ಬಿಲ್ಕಿಸ್ ಬಾನು ಭಾರತಾಂಬೆಯ ಮಗಳಲ್ಲವೇ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಜವಾದ ಉದ್ದೇಶ ಕೂಡಿಗಳಿಸಿದ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸುವುದು ಹಾಗೂ ಭ್ರಾತೃತ್ವದ ಆಧಾರದಲ್ಲಿ ಈ ದೇಶವನ್ನು ಸಮೃದ್ಧಿ ಹಾಗೂ ಸಮಾನತೆಯ ಕಡೆಗೆ ಕೊಂಡೊಯ್ಯುವುದು ಆಗಿರಬೇಕಿತ್ತು. ಆದರೆ ಈ ಸಂದರ್ಭವನ್ನು ಸಂಘಪರಿವಾರ ಮತ್ತು ಮೋದಿ ನೇತೃತ್ವದ ಬಿಜೆಪಿ ಸರಕಾರಗಳು ಬಳಸಿಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಅದರ ಉದ್ದೇಶ ಮತ್ತು ಸಂದೇಶ ಬೇರೆಯದೇ ಇರುವಂತೆ ಕಾಣುತ್ತಿದೆ. ಭಾರತವನ್ನು ಒಂದು ಸರ್ವಧರ್ಮ ಸಮಭಾವದ, ಪ್ರಜಾತಾಂತ್ರಿಕ ಗಣರಾಜ್ಯವನ್ನಾಗಿ ಕಟ್ಟಿಕೊಳ್ಳಬೇಕೆಂಬ ಸಾಂವಿಧಾನಿಕ ಆಶಯಕ್ಕೆ ತದ್ವಿರುದ್ಧವಾಗಿ ಭಾರತವನ್ನು ದ್ವೇಷಾಧಾರಿತ ಹಾಗೂ ತಾರತಮ್ಯಗಳನ್ನು ಆಧರಿಸಿದ ಬ್ರಾಹ್ಮಣಶಾಹಿ ಹಿಂದೂರಾಷ್ಟ್ರವನ್ನಾಗಿ ಮರುಕಟ್ಟಬೇಕೆನ್ನುವ ಸಂಘಪರಿವಾರದ ಆಶಯವನ್ನು ಹಲವಾರು ಸಂಕೇತ ಹಾಗೂ ನಡೆಗಳ ಮೂಲಕ ಪ್ರತಿಪಾದಿಸುವುದಕ್ಕೆ ಬಿಜೆಪಿ ಸರಕಾರ ಸ್ವಾತಂತ್ರ್ಯದ ಅಮೃತಮಹೋತ್ಸವ ಸಂದರ್ಭವನ್ನು ಬಳಸಿಕೊಳ್ಳುತ್ತಿರುವಂತಿದೆ.
ಒಂದೆಡೆ ಸಾವರ್ಕರ್ ಅವರನ್ನು ಭಾರತದ ಪಿತಾಮಹ ಎಂದು ಸ್ಥಾಪಿಸಲು ಮೋದಿ ಸರಕಾರ ಪ್ರಯತ್ನಪಡುತ್ತಿದ್ದರೆ ಮತ್ತೊಂದೆಡೆ ಗುಜರಾತ್‌ನ ಬಿಜೆಪಿ ಸರಕಾರ 2002ರ ಗುಜರಾತ್ ನರಮೇಧದಲ್ಲಿ ಬಿಲ್ಕಿಸ್ ಬಾನುರನ್ನು ಸಾಮೂಹಿಕ ಅತ್ಯಾಚಾರ ಮಾಡಿದ ಅಪರಾಧ ಸಾಬೀತಾಗಿ ಶಿಕ್ಷೆ ಅನುಭವಿಸುತ್ತಿದ್ದ 11 ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡಿ ಈ ದೇಶದ ಆತ್ಮಸಾಕ್ಷಿಗೆ, ತಾರತಮ್ಯ ರಹಿತವಾದ ಕಾನೂನು ಬದ್ಧ ಪ್ರಜಾತಾಂತ್ರಿಕ ಆಡಳಿತ ವ್ಯವಸ್ಥೆಗೆ ಮತ್ತು ಸಮಾಜದ ನಾಗರಿಕ ಮೌಲ್ಯಗಳಿಗೇ ಸವಾಲನ್ನು ಹಾಕಿದೆ. 2002ರಲ್ಲಿ ಗುಜರಾತಿನಲ್ಲಿ ಸಂಘಪರಿವಾರದ ಅಂಗಸಂಸ್ಥೆಗಳು ಮುಸ್ಲಿಮರ ಮೇಲೆ ನರಮೇಧ ನಡೆಸಿದವು. ಸಾವಿರಾರು ಮುಸ್ಲಿಮರ ಕಗ್ಗೊಲೆಯಾಯಿತು. ಮುಸ್ಲಿಮರ ಆಸ್ತಿಪಾಸ್ತಿಗಳನ್ನು ನಾಶಮಾಡುವುದು ಹಾಗೂ ಮುಸ್ಲಿಮ್ ಮಹಿಳೆಯರ ಮೇಲೆ ಕ್ರೂರ ಅತ್ಯಾಚಾರ ಎಸಗುವುದು ಕೂಡ ''ಮುಸ್ಲಿಮ್ ಸಮುದಾಯಕ್ಕೆ ಪಾಠ ಕಲಿಸುವ'' ಯೋಜನೆಯ ಭಾಗವಾಗಿ ನಡೆಯಿತು. ಈ ಯೋಜಿತ ನರಮೇಧದ ಭಾಗವಾಗಿಯೇ ಬಿಲ್ಕಿಸ್ ಬಾನು ಎಂಬ 21 ವಯಸ್ಸಿನ ಹಾಗೂ ಆಗ ಐದು ತಿಂಗಳ ಗರ್ಭಿಣಿಯೂ ಆಗಿದ್ದ ಮುಸ್ಲಿಮ್ ಮಹಿಳೆಯ ಮೇಲೆ 11 ಮಂದಿ ಸಂಘ ಪರಿವಾರದ ಕಾರ್ಯಕರ್ತರು ಸಾಮೂಹಿಕ ಅತ್ಯಾಚಾರ ಮಾಡಿದರು. ಆಕೆಯ ಜೊತೆಗಿದ್ದ ಮೂರುವರ್ಷದ ಮಗನ ಜೊತೆಗೆ ಆಕೆಯ ಜೊತೆ ಜೀವ ಉಳಿಸಿಕೊಳ್ಳಲು ಓಡಿಹೋಗುತ್ತಿದ್ದ ಆರು ಜನರನ್ನು ಬಿಲ್ಕಿಸ್ ಬಾನು ಎದುರಿಗೇ ಕಗ್ಗೊಲೆ ಮಾಡಿದರು. ಅವರೆಲ್ಲರೂ ಬಿಲ್ಕಿಸ್ ಬಾನುವಿನ ಊರಿನವರೇ ಆಗಿದ್ದರು. ಒಬ್ಬ ಸಹಜೀವಿಯನ್ನು ಕಾರಣವೇ ಇಲ್ಲದೆ ಕೇವಲ ಮುಸ್ಲಿಮ್ ಎನ್ನುವ ಕಾರಣಕ್ಕೆ ಅತ್ಯಾಚಾರ ಮಾಡಿ ಕಗ್ಗೊಲೆ ಮಾಡಲಾಯಿತು. ಇದು ಮಾನವ ಧರ್ಮದ ವೈಫಲ್ಯವಾದರೆ ನಂತರ ಕಾನೂನೂ ವಿಫಲವಾಯಿತು.
ಬಿಲ್ಕಿಸ್ ಬಾನು ಅವರ ದೂರನ್ನು ಠಾಣೆಯಲ್ಲಿ ಸ್ವೀಕರಿಸಲೂ ಗುಜರಾತ್ ಪೊಲೀಸರು ಸಿದ್ಧರಿರಲಿಲ್ಲ. ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಂದಾಜಿನ ಪ್ರಕಾರ ಗುಜರಾತ್ ನರಮೇಧದ ಸಂದರ್ಭದಲ್ಲಿ ಬಾಧಿತರು ನೀಡಿದ ಅಂದಾಜು 4,500ಕ್ಕೂ ಹೆಚ್ಚು ದೂರುಗಳನ್ನು ಗುಜರಾತ್ ಪೊಲೀಸರು ನಿರಾಕರಿಸಿದ್ದರು. ಅಂತಿಮವಾಗಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿ ತನಿಖೆಯನ್ನು ಸಿಬಿಐಗೆ ವಹಿಸಿ, ವಿಚಾರಣೆಯನ್ನು ಗುಜರಾತ್‌ನಲ್ಲಿ ಮಾಡದೆ ಮುಂಬೈನ ಸಿಬಿಐ ಕೋರ್ಟಿನಲ್ಲಿ ನಡೆಸಬೇಕೆಂದು ಆದೇಶಿಸಿತು. ಸಿಬಿಐ ತನಿಖೆಯಲ್ಲಿ ಬಿಲ್ಕಿಸ್ ಬಾನುವಿನ ಅತ್ಯಾಚಾರ ಹಾಗೂ ಇತರ ಆರು ಜನರ ಹತ್ಯೆಯಲ್ಲಿ 11 ಜನರ ಅಪರಾಧ ಸಾಬೀತಾಯಿತು. 2008ರಲ್ಲಿ ಆ ಅಪರಾಧಿಗಳೆಲ್ಲರಿಗೂ ಜೀವಾವಧಿ ಶಿಕ್ಷೆಯಾಯಿತು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸಹ ಈ ಶಿಕ್ಷೆಯನ್ನು ಎತ್ತಿಹಿಡಿದವು. ಇದೀಗ ಬಿಲ್ಕಿಸ್ ಬಾನುವನ್ನು ಅತ್ಯಾಚಾರ ಮಾಡಿದ ಹಾಗೂ ಇತರರನ್ನು ಕೊಲೆ ಮಾಡಿದ 11 ಅಪರಾಧಿಗಳನ್ನು ಗುಜರಾತಿನ ಬಿಜೆಪಿ ಸರಕಾರ 'ಸನ್ನಡತೆ'ಯ ಆಧಾರದ ಮೇಲೆ ಬಿಡುಗಡೆ ಮಾಡಿದೆ. ಬಿಡುಗಡೆ ಅರ್ಜಿಯನ್ನು ಪರಿಶೀಲನೆ ಮಾಡಲು ರಚಿಸಲಾದ ಸರಕಾರಿ ಸಮಿತಿಯಲ್ಲಿ ಇದ್ದ ಐವರೂ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರೇ ಆಗಿದ್ದರು. ಆ ಸಮಿತಿಯು ಸರ್ವಸಮ್ಮತಿಯಿಂದ ಬಿಡುಗಡೆಯನ್ನು ಶಿಫಾರಸು ಮಾಡಲು ಅನುಸರಿಸಿದ ಮಾರ್ಗಸೂಚಿಗಳ್ಯಾವುದನ್ನೂ ಬಹಿರಂಗಗೊಳಿಸಿಲ್ಲ. ಸಿಆರ್‌ಪಿಸಿ ಕಾಯ್ದೆಗಳ ಪ್ರಕಾರ ಸಿಬಿಐ ಕೋರ್ಟಿನಿಂದ ಶಿಕ್ಷೆಗೊಳಗಾದ ಅಪರಾಧಿಗಳನ್ನು ಬಿಡುಗಡೆ ಮಾಡುವ ಮುನ್ನ ಕೇಂದ್ರ ಸರಕಾರದ ಅನುಮತಿ ಕಡ್ಡಾಯ. ಅದನ್ನು ಈ ಸಮಿತಿ ಅನುಸರಿಸಿಲ್ಲ. ಹೀಗೆಯೇ ಸನ್ನಡತೆಯ ಆಧಾರದಲ್ಲಿ ಬಿಡುಗಡೆಯ ಅವಕಾಶವು ಅತ್ಯಾಚಾರದ ಆರೋಪಿಗಳಿಗೆ ಅನ್ವಯಿಸುವುದಿಲ್ಲವೆಂದು 1992ರ ಗುಜರಾತ್ ಸರಕಾರದ ಸುತ್ತೋಲೆ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಮಾನದಂಡಗಳು ಸ್ಪಷ್ಟಪಡಿಸುತ್ತವೆ.
ಈ ಮಾನದಂಡಗಳನ್ನು ಬಿಲ್ಕಿಸ್ ಬಾನು ಅತ್ಯಾಚಾರಿಗಳಿಗೆ ಸಮಿತಿ ಅನ್ವಯಗೊಳಿಸಲೇ ಇಲ್ಲ. ಅಷ್ಟು ಮಾತ್ರವಲ್ಲದೆ ಇಂತಹ ಹೀನಾಯ ಅಪರಾಧ ಮಾಡಿದವರನ್ನು ಬಿಡುಗಡೆ ಮಾಡಿದರೆ ಅದರಿಂದ ಹಾನಿಗೊಳಗಾದವರ ಮೇಲೆ ಹಾಗೂ ಒಟ್ಟಾರೆ ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ಸಮಿತಿ ಪರಿಗಣಿಸಲೇ ಇಲ್ಲ. ಬದಲಿಗೆ ಸಮಿತಿಯ ಸದಸ್ಯರಾಗಿದ್ದ ಬಿಜೆಪಿ ಶಾಸಕರೊಬ್ಬರು ಹೇಳಿರುವಂತೆ ಅಪರಾಧಿಗಳೆಲ್ಲ ಬ್ರಾಹ್ಮಣರು ಹಾಗೂ ಸಂಸ್ಕಾರವಂತರು ಮತ್ತು ಸನ್ನಡತೆಯುಳ್ಳವರು ಎಂಬುದು ಅವರ ಬಿಡುಗಡೆಗೆ ಮಾನದಂಡವಂತೆ. ಅವರೆಲ್ಲರೂ ಸಂಘಪರಿವಾರದ ಸಿದ್ಧಾಂತಕ್ಕೆ ಸಮೀಪವಾಗಿದ್ದವರು ಮತ್ತು ಈ ದೇಶವನ್ನು ಹಿಂದೂರಾಷ್ಟ್ರ ಮಾಡಬೇಕೆಂದರೆ ''ಮುಸ್ಲಿಮರನ್ನು ನಿವಾರಿಸಿಕೊಳ್ಳಬೇಕು'' ಎಂಬ ರಾಜಕೀಯ ಚಿಂತನೆಯುಳ್ಳವರು ಎಂಬುದು ಮತ್ತೊಂದು ಮಾನದಂಡವಾಗಿರುವಂತೆ ಕಾಣುತ್ತದೆ. ಏಕೆಂದರೆ ಇದೇ ಸಂದರ್ಭದಲ್ಲಿ ತಾವು ಮಾಡಿದ ಹಾಗೂ ಮಾಡದ ಅಪರಾಧಗಳಿಗೆ ಶಿಕ್ಷೆ ಅನುಭವಿಸುತ್ತಿರುವ ಸಾವಿರಾರು ಜನ ಮುಸ್ಲಿಮರು ಮತ್ತು ದಲಿತರು ಹಾಗೂ ಸಂಘಪರಿವಾರಕ್ಕೆ ಸೇರಿಲ್ಲದವರು ಕೂಡ ಶಿಕ್ಷೆ ವಿನಾಯಿತಿಗೆ ಅರ್ಜಿ ಹಾಕಿಕೊಂಡಿದ್ದಾರೆ. ಆದರೆ ಅಂತಹ ಶೇ.98 ಅರ್ಜಿಗಳನ್ನು ಸರಕಾರಗಳು ಕಾರಣವನ್ನೇ ಕೊಡದೆ ತಿರಸ್ಕರಿಸುತ್ತವೆ.
ಬಿಲ್ಕಿಸ್ ಬಾನುವಿನ ರೀತಿಯೇ ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದ ನಿರ್ಭಯಾ ಪ್ರಕರಣದ ಅಪರಾಧಿಗಳು ನೇಣುಶಿಕ್ಷೆಗೆ ಗುರಿಯಾಗುತ್ತಾರೆ ಅಥವಾ ಹೈದರಾಬಾದಿನಲ್ಲಿ ಒಬ್ಬ ಮೇಲ್ಜಾತಿ ಹೆಣ್ಣು ಮಗಳು- ದಿಶಾ- ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾಗಿ ಕೊಲೆಯಾದಾಗ ಬಂಧಿತರಾದ ಆರೋಪಿಗಳನ್ನು ವಿಚಾರಣೆ ನಡೆಸಿ ಅಪರಾಧ ಸಾಬೀತಾಗುವ ಮುನ್ನವೇ ಪೊಲೀಸರು ಕೊಂದುಹಾಕುತ್ತಾರೆ. ಇಡೀ ಸಮಾಜ ಹಾಗೂ ಸಂಘಪರಿವಾರ ಅದನ್ನು ಸಂಭ್ರಮಿಸುತ್ತದೆ. ಆದರೆ ಹಾಥರಸ್‌ನಲ್ಲಿ ದಲಿತ ಯುವತಿಯನ್ನು ಠಾಕೂರ್ ಸಮುದಾಯದ ಯುವಕರು ಅತ್ಯಾಚಾರ ಮಾಡಿ ಕೊಂದುಹಾಕಿದಾಗ ಇಡೀ ಬಿಜೆಪಿ ಪ್ರಭುತ್ವವೇ ಆರೋಪಿಗಳ ರಕ್ಷಣೆಗೆ ನಿಲ್ಲುತ್ತದೆ. ಉನ್ನಾವೊನಲ್ಲಿ ಬಿಜೆಪಿಯ ಮುಖಂಡರೇ ಅತ್ಯಾಚಾರ ಆರೋಪದಲ್ಲಿ ಸಿಲುಕಿದಾಗ ಆರೋಪ ಹೊರಿಸಿದವರ ಮತ್ತು ಸಾಕ್ಷಿಗಳ ನಿಗೂಢ ಹತ್ಯೆಯಾಗುತ್ತದೆ. ಆದರೆ ನಿರ್ಭಯಾ ಅಥವಾ ದಿಶಾ ಅತ್ಯಾಚಾರ ಪ್ರಕರಣದಲ್ಲಿ ಈ ದೇಶದ ಕಾನೂನು ಹಾಗೂ ನಾಗರಿಕ ಸಮಾಜ ಸ್ಪಂದಿಸುವ ರೀತಿಯಲ್ಲಿ ಒಬ್ಬ ಮನೀಶಾ ಅಥವಾ ಬಿಲ್ಕಿಸ್ ಬಾನುವಿನ ಪ್ರಕರಣದಲ್ಲಿ ಏಕೆ ಸ್ಪಂದಿಸುವುದಿಲ್ಲ. ಬಿಲ್ಕಿಸ್ ಬಾನುವಿನ ಪ್ರಕರಣದಲ್ಲಿ ಕಾನೂನುಗಳೆಲ್ಲವನ್ನೂ ಉಲ್ಲಂಘಿಸಿ ಅಥವಾ ಬದಿಗೆ ಸರಿಸಿ ಅಪರಾಧಿಗಳನ್ನು ಬಿಡುಗಡೆ ಮಾಡಿದರೆ ಸಂಘ ಪರಿವಾರ ಅವರಿಗೆ ಹಾರ ತುರಾಯಿ ಹಾಕಿ ಸಿಹಿ ಹಂಚಿ ಬರಮಾಡಿಕೊಳ್ಳುತ್ತದೆ. ಅವರನ್ನು ಸ್ವಾತಂತ್ರ್ಯಯೋಧರಂತೆ ನಡೆಸಿಕೊಳ್ಳುತ್ತದೆ.
ಕೆಲವು ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಎಂಟು ವರ್ಷದ ಹೆಣ್ಣು ಮಗಳನ್ನು ನಿರಂತರವಾಗಿ ಅತ್ಯಾಚಾರ ಮಾಡಿ ಕೊಂದ ಆರೋಪಿಗಳನ್ನು ಬಿಜೆಪಿ ಮತ್ತು ಸಂಘಪರಿವಾರದವರು ಸಮರ್ಥಿಸಿ ನಡೆಸಿದ ಮೆರವಣಿಗೆಯಲ್ಲಿ ರಾಷ್ಟ್ರಧ್ವಜವನ್ನು ಪ್ರಮುಖವಾಗಿ ಬಳಸಿಕೊಂಡಿದ್ದರು. ಬಿಲ್ಕಿಸ್ ಬಾನು ತನ್ನ ಹೇಳಿಕೆಯಲ್ಲಿ ಇಡೀ ದೇಶವನ್ನು ಪ್ರಶ್ನಿಸಿದಂತೆ ಈ ದೇಶ ಆಕೆಯನ್ನು ಮುಸ್ಲಿಮ್ ಆಗಿ ಹುಟ್ಟಿರುವುದಕ್ಕಾಗಿ ಶಿಕ್ಷಿಸುತ್ತಿದೆಯೇ? ಈ ದೇಶದಲ್ಲಿ ಮೇಲ್ಜಾತಿ ಹಿಂದೂಗಳಿಗೆ ಒಂದು ಕಾನೂನು, ದಲಿತ-ಶೂದ್ರ-ಮುಸ್ಲಿಮರಿಗೆ ಮತ್ತೊಂದು ಕಾನೂನು ವ್ಯವಸ್ಥೆ ಜಾರಿಯಾಗುತ್ತಿದೆಯೇ? ದೇಶದ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ಭಾರತ ತಾರತಮ್ಯವನ್ನು ಆಧರಿಸಿದ, ಮನುಸ್ಮತಿಯನ್ನು ಆಧರಿಸಿದ ಸಮಾಜಕ್ಕೆ ಮರಳುತ್ತಿದೆಯೇ? ಈ ದೇಶದ ಮನೀಶಾ, ಬಿಲ್ಕಿಸ್ ಬಾನು ಭಾರತಾಂಬೆಯ ಮಕ್ಕಳಲ್ಲವೇ? ಇದಕ್ಕೆ ಉತ್ತರಿಸದ ಭಾರತ ಒಂದು ದೇಶವಾಗಿ, ನಾಗರಿಕ ಸಮಾಜವಾಗಿ ಉಳಿದು ಬೆಳೆಯಲು ಸಾಧ್ಯವೇ?