ತುಂಬೆ ಯುನಿವರ್ಸಿಟಿ ಹಾಸ್ಪಿಟಲ್‌ನಿಂದ ಉತ್ತಮ ದರ್ಜೆಯ ಕಾರ್ಡಿಯೋಲಜಿ ಕೇಂದ್ರ ಉದ್ಘಾಟನೆ
ಅಜ್ಮಾನ್, ಆ. 24: ತುಂಬೆ ಯುನಿವರ್ಸಿಟಿ ಹಾಸ್ಪಿಟಲ್ ವತಿಯಿಂದ ಆರಂಭಿಸಲಾದ ಅತ್ಯಾಧುನಿಕ ಸೌಲಭ್ಯವನ್ನು ಒಳಗೊಂಡಿರುವ ನೂತನ ಕಾರ್ಡಿಯೋಲಜಿ ಕೇಂದ್ರ ಬುಧವಾರ ಉದ್ಘಾಟನೆಗೊಂಡಿತು.
ಹಲವಾರು ನುರಿತ ತಜ್ಞರ ನೇತೃತ್ವದಲ್ಲಿ ಉತ್ತಮ ಮತ್ತು ಅತ್ಯಾಧುನಿಕ ದರ್ಜೆಯ ಹೃದ್ರೋಗ ಚಿಕಿತ್ಸಾ ಸೌಲಭ್ಯವನ್ನು ಒಳಗೊಂಡ ಕಾರ್ಡಿಯೋಲಜಿ ಕೇಂದ್ರವನ್ನು ಮಂಗಳೂರು ಶಾಸಕ, ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ ಖಾದರ್ ಉದ್ಘಾಟಿಸಿದರು.
ಅಜ್ಮಾನ್ ನ ಅಲ್ ಜುರ್ಫ್ ನಲ್ಲಿರುವ ತುಂಬೆ ಮೆಡಿಸಿಟಿ ಆಸ್ಪತ್ರೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ತುಂಬೆ ಗ್ರೂಪ್ ನ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್ ಉಪಸ್ಥಿತರಿದ್ದರು.
ತುಂಬೆ ಗ್ರೂಪ್ ಹೆಲ್ತ್ ಕೇರ್ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ ಮಾತನಾಡಿ, "ನೂತನ ಎದೆನೋವು ಕೇಂದ್ರವು ಸುಧಾರಿತ ತುರ್ತು ಆರೈಕೆ ಮತ್ತು ಹೃದಯ ಸಂಬಂಧಿತ ರೋಗಗಳಿಗೆ ಅನುಗುಣವಾಗಿ ಸೇವೆಗಳನ್ನು ಒದಗಿಸುತ್ತದೆ. ತುಂಬೆ ಯೂನಿವರ್ಸಿಟಿ ಹಾಸ್ಪಿಟಲ್ ನ ಬಹುದೊಡ್ಡ ಉತ್ಕೃಷ್ಟತೆಯ ಗುರಿಯಲ್ಲಿ ಇದು ಒಂದು ಸಣ್ಣ ಹೆಜ್ಜೆ ಮಾತ್ರ. ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ಒದಗಿಸುವ ಅವಿಶ್ರಾಂತ ಪ್ರಯತ್ನದಲ್ಲಿ, ಪ್ರತಿಯೊಬ್ಬರೂ ಕೈಗೆಟುಕುವ ಬೆಲೆಯಲ್ಲಿ ಚಿಕಿತ್ಸೆ ಒದಗಿಸಲಾಗುವುದು" ಎಂದರು.
ಜೀವಕ್ಕೆ ಅಪಾಯಕಾರಿಯಾಗುವ ರೀತಿಯ ಎದೆನೋವಿವನ್ನು ಎದುರಿಸುವ ವೇಳೆ ಈ ಕೇಂದ್ರ ರೋಗಿಗಳಿಗೆ ನೆರವಾಗಲಿದೆ. ಎದೆನೋವು ಕೇಂದ್ರವು ಆಸ್ಪತ್ರೆಯ ತುರ್ತು ಮತ್ತು ಆಘಾತ ಸೇವೆಗಳ ವಿಭಾಗದಲ್ಲಿದ್ದು, ಇದು ಹೃದಯ ವಿಜ್ಞಾನದ ಕೇಂದ್ರದ ಒಂದು ಭಾಗವಾಗಿದೆ. ತಂತ್ರಜ್ಞಾನ-ಚಾಲಿತ ಆರೋಗ್ಯ ಉದ್ಯಮವನ್ನು ನಿರ್ಮಿಸುವಲ್ಲಿ ದೇಶದ ಪ್ರಯತ್ನಗಳಿಗೆ ತುಂಬೆ ಹೆಲ್ತ್ ಕೇರ್ ವಿಭಾಗದ ಕೊಡುಗೆಗಳನ್ನು ಬಲಪಡಿಸುವ ಗುರಿಯನ್ನು ಈ ಕೇಂದ್ರ ಹೊಂದಿದೆ.
ಸುಧಾರಿತ ಸೌಲಭ್ಯಗಳು, ಪರಿಣಿತ ಹೃದ್ರೋಗ ತಜ್ಞರು ಮತ್ತು ವೃತ್ತಿಪರ ವೈದ್ಯಕೀಯ ಸಿಬ್ಬಂದಿಯನ್ನು ಹೊಂದಿರುವ ಕೇಂದ್ರವು ವಾರದ ಏಳು ದಿನಗಳಲ್ಲಿ ಒಳರೋಗಿಗಳಿಗೆ ಮತ್ತು ಹೊರರೋಗಿಗಳಿಗೆ ಸಮಗ್ರ ತುರ್ತು ಸೇವೆಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಅತ್ಯಾಧುನಿಕ ಕ್ಯಾಥರೈಸೇಶನ್ ಪ್ರಯೋಗಾಲಯ, ತೀವ್ರ ನಿಗಾ ಘಟಕ (ICU) ಮತ್ತು ಹೃದಯ ನಿಗಾ ಘಟಕ (CCU)ವೂ ಇದೆ.
ತುಂಬೆ ಯೂನಿವರ್ಸಿಟಿ ಆಸ್ಪತ್ರೆಯ ಹೃದಯ ವಿಜ್ಞಾನದ ಕೇಂದ್ರವು ಅಪಾಯಕಾರಿ ಮತ್ತು ಅಪಾಯಕಾರಿಯಲ್ಲದ ಹೃದ್ರೋಗ ವಿಭಾಗಕ್ಕೆ ಸಂಬಂಧಿಸಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆ.
ಕೇಂದ್ರದ ಇತರ ಸೇವೆಗಳೆಂದರೆ, ಮೇಲ್ವಿಚಾರಣೆ ಮಾಡಲಾದ ಉತ್ತಮ ಹಾಸಿಗೆಗಳು, ವೆಂಟಿಲೇಟರ್ ಗಳು, ಡಿಫಿಬ್ರಿಲೇಟರ್ಗಳು, ಎಕೋಕಾರ್ಡಿಯೋಗ್ರಫಿ, ಸ್ಟ್ರೆಸ್ ಇಸಿಜಿ, ಪೇಸ್ಮೇಕರ್ ಇಂಪ್ಲಾಂಟೇಶನ್ ಮತ್ತು ಪ್ರೈಮರಿ ಆಂಜಿಯೋಪ್ಲ್ಯಾಸ್ಟಿಗಳನ್ನು ಒಳಗೊಂಡಿರುತ್ತದೆ. ಇದು ಬಲೂನ್ ಆಂಜಿಯೋಪ್ಲ್ಯಾಸ್ಟಿ ಮತ್ತು ಸ್ಟೆಂಟಿಂಗ್ ನಂತಹ ಸುಧಾರಿತ ಹೃದ್ರೋಗ ಚಿಕಿತ್ಸೆಗಳನ್ನು ನಿರ್ವಹಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.