ಪೆಗಾಸಸ್: ಸರಕಾರವೇ ಅಪರಾಧಿಯಾಗಿರುವಾಗ ಅಪರಾಧ ಸಾಬೀತಾಗುವುದೇ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಇಂದು ನಿವೃತ್ತರಾಗುತ್ತಿದ್ದಾರೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯ ನ್ಯಾಯಾಧೀಶರ ಕೋರ್ಟಿನ ಕೊನೆಯ ದಿನದ ನಡಾವಳಿಗಳನ್ನು ಲೈವ್‌ಸ್ಟ್ರೀಮ್ ಮಾಡಲಾಗಿದೆ. ಇಂತಹ ಕೆಲವು ಮೊದಲುಗಳಿಗೆ ಕಾರಣರಾದ ನ್ಯಾ. ರಮಣ ಅವರು ಅಧಿಕಾರ ವಹಿಸಿಕೊಂಡ ಪ್ರಾರಂಭದ ಅವಧಿಯಲ್ಲಿ ನ್ಯಾಯಾಂಗದ ಬಗ್ಗೆ ಮತ್ತೆ ಭರವಸೆ ಹುಟ್ಟುವಂಥ ಮಾತುಗಳನ್ನು ಕೂಡ ಆಡಿದ್ದರು. ತಮ್ಮ ಅವಧಿಯಲ್ಲಿ ಅವರು ದೇಶ-ವಿದೇಶಗಳಲ್ಲಿ ಮಾಡಿರುವ 26 ಭಾಷಣಗಳಲ್ಲಿ ಅವರು ಒಬ್ಬ ಉದಾರವಾದಿ ಪ್ರಜಾತಂತ್ರವಾದಿ ನ್ಯಾಯಾಧೀಶರ ಆಶಯಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ವಾಸ್ತವದಲ್ಲಿ ನ್ಯಾ. ರಮಣ ಅವರ ಅವಧಿ ಮತ್ತೊಂದು ಕಳೆದುಕೊಂಡ ಅವಕಾಶದಂತೆಯೇ ಕಾಣುತ್ತದೆ. ಅವರ ಅವಧಿಯಲ್ಲಿ ಅವರ ಮುಂದೆ ಬಂದ ಹಲವಾರು ಪ್ರಕರಣಗಳು ಈ ದೇಶದ ರಾಜಕೀಯ-ಆರ್ಥಿಕತೆ ಮತ್ತು ಸಾಮಾಜಿಕ ಜೀವನವನ್ನು ಮತ್ತೆ ಸಾಂವಿಧಾನಿಕ ಮಾರ್ಗಕ್ಕೆ ಮರಳುವಂತೆ ಮಾಡಬಹುದಾದ ಮಹತ್ತರ ಅವಕಾಶ ಮುಖ್ಯ ನ್ಯಾಯಮೂರ್ತಿಗಳಿಗಿತ್ತು. ಆದರೆ ಅವರು ಮಾತಿನಲ್ಲಿ ತಮ್ಮ ಹಿಂದಿನ ಮುಖ್ಯ ನ್ಯಾಯಾಧೀಶರಿಗಿಂತ ಭಿನ್ನವಾದ ಮಾತುಗಳನ್ನು ಆಡಿದರೂ, ಕೃತಿಯಲ್ಲಿ ಹೆಚ್ಚಿನ ಭಿನ್ನತೆಯನ್ನೇನೂ ತೋರಲಿಲ್ಲ ಎನ್ನುವುದು ಸ್ಪಷ್ಟವಾಗಿ ಎದ್ದುಕಾಣುತ್ತದೆ. ಇದು ನ್ಯಾ. ರಮಣ ಅವರ ಅವಧಿಯ ಬಗ್ಗೆ ದೊಡ್ಡ ಭ್ರಮನಿರಸನವನ್ನೂ ದೇಶದ ನಾಗರಿಕ ಸಮಾಜದಲ್ಲಿ ಹುಟ್ಟುಹಾಕಿದೆ. ಈ ಭ್ರಮನಿರಸನಗಳಿಗೆ ಕಾರಣವಾಗಿರುವ ಹಲವಾರು ಉದಾಹರಣೆಗಳಲ್ಲಿ ಅತಿಮುಖ್ಯ ವಾದದ್ದು ಪೆಗಾಸಸ್ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳು ನಿಭಾಯಿಸಿದ ರೀತಿ.
ಪೆಗಾಸಸ್ ಎಂಬ ದುಷ್ಟ ಸಾಫ್ಟ್‌ವೇರ್ ಅನ್ನು ಇಸ್ರೇಲಿನ ಎನ್‌ಎಸ್‌ಒ ಎಂಬ ಸಂಸ್ಥೆ ಉತ್ಪಾದಿಸುತ್ತಿದ್ದು ಅದನ್ನು ಸರಕಾರಗಳಿಗೆ ಮತ್ತು ಸರಕಾರಿ ಸಂಸ್ಥೆಗಳಿಗೆ ಮಾತ್ರ ಮಾರಾಟ ಮಾಡುತ್ತದೆ. ಈ ಮಾಲ್ವೇರ್ ತಂತ್ರಜ್ಞಾನವನ್ನು ಬಳಸಿಕೊಂಡು ಸರಕಾರಿ ಸಂಸ್ಥೆಗಳು ತನ್ನ ನಾಗರಿಕರು, ಪತ್ರಕರ್ತರು, ವಿರೋಧ ಪಕ್ಷದವರ ಮೇಲೆ ಅವರಿಗೆ ಗೊತ್ತಾಗದಂತೆ ಅವರ ಮೊಬೈಲ್, ಕಂಪ್ಯೂಟರ್‌ಗಳನ್ನೇ ಬಳಸಿಕೊಂಡು ಅವರ ಮೇಲೆ ಬೇಹುಗಾರಿಕೆ ನಡೆಸಬಹುದು. ಅವರಿಗೆ ಗೊತ್ತಾಗದಂತೆ ಅವರ ಮೊಬೈಲ್ ಮತ್ತು ಕಂಪ್ಯೂಟರ್‌ಗಳಲ್ಲಿ ದೇಶದ್ರೋಹಿ ದಾಖಲೆಗಳನ್ನು ಸೇರ್ಪಡೆ ಮಾಡಿ, ಅದರ ಆಧಾರದಲ್ಲಿ ಅವರನ್ನು ಜೈಲಿಗೆ ತಳ್ಳಬಹುದು. ಹೀಗೆ ಈ ಮಾಲ್ವೇರ್ ತಂತ್ರಜ್ಞಾನ ಒಂದು ಪ್ರಜಾತಂತ್ರದಲ್ಲಿ ಆಳುವ ಸರಕಾರವನ್ನು ಸರ್ವಾಧಿಕಾರಿಯನ್ನಾಗಿ ಮಾಡುತ್ತದೆ. ಪೆಗಾಸಸ್ ತಂತ್ರಜ್ಞಾನ ಹಾಗೂ ಅದರ ದುರ್ಬಳಕೆಯ ಬಗ್ಗೆ ಕಳೆದ ವರ್ಷ ಭಾರತದ ದ ವೈರ್ ಸುದ್ದಿ ಸಂಸ್ಥೆಯನ್ನೂ ಒಳಗೊಂಡಂತೆ ಜಗತ್ತಿನ ಹಲವಾರು ಮಾಧ್ಯಮ ಹಾಗೂ ನಾಗರಿಕ ಹಕ್ಕು ಸಂಸ್ಥೆಗಳು ಪರಿಣಿತರನ್ನೂ ಸೇರಿಸಿಕೊಂಡು ಮಾಡಿದ ಸುದೀರ್ಘ ಅಧ್ಯಯನದ ವರದಿಯನ್ನು ಬಿಡುಗಡೆ ಮಾಡಿತು. ಆ ವರದಿಯ ಪ್ರಕಾರ ಭಾರತದಲ್ಲೂ 300 ಜನ ಪತ್ರಕರ್ತರು, ನಾಗರಿಕ ಹಕ್ಕುಗಳ ಕಾರ್ಯಕರ್ತರು, ವಕೀಲರು, ವಿರೋಧ ಪಕ್ಷದ ಸದಸ್ಯರು ಮಾತ್ರವಲ್ಲದೆ ಆಳುವ ಪಕ್ಷದ ಭಿನ್ನಮತೀಯರು ಹಾಗೂ ಮಾಜಿ ಮುಖ್ಯ ನ್ಯಾಯಮೂರ್ತಿಗಳನ್ನು ಸರಕಾರ ಕಾನೂನು ಬಾಹಿರವಾಗಿ ಪೆಗಾಸಸ್ ಬೇಹುಗಾರಿಕೆಗೆ ಒಳಪಡಿಸಿದೆ ಎಂಬ ಆತಂಕಕಾರಿ ವರದಿಯನ್ನು ನೀಡಿತು. ಇದು ರಾಜಕೀಯ ವಲಯದಲ್ಲಿ ಸಹಜವಾಗಿಯೇ ತಲ್ಲಣವನ್ನುಂಟು ಮಾಡಿತು.
ಪೆಗಾಸಸ್ ಉತ್ಪಾದಿಸುವ ಸಂಸ್ಥೆ ಅದನ್ನು ಸರಕಾರಗಳಿಗೆ ಬಿಟ್ಟರೆ ಬೇರೆ ಖಾಸಗಿ ಸಂಸ್ಥೆಯವರಿಗೆ ಮಾರುವುದಿಲ್ಲವಾದ್ದರಿಂದ ಭಾರತದಲ್ಲಿ ಅದರ ಬಳಕೆಯಾಗಿದೆಯೆಂದರೆ ಅದನ್ನು ಭಾರತ ಸರಕಾರವೇ ಕೊಂಡಿರಬೇಕು. ಹೀಗಾಗಿ ಸಂಸತ್ತು ಮತ್ತು ಭಾರತದ ಜನತೆ ಮೋದಿ ಸರಕಾರಕ್ಕೆ ಕೇಳಿದ್ದು ಒಂದೇ ಪ್ರಶ್ನೆ: ಭಾರತ ಸರಕಾರವು ಪೆಗಾಸಸ್ ಅನ್ನು ಖರೀದಿಸಿದೆಯೇ? ಖರೀದಿಸಿ ಬಳಸಿದ್ದರೆ ಯಾವ ಕಾನೂನಿನ ರೀತ್ಯಾ ಅದನ್ನು ಬಳಸಲಾಗಿದೆ? ಆದರೆ ಮೋದಿ ಸರಕಾರ ಅತ್ಯಂತ ಸರ್ವಾಧಿಕಾರದಿಂದ ದೇಶದ ಭದ್ರತೆಯ ನೆಪ ಒಡ್ಡಿ ಅದಕ್ಕೆ ಉತ್ತರ ಕೊಡಲು ನಿರಾಕರಿಸಿತು. ಇದು ಸರಕಾರ ಪೆಗಾಸಸ್ ಬಳಕೆ ಮಾಡಿರುವುದಕ್ಕೆ ದೊಡ್ಡ ಪುರಾವೆಯಾಗಿತ್ತು. ಮೋದಿ ಸರಕಾರದ ಈ ಉಡಾಫೆ ಉತ್ತರ ಭಾರತಕ್ಕೆ ಮಾಡಿದ ಅವಮಾನವೇ ಆಗಿತ್ತು. ಹೀಗಾಗಿ ಸುಪ್ರೀಂ ಕೋರ್ಟಿನಲ್ಲಿ ಈ ಬಗ್ಗೆ ಹಲವಾರು ಪ್ರಕರಣಗಳು ದಾಖಲುಗೊಂಡವು. ನ್ಯಾ. ರಮಣ ಅವರ ನೇತೃತ್ವದ ಸುಪ್ರೀಂ ಕೋರ್ಟು ಬೆಂಚು ಕೂಡ ಸರಕಾರಕ್ಕೆ ಕೇಳಿದ್ದು ಪೆಗಾಸಸ್ ಅನ್ನು ಸರಕಾರ ಖರೀದಿಸಿದೆಯೇ ಎಂಬ ಒಂದೇ ಪ್ರಶ್ನೆ. ಆದರೆ ಆ ಒಂದು ಪ್ರಶ್ನೆಗೆ ಉತ್ತರ ಕೊಡಲು ಹಲವು ವಾರಗಳ ಅವಕಾಶ ತೆಗೆದುಕೊಂಡ ಮೋದಿ ಸರಕಾರ ಕೊನೆಗೂ ‘‘ದೇಶದ ಭದ್ರತೆಯ ಕಾರಣಗಳಿಂದಾಗಿ ಈ ಪ್ರಶ್ನೆಗೆ ಸರಕಾರ ಉತ್ತರ ಕೊಡುವುದಿಲ್ಲ’’ ಎಂದು ಸರ್ವಾಧಿಕಾರಿ ಉತ್ತರವನ್ನು ನೀಡಿತು.
ಸಾಮಾನ್ಯವಾಗಿ ಈ ರೀತಿ ಆರೋಪಿಗಳು ತನಿಖೆಯಲ್ಲಿ ಸಹಕರಿಸಲು ನಿರಾಕರಿಸಿದಾಗ ಕೋರ್ಟುಗಳು ಅದನ್ನು ಆರೋಪಿಯು ಅಪರಾಧ ಮಾಡಿರುವುದಕ್ಕೆ ಪುರಾವೆಯಾಗಿ ಪರಿಗಣಿಸುತ್ತದೆ. ಆದರೆ ನ್ಯಾ. ರಮಣ ಅವರ ಕೋರ್ಟು ಇದರ ಬಗ್ಗೆ ತನಿಖೆ ಮಾಡಲು ನಿವೃತ್ತ ನ್ಯಾ. ರವೀಂದ್ರನ್ ನೇತೃತ್ವದಲ್ಲಿ ಒಂದು ದೊಡ್ಡ ತಾಂತ್ರಿಕ ಹಾಗೂ ಪರಿಣಿತರ ಸಮಿತಿಯನ್ನು ನೇಮಿಸಿತು ಹಾಗೂ ಅದಕ್ಕೆ ವರದಿ ನೀಡಲು ಎಂಟು ವಾರಗಳ ಅವಕಾಶ ನೀಡಿತು. ಸರಕಾರ ಸುಪ್ರಿಂ ಕೋರ್ಟಿಗೆ ಸಹಕರಿಸದೆ ಇರುವಾಗ ಈ ಸಮಿತಿಗೆ ಸಹಕರಿಸುವುದೇ ಮತ್ತು ಸರಕಾರ ಸಹಕರಿಸದೇ ನಿಜಾಂಶ ಹೊರಗಡೆ ಬರುವುದೇ ಎಂಬ ಬಗ್ಗೆ ಆಗಲೇ ದೊಡ್ಡ ಅನುಮಾನ ಹಾಗೂ ನ್ಯಾ. ರಮಣ ಅವರ ಕ್ರಮಗಳ ಬಗ್ಗೆ ಅಸಮಾಧಾನ ಹುಟ್ಟಿತ್ತು. ಆನಂತರದ ದಿನಗಳಲ್ಲಿ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ತನಿಖಾ ವರದಿಯೊಂದು ಪ್ರಧಾನಿ ಮೋದಿಯವರು 2017ಕ್ಕೆ ಇಸ್ರೇಲ್‌ಗೆ ಭೇಟಿ ನೀಡಿದಾಗ ಮಾಡಿಕೊಂಡ 2 ಬಿಲಿಯನ್ ಡಾಲರ್ ಶಸ್ತ್ರಾಸ್ತ್ರ ಖರೀದಿಯಲ್ಲಿ ಪೆಗಾಸಸ್ ಕೂಡ ಸೇರಿಕೊಂಡಿತ್ತು ಎಂದು ಹೇಳಿತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೂ ಪೆಗಾಸಸ್ ಸಂಸ್ಥೆ ತಮ್ಮ ಸರಕಾರಕ್ಕೆ 25 ಕೋಟಿ ರೂಪಾಯಿಗೆ ಆ ಮಾಲ್ವೇರ್ ಮಾರಲು ಬಂದಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಬಯಲು ಮಾಡಿದ್ದರು.
ನ್ಯಾ. ರವೀಂದ್ರನ್ ಸಮಿತಿ ಒಂದು ತಿಂಗಳ ಮುಂಚೆ ತನ್ನ ತನಿಖೆಯನ್ನು ಪೂರೈಸಿ ಹೋದ ತಿಂಗಳೇ ತನ್ನ ವರದಿಯನ್ನು ನೀಡಿದ್ದರೂ ನ್ಯಾ. ರಮಣ ಅವರು ತಮ್ಮ ನಿವೃತ್ತಿಯ ಒಂದು ದಿನ ಮುಂಚೆ ಬಯಲು ಮಾಡಿದ್ದಾರೆ. ನ್ಯಾ. ರವೀಂದ್ರನ್ ವರದಿಯು ಎರಡು ಆಘಾತಕರ ಅಂಶಗಳನ್ನು ಬಯಲು ಮಾಡಿದೆ: 1. ತಾವು ತನಿಖೆ ಮಾಡಿದ 29 ಮೊಬೈಲುಗಳಲ್ಲಿ ಐದರಲ್ಲಿ ಮಾಲ್ವೇರ್ ಪತ್ತೆಯಾಗಿದೆ. 2. ಆದರೆ ಅದು ಪೆಗಾಸಸ್ ಮಾಲ್ವೇರ್ ಎಂದು ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. 3. ಮೋದಿ ಸರಕಾರ ‘ದೇಶದ ಭದ್ರತೆ’ಯ ಹೆಸರಿನಲ್ಲಿ ತನಿಖೆಗೆ ಸಹಕರಿಸಲಿಲ್ಲ. ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುವಂತೆ ಮೋದಿ ಸರಕಾರ ತನಿಖೆಗೆ ಸಹಕರಿಸದೆ ಇದ್ದದ್ದರಿಂದಲೇ ಮಾಲ್ವೇರ್‌ಗಳು ಪೆಗಾಸಸ್ ಮಾಲ್ವೇರ್‌ಗಳೇ ಎಂದು ಸಾಬೀತು ಮಾಡಲು ತೊಡಕಾಗಿದೆ.
ಸರಕಾರ ಪೆಗಾಸಸ್ ಅನ್ನು ಖರೀದಿ ಮಾಡಿಲ್ಲವೆಂದರೆ ‘‘ಖರೀದಿ ಮಾಡಿಲ್ಲ’’ ಎಂದು ಘೋಷಿಸಲು ಏನು ಸಮಸ್ಯೆ ಇದೆ? ವಿಷಯ ಸ್ಪಷ್ಟ. ಮೋದಿ ಸರಕಾರ ದೇಶಭದ್ರತೆಯ ಹೆಸರಿನಲ್ಲಿ ವಿರೋಧಿಗಳನ್ನು ವಾಮಮಾರ್ಗದಿಂದ ದಮನ ಮಾಡಲು ಮಾಡಿರುವ ಕಾನೂನು ಬಾಹಿರ ಕುತಂತ್ರಗಳನ್ನು ಮುಚ್ಚಿಡುತ್ತಿದೆ. ಆದರೂ ಬಿಜೆಪಿ ಪಕ್ಷ ಇದನ್ನು ತನ್ನ ಸಾಚಾತನಕ್ಕೆ ಪುರಾವೆಯೆಂದು ಹೇಳುತ್ತಾ ವಿರೋಧ ಪಕ್ಷಗಳೇ ಕ್ಷಮೆ ಕೋರಬೇಕೆಂದು ಲಜ್ಜೆಯಿಲ್ಲದೆ ಆಗ್ರಹಿಸುತ್ತಿದೆ. ಆದರೆ ಈಗ ಸುಪ್ರಿಂಕೋರ್ಟು ಏನು ಮಾಡುತ್ತದೆ? ಈ ದೇಶದ ಕಾನೂನಿನ ಪ್ರಕಾರ ಸಾಮಾನ್ಯವಾಗಿ ಈ ಸಹಕಾರ ನಿರಾಕರಣೆಯನ್ನು ಅಪರಾಧಕ್ಕೆ ಪುರಾವೆಯೆಂದು ಪರಿಗಣಿಸಬೇಕು. ಆಳುವ ಸರಕಾರವನ್ನು ಶಿಕ್ಷಿಸಿ ಪ್ರಜಾತಂತ್ರವನ್ನು ಕಾಪಾಡಬೇಕು. ಅದಕ್ಕೆ ಅಪಾರ ಬದ್ಧತೆ ಹಾಗೂ ನೈತಿಕ ಸ್ಥೈರ್ಯ ಬೇಕು. ಇದರಿಂದ ಪಾರಾಗಲೆಂದೇ ನ್ಯಾ.ರಮಣ ಅವರು ತಿಂಗಳ ಹಿಂದೆಯೇ ವರದಿ ಕೈಸೇರಿದ್ದರೂ ತನ್ನ ನಿವೃತ್ತಿಯ ಕೇವಲ ಒಂದು ದಿನ ಹಿಂದೆ ವರದಿಯನ್ನು ಬಹಿರಂಗಗೊಳಿಸಿ ಮುಂದಿನ ವಿಚಾರಣೆಯನ್ನು ವಾರಗಳ ಕಾಲ ಮುಂದಕ್ಕೆ ದೂಡಿದರೇ?