ಅತ್ಯಾಚಾರ ‘ಸಂಸ್ಕಾರ’ ಆಗುವ ‘ಅಮೃತ ಘಳಿಗೆ’
ಹಾದರವೇ ‘‘ಅಮೃತ ಘಳಿಗೆ’’ಯಾಗಿ...ಅತ್ಯಾಚಾರವೇ ‘‘ಸಂಸ್ಕಾರ’’ವಾಗುತ್ತಿರುವ ಅಚ್ಚೇ ದಿನಗಳಿಗೆ ಭಾರತ ಸಜ್ಜಾಗಿದೆಯಾ?
ಈ ಅಚ್ಚೇ ದಿನಗಳ ಭಾರತಕ್ಕೆ ಹೊಸ ಸಂವಿಧಾನ ರಚನಾ ಕಾರ್ಯವೂ ಮೊಳಕೆಯೊಡೆದಿದೆಯಾ? ಈ ರಚನಾ ಸಮಿತಿಯೊಳಗೆ ಭಾರತದ ಅರ್ಧದಷ್ಟಿರುವ ಮಹಿಳಾ ಪ್ರತಿನಿಧಿ ಇಲ್ಲ. ಹಾಗಂತ ನಿರಾಶರಾಗುವ ಅಗತ್ಯವೂ ಇಲ್ಲ. ಮನುಸ್ಮತಿಯಲ್ಲಿ ಮಹಿಳೆಯರಿಗೆ ಗೌರವದ ಸ್ಥಾನ ಕಂಡುಕೊಂಡಿರುವ ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಗೌರವಾನ್ವಿತ ಪ್ರತಿಭಾ ಎಂ. ಸಿಂಗ್ ಥರದ ಯಾರಾದರೂ ಮುಂದಿನ ದಿನಗಳಲ್ಲಿ ಈ ಸಮಿತಿಯೊಳಕ್ಕೆ ಸೇರಿಕೊಳ್ಳಬಹುದು ಅಲ್ಲವೇ?
► ‘‘ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿದವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ಅವರೆಲ್ಲರೂ ಉತ್ತಮ ಸಂಸ್ಕಾರವಂತರು. ಅವರು ಅಪರಾಧ ಎಸಗಿದ್ದಾರೋ, ಇಲ್ಲವೋ ನನಗೆ ಗೊತ್ತಿಲ್ಲ. ಅಪರಾಧ ಎಸಗಲು ಒಂದು ಉದ್ದೇಶ ಇರುತ್ತದೆ. ಉತ್ತಮ ಸಂಸ್ಕಾರವಂತರು ಎಂಬುದಾಗಿ ಬ್ರಾಹ್ಮಣರು ಗುರುತಿಸಿಕೊಂಡಿದ್ದಾರೆ. ಬಿಲ್ಕಿಸ್ ಬಾನು ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ಬಿಡುಗಡೆಯಾದವರು ಬ್ರಾಹ್ಮಣ ಸಮುದಾಯದವರು.’’
-ಗೋಧ್ರಾ ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ.ರವುಲಜಿ
►ಬ್ರಾಹ್ಮಣರ ವಿರುದ್ಧ ವಿವಾದಾತ್ಮಕ ಹೇಳಿಕೆ: ಪ್ರೀತಂಸಿಂಗ್ ಲೋಧಿ ಬಿಜೆಪಿಯಿಂದ ಉಚ್ಚಾಟನೆ-‘‘ಬ್ರಾಹ್ಮಣರು ಧರ್ಮದ ಹೆಸರಿನಲ್ಲಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಮತ್ತು ಕಿರುಕುಳ ನೀಡುತ್ತಿದ್ದಾರೆ. ಬ್ರಾಹ್ಮಣರು ಆ ಕಾಲದ ಜನರ ಹಣ ಮತ್ತು ಸಂಪನ್ಮೂಲದಲ್ಲಿ ಏಳಿಗೆ ಹೊಂದುತ್ತಿದ್ದರು. ಒಳ್ಳೆಯ ಕುಟುಂಬದ ಸುಂದರ ಮಹಿಳೆಯರನ್ನು ನೋಡುವ ಅವರು (ಬ್ರಾಹ್ಮಣರು) ಆ ಮಹಿಳೆಯರ ಮನೆಯಲ್ಲಿ ಊಟ ಮಾಡಲು ಬಯಸುತ್ತಾರೆ. ಯುವತಿಯರನ್ನು ಮುಂದಿನ ಸಾಲಿನಲ್ಲಿ ಕೂರಿಸಬೇಕು ಹಾಗೂ ವಯಸ್ಸಾದ ಮಹಿಳೆಯರನ್ನು ಹಿಂದಿನ ಸಾಲಿನಲ್ಲಿ ಕೂರಿಸಬೇಕು ಎಂದು ಅವರು (ಬ್ರಾಹ್ಮಣರು) ಬಯಸುತ್ತಾರೆ’’ ಎಂದು ಲೋಧಿ ಯೋಧೆ ರಾಣಿ ಅವಂತಿಬಾಯಿ ಲೋಧಿ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದರು. ಇವರನ್ನು ಬಿಜೆಪಿ ಪ್ರಧಾನ ಕಚೇರಿಗೆ ಕರೆಸಿಕೊಂಡು ಪ್ರಾಥಮಿಕ ಸದಸ್ಯತ್ವವನ್ನೂ ರದ್ದುಪಡಿಸಲಾಗಿದೆ. ‘‘ಲೋಧಿ ಅವರು ಜನರ ನಡುವೆ ದ್ವೇಷ ಉಂಟು ಮಾಡುತ್ತಿದ್ದಾರೆ’’ ಎಂದು ಬಿಜೆಪಿ ಯುವ ಘಟಕದ ಪ್ರವೀಣ್ ಮಿಶ್ರಾ ದೂರು ದಾಖಲಿಸಿದ್ದಾರೆ.
►‘‘ಸ್ವಾತಂತ್ರ ಹೋರಾಟದಲ್ಲಿ ವಿಪ್ರರೇ ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಮಡಿದವರಾಗಿದ್ದಾರೆ. ಯಾವುದೇ ಸಾಮಾಜಿಕ ಹೋರಾಟದಲ್ಲಿ ವಿಪ್ರರ ಪಾತ್ರಗಳನ್ನು ಕಡೆಗಣಿಸುವಂತಿಲ್ಲ.’’
-ಶಾಸಕ ರಾಮದಾಸ್.
► ‘‘ಬ್ರಾಹ್ಮಣ ಸಮಾಜ ಎತ್ತ ಸಾಗುತ್ತಿದೆ ಎಂದು ಹಿರಿಯರಾದ ನಾವೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಬೇಕು. ಭವಿಷ್ಯದಲ್ಲಿ ಸಾಮಾಜಿಕ ಸ್ಥಾನ-ಮಾನ, ಏನು-ಎತ್ತ ಎಂಬ ಆತಂಕ ಸೃಷ್ಟಿಯಾಗಿರುವುದು ನಿಜ. ಹಾಗಂತ ನಾವು ಎದೆಗುಂದಬೇಕಾಗಿಲ್ಲ. ನಮ್ಮ ಪರಂಪರೆಯನ್ನು ಪುನರ್ ರೂಪಿಸಿಕೊಂಡರೆ ಮಾತ್ರ ವಿಪ್ರರಿಗೆ ಗೌರವ ಸಿಗಲು ಸಾಧ್ಯ.’’
-ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಎನ್.ಕುಮಾರ್.
► ಬ್ರಾಹ್ಮಣರ ಅವಹೇಳನ: ನಟ ಅಹಿಂಸ ಚೇತನ್ ವಿರುದ್ಧ ಎಫ್ಐಆರ್ ದಾಖಲು-ಬಂಧನ:-ಲಾಕ್ಡೌನ್ ವೇಳೆ ಬ್ರಾಹ್ಮಣರಿಗೆ ಪ್ರತ್ಯೇಕವಾಗಿ ಆಹಾರ ವಿತರಣೆ ಮಾಡಿದ ನಟರೊಬ್ಬರ ಬಗ್ಗೆ ಚೇತನ್ ಟೀಕಿಸಿದ್ದರು.
► ಪೊಗರು ಸಿನೆಮಾದಲ್ಲಿ ಬ್ರಾಹ್ಮಣರ ಬಗ್ಗೆ ಅವಹೇಳನ ಆರೋಪ: ಕ್ಷಮೆ ಕೇಳಿದ ನಿರ್ಮಾಪಕ: ಧ್ರುವ ಸರ್ಜಾ ಅಭಿನಯದ ಪೊಗರು ಸಿನೆಮಾದಲ್ಲಿ ಬ್ರಾಹ್ಮಣರು ಮತ್ತು ಅರ್ಚಕರ ಮೇಲೆ ಕಾಲಿಡುವ ದೃಶ್ಯಕ್ಕೆ ಬ್ರಾಹ್ಮಣ ಮಹಾಸಭಾ ಮಂಡಳಿಯಿಂದ ಟೀಕೆ ವ್ಯಕ್ತವಾಗಿದ್ದು, ಇದೀಗ ಸಿನೆಮಾ ನಿರ್ಮಾಪಕ ಬಿ.ಕೆ.ಗಂಗಾಧರ್ ಕ್ಷಮೆ ಕೇಳಿದ್ದಾರೆ.
► ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಬ್ರಾಹ್ಮಣ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಬಹುದಾದ ಪಠ್ಯಭಾಗವನ್ನು ತಕ್ಷಣದಿಂದಲೇ ಕೈ ಬಿಡುವಂತೆ ಹಿಂದೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ಎಸ್.ಸುರೇಶ್ಕುಮಾರ್ ಸೂಚಿಸಿದ್ದರು.:-‘‘ಸಂಸ್ಕೃತ ಪುರೋಹಿತರ ಭಾಷೆಯಾದ್ದರಿಂದ ಜನಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. ಯಾಗ ಯಜ್ಞಗಳಲ್ಲಿ ಆಹಾರ ಧಾನ್ಯ, ಹಾಲು-ತುಪ್ಪಗಳನ್ನು ಹವಿಸ್ಸಿನ ರೂಪದಲ್ಲಿ ದಹಿಸಲಾಗುತ್ತಿತ್ತು. ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು ಬಲಿ ನೀಡಲಾಗುತ್ತಿತ್ತು. ಇದರಿಂದಾಗಿ ಆಹಾರದ ಅಭಾವ ಸೃಷ್ಟಿಯಾಗುತ್ತಿತ್ತು. ಸಮಾಜದಲ್ಲಿ ಬ್ರಾಹ್ಮಣರೆಂದು ಕರೆಯಲಾಗುತ್ತಿದ್ದ ಪುರೋಹಿತ ವರ್ಗ ಹಲವು ಸವಲತ್ತುಗಳನ್ನು ಹೊಂದಿದ್ದರು. ಇದೇ ಸಂದರ್ಭದಲ್ಲಿ ಕ್ಷತ್ರಿಯರೂ ಕೂಡ ಪ್ರಾಬಲ್ಯಕ್ಕೆ ಬರಲಾರಂಭಿಸಿದರು. ಪರಿಣಾಮವಾಗಿ ನಂತರದ ಕಾಲದಲ್ಲಿ ಉದಯವಾದ ಹಲವು ಗಣರಾಜ್ಯಗಳ ಕ್ಷತ್ರಿಯರು ಬ್ರಾಹ್ಮಣರಿಗೆ ಪ್ರತಿಯಾಗಿ ಹೊಸ ಧರ್ಮಗಳ ಉದಯಕ್ಕೆ ಕಾರಣರಾದರು. ಇವೆಲ್ಲದರ ಪರಿಣಾಮವಾಗಿ ಉದಯಿಸಿದ ಧರ್ಮಗಳ ಪೈಕಿ ಜೈನ ಮತ್ತು ಬೌದ್ಧ ಧರ್ಮಗಳು ಪ್ರಮುಖವಾದವು’’ ಎನ್ನುವ ಅಂಶವನ್ನು ಪಠ್ಯದಿಂದ ಕೈ ಬಿಡುವಂತೆ ಸುರೇಶ್ಕುಮಾರ್ ಪತ್ರದಲ್ಲಿ ಸೂಚಿಸಲಾಗಿತ್ತು.
► ಬೆಂಗಳೂರಿನಲ್ಲಿ ದಸಂಸ ಒಕ್ಕೂಟ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಅವರು, ‘‘ಶೂದ್ರ-ಹಿಂದುಳಿದ, ದಲಿತ-ದಮನಿತ, ಆದಿವಾಸಿ ಬುಡಕಟ್ಟು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ವಿರೋಧಿಯಾದ ಬ್ರಾಹ್ಮಣ್ಯ ತುಂಬಿಕೊಂಡಿರುವ ಪಠ್ಯ ಪರಿಷ್ಕರಣೆ ಮಾಡಿರುವ ರೋಹಿತ್ ಚಕ್ರತೀರ್ಥರನ್ನು ವಜಾಗೊಳಿಸಬೇಕು. ಅಸಮರ್ಥ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರಾಜೀನಾಮೆ ನೀಡಬೇಕು. ರೋಹಿತ್ ಚಕ್ರತೀರ್ಥ ಸಮಿತಿಯ 7 ಜನ ಬರೀ ಬ್ರಾಹ್ಮಣರೇ ಆಗಿದ್ದಾರೆ. ಮಹಿಳೆಯರೂ ಸಹ ಸಮಿತಿಯಲ್ಲಿಲ್ಲ.’’
► ‘‘ಆರೆಸ್ಸೆಸ್ ಮನುಸ್ಮತಿಯನ್ನು ಸಂವಿಧಾನ ಮಾಡುವ ಹುನ್ನಾರ ನಡೆಸಿದೆ. ಅದಕ್ಕಾಗಿಯೇ ಸಂವಿಧಾನಕ್ಕೆ ಅಪಮಾನ ಮಾಡಲಾಗುತ್ತಿದೆ. ಲೋಕಸಭೆ ಮೇಲೆ ಗುರುಸಭೆಯನ್ನು ಸ್ಥಾಪಿಸಿ ಮನುಸ್ಮತಿಯನ್ನು ಜಾರಿಗೆ ತರುವ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರನ್ನು ಗುಲಾಮರನ್ನಾಗಿ ಮಾಡಲು ಹೊರಟಿದೆ’’
-ಡಾ.ಬಿ.ಆರ್.ಅಂಬೇಡ್ಕರ್ ಅವರ ಮರಿ ಮೊಮ್ಮಗ ರಾಜರತನ್ ಅಂಬೇಡ್ಕರ್.
(ಕಲಬುರಗಿ ನಗರದಲ್ಲಿ ಸಂವಿಧಾನ ರಕ್ಷಣಾ ಸಮಿತಿಯು ಆಯೋಜಿಸಿದ್ದ ಬೃಹತ್ ಸಭೆಯಲ್ಲಿ ರಾಜರತನ್ ಅಂಬೇಡ್ಕರ್ ಮಾತನಾಡಿದರು)
► ಮನುಸ್ಮತಿ ಭಾರತೀಯ ಮಹಿಳೆಯರಿಗೆ ಗೌರವಾನ್ವಿತ ಸ್ಥಾನವನ್ನು ನೀಡಿದೆ. ಇದರಿಂದ ಮಹಿಳೆಯರು ಆಶೀರ್ವದಿಸಲ್ಪಟ್ಟಿದ್ದಾರೆ.
-ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್.
► ಮನುಸ್ಮತಿ ನಿಜಕ್ಕೂ ಮಹಿಳೆಯರಿಗೆ ಗೌರವ ನೀಡಿದೆಯೇ? ಇದಕ್ಕೆ ನಾವು ಮನುಸ್ಮತಿಯ ಕೆಲವು ಅಧ್ಯಾಯಗಳಿಂದಲೇ ನೋಡೋಣ. ಅಧ್ಯಾಯ 9, ಶ್ಲೋಕ 7. ಶಯ್ಯೋ ಸನಮಲಂಕಾರಂ ಕಾಮಂ, ಕ್ರೋಧಮನಾರ್ಜವಂ, ದ್ರೋಹಭಾವಂ, ಕುಚರ್ಯಾಂ ಚ ಸ್ತ್ರೀಭ್ಯೋ ಮನುರಕಲ್ಪಯತ್ ॥
(ಶಯ್ಯೆ, ಆಸನ, ಅಲಂಕಾರ ಇವುಗಳ ಮೋಹ, ಕಾಮ, ಕ್ರೋಧ, ಅಪ್ರಾಮಾಣಿಕತೆ, ಪತಿದ್ರೋಹ ಮತ್ತು ದುರ್ನಡತೆ ಇವು ಸಾಮಾನ್ಯವಾಗಿ ಸ್ತ್ರೀಯಲ್ಲಿರುವ ಸ್ವಾಭಾವಿಕ ಗುಣಗಳು)
► ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿಯನ್ನು ಗುಜರಾತ್ ಸರಕಾರ ಇತ್ತೀಚೆಗೆ ಜಾರಿಗೆ ತಂದ ತನ್ನ ಹೊಸ ನೀತಿಯಂತೆ ಬಿಡುಗಡೆಗೊಳಿಸಿದೆ. ಬಿಡುಗಡೆಗೊಂಡವರನ್ನು ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಹಾರ ತುರಾಯಿ ಹಾಕಿ ಸನ್ಮಾನಿಸಲಾಯಿತು.
► ‘‘ಅತ್ಯಾಚಾರಿಗಳಿಗೆ ಹಾರ-ತುರಾಯಿ ಹಾಕಿ ಸನ್ಮಾನಿಸುವುದನ್ನು ಕಂಡರೆ ನನ್ನ ರಕ್ತ ಕುದಿಯುತ್ತದೆ.’’
-ಆಶಾ ದೇವಿ (ನಿರ್ಭಯಾ ತಾಯಿ)
► ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಬೇಡಿಕೆಯ ಕುರಿತಾಗಿ ವಾರಣಾಸಿಯ ಶಂಕರಾಚಾರ್ಯ ಪರಿಷದ್ ಜತೆ ನಂಟು ಹೊಂದಿರುವ ಸಾಧು-ಸನ್ಯಾಸಿಗಳ ರಾಷ್ಟ್ರ ಸಂವಿಧಾನ ನಿರ್ಮಾಣ ಸಮಿತಿ ಕರಡು ಸಿದ್ಧಪಡಿಸಿದೆ. 2023ಕ್ಕೆ ಪ್ರಯಾಗ್ರಾಜ್ನಲ್ಲಿ ನಡೆಯುವ ಮಾಘ ಮೇಳದಲ್ಲಿ ಈ ಕರಡನ್ನು ಪ್ರಸ್ತುತಪಡಿಸಲು ನಿರ್ಧರಿಸಲಾಗಿದೆ. 30 ಸದಸ್ಯರ ತಂಡ ಈ ಕರಡು ಸಿದ್ದಪಡಿಸಿದೆ. ಶಾಂಭವಿ ಪೀಠಾಧೀಶ್ವರ ಸ್ವಾಮಿ ಆನಂದ್ ಸ್ವರೂಪ್, ಕಾಮೇಶ್ವರ ಉಪಾಧ್ಯಾಯ, ಸುಪ್ರೀಂಕೋರ್ಟ್ ವಕೀಲ ಬಿ.ಎನ್.ರೆಡ್ಡಿ, ರಕ್ಷಣಾ ಪರಿಣತ ಆನಂದ್ ವರ್ಧನ್, ಸನಾತನ ಧರ್ಮದ ಪರಿಣಿತ ಚಂದ್ರಮಣಿ ಮಿಶ್ರಾ ಅವರನ್ನು ಒಳಗೊಂಡಿದೆ.
ಇವೆಲ್ಲಾ ಇತ್ತೀಚಿನ ದಿನಗಳಲ್ಲಿ ನಾನಾ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು. ಈ ಬಿಡಿ ಬಿಡಿ ವರದಿಗಳನ್ನು ಚುಕ್ಕೆಗಳಂತೆ ಒಂದರ ಪಕ್ಕ ಒಂದನ್ನು ಇಟ್ಟು ರಂಗೋಲಿ ಹಾಕಿದರೆ ಕಾಣುವ ಇಡೀ ಚಿತ್ರ ಏನು?
► ಹಾದರವೇ ‘‘ಅಮೃತ ಘಳಿಗೆ’’ಯಾಗಿ...ಅತ್ಯಾಚಾರವೇ ‘‘ಸಂಸ್ಕಾರ’’ ವಾಗುತ್ತಿರುವ ಅಚ್ಛೇ ದಿನಗಳಿಗೆ ಭಾರತ ಸಜ್ಜಾಗಿದೆಯಾ?
ಈ ಅಚ್ಛೇ ದಿನಗಳ ಭಾರತಕ್ಕೆ ಹೊಸ ಸಂವಿಧಾನ ರಚನಾ ಕಾರ್ಯವೂ ಮೊಳಕೆಯೊಡೆದಿದೆಯಾ? ಈ ರಚನಾ ಸಮಿತಿಯೊಳಗೆ ಭಾರತದ ಅರ್ಧದಷ್ಟಿರುವ ಮಹಿಳಾ ಪ್ರತಿನಿಧಿ ಇಲ್ಲ. ಹಾಗಂತ ನಿರಾಶರಾಗುವ ಅಗತ್ಯವೂ ಇಲ್ಲ. ಮನುಸ್ಮತಿಯಲ್ಲಿ ಮಹಿಳೆಯರಿಗೆ ಗೌರವದ ಸ್ಥಾನ ಕಂಡುಕೊಂಡಿರುವ ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಗೌರವಾನ್ವಿತ ಪ್ರತಿಭಾ ಎಂ. ಸಿಂಗ್ ಥರದ ಯಾರಾದರೂ ಮುಂದಿನ ದಿನಗಳಲ್ಲಿ ಈ ಸಮಿತಿಯೊಳಕ್ಕೆ ಸೇರಿಕೊಳ್ಳಬಹುದು ಅಲ್ಲವೇ?
...ಚುಕ್ಕೆಗಳಿನ್ನೂ ಬಾಕಿ ಇವೆ.