ಸಮಾಜದಲ್ಲಿ ಏನಾಗಬೇಕೆಂಬ ಆಯ್ಕೆ ನಮ್ಮದೇ: ಡಾ. ಕುಮಾರ್
‘‘ನನ್ನ ಹುಟ್ಟು ಎಲ್ಲಿ, ಬಂಧು ಬಳಗ, ನೆರೆಹೊರೆಯವರು ಯಾರಾಗಬೇಕು ಎಂಬ ಆಯ್ಕೆ ನಮ್ಮದಲ್ಲ. ಆದರೆ ಸಮಾಜದಲ್ಲಿ ನಾನು ಏನು ಆಗಬೇಕೆಂಬ ಆಯ್ಕೆ ನಮ್ಮದಾಗಿರುತ್ತದೆ. ನನ್ನ ಜೀವನದ ಸಾಧನೆಯ ಮೆಟ್ಟಿಲಿಗೆ ನಾವೇ ವಾಸ್ತುಶಿಲ್ಪಿಯಾಗಿರುತ್ತೇವೆ.’’ಇದು ಐಎಎಸ್ ಅಧಿಕಾರಿ, ದಕ್ಷಿಣ ಕನ್ನಡ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ಅವರ ಯಶಸ್ಸಿನ ಗುಟ್ಟು.‘ವಾರ್ತಾಭಾರತಿ’ ಡಿಜಿಟಲ್ ಮೀಡಿಯಾದ ‘ಸೀಕ್ರೆಟ್ ಆಫ್ ಸಕ್ಸಸ್’ ವಿಶೇಷ ಕಾರ್ಯಕ್ರಮದಲ್ಲಿ ತಮ್ಮ ಬಾಲ್ಯ, ಶಿಕ್ಷಣ ಹಾಗೂ ಸಾಧನೆಯ ಹಾದಿಯ ಕುರಿತಂತೆ ಡಾ. ಕುಮಾರ್‌ಅವರ ಮನದಾಳದ ಮಾತುಗಳನ್ನು ಅವರ ಮಾತುಗಳಲ್ಲಿಯೇ ನಿರೂಪಣೆ ಮಾಡಲಾಗಿದೆ. ಇದರ ವೀಡಿಯೋವನ್ನು ವಾರ್ತಾಭಾರತಿ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದು
ಮಕ್ಕಳಿಗೆ ಪೋಷಕರೇ ಮೊದಲ ಆದರ್ಶ
ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಎಲ್ಲಾ ಪೋಷಕರ ಭಯ ಎಂದರೆ ತಮ್ಮ ಮಕ್ಕಳು ಮೊಬೈಲ್, ಲ್ಯಾಪ್‌ಟಾಪ್‌ಗಳಲ್ಲಿ ಮುಳುಗಿರುತ್ತಾರೆಂಬುದು. ತಂತ್ರಜ್ಞಾನ ನಮಗೆ ಅತೀ ಅಗತ್ಯ. ಆದರೆ ನಮ್ಮ ಮಕ್ಕಳಿಗೆ ಅವರ ಪೋಷಕರೇ ಮೊದಲ ಆದರ್ಶವಾಗಬೇಕು. ಹಾಗಾಗಬೇಕಾದರೆ ಪೋಷಕರು ಕೂಡಾ ಮಕ್ಕಳಿಗೆ ಮಾದರಿಯಾಗಿರಬೇಕು. ನಮ್ಮಲ್ಲಿರುವ ವೌಲ್ಯ, ಹವ್ಯಾಸ, ಅಭಿರುಚಿಗಳನ್ನು ನಮ್ಮ ಮಕ್ಕಳು ಅಳವಡಿಸುವಂತಿರಬೇಕು, ಅವರು ನಮ್ಮನ್ನು ನೋಡಿ ಕಲಿಯುವಂತಿರಬೇಕು.
ನನ್ನ ತಂದೆಯೇ ನನ್ನ ಬೆನ್ನೆಲುಬು
ನಾನು ಹಾಸನ ಜಿಲ್ಲೆಯ ರಂಗೇನಹಳ್ಳಿ ಗ್ರಾಮದಲ್ಲಿ ಜನಿಸಿದವ. ತಂದೆ ರೈತರಾಗಿದ್ದು, ರೈತನ ಮಗನೆಂದು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತೇನೆ. ಅವರು ಶಾಲೆಗೆ ಹೋಗಿ ಶಿಕ್ಷಣ ಪಡೆದವರಲ್ಲ. ಆದರೆ ಅವರು ಜೀವನದ ಪಾಠವನ್ನು ಚೆನ್ನಾಗಿ ಕಲಿತ ನನ್ನ ಪಾಲಿನ ಆರಾಧ್ಯ ದೈವ. ಬದುಕಿನಲ್ಲಿ ಯಾವತ್ತೂ ನಾವು ಬಾಗಬೇಕೇ ವಿನಹ ಬೀಗಬಾರದು ಎಂಬ ನನ್ನ ತಂದೆಯ ಮಾತನ್ನು ನನ್ನ ಜೀವನದುದ್ದಕ್ಕೂ ಅಳವಡಿಸಿಕೊಂಡು ಬಂದಿದ್ದೇನೆ. ಬದುಕಿನ ಸಾಧನೆಗೆ ಸಹಕಾರ ಹಾಗೂ ಬೆನ್ನೆಲುಬಾಗಿದ್ದವರು ನನ್ನ ತಂದೆ. ಪ್ರಾಥಮಿಕ ಶಿಕ್ಷಣವನ್ನು ಅಜ್ಜಿಯ ಊರಲ್ಲಿ ಮುಗಿಸಿ ತಂದೆಯ ಗರಡಿಯಲ್ಲೇ ಪಳಗಿದವ ನಾನು. ಹೈಸ್ಕೂಲ್ ಶಿಕ್ಷಣಕ್ಕಾಗಿ ಮನೆಯಿಂದ ಸುಮಾರು 5 ಕಿ.ಮೀ. ದೂರದ ಶಾಲೆಗೆ ಕಾಲ್ನಡಿಗೆಯಲ್ಲೇ ಕ್ರಮಿಸಿದ್ದೆ. ಪಿಯು ಶಿಕ್ಷಣವನ್ನು ಬೂದೇಶ್ವರ ಸ್ವಾಮಿ ಸಂಸ್ಥೆಯಲ್ಲಿ ಪಡೆದು, ಬಳಿಕ ಪದವಿ ಶಿಕ್ಷಣವನ್ನು ಹಾಸನದ ಸರಕಾರಿ ಕಲಾ ಕಾಲೇಜಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ಬಿಸಿಎಂ ಹಾಸ್ಟೆಲ್‌ನಲ್ಲಿದ್ದು, ಪಡೆದೆ. ಬಳಿಕ ಮೈಸೂರಿನ ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯಲ್ಲಿ ಬಿಎಡ್ ಅಧ್ಯಯನ ಮಾಡಿ ಅಲ್ಲಿ 7ನೇ ರ್ಯಾಂಕ್ ಕೂಡ ಪಡೆದೆ. ಬಿಎಡ್ ಮುಗಿಸಿದ ಆರು ತಿಂಗಳ ಅವಧಿಯಲ್ಲೇ ಕರ್ನಾಟಕ ಸರಕಾರ ಶಿಕ್ಷಕರ ನೇಮಕಾತಿಗೆ ಪ್ರಕಟಣೆ ಹೊರಡಿಸಿತ್ತು. ಅಲ್ಲಿ ಸರಕಾರಿ ಶಿಕ್ಷಕನಾಗಿ ಆಯ್ಕೆಯಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸರಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ನಿರ್ವಹಿಸಿದ್ದೇನೆ. ಕಲಾ ವಿಭಾಗದಲ್ಲಿ ಶಿಕ್ಷಣ ಪಡೆದವರು ದಡ್ಡರು ಎಂಬ ಪ್ರತೀತಿ ಇದೆ. ಅದು ನನ್ನ ಪ್ರಕಾರ ತಪ್ಪು.
ಜೀವನದ ಬಹುಮುಖ್ಯ ತಿರುವು ಅದಾಗಿತ್ತು....
ನಾನು ಪದವಿ ಓದುತ್ತಿದ್ದ ಸಂದರ್ಭ ಬೆಳಗ್ಗೆ 5:30ರಿಂದ 7:30ರವರೆಗೆ ಮನೆ ಮನೆಗಳಿಗೆ ಪತ್ರಿಕೆ ಹಾಕುತ್ತಿದ್ದೆ. ಆ ಸಂದರ್ಭದಲ್ಲಿ ಆ ಭಾಗದ ಸಹಾಯಕ ಆಯುಕ್ತರು, ತಹಶೀಲ್ದಾರರ ಮನೆಗಳಿಗೆ ಪತ್ರಿಕೆ ಹಾಕುತ್ತಿದ್ದೆ. ಎಸ್‌ಟಿಡಿ ಬೂತ್ ಒಂದರಲ್ಲಿ ಪಾರ್ಟ್‌ಟೈಂ ಕೆಲಸ ಮಾಡುತ್ತಿದ್ದ ವೇಳೆ ಉನ್ನತ ಸ್ತರದ ಅಧಿಕಾರಿ ಸ್ಥಾನಕ್ಕೆ ಹೋಗಬೇಕಾದರೆ ಕೆಎಎಸ್, ಐಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕೆಂದು ನನ್ನಲ್ಲಿ ತಿಳಿದವರು ಹೇಳಿಕೊಂಡಿದ್ದರು. ಅದಕ್ಕಿಂತಲೂ ಮುಖ್ಯವಾಗಿ ನನ್ನ ಬದುಕಿನ ಬಹುಮುಖ್ಯ ತಿರುವು ಎಂದರೆ, ನಾನು ಬಿಎಡ್ ಕಲಿಯುತ್ತಿದ್ದಾಗ ಕರ್ನಾಟಕದ ಬಹುದೊಡ್ಡ ಸಾಹಿತಿ ದೇ. ಜವರೇಗೌಡರನ್ನು ನಾನು ಭೇಟಿಯಾಗುತ್ತಿದ್ದೆ. ಅದೊಂದು ಸಂದರ್ಭ ನಾನು ಲೇಖನವೊಂದನ್ನು ಅವರಿಗೆ ಕೊಟ್ಟಿದ್ದೆ. ಅದರಲ್ಲಿ ನನ್ನ ಹೆಸರು ಕೇವಲ ಕುಮಾರ್‌ಎಂಬುದಾಗಿತ್ತು. ಅದ್ಯಾಕೆ ಹೆಸರಿನ ಜತೆ ಇನಿಶಿಯಲ್ ಇಲ್ಲ ಎಂದು ಅವರು ಕೇಳಿದಾಗ, ನನ್ನ ತಂದೆ ಇನಿಶಿಯಲ್ ಇಟ್ಟಿಲ್ಲ ಎಂದು ಉತ್ತರಿಸಿದ್ದೆ. ಆಗ ಅವರಾಡಿದ ಆ ಒಂದು ಮಾತು ನನ್ನನ್ನು ಈ ಹಂತಕ್ಕೆ ಬೆಳೆಸುವಲ್ಲಿ ಕಾರಣವಾಯಿತು.
‘‘ನಿಮ್ಮ ತಂದೆ ಹೆಸರನ್ನು ಮಾತ್ರ ಕೊಟ್ಟಿದ್ದಾರೆ. ಅದರ ಹಿಂದೆ ಮತ್ತು ಮುಂದೆ ನೀನು ಗಳಿಸಿಕೊಳ್ಳಬೇಕಾಗಿದೆ’’ ಎಂದು ಅವರು ಹೇಳಿದ ಮಾತು ನನ್ನ ಮನದಲ್ಲಿ ಅಚ್ಚೊತ್ತಿತ್ತು. ನಾನು ಕಲಾ ವಿಭಾಗವನ್ನು ಆಯ್ದುಕೊಂಡ ಕಾರಣ ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಪಿಎಚ್‌ಡಿ ನನ್ನ ಗುರಿಯಾಗಿತ್ತು. ಜತೆಗೆ ಕೆಎಎಸ್ ಅಥವಾ ಐಎಎಸ್ ಬರೆದರೆ ಅದೂ ನನ್ನ ಹೆಸರಿನ ಜತೆ ಇರಲಿದೆ ಎಂಬುದು ಮನದಲ್ಲಿ ದಿಟಗೊಂಡಿತ್ತು.
ಅಧಿಕಾರಿಯಾದರೂ ಅಧ್ಯಯನ ಬಿಡಲಿಲ್ಲ
2004ರಲ್ಲಿ ನಾನು ಕೆಎಎಸ್ ಉತ್ತೀರ್ಣನಾಗಿ, ಸಹಾಯಕ ಆಯುಕ್ತನಾಗಿ ಆಯ್ಕೆಯಾದೆ. ಉಡುಪಿಯಲ್ಲಿ ಪ್ರೊಬೆಷನರಿ ಹುದ್ದೆಯಲ್ಲಿ ಕೆಲಸ ಮಾಡಿ ಮೊದಲ ಪೋಸ್ಟಿಂಗ್ ಬಿಜಾಪುರದ ಇಂಡಿ ಉಪ ವಿಭಾಗದಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದೆ. ವೃತ್ತಿ ಬದುಕಿನ ಮೊದಲ ಹಾಗೂ ಜನಪರ ಸೇವೆಗೆ ನನ್ನನ್ನು ತೆರೆದುಕೊಂಡ ಅನುಭವ ಅದಾಗಿತ್ತು. ಬಳಿಕ ತುಮಕೂರಿನ ಉಪವಿಭಾಗದಲ್ಲಿ ಮೂರು ವರ್ಷಗಳ ಕಾಲ ಅಸಿಸ್ಟೆಂಟ್ ಕಮಿಷನರ್ ಆಗಿ ಮುಂದುವರಿದೆ. ಬಳಿಕ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದೆ. ಅಂದು ದೇ. ಜವರೇ ಗೌಡರು ನನ್ನ ಲೇಖನವನ್ನು ಗಮನಿಸಿ, ‘‘ನಿನ್ನ ಬರವಣಿಗೆ ನೋಡಿದರೆ ನಿನ್ನಲ್ಲಿ ಸಂಶೋಧನಾ ಪ್ರವೃತ್ತಿ ಕಾಣುತ್ತಿದೆ. ಯಾವುದಾದರೂ ಒಂದು ವಿಷಯದಲ್ಲಿ ಅಧ್ಯಯನ ಮಾಡಿ ಪಿಎಚ್‌ಡಿ ಮಾಡಬಹುದು’’ ಎಂದು ಹೇಳಿದ್ದ ಮಾತು ನಾನು ಮರೆತಿರಲಿಲ್ಲ. ಆದರೆ ಅಂದು ಮನದಲ್ಲಿ ಬಿತ್ತಿದ್ದ ಬೀಜ ಹಾಗೇ ಇತ್ತು. 2012ರಲ್ಲಿ ಅದರ ಬಗ್ಗೆ ಚಿಂತನೆ ಮಾಡಿದಾಗ ನನ್ನೊಳಗೆ ಬಿತ್ತಲಾಗಿದ್ದ ಬೀಜ ಮೊಳಕೆಯೊಡೆಯಲು ಕಾರಣವಾಯಿತು. ಹಾಗಾಗಿ ನಾನು ಅಧಿಕಾರಿಯಾಗಿದ್ದಾಗಲೇ ನನ್ನ ಅಧ್ಯಯನದ ದಾಹವನ್ನು ಮುಂದುವರಿಸಿದೆ. ‘ದಿ ರೋಲ್ ಆಫ್ ಇ ಗವರ್ನೆನ್ಸ್ ಇನ್ ಮಾರ್ಡನೈಸೇಸನ್ ಆಫ್ ಲ್ಯಾಂಡ್ ರೆಕಾರ್ಡ್ಸ್’ ಎಂಬ ವಿಷಯದಲ್ಲಿ ಐದು ವರ್ಷಗಳ ಕಾಲ ಅಧ್ಯಯನ ಮಾಡಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಪಡೆದೆ.
ಸಹಾಯಕ ಆಯುಕ್ತ, ಅಪರ ಜಿಲ್ಲಾಧಿಕಾರಿಯಿಂದ ಜಿ.ಪಂ. ಸಿಇಒವರೆಗೆ
ಸಹಾಯಕ ಆಯುಕ್ತನಾಗಿ, ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ನಾನು 2021ರಲ್ಲಿ ಐಎಎಸ್ ಆಗಿ ಆಯ್ಕೆಯಾಗಿದ್ದೆ. ಆ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದೇನೆ. ಜ್ಞಾನಕ್ಕೆ ಎಂದಿಗೂ ಕೊನೆ ಎಂಬುದಿಲ್ಲ. ನಮ್ಮ ಬದುಕು ಜ್ಞಾನಾರ್ಜನೆಯ ಕಾರಂಜಿಯಾಗಿರಬೇಕು. ಹಾಗಾಗಿ ನಾನು ನನ್ನ ಜ್ಞಾನಾರ್ಜನೆ, ಸಾಹಿತ್ಯ ಕೃಷಿ ಮುಂದುವರಿಸಿದೆ. ನಾವು ಮಾಡುವ ಕೆಲಸ ಪ್ರೀತಿಯಿಂದ ಕೂಡಿದ್ದು, ಪರಿಶುದ್ಧವಾಗಿರಬೇಕು ಎಂಬುದು ನನ್ನ ತಂದೆಯವರಿಂದ ನಾನು ಕಲಿತುಕೊಂಡಿದ್ದು. ಹಾಗಾಗಿಯೇ 2018ರಿಂದ ಆರಂಭಿಸಿ 2021ರ ವೇಳೆಗೆ ನಾನು ‘ದಿ ಅಡ್ವೆಂಟ್ ಆಫ್ ಡಿಜಿಟಲ್ ಗವರ್ನೆನ್ಸ್ ಇಂಪ್ಲಿಕೇಶನ್ಸ್ ಫಾರ್ ರೆಸ್ಪಾನ್ಸಿವ್ ರೆವೆನ್ಯೂ ಅಡ್ಮಿನಿಸ್ಟ್ರೇಷನ್’ ಎಂಬ ಪುಸ್ತಕ ರೂಪದಲ್ಲಿ ನನ್ನ ಕೆಲಸದ ಮೇಲಿನ ಪ್ರೀತಿಯನ್ನು ಹೊರತಂದಿದ್ದೇನೆ. 2022ರ ಮಾರ್ಚ್‌ನಲ್ಲಿ ಮುಖ್ಯಮಂತ್ರಿಯಿಂದ ಅದು ಬಿಡುಗಡೆಗೊಂಡಿದೆ.
ಹೂವಿನ ಸೌಂದರ್ಯ ನೋಡಿ ಬೇರಿನ ಮಹತ್ವವನ್ನು ಮರೆತು ಬಿಡುತ್ತೇವೆ. ಆದರೆ ಹೂವು ಸುಂದರವಾಗಿರಬೇಕೆಂದರೆ ಬೇರು ಮುಖ್ಯ ಕಾರಣವಾಗಿರುತ್ತದೆ. ಅದರಂತೆ ನಾವೆಷ್ಟೇ ಸಾಮರ್ಥ್ಯವಂತರಾಗಿದ್ದರೂ, ಜ್ಞಾನವಂತರಾಗಿದ್ದರೂ, ಬುದ್ಧಿವಂತರಾಗಿದ್ದರೂ, ನಮ್ಮ ಸಾಧನೆಯ ಸಾರ್ಥಕತೆಗೆ ಬೇರೆಯವರ ಸಹಕಾರ ಬೇಕಾಗುತ್ತದೆ. ಅದು ಗುರುಹಿರಿಯರು, ತಂದೆತಾಯಿ, ಸ್ನೇಹಿತರೂ ಆಗಿರಬಹುದು. ನಾವು ಬಂದಿರುವ ದಾರಿಯನ್ನು ಯಾವತ್ತೂ ಮರೆಯಬಾರದು.
ಸಾಧನೆಗೆ ಬಡತನ ಅಡ್ಡಿಯಾಗದು
ಸಾಧನೆಗೆ ಕನಸು ಬೇಕು. ಗುರಿ ಬೇಕು. ಗುರಿಗೆ ತಕ್ಕ ಪರಿಶ್ರಮ ಅಗತ್ಯ. ಹಾಗಿದ್ದಾಗ ಮಾತ್ರವೇ ಸಾರ್ಥಕತೆಯ ಘಟ್ಟವನ್ನು ತಲುಪಲು ಸಾಧ್ಯ. ನನ್ನ ಗುರಿಗೆ ಅನುಗುಣವಾಗಿ ನಾನು ಆಯ್ಕೆ ಮಾಡುವ ದಾರಿಯು ಮುಖ್ಯವಾಗಿರುತ್ತದೆ. ಒಳ್ಳೆಯ ದಾರಿಯಲ್ಲಿ ಹೋಗಲು ಒಂದೇ ದಾರಿ ಅನಿವಾರ್ಯ. ಕೆಟ್ಟ ದಾರಿಗೆ ಹಲವು ದಾರಿಗಳಿರುತ್ತವೆ. ಜತೆಗೆ ನಮ್ಮ ಬದುಕಿನ ದಾರಿಯಲ್ಲಿ ನಮ್ಮ ಸ್ನೇಹಿತರ ಆಯ್ಕೆಯೂ ಪ್ರಮುಖವಾಗಿರುತ್ತದೆ. ನಾವು ಮಾಡುವ ಕೆಲಸವನ್ನು ಶುದ್ಧವಾದ ಮನಸ್ಸಿನಿಂದ ಮಾಡಿದರೆ ಸಾಧನೆಗೆ ಯಾವುದೇ ರೀತಿಯ ಅಡ್ಡಿ ಆತಂಕಗಳು ಕಾರಣವಾಗದು. ಬಡತನ ಯಾವತ್ತೂ ಸಾಧನೆಗೆ ಅಡ್ಡಿಯಲ್ಲ. ಬಡವನಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವನಾಗಿಯೇ ಉಳಿಯುವುದು ತಪ್ಪು. ಎಲ್ಲವೂ ಇದ್ದು ಸಾಧನೆ ಮಾಡುವುದಕ್ಕಿಂತಲೂ ಏನೂ ಇಲ್ಲದೆ ಗುರಿ ತಲುಪುವುದೇ ನಿಜವಾದ ಸಾಧನೆ ಎನ್ನುವುದು ನನ್ನ ನಂಬಿಕೆ.
ಯಶಸ್ಸಿಗೆ ಕೊನೆ ಎಂಬುದಿಲ್ಲ
ನಾನು ಗ್ರಾಮೀಣ ಪ್ರದೇಶದವ. ನಾನು ಕನ್ನಡ ಮಾಧ್ಯಮದಲ್ಲಿ ಕಲಿತದ್ದು. ನನಗೆ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಎಂಬ ನಕಾರಾತ್ಮಕ ಭಾವನೆ ನಮ್ಮಲ್ಲಿ ಇಲ್ಲದೆ, ನಮ್ಮ ಚಿಂತನೆಗಳು ಉತ್ಕೃಷ್ಟವಾಗಿದ್ದಾಗ ನಮ್ಮ ಸಾಧನೆಯ ಹಾದಿ ತೆರೆದುಕೊಳ್ಳುತ್ತಾ ಸಾಗುತ್ತದೆ. ನನ್ನ ಬದುಕನ್ನು ನಾನೇ ವಿನ್ಯಾಸ ಮಾಡಿಕೊಳ್ಳಬೇಕು. ನಮ್ಮ ಜೀವನಕ್ಕೆ ನಾವೇ ಜವಾಬ್ದಾರರು. ಯಶಸ್ಸಿಗೆ ಸಾಧನೆಗೆ ಅಂತ್ಯ ಎಂಬುದಿಲ್ಲ. ನಮ್ಮ ಕೊನೆಯ ಉಸಿರಿನವರೆಗೂ ಸಾಧಿಸಲು ಹಲವಾರು ಅವಕಾಶ, ಸಂದರ್ಭಗಳಿರುತ್ತವೆ. ನಾವು ಯಶಸ್ಸು ಪಡೆಯುವುದು ಮುಖ್ಯವಲ್ಲ. ಬದಲಾಗಿ ಸಾಧನೆಯನ್ನು ಜತೆ ಉಳಿಸಿಕೊಂಡು ಹೋಗುವುದು ಅತೀ ಮುಖ್ಯ. ನಮ್ಮ ಬದುಕು ಇನ್ನೊಬ್ಬರಿಗೆ ಪ್ರಯೋಜನಕ್ಕೆ ಬರಬೇಕೆಂದರೆ ಸದಾ ನಾವು ಕಲಿಕೆಯಲ್ಲಿ ತೊಡಗಿಸಿಕೊಂಡಿರಬೇಕು. ಹಾಗಾಗಿಯೇ ನಾನು ನನ್ನ ಬದುಕಿಗೊಂದು ನೆಲೆಯಾಗಿ ಉದ್ಯೋಗ ದೊರಕಿದ ಮೇಲೂ ನನ್ನ ಕಲಿಕೆ, ಅಧ್ಯಯನವನ್ನು ಬಿಟ್ಟಿಲ್ಲ. ಕಲಿಕೆಗೆ ಅಂತ್ಯ ಎಂಬುದೇ ಇಲ್ಲ. ಇದುವೇ ನನ್ನ ಬದುಕಿನ ಹಾದಿಯ ರಹಸ್ಯ.