varthabharthi


ತುಂಬಿ ತಂದ ಗಂಧ

ಪ್ರೀತಿಯಲ್ಲಿ ಗೆದ್ದು ಬದುಕಿನಲ್ಲಿ ಸೋತ 'ಸೂಪರ್' ಜೋಡಿ

ವಾರ್ತಾ ಭಾರತಿ : 21 Aug, 2022
ಕೆ.ಪುಟ್ಟಸ್ವಾಮಿ

ಈ ಸೂಪರ್ ಜೋಡಿಯದು ಅತ್ಯಂತ ದುರಂತದ ಕತೆ. ಆದರೆ ಅವರು ಬದುಕಿನುದ್ದಕ್ಕೂ ಪರಸ್ಪರ ಪ್ರೀತಿ ಗೌರವದಿಂದ ಬದುಕಿ, ನೋವು ಸಂಕಟಗಳ ನಡುವೆಯೂ ಪ್ರೀತಿಯನ್ನು ಆಲಂಗಿಸಿ ಮನುಷ್ಯ ಘನತೆಯನ್ನು ಎತ್ತಿ ಹಿಡಿದರು. ಅಸೀಮ ಪ್ರೀತಿ, ಅನುಪಮ ತ್ಯಾಗದ ಪ್ರತೀಕ ಅವರ ಬದುಕು.


ಪ್ರೀತಿ, ಪ್ರೇಮ, ಪ್ರಣಯ, ತ್ಯಾಗ, ದುರಂತ- ಇವು ಚಲನ ಚಿತ್ರರಂಗ ದ ಯಾವತ್ತೂ ಆಕರ್ಷಣೆಯ ವಸ್ತುಗಳು. ಕಾಲಕಾಲಕ್ಕೆ ಈ ವಸ್ತುಗಳು ಭಿನ್ನ ಭಿನ್ನ ನಿರೂಪಣೆಯಲ್ಲಿ ರಸಿಕರನ್ನು ಸೆಳೆಯುತ್ತಲೇ ಬಂದಿವೆ. ಇಂಥ ಚಿತ್ರಗಳಲ್ಲಿನ ದುರಂತಕ್ಕೆ ಪ್ರೇಕ್ಷಕ ಮರುಗಿದ್ದಾನೆ. ಸುಖಾಂತ್ಯಕ್ಕೆ ಮುದಗೊಂಡಿದ್ದಾನೆ. ಅಲ್ಲಿನ ಪಾತ್ರಗಳ ಭಾವಯಾನದಲ್ಲಿ ಮಿಂದೆದ್ದಿದ್ದಾನೆ. ಆದರೆ ಅನೇಕ ಪ್ರಕರಣಗಳಲ್ಲಿ ಚಲನಚಿತ್ರಗಳ ಪ್ರೇಮದ ಕಥೆಯ ದುರಂತವನ್ನು ಮೀರಿಸುವ ಘಟನೆಗಳು ನಿಜಜೀವನದಲ್ಲೂ ನಡೆದು ಹೋಗಿವೆ. ತಾವು ನಟಿಸಿದ ದುರಂತ ಪಾತ್ರಗಳನ್ನು ಮತ್ತೊಮ್ಮೆ ಬದುಕಿನಲ್ಲಿಯೇ ಜೀವಿಸಿದ ಪ್ರಕರಣಗಳಿಗೆ ಚಿತ್ರರಂಗ ಸಾಕ್ಷಿಯಾಗಿದೆ. ಅಂಥ ಗಾಢ ದುರಂತದ ಪ್ರೀತಿಯ ಕಥೆಗಳಲ್ಲಿ ಕ್ರಿಸ್ಟಫರ್ ರೀವ್ ಮತ್ತು ಡಾನಾ ಮೊರೊಸಿನಿ ಬದುಕು ಒಂದು ಮನಕಲಕುವ ದಾರುಣ ಕಥಾನಕ. ಇವರ ಬದುಕಿನ ದುರಂತಕ್ಕೆ ಹೋಲಿಸಿದರೆ, ತೆರೆಯ ಮೇಲಿನ ದುರಂತ ಪೇಲವ ಎನ್ನುವಷ್ಟರಮಟ್ಟಿಗೆ ಅದೊಂದು ಗಾಢ ವಿಷಾದಗೀತೆ.

