varthabharthi


Social Media

ಭಾರತೀಯ ವೈದ್ಯ ವಿಜ್ಞಾನ ಸಂಶೋಧನಾ ಸಂಸ್ಥೆ(ICMR)ಗೆ ಪತ್ರ ಬರೆದ ಹಿರಿಯ ಪತ್ರಕರ್ತ

30-55 ಪ್ರಾಯವರ್ಗದಲ್ಲಿ ಹೃದಯಾಘಾತದ ಪ್ರಮಾಣ ತೀವ್ರ ಹೆಚ್ಚಳ: ಸಕಾಲಿಕ ಕ್ರಮಕ್ಕೆ ರಾಜಾರಾಂ ತಲ್ಲೂರು ಆಗ್ರಹ

ವಾರ್ತಾ ಭಾರತಿ : 18 Aug, 2022

ಉಡುಪಿ: ನಾಡಿನೆಲ್ಲೆಡೆ 30-55 ಪ್ರಾಯವರ್ಗದಲ್ಲಿ ಹೃದಯಾಘಾತದ ಪ್ರಮಾಣ ಒಂದೇ ಸಮನೆ ಹೆಚ್ಚುತ್ತಿದೆ. ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಸರಕಾರದ-ಆರೋಗ್ಯಾಡಳಿತದ ಕಡೆಯಿಂದ ಯಾವುದೇ ಗಂಭೀರ ಪ್ರಯತ್ನಗಳು ನಡೆಯುತ್ತಿಲ್ಲ. ಆದ್ದರಿಂದ ಭಾರತೀಯ ವೈದ್ಯ ವಿಜ್ಞಾನ ಸಂಶೋಧನಾ ಸಂಸ್ಥೆ (ICMR) ಈ ವಿಚಾರದಲ್ಲಿ ಆಳವಾಗಿ ಅಧ್ಯಯನ/ಸಂಶೋಧನೆ ನಡೆಸಿ, ಇದಕ್ಕೆ ಕಾರಣವನ್ನು ಪತ್ತೆ ಹಚ್ಚಬೇಕು ಹಾಗೂ ಜೀವನಷ್ಟವನ್ನು ತಡೆಯಲು ಸಕಾಲಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಒತ್ತಾಯಿಸಿದ್ದಾರೆ.

 ಈ ಕುರಿತು ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿ ಹಾಗೂ ICMR ಮಹಾನಿರ್ದೇಶಕ ರಾಜೇಶ್ ಭೂಷಣ್ ಅವರಿಗೆ ಪತ್ರ ಬರೆದಿರುವ ರಾಜಾರಾಂ ತಲ್ಲೂರು, ಕಳೆದ ಎರಡೂವರೆ ವರ್ಷಗಳಲ್ಲಿ ಕೋವಿಡ್-19 ಮಹಾಮಾರಿಯ ಅವಧಿಯಲ್ಲಿ, ಕೋವಿಡ್ ಕಾರಣಕ್ಕಾಗಿ ಸಂಭವಿಸಿದ ಜೀವನಷ್ಟಗಳ ಜೊತೆ ಜೊತೆಗೇ ದೊಡ್ಡ ಪ್ರಮಾಣದಲ್ಲಿ ಹೃದಯಾಘಾತದ ಕಾರಣಕ್ಕೆ (MI) ಸಾವುಗಳು ಸಂಭವಿಸಿವೆ. ಈಗ ಕೋವಿಡ್ ತೀವ್ರತೆ ಕಡಿಮೆ ಆದ ಬಳಿಕವೂ ಈ ಸಾವಿನ ಸರಣಿ ಮುಂದುವರಿದಿದ್ದು, ದೇಶದೊಳಗೆ ದೊಡ್ಡ ಸಂಖ್ಯೆಯಲ್ಲಿ ಜನರು ಹೃದಯಾಘಾತಕ್ಕೆ ಬಲಿ ಆಗುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ, 30-55ರ ಉತ್ಪಾದಕ ಪ್ರಾಯ ವರ್ಗದಲ್ಲೇ ಈ ರೀತಿಯ ಸಾವುಗಳು ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ವಿಶೇಷವಾಗಿ ಕರಾವಳಿ ಕರ್ನಾಟಕದಲ್ಲಿ ಈ ವಿಲಕ್ಷಣವಾದ ಬೆಳವಣಿಗೆ ಹೆಚ್ಚಾಗಿ ಕಂಡುಬಂದಿದೆ. ಕಳೆದ ಒಂದು ವಾರದಲ್ಲೇ ಈ ಪ್ರದೇಶದ ಪತ್ರಿಕೆಗಳಲ್ಲಿ ಕನಿಷ್ಠ 5-6 ಇಂತಹ ಸಾವಿನ ವರದಿಗಳು ಪ್ರಕಟವಾಗಿವೆ. ದೇಶಾದ್ಯಂತವೂ ಇದೇ ಪರಿಸ್ಥಿತಿ ಇದೆ ಎಂಬುದು ತನ್ನ ಅಭಿಪ್ರಾಯ. ಹೀಗೆ ಅನಿರೀಕ್ಷಿತವಾಗಿ ನಿಧನ ಹೊಂದಿದವರೆಲ್ಲರೂ ಎಳೆಯರು ಮತ್ತು ಆರೋಗ್ಯವಂತರಾಗಿ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವರು. ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದ್ದು, ICMRನಂತಹ  ಸುಸಜ್ಜಿತ ಸಂಶೋಧನಾ ಸಂಸ್ಥೆ ಈ ವಿಚಾರದಲ್ಲಿ ಆಳವಾಗಿ ಅಧ್ಯಯನ/ಸಂಶೋಧನೆ ನಡೆಸಿ, ಇದಕ್ಕೆ ಕಾರಣವನ್ನು ಪತ್ತೆ ಹಚ್ಚಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮಠ, ದೇವಸ್ಥಾನ, ಟ್ರಸ್ಟ್ ಗಳಿಗೆ 142 ಕೋಟಿ ರೂ. ಮಂಜೂರು

ಜನಸಾಮಾನ್ಯರಲ್ಲಿ ಈ ರೀತಿಯ ಹಠಾತ್ ಸಾವಿನ ಬಗ್ಗೆ ಹಲವು ಅಪನಂಬಿಕೆಗಳು ತಲೆಯೆತ್ತಿವೆ. ಈ ರೀತಿಯ ಸಾವುಗಳಿಗೆ ಕೋವಿಡೋತ್ತರ ದೀರ್ಘಕಾಲಿಕ ಪರಿಣಾಮಗಳು ಅಥವಾ ಕೋವಿಡ್ ಲಸಿಕೆ ಅಥವಾ ಮಾನಸಿಕ ಒತ್ತಡ/ಜೀವನ ಶೈಲಿ ಕಾರಣ ಆಗಿರಬಹುದೆಂಬ ಸಂಶಯಗಳು ಜನಮನದಲ್ಲಿ ಬೆಳೆಯುತ್ತಿವೆ. ಈ ಮರಣದ ಆಘಾತಗಳು ಅದಕ್ಕೆ ತುತ್ತಾದವರ ಕುಟುಂಬಗಳಲ್ಲಿ ಸಾಮಾಜಿಕ, ಆರ್ಥಿಕ ಸಂಕಟಗಳಿಗೆ ಕಾರಣವಾಗುತ್ತಿವೆ. ಯಾಕೆಂದರೆ, ಹೀಗೆ ಮೃತಪಟ್ಟಿರುವ ಹೆಚ್ಚಿನವರು ತಮ್ಮ ಕುಟುಂಬಗಳ ವರಮಾನದ ಆಧಾರಸ್ಥಂಭಗಳಾಗಿದ್ದವರು. ಇಂತಹ ಪ್ರಕರಣಗಳು ಹೆಚ್ಚಾದಲ್ಲಿ ಇದು ಸಾಮಾಜಿಕವಾಗಿ-ಆರ್ಥಿಕವಾಗಿ ಕ್ಷೋಭೆಗೆ ಕಾರಣವಾದರೂ ಅಚ್ಚರಿ ಇಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ICMR, ಈ ನಿಟ್ಟಿನಲ್ಲಿ ತಕ್ಷಣ ಕಾರ್ಯಾರಂಭಿಸಬೇಕು ಮತ್ತು ಈ ರೀತಿಯ ಸಾವುಗಳ ಮಾಹಿತಿಗಳನ್ನು ಸಂಗ್ರಹಿಸಿ, ಅದಕ್ಕೆ ಕಾರಣಗಳ ವಿಶ್ಲೇಷಣೆ ನಡೆಸಬೇಕು ಮತ್ತು ಅಂತಹ ಜೀವನಷ್ಟವನ್ನು ತಡೆಯಲು ಸಕಾಲಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಲ್ಲೂರು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ಕುರಿತ ಅವರ ಫೇಸ್ ಬುಕ್ ಪೋಸ್ಟ್ ಇಲ್ಲಿದೆ:

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)