ಅಕ್ರಮ ಗೋವುಗಳ ತಪಾಸಣೆಯ ಹೆಸರಲ್ಲಿ ಹೆದ್ದಾರಿ ದರೋಡೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸಕಲೇಶಪುರದಲ್ಲಿ ದಲಿತ ಮುಖಂಡರೊಬ್ಬರು ಮನೆಗೆ ಸಾಕುವುದಕ್ಕೆಂದು ಕರು ವೊಂದನ್ನು ಒಯ್ಯುತ್ತಿದ್ದಾಗ ಅದನ್ನು ಬಜರಂಗದಳ ಕಾರ್ಯಕರ್ತರು ತಡೆದು 'ದಾಖಲೆ ತೋರಿಸು' ಎಂದು ಕೇಳಿದ್ದಾರೆ. ಆದರೆ ದಾಖಲೆ ತೋರಿಸಲು ನಿರಾಕರಿಸಿದ ಆ ದಲಿತ ಮುಖಂಡ ''ನಿನಗ್ಯಾಕೆ ದಾಖಲೆ ತೋರಿಸಬೇಕು? ನೀನೇನು ಪೊಲೀಸನ? ಅಥವಾ ನಿನಗೆ ಸರಕಾರದೋರು ದಾಖಲೆ ಕೇಳುವುದಕ್ಕೆ ಅಧಿಕಾರ ನೀಡಿದ್ದಾರೆಯೇ? ಪೊಲೀಸರನ್ನು ಕರೆದುಕೊಂಡು ಬಾ, ದಾಖಲೆ ಕೊಡುತ್ತೇನೆ'' ಎಂದು ಪ್ರತ್ಯುತ್ತರ ನೀಡಿದ್ದಾರೆ. ಅಷ್ಟಕ್ಕೇ ಬಜರಂಗ ದಳದ ಆ ಕಾರ್ಯಕರ್ತರು, ದಲಿತ ಮುಖಂಡನಿಗೆ ಬೆದರಿಕೆ ಒಡ್ಡಿದ್ದಲ್ಲದೆ, ಹಲ್ಲೆಯನ್ನು ನಡೆಸಿದ್ದಾರೆ. ಇದೀಗ ಇದರ ವಿರುದ್ಧ ಸಕಲೇಶಪುರದ ದಲಿತ ಮುಖಂಡರು ಒಂದಾಗಿ ಪ್ರತಿಭಟನೆ ನಡೆಸಿದ್ದಾರೆ ಮಾತ್ರವಲ್ಲ, ಬಜರಂಗದಳ ಕಾರ್ಯಕರ್ತರ ಪುಂಡಾಟಿಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರಕಾರವನ್ನು ಒತ್ತಾಯಿಸಿದ್ದಾರೆ. 'ಇಂತಹ ಘಟನೆಗಳು ಮುಂದುವರಿದರೆ, ನಾವು ಕೂಡ ಅಷ್ಟೇ ತೀವ್ರವಾಗಿ ಪ್ರತಿಕ್ರಿಯಿಸಬೇಕಾಗುತ್ತದೆ' ಎಂದು ಈಗಾಗಲೇ ಸಕಲೇಶಪುರದ ದಲಿತ ಸಂಘಟನೆಗಳು ಎಚ್ಚರಿಕೆಯನ್ನೂ ನೀಡಿವೆ. ಇಂತಹ ಘಟನೆಗಳು ಕೇವಲ ಸಕಲೇಶಪುರಕ್ಕಷ್ಟೇ ಸೀಮಿತವಾಗಿಲ್ಲ.
ರಾಜ್ಯಾದ್ಯಂತ ಪುಂಡುಪೋಕರಿಗಳು ಜಾನುವಾರು ಸಾಗಾಟದ ವಾಹನಗಳನ್ನು ನಿಲ್ಲಿಸಿ ಅವರಿಂದ ದಾಖಲೆಗಳನ್ನು ಕೇಳುವುದು, ಬೆದರಿಸುವುದು, ಹಣವಸೂಲಿ ಮಾಡುವುದು ದಿನನಿತ್ಯ ನಡೆಯುತ್ತಿವೆ. ವಿಪರ್ಯಾಸವೆಂದರೆ, ಈ ಪುಂಡುಪೋಕರಿಗಳು, ಸರಕಾರದ ಪ್ರತಿನಿಧಿಗಳಂತೆ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸುವುದು 'ಹಿಂದೂ ಧರ್ಮ'ದ ಹೆಸರಿನಲ್ಲಿ. ಈ ತಪಾಸಣೆಯ ಬಹುತೇಕ ಸಂತ್ರಸ್ತರು ಕೂಡ ಹಿಂದೂ ಧರ್ಮೀಯರೇ ಆಗಿದ್ದಾರೆ. ಆದರೆ, ಬಜರಂಗದಳ, ಸಂಘಪರಿವಾರದ ವೇಷದಲ್ಲಿರುವ ಈ ಪುಂಡು ಪೋಕರಿಗಳ ಬೆನ್ನಿಗೆ ಸರಕಾರದೊಳಗಿರುವ ರಾಜಕಾರಣಿಗಳು ನಿಂತಿರುವ ಪರಿಣಾಮವಾಗಿ ಇದನ್ನು ಪ್ರತಿಭಟಿಸುವ ಶಕ್ತಿಯನ್ನು ಜನರು ನಿಧಾನಕ್ಕೆ ಕಳೆದುಕೊಳ್ಳುತ್ತಾ ಬರುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ, ಸಕಲೇಶಪುರದಲ್ಲಿ ಮಾಜಿ ಗ್ರಾಮಪಂಚಾಯತ್ ಅಧ್ಯಕ್ಷರೂ ಆಗಿರುವ ದಲಿತ ಮುಖಂಡ, ಸಂಘಪರಿವಾರದ ದುಷ್ಕರ್ಮಿಗಳಿಗೆ ಸರಿಯಾದ ಪ್ರಶ್ನೆಯನ್ನೇ ಕೇಳಿದ್ದಾರೆ. ''ನೀವ್ಯಾರು? ನಿಮಗೆ ನಮ್ಮ ದಾಖಲೆಗಳನ್ನು ಕೇಳುವ ಅಧಿಕಾರ ಕೊಟ್ಟವರು ಯಾರು? ನಿಮಗೆ ನಮ್ಮ ವಾಹನಗಳನ್ನು ತಪಾಸಣೆ ಮಾಡುವ ಯಾವ ಯೋಗ್ಯತೆ ಇದೆ?'' ಎಂಬ ಪ್ರಶ್ನೆಯನ್ನು ಗೋ ಸಾಗಾಟಗಾರ ಬಜರಂಗದಳ ಕಾರ್ಯಕರ್ತನಿಗೆ ಕೇಳಿದ್ದಾರಾದರೂ, ಆ ಪ್ರಶ್ನೆಗೆ ನಮ್ಮ ಕಾನೂನು ವ್ಯವಸ್ಥೆ ಉತ್ತರಿಸಬೇಕಾಗಿದೆ.
ರಾಜ್ಯದಲ್ಲಿ ಶೇ. 70ರಷ್ಟು ದನ ಸಾಕಣೆಗಾರರು ಹಿಂದೂಗಳು. ಅನುಪಯುಕ್ತ ಗೋವುಗಳ ಸಾಗಾಟ, ಮಾರಾಟ ಇವೆಲ್ಲವುಗಳಿಗೆ ಸರಕಾರದ ನೇತೃತ್ವದಲ್ಲೇ ಅಡಚಣೆಗಳು ಎದುರಾಗುತ್ತಿರುವುದರಿಂದ, ರಾಜ್ಯಾದ್ಯಂತ ರೈತರು ತಮ್ಮ ದನಗಳನ್ನು ಮಾರಾಟ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಉತ್ತರ ಕರ್ನಾಟಕದಲ್ಲಿ 'ಜಾನುವಾರು ಸಂತೆ'ಗಳು ನಡೆಯುತ್ತವೆ. ಆದರೆ ದನ ಸಾಗಾಟಕ್ಕೆ ಕೆಲವು ಗೂಂಡಾಗಳು, ದುಷ್ಕರ್ಮಿಗಳಿಂದ ಎದುರಾಗುತ್ತಿರುವ ಅಡ್ಡಿಗಳಿಂದಾಗಿ, ತಮ್ಮ ಜಾನುವಾರುಗಳನ್ನು ಸಂತೆಗಳಿಗೆ ಕೊಂಡೊಯ್ಯುವ ಸ್ಥಿತಿಯಲ್ಲಿ ರೈತರಿಲ್ಲ. ಸೂಕ್ತ ದಾಖಲೆಗಳಿದ್ದರೂ, ರಸ್ತೆಯಲ್ಲಿ ವಾಹನಗಳನ್ನು ತಡೆಯುತ್ತಿರುವವರು ಸಂಘಪರಿವಾರದ ವೇಷದಲ್ಲಿರುವ ರೌಡಿಗಳು, ಗೂಂಡಾಗಳಾಗಿರುವುದರಿಂದ ತಮ್ಮದೇ ಸಕ್ರಮ ಗೋವುಗಳನ್ನು ಸಾಗಿಸುವುದಕ್ಕೆ ರೈತರಿಗೆ ಧೈರ್ಯ ಸಾಕಾಗುತ್ತಿಲ್ಲ. ವಾಹನಗಳನ್ನು ದೋಚುವುದು, ಹಲ್ಲೆನಡೆಸುವುದು ನಿರಂತರವಾಗಿ ನಡೆಯುತ್ತಿರುವುದರಿಂದ ಹೆದರಿ, ಗೋ ಸಾಕಣೆಯ ಸಹವಾಸವೇ ಬೇಡ ಎಂದು ಹಲವು ರೈತರು ತಮ್ಮ ಹಟ್ಟಿಗಳನ್ನೇ ಮುಚ್ಚಿದ್ದಾರೆ. ಹೀಗೆ ಹಟ್ಟಿಗಳನ್ನು ಮುಚ್ಚಿದ ದೊಡ್ಡ ಸಂಖ್ಯೆಯ ರೈತರು ಹಿಂದೂ ಧರ್ಮಕ್ಕೆ ಸೇರಿದವರೇ ಆಗಿದ್ದಾರೆ. ಅವರೆಲ್ಲರೂ ಗ್ರಾಮೀಣ ಪ್ರದೇಶಕ್ಕೆ ಸೇರಿದವರು, ಕೆಳಜಾತಿಗೆ ಸೇರಿದವರು ಮತ್ತು ಅಸಂಘಟಿತರಾಗಿರುವುದರಿಂದ ಈ ಗೂಂಡಾಗಳ ಹೆದ್ದಾರಿ ದರೋಡೆಗಳಿಗೆ ಉತ್ತರಿಸುವಷ್ಟು ಶಕ್ತರಾಗಿಲ್ಲ. ಪೊಲೀಸರಿಗೆ ದೂರು ನೀಡಿದರೆ, ದನ ಸಾಗಾಟ ಮಾಡಿದವರ ಮೇಲೆಯೇ ದೂರು ದಾಖಲಿಸಿದ ಎಷ್ಟೋ ಉದಾಹರಣೆಗಳಿವೆ. ಸಕಲೇಶಪುರದಲ್ಲಿಯೂ ಇದು ಮುಂದುವರಿದಿದೆ. ಈ ದಲಿತ ಮುಖಂಡರ ವಿರುದ್ಧವೇ ಪೊಲೀಸರು ದೂರು ದಾಖಲಿಸಿರುವುದು ಬೆಳಕಿಗೆ ಬಂದಿದೆ. ದನ ಸಾಗಾಟವನ್ನು ಅಕ್ರಮವಾಗಿ ತಡೆದ ಬಜರಂಗದಳದ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಪೊಲೀಸರು ಹಿಂಜರಿಯುತ್ತಿದ್ದಾರೆ.
ಶ್ರಮದ ಬದುಕನ್ನು ನಂಬಿ, ಗೋಸಾಕಣೆಯಂತಹ ಉದ್ಯಮದಲ್ಲಿ ತೊಡಗಿಕೊಂಡ ರೈತರಿಗೆ ಕಿರುಕುಳ ನೀಡುತ್ತಿರುವ ಈ ಬಜರಂಗದಳದ ಕಾರ್ಯಕರ್ತರಲ್ಲಿ ಶೇ. 90 ರಷ್ಟು ಜನರು ಕ್ರಿಮಿನಲ್ ಹಿನ್ನೆಲೆಯಿರುವವರು. ಸೋಮಾರಿಗಳು. ಪೊಲೀಸರ ಬೆಂಬಲವಿಲ್ಲದೆ ಇವರು ಹೀಗೆ ರಸ್ತೆಯಲ್ಲಿ ಹೋಗುವ ವಾಹನಗಳನ್ನು ತಡೆಯುವ ಧೈರ್ಯವನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯವೇ ಇಲ್ಲ. ದನ ಸಾಗಿಸುವ ರೈತರು ಅಥವಾ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದರೆ, ಇವರ ಮೇಲೆ ಮೊಕದ್ದಮೆ ದಾಖಲಾಗುವುದಿಲ್ಲ. ಬದಲಿಗೆ ದನ ಸಾಗಿಸುತ್ತಿರುವವರಿಗೇ ಪೊಲೀಸರು ಕಿರುಕುಳಗಳನ್ನು ನೀಡುತ್ತಾರೆ. ರೈತರು ಸಾಗಿಸುತ್ತಿದ್ದ ಗೋವುಗಳು ಸಕ್ರಮವಾಗಿದ್ದರೂ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ದನಸಾಗಿಸುವವರ ಮೇಲೆಯೇ ಮೊಕದ್ದಮೆಗಳನ್ನು ದಾಖಲಿಸಿ, ಹಲ್ಲೆ ನಡೆಸಿದ ದುಷ್ಕರ್ಮಿಗಳಿಗೆ ಮುಕ್ತವಾಗಿ ಓಡಾಡಲು ಬಿಡುವುದು ಇವೆಲ್ಲವೂ ಪದೇ ಪದೇ ನಡೆಯುತ್ತಿವೆ. ಕಾನೂನು ವ್ಯವಸ್ಥೆಯೇ ಇಂತಹ ಗೂಂಡಾಗಿರಿ ಮತ್ತು ಹೆದ್ದಾರಿ ದರೋಡೆಗಳನ್ನು ಪರೋಕ್ಷವಾಗಿ ಪ್ರೋತ್ಸಾಹಿಸಿದರೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು?
ಪರೋಕ್ಷವಾಗಿ ಕಾನೂನು ವ್ಯವಸ್ಥೆ 'ನಿಮ್ಮ ರಕ್ಷಣೆಯನ್ನು ನೀವೇ ವಹಿಸಿಕೊಳ್ಳಿ' ಎನ್ನುವ ಸೂಚನೆಯನ್ನು ಸಾರ್ವಜನಿಕರಿಗೆ ನೀಡುತ್ತಿದೆ. ರೈತರು ತಮ್ಮ ದನಕರುಗಳ ಹಕ್ಕುಗಳನ್ನು ತಮ್ಮದಾಗಿ ಉಳಿಸಿಕೊಳ್ಳಬೇಕಾದರೆ, ಬೀದಿಯಲ್ಲಿ ನಕಲಿ ಗೋರಕ್ಷಣೆಯ ಹೆಸರಿನಲ್ಲಿ ಓಡಾಡುವ ಪುಂಡರ ವಿರುದ್ಧ ಸಂಘಟಿತವಾಗಿ ಕಾರ್ಯಾಚರಣೆಗೆ ಇಳಿಯುವ ಸ್ಥಿತಿ ನಿರ್ಮಾಣವಾಗಿದೆ. ಸಕಲೇಶಪುರದಲ್ಲಿ ದಲಿತರು ನೀಡಿದ ಬಹಿರಂಗ ಎಚ್ಚರಿಕೆಯನ್ನು ನಾಡಿನ ಎಲ್ಲ ರೈತರು,ಗೋ ಸಾಕಣೆಗಾರರು ನೀಡುವ ದಿನ ದೂರವಿಲ್ಲ. ರೈತರು ಮಾರಕಾಸ್ತ್ರಗಳ ಜೊತೆಗೆ ತಮ್ಮ ತಮ್ಮ ಜಾನುವಾರುಗಳ ರಕ್ಷಣೆಗೆ ಇಳಿದು ಬೀದಿ ರಣರಂಗವಾಗುವ ಮೊದಲು ಕಾನೂನು ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕು. ತಮ್ಮ ಕೈಯಲ್ಲಿರುವ ಕಾನೂನು ರಕ್ಷಣೆಯ ಹೊಣೆಗಾರಿಕೆಯನ್ನು, ಕ್ರಿಮಿನಲ್‌ಗಳು, ಪುಂಡ ಪೋಕರಿಗಳ ಕೈಗೆ ಕೊಟ್ಟು ನಿದ್ದೆ ಹೋಗಿರುವ ಪೊಲೀಸರು ತಕ್ಷಣ ಎಚ್ಚೆತ್ತು ಖಾಕಿಯ ಮಾನ ಮರ್ಯಾದೆಯನ್ನು ಕಾಪಾಡಬೇಕಾಗಿದೆ. ಬೆವರು ಸುರಿಸಿ ಹೈನೋದ್ಯಮದ ಮೂಲಕ ಬದುಕು ಕಟ್ಟಿಕೊಳ್ಳುವ ಜನರನ್ನು ಬೀದಿ ಪುಂಡರ ಕೈಗೆ ಕೊಟ್ಟು ಥಳಿಸುವುದಕ್ಕೆ ಅವಕಾಶಕೊಟ್ಟರೆ, ಈ ರಾಜಕಾರಣಿಗಳನ್ನು ಆ ರೈತರು, ಕಾರ್ಮಿಕರು, ಬೀದಿಗಿಳಿದು ಥಳಿಸುವ ದಿನ ದೂರವಿಲ್ಲ.