ಅನಂತ ಸಂಕಟಗಳ ಸುಳಿಯಲ್ಲಿ ಅನ್ನದಾತ
ಕೃಷಿ ಭಾರತೀಯರ ಜೀವ ನಾಡಿಯಾಗಿದೆ. ದೇಶದಲ್ಲಿ ಶೇ.60ಕ್ಕಿಂತ ಹೆಚ್ಚು ಜನ ತಮ್ಮ ಜೀವನೋಪಾಯಕ್ಕಾಗಿ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಈ ಪೈಕಿ ಶೇ.85ರಷ್ಟು ರೈತರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದು ಈ ರೈತರ ಬದುಕು ಸುಧಾರಣೆಯನ್ನು ಕಾಣದಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಇಂತಹ ಸಣ್ಣ ರೈತರ ಅಭಿವೃದ್ಧಿಗೆ ಅಗತ್ಯವಾದ ಪರಿಣಾಮಕಾರಿ ಯೋಜನೆಗಳನ್ನು ಇಂದಿಗೂ ಜಾರಿಗೆ ತರಲು ಸರಕಾರಗಳು ಸೋತಿವೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಾಲ ನೀಡುವ ಉದ್ದೇಶದಿಂದ ಆರಂಭವಾದ ಗ್ರಾಮೀಣ ಬ್ಯಾಂಕುಗಳು ತಮ್ಮ ಸಾಲದ ನೀತಿಯನ್ನೇ ಬದಲಾಯಿಸಿಕೊಂಡಿವೆ. ಸಾಲ ನೀಡಿಕೆ, ಕೃಷಿ ಉತ್ಪನ್ನಗಳ ಮಾರಾಟ, ಕೃಷಿ ಮೂಲ ಸೌಕರ್ಯಗಳ ಲಭ್ಯತೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಹಲವಾರು ಕೊರತೆಗಳನ್ನು ಅನುಭವಿಸುತ್ತಿದ್ದು ಸಣ್ಣ ರೈತರು ಇಂದು ದೊಡ್ಡ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಿಕೊಳ್ಳುತ್ತಿರುವವರು ರೈತರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿರುವುದನ್ನೂ ಗಮನಿಸದಿದ್ದರೆ ಹೇಗೆ?
ಭೂಮಿಗಿರುವ ಬೆಲೆ ರೈತನಿಗಿಲ್ಲ ಎಂಬ ಪರಿಸ್ಥಿತಿಯನ್ನು ಸಣ್ಣ ರೈತರು ಇಂದು ಅನುಭವಿಸುತ್ತಿದ್ದಾರೆ. ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಆಗುತ್ತಿದೆ. ಕೆಲವು ಆಹಾರ ಪದಾರ್ಥಗಳನ್ನು ವಿದೇಶಗಳಿಗೂ ರಫ್ತು ಸಹ ಮಾಡಲಾಗುತ್ತಿದೆ. ಆದರೆ ರೈತರ ಸಮಸ್ಯೆಗಳು ಮಾತ್ರ ಅಧಿಕವಾಗುತ್ತಲೇ ಹೋಗುತ್ತಿವೆ. ರೈತರು ಅತಿಯಾದ ಸಾಲದ ಹೊರೆಯ ಪರಿಣಾಮವಾಗಿ ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ. ರೈತನನ್ನು ಅನ್ನದಾತ ಎಂದು ಕರೆದರೂ ಅವನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಪಂಜಾಬ್ ರಾಜ್ಯದ ಕೃಷಿ ವಿಶ್ವವಿದ್ಯಾನಿಲಯವೊಂದು 2017ರಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ ಆತ್ಮಹತ್ಯೆಗೆ ಒಳಗಾದ ರೈತರ ಪೈಕಿ ಶೇ.77ರಷ್ಟು ಮಂದಿ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಾಗಿದ್ದರು. ರೈತರ ಆತ್ಮಹತ್ಯೆಗೆ ಪರಿಹಾರದ ಕುರಿತು ಚಿಂತಿಸುವ ಮೊದಲು ಆತ್ಮಹತ್ಯೆಯ ಮೂಲ ಮತ್ತು ಕಾರಣಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕಾಗಿದೆ. ಕಷ್ಟಪಟ್ಟು ಬೆಳೆದ ಆಹಾರ ಉತ್ಪನ್ನಗಳಿಗೆ ಯೋಗ್ಯವಾದ ಬೆಲೆ ದೊರೆತು ಆದಾಯ ಬಂದರೆ ಯಾವ ರೈತನೂ ಆತ್ಮಹತ್ಯೆಯ ಕುರಿತು ಚಿಂತಿಸುವುದಿಲ್ಲ. ಉಳಿದವರೆಲ್ಲರಿಗಿಂತ ರೈತರು ಏಕೆ ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ? ಎಂಬ ಕುರಿತು ಇದುವರೆಗೂ ಸರಿಯಾದ ವೈಜ್ಞಾನಿಕ ಅಧ್ಯಯನಗಳೇ ನಡೆದಿಲ್ಲ. ಕೃಷಿಕರು ಸಂತೋಷದಿಂದಿದ್ದರೆ ಮಾತ್ರ ದೇಶ ಸುಭಿಕ್ಷವಾಗಿರಲು ಸಾಧ್ಯ.
ಭಾರತದಲ್ಲಿನ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರ ಪೈಕಿ ಹೆಚ್ಚಿನವರು ಮಳೆ ಆಧಾರಿತ ಬೇಸಾಯವನ್ನು ಮಾಡುತ್ತಾರೆ. ಇಂತಹ ಪ್ರದೇಶಗಳಲ್ಲಿ ನೀರಿನ ತೇವಾಂಶವನ್ನು ರಕ್ಷಣೆ ಮಾಡುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳಿಂದಾಗಿ ಕೃಷಿ ವಲಯ ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಇವುಗಳ ಪರಿಣಾಮವಾಗಿ ಸರಕಾರಗಳು ಕೃಷಿಯ ಮೇಲೆ ವ್ಯಯ ಮಾಡುತ್ತಿದ್ದ ಸಬ್ಸಿಡಿಗಳನ್ನು ಒಂದೊಂದಾಗಿ ಕಡಿಮೆ ಮಾಡುತ್ತಾ ಬರುತ್ತಿವೆ. ಈ ರೀತಿಯ ಪ್ರವೃತ್ತಿ ಕೃಷಿರಂಗದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ. ದೇಶಿಯ ರೈತರು ಸಬ್ಸಿಡಿ ಬೆಂಬಲಿತ ಅಂತರ್ರಾಷ್ಟ್ರೀಯ ಕೃಷಿ ಉತ್ಪನ್ನಗಳೊಂದಿಗೆ ಸ್ಪರ್ಧಿಸುವಲ್ಲಿ ಸೋತಿದ್ದಾರೆ. ಸಣ್ಣ ಮತ್ತು ಅತಿ ಸಣ್ಣ ರೈತರಲ್ಲಿ ಹೆಚ್ಚಿನವರು ಬೇರೆಯವರ ಜಮೀನುಗಳಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇಂತಹ ಕೃಷಿ ಕಾರ್ಮಿಕರಿಗೆ ಕನಿಷ್ಠ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಇಂತಹ ರೈತರನ್ನು ಪ್ರೇರೇಪಿಸಬೇಕು. ಮುಖ್ಯವಾಗಿ ರೈತರು ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುವುದನ್ನು ನಿಯಂತ್ರಿಸಲು ಸೂಕ್ತ ಯೋಜನೆಗಳನ್ನು ಜಾರಿಗೆ ತರಬೇಕು. ಹಳ್ಳಿಗಳಲ್ಲಿಯೇ ಇದ್ದು ಜೀವನ ನಿರ್ವಹಣೆ ಮಾಡಿಕೊಂಡು ಹೋಗಲು ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಹಳ್ಳಿಗಳಲ್ಲಿಯೇ ಒದಗಿಸಬೇಕು. ರಾಜಕೀಯ ಇಚ್ಛಾಶಕ್ತಿಯಿದ್ದರೆ ರೈತರ ಏಳಿಗೆಗೆ ಅವಶ್ಯಕವಾಗಿರುವ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯ.
ಕೃಷಿಕರ ಪ್ರಗತಿಯಾಗಬೇಕಾದರೆ ದೇಶದಲ್ಲಿ ಮತ್ತಷ್ಟು ನೀರಾವರಿ ಯೋಜನೆಗಳನ್ನು ಜಾರಿಗೆ ತರಬೇಕಾಗಿರುವ ಜೊತೆಗೆ ಈಗಾಗಲೇ ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳನ್ನು ಯಾವುದೇ ಕಾರಣ ನೀಡದೆ ಜರೂರಾಗಿ ಸಂಪೂರ್ಣಗೊಳಿಸಬೇಕಾಗಿದೆ. ಹವಾಮಾನ ವೈಪರಿತ್ಯ ಮತ್ತು ಅತಿವೃಷ್ಟಿ, ಅನಾವೃಷ್ಟಿಗಳಿಂದ ಸಂಭವಿಸಬಹುದಾದ ಬೆಳೆ ಹಾನಿಗೆ ಮೀನ ಮೇಷ ಎಣಿಸದೆ ರೈತರಿಗೆ ಪರಿಹಾರವನ್ನು ಸೂಕ್ತ ಪ್ರಮಾಣದಲ್ಲಿ ನೀಡಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸೂಕ್ತ ಸಾಲ ಸೌಲಭ್ಯಗಳು ಸರಿಯಾದ ಸಮಯದಲ್ಲಿ ದೊರೆಯುವಂತೆ ನೋಡಿಕೊಳ್ಳಬೇಕು. ರೈತರು ಬೆಳೆಯುವ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆಯನ್ನು ನಿಗದಿ ಮಾಡಬೇಕು.
ಬೆಳೆದ ಆಹಾರ ಧಾನ್ಯಗಳನ್ನು ಸೂಕ್ತ ಬೆಲೆ ಬರುವವರೆಗೂ ಕಾಪಿಟ್ಟುಕೊಳ್ಳಲು ಸರಿಯಾದ ಸಂಗ್ರಹಣಾ ಶೈತ್ಯಾಗಾರ ಕೇಂದ್ರಿತ ಕೊಠಡಿಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಿರ್ಮಾಣ ಮಾಡಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರ ಬೆಳೆ ವಿಮೆಯ ಕಂತನ್ನು ಸರಕಾರವೇ ಕಟ್ಟಬೇಕು ಹಾಗೂ ಬೆಳೆ ಹಾನಿ ಸಂಭವಿಸಿದಾಗ ವೈಜ್ಞಾನಿಕವಾಗಿ ಪರಿಹಾರದ ಮೊತ್ತವನ್ನು ತಡ ಮಾಡದೆ ಆಯಾ ವರ್ಷವೇ ರೈತರಿಗೆ ವಿತರಿಸಬೇಕು. ಬೀಜ, ರಸಗೊಬ್ಬರ, ಕೀಟನಾಶಕಗಳು, ವಿದ್ಯುತ್, ನೀರಾವರಿ ಸೌಲಭ್ಯಗಳನ್ನು ಸಬ್ಸಿಡಿ ಆಧಾರದ ಮೇಲೆ ಒದಗಿಸಬೇಕು. ಇವುಗಳನ್ನು ಬಳಸಿಕೊಳ್ಳಲು ಬೇಕಾಗುವ ಸಾಮಗ್ರಿಗಳು ಸೇರಿದಂತೆ ರೈತರಿಗೆ ಕೃಷಿ ನಿರ್ವಹಣೆಗೆ ಬೇಕಾಗುವ ಅಗತ್ಯವಾದ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕು. ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಿಗೆ ನೀಡುವ ಕೃಷಿ ಸಾಲ, ಸಾಂಸ್ಥಿಕ ಸಾಲ ಸೇರಿದಂತೆ ವಿವಿಧ ಸಾಲಗಳ ಮೇಲೆ ವಿಧಿಸುವ ಬಡ್ಡಿದರ ದೊಡ್ಡ ರೈತರ ಸಾಲದ ಮೇಲಿನ ಬಡ್ಡಿದರಕ್ಕಿಂತ ಕಡಿಮೆ ಇರಬೇಕು.
ರೈತರ ಹಿತ ಕಾಪಾಡುವ ದೃಷ್ಟಿಯಿಂದ ಸ್ಥಾಪನೆಗೊಂಡ ಸಹಕಾರ ಬ್ಯಾಂಕ್ಗಳು ಮತ್ತು ಸಂಘಗಳಲ್ಲಿ ಹೆಚ್ಚಿನವು ಆಡಳಿತ ಮಂಡಳಿಗಳ ಭ್ರಷ್ಟಾಚಾರಕ್ಕೆ ಈಡಾಗಿ ನಷ್ಟದ ಭೀತಿಯನ್ನು ಎದುರಿಸುತ್ತಿವೆ. ಎಷ್ಟೋ ಸಹಕಾರಿ ಬ್ಯಾಂಕ್ಗಳು ದಿವಾಳಿಯಾಗಿವೆ. ರಾಜಕಾರಣಿಗಳ ಮಧ್ಯ ಪ್ರವೇಶದಿಂದಾಗಿ ಈ ಬ್ಯಾಂಕ್ಗಳು ಮತ್ತು ಸಂಘಗಳು ದಾರಿತಪ್ಪಿವೆ. ಭಾರತದ ಹಲವು ರಾಜ್ಯಗಳಲ್ಲಿ ಕೃಷಿ ಭೂಮಿಯ ವರ್ಗೀಕರಣವೇ ಇನ್ನೂ ಸರಿಯಾದ ರೀತಿಯಲ್ಲಿ ಆಗಿಲ್ಲ. ಈ ವರ್ಗೀಕರಣ ಅತಿ ಶೀಘ್ರವಾಗಿ ಆಗಬೇಕು. ಕೃಷಿ ಭೂಮಿ, ಬೆಳೆಗಳು, ಸಾಲ ಸೌಲಭ್ಯಗಳು ಸೇರಿದಂತೆ ಸಮಗ್ರ ವಿವರಗಳನ್ನೊಳಗೊಂಡ ಕೃಷಿ ಕಾರ್ಡುಗಳನ್ನು ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೂ ವಿತರಿಸಬೇಕು. ರೈತರ ಕೃಷಿ ಉತ್ಪನ್ನಗಳಿಗೆ ಮುಂಚಿತವಾಗಿಯೇ ಬೆಲೆ ಧಾರಣೆಯನ್ನು ನಿಗದಿ ಮಾಡಬೇಕು. ಈಗ ಹಾಲಿಗೆ ಇಂತಹ ವ್ಯವಸ್ಥೆಯಿದೆ. ಪ್ರಾಕೃತಿಕ ವಿಕೋಪಗಳು ಸಂಭವಿಸಿ ರೈತರು ಬೆಳೆ ನಾಶ ಮತ್ತು ಮನೆಗಳನ್ನು ಕಳೆದುಕೊಂಡಾಗ ರೈತರು ಅರ್ಜಿ ಹಾಕಿಕೊಂಡು ಪರಿಹಾರ ಕೇಳುವ ಬದಲು ಸರಕಾರವೇ ಕಂದಾಯ ಇಲಾಖೆಯ ಸಿಬ್ಬಂದಿಯಿಂದ ಸಮೀಕ್ಷೆ ನಡೆಸಿ ವೈಜ್ಞಾನಿಕವಾದ ರೀತಿಯಲ್ಲಿ ಪರಿಹಾರ ನೀಡುವ ವ್ಯವಸ್ಥೆ ಜಾರಿಯಾಗಬೇಕಾಗಿದೆ. ಇದರಲ್ಲಿ ಭ್ರಷ್ಟಾಚಾರದ ವಾಸನೆ ಬರದಂತೆ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು.
ಹೈನುಗಾರಿಕೆ ರೈತರ ಆದಾಯದ ಅವಿಭಾಜ್ಯ ಅಂಗವಾಗಿದೆ. ಆದರೆ ಹೈನುಗಾರಿಕೆಯಲ್ಲಿಯೂ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರಕಾರ ನೀಡುವ ಸಾಲ ತೆಗೆದುಕೊಂಡು ಸಾಕಿದ ಕುರಿ, ಹಸು, ಎಮ್ಮೆ ಮುಂತಾದ ಸಾಕು ಪ್ರಾಣಿಗಳು ಅಕಾಲಿಕ ಮರಣಕ್ಕೆ ಈಡಾದಾಗ ರೈತರಿಗೆ ಅನುದಾನ ನೀಡುವ ಯೋಜನೆ ಜಾರಿಯಲ್ಲಿದೆ. ಆದರೆ ಈ ಯೋಜನೆಯ ಪ್ರತಿಫಲ ಮಾತ್ರ ಸರಿಯಾದ ರೀತಿಯಲ್ಲಿ ರೈತರ ಪಾಲಿಗೆ ಸಿಗುತ್ತಿಲ್ಲ. ಸರಕಾರಗಳು ಕೃಷಿಕರ ಸಮಸ್ಯೆಗಳನ್ನು ಬಗೆಹರಿಸುವ ದೃಷ್ಟಿಯಿಂದ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದ್ದರೂ ಅವುಗಳು ಅನುಷ್ಠಾನದ ಹಂತದಲ್ಲಿ ಸೋಲುತ್ತಿವೆ. ಇದರಿಂದಾಗಿ ರೈತರ ಸಮಸ್ಯೆಗಳಿಗೆ ಸರಿಯಾದ ರೀತಿಯಲ್ಲಿ ಪರಿಹಾರಗಳು ಸಿಗುತ್ತಿಲ್ಲ. ಕರ್ನಾಟಕದಲ್ಲಿ ಕೃಷಿ ನೀತಿಯನ್ನು ಜಾರಿಗೆ ತರಲಾಗಿದೆ. ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಸರಿಯಾದ ಮಾರುಕಟ್ಟೆ ವ್ಯವಸ್ಥೆಯ ಕೊರತೆ ಇದೆ. ಹಾಲಿನ ಮಾರುಕಟ್ಟೆ ಮಾದರಿಯಲ್ಲಿ ಸಣ್ಣ ಕೃಷಿಕರು ಬೆಳೆಯುವ ಉತ್ಪನ್ನಗಳನ್ನು ಸಹಕಾರಿ ಸಂಘಗಳ ಮೂಲಕ ತಾಲೂಕು ಮತ್ತು ಜಿಲ್ಲೆಗಳ ಮಾರುಕಟ್ಟೆಗೆ ಕೊಂಡೊಯ್ದು ವಿತರಿಸುವ ವ್ಯವಸ್ಥೆಯೊಂದು ಜಾರಿಗೆ ಬಂದರೆ ರೈತರ ಶೇ.50ರಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ. ಈ ದಿಕ್ಕಿ ನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿರುವುದು ಇಂದಿನ ಅಗತ್ಯವಾಗಿದೆ.
ಕೈಗಾರಿಕೆಗಳು ಮತ್ತು ಸಿದ್ಧ ವಸ್ತುಗಳ ತಯಾರಕರು ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆಯನ್ನು ನಿಗದಿ ಮಾಡಿಕೊಳ್ಳುತ್ತಾರೆ. ಆದರೆ ತೋಟಗಾರಿಕೆ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ರೈತರು ಬೆಲೆಯನ್ನು ನಿಗದಿ ಮಾಡುವ ಪರಿಪಾಠವೇ ಇಲ್ಲ. ರೈತರು ಬೆಳೆಯುವ ಬೆಳೆಗಳಿಗೆ ಮಧ್ಯವರ್ತಿಗಳು ಮತ್ತು ಮಾರಾಟಗಾರರು ಬೆಲೆಯನ್ನು ನಿಗದಿ ಮಾಡುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈಗ ಭಾರತದಾದ್ಯಂತ ಹಾಲು ಸಂಗ್ರಹ, ಸಂಸ್ಕರಣೆ ಮತ್ತು ಮಾರಾಟ ವ್ಯವಸ್ಥೆಯಂತಹ ವ್ಯವಸ್ಥೆಯೊಂದನ್ನು ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೂ ಹಳ್ಳಿಯಿಂದ ರಾಜ್ಯ ಮಟ್ಟದವರೆಗೂ ಜಾರಿಗೆ ತರಬೇಕಾಗಿದೆ. ಹೀಗೆ ಮಾಡುವುದರಿಂದ ಬೆಲೆ ಕುಸಿತದ ಭೀತಿಯಿಂದ ರೈತ ಸಮುದಾಯವನ್ನು ರಕ್ಷಿಸಬಹುದು. ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ರೈತರಿಗಾಗಿ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ ಇಂತಹ ಕೇಂದ್ರಗಳ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಹಾಗೂ ಇಂತಹ ಮಾಹಿತಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ.