ಕೊಡಗು ಜಿಲ್ಲೆಗೆ ಬಗೆದ ದ್ರೋಹ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯದಲ್ಲಿ ಮಳೆಗಾಲದ ನೇರ ಸಂತ್ರಸ್ತ ಪ್ರದೇಶ ಕೊಡಗು ಜಿಲ್ಲೆ. ಬೆಟ್ಟ, ಗುಡ್ಡ, ಕಾಡುಗಳಿಂದಲೇ ಗುರುತಿಸಲ್ಪಡುವ ಕೊಡಗು ಜಿಲ್ಲೆ, ಇದೀಗ ಬೆಟ್ಟ, ಗುಡ್ಡಗಳ ಕುಸಿತದ ಕಾರಣಗಳಿಗಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಕಳೆದೆರಡು ಮಳೆಗಾಲಗಳಲ್ಲೂ ಕೊಡಗು ಭೀಕರವಾಗಿ ಪ್ರಕೃತಿ ವಿಕೋಪಗಳಿಂದ ನಲುಗಿತ್ತು. ಭಾರೀ ಪ್ರಮಾಣದ ಸಾವು ನೋವುಗಳ ಕಾರಣಕ್ಕಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಕೊಡಗಿನ ನೆರವಿಗಾಗಿ ಧಾನಿಗಳು ದಾವಿಸಿ ಬಂದಿದ್ದರು. ತೀರಾ ತಡವಾಗಿಯಾದರೂ, ವಿತ್ತ ಸಚಿವರೇ ಪ್ರಕೃತಿ ವಿಕೋಪದ ಪರಿಣಾಮಗಳನ್ನು ವೀಕ್ಷಿಸಲು ಕೊಡಗು ಜಿಲ್ಲೆಗೆ ಆಗಮಿಸಿದ್ದರು. ಈ ಹಿಂದಿನ ಭೀಕರ ದುರಂತಗಳು ಈ ಬಾರಿಯ ಮಳೆಗಾಲದಲ್ಲಿ ಸಂಭವಿಸಿಲ್ಲದೇ ಇದ್ದರೂ, ಕೊಡಗಿನಲ್ಲಿ ಅಲ್ಲಲ್ಲಿ ದೊಡ್ಡ ಪ್ರಮಾಣದಲಲಿ ಗುಡ್ಡ ಕುಸಿತಗಳು ಸಂಭವಿಸಿವೆ. ನೆರೆಯಿಂದ ಕೊಡಗು ಜಿಲ್ಲೆಯೊಳಗಿರುವ ಹಲವು ಗ್ರಾಮಗಳು ದಿಗ್ಬಂಧನ ಎದುರಿಸಬೇಕಾದಂತಹ ಸನ್ನಿವೇಶ ನಿರ್ಮಾಣವಾಗಿವೆ. ಕೃಷಿ ಬೆಳೆಗಳು ಸರ್ವನಾಶವಾಗಿವೆ. ಜುಲೈ ಮೊದಲ ವಾರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರೇ ಕೊಡಗಿಗೆ ತೆರಳಿ ನೆರೆ ಹಾನಿ ಪ್ರದೇಶಗಳನ್ನು ವೀಕ್ಷಿಸಿದ್ದರು. ಆದರೆ ಪರಿಹಾರ ವಿತರಣೆಯಲ್ಲಿ ಮಾತ್ರ ಕೊಡಗಿಗೆ ತೀವ್ರ ಅನ್ಯಾಯವಾಗಿದೆ ಎಂದು ಕೊಡಗಿನ ಜನತೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಕೊಡಗಿನ ಸ್ಥಿತಿಗತಿಗಳನ್ನು ವೀಕ್ಷಿಸಿ, ಕೊಡಗಿನ ಜನರ ಅಳಲನ್ನು ಸರಕಾರಕ್ಕೆ ತಲುಪಿಸುವ ಹೊಣೆಗಾರಿಕೆ ವಿರೋಧ ಪಕ್ಷದ್ದಾಗಿರುತ್ತದೆ. ಆದುದರಿಂದ, ಕೊಡಗಿನ ನೆರೆ ವಿಕೋಪಗಳನ್ನು ಪರಿಶೀಲಿಸಲು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೂರು ದಿನಗಳ ಹಿಂದೆ ಕೊಡಗಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರೆಂದು ಕರೆಸಿಕೊಂಡ ಜನರು, ಸಿದ್ದರಾಮಯ್ಯರ ಪ್ರವಾಸಕ್ಕೆ ತಡೆಯೊಡ್ಡುವ ಪ್ರಯತ್ನವನ್ನು ಮಾಡಿದರು. ಸಿದ್ದರಾಮಯ್ಯ ವಿರುದ್ಧ ಕಪ್ಪುಬಾವುಟ ಪ್ರದರ್ಶಿಸಿದ್ದು ಮಾತ್ರವಲ್ಲದೆ, ಅವರ ಕಾರಿಗೆ ಮೊಟ್ಟೆಯನ್ನು ಎಸೆಯಲಾಯಿತು. ವಿಪರ್ಯಾಸವೆಂದರೆ, ಯಡಿಯೂರಪ್ಪ ಅವರನ್ನು ಹೊರತು ಪಡಿಸಿದರೆ ಬಿಜೆಪಿ ಮುಖಂಡರು ಈ ಕೃತ್ಯವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸಮರ್ಥಿಸಿಕೊಂಡರು.
'ಸಾವರ್ಕರ್ ಕುರಿತಂತೆ ಸಿದ್ದರಾಮಯ್ಯ ಅವರು ಅಪಮಾನಕಾರಿ ಹೇಳಿಕೆಯನ್ನು ನೀಡಿದ್ದಾರೆ' ಎಂದು ಆರೋಪಿಸಿ ಈ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಕೊಡಗು ಭೇಟಿಗೆ ಅಡಚಣೆಯನ್ನು ಉಂಟು ಮಾಡಿದ್ದಾರೆ. ಮುಖ್ಯವಾಗಿ, ಸಿದ್ದರಾಮಯ್ಯ ಅವರು ವಿರೋಧಪಕ್ಷದ ಮುಖಂಡರಾಗಿ ನೆರೆ ಹಾನಿ ವೀಕ್ಷಣೆಗೆಂದು ಕೊಡಗಿಗೆ ಹೊರಟಿದ್ದರೇ ಹೊರತು, ಸಾವರ್ಕರ್ ವಿರುದ್ಧವಿರುವ ಯಾವುದೇ ಸಮಾರಂಭದಲ್ಲಿ ಭಾಗವಹಿಸಲು ಹೋಗಿರಲಿಲ್ಲ. ಕೊಡಗು ಜಿಲ್ಲೆಯ ಜನರ ಹಿತಾಸಕ್ತಿಯ ಬಗ್ಗೆ ಕಾಳಜಿಯಿರುವ ಯಾವುದೇ ಕಾರ್ಯಕರ್ತರು ಈ ಭೇಟಿಗೆ ಅಡಚಣೆಯನ್ನು ಉಂಟು ಮಾಡುತ್ತಿರಲಿಲ್ಲ. ವಿರೋಧ ಪಕ್ಷದ ನಾಯಕರು ಮಳೆ ಹಾನಿಯ ಪ್ರದೇಶಗಳನ್ನು ಭೇಟಿ ಮಾಡುವುದು ಆಳುವ ಪಕ್ಷಕ್ಕೆ ಇಷ್ಟವಿಲ್ಲದೇ ಇರುವುದನ್ನು ಇದು ಹೇಳುತ್ತದೆ. ಪರಿಹಾರ ನೀಡುವಿಕೆಯಲ್ಲಿ ಕೊಡಗು ಜಿಲ್ಲೆಯ ನಿರ್ಲಕ್ಷದ ಕುರಿತಂತೆ ಜನಸಾಮಾನ್ಯರಿಗೆ ಆಕ್ರೋಶವಿದೆ. ವಿರೋಧ ಪಕ್ಷಗಳ ನಾಯಕರು ಸ್ಥಳೀಯ ನಾಶ ನಷ್ಟಗಳನ್ನು ವೀಕ್ಷಿಸಿ ಅದನ್ನು ಮಾಧ್ಯಮಗಳಿಗೆ ಬಹಿರಂಗ ಪಡಿಸುವ ಆತಂಕದಿಂದ ಬಿಜೆಪಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿತೆ? ಎನ್ನುವ ಪ್ರಶ್ನೆ ಇದೀಗ ಜನರಲ್ಲಿ ಎದ್ದಿದೆ.
ಪ್ರತಿಭಟನೆ ಮತ್ತು ಮೊಟ್ಟೆ ಎಸೆತವನ್ನು ಬಿಜೆಪಿಯ ನಾಯಕರಾದ ಯಡಿಯೂರಪ್ಪ ಅವರೇ ಖಂಡಿಸಿದಾಗ ಬಿಜೆಪಿಯ ಕೆಲವು ಮುಖಂಡರು ಎಚ್ಚೆತ್ತುಕೊಂಡು, 'ಮೊಟ್ಟೆ ಎಸೆದಾತ ಕಾಂಗ್ರೆಸಿಗ' ಎಂದು ಹೇಳುವುದಕ್ಕೆ ಶುರು ಹಚ್ಚಿದರು. ಆದರೆ ಕೆಲವೇ ಗಂಟೆಗಳಲ್ಲಿ ಮೊಟ್ಟೆ ಎಸೆದಾತನ ಇತಿಹಾಸ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದವು. ಮೊಟ್ಟೆ ಎಸೆದವನು ಆರೆಸ್ಸೆಸ್ ಕಾರ್ಯಕರ್ತನೆನ್ನುವುದು, ಅಪ್ಪಚ್ಚು ರಂಜನ್ ಜೊತೆಗೆ ಗುರುತಿಸಿಕೊಂಡಿರುವುದು ಬೆಳಕಿಗೆ ಬಂತು. ಹೀಗೆ ಬೆಳಕಿಗೆ ಬಂದು, ಬಿಜೆಪಿಯ ಸುಳ್ಳು ಚಿಂದಿಯಾಗುತ್ತಿದ್ದಂತೆಯೇ, 'ಕೊಡಗಿನಲ್ಲಿ ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನ ಪ್ರವೇಶಿಸಿದರು' ಎನ್ನುವ ವಿವಾದವನ್ನು ಸೃಷ್ಟಿಸಲಾಯಿತು. ಈ ಆರೋಪವನ್ನು ಸ್ಥಳೀಯ ದೇವಸ್ಥಾನದ ಮುಖಂಡರಾಗಲಿ, ಅರ್ಚಕರಾಗಲಿ ಮಾಡಿಲ್ಲ ಎನ್ನುವುದು ಗಮನಿಸಬೇಕಾಗಿದೆ. ಈ ಆರೋಪವನ್ನು ಮಾಡಿರುವುದು ಮತ್ತೇ ಅದೇ ಬಿಜೆಪಿ ಕಾರ್ಯಕರ್ತರು. ಈ ಗದ್ದಲಗಳ ಮೂಲಕ, ಕೊಡಗಿನ ಜನರ ನಿಜವಾದ ಸಮಸ್ಯೆಯನ್ನೇ ಮರೆಮಾಚುವಲ್ಲಿ ಬಿಜೆಪಿಯ ಮುಖಂಡರು ಯಶಸ್ವಿಯಾದರು. ಇದೇ ಸಂದರ್ಭದಲ್ಲಿ ಕೊಡಗಿನ ಸಮಸ್ಯೆಗಳನ್ನು ಆಲಿಸಲು ಮತ್ತೊಮ್ಮೆ ಅಲ್ಲಿಗೆ ಪ್ರವಾಸ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದಾಗ, 'ಅದನ್ನು ತಡೆಯುತ್ತೇವೆ' ಎನ್ನುವಂತಹ ಹೇಳಿಕೆಯನ್ನು ಬಿಜೆಪಿಯ ಸಂಸದರೊಬ್ಬರು ನೀಡಿದ್ದಾರೆ. ಪ್ರಕೃತಿ ವಿಕೋಪ ನಡೆದ ಪ್ರದೇಶವೊಂದಕ್ಕೆ ಭೇಟಿ ನೀಡದಂತೆ ವಿರೋಧ ಪಕ್ಷವನ್ನು ತಡೆದ ಉದಾಹರಣೆ ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಡೆದಿದೆ. ಇದು ಕೊಡಗು ಜಿಲ್ಲೆಗೆ ಬಿಜೆಪಿಯ ನಾಯಕರು ಎಸಗಿದ ದ್ರೋಹವಾಗಿದೆ.
'ದೇವಸ್ಥಾನಕ್ಕೆ ಯಾರು ಏನನ್ನು ತಿಂದು ಪ್ರವೇಶಿಸಿದ್ದಾರೆ?' ಎನ್ನುವುದನ್ನು ನೋಡುವುದಕ್ಕೆ ಯಾವುದೇ ಯಂತ್ರೋಪಕರಣಗಳಿಲ್ಲ. ಜನಸಾಮಾನ್ಯರ ಸಂಕಷ್ಟಗಳಿಗೆ ಕಿವುಡಾಗಿ ಸದಾ ದೇವಸ್ಥಾನಗಳನ್ನು ಸುತ್ತಿ ತಮ್ಮ ಪಾಪ ಕಳೆದುಕೊಳ್ಳುವ ಯತ್ನದಲ್ಲಿರುವ ಬಿಜೆಪಿ ನಾಯಕರ ಹೊಟ್ಟೆಯೊಳಗೆ ಸವುಟು ಹಾಕಿ ತಿರುವಿದರೆ, ಅವರೇನೇನು ಹೊಲಸುಗಳನ್ನು ತಿಂದು ದೇವಸ್ಥಾನ ಪ್ರವೇಶಿಸಿದ್ದಾರೆ ಎನ್ನುವುದು ಬಹಿರಂಗವಾಗಬಹುದು. ಮಾಂಸ ತಿಂದು ದೇವಸ್ಥಾನ ಪ್ರವೇಶಿಸುವುದು ತಪ್ಪಾದರೆ, ಜನಸಾಮಾನ್ಯರ ಅಭಿವೃದ್ಧಿಗಾಗಿ ಬಳಸಬೇಕಾದ ಹಣದ ಶೇ. 40 ಕಮಿಶನ್ ಪಡೆದು ಹೊಟ್ಟೆಗಿಳಿಸಿ ದೇವಸ್ಥಾನ ಪ್ರವೇಶಿಸುವುದು ಎಷ್ಟು ಸರಿ? ಎಂದು ಇದೀಗ ಜನ ಪ್ರಶ್ನಿಸುವುದಕ್ಕೆ ಆರಂಭಿಸಿದ್ದಾರೆ.
ಅನೈತಿಕ, ಅಶ್ಲೀಲ ಕೃತ್ಯಗಳಲ್ಲಿ ತೊಡಗಿಸಿಕೊಂಡು ಬಳಿಕ ಯಾವ ನಾಚಿಕೆಯೂ ಇಲ್ಲದೆ ದೇವಸ್ಥಾನ ಪ್ರವೇಶಿಸುವ ರಾಜಕಾರಣಿಗಳನ್ನು ಹೊರಗಿಡಬೇಕಾಗಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ರಾಜಕಾರಣಿಯೊಬ್ಬರನ್ನು 'ನೀವು ಮಾಂಸ ತಿಂದು ದೇವಸ್ಥಾನ ಪ್ರವೇಶಿಸಿದ್ದೀರಾ?' ಎಂದು ಕೇಳುವ ಪತ್ರಕರ್ತ, ಖಂಡಿತವಾಗಿಯೂ ಸರಕಾರ ಅಥವಾ ಸರಕಾರದ ಬೆನ್ನಿಗಿರುವ ಆರೆಸ್ಸೆಸ್ ನೀಡಿರುವ ಹೊಲಸನ್ನು ತಿಂದೇ ಪ್ರಶ್ನೆ ಕೇಳಿರುತ್ತಾನೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಈ ಎಲ್ಲ ಗದ್ದಲಗಳಿಂದ ಕೊಡಗಿನ ಜನರ ನಿಜವಾದ ಸಮಸ್ಯೆಗಳು ಬದಿಗೆ ಸರಿದಿವೆ. ನೆರೆ ಸಂತ್ರಸ್ತರ ಅಳಲು ಅರಣ್ಯ ರೋದನವಾಗಿದೆ. ಮಾಧ್ಯಮಗಳು ಮತ್ತು ಬಿಜೆಪಿ ಜಂಟಿಯಾಗಿ ಕೊಡಗು ಜಿಲ್ಲೆಯ ಜನರ ಬೆನ್ನಿಗೆ ಚೂರಿ ಹಾಕಿವೆ. ನೆರೆ ಸಂತ್ರಸ್ತ ಕೊಡಗು ಜಿಲ್ಲೆ ಪ್ರವೇಶಿಸದಂತೆ ವಿರೋಧ ಪಕ್ಷವನ್ನು ತಡೆಯುವ ಯಾವುದೇ ಪ್ರಯತ್ನ ಸಂವಿಧಾನ ವಿರೋಧಿ, ಜನ ವಿರೋಧಿಯಾಗಿದೆ