2024ರ ಲೋಕಸಭಾ ಚುನಾವಣೆಯಲ್ಲಿ‘ಆರ್ಥಿಕತೆ’ಯೇ ಮುಖ್ಯ ವಿಷಯವಾಗಲಿದೆಯೇ?
ಮೋದಿ ಸರಕಾರ, ಪ್ರತಿಪಕ್ಷಗಳಿಗೆ ಬಲವಾದ ಸಂದೇಶ ರವಾನಿಸಿದ ಸಮೀಕ್ಷೆ
‘‘ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿಯಾದ ಬಳಿಕ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯಾಗಿದೆ’’ ಎಂಬಂತಹ ಪ್ರಶ್ನೆಯನ್ನು ಕಳೆದ ಆರು ವರ್ಷಗಳಿಂದ ‘ಇಂಡಿಯಾ ಟುಡೇ’ ಸಮೀಕ್ಷೆಯಲ್ಲಿ ಪಾಲ್ಗೊಂಡವರ ಜೊತೆ ಕೇಳುತ್ತಾ ಬಂದಿದೆ. ಇಲ್ಲಿ ಈ ಪ್ರಶ್ನೆಯಲ್ಲಿ ಮೋದಿಯವರನ್ನು ಹೆಸರಿಸಿರುವುದನ್ನು ಗಮನಿಸಿ. ಅವರ ಜನಪ್ರಿಯತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಉತ್ತರಗಳು ಕೂಡಾ ಸಕಾರಾತ್ಮಕವಾಗಿಯೇ ನೀಡಬೇಕಿತ್ತು. ಆದರೆ ಶೇ.36ರಷ್ಟು ಮಂದಿ ತಮ್ಮ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿದರೆ, ಶೇ.28ರಷ್ಟು ಮಂದಿ 2014ರಿಂದೀಚೆಗೆ ಸುಧಾರಣೆಯಾಗಿದೆ ಎಂದು ಹೇಳುತ್ತಾರೆ. ಭವಿಷ್ಯದಲ್ಲೂ ಇದೇ ಅಭಿಪ್ರಾಯ ಮುಂದುವರಿಯಬಹುದಾಗಿದೆ. ತಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆಯೆಂದು ನಿರೀಕ್ಷಿಸುವವರಿಗಿಂತಲೂ ಹದಗೆಡಲಿದೆಯೆಂದು ನಿರೀಕ್ಷಿಸುವವರ ಸಂಖ್ಯೆಯೇ ಅಧಿಕವಾಗಲಿದೆ. ಇಂತಹ ಅಂಕಿಸಂಖ್ಯೆಗಳು ಯಾವುದೇ ಸರಕಾರಕ್ಕೆ ಭಯವನ್ನು ಹುಟ್ಟಿಸುವಂತಹದ್ದಾಗಿದೆ.
‘ಇಂಡಿಯಾ ಟುಡೇ’ ನಿಯತಕಾಲಿಕವು ಇತ್ತೀಚೆಗೆ ರಾಷ್ಟ್ರವ್ಯಾಪಿಯಾಗಿ ನಡೆಸಿದ ಜನಾಭಿಪ್ರಾಯ ಸಮೀಕ್ಷೆಯ ಫಲಿತಾಂಶವು ನರೇಂದ್ರ ಮೋದಿ ಸರಕಾರ ಹಾಗೂ ವಿರೋಧ ಪಕ್ಷಗಳಿಗೆ ಬಲವಾದ ಸಂದೇಶಗಳನ್ನು ರವಾನಿಸಿದೆ. ಅದುವೇ ಆರ್ಥಿಕತೆ... ಆರ್ಥಿಕತೆ... ಆರ್ಥಿಕತೆ...‘ಅಮೃತ ಕಾಲ’ದ ಘೋಷಣೆಗಳನ್ನು ಮಾಡುತ್ತಿರುವ ಆಡಳಿತ ಪಕ್ಷಕ್ಕೆ ಸಮೀಕ್ಷೆಯು ಬಿಗಿಯಾದ ಸಂದೇಶಗಳನ್ನು ರವಾನಿಸಿದೆ. ಇದೇ ವೇಳೆ ಪ್ರತಿಪಕ್ಷಗಳ ಪಾಲಿಗೆ ಈ ಸಂದೇಶವು ಒಂದು ‘ಸದವಕಾಶ ಹಾಗೂ ಹೊಣೆಗಾರಿಕೆ’ ಎರಡೂ ಆಗಿದೆ. ಪ್ರತಿಯೊಬ್ಬರೂ ಈ ಸಮೀಕ್ಷೆಯನ್ನು ಓದಿದ್ದಾರೆಂಬುದು ಇದರ ಅರ್ಥವಲ್ಲ. ನಾವು ಚುನಾವಣಾ ಭವಿಷ್ಯವನ್ನು ತಿಳಿಯಲು ಜನಮತ ಸಮೀಕ್ಷೆಯನ್ನು ಓದುತ್ತೇವೆ. ಮಾಜಿ ಚುನಾವಣಾ ಸಮೀಕ್ಷಕನಾದ ನನಗೆ ಈ ಪ್ರವೃತ್ತಿಯು ಆತಂಕವನ್ನುಂಟು ಮಾಡಿದೆ. ಚುನಾವಣೆಗಳಲ್ಲಿ ಯಾವ ಪಕ್ಷವು ಎಷ್ಟು ಸ್ಥಾನಗಳನ್ನು ಪಡೆಯಲಿದೆ ಎಂಬುದನ್ನು ಊಹಿಸಲಾಗುವ ಸಮೀಕ್ಷಾ ವರದಿಗಳನ್ನು ಅಕ್ಷರಶಃ ಸತ್ಯವೆಂದು ಪರಿಗಣಿಸುವಂತಿಲ್ಲ. ದೇಶದ ಜನರ ಅಭಿಪ್ರಾಯಗಳನ್ನು ಅರಿತುಕೊಳ್ಳುವುದರಲ್ಲಿ ಸಮೀಕ್ಷೆಯ ನಿಜವಾದ ಸತ್ಯ ಅಡಗಿರುತ್ತದೆ.
ಹೀಗಾಗಿ, ನಾನು ಇಂಡಿಯಾ ಟುಡೇ ಪತ್ರಿಕೆಯ ಮೂಡ್ ಆಫ್ ದಿ ನೇಶನ್ (ಎಂಒಟಿಎನ್ಎಸ್) ಸಮೀಕ್ಷೆಯ ಹೊಸ ಸುತ್ತಿನ ಬಗ್ಗೆ ಇಲ್ಲಿ ವರದಿ ಮಾಡುತ್ತಿದ್ದೇನೆ. ಒಂದು ವೇಳೆ ಲೋಕಸಭಾ ಚುನಾವಣೆಗಳು 2022ರ ಜುಲೈ 15ರಿಂದ 31ರ ನಡುವಿನ ಅವಧಿಯಲ್ಲಿ ನಡೆದಲ್ಲಿ ಬಿಜೆಪಿಗೆ 283 ಸ್ಥಾನಗಳು ಲಭಿಸಲಿವೆ (2019ರಲ್ಲಿ ಬಿಜೆಪಿಯು 303 ಸ್ಥಾನಗಳಲ್ಲಿ ಜಯಗಳಿಸಿತ್ತು) ಮತ್ತು ಒಟ್ಟಾರೆಯಾಗಿ ಎನ್ಡಿಎ ಮೈತ್ರಿಕೂಟವು 307 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ (ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ 353 ಸ್ಥಾನಗಳನ್ನು ಗೆದ್ದಿತ್ತು) ಎಂದು ಇಂಡಿಯಾ ಟುಡೇಯ ಸಮೀಕ್ಷಾ ವರದಿ ತಿಳಿಸಿದೆ.
ಆದರೆ ಈ ಅಂಕೆಸಂಖ್ಯೆಗಳ ಬಗ್ಗೆ ಲೆಕ್ಕಾಚಾರ ಹಾಕುತ್ತಾ ಕಾಲಕಳೆಯುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾಕೆಂದರೆ ಲೋಕಸಭಾ ಚುನಾವಣೆಗೆ 20 ತಿಂಗಳುಗಳ ಮೊದಲು ನಡೆಯುವ ಯಾವುದೇ ಸಮೀಕ್ಷೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ. ಎರಡನೆಯದಾಗಿ, ಈ ಸಮೀಕ್ಷೆಯು ಬಿಹಾರದಲ್ಲಿ ರಾಜಕೀಯ ಬದಲಾವಣೆಯುಂಟಾಗುವ ಮೊದಲು ನಡೆದಿರುವುದಾಗಿದೆ. ಆದಾಗ್ಯೂ, ಚುನಾವಣಾ ಸಮೀಕ್ಷಕರು ಆ ರಾಜ್ಯದಲ್ಲಿ ದಿಢೀರ್ ಸಮೀಕ್ಷೆಯನ್ನು ನಡೆಸುವ ‘ದಿಟ್ಟ’ ಪ್ರಯತ್ನವನ್ನು ನಡೆಸಿದರು. (ನಿತೀಶ್ ಅವರು ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಂಡಿದ್ದರಿಂದಾಗಿ ಎನ್ಡಿಎಗೆ 8 ಸ್ಥಾನಗಳು ನಷ್ಟವಾಗಲಿವೆ ಎಂದು ದಿಢೀರ್ ಸಮೀಕ್ಷೆ ಬಹಿರಂಗಪಡಿಸಿತ್ತು).
‘ಇಂಡಿಯಾಟುಡೇ’ ಸಮೀಕ್ಷೆಯ ಕುರಿತ ನನ್ನ ಅತೃಪ್ತಿಗೆ ನಾನು ಇನ್ನೊಂದು ಕಾರಣ ನೀಡುತ್ತೇನೆ. ಈ ವರ್ಷದ ಜನವರಿಯಿಂದ ಮೊದಲ್ಗೊಂಡು ಎಂಒಟಿಎನ್ಎಸ್, ಜನರನ್ನು ಅವರ ಮನೆಗಳಲ್ಲಿ ಸಂದರ್ಶಿಸುವುದನ್ನು ನಿಲ್ಲಿಸಿ ಬಿಟ್ಟಿದೆೆ. ಜನರನ್ನು ಮನೆಗಳಲ್ಲಿ ಸಂದರ್ಶಿಸುವುದು ಸಮೀಕ್ಷಾ ಸಂಶೋಧನೆಯ ಅತ್ಯುತ್ತಮ ವಿಧಾನವಾಗಿದೆ. ಈಗಲೂ ಅಭಿವೃದ್ಧಿಶೀಲ ಸಮಾಜಗಳ ಕೇಂದ್ರ (ಸಿಎಸ್ಡಿಎಸ್)ದಂತಹ ವಿಶ್ವಸನೀಯ ಸಮೀಕ್ಷಾ ಸಂಸ್ಥೆಗಳು ಈ ವಿಧಾನವನ್ನು ಅನುಸರಿಸುತ್ತಿವೆ. ಅದರ ಬದಲಿಗೆ ಎಂಒಟಿಎನ್ಎಸ್ ಸಮೀಕ್ಷೆಯನ್ನು ನಡೆಸಿರುವ ಸಿ-ವೋಟರ್ ಸಂಸ್ಥೆಯು ಸಂಪೂರ್ಣವಾಗಿ ದೂರವಾಣಿಯ ಮೂಲಕವೇ ಸಮೀಕ್ಷೆಗಳನ್ನು ನಡೆಸಿದೆ. ದೂರವಾಣಿ ಸಂದರ್ಶನಗಳು ಅತ್ಯಂತ ಕಡಿಮೆ ವೆಚ್ಚದಲ್ಲಿ ಆಗುವುದರಿಂದ ಪ್ರಸಕ್ತ, ಜಗತ್ತಿನಾದ್ಯಂತ ಈ ಮಾದರಿಯ ಸಮೀಕ್ಷೆಗೆ ಆದ್ಯತೆಯನ್ನು ನೀಡಲಾಗುತ್ತಿದೆ. ಮೊಬೈಲ್ ಬಳಕೆದಾರರ ಸಂಖ್ಯೆ ಕೂಡಾ ಭಾರತದಲ್ಲಿ ಅತ್ಯಂತ ಅಧಿಕವಾಗಿದೆಯೆಂಬುದು ಕೂಡಾ ಸತ್ಯವಾಗಿದೆ. ಆದಾಗ್ಯೂ, ಭಾರತದಲ್ಲಿ ಅದಿನ್ನೂ ಸಾರ್ವತ್ರಿಕವಾಗಿಲ್ಲ. ಅತ್ಯಾಧುನಿಕವಾದ ಅಂಕಿಅಂಶಗಳ ತಂತ್ರಜ್ಞಾನವನ್ನು ಎಷ್ಟೇ ಬಳಸಲಿ, ದೂರವಾಣಿ ಸಮೀಕ್ಷೆಯಲ್ಲಿ ಅತ್ಯಂತ ಕೆಳಸ್ತರದಲ್ಲಿರುವ ನಾಗರಿಕರನ್ನು ಕೈಬಿಡಲಾಗಿರುವುದರಿಂದ, ಅವರ ಅಭಿಪ್ರಾಯಗಳು ಪರಿಗಣನೆಯಾಗಿಲ್ಲ.
ಈ ಇತಿಮಿತಿಯ ಹೊರತಾಗಿಯೂ ಸಮೀಕ್ಷೆಯು ವಿಶೇಷವಾಗಿ ಸಾರ್ವಜನಿಕ ಜನಾಭಿಪ್ರಾಯದ ಪ್ರವೃತ್ತಿಗಳ ಕುರಿತಾದ ಮಾಹಿತಿಯ ಭಂಡಾರವನ್ನೇ ತೆರೆದಿಟ್ಟಿದೆ. ದೇಶವು ಪ್ರಸಕ್ತ ಎದುರಿಸುತ್ತಿರುವ ಪ್ರಮುಖ ಮೂರು ಸಮಸ್ಯೆಗಳಾವುವು ಎಂಬ ಪ್ರಶ್ನೆಗೆ ಶೇ.27ರಷ್ಟು ಮಂದಿ ಬೆಲೆಯೇರಿಕೆ ಎಂಬುದಾಗಿಯೂ, ಶೇ.25ರಷ್ಟು ಮಂದಿ ನಿರುದ್ಯೋಗವೆಂಬುದಾಗಿಯೂ, ಶೇ.7ರಷ್ಟು ಮಂದಿ ಬಡತನವೆಂಬುದಾಗಿಯೂ ಹೇಳಿದ್ದರು. ಒಂದು ವೇಳೆ ದೇಶದ ಆರ್ಥಿಕ ಪರಿಸ್ಥಿತಿಯ ಕುರಿತು ಅಧಿಕೃತ ಹಾಗೂ ಅನಧಿಕೃತ ದತ್ತಾಂಶವನ್ನು ಅನುಸರಿಸುವುದಾದರೆ, ಬೆಲೆಯೇರಿಕೆ ಮೊದಲ ಸ್ಥಾನದಲ್ಲಿರುತ್ತದೆ. ಹಣದುಬ್ಬರವು ಕಡಿಮೆ ಮಟ್ಟದಲ್ಲಿದ್ದರೂ ಬೆಲೆಗಳು ಏರುತ್ತಲೇ ಇರುತ್ತವೆ. ಶೇ.56ರಷ್ಟು ಮಂದಿ ನಿರುದ್ಯೋಗ ಸಮಸ್ಯೆ ಅತ್ಯಂತ ಗಂಭೀರವಾಗಿದೆಯೆಂದು ಹೇಳಿದರೆ, ಶೇ.9ರಷ್ಟು ಮಂದಿ ಹಾಗಿಲ್ಲವೆಂದು ಹೇಳಿದ್ದಾರೆ.
ಪ್ರಸಕ್ತ ಆರ್ಥಿಕ ಪರಿಸ್ಥಿತಿಯನ್ನು ಭವಿಷ್ಯದ ಆರ್ಥಿಕತೆ ಸನ್ನಿವೇಶದ ಜೊತೆ ಜನರು ಅಂದಾಜಿಸುತ್ತಿರುವುದು ನನಗೆ ಅಚ್ಚರಿಯುಂಟು ಮಾಡಿದೆ. ಭಾರತೀಯರು ಭವಿಷ್ಯದ ಆರ್ಥಿಕ ಪ್ರಗತಿಯ ಕುರಿತು ಆಶಾಭಾವನೆಗಳನ್ನು ಹೊಂದಿದ್ದಾರೆಂಬುದನ್ನು ಹಲವಾರು ದಶಕಗಳ ಸಮೀಕ್ಷಾ ಸಂಶೋಧನೆಯು ತೋರಿಸಿಕೊಟ್ಟಿದೆ. ಮುಂದಿನ ಆರು ತಿಂಗಳುಗಳಲ್ಲಿ ದೇಶದ ಆರ್ಥಿಕತೆಯು ಹದಗೆಡಲಿದೆಯೆಂಬುದು ಶೇ.34ರಷ್ಟು ಮಂದಿ ನಿರೀಕ್ಷಿಸಿರುವುದು ನನಗೆ ಆಘಾತವುನ್ನುಂಟು ಮಾಡಿದೆ. ಅವರಿಗೆ ಹೋಲಿಸಿದರೆ ಶೇ.31ರಷ್ಟು ಮಂದಿ ದೇಶದ ಆರ್ಥಿಕತೆಯು ಉತ್ತಮಗೊಳ್ಳಲಿದೆಯೆಂಬ ನಿರೀಕ್ಷೆಯಲ್ಲಿದ್ದಾರೆ.
ಸಮೀಕ್ಷಾ ಸಂಶೋಧಕನಾಗಿ ನಾನು, ದೇಶದ ಆರ್ಥಿಕತೆಯ ಕುರಿತು ಜನಸಾಮಾನ್ಯರು ನಡೆಸುವ ಅಂದಾಜಿಗಿಂತ ಅಧಿಕವಾಗಿ ಅವರು ತಮ್ಮ ಮನೆಯ ಆರ್ಥಿಕ ಸ್ಥಿತಿಯ ಬಗ್ಗೆ ನೀಡುವ ಉತ್ತರಗಳ ಬಗ್ಗೆ ಹೆಚ್ಚು ನಂಬಿಕೆಯಿಡುತ್ತೇನೆ. ದೇಶದ ಆರ್ಥಿಕ ಪರಿಸ್ಥಿತಿಯ ಸುಂದರವಾದ ಇಲ್ಲವೇ ಕರಾಳವಾದ ಚಿತ್ರಣವನ್ನು ನಂಬಿ ನಾವು ಜನಸಾಮಾನ್ಯರು ಮೋಸಹೋಗಬಹುದು. ಆದರೆ ನಮ್ಮ ಸ್ವಂತ ಅಥವಾ ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯ ವಿಷಯದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ‘‘ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿಯಾದ ಬಳಿಕ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯಾಗಿದೆ’’ ಎಂಬಂತಹ ಪ್ರಶ್ನೆಯನ್ನು ಕಳೆದ ಆರು ವರ್ಷಗಳಿಂದ ‘ಇಂಡಿಯಾ ಟುಡೇ’ ಸಮೀಕ್ಷೆಯಲ್ಲಿ ಪಾಲ್ಗೊಂಡವರ ಜೊತೆ ಕೇಳುತ್ತಾ ಬಂದಿದೆ. ಇಲ್ಲಿ ಈ ಪ್ರಶ್ನೆಯಲ್ಲಿ ಮೋದಿಯವರನ್ನು ಹೆಸರಿಸಿರುವುದನ್ನು ಗಮನಿಸಿ. ಅವರ ಜನಪ್ರಿಯತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಉತ್ತರಗಳು ಕೂಡಾ ಸಕಾರಾತ್ಮಕವಾಗಿಯೇ ನೀಡಬೇಕಿತ್ತು. ಆದರೆ ಶೇ.36ರಷ್ಟು ಮಂದಿ ತಮ್ಮ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿದರೆ, ಶೇ.28ರಷ್ಟು ಮಂದಿ 2014ರಿಂದೀಚೆಗೆ ಸುಧಾರಣೆಯಾಗಿದೆ ಎಂದು ಹೇಳುತ್ತಾರೆ. ಭವಿಷ್ಯದಲ್ಲೂ ಇದೇ ಅಭಿಪ್ರಾಯ ಮುಂದುವರಿಯಬಹುದಾಗಿದೆ. ತಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆಯೆಂದು ನಿರೀಕ್ಷಿಸುವವರಿಗಿಂತಲೂ ಹದಗೆಡಲಿದೆಯೆಂದು ನಿರೀಕ್ಷಿಸುವವರ ಸಂಖ್ಯೆಯೇ ಅಧಿಕವಾಗಲಿದೆ. ಇಂತಹ ಅಂಕಿಸಂಖ್ಯೆಗಳು ಯಾವುದೇ ಸರಕಾರಕ್ಕೆ ಭಯವನ್ನು ಹುಟ್ಟಿಸುವಂತಹದ್ದಾಗಿದೆ.
ಆರ್ಥಿಕತೆಯಿಂದ ರಾಜಕೀಯದವರೆಗೆ
ತಮ್ಮ ಕೆಟ್ಟ ಆರ್ಥಿಕ ಪರಿಸ್ಥಿತಿಗೆ ಜನರು ಸರಕಾರವನ್ನು ದೂಷಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದೇ ಇಲ್ಲಿರುವ ಮುಖ್ಯ ಕುತೂಹಲಕಾರಿ ಅಂಶವಾಗಿದೆ. ಇಲ್ಲಿಯೂ ನರೇಂದ್ರ ಮೋದಿ ಸರಕಾರಕ್ಕೆ ಶುಭ ಸುದ್ದಿಯಿಲ್ಲ. ಸರಕಾರದ ಆರ್ಥಿಕ ನೀತಿಗಳ ಬಗ್ಗೆ ಜನತೆಯ ಸಕಾರಾತ್ಮಕ ರೇಟಿಂಗ್ ಶೇ.48 ಆಗಿದ್ದು, ಇದು ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕನಿಷ್ಠವಾಗಿದೆ. ಸರಕಾರದ ಆರ್ಥಿಕ ನೀತಿಗಳ ಕುರಿತ ನಕಾರಾತ್ಮಕ ಅಂದಾಜು ಶೇ. 29ರಷ್ಟಾಗಿದ್ದು, ಇದು ಕೂಡಾ 6 ವರ್ಷಗಳಲ್ಲಿ ಅತ್ಯಂತ ಗರಿಷ್ಠವಾಗಿದೆ. ಎನ್ಡಿಎ ಸರಕಾರದ ಮೂರು ಅತೀ ದೊಡ್ಡ ವೈಫಲ್ಯಗಳನ್ನು ಹೆಸರಿಸುವಂತೆ ಕೇಳಿದಾಗ, ಸಮೀಕ್ಷೆಯಲ್ಲಿ ಪಾಲ್ಗೊಂಡವರು ಉಲ್ಲೇಖಿಸಿದ ಅತ್ಯಧಿಕ ಸಂಖ್ಯೆಯಲ್ಲಿ ಬೆಲೆಯೇರಿಕೆ, ನಿರುದ್ಯೋಗ, ಆರ್ಥಿಕ ಬೆಳವಣಿಗೆಯಲ್ಲಿ ಕುಸಿತ ಈ ಮೂರು ಆರ್ಥಿಕತೆಯ ಅಂಶಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಖಂಡಿತವಾಗಿಯೂ ಆರ್ಥಿಕ ನೀತಿಯ ನಕಾರಾತ್ಮಕ ಅಂದಾಜು ಇನ್ನೂ ಸರಕಾರದ ಕಾರ್ಯನಿರ್ವಹಣೆ ಕುರಿತಾದ ಸಕಾರಾತ್ಮಕ ವೌಲ್ಯ ಮಾಪನವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿಲ್ಲ. ಕಾಶ್ಮೀರ, ಅಯೋಧ್ಯೆ, ಭ್ರಷ್ಟಾಚಾರಕ್ಕೆ ಕಡಿವಾಣದಂತಹ ವಿಷಯಗಳು, ಅದರಲ್ಲೂ ಅಚ್ಚರಿಯೆಂದರೆ ಕೋವಿಡ್ ನಿರ್ವಹಣೆ ಮತ್ತಿತರ ವಿಚಾರಗಳ ಬಗ್ಗೆ ಸರಕಾರದ ಕುರಿತು ಜನತೆ ಸಕಾರಾತ್ಮಕ ಅಭಿಪ್ರಾಯವನ್ನು ಹೊಂದಿದ್ದಾರೆಂದು ಸಮೀಕ್ಷೆ ಹೇಳಿದೆ. ಆದರೆ ಹಣದುಬ್ಬರ ಹಾಗೂ ನಿರುದ್ಯೋಗ ಪ್ರಮಾಣವು ಕಡಿಮೆಯಾಗುವ ಯಾವುದೇ ಲಕ್ಷಣಗಳು ತೋರಿಸುತ್ತಿಲ್ಲವಾದ್ದರಿಂದ ಸರಕಾರವು ಸಾಕಷ್ಟು ಚಿಂತಿಸಬೇಕಾಗಿದೆ.
ಇದು ಮೋದಿ ಸರಕಾರದ ಅಂತ್ಯದ ಆರಂಭವೇ?. ಅದೊಂದು ಅವಸರವಸರ ಹಾಗೂ ಸೋಮಾರಿತನದ ನಿರ್ಧಾರವಾಗಿದೆ. ಪ್ರಧಾನಿಯವರ ಕಾರ್ಯನಿರ್ವಹಣೆಯು ಕಳಪೆ ಅಥವಾ ಅತ್ಯಂತ ಕಳಪೆ ಎಂದು ಭಾವಿಸುವವರ ಪ್ರಮಾಣವು ಹಿಂದೆಂದಿಗಿಂತಲೂ ಅಧಿಕವಾಗಿದ್ದರೂ ಅವರ ವೈಯಕ್ತಿಕ ಜನಪ್ರಿಯತೆ ಈಗಲೂ ಉತ್ತಮ ಸ್ಥಿತಿಯಲ್ಲೇ ಇದೆ. ಅವರ ಜನಪ್ರಿಯತೆಯ ರೇಟಿಂಗ್ನ ಸನಿಹಕ್ಕೆ ಬರಲು ಇನ್ನೂ ಯಾವುದೇ ಪ್ರತಿಪಕ್ಷ ನಾಯಕನಿಗೆ ಸಾಧ್ಯವಾಗಿಲ್ಲ. ಪ್ರಜಾಪ್ರಭುತ್ವ ಅಪಾಯದಲ್ಲಿದೆಯೆಂದು ಹೇಳುವವರ ಸಂಖ್ಯೆಯು ಅಪಾಯದಲ್ಲಿಲ್ಲವೆಂದು ಹೇಳುವವರಿಗಿಂತ ತೀರಾ ಕಡಿಮೆಯಾಗಿದೆ. ಪ್ರಜಾತಾಂತ್ರಿಕ ಸಂಸ್ಥೆಗಳ ನಾಶ ಅಥವಾ ವಾಕ್ಸ್ವಾತಂತ್ರಕ್ಕೆ ನಿರ್ಬಂಧದ ಕುರಿತಂತೆ ಯಾವುದೇ ಗ್ರಹಿಕೆಗೆ ಸಿಗುವಂತಹ ಜನಾಕ್ರೋಶ ಕಂಡುಬರುತ್ತಿಲ್ಲ. ಭಾರತೀಯರು ಉದಾರ ಪ್ರಜಾಪ್ರಭುತ್ವದ ಆಹ್ಲಾದಕ್ಕಿಂತ ಸರಕಾರದ ದುರಹಂಕಾರ ಹಾಗೂ ಸೇಡಿನ ಮನೋಭಾವಕ್ಕೆ ಹೆಚ್ಚು ಒಗ್ಗಿಕೊಂಡಿದ್ದಾರೆ.
2024ರ ಚುನಾವಣಾ ಫಲಿತಾಂಶವು ಆಡಳಿತ ಪಕ್ಷದ ಪರವಾಗಿರಲಿದೆ ಎಂಬ ಭಾವನೆಗೆ ಪೂರಕವಾದ ಅಂಶಗಳು ತೀರಾ ಕಡಿಮೆ. ಇಂತಹ ಹೆಗ್ಗಳಿಕೆಗಳು ಹಾಗೂ ಆ ಬಗ್ಗೆ ಮಾಧ್ಯಮಗಳ ಮೂಲಕ ನಡೆಸಲಾಗುವ ಕಸರತ್ತುಗಳು, ‘ಮೈಂಡ್ಗೇಮ್ಸ್’ ಅಲ್ಲದೆ ಬೇರೆನೂ ಅಲ್ಲ. ಇಂತಹ ಆಟಗಳನ್ನು ಆಡುವುದು ಬಿಜೆಪಿಗೆ ರೂಢಿಯಾಗಿಬಿಟ್ಟಿದೆ. ಹಾಗೆಂದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಳ್ಳಲಿದೆಯೆಂಬುದಾಗಿಯೂ ಭಾವಿಸುವಂತಿಲ್ಲ. ಬಿಹಾರದ ರಾಜಕೀಯ ಸ್ಥಿತ್ಯಂತರ ಹಾಗೂ ಈ ಸಮೀಕ್ಷೆಯಲ್ಲಿ ವರದಿ ಮಾಡಲ್ಪಟ್ಟ ಆರ್ಥಿಕ ಬಿಕ್ಕಟ್ಟು ಇವು ಚುನಾವಣಾ ಸ್ಪರ್ಧೆಯು ಇನ್ನೂ ಮುಕ್ತವಾಗಿದೆಯೆಂಬ ಸಂದೇಶವನ್ನು ನೀಡಿದೆ. ಈ ಐತಿಹಾಸಿಕ ಹೊಣೆಗಾರಿಕೆಯನ್ನು ಕೈಗೆತ್ತಿಕೊಳ್ಳುವ ಹೊಣೆ ಪ್ರತಿಪಕ್ಷಗಳ ಮೇಲಿದೆ.
ಕೃಪೆ : theprint.in