ಕ್ರಿಸ್ಟಫರ್ ರೀವ್ ಎಂದರೆ ಅತಿಮಾನುಷ ಶಕ್ತಿಯ ಸೂಪರ್‌ಮ್ಯಾನ್ ಪಾತ್ರವನ್ನು ನಿರ್ವಹಿಸಿದ ಜಗದ್ವಿಖ್ಯಾತ ಕಲಾವಿದ. ಆತ ನಿಜಕ್ಕೂ ದೊಡ್ಡ ಕಲಾವಿದ. ನ್ಯೂಯಾರ್ಕ್ ನ ಸಂಸ್ಕೃತಿಯ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದವನು(25.9.1952). ತಂದೆ ಪತ್ರಕರ್ತ ಮತ್ತು ತಾಯಿ ಶಿಕ್ಷಕಿ ಮತ್ತು ಸಾಹಿತಿ. ಓದು, ಆಟ ಮತ್ತು ಕಲಾ ಚಟುವಟಿಕೆಗಳಲ್ಲಿ ಮುಂದಿದ್ದ ಆತ ಬೆನ್ನಟ್ಟಿದ ಆಸಕ್ತಿಗಳು ಹಲವಾರು. ಆತ ಇಷ್ಟಪಟ್ಟ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಪರಿಯನ್ನು ಕಂಡವರಿಗೆ ಆತ ತಾನು ಬಯಸಿದ್ದನ್ನು ಸಾಧಿಸಬಲ್ಲ ಎಂಬ ವಿಶ್ವಾಸ ಮೂಡುತ್ತಿತ್ತು. ಒಂಭತ್ತನೇ ವಯಸ್ಸಿಗೆ ನಟನಾಗಬೇಕೆಂಬ ಹಂಬಲ ಹೊತ್ತ ಆತ ಆ ರಂಗದಲ್ಲಿ ತೀವ್ರವಾಗಿ ತೊಡಗಿಸಿಕೊಂಡ. ರಂಗಭೂಮಿಯ ಗೀಳು ಹಿಡಿಸಿಕೊಂಡ. ಪ್ರೇಕ್ಷಕರನ್ನು ಸೆಳೆದ. ಆದರೆ ಶಿಕ್ಷಕರ ಮಾತಿನಂತೆ ಪದವಿ ಪಡೆಯಲು ಕಾಲೇಜು ಶಿಕ್ಷಣ ಮುಂದುವರಿಸಿ ಕಾರ್ನೆಲ್ ವಿಶ್ವವಿದ್ಯಾನಿಲಯದಿಂದ ಕಲಾ ಪದವಿ ಪಡೆದ. ಹಾರ್ವರ್ಡ್ ಥಿಯೇಟರ್ ತಂಡಕ್ಕೆ ಸೇರ್ಪಡೆಗೊಂಡ. ಆತನ ನಟನಾ ಚಾತುರ್ಯ ಕಂಡ ಖ್ಯಾತ ನಟಿ ಕ್ಯಾಥರಿನ್ ಹೆಪ್‌ಬರ್ನ್ ಬ್ರಾಡ್‌ವೇ ತನ್ನ ನಾಟಕವೊಂದರ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಳು. ಅರವತ್ತೇಳು ವರ್ಷದ ಹಿರಿಯ ನಟಿಯ ಮೊಮ್ಮಗನ ಪಾತ್ರದಲ್ಲಿ 22 ವರ್ಷದ ರೀವ್ ಕಾಣಿಸಿಕೊಂಡ. ಆತನ ಅಭಿನಯ ಕಂಡ ಹೆಪ್‌ಬರ್ನ್ ''ಮುಂದೆ ನೀನು ಖಂಡಿತಾ ಒಬ್ಬ ದೊಡ್ಡ ಕಲಾವಿದ ಆಗುತ್ತೀಯಾ. ನನ್ನ ಮುದಿ ವಯಸ್ಸಿನಲ್ಲಿ ನೋಡಿಕೋ'' ಎಂದು ಭವಿಷ್ಯ ನುಡಿದಿದ್ದಳಂತೆ.

ಈ ನಡುವೆ ಹಾಲಿವುಡ್‌ನಿಂದ ಅನೇಕ ಏಜೆಂಟ್‌ಗಳು ಪಾತ್ರಗಳನ್ನು ನೀಡಲು ಎಡತಾಕಿದಾಗ ಆತನ ರಂಗಭೂಮಿ ಶಿಕ್ಷಕ ಜಾನ್ ಹೌಸ್‌ಮನ್ ರೀವ್‌ನ ಭವಿಷ್ಯ ಉಜ್ವಲವಾಗುವುದನ್ನು ಗುರುತಿಸಿದ. ಒಮ್ಮೆ ಆತನನ್ನು ಕರೆದು ''ರೀವ್, ನೀನು ಈಗ ಒಬ್ಬ ಅಭಿಜಾತ ನಟ(ಕ್ಲಾಸಿಕಲ್ ಆ್ಯಕ್ಟರ್) ನಾಗಬೇಕಿರುವುದು ಮುಖ್ಯ. ಹಾಲಿವುಡ್‌ನ ಯಾವು ಯಾವುದೋ ಪಾತ್ರಗಳಲ್ಲಿ ನಟಿಸಬೇಡ. ಹಾಗೊಂದು ವೇಳೆ ಮಣಭಾರ ಹಣ ಕೊಟ್ಟರೆ ಮಾತ್ರ ಗೌಣವಾದ ಪಾತ್ರ ಮಾಡು'' ಎಂದನಂತೆ.

ರೀವ್‌ಗೆ ಅದೃಷ್ಟ ಬೇಗನೆ ಒಲಿಯಿತು. 1978ರಲ್ಲಿ ಪ್ರಖ್ಯಾತ ಕಾಮಿಕ್ ಹೀರೋ ಸೂಪರ್‌ಮ್ಯಾನ್ ಸಾಹಸ ಆಧಾರಿತ ಚಿತ್ರದ ನಾಯಕನ ಅನ್ವೇಷಣೆ ಯಲ್ಲಿ ಆಡಿಷನ್‌ಗೆ ಹೋದ ಕ್ರಿಸ್ಟಫರ್ ರೀವ್ ಪಾತ್ರಕ್ಕೆ ಆಯ್ಕೆಯಾದ. ಆರೂಕಾಲು ಅಡಿ ಮೀರಿದ, ಎತ್ತರ, ಹರವಾದ ಎದೆ, ಸ್ನಾಯುಯುಕ್ತ ವಾದ, ಹುರಿಗಟ್ಟಿದ ದೇಹ, ನಟನಾ ಪ್ರತಿಭೆಯಿದ್ದ ರೀವ್ ಆಯ್ಕೆಯಾದುದರಲ್ಲಿ ಆಶ್ಚರ್ಯವಿರಲಿಲ್ಲ. ಒಂಭತ್ತು ನಿಮಿಷ ಅವಧಿಯಿದ್ದ ಸೂಪರ್‌ಮ್ಯಾನ್ ತಂದೆಯ ಪಾತ್ರದಲ್ಲಿ ಮರ್ಲನ್ ಬ್ರಾಂಡೋ ಇದ್ದರೂ ಚಿತ್ರದಲ್ಲಿ ಎದ್ದು ಕಂಡಿದ್ದು ನಾಯಕ ರೀವ್. ಬಾಕ್ಸ್ ಆಫೀಸ್ ಗಳಿಕೆಯಲ್ಲಿ ದಾಖಲೆ ಸೃಷ್ಟಿಸಿದ ನಂತರ ದುರಂತದ ಘಟನೆ ನಡೆಯುವವರೆಗೂ ಕ್ರಿಸ್ಟಫರ್ ರೀವ್ ಬದುಕು ಏರುಗತಿಯಲ್ಲಿಯೇ ಸಾಗಿತು. ಸೂಪರ್‌ಮ್ಯಾನ್ ಪ್ರಸಿದ್ಧಿಯ ಹಿಂದೆಯೇ ಸಾಲು ಸಾಲು ಆ್ಯಕ್ಷನ್ ಚಿತ್ರಗಳು ಬಂದರೂ ಒಪ್ಪಿಕೊಳ್ಳದ ರೀವ್ ನಟನೆಗೆ ಸವಾಲಾಗಬಲ್ಲ ಪಾತ್ರಗಳನ್ನೇ ಆಯ್ಕೆ ಮಾಡಿಕೊಂಡ.ಜಗದ್ವಿಖ್ಯಾತಿ ಪಡೆದ ರೀವ್ ಎಂಬತ್ತರ ದಶಕದಲ್ಲಿ ಸೂಪರ್‌ಮ್ಯಾನ್‌ನ ಮತ್ತೆ ಮೂರು ಭಾಗಗಳಲ್ಲಿ ಅಲ್ಲದೆ 'ಸಂವೇರ್ ಇನ್ ಟೈಂ', 'ಡೆತ್‌ಟ್ರ್ಯಾಪ್', 'ದಿ ಬೋಸ್ಟಾನಿಯನ್‌ಸ್', 'ಅನ್ನಾ ಕರೆನಿನಾ' ಮುಂತಾದ ಚಿತ್ರಗಳಲ್ಲಿ ನಟಿಸಿ ತನ್ನ ಪ್ರತಿಭೆಯನ್ನು ಸಾಬೀತು ಪಡಿಸಿದ. ಜಗತ್ತಿನ ಖ್ಯಾತಿ ಗಳಿಸಿದ ಕಲಾವಿದನೊಬ್ಬ ತನ್ನ ಕನಸುಗಳನ್ನು ಜೀವಿಸುವ ರೀತಿಯಲ್ಲಿಯೇ ರೀವ್ ಬದುಕು ಸಾಗಿತು. ಆತ ಹಾಲಿವುಡ್‌ನ ಪ್ರತಿಷ್ಠಿತರ ಜೊತೆ ಹೆಜ್ಜೆ ಹಾಕಿದ. ಚಿತ್ರಕತೆಗಳನ್ನು ಚರ್ಚಿಸುತ್ತಿದ್ದ. ದುಬಾರಿ ಹೋಟೆಲುಗಳಲ್ಲಿ ಮೇಜವಾನಿ ನಡೆಸಿದ.ಜೊತೆಗೆ ತನಗಿಷ್ಟವಾದ ಹವ್ಯಾಸವನ್ನು ಬೆನ್ನು ಹತ್ತಲು ಅಗತ್ಯವಾದ ಸಂಪತ್ತನ್ನು ಕೂಡಿಹಾಕಿದ್ದ. ಇಂಥ ಸುಂದರ ಬದುಕಿಗೆ ಮನಗೆದ್ದ ಹೆಣ್ಣಿನ ಪ್ರವೇಶವಾಯಿತು.

1987ರಲ್ಲಿ ಡಾನಾ ಮೊರೊಸಿನಿ ಎಂಬ ನರ್ತಕಿ ಪಟ್ಟಣವೊಂದರ ಹೊಟೇಲೊಂದರ ವೇದಿಕೆಯಲ್ಲಿ ನರ್ತಿಸುತ್ತಾ ಹಾಡುತ್ತಿದ್ದಳು.ರಂಗಭೂಮಿಯೇ ತನ್ನ ಮೊದಲ ಆಯ್ಕೆ ಎಂದು ನಂಬಿದ್ದ ಕ್ರಿಸ್ಟಫರ್ ರೀವ್ ಆ ಹೊಟೇಲ್‌ನಲ್ಲಿ ಈ ದೃಶ್ಯವನ್ನು ವೀಕ್ಷಿಸುತ್ತಿದ್ದ.
ಡಾನಾ ಮೊರೊಸಿನಿ ಸಹ ರಂಗಭೂಮಿ ಹಿನ್ನೆಲೆಯಿಂದ ಬಂದವಳು. ನ್ಯೂಜೆರ್ಸಿಯಲ್ಲಿ ಹುಟ್ಟಿದ ಮೊರೊಸಿನಿ (17.3.1961) ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದು ಬಳಿಕ ಕ್ಯಾಲಿಫೋರ್ನಿಯಾದ ಕಲಾ ಸಂಸ್ಥೆಯಲ್ಲಿ ನಟನೆಯಲ್ಲಿ ಹೆಚ್ಚುವರಿ ಪದವಿ ಪಡೆದು ಗಾಯಕಿಯಾಗಿ, ರಂಗನಟಿಯಾಗಿ ಪ್ರಸಿದ್ಧಿಗೆ ಬಂದಿದ್ದಳು.
ಗಾಯನವನ್ನು ಮುಗಿಸಿ ವೇದಿಕೆಯ ಹಿಂದಿನ ಕೊಠಡಿಗೆ ತೆರಳಿದ ಡಾನಾ ಳನ್ನು ಕ್ರಿಸ್ ಹಿಂಬಾಲಿಸಿ ಹೋದ. ಅಪರಿಚಿತ ರಸಿಕರು ಯುವ ಗಾಯಕಿಯರ ಬೆನ್ನತ್ತಿ ಕಿರಿಕಿರಿ ಮಾಡುವುದು ಹೊಸದೇನಲ್ಲ. ಅಂಥ ವ್ಯಕ್ತಿಯನ್ನು ನಿರೀಕ್ಷಿಸಿದ್ದ ಡಾನಾಳಿಗೆ ಮೃದು ಮಾತಿನ, ಹಾಲಿವುಡ್‌ನ ನವಮನ್ಮಥನ ಸಭ್ಯತೆಯನ್ನು ಕಂಡು ಸೋಜಿಗವಾಯಿತು. ಸೂಪರ್‌ಮ್ಯಾನ್ ಚಿತ್ರದ ಮೃದು ಮಾತಿನ ಪತ್ರಕರ್ತ ಕೆಂಟ್‌ನ ಪ್ರತಿರೂಪದಂತೆಯೇ ರೀವ್ ಆಕೆಯ ಮುಂದೆ ನಿಂತಿದ್ದ. ತಾನು ಆಕೆಯ ಜೊತೆಯಲ್ಲಿ ಮಾತನಾಡುವ ಹಂಬಲ ವ್ಯಕ್ತಪಡಿಸಿದ. ಮೊದಲ ನೋಟದಲ್ಲಿಯೇ ಆಕೆಯ ಮೇಲೆ ಪ್ರೇಮವುಂಟಾಗಿರುವುದನ್ನು ಹಿಂಜರಿಕೆಯಿಲ್ಲದೆ ತೋಡಿಕೊಂಡ.

ಆದರೆ ಡಾನಾಳಿಗೆ ಸಂಶಯವಿತ್ತು. ತನ್ನನ್ನು ಒಲಿಸಿಕೊಳ್ಳುವ ಹೂಟವಿರಬಹುದೆಂದು ಭಾವಿಸಿದಳು. ಅಲ್ಲದೆ ಆಕೆ ಭೇಟಿಯಾದ ಮೊದಲ ಸುಂದರಾಂಗನೂ ಅವನಾಗಿರಲಿಲ್ಲ.. ತಣ್ಣನೆಯ ಪ್ರತಿಕ್ರಿಯೆ ತೋರಿದಳಷ್ಟೆ.
ಆದರೆ ರೀವ್ ಮತ್ತೆ ಮತ್ತೆ ಅವಳಿಗೆ ಕರೆಮಾಡಿದ ಮೇಲೆ ಆಕೆ ಆತನನ್ನು ಭೇಟಿಯಾದಳು. ತಿರುಗಾಟದಲ್ಲಿ ಪ್ರಣಯಾಂಕುರವಾಯಿತು. ಇಬ್ಬರೂ ಉತ್ಕಟವಾಗಿ ಪ್ರೀತಿಸಿದರು. ಅವರು ಜೊತೆಯಾಗಿ ಬಾಳತೊಡಗಿ ಎಷ್ಟೋ ವರ್ಷಗಳ ನಂತರ 1992ರಲ್ಲಿ ಮದುವೆ ಯಾಗುವ ವೇಳೆಗೆ ಒಂದು ಮಗುವೂ ಆಗಿತ್ತು. ಅದರ ಹಿಂದೆ ಮತ್ತೆರಡು ಮಕ್ಕಳು ಜನಿಸಿದರು.
ಯಾವುದೇ ಅಡೆತಡೆಯಿಲ್ಲದ, ಗುಮಾನಿ-ವ್ಯಾಜ್ಯ ಇಲ್ಲದ ಸುಖೀ ದಾಂಪತ್ಯ ಅವರದು. ತಮ್ಮ ತಮ್ಮ ವೃತ್ತಿ ಮುಂದುವರಿಸಿದ ದಂಪತಿ ಆಗಾಗ ಬಿಡುವು ಮಾಡಿಕೊಂಡು ಪ್ರವಾಸಹೋಗಿ ಮಕ್ಕಳೊಡನೆ ಕಾಲ ಕಳೆಯುತ್ತಿದ್ದರು. ಹಾಲಿವುಡ್ ಸೆಲೆಬ್ರಿಟಿಗಳಲ್ಲಿ ಅವರದು ಅಸೂಯೆಪಡುವಂಥ ದಾಂಪತ್ಯ. ಆಗಾಗ ಕೈ ಕೈ ಹಿಡಿದು ಸಾರ್ವಜನಿಕ ವಾಗಿಯೂ ಕಾಣಿಸಿಕೊಳ್ಳುತ್ತಿದ್ದ ಜನಪ್ರಿಯ ಜೋಡಿಯದು.
ಇಂಥ ಸುಂದರ ಬಾಳುವೆಯಲ್ಲಿ ದುರಂತವನ್ನು ಹೊತ್ತು ಕುದುರೆ ಯೊಂದು ಅವರ ಬಾಳಿನಲ್ಲಿ ಪ್ರವೇಶವಾಯಿತು.
ಡಾನಾಳನ್ನು ಭೇಟಿಯಾಗುವ ಮುನ್ನ 1985ರಲ್ಲಿ ಅಮೆರಿಕದ ಟೆಲಿವಿಷನ್‌ವೊಂದಕ್ಕೆ ಟಾಲ್‌ಸ್ಟಾಯ್ ಅವರ ಪ್ರಖ್ಯಾತ ಕಾದಂಬರಿ ಅನ್ನಾ ಕರೆನಿನಾ ಆಧರಿಸಿದ ಟೆಲಿಫಿಲಂನಲ್ಲಿ ಅನ್ನಾಳ ಪ್ರಿಯಕರ ಕೌಂಟ್ ಅಲೆಕ್ಸಿ ರಾನ್‌ಸ್ಕಿಯ ಪಾತ್ರವನ್ನು ರೀವ್ ನಿರ್ವಹಿಸಿದ. ಈ ಚಿತ್ರವನ್ನು ನಿರ್ಮಿಸುವಾಗ ಪಾತ್ರಕ್ಕೆ ಅಗತ್ಯವಾದ ಕುದುರೆ ಸವಾರಿಯನ್ನು ರೀವ್ ಕಲಿತ. ಡಾನಾ ಸಹ ಕುದುರೆ ಸವಾರಿ ನಿಪುಣೆ. ಮದುವೆಯಾದ ನಂತರ ಹೆಂಡತಿಯ ಕುದುರೆ ಸವಾರಿಯ ಮೋಹ ರೀವ್‌ನನ್ನೂ ಸೆಳೆಯಿತು. ಇಬ್ಬರೂ ನಿಯತವಾಗಿ ಕುದುರೆ ಸವಾರಿಗೆ ಹೋಗುತ್ತಿದ್ದರು.
ಯಾವುದೇ ಕಾರ್ಯವನ್ನು ಶ್ರದ್ಧೆಯಿಂದ ಮಾಡುವ ಜನ್ಮಜಾತ ಗೀಳು ಕುದುರೆ ಸವಾರಿಯಲ್ಲಿಯೂ ರೀವ್‌ನಲ್ಲಿ ಮರುಕಳಿಸಿತು. ಅದ್ವಿತೀಯ ಕುದುರೆ ಸವಾರನಾಗಬೇಕೆಂಬ ಹಂಬಲ ಬೆಳೆಯಿತು. ನಿಪುಣರಿಂದ ವಾರಕ್ಕೆ ಐದು ದಿನ ತರಬೇತಿ ಪಡೆಯತೊಡಗಿದ.
ಕುದುರೆಯನ್ನು ಅಡೆತಡೆಗಳ ಮೇಲೆ ನೆಗೆಸುವ ಅಪಾಯಕಾರಿ ಸಾಹಸ ಗಳನ್ನು ಕರಗತಮಾಡಿಕೊಳ್ಳತೊಡಗಿದ ರೀವ್‌ನಲ್ಲಿ ಅತಿಯಾದ ಆತ್ಮವಿಶ್ವಾಸ ಬೆಳೆಯಿತು. ಅಂಥ ಸಾಹಸಗಳನ್ನು ಕಲಿಯಲು ವರ್ಷಾನುಗಟ್ಟಲೆ ಸಮಯ, ಶ್ರಮ ಬೇಕು. ರೀವ್ ಅದನ್ನು ಬೇಗನೆ ಕಲಿತು ಅಚ್ಚರಿ ಮೂಡಿಸಿದ.
 1995ರ ಮೇ 27. ಕ್ರಿಸ್ ರೀವ್ ಪಾಲಿಗೆ ಅದೊಂದು ಕರಾಳದಿನ. ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ಗೋಡೆಯೊಂದನ್ನು ನೆಗೆಸಲು ಸವಾರಿ ಮಾಡುತ್ತಿದ್ದ ಕ್ರಿಸ್ ಕುದುರೆಯನ್ನು ವೇಗವಾಗಿ ಓಡಿಸಿಕೊಂಡು ಬಂದ.ಗೋಡೆಯನ್ನು ನೆಗೆಯಲು ನಿರಾಕರಿಸಿದ ಕುದುರೆಯು ಬೆದರಿ ತಟಕ್ಕನೆ ನಿಂತಿತು. ಆಯ ತಪ್ಪಿದ ಕ್ರಿಸ್ ರೀವ್ ಕುದುರೆಯ ಬೆನ್ನ ಮೇಲಿಂದ ಕಮಾನಿನಾಕಾರದಲ್ಲಿ ಎಗರಿ ಕೆಳಗೆ ಬಿದ್ದ. ಆರಡಿ ನಾಲ್ಕು ಇಂಚಿನ, 105 ಕೆ.ಜಿ. ತೂಕದ ನೀಳದೇಹದ ಮುಂದಲೆ ಮೊದಲು ನೆಲಕ್ಕೆ ಅಪ್ಪಳಿಸಿತು. ಪರಿಣಾಮ ಆತನ ಕುತ್ತಿಗೆಯ ಭಾಗದ ಬೆನ್ನುಮೂಳೆಯ ಎರಡು ಮತ್ತು ಮೂರನೆಯ ಕಶೇರು ಸಂಪೂರ್ಣವಾಗಿ ಜಜ್ಜಿಹೋದವು. ನರಮಂಡಲ ಸಂಪೂರ್ಣ ಜಖಂಗೊಂಡಿತು.

ಸಿನೆಮಾದ ಪಾತ್ರಗಳು, ಸನ್ನಿವೇಶಗಳು ಕ್ರಿಸ್ ಬದುಕಲ್ಲಿ ಪುನರಾವರ್ತನೆ ಗೊಂಡದ್ದು ಹೀಗೆ. ಅನ್ನಾ ಕರೆನಿನಾ ಚಿತ್ರದಲ್ಲಿಯೂ ಕೌಂಟ್ ರಾನ್‌ಸ್ಕಿಯು ಸಾರ್ವಜನಿಕ ಪ್ರದರ್ಶನದಲ್ಲಿ ತನ್ನ ಕುದುರೆಯನ್ನು ನೆಗೆಸಲಾರದ ದೃಶ್ಯವೊಂದಿದೆ. ಹಾಗೆಯೇ ಈ ಘಟನೆ ನಡೆಯುವ ಹಲವಾರು ತಿಂಗಳ ಹಿಂದೆ ದೇಹದ ಅಂಗಗಳ ಸ್ವಾಧೀನ ಕಳೆದುಕೊಂಡವನ ಪಾತ್ರಕ್ಕೆ ತಯಾರಿ ಮಾಡಿಕೊಳ್ಳಲು ರೀವ್ ಬೆನ್ನುಮೂಳೆ ಮುರಿತದ ರೋಗಿಗಳೊಡನೆ ಹಲವಾರು ದಿನ ಕಾಲ ಕಳೆದಿದ್ದ. ಅವರ ಸಂಕಷ್ಟಗಳು, ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದ. ನನಗೆ ಇಂಥ ಪರಿಸ್ಥಿತಿಯಿಲ್ಲವಲ್ಲ ಎಂಬ ಸಂತೃಪ್ತಭಾವದೊಡನೆ ಕ್ಲಿನಿಕ್‌ನಿಂದ ಬರುತ್ತಿದ್ದ. ಆದರೆ ಈ ಎರಡೂ ಘಟನೆಗಳನ್ನು ಈಗ ಮರು ಜೀವಿಸಿದ್ದ.

ಕುದುರೆಯಿಂದ ಕೆಳಗೆ ಬಿದ್ದ ಕ್ರಿಸ್ ಕೋಮಾಗೆ ಜಾರಿದ.ಹಲವು ದಿನಗಳ ನಂತರ ಪ್ರಜ್ಞೆ ಮರಳಿತು. ಗೆಳೆಯನೊಬ್ಬ ತಾನು ಕುದುರೆ ಏರಿದಾಗ ಗುಡ್‌ಲಕ್ ಹೇಳಿದ್ದನ್ನು ನೆನಪಿಸಿಕೊಂಡು ಹೇಳಿದ. ಗಾಳಿಯಲ್ಲಿ ಹಾರಿದ್ದು ನೆನಪಿತ್ತು. ಮತ್ತೇನಾಯಿತೋ ತಿಳಿಯದೆಂದ. ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದ ಕ್ರಿಸ್‌ಗೆ ವಾಸ್ತವ ಅರಿವಾಗತೊಡಗಿತು. ದೇಹ ಚಲನೆ ಕಳೆದುಕೊಂಡಿತ್ತು. ಗುರುತ್ವವನ್ನು ಪ್ರತಿರೋಧಿಸಿ ಗಾಳಿಯಲ್ಲಿ ತೇಲಿ, ದುರ್ಜನರನ್ನು ಸದೆಬಡಿದ ಸೂಪರ್‌ಮ್ಯಾನ್ ಪಾತ್ರದಲ್ಲಿ ಜೀವಿಸಿದ್ದ ರೀವ್ ಈಗ ಕೇವಲ ಹಲ್ಲುಜ್ಜಲು ಬ್ರಷ್ ಹಿಡಿಯುವ ಶಕ್ತಿಯನ್ನೂ ಕಳೆದುಕೊಂಡಿದ್ದ. ಯಂತ್ರಗಳ ಸಹಾಯದಿಂದ ಉಸಿರಾಡುತ್ತಿದ್ದ.

ಬ್ರಿಟಿಷ್ ನಾಟಕಕಾರ ಬ್ರಯಾನ್ ಕ್ಲಾರ್ಕ್ ಅವರ 'ಹೂಸ್ ಲೈಫ್ ಈಸ್ ಇಟ್ ಎನಿವೇ' ನಾಟಕದಲ್ಲಿ ಅಪಘಾತದಿಂದ ಶಿಲ್ಪಿಯೊಬ್ಬ ಕುತ್ತಿಗೆ ಯಿಂದ ಕೆಳಕ್ಕೆ ಸ್ವಾಧೀನಕಳೆದುಕೊಳ್ಳುತ್ತಾನೆ. ಮೆದುಳು ಕ್ರಿಯಾಶೀಲ ವಾಗಿರುವ ಆತನಿಗೆ ಬದುಕುವುದು ನರಕವೆನಿಸಿ ದಯಾಮರಣಕ್ಕೆ ತಾನೇ ವಾದಿಸುತ್ತಾನೆ. ಆ ವಾದವು ಪ್ರೇಕ್ಷಕನಿಗೂ ಯಮಯಾತನೆ ನೀಡುವ ಅನುಭವವಾಗುತ್ತದೆ.

ಕ್ರಿಸ್ ಸಂದರ್ಭದಲ್ಲೂ ಆದದ್ದು ಇದೇ. ಮಿದುಳು ಕ್ರಿಯಾಶೀಲವಾಗಿದೆ. ನೆನಪುಗಳು ಉಕ್ಕುತ್ತವೆ. ಜೀವಂತ ಶವವಾಗಿ ಬದುಕುವುದು ಬೇಡವೆನಿಸಿದೆ. ತನಗೆ ಮರಣ ಕೊಡಿ ಎಂದು ವೈದ್ಯರನ್ನು ಗದರಿಸಿ ಬೇಡುತ್ತಾನೆ. ಎದೆಗೆ ಅಳವಡಿಸಿರುವ ಉಸಿರಾಟದ ಯಂತ್ರ ತೆಗೆಯಲು ಹೇಳುತ್ತಾನೆ. ಡಾನಾಳಿಗೆ ತನ್ನಿಂದ ದೂರವಾಗಲು ಬೇಡಿಕೊಳ್ಳುತ್ತಾನೆ. ತನಗಿಷ್ಟವಾದ ಆಸಕ್ತಿಗಳ ಜೊತೆ ಕಾಲ ಕಳೆಯಲು ಸಕಲವೂ ಇದ್ದ ವ್ಯಕ್ತಿಯೊಬ್ಬನಿಗೆ ಇಂಥ ಕ್ರೂರ ಪರಿಸ್ಥಿತಿ ತನ್ನ ಸುತ್ತಮುತ್ತಲ ಜನರಿಗೆ ತಾನೊಂದು ಹೊರೆ ಅನಿಸಿದೆ. ತನ್ನನ್ನು ಕೊಲ್ಲದಿದ್ದರೆ, ಸಾಧ್ಯವಾದರೆ ಆತ್ಮಹತ್ಯೆಗೆ ಪ್ರಯತ್ನಿಸುವೆ ಎಂದೂ ಹೇಳಿದ್ದಾನೆ. ಸದಾ ಕ್ರಿಯಾಶೀಲವಾಗಿ, ಆರೋಗ್ಯದಿಂದ ಬದುಕಿದ ವ್ಯಕ್ತಿಯೊಬ್ಬ ಇಂಥ ಪರಿಸ್ಥಿತಿಯಲ್ಲಿ ವರ್ತಿಸುವ ರೀತಿಯಲ್ಲಿಯೇ ಬೇಡುತ್ತಿದ್ದಾನೆ. ಆದರೆ ಕಾನೂನಿನಲ್ಲಿ ದಯಾಮರಣಕ್ಕೆ ಅವಕಾಶವಿಲ್ಲ. ಇದೆಲ್ಲ ಎಷ್ಟು ಬೇಗ ಮುಗಿದರೆ ಅಷ್ಟೂ ತನಗೆ ಒಳ್ಳೆಯದು ಎಂದು ಅವನ ವಾದ. ಆದರೆ ಅವನ ಸಂಗಾತಿ ಡಾನಾ ಮೊರಿಸಿನಿಯ ಚಿಂತನೆಯೇ ಬೇರೆಯದಿತ್ತು.

ಬೆಂಕಿ ಬಿದ್ದ ಸುಂದರವಾದ ಗೂಡಿನ ಪರಿಸ್ಥಿತಿಯಂತಾದ ತಮ್ಮ ಬದುಕನ್ನು ನೆನೆದ ಡಾನಾ ರೀವ್‌ನನ್ನು ಸಂತೈಸಿದಳು. ''ಇದು ನಿನ್ನದೇ ಬದುಕು. ನಿನ್ನದೇ ಪ್ರಾಣ. ನೀನು ಬಯಸಿದ ರೀತಿ ನಿರ್ಧಾರವನ್ನು ನಾನು ಬೆಂಬಲಿಸುವೆ. ಆದರೆ ಒಂದು ಮಾತು ಹೇಳುವೆ. ಈ ನಿನ್ನ ಸಂಕಷ್ಟವು ಅದೆಷ್ಟೇ ದೀರ್ಘ ವಾದರೂ ನಾನು ನಿನ್ನ ಜೊತೆಯಲ್ಲೇ ಇರುತ್ತೇನೆ. ಎಷ್ಟೇ ಕಷ್ಟವಾದರೂ ಸರಿಯೇ. ನೀನು ನೀನಾಗಿಯೇ ಇರಬೇಕು. ನಮ್ಮ ನಡುವಿನ ಬಂಧನ ಎಂದೂ ಮುರಿಯದು.''

ರೀವ್ ಸಾಕಷ್ಟು ದಿನಗಳ ನಂತರ ಹೊಸ ಬದುಕಿಗೆ ಹೊಂದಿಕೊಳ್ಳ ತೊಡಗಿದ. ಅವನ ಆರೈಕೆಗೆ ಡಾನಾ ಎಡೆಬಿಡದೆ ನಿಂತಳು. ಧೈರ್ಯ ತುಂಬಿದಳು. ನಡೆ ನುಡಿಯಲ್ಲಿ ಪ್ರೀತಿ ಮುಕ್ಕಾಗದಂತೆ ನೋಡಿಕೊಂಡಳು. ಅಪಘಾತದ ನೆರಳು ಸೋಂಕದಂತೆ ಪ್ರೀತಿಯಿಂದ ಬದುಕಿದರು. ತಾನು ಅಪಾರವಾಗಿ ಪ್ರೀತಿಸುತ್ತಿದ್ದ ಕುದುರೆ ಸವಾರಿಯನ್ನು ಡಾನಾ ಮತ್ತೆಂದೂ ಮಾಡಲಿಲ್ಲ. ತನ್ನಂತೆ ಬೆನ್ನುಮೂಳೆ ಮುರಿತದಿಂದ ಸ್ವಾಧೀನ ಕಳೆದುಕೊಂಡ ನತದೃಷ್ಟರಿಗೆ ನೆರವಾಗುವ ದೃಷ್ಟಿಯಿಂದ ರೀವ್ ಸಲಹೆಯಂತೆ ಡಾನಾ ರೀವ್ ಫೌಂಡೇಷನ್ ಆರಂಭಿಸಿದಳು. ಹಲವಾರು ನತದೃಷ್ಟರಿಗೆ ನೆರವಾದಳು.

ಒಂದಲ್ಲ ಒಂದು ದಿನ ತಾನು ಎಲ್ಲರಂತೆ ನಡೆಯಬಹುದೆಂಬ ಆಸೆ ರೀವ್ ಪಾಲಿಗೆ ಕೊನೆಗೂ ನೆರವೇರಲಿಲ್ಲ. ಔಷಧಿಗಳ ಮಾರಕ ಪರಿಣಾಮದಿಂದ ಹಲವಾರು ಬಾರಿ ಆರೋಗ್ಯ ಹದಗೆಟ್ಟಿತು. ಡಾನಾಳ ಪ್ರೀತಿಯ ಆರೈಕೆಯೊಂದೇ ಆತನನ್ನು ಬದುಕಿಸಿದ್ದು. ಆದರೂ ಅಪಘಾತದ ಪರಿಣಾಮವೇ ಮೇಲುಗೈ ಸಾಧಿಸಿತು. ಒಂಭತ್ತು ವರ್ಷಗಳ ಸುದೀರ್ಘ ಹೋರಾಟ ಕೊನೆಗೂ ಅಕ್ಟೋಬರ್ 10, 2004ರಂದು ಕೊನೆಗೊಂಡಿತು. 52 ವರ್ಷದ ಹಾಲಿವುಡ್‌ನ ಸೂಪರ್‌ಮ್ಯಾನ್ ನೆನಪಾಗಿಹೋದ.

ಗಂಡ ಬದುಕಿರುವವರೆಗೆ ಆರೋಗ್ಯದಿಂದ ಇದ್ದ ಡಾನಾಳಿಗೆ ಗಂಡನ ಸಾವಿನ ನಂತರ ಕೆಲವೇ ತಿಂಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪತ್ತೆಯಾಯಿತು. ರೀವ್ ಫೌಂಡೇಷನ್ ಕೆಲಸ ಮುಂದುವರಿಸಿದ ಆಕೆ ಎರಡು ವರ್ಷಗಳ ಹೋರಾಟದ ನಂತರ ಸಾವನ್ನಪ್ಪಿದಳು(6.3.2006).

ಈ ಸೂಪರ್ ಜೋಡಿಯದು ಅತ್ಯಂತ ದುರಂತದ ಕತೆ. ಆದರೆ ಅವರುಬದುಕಿನುದ್ದಕ್ಕೂ ಪರಸ್ಪರ ಪ್ರೀತಿ ಗೌರವದಿಂದ ಬದುಕಿ, ನೋವು ಸಂಕಟ ಗಳ ನಡುವೆಯೂ ಪ್ರೀತಿಯನ್ನು ಆಲಂಗಿಸಿ ಮನುಷ್ಯ ಘನತೆಯನ್ನು ಎತ್ತಿ ಹಿಡಿದರು. ಅಸೀಮ ಪ್ರೀತಿ, ಅನುಪಮ ತ್ಯಾಗದ ಪ್ರತೀಕ ಅವರ ಬದುಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)