ಮಕ್ಕಳ ಕನ್ನಡ ಕಿರುಚಿತ್ರ 'ಕತ್ತಲ ಚಿಗುರು' ಬಿಡುಗಡೆ ಸಿದ್ಧ
ಉಡುಪಿ, ಆ.22: ಗ್ರಾಮೀಣ ಭಾಗದ ಬಾಲಕಲಾ ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಮಕ್ಕಳ ಕನ್ನಡ ಕಿರುಚಿತ್ರ 'ಕತ್ತಲ ಚಿಗುರು' ನಿರ್ಮಿಸಿದ್ದು, ಇದರ ಬಿಡುಗಡೆ ಸೆ.15ರೊಳಗೆ ನಡೆಸಲಾಗುವುದು ಎಂದು ನಿರ್ದೇಶಕ ದಿನೇಶ್ ಕೊಡವೂರು ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದ ಶೂಟಿಂಗ್ ಅಮಾಸೆಬೈಲು, ಸಿದ್ಧಾಪುರ, ಬ್ರಹ್ಮಾವರ, ಕುಕ್ಕೆಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ನಡೆಸಲಾಗಿದೆ. ಇಪ್ಪತ್ತು ಮಂದಿ ಪ್ರತಿಭಾವಂತ ಬಾಲ ಕಲಾವಿದರು ಹಾಗೂ ಹಲವಾರು ಕಲಾವಿದರು ಇದರಲ್ಲಿ ಅಭಿನಯಿಸಿದ್ದಾರೆ. ಈ ಕಿರುಚಿತ್ರವನ್ನು ಪ್ರತಿ ಶಾಲೆಗಳಲ್ಲಿ ಪ್ರದರ್ಶಿಸುವ ಉದ್ದೇಶ ಹೊಂದಿದ್ದೇವೆ ಎಂದರು.
ಅಭಿ ಶಿವಪುರ ಛಾಯಾಚಿತ್ರಗ್ರಹಣ, ಪ್ರಜ್ವಲ್ ಉಡುಪಿ ಸಂಕಲನ ಚಿತ್ರಕ್ಕಿದೆ. ಮುಖ್ಯ ತಾರಾಗಣದಲ್ಲಿ ಹಿತೇನ್ ಕೊಡವೂರು, ಸಾನ್ವಿ ಶೆಟ್ಟಿ, ರಮಣಿ ಟೀಚರ್ ಕುಕ್ಕಿಕಟ್ಟೆ ಹಾಗೂ ಇತರರು ಅಭಿನಯಿಸಿದ್ದಾರೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕರಾದ ಮಮತಾ ಪಿ.ಶೆಟ್ಟಿ ಶ್ರೀನಗರ, ಮಮತಾ ಸಂತೋಷ್ ಶೆಟ್ಟಿ ಕಾಡೂರು, ರಮಣಿ ಟೀಚರ್ ಕುಕ್ಕಿಕಟ್ಟೆ, ಸಚಿನ್ ಶೆಟ್ಟಿ ಉಪಸ್ಥಿತರಿದ್ದರು.