ಕಾಣಿಸಿಕೊಳ್ಳದೆ ಕಾಡುವವು
ಕಾಣುವ ಮತ್ತು ಕಾಣದಿರುವ ವ್ಯಕ್ತಿಗಳಿಂದ ಮತ್ತು ಸಂಗತಿಗಳಿಂದ ಜನರ ಆಲೋಚನೆಗಳು, ಭಾವನೆಗಳು ಮತ್ತು ವರ್ತನೆಗಳು ಬಹಳಷ್ಟು ಮತ್ತು ತೀಕ್ಷ್ಣವಾಗಿ ಪ್ರಭಾವಕ್ಕೆ ಒಳಗಾಗುವುದು. ಇನ್ನೂ ತಮಾಷೆ ಎಂದರೆ, ಕಾಣುವುದಕ್ಕಿಂತ ಕಾಣದೇ ಇರುವ ವಿಷಯಗಳು ಮನುಷ್ಯನ ಬಹಳಷ್ಟು ಪ್ರಭಾವಿಸುವವು. ಹೇಗೇಂತೀರಾ? ನೋಡಿ, ಒಂದು ಶಾಲೆಯಲ್ಲಿ ಶೈಕ್ಷಣಿಕ ಪ್ರವಾಸದ ಸಲುವಾಗಿ ಮಕ್ಕಳನ್ನೆಲ್ಲಾ ಕನ್ನಂಬಾಡಿ ಕಟ್ಟೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದರು. ನಮ್ಮ ವಿವರಣೆಗೆ ಬೇಕಾದ ಉದಾಹರಣೆಯ ಹುಡುಗನಿಗೆ ಕಟ್ಟೆ ಎಂದರೇನೆಂದು ಗೊತ್ತು. ಆದರೆ ಅವನಿಗೆ ಕನ್ನಂಬಾಡಿ ಕಟ್ಟೆ ಗೊತ್ತಿಲ್ಲ. ಕಾವೇರಿ ನದಿಗೆ ಕಟ್ಟಿರುವ ಅಣೆಕಟ್ಟು ಎಂದು ಕೇಳಿದ. ದೊಡ್ಡ ನದಿಗೆ ಅಡ್ಡವಾಗಿ ಒಂದು ದೊಡ್ಡ ಕಟ್ಟೆ ಕಟ್ಟಿದ್ದಾರೆಂದೂ, ಆ ಕಟ್ಟೆ ತಾನು ಮನೆಯಲ್ಲಿ ಅಥವಾ ಬೀದಿಯಲ್ಲಿ ನೋಡುವ ಕಟ್ಟೆಯ ಮಾದರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಇರುವುದು ಎಂದು ಅಂದುಕೊಂಡಿದ್ದ. ಅದರ ಕಲ್ಪನೆಯಲ್ಲಿಯೇ ಅದರ ಮೇಲೆ ಓಡಾಡುವುದು, ಕೂರುವುದು; ಇತ್ಯಾದಿಗಳನ್ನು ಮಾಡುತ್ತಿದ್ದ. ಅಲ್ಲಿಗೆ ಹೋಗುವವರೆಗೂ ಅವನ ಕಲ್ಪನೆಯ ಕನ್ನಂಬಾಡಿ ಕಟ್ಟೆ ಗಟ್ಟಿಯಾಗುತ್ತಾ ಹೋಗುತ್ತಿತ್ತು.
ನಂತರ ಅಲ್ಲಿಗೆ ಹೋದ ಮೇಲೆ ಅವನು ಅಂದುಕೊಂಡಂತೆ ಅದು ಇರಲಿಲ್ಲ. ಜೊತೆಗೆ ಸುಂದರವಾದ ಉದ್ಯಾನವನ, ಕಾರಂಜಿಗಳು; ಇತ್ಯಾದಿಗಳೆಲ್ಲಾ ಇದ್ದರೂ ಅವನಿಗೆ ಅದು ತೃಪ್ತಿಯಿಲ್ಲ. ಏಕೆಂದರೆ ಅವನ ಕಲ್ಪನೆಯ ‘ಕಟ್ಟೆ’ ಅಲ್ಲಿ ಇರಲೇ ಇಲ್ಲ. ಹೀಗೇ ವ್ಯಕ್ತಿಗಳ ವಿಷಯದಲ್ಲಿಯೂ ಆಗುತ್ತದೆ. ವ್ಯಕ್ತಿಗಳ ಬಗ್ಗೆ ಕೇಳಿರುತ್ತಾರೆ, ಅವರನ್ನು ಕಂಡಿರುವುದಿಲ್ಲ. ಅವರು ಹೀಗಿರುತ್ತಾರೆ, ಹಾಗಿರುತ್ತಾರೆ ಎಂದೆಲ್ಲಾ ಮನಸ್ಸಿನಲ್ಲಿ ಚಿತ್ರಣಗಳನ್ನು ರೂಪಿಸಿಕೊಳ್ಳುತ್ತಿರುತ್ತಾರೆ. ಅದು ಅಂದುಕೊಂಡದ್ದಕ್ಕಿಂತ ಚೆನ್ನಾಗಿದ್ದರೆ ಸರಿ, ಒಂದು ವೇಳೆ ಅಂದುಕೊಂಡಂತೆ ಇರದೇ ಇದ್ದರೆ ಭಾರೀ ನಿರಾಸೆ, ಹತಾಶೆಗಳಾಗುವುದು. ಕಾಣದ ಸ್ಥಳ, ಪ್ರಸಂಗ, ವ್ಯಕ್ತಿಗಳು ಮನುಷ್ಯನ ಮನಸ್ಸಿಗೆ ಹೆಚ್ಚು ಕೆಲಸ ಕೊಡುತ್ತದೆ. ಮನಸ್ಸಿಗೆ ಯಾವುದೇ ಕೆಲಸ ಕೊಟ್ಟರೂ ಅದು ತನ್ನ ಛಾಯೆಯನ್ನು ಅಥವಾ ಅಚ್ಚುಪ್ರತಿಯನ್ನು ಸುಪ್ತಮನಸ್ಸಿನಲ್ಲಿ ಉಳಿಸುತ್ತಿರುತ್ತದೆ ಎಂದೇ ಅರ್ಥ. ಹಾಗಾಗಿ ಮಾನಸಿಕವಾದಂತಹ ಪರಿಣಾಮವು ಅಲ್ಲಿ ಉಂಟಾಗಿಯೇ ತೀರಿರುತ್ತದೆ. ಮನುಷ್ಯನ ಮನಸ್ಸಿನಲ್ಲಿ ಮೂಡುವ ಆಲೋಚನೆ, ಭಾವನೆ ಮತ್ತು ವರ್ತನೆಗಳು ಆಯಾ ವ್ಯಕ್ತಿಗಳ ಮೇಲೂ ಮತ್ತು ಇತರರ ಮೇಲೂ ನೇರವಾದ ಪ್ರಭಾವವನ್ನು ಮತ್ತು ಪರಿಣಾಮವನ್ನು ಬೀರುತ್ತವೆ. ಗಮನಿಸಿ ನೋಡಿ, ಒಬ್ಬ ವ್ಯಕ್ತಿ ತನ್ನ ಮಾನಸಿಕ ಸಮಯವನ್ನು ನೇರವಾಗಿ ತನ್ನ ಜೊತೆಗೆ ಇರುತ್ತಾ ಬಾಳುವವರಿಗಿಂತ ಇಲ್ಲದೇ ಇರುವ ವ್ಯಕ್ತಿ, ಸಂಗತಿ, ವಿಷಯಗಳ ಮೇಲೆ ಹೆಚ್ಚು ವ್ಯಯ ಮಾಡಿರುತ್ತಾರೆ. ಅದು ದೇವರೋ, ಸ್ವರ್ಗ ನರಕವೋ, ಟಿಪ್ಪುವೋ, ಸಾವರ್ಕರೋ, ತನಗೆ ನೇರ ಪರಿಚಯ ಇಲ್ಲದ ರಾಜಕಾರಣಿಯೋ, ಸಾಹಿತಿಯೋ; ಒಟ್ಟಾರೆ ನೇರವಾಗಿ ತನ್ನ ಜೀವದ ಜೊತೆಗೆ ಜೀವನ ಕಟ್ಟಿಕೊಳ್ಳುತ್ತಿರುವವರಿಗಿಂತ ಇನ್ನಾರ ಬಗ್ಗೆಯೋ ಹೆಚ್ಚು ಚರ್ಚೆ, ಮಾತುಗಳೇ ಮೊದಲಾದ ಚಟುವಟಿಕೆಗಳಿಂದ ತನ್ನ ಮನೋಸಮಯವನ್ನು ಮೀಸಲಿಡುತ್ತಾನೆ.
ಕಾಣುವ ವ್ಯಕ್ತಿ, ಸಂಗತಿ ಮತ್ತು ವಿಷಯಗಳ ಮೇಲೆ ಗಮನ ಹರಿಸುವುದು ಹಾಗೂ ಅದನ್ನು ವಿಶ್ಲೇಷಿಸುವುದು ಬಹಳ ಸೀಮಿತವಾದ ಚೌಕಟ್ಟನ್ನು ಹೊಂದಿರುತ್ತವೆ. ಅಮೂರ್ತವಾಗಿರುವ ಮತ್ತು ಅಸೀಮಿತವಾಗಿರುವ ಮನಕ್ಕೆ ಹೆಚ್ಚು ಕೆಲಸ ಬೇಕು. ಹೆಚ್ಚು ಹೆಚ್ಚು ಕೆಲಸ ಮಾಡುವುದು, ಅಂದರೆ ಹೆಚ್ಚು ಹೆಚ್ಚು ಆಲೋಚಿಸುವುದು, ಹೆಚ್ಚು ಹೆಚ್ಚು ಭಾವಿಸುವುದು. ಹೀಗೆ ಮಾಡುವುದಕ್ಕೆ ಹಾತೊರೆಯುವುದು ಮನಸ್ಸಿಗೆ ಸಹಜ. ಅದು ಹಾಗೆಯೇ ಇರುವುದು. ಇನ್ನೊಂದು ಉದಾಹರಣೆ ನೋಡಿ; ಒಂದು ತಾಯಿಗೆ ಇಬ್ಬರು ಮಕ್ಕಳಿರುತ್ತಾರೆ. ಒಂದು ಮಗು ಚೆನ್ನಾಗಿ ವರ್ತಿಸುತ್ತಾ ತಾಯಿಗೆ ಖುಷಿ ಕೊಡುವ ರೀತಿಯಲ್ಲಿ ಇರುತ್ತದೆ, ಹಾಗೆಯೇ ಮತ್ತೊಂದು ಅವಿಧೇಯವಾಗಿ ವರ್ತಿಸುತ್ತಾ, ನೋವು ಕೊಡುವ ಮಾತುಗಳನ್ನು ಆಡುತ್ತಾ, ಒರಟಾಗಿ ನಡೆದುಕೊಳ್ಳುತ್ತಾ ಜೊತೆಯಲ್ಲಿ ಇರದೇ ಮನೆಯಿಂದ ಹೊರಗೆ ಹೋಗುವುದು. ಆಗ ತಾಯಿಯು ತನ್ನ ಜೊತೆಗೆ ಸಂತೋಷ ನೀಡುತ್ತಾ ಇರುವ ಮಗುವಿನ ಮುಖವನ್ನು ನೋಡಿಕೊಂಡು ಸಂತೋಷವಾಗಿರುವುದಿಲ್ಲ. ಬದಲಾಗಿ ಆ ಮಗು ಹಾಗೆ ಮಾಡಿತು, ಹೀಗೆ ಮಾಡಿತು ಎಂದು ಕೊರಗುತ್ತಾ, ಚಿಂತಿಸುತ್ತಾ ಕೂರುತ್ತಾಳೆ. ಜೊತೆಗೆ ಇರುವ ಮಗು ಹೋದರೆ ಹೋಗಲಿ ಬಿಡು, ನಾನು ನಿನ್ನ ಜೊತೆಗೆ ಇರುತ್ತೇನೆ, ನಿನ್ನನ್ನು ಸಂತೋಷವಾಗಿ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡುತ್ತಾ, ತಾನು ಮಾತು ಕೊಟ್ಟ ರೀತಿಯಲ್ಲಿ ಚೆನ್ನಾಗಿದ್ದರೂ ಇರದಿರುವುದರ ಬಗ್ಗೆ ಕೊರಗುವುದೇ ತಾಯಿಯ ವ್ಯಥೆ ಮತ್ತು ಕಥೆಯಾಗಿರುತ್ತದೆ. ಇದು ಬರಿದೇ ರೂಪಕವಷ್ಟೇ. ಇದೇ ರೀತಿಯಲ್ಲಿ ಮನಸ್ಸು ಯಾವಾಗಲೂ ಇರದಿರುವುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡು ಬೇನೆ ತಂದುಕೊಳ್ಳುತ್ತಿರುತ್ತದೆ.
ಇದೇ ರೀತಿ ಪ್ರಾಯೋಗಿಕವಾಗಿ ಮತ್ತು ಪ್ರತ್ಯಕ್ಷವಾಗಿ ಕಾಣದೇ ಇರುವ ಮತ್ತೊಂದು ಸಂಗತಿ ಎಂದರೆ ಜಾತಿ ಎಂಬ ವ್ಯವಸ್ಥೆ. ಇಲ್ಲೂ ನೋಡಿ, ಜಾತಿ ಎಂಬುದು ವೈಜ್ಞಾನಿಕವಾಗಿ ಮತ್ತು ಪ್ರಾಯೋಗಿಕವಾಗಿ ಹೇಗೂ ನೇರ ಸಂಪರ್ಕಕ್ಕೆ ಇರದಿದ್ದರೂ ಮಾನಸಿಕವಾಗಿ ಅದನ್ನು ಭಾರತೀಯ ಮನಸ್ಥಿತಿಗಳು ಭ್ರಮಿಸುತ್ತಲೇ ಇರುತ್ತವೆ. ವ್ಯಕ್ತಿಯ ಆಹಾರ, ವಿಹಾರ, ವಿಚಾರ, ಉಡುಗೆ, ತೊಡುಗೆ; ಇವೆಲ್ಲವೂ ವೈಯಕ್ತಿಕವಾಗಿದ್ದರೂ, ಜಾತಿಯನ್ನು ಅವನು ಮಾನಸಿಕವಾಗಿ ಹೊಂದಿರುತ್ತಾನೆ. ಕುಂಬಾರನ ಕುಲವೋ, ಬ್ರಾಹ್ಮಣನ ಕುಲವೋ ವ್ಯಕ್ತಿಯೊಬ್ಬ ವೈದ್ಯನಾಗುತ್ತಾನೆ. ಅವನು ಮತ್ತೊಬ್ಬ ವೈದ್ಯನನ್ನು ನೋಡಿದಾಗ ಇವ ನಮ್ಮವ ಎಂದುಕೊಳ್ಳುವುದಕ್ಕಿಂತಲೂ, ಅದೇ ಕುಂಬಾರಿಕೆ ಕುಲದವನನ್ನೋ, ಅಥವಾ ಬ್ರಾಹ್ಮಣನನ್ನೋ ಕಂಡಾಗ ನಮ್ಮ ಜನ ಎಂದುಕೊಳ್ಳುವಷ್ಟರ ಮಟ್ಟಿಗೆ ಜಾತಿ ಎಂಬುದು ಮಾನಸಿಕವಾಗಿ ಬೇರೂರಿರುತ್ತದೆ. ಹೀಗಾಗಿಯೇ ಅಪ್ರಸ್ತುತವೂ, ಅಪ್ರಾಯೋಗಿಕವೂ, ಅವೈಜ್ಞಾನಿಕವೂ ಆದ ಜಾತಿಯ ಬಗ್ಗೆ ಭಾವನೆಗಳನ್ನು ಹೊಂದುತ್ತಾರೆ. ಸಾರೂಪದಲ್ಲಿ ಇಲ್ಲದ ಆ ವಿಷಯಕ್ಕೆ ಮಾನ್ಯತೆ ಎಂದಾದಾಗ ಖುಷಿಪಡುತ್ತಾನೆ, ಅದಕ್ಕೆ ಅವಹೇಳನವಾದಾಗ ಕೋಪಗೊಳ್ಳುತ್ತಾನೆ. ಅದರ ವಿಷಯದಲ್ಲಿ ವಾದ ಮಾಡುತ್ತಾನೆ. ಅಷ್ಟೇ ಅಲ್ಲ, ಅದನ್ನು ಜೀವಂತವಾಗಿರಿಸಿಕೊಳ್ಳಲು ಆಚರಣೆ, ನೇಮ, ವಿಧಿ, ವಿಧಾನಗಳನ್ನು ವಾಸ್ತವದಲ್ಲಿ ಏನೂ ಮಹತ್ವವಲ್ಲದಿದ್ದರೂ, ನಮ್ಮ ಕಡೆ ಹೀಗೆ ಮಾಡುತ್ತಾರೆ ಎಂದು ಜಾತಿ ವ್ಯವಸ್ಥೆಯನ್ನು ಆ ಮೂಲಕ ಜೀವಂತವಾಗಿರಿಸಿಕೊಳ್ಳಲು ಯತ್ನಿಸುತ್ತಾನೆ. ಒಟ್ಟಿನಲ್ಲಿ ಮನಸ್ಸಿನ ಒಂದು ಚೇಷ್ಟೆಯ ಸ್ವರೂಪವೇನೆಂದರೆ, ಅಸ್ತಿತ್ವದಲ್ಲಿ ಇಲ್ಲದೇ ಇರುವುದನ್ನು ಅಸ್ತಿತ್ವದಲ್ಲಿಟ್ಟುಕೊಳ್ಳಲು ಹೆಣಗಾಡುವುದು, ಹಾಗೆಯೇ ಕಾಣದೇ ಇರುವುದರ ಜೊತೆಗೆ ತಾದ್ಯಾತ್ಮತೆಯನ್ನು ಹೊಂದಲು ತನ್ನ ಮಾನಸಿಕ ಸಮಯವನ್ನು ಹೆಚ್ಚು ಮೀಸಲಿಡುವುದು.