varthabharthi


ಅನುಗಾಲ

ಗುರಿಯಿರದೆ ಬಿಡುವ ಬಾಣ!

ವಾರ್ತಾ ಭಾರತಿ : 25 Aug, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಬಿಜೆಪಿಯೊಂದಿಗೆ ಕಾದುವುದು ಸುಲಭವಲ್ಲ. ಅವರಲ್ಲಿ ಹಣವಿದೆ; ಜನರು ಮತಾಂಧತೆಯ ಭ್ರಮಾಧೀನರಾಗಿದ್ದಾರೆ. ಬಿಜೆಪಿಯ ಸಮ್ಮೋಹನಾಸ್ತ್ರಕ್ಕೆ ಬಲಿಯಾಗಿ ತಮ್ಮ ಕಿರೀಟಕುಂಡಲಗಳನ್ನು ಅವರಿಗೊಪ್ಪಿಸುವುದಕ್ಕೆ ಸಿದ್ಧರಿದ್ದಾರೆ. ಇದಕ್ಕೆ ಮಲಗಿದಂತೆ ನಟಿಸುವ ಭೀಷ್ಮಾಚಾರ್ಯರುಗಳೂ ಹೊರತಲ್ಲ. ಇಂತಹ ಸ್ಥಿತಿಯಲ್ಲಿ ಅವರಿಗೆ ಗುರಿಯಿಟ್ಟು ಬಾಣವನ್ನೆಸೆಯುವ ಮಹಾರಥಿಗಳು ಬೇಕಾಗಿದ್ದಾರೆ. ಆದರೆ ಸದ್ಯ ನಡೆಯುತ್ತಿರುವುದು ಗುರಿಯಿರದೆ ಬಿಟ್ಟ ಬಾಣ. ಅದು ಎದುರಾಳಿಯನ್ನು, ವೈರಿಯನ್ನು ತಾಕದೆ, ಜೊತೆಯಲ್ಲಿರುವವರನ್ನೇ ಘಾಸಿಗೊಳಿಸುತ್ತಿದೆ.ಕಳೆದ ಎಂಟು ವರ್ಷಗಳಿಂದ ಈ ದೇಶದ ಪ್ರತಿಪಕ್ಷಗಳು ಮೋದಿ ಸರಕಾರಕ್ಕೆ ನೀಡಿದ ಪ್ರತಿಕ್ರಿಯೆಯನ್ನು ಗಮನಿಸಿದರೆ ಮುಂದಿನ ಮಹಾಚುನಾವಣೆಯು 2024ರಲ್ಲಿ ನಡೆದರೆ ಮತ್ತೊಮ್ಮೆ ಮೋದಿ ಸರಕಾರವೇ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗುತ್ತಿದೆ. ಪ್ರತಿಪಕ್ಷಗಳೇ ಭಾರತೀಯ ಜನತಾ ಪಕ್ಷಗಳ ಶ್ರೀರಕ್ಷೆಯಾಗುತ್ತಿವೆಯೆಂಬುದು ವಿಷಾದನೀಯ ಅಂಶ. ಕೆಲವು ಇತ್ತೀಚೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ಹಾಗನ್ನಿಸುತ್ತಿದೆ. ಅವನ್ನು ಚರ್ಚಿಸಲು ಪ್ರಯತ್ನಿಸುತ್ತಿದ್ದೇನೆ:

ರಾಷ್ಟ್ರಪತಿಗಳ ಚುನಾವಣೆಯಲ್ಲಿ ಪ್ರತಿಪಕ್ಷಗಳಲ್ಲಿ ಅನೇಕ ಪಕ್ಷಗಳು ತಮ್ಮ ವಿಶಿಷ್ಟ ಕಾರಣಗಳಿಗಾಗಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದವು. ಅಭ್ಯರ್ಥಿಯು ಬುಡಕಟ್ಟಿಗೆ ಸೇರಿದವರಾದ್ದರಿಂದ ಅವರಿಗೆ ಸಿಕ್ಕ ಅವಕಾಶ ಕಳೆದುಹೋಗಬಾರದು ಎಂಬುದು ಇವುಗಳಲ್ಲೊಂದು. ಪ್ರತಿಪಕ್ಷಗಳ ಪೈಕಿ ಕಾಂಗ್ರೆಸನ್ನು, ಸಮಾಜವಾದಿಪಕ್ಷವನ್ನು ಇಷ್ಟಪಡುವುದಿಲ್ಲವಾದ್ದರಿಂದ ಆಳುವ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆಂಬುದು ಬಹುಜನ ಸಮಾಜವಾದಿ ಪಕ್ಷದ ಇನ್ನೊಂದು ವಾದ. ತಮ್ಮ ಆಯ್ಕೆಯೇನಿದ್ದರೂ ಅದು ತಾವು ಕಾರ್ಯಪ್ರವೃತ್ತ ವಾಗಿರುವ ರಾಜ್ಯದಲ್ಲಿ ಮಾತ್ರ, ದೇಶದ ರಾಜಕೀಯದಲ್ಲಿ ತಾವು ರಾಜ್ಯದ ಹಿತಕ್ಕೆ ಧಕ್ಕೆ ತರುವ ನಿಲುವನ್ನು ಕೈಗೊಳ್ಳುವುದಿಲ್ಲ ಎಂಬುದು ಪ್ರಾದೇಶಿಕ ಪಕ್ಷಗಳ ಮತ್ತೊಂದು ವಾದ. ತಮ್ಮ ರಾಜ್ಯದವರೇ ಅಭ್ಯರ್ಥಿಯಾಗಿರುವುದರಿಂದ ತಾವು ಬೆಂಬಲಿಸುತ್ತಿದ್ದೇವೆ ಎಂದು ಬಿಜುಜನತಾದಳ ತನ್ನ ಬೆಂಬಲವನ್ನು ಸಮರ್ಥಿಸಿತು. ಉದ್ಧವ್‌ಠಾಕ್ರೆಯ ಶಿವಸೇನೆಯನ್ನು ಮುರಿದು ಅಲ್ಲಿ ತನ್ನ ಬೆಂಬಲದ ಗುಂಪನ್ನು ಭಾರತೀಯ ಜನತಾ ಪಕ್ಷ ಅಧಿಕಾರಕ್ಕೇರಿಸಿದರೂ ಅಚ್ಚರಿಯೆಂಬಂತೆ ಉದ್ಧವ್‌ಠಾಕ್ರೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದರು.

ಒಟ್ಟಿನಲ್ಲಿ ಶೇ. 50 ಶಕ್ತಿಯಿದ್ದ ಭಾರತೀಯ ಜನತಾಪಕ್ಷದ ಅಭ್ಯರ್ಥಿ ಅದನ್ನು ಮೀರಿ ಭಾರೀ ಬೆಂಬಲವನ್ನು ಪಡೆದು ಗೆದ್ದರು. ಉಪರಾಷ್ಟ್ರಪತಿಯ ಚುನಾವಣೆಯಲ್ಲಿ ಈ ಪ್ರವೃತ್ತಿಯು ಇನ್ನೂ ಪ್ರಬಲವಾಗಿ ವ್ಯಕ್ತವಾಯಿತು. ಮಮತಾ ಬ್ಯಾನರ್ಜಿ ನಿರ್ಲಿಪ್ತ ನಿಲುವನ್ನು ತಳೆದರು. ಅದಕ್ಕೆ ಅವರು ನೀಡಿದ ಕಾರಣ ಪ್ರತಿಪಕ್ಷಗಳ ಅಭ್ಯರ್ಥಿಯನ್ನು ಘೋಷಿಸುವ ಮೊದಲು ಅವು ತಮ್ಮ(ನ್ನ)ನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬುದು. ಒಟ್ಟಿನಲ್ಲಿ ಆಳುವ ಪಕ್ಷದ ಅಭ್ಯರ್ಥಿಗಳು ತಮ್ಮ ನಿಜವಾದ ಶಕ್ತಿಗಿಂತ ಹೆಚ್ಚಿನ ಶಕ್ತಿಯನ್ನು ಪಡೆದರು. ರಾಮಾಯಣದಲ್ಲಿ ವಾಲಿಯ ಕಥೆ ಪ್ರಸಿದ್ಧವಾದದ್ದು. ಆತನಿಗೊಂದು ವರವಿತ್ತು: ಆತನ ಎದುರು ಯಾರೇ ನಿಂತರೂ ಅವರ ಶಕ್ತಿಯ ಅರ್ಧಾಂಶ ವಾಲಿಗೆ ಸಲ್ಲುತ್ತಿತ್ತು. ಇದರಿಂದ ವಾಲಿಗೆ ಆತನ ಶಕ್ತಿ ಮತ್ತು ಎದುರಾಳಿಯ ಅರ್ಧಶಕ್ತಿ ಸೇರಿಕೊಂಡು ಯಾವುದೇ ಲೆಕ್ಕಾಚಾರದಲ್ಲೂ ಆತನೇ ಗೆಲ್ಲುವುದು ಸಹಜವಾಗಿತ್ತು. ಸುಗ್ರೀವನೇ ಇರಲಿ, ರಾವಣನೇ ಇರಲಿ ವಾಲಿಯ ಯಾವುದೇ ಎದುರಾಳಿ ಈ ಕಾರಣಕ್ಕೆ ಸೋಲುತ್ತಿದ್ದರು. (ದುಂದುಭಿಯೊಬ್ಬನೇ ಅವನೊಡನೆ ವರ್ಷಪರ್ಯಂತ ಸೆಣಸಿದ್ದು! ಆದರೂ ಕೊನೆಗೆ ಸೋತು ಸತ್ತ.) ಈ ವರ ಶ್ರೀರಾಮನೆಂಬ ಅವತಾರ ದೇವರನ್ನೂ ಬಿಡಲಿಲ್ಲ. ವಾಲಿವಧೆಯಾಗಬೇಕಾದರೆ ಶ್ರೀರಾಮನು ಮರದ ಮರೆಯಿಂದ ಬಾಣಬಿಡಬೇಕಾಯಿತು!

ಇಂದು ಭಾರತೀಯ ಜನತಾ ಪಕ್ಷವು ಇದೇ ರೀತಿಯ ಅನುಕೂಲವನ್ನು ಅನುಭವಿಸಿ ಬೀಗುತ್ತಿದೆ. ಇದು ಇಂತಹ ಚುನಾವಣೆಗೆ ಮಾತ್ರ ಅನ್ವಯಿಸುತ್ತಿಲ್ಲ. ರಾಜ್ಯಗಳಲ್ಲಿರುವ ಪ್ರಾದೇಶಿಕ ಪಕ್ಷಗಳ ಗತಿಯೂ ಬಿಜೆಪಿಯನ್ನು ಬೆಂಬಲಿಸುವ ಅನಿವಾರ್ಯತೆಯನ್ನು ಹೊಂದಿದೆ. ಕರ್ನಾಟಕದಲ್ಲಿ ಜಾತ್ಯತೀತ ಜನತಾದಳವು ಬಿಜೆಪಿಯೊಂದಿಗೆ ಸೈದ್ಧಾಂತಿಕ ಭಿನ್ನತೆಯನ್ನು ಹೊಂದಿದ್ದರೂ ಅಧಿಕಾರ ರಾಜಕೀಯದ ಆಯಾಮದಲ್ಲಿ ತನಗೆ ಕಾಂಗ್ರೆಸ್ ದೊಡ್ಡ ಎದುರಾಳಿಯೆಂಬ ನಿಲುವನ್ನು ತಾಳಿದೆ. ಇದರಿಂದಾಗಿ ಬಹಳಷ್ಟು ನಿಷ್ಠುರ ಸಂದರ್ಭಗಳಲ್ಲಿ ಅದಕ್ಕೆ ಬಿಜೆಪಿ ಅನುಕೂಲದ ಹಾಸಿಗೆಯ ಜೊತೆಗಾರನಾಗಿದೆ. ಹಾಗೆಂದು ಕಾಂಗ್ರೆಸ್ ಕೂಡಾ ಇದೇ ರೀತಿಯ ವಿರೋಧಾಭಾಸವನ್ನು ಹೊಂದಿದೆ. ಬಿಜೆಪಿಯನ್ನು ಸೋಲಿಸುವುದಕ್ಕಿಂತಲೂ ಜಾತ್ಯತೀತ ಜನತಾದಳವನ್ನು ಸೋಲಿಸುವ ತುರ್ತು ಹೆಚ್ಚಾಗಿ ಅದು ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ತನ್ನ ‘ನಾಮ್‌ಕೇ ವಾಸ್ತೇ ಅಭ್ಯರ್ಥಿ’ಯನ್ನು ನಿಲ್ಲಿಸಿ ಮತಗಳು ಹಂಚಿಹೋಗಲು ಕಾರಣವಾಗಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ನೆರವಾಯಿತು. ಹೀಗಾಗಿ ಎಲ್ಲ ಕಡೆಗಳಲ್ಲೂ ತ್ರಿಕೋನ ಸ್ಪರ್ಧೆಯೆಂಬ ನಾಟಕದಲ್ಲಿ ಬಿಜೆಪಿ ನಗುತ್ತಿದೆ. ಉಳಿದ ಪಕ್ಷಗಳು ಇನ್ನೊಂದು ಪ್ರತಿಪಕ್ಷವನ್ನು ಸೋಲಿಸಿ ತಾವು ಗೆದ್ದೆವೆಂಬ ಭ್ರಮೆಯಲ್ಲಿದ್ದಾರೆ. ಓಟದಲ್ಲಿ ಪ್ರಥಮ ಸ್ಥಾನಕ್ಕೆ ಅಥವಾ ಖಂಡಿತ ಗೆಲುವಿನ ಸರದಾರನನ್ನು ಸೋಲಿಸುವ ಶಕ್ತಿಯಿದ್ದಾಗಲೂ ಅವನನ್ನು ಮುಂದೆ ಓಡಲು ಅವಕಾಶ ನೀಡಿ ದ್ವಿತೀಯ-ತೃತೀಯ ಸ್ಥಾನಕ್ಕೆ ಪೈಪೋಟಿ ನಡೆಸುವಂತಿದೆ ನಮ್ಮ ಪ್ರತಿಪಕ್ಷಗಳ ಓಟ. ಇಂತಹ ನಿಲುವಿನೊಂದಿಗೆ ಪ್ರಜಾಪ್ರಭುತ್ವ ಹೇಗೆ ಉಳಿದೀತು? ಸರಕಾರಕ್ಕೆ ಅನಾಯಾಸವಾಗಿ ಗೆಲ್ಲುವುದಕ್ಕೆ ಪ್ರತಿಪಕ್ಷಗಳ ಈ ನಿಲುವೇ ಸಾಕು. ಆದರೆ ಅದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿಪಕ್ಷಗಳನ್ನು ನಿತ್ರಾಣಗೊಳಿಸುವುದು ಮಾತ್ರವಲ್ಲ, ಅವನ್ನು ನಿರ್ನಾಮದ ಹಂತಕ್ಕೊಯ್ಯುತ್ತಿದೆ.

ಬಹುತೇಕ ಎಲ್ಲ ರಾಜ್ಯಗಳಲ್ಲಿ ‘ಆಪರೇಷನ್ ಕಮಲ’ ಒಂದಲ್ಲ ಒಂದು ರೀತಿಯಲ್ಲಿ, ಒಂದಲ್ಲ ಒಂದು ಹಂತದಲ್ಲಿ, ಒಂದಲ್ಲ ಒಂದು ಸಂದರ್ಭದಲ್ಲಿ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಒಡೆದ ರೀತಿಯನ್ನು ಗಮನಿಸಿದರೆ ಭಾರತೀಯ ಜನತಾ ಪಕ್ಷದ ಯುಕ್ತಿಗೆ ಯಾರಾದರೂ ಶಾಭಾಸ್ ಎನ್ನಬೇಕು. ಇದು ಪ್ರಜಾಪ್ರಭುತ್ವದ ಕೊಲೆಯೆಂದು ಪ್ರತಿಪಕ್ಷಗಳು ಹೇಳುವ ನೈತಿಕ ಅರ್ಹತೆಯನ್ನು ತಮ್ಮ ನಡೆನುಡಿಯಿಂದ ಕಳೆದುಕೊಳ್ಳುತ್ತಿವೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಿದೆ. ಸರಕಾರವು ತನ್ನ ನಿಯಂತ್ರಣದಲ್ಲಿರುವ ಸಿಬಿಐ (ಕೇಂದ್ರ ತನಿಖಾ ಸಂಸ್ಥೆ), ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ), ಈ.ಡಿ. (ಜಾರಿ ನಿರ್ದೇಶನಾಲಯ), ಐಟಿ (ಆದಾಯಕರ ಇಲಾಖೆ)ಮುಂತಾದ ಸಂಸ್ಥೆಗಳ ಮೂಲಕ ಪ್ರತಿಪಕ್ಷಗಳನ್ನು ಅಸ್ಥಿರಗೊಳಿಸುತ್ತಿದೆ. ಈಗಂತೂ ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ), ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಗಳ ಮೂಲಕ ಯಾರನ್ನಾದರೂ ಹಿಂಸಿಸಬಹುದು ಮತ್ತು ಹೆಡೆಮುರಿಕಟ್ಟಬಹುದೆಂಬ ತಂತ್ರವನ್ನು ಸರಕಾರ ಕಂಡುಕೊಂಡಿದೆ. ಈ ನಿಟ್ಟಿನಲ್ಲಿ ಸರಕಾರಿ ಅಧಿಕಾರಿಗಳು ಬಾಹುಬಲಿ ಸಿನೆಮಾದ ಕಟ್ಟಪ್ಪರಂತೆ ಉತ್ಸಾಹ ತೋರಿವೆ. ಸೋನಿಯಾ ಗಾಂಧಿಯಿಂದ ಹಿಡಿದು ಮನೀಶ್ ಸಿಸೋಡಿಯ ತನಕ (ಅಥವಾ ಡಿ.ಕೆ. ಶಿವಕುಮಾರ್ ತನಕ!) ಪ್ರತಿಪಕ್ಷಗಳ ಯಾರೇ ನಾಯಕನಿರಲಿ ಅವರನ್ನು ಬಗ್ಗುಬಡಿಯಲು ಈ ಸಂಸ್ಥೆಗಳು ಕಾದುಕುಳಿತಿವೆ. ರಾಜಕೀಯದ ಈ ಪ್ರಾಥಮಿಕ ತಿಳುವಳಿಕೆಯನ್ನು ಹೊಂದಲು ರಾಜಕೀಯದೊಳಗೆ ಇರಬೇಕಾಗಿಲ್ಲ. ಅವನ್ನು ವಸ್ತುನಿಷ್ಠವಾಗಿ ವೀಕ್ಷಿಸಿದರೂ ಸಾಕು, ಅರ್ಥವಾಗುತ್ತದೆ. ನೂರಕ್ಕೆ ನೂರು ಪ್ರಾಮಾಣಿಕರು ರಾಜಕೀಯದಲ್ಲಿ ಇಲ್ಲ.

ಪ್ರಾಮಾಣಿಕತೆಯೆಂಬ ಹೊದಿಕೆಯನ್ನು ಹೊದ್ದವರಿಗೂ ಸಂವಿಧಾನಬದ್ಧತೆಯಿಲ್ಲ. ಕೆಲವು ದಿನಗಳ ಹಿಂದೆ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇವರ ವಿರುದ್ಧ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯಲ್ಲಿ ಅವರು ನಡೆಸಿದ್ದಾರೆನ್ನಲಾದ ಅಕ್ರಮಗಳ ಕುರಿತು ದೀರ್ಘಕಾಲ ವಿಚಾರಿಸಿತು. ಈ ಕುರಿತಂತೆ ಕಾಂಗ್ರೆಸ್ ಪಕ್ಷವು ಭಾರೀ ಪ್ರಮಾಣದ ಪ್ರತಿಭಟನೆಯನ್ನು ಮಾಡಿ ಈ ಸಂಸ್ಥೆಗಳು ಆಳುವ ಪಕ್ಷದ ಗುಲಾಮರೆಂದು ಮತ್ತು ಪ್ರಜಾಪ್ರಭುತ್ವದ ಅಣಕವೆಂದು, ಸರ್ವಾಧಿಕಾರದ ದಬ್ಬಾಳಿಕೆಯೆಂದು ಟೀಕಿಸಿತು. ಆದರೆ ಮೊನ್ನೆ ಮೊನ್ನೆ ದಿಲ್ಲಿಯ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆಯೆಂದು ಅಲ್ಲಿನ ಆಪ್ ಸರಕಾರದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿ ಅವರ ಮತ್ತು ಅವರ ಅನೇಕ ಅಧಿಕಾರಿಗಳ, ಬೆಂಬಲಿಗರ ಮತ್ತಿತರರ ವಿರುದ್ಧ ಪ್ರಕರಣವನ್ನು ದಾಖಲಿಸಿದಾಗ ತನ್ನ ನಿಲುವನ್ನು ಹಠಾತ್ತನೆ ಬದಲಾಯಿಸಿ ಮನೀಶ್ ಸಿಸೋಡಿಯ ರಾಜೀನಾಮೆ ನೀಡಬೇಕೆಂದು ಕರೆಕೊಟ್ಟಿತು. ಈ ಕ್ಷಣದಲ್ಲಿ ಕಾಂಗ್ರೆಸಿಗೆ ಈ.ಡಿ.ಯಾಗಲೀ, ಸಿಬಿಐಯಾಗಲಿ ಕೇಂದ್ರ ಸರಕಾರದ ಪಂಜರದ ಪಕ್ಷಿಯಾಗಿ ಕಾಣಿಸುವುದಿಲ್ಲ; ಬದಲಾಗಿ ಪ್ರಜಾಪ್ರಭುತ್ವದ ಶಕ್ತ ಅಸ್ತ್ರವಾಗಿ ಕಾಣಿಸುತ್ತದೆ. ಇನ್ನೊಂದೆಡೆ ಎಲ್ಲ ಪ್ರತಿಪಕ್ಷಗಳು ಮಾಡುವ ಒತ್ತಾಯಗಳಿಗೆ ಆಪ್ ಅಥವಾ ಟಿಎಂಸಿ ಅಥವಾ ಇನ್ಯಾವುದೋ ಪಕ್ಷಗಳು ಬೆಂಬಲಿಸುವುದಿಲ್ಲ. ಅವು ಪ್ರತ್ಯೇಕವಾಗಿ ಮೆರವಣಿಗೆ ಹೋಗಲು ಇಚ್ಛಿಸುತ್ತವೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿ ಹಾಗೂ ಎಡಪಕ್ಷಗಳು ಪರಸ್ಪರ ಹೊಡೆದಾಡುವುದನ್ನು ಗಮನಿಸಿದರೆ ಅಲ್ಲೂ ಇನ್ನೊಂದು ಚುನಾವಣೆಯಲ್ಲಿ ಬಿಜೆಪಿ ಅಧಿಕಾರವನ್ನೇರಿದರೆ ಅಚ್ಚರಿಯಿಲ್ಲ.

ಹಾಲು, ಮಜ್ಜಿಗೆಗೂ ಜಿಎಸ್‌ಟಿಯ ಕುರಿತು ಅರ್ಥಮಂತ್ರಿ ಹೇಳಿದ ಒಮ್ಮತದ ನಿರ್ಣಯವೆಂಬ ಮಾತನ್ನು ಯಾವ ಪ್ರತಿಪಕ್ಷವೂ ನಿರಾಕರಿಸಲಿಲ್ಲ; ಪ್ರತಿಭಟಿಸಲಿಲ್ಲ. ಪ್ರಾಯಃ ಅಲ್ಲಿ ದಿಲ್ಲಿ, ಪಂಜಾಬ್, ಪಶ್ಚಿಮ ಬಂಗಾಳವೂ ಸೇರಿದಂತೆ ಎಲ್ಲ ಪ್ರತಿಪಕ್ಷಗಳೂ ಯೋಚಿಸದೆ ಬೆಂಬಲಿಸಿರಬಹುದು. ಏಕೆಂದರೆ ಬಿಜೆಪಿ ನಂಬಿಕೊಂಡಿರುವುದು ಮತೀಯತೆ, ಅಜ್ಞಾನ ಮತ್ತು ಪ್ರತಿಪಕ್ಷಗಳ ಆಂತರಿಕ ಕಲಹವನ್ನು. ಒಂದಿಷ್ಟು ಒಡಕಿದೆಯೆಂದು ಗೊತ್ತಾದೊಡನೆಯೇ ಅದು ಆಪರೇಷನ್ ಕಮಲವನ್ನು ನಿರಾಯಾಸವಾಗಿ ನಡೆಸುತ್ತದೆ. ಈ ತಂತ್ರಕ್ಕೆ ಪ್ರತಿಪಕ್ಷಗಳ ಸರದಾರರು ಸುಲಭ ತುತ್ತಾಗುತ್ತಾರೆ. ಏಕೆಂದರೆ ಅವರಲ್ಲಿ ಬಹುತೇಕ ಎಲ್ಲರೂ ಅಧಿಕಾರ ರಾಜಕಾರಣಿಗಳೇ ಹೊರತು ನಾಯಕರಲ್ಲ. ಅಷ್ಟೇ ಅಲ್ಲ, ಬಿಜೆಪಿ ಮಾಡುವ ಆರೋಪಗಳಿಗೆ ತಕ್ಕ ಉತ್ತರ ನೀಡುವ ಅಥವಾ ಜನರನ್ನು ತಮ್ಮ ನಿಲುವಿಗೆ ಒಪ್ಪಿಸುವ ಸಾಮರ್ಥ್ಯವಿಲ್ಲವೆಂದೇ ಅನ್ನಿಸುತ್ತದೆ. ಇಂತಹದೇ ಸ್ಥಿತಿ 1970ರ ದಶಕದಲ್ಲೂ ನಿರ್ಮಾಣವಾಗಿತ್ತು. ಆದರೆ ಆಗ ಎಲ್ಲ ಪ್ರತಿಪಕ್ಷಗಳು ಒಟ್ಟಾದವು-ಪ್ರಾಯಃ ಅನಿವಾರ್ಯವಾಗಿ. ಈಗಲೂ ಅಂತಹದೇ ಅನಿವಾರ್ಯತೆಯಿದೆ. ಆದರೆ ಜನರ ನಡುವಿನಿಂದ ಉದಿಸುವ ಜಯಪ್ರಕಾಶ ನಾರಾಯಣರಿಲ್ಲ. ಇಂದಿರಾ ಗಾಂಧಿಯ ಆಳ್ವಿಕೆಯನ್ನು ವಿರೋಧಿಸಿ ಪ್ರತಿಪಕ್ಷಗಳ ನಾಯಕರು ಸೆರೆಮನೆ ಸೇರಿದರು ಅನ್ನುವುದಕ್ಕಿಂತಲೂ ಪ್ರತಿಪಕ್ಷಗಳ ನಡೆಯ ಕುರಿತು ಭೀತರಾದ ಇಂದಿರಾ ತುರ್ತುಪರಿಸ್ಥಿತಿಯನ್ನು ಘೋಷಿಸಿ ಅವರನ್ನು ಸೆರೆಮನೆಗೆ ತಳ್ಳಿದರು.

ಪರಿಣಾಮ ಸರ್ವವಿಧಿತ. ಅದರ ಅನುಭವವನ್ನು ಪಡೆದ ಈಗಿನ ಸರಕಾರ ಅಂತಹ ಅಪಾಯಕ್ಕೆ ತಲೆಯೊಡ್ಡುತ್ತಿಲ್ಲ. ಅದು ಒಬ್ಬರಾದ ಒಬ್ಬರ ವಿರುದ್ಧ ಪ್ರಕರಣಗಳನ್ನು ಸೃಷ್ಟಿಸಿ, ಅವರನ್ನು ನಿತ್ಯತಾಪತ್ರಯಕ್ಕೊಡ್ಡಿ ಇತರ ವಿಚಾರಗಳಲ್ಲಿ ಅವರು ಭಾಗವಹಿಸದಂತೆ ನೋಡುತ್ತಿದೆ. ಎಲ್ಲ ಪ್ರತಿಪಕ್ಷಗಳೂ ತಮ್ಮ ತಮ್ಮ ಸಂರಕ್ಷಣೆಗೆ ಪ್ರಯತ್ನಿಸುವುದರಿಂದ ಅವು ಪರಸ್ಪರ ನೆರವಾಗುವುದನ್ನು ಅಲಕ್ಷಿಸಿವೆ; ಮತ್ತು ತಮಗೆಲ್ಲಿ ಇನ್ನೂ ಹೆಚ್ಚಿನ ಅಪಾಯ ಎದುರಾಗುತ್ತದೆಯೋ ಎಂಬ ಆತಂಕದಲ್ಲಿವೆ. ರಾಷ್ಟ್ರೀಯವಾಗಿ ಮುಖ್ಯವಾಗಿರುವ ಕಾಂಗ್ರೆಸ್ ಪಕ್ಷವಂತೂ ಬಿಜೆಪಿಯ ‘ಕಾಂಗ್ರೆಸ್ ಮುಕ್ತ’ ಭಾರತಕ್ಕೆ ಸಹಾಯ‘ಹಸ್ತ’ ನೀಡುವಂತೆ ತನ್ನೊಳಗಿನ ವೈರುಧ್ಯಗಳನ್ನು, ಅಶಿಸ್ತನ್ನು ಪರಿಹರಿಸಿಕೊಳ್ಳುವಲ್ಲಿ ಸೋಲುತ್ತಿದೆ. ಈಗ ಕಾಂಗ್ರೆಸೆಂಬ ಟೈಟಾನಿಕ್‌ನ ಪ್ರಮುಖರೆಲ್ಲ (ಕಪಿಲ್ ಸಿಬಲ್, ಗುಲಾಮ್ ನಬಿ ಆಝಾದ್, ಆನಂದ ಶರ್ಮಾ ಮುಂತಾದವರು) ತಮ್ಮ ಅಧಿಕಾರ ಶಾಶ್ವತಿಯ ಭ್ರಮೆಯನ್ನು ಕಳೆದುಕೊಂಡು ಒಬ್ಬೊಬ್ಬರಾಗಿ ಜಾರಿಕೊಳ್ಳುತ್ತಿದ್ದಾರೆ. ಈ ಹೊರಹರಿವು ಮುಂದುವರಿಯಲಿದೆ. ಇದನ್ನು ತಡೆಗಟ್ಟುವ ಯಾವ ಲಕ್ಷಣವೂ ಕಾಂಗ್ರೆಸ್ ಪಕ್ಷದಲ್ಲಿ ಕಾಣುತ್ತಿಲ್ಲ. ಸ್ವಾತಂತ್ರ್ಯಪೂರ್ವ ಕಾಂಗ್ರೆಸ್ ಒಂದು ಅಭಿಯಾನವಾಗಿತ್ತು; ಚಳವಳಿಯಾಗಿತ್ತು. ಸ್ವಾತಂತ್ರ್ಯೋತ್ತರದಲ್ಲಿ ಅದು ತನ್ನ ಎಲ್ಲ ಅಗತ್ಯ ಲಕ್ಷಣಗಳನ್ನು ಕಳೆದುಕೊಂಡರೂ ನೆಹರೂರಂತಹವರ ನಾಯಕತ್ವದಲ್ಲಿ ರಾಜಕೀಯ ಪಕ್ಷವಾಗಿ ಮುನ್ನಡೆಯಿತು. ಆರಂಭದ ಹಂತದಲ್ಲಿ ಅದರಿಂದ ಹೊರಬಂದವರೆಲ್ಲರೂ (ಅಂಬೇಡ್ಕರ್, ಕೃಪಲಾನಿ, ರಾಜಾಜಿ, ಲೋಹಿಯಾ, ಶ್ಯಾಮ್‌ಪ್ರಸಾದ್ ಮುಖರ್ಜಿ ಮುಂತಾಗಿ)ಸೈದ್ಧಾಂತಿಕವಾಗಿ ಗೆದ್ದರೂ ರಾಜಕೀಯವಾಗಿ ವಿಫಲರಾದರು. ಆದರೆ ಜನರ ಆದ್ಯತೆಯೇನಿದೆಯೆಂಬ ಸುಳಿವು ಸಿಕ್ಕ ಆಗಿನ ಜನಸಂಘ ಮುಂದೆ ಭಾರತೀಯ ಜನತಾ ಪಕ್ಷವಾಗಿ ಸಂವಿಧಾನವನ್ನು ಮಾತ್ರವಲ್ಲ, ಸಾಮಾಜಿಕ ನೈತಿಕತೆಯನ್ನು ಬಲಿಕೊಟ್ಟಾದರೂ ಅಧಿಕಾರದ ಹುಲಿಸವಾರಿಗೆ ತೊಡಗಿತು; ಮತ್ತು ಯಶಸ್ವಿಯಾಯಿತು. ತುರ್ತುಪರಿಸ್ಥಿತಿಯ ನಿಜವಾದ ಲಾಭವಾದದ್ದು ಬಿಜೆಪಿಗೆ ಮಾತ್ರ.

2024ರ ಕನಸೇನಾದರೂ ಇದ್ದರೆ ಪ್ರತಿಪಕ್ಷಗಳು ತಮ್ಮ ವೈಯಕ್ತಿಕ ಆತ್ಮಪ್ರತಿಷ್ಠೆಯನ್ನು, ಅಹಂಭಾವವನ್ನು, ಬಿಕ್ಕಟ್ಟನ್ನು ನಿವಾರಿಸಿಕೊಂಡು ಯಾರಾದರೂ ಒಬ್ಬರನ್ನು ತಮ್ಮ ಸಂಯುಕ್ತ ನಾಯಕರನ್ನಾಗಿ ಆರಿಸಿ ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರದರ್ಶಿಸಬೇಕು. ಬಿಜೆಪಿಯೊಂದಿಗೆ ಕಾದುವುದು ಸುಲಭವಲ್ಲ. ಅವರಲ್ಲಿ ಹಣವಿದೆ; ಜನರು ಮತಾಂಧತೆಯ ಭ್ರಮಾಧೀನರಾಗಿದ್ದಾರೆ. ಬಿಜೆಪಿಯ ಸಮ್ಮೋಹನಾಸ್ತ್ರಕ್ಕೆ ಬಲಿಯಾಗಿ ತಮ್ಮ ಕಿರೀಟಕುಂಡಲಗಳನ್ನು ಅವರಿಗೊಪ್ಪಿಸುವುದಕ್ಕೆ ಸಿದ್ಧರಿದ್ದಾರೆ. ಇದಕ್ಕೆ ಮಲಗಿದಂತೆ ನಟಿಸುವ ಭೀಷ್ಮಾಚಾರ್ಯರುಗಳೂ ಹೊರತಲ್ಲ. ಇಂತಹ ಸ್ಥಿತಿಯಲ್ಲಿ ಅವರಿಗೆ ಗುರಿಯಿಟ್ಟು ಬಾಣವನ್ನೆಸೆಯುವ ಮಹಾರಥಿಗಳು ಬೇಕಾಗಿದ್ದಾರೆ. ಆದರೆ ಸದ್ಯ ನಡೆಯುತ್ತಿರುವುದು ಗುರಿಯಿರದೆ ಬಿಟ್ಟ ಬಾಣ. ಅದು ಎದುರಾಳಿಯನ್ನು, ವೈರಿಯನ್ನು ತಾಕದೆ, ಜೊತೆಯಲ್ಲಿರುವವರನ್ನೇ ಘಾಸಿಗೊಳಿಸುತ್ತಿದೆ. ಓಟದಲ್ಲಿ ಪರಸ್ಪರ ಕೈಹಿಡಿದುಕೊಂಡು ಪ್ರದರ್ಶನಕ್ಕೆ ನಿಂತರೆ ಸಾಲದು. ತನಗಿಂತ ಮುಂದೆ ಇತರ ಜೊತೆಗಾರರು ಹೋಗದಂತೆ ಕಾಲನ್ನು ಅಡ್ಡ ಕೊಡುವುದೂ ನಿಲ್ಲಬೇಕು. ಏಡಿಗಳು ಪ್ರತಿಪಕ್ಷಗಳ ಸಮೂಹ ಲಾಂಛನವಾಗುವುದನ್ನು ಎಷ್ಟು ಬೇಗ ತಪ್ಪಿಸಿದರೆ ಅಷ್ಟು ಒಳ್ಳೆಯದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)