು ಗಂಗಾಜಲದಿಂದ ಶುದ್ಧೀಕರಿಸಲಾಯಿತು. ಅತ್ಯುನ್ನತ ಸ್ಥಾನದಲ್ಲಿದ್ದರೂ ಅವರು ಈ ದೇಶದಲ್ಲಿ ಜಾತಿಯ ಅವಮಾನವನ್ನು ಎದುರಿಸಿದರು. ಜಾತಿಯ ಕಾರಣಕ್ಕಾಗಿಯೇ ನನಗೆ ಮನೆಯನ್ನು ನಿರಾಕರಿಸಲಾಯಿತು. ಇದೀಗ ದೇಶದ ಸ್ವಾತಂತ್ರ್ಯಕ್ಕೆ 75 ವರ್ಷ ಸಂದಿದೆ. ಆದರೆ ದೇಶದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ’’. ಮೀರಾ ಕುಮಾರ್ ಅವರ ಮಾತುಗಳು 75 ನೇ ಸ್ವಾತಂತ್ರ್ಯೋತ್ಸವದ ಮುಖಕ್ಕೆ ಹಿಡಿದ ಕನ್ನಡಿಯಾಗಿದೆ.
ಸ್ವಾತಂತ್ರ್ಯೋತ್ಸವದ ದಿನ ಪ್ರಧಾನಿ ನರೇಂದ್ರ ಮೋದಿಯವರು ಕೆಂಪು ಕೋಟೆಯ ಮೇಲೆ ನಿಂತು, ಭವ್ಯ ಭಾರತದ ನಿರ್ಮಾಣಕ್ಕಾಗಿ ಪಂಚ ಸಂಕಲ್ಪವನ್ನು ತೊಡಲು ಕರೆ ನೀಡಿದರು. ಅದರಲ್ಲಿ ಮುಖ್ಯವಾದ ಎರಡು ಸಂಕಲ್ಪಗಳು ‘‘ಗುಲಾಮಿ ಮನಸ್ಥಿತಿಯಿಂದ ಹೊರಬಂದು, ಗುಲಾಮಿ ಸಂಕೇತಗಳನ್ನು ಕಿತ್ತು ಒಗೆಯುವುದು. ಹಾಗೂ ಭಾರತದ ಪರಂಪರೆಯನ್ನು ಎತ್ತಿ ಹಿಡಿಯುವುದು’’. ಆದರೆ ಇಂದು ದೇಶದಲ್ಲಿ ನಡೆಯುತ್ತಿರುವುದೇನು? ಭಾರತದಲ್ಲಿ ಗುಲಾಮಿ ಮನಸ್ಥಿತಿ ಬ್ರಿಟಿಷರು ಆಗಮಿಸಿದ ಬಳಿಕ ನೆಲೆಯೂರಿದ್ದಲ್ಲ. ಬ್ರಿಟಿಷರು, ಮೊಗಲರು ಈ ದೇಶಕ್ಕೆ ಆಗಮಿಸುವ ಮುನ್ನವೇ, ಈ ನೆಲದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಸಾರ್ವಜನಿಕ ಕೆರೆಯ ನೀರನ್ನು ಮುಟ್ಟುವ ಸ್ವಾತಂತ್ರ್ಯವಿರಲಿಲ್ಲ. ಈ ದೇಶದ ಬಹುಸಂಖ್ಯಾತರು ಕೆಲವೇ ಕೆಲವರ ಗುಲಾಮರಾಗಿ ಶೋಷಣೆಗೊಳಗಾಗುತ್ತಿದ್ದರು. ಅವರಿಗೆ ಶಿಕ್ಷಣದ ಹಕ್ಕಿರಲಿಲ್ಲ. ರಸ್ತೆಯಲ್ಲಿ ಓಡಾಡುವ ಸ್ವಾತಂತ್ರ್ಯವಿರಲಿಲ್ಲ. ದೇವಸ್ಥಾನದೊಳಗೆ ಪ್ರವೇಶಿಸುವುದಂತೂ ದೂರದ ಮಾತು. ಈ ದೇಶವನ್ನು ‘ಮನು ಸ್ಮತಿ’ ಆಳುತ್ತಿತ್ತು. ಶೂದ್ರರು ಮತ್ತು ದಲಿತರು ಎಲ್ಲ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದರು. ಈ ಕಾರಣಕ್ಕಾಗಿಯೇ ಅಂಬೇಡ್ಕರ್ ಅವರು, ಬ್ರಿಟಿಷರು ಈ ದೇಶವನ್ನು ತೊರೆದು ಹೋದರೂ ದಲಿತರಿಗೆ ಸ್ವಾತಂತ್ರ್ಯ ಸಿಗುವುದಿಲ್ಲ ಎಂದು ವಾದಿಸಿದರು. ಅವರ ಅನುಮಾನ, ಆತಂಕ ಭಾರತದಲ್ಲಿ ನಿಜವಾಗುತ್ತಿದೆ.
ಪ್ರಧಾನಿಯವರು ಹೇಳುವಂತೆ ಗುಲಾಮಿ ಮನಸ್ಥಿತಿಯಿಂದ ಹೊರಬಂದು, ಎಲ್ಲಾ ಗುಲಾಮಿ ಸಂಕೇತಗಳನ್ನು ಕಿತ್ತು ಹಾಕುವುದಾದರೆ, ಮೊತ್ತ ಮೊದಲು ಈ ದೇಶದ ಜಾತಿ ಅಸಮಾನತೆ ತೊಲಗಬೇಕು. ಜಾತಿಯ ಅಸಮಾನತೆಯನ್ನು ಎತ್ತಿ ಹಿಡಿಯುವ ಎಲ್ಲ ಸಂಕೇತಗಳು ಅಳಿಯಬೇಕು. ವಿಪರ್ಯಾಸವೆಂದರೆ, ಸ್ವಾತಂತ್ರ್ಯ ಸಿಕ್ಕಿದ ಕೆಲವೇ ದಶಕಗಳಲ್ಲಿ ರಾಜಸ್ಥಾನದ ಹೈಕೋರ್ಟ್ ಮುಂದೆ ‘ಮನು ಮಹರ್ಷಿ’ಯ ಪ್ರತಿಮೆಯನ್ನು ನಿಲ್ಲಿಸಲಾಯಿತು. ಭಾರತದಲ್ಲಿ ಸಂವಿಧಾನ ಜಾರಿಗೊಂಡಿರುವುದೇ ಮನುಸ್ಮತಿಯ ಅಸಮಾನ ಸಮಾಜವನ್ನು ಅಳಿಸಿ ಹಾಕುವುದಕ್ಕಾಗಿ. ತಲೆ ತಲಾಂತರಗಳಿಂದ ದಲಿತರನ್ನು, ಶೂದ್ರರನ್ನು ನಿಕೃಷ್ಟವಾಗಿ ಕಂಡ, ಅವರನ್ನು ಗುಲಾಮಿ ವ್ಯವಸ್ಥೆಗೆ ತಳ್ಳಿದ ಮನುಸ್ಮತಿಯನ್ನು ಬರೆದ ಮನುಮಹರ್ಷಿಯ ಪ್ರತಿಮೆಯನ್ನು ಹೈಕೋರ್ಟ್ ಮುಂದೆ ಸ್ಥಾಪಿಸಲಾಯಿತು ಎಂದ ಮೇಲೆ, ಅದೇ ರಾಜ್ಯದಲ್ಲಿ ದಲಿತ ಬಾಲಕನೊಬ್ಬನನ್ನು ನೀರು ಮುಟ್ಟಿದ ಕಾರಣಕ್ಕಾಗಿ ಥಳಿಸಿ ಕೊಂದರೆ ಅದರಲ್ಲಿ ಅಚ್ಚರಿಯೇನಿದೆ? ಎಲ್ಲಿಯವರೆಗೆ ಈ ದೇಶದಲ್ಲಿ ಮನು ಧರ್ಮ ಬೋಧಿಸಿದ ಗುಲಾಮಿ ಮನಸ್ಥಿತಿ ಮತ್ತು ಗುಲಾಮಿ ಸಂಕೇತಗಳು ಅಸ್ತಿತ್ವದಲ್ಲಿರುತ್ತದೆಯೋ ಅಲ್ಲಿಯವರೆಗೆ ಭವ್ಯ ಭಾರತ ನಿರ್ಮಾಣ ಸಾಧ್ಯವಿಲ್ಲ. ಆದುದರಿಂದ, ರಾಜಸ್ಥಾನದ ಹೈಕೋರ್ಟ್ ಮುಂದಿರುವ ಗುಲಾಮಿ ಸಂಕೇತವನ್ನು ಕಿತ್ತೊಗೆಯುವ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿಯವರೇ ವಹಿಸಬೇಕು. ಈ ಮೂಲಕ ದೇಶದಲ್ಲಿ ಪರೋಕ್ಷವಾಗಿ ಜಾರಿಯಲ್ಲಿರುವ ಮೇಲು ಕೀಳು ಜಾತೀಯ ಅಸಮಾನತೆಯನ್ನು ಇಲ್ಲವಾಗಿಸಬೇಕು.
ಇದೇ ಸಂದರ್ಭದಲ್ಲಿ ಸಾವರ್ಕರ್ ಭಾವಚಿತ್ರವನ್ನು ಸಂಸತ್‌ನಿಂದ ಕಿತ್ತೊಗೆಯುವ ಮೂಲಕ, ಪ್ರಧಾನಿಯವರ ಭವ್ಯ ಭಾರತದ ಕನಸು ನಿಜಮಾಡಬೇಕಾಗಿದೆ. ಸಾವರ್ಕರ್ ಒಂದು ಕಾಲದಲ್ಲಿ ಕೆಲವು ಸಮಯ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಬಳಿಕ ಅವರು ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡರು. ಎರಡೆರಡು ಬಾರಿ ಬ್ರಿಟಿಷರಿಗೆ ಅತ್ಯಂತ ದಯನೀಯವಾಗಿ ‘‘ನನ್ನನ್ನು ಕ್ಷಮಿಸಿದರೆ ನಿಮ್ಮ ಗುಲಾಮನಾಗಿ ಬದುಕುತ್ತೇನೆ’’ ಎಂಬರ್ಥದ ಕ್ಷಮಾಪಣಾ ಪತ್ರವನ್ನು ಬರೆದರು. ಬ್ರಿಟಿಷರ ಪಿಂಚಣಿಯಿಂದ ಅವರು ಬದುಕಿದರು. ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿಯ ಹತ್ಯೆಯ ಕಳಂಕವೂ ಸಾವರ್ಕರ್ ಮೇಲಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಅವರು ಆರೋಪದಿಂದ ಮುಕ್ತರಾದರು. ಇಂತಹ ಹಿನ್ನೆಲೆಯಿರುವ ವ್ಯಕ್ತಿಯ ಭಾವಚಿತ್ರ ಸಂಸತ್‌ನಲ್ಲಿರುವುದು ದೇಶದ ಸ್ವಾತಂತ್ರ್ಯ ಯೋಧರಿಗೆ ಮಾಡುವ ಅವಮಾನವಲ್ಲವೇ? ಎದೆಯೊಳಗೆ ಸಾವರ್ಕರ್ ಚಿತ್ರವನ್ನು ಇಟ್ಟುಕೊಂಡು ಸ್ವಾಭಿಮಾನದ ಭವ್ಯ ಭಾರತವನ್ನು ಕಟ್ಟುವುದು ಸಾಧ್ಯವಾಗುವ ಮಾತೆ?
ಸ್ವಾತಂತ್ರ್ಯ ಹೋರಾಟಗಾರರ ದೊಡ್ಡ ಪರಂಪರೆಯನ್ನು ದೇಶ ಹೊಂದಿದೆ. ಅವರೆಲ್ಲರನ್ನು ಬದಿಗೆ ತಳ್ಳಿ, ಸ್ವಾತಂತ್ರ್ಯಕ್ಕಾಗಿ ಯಾವುದೇ ಹೋರಾಟ ನಡೆಸದ ಹೆಡಗೇವಾರ್, ಗೋಳ್ವಾಲ್ಕರ್, ಗೋಡ್ಸೆಯಂತಹ ವ್ಯಕ್ತಿಗಳನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಯುತ್ತಿದೆ. ಇವರು ಭಾರತದ ಗುಲಾಮಗಿರಿ, ಜಾತೀಯತೆ, ಅಸಮಾನತೆ ಮೊದಲಾದವುಗಳನ್ನು ಪ್ರತಿನಿಧಿಸುತ್ತಾರೆ. ಈ ಮೇಲಿನ ನಾಯಕರನ್ನು ಮುನ್ನ್ನೆಲೆಗೆ ತಂದು, ಮತ್ತೆ ಜಾತಿ ಅಸಮಾನತೆಯನ್ನು ದೇಶದಲ್ಲಿ ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ. ಅದನ್ನು ವಿಫಲಗೊಳಿಸಬೇಕಾದರೆ ಈ ನಾಯಕರನ್ನು ವೈಭವೀಕರಿಸುವ ಎಲ್ಲ ಸಂಸ್ಥೆಗಳನ್ನು, ಸಂಘಟನೆಗಳನ್ನು ನಿಷೇಧಿಸಬೇಕು. ಈ ದೇಶದಲ್ಲಿ ಗುಲಾಮಿ ವ್ಯವಸ್ಥೆ ಬ್ರಿಟಿಷರು ಬರುವ ಮೊದಲೇ ಅಸ್ತಿತ್ವದಲ್ಲಿದ್ದ ಕಾರಣದಿಂದ, ಬ್ರಿಟಿಷರು ಹೋದ ಬಳಿಕವೂ ಅದು ಜೀವಂತವಾಗಿದೆ. ಇದರ ವಿರುದ್ಧ ಅಂಬೇಡ್ಕರ್ ತನ್ನ ಬದುಕಿನುದ್ದಕ್ಕೂ ಹೋರಾಡಿದರು. ಆ ಹೋರಾಟವನ್ನು ಇದೀಗ ಈ ದೇಶದ ಶೂದ್ರರು, ದಲಿತರು ಮತ್ತು ಅಲ್ಪಸಂಖ್ಯಾತರು ಕೈಗೆತ್ತಿಕೊಂಡು ದೇಶವನ್ನು ಸಂಪೂರ್ಣ ಸ್ವಾತಂತ್ರ್ಯದ ಕಡೆಗೆ ಮುನ್ನಡೆಸಬೇಕು. ಮುಂದೆಂದೂ, ನೀರಿನ ಮಡಕೆ ಮುಟ್ಟಿದ ಕಾರಣಕ್ಕಾಗಿ ಸಾಯುವ ಸ್ಥಿತಿ ಈ ದೇಶದ ಯಾವೊಬ್ಬ ವ್ಯಕ್ತಿಗೂ ಬರಬಾರದು. ಅಂತಹದೊಂದು ಭವ್ಯ ಭಾರತವನ್ನು ಕಟ್ಟಲು ಈಗಿಂದಲೇ ಪಣತೊಡಬೇಕು